STORYMIRROR

Prajna Raveesh

Classics Inspirational Others

4  

Prajna Raveesh

Classics Inspirational Others

ಆಸರೆ

ಆಸರೆ

3 mins
223

ಅಪ್ಪಾ ನಂಗೂ ರಾಹುಲ್ ಗೆ ಇರುವಂತೆ ಹೊಸ ಬ್ಯಾಗ್, ಹೊಸ ಸಮವಸ್ತ್ರ, ಹೊಸ ಶೂ, ಹೊಸ ಛತ್ರಿ ಎಲ್ಲವೂ ತೆಗೆದುಕೊಡಬೇಕು ಅಪ್ಪಾ ಎಂದು ರೋಹನ್ ತನ್ನ ಅಪ್ಪನಲ್ಲಿ ಕೇಳಿದಾಗ, ಅಪ್ಪನು ಇಲ್ಲ ಮಗ ನಾವು ಬಡವರು ನಮ್ಮ ಕೈಯಲ್ಲಿ ಅಷ್ಟೊಂದು ದುಡ್ಡು ಇಲ್ಲಪ್ಪಾ ಎಂದ.


ಆಗ ರೋಹನ್, ಮತ್ತೆ ರಾಹುಲ್ ಹೇಗೆ ಎಲ್ಲವನ್ನೂ ಹೊಸದು ಹೊಸದು ಕೊಂಡುಕೊಳ್ಳುತ್ತಾನೆ ಎಂದು 1 ನೆಯ ತರಗತಿಯಲ್ಲಿನ ತನ್ನ ಪುಟ್ಟ ಮಗ ಕೇಳಿದಾಗ, ರೋಹನ್ ನ ಅಪ್ಪ ರಮೇಶನು, ಅವನ ಅಪ್ಪ ಸಾಹುಕಾರ ಪುಟ್ಟಾ ಹಾಗಾಗಿ ಅವರಿಗೆ ಹಣಕ್ಕೇನೂ ಕೊರತೆಯಿಲ್ಲ ಎಂದ.


ಆಯಿತಪ್ಪಾ ಎಂದವನೇ ತನ್ನ ಹಳೆಯ ಬ್ಯಾಗ್, ಸಮವಸ್ತ್ರ, ಶೂ, ಛತ್ರಿಯೇ ಸಾಕೆಂದು ಹಳೆಯದರಲ್ಲಿಯೇ ತೃಪ್ತಿ ಪಡೆದುಕೊಂಡ. ಆದರೆ ತರಗತಿಯಲ್ಲಿ ರಾಹುಲ್ ಪದೇ ಪದೇ ಬಂದು ರೋಹನ್ ಜೊತೆ ನನ್ನ ಹೊಸ ಬ್ಯಾಗ್ ನ್ನು ನೋಡು, ಶೂ ನ್ನು ನೋಡು ಎಂದಾಗ ರೋಹನ್ ನ ಮನಸ್ಸಿಗೆ ತುಂಬಾ ಬೇಸರವಾಗತೊಡಗಿತು.


ಮನೆಗೆ ಬಂದ ರೋಹನ್ ಅಪ್ಪ ಬೆವರು ಹರಿಸಿ ಕಷ್ಟಪಟ್ಟು ದುಡಿಯುತ್ತಿದ್ದುದನ್ನು ಕಂಡ, ಅಮ್ಮನು ಅವರಿವರ ಮನೆಗೆ ಕೂಲಿ ಕೆಲಸಕ್ಕೆ ಹೋಗಿ ಒಂದಿಷ್ಟು ಸಂಪಾದನೆ ಮಾಡಿ ಜೀವನ ಸಾಗಿಸುತ್ತಿದ್ದುದನ್ನು ಕಂಡು ಇವನಿಗೂ ಬೇಸರವಾಯಿತು, ತಾನಾಯಿತು ತನ್ನ ಓದಾಯಿತು ಎಂದು ಯಾರ ತಂಟೆಗೂ ಹೋಗದೆ ಮೌನವಾಗಿ ಓದಿ, ಬರೆದು ಮಾಡಿ ತರಗತಿಯಲ್ಲಿ ಮುಂದೆ ಬರುತ್ತಿದ್ದ.


ಅಂಬಾ ಅಂಬಾ ಎಂಬ ಧ್ವನಿಯನ್ನು ಹಿಂಬಾಲಿಸಿಕೊಂಡು ಹೋದ ರೋಹನ್ ಗೆ ಇತರ ಮಕ್ಕಳೊಂದಿಗೆ ಸಂಜೆ ಶಾಲೆಯಿಂದ ಹಿಂದಿರುಗುವಾಗ ಒಂಟಿ ಹೆಣ್ಣು ಕರುವೊಂದು ಕಂಡಿತು. ಪ್ರಾಣಿ ಪ್ರಿಯನಾಗಿದ್ದ ರೋಹನ್ ಗೆ ಅದನ್ನು ಮನೆಗೆ ಒಯ್ದು ಸಾಕಬೇಕೆಂಬ ಮನಸ್ಸಾಗಿ ಅಪ್ಪಾ, ಅಪ್ಪಾ ಎಂದು ಗುಡ್ಡೆಯಿಂದ ಅಪ್ಪನನ್ನು ಕರೆದ, ತನ್ನ ಮಗ ಕರೆದ ಧ್ವನಿಯನ್ನು ಕೇಳಿ ಓಡೋಡಿ ಬಂದ ರಮೇಶ.


ಮಗನ ಕರೆಗೆ ಓಗೊಟ್ಟು ಕರುವನ್ನು ಮನೆಗೆ ತಂದು, ಮನೆಯ ಪಕ್ಕದಲ್ಲಿ ಶೀಟ್ ಹಾಕಿ ಅಲ್ಲಿ ಕರುವನ್ನು ಸಾಕತೊಡಗಿದ. ತಾನು ಗದ್ದೆಗೆ ಹೋಗಿ ಉತ್ತು, ಬಿತ್ತಿ ಮಾಡತೊಡಗಿದ. ಕೆಲಸ ಮಾಡಿ ಸುಸ್ತಾದಾಗ ಅಲ್ಲಿಯೇ ಪಕ್ಕದಲ್ಲಿದ್ದ ದೊಡ್ಡ ಆಲದ ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ.


ಕರು ಗೌರಿಯು ದೊಡ್ಡ ಜೆರ್ಸಿ ದನವಾಗಿ ಬೆಳೆಯಿತು ಹಾಗೂ ದಿನಕ್ಕೆ 7 ರಿಂದ 8 ಲೀಟರ್ ಗಳಷ್ಟು ಹಾಲು ಕೊಡುತ್ತಿತ್ತು. ಆ ಹಾಲನ್ನು ಸ್ವಲ್ಪ ಮನೆಗೆ ಇರಿಸಿಕೊಂಡು ಮಿಕ್ಕಿದ್ದ ಹಾಲನ್ನು ಡಿಪೋ ಗೆ ಕೊಂಡೊಯ್ದ ಹಾಗೂ ಗೌರಿಯ ಹಾಲು, ಬೆಣ್ಣೆ, ತುಪ್ಪದಿಂದ ತುಂಬಾ ಸಂಪಾದನೆ ಮಾಡಿದ.


ಈಗ ರೈತನಿಗೆ ಆಸರೆಯಾಗಿ ತನ್ನ ಭತ್ತದ ಕೃಷಿಯ ಜೊತೆಗೆ ಗೌರಿಯೂ ಇದ್ದ ಕಾರಣ ಉತ್ತಮ ಆದಾಯ ಗಳಿಸತೊಡಗಿದ ಹಾಗೂ ಧನಿಕನಾದ. ಹಣದ ರುಚಿ ಕಂಡ ನಂತರ ದುರಾಸೆ ಅವನಲ್ಲಿ ಹುಟ್ಟಿತು.


ವ್ಯವಸಾಯ ಮಾಡುವಲ್ಲಿ ತನಗೆ ಆಸರೆಯಾಗಿದ್ದ ದೊಡ್ಡ ದೊಡ್ಡ ಮರಗಳನ್ನೆಲ್ಲಾ ಕಡಿದು ಮಾರತೊಡಗಿದ. ಮರಗಳು ಅವನಿಗೆ ಮಾತ್ರವಲ್ಲದೇ ಅನೇಕ ಪಶು, ಪಕ್ಷಿ, ಜೀವ ತಂತುಗಳಿಗೆ ಆಸರೆಯಾಗಿದ್ದವು!!, ಅವುಗಳನ್ನೆಲ್ಲಾ ಒಂದೊಂದಾಗಿ ಕಡಿದು ದುಡ್ಡು ಮಾಡಿ ನಾಡು ಮಾಡತೊಡಗಿದ.


ಈಗ ಅವನು ಸಾಕಿದ್ದ ಗೌರಿಗೂ ವಯಸ್ಸಾಗಿತ್ತು. ಇನ್ನು ಇದನ್ನು ಸಾಕುವುದರಲ್ಲಿ ಅರ್ಥವಿಲ್ಲ ಎಂದುಕೊಂಡು ಮಾರಿದರೆ ಸ್ವಲ್ಪ ದುಡ್ಡನ್ನಾದರೂ ಗಳಿಸಬಹುದು ಎಂಬ ಉದ್ದೇಶದಿಂದ ಗೌರಿಯನ್ನು ಕಟುಕರಿಗೆ ಮಾರತೊಡಗಿದ ರಮೇಶ.


ಇದನ್ನೆಲ್ಲಾ ಗಮನಿಸುತ್ತಿದ್ದ ಅವನ ಮಗ ರೋಹನ್ ಗೆ ತುಂಬಾ ಬೇಸರವಾಯಿತು. ಹಣವೊಂದಿದ್ದರೆ ಸಾಕು ಎಂಬ ಅಪ್ಪನ ದುರಾಸೆಯನ್ನು ಕಂಡು ಮಗನಿಗೆ ತುಂಬಾ ನೋವಾಯಿತು. ಹೀಗೆ ದಿನ ಹೋದಂತೆ ಹಳ್ಳಿಯಲ್ಲಿ ಬರಗಾಲ ಎದುರಾಯಿತು, ವರ್ಷವಿಡೀ ಮಳೆಯೇ ಇಲ್ಲ ಕ್ರಮೇಣ ತನ್ನ ಬೆಳೆಯೂ ನಾಶವಾಗತೊಡಗಿತು. ಇನ್ನು ದನದ ಅವಶ್ಯಕತೆಯಿಲ್ಲ ಎಂದು ಗೌರಿಯನ್ನು ಮಾರಿದ ನಂತರ ಯಾವ ಹಸುವನ್ನೂ ಕೊಂಡುಕೊಂಡಿರಲಿಲ್ಲ ರಮೇಶ.


ಕ್ರಮೇಣ ಎಲ್ಲವೂ ನಾಶವಾಗಿ ಅವನಿಗೆ ವಯಸ್ಸಾಗತೊಡಗಿದಾಗ ಆತನಿಗೆ ತನ್ನ ತಪ್ಪಿನ ಅರಿವಾಯಿತು. ನೆರಳು, ಮಳೆ ಬರುವಂತೆ ಸಕಲ ಜೀವಿಗಳಿಗೂ ಆಸರೆಯಾಗಿದ್ದ ಮರಗಳನ್ನು ಕಡಿದದ್ದು ತಪ್ಪಾಯಿತು ಎಂಬ ಅರಿವಾಯಿತು ಹಾಗೂ ಏನೂ ಅರಿಯದ ತನ್ನ ಆಸರೆಯಾಗಿ ನಿಂತಿದ್ದ ಮುಗ್ಧ ಹಸುವನ್ನು ಕಟುಕನಿಗೆ ಮಾರಿ ತಪ್ಪು ಮಾಡಿದೆನೆಂಬ ಅರಿವಾಯಿತು.


ಈಗ ತನ್ನ ಮಗ ದೊಡ್ಡದಾಗಿ ಬೆಳೆದು ಕೆಲಸವನ್ನು ಅರಸಿಕೊಂಡು ವಿದೇಶಕ್ಕೆ ಹೋದ. ಇಲ್ಲಿಯೇ ಮನೆಯ ಪಕ್ಕದಲ್ಲಿ ಸಣ್ಣ ಉದ್ಯೋಗವಾದರೂ ಚಿಂತೆಯಿಲ್ಲ ಇಲ್ಲಿಯೇ ನಮ್ಮ ಜೊತೆ ಇರು ಮಗನೇ ನಮಗೂ ವಯಸ್ಸಾಯಿತು, ನಮ್ಮ ಆಸರೆಯಾಗಿ ನಿಲ್ಲು ಮಗನೇ ರೋಹನ್ ಎಂದ.


ಆಗ ರೋಹನ್, ಅಪ್ಪಾ ನೀವು ಹಣ ಗಳಿಸುವ ದುರಾಸೆಯಿಂದ ಕಾಡುಗಳನ್ನೆಲ್ಲಾ ಕಡಿದು, ನಾನು ಪ್ರೀತಿಯಿಂದ ತಂದು ಕೊಟ್ಟಿದ್ದ ಗೌರಿಯನ್ನು ಕೂಡ ಕಟುಕರಿಗೆ ಮಾರಿ ಹಣ ಗಳಿಸಲಿಲ್ಲವೇ??, ನಿಮಗಾಗಿ ಇದ್ದ ಆಸರೆಗಳನ್ನು ನೀವು ಉಳಿಸಿಕೊಂಡಿರುವಿರೇ?, ನಾನು ಕೂಡ ನನ್ನ ಮುಂದಿನ ಬದುಕಿನ ಆಸರೆಗಾಗಿ ವಿದೇಶಕ್ಕೆ ಹೋಗುವುದರಲ್ಲಿ ತಪ್ಪೇನಿದೆ ಎಂದಾಗ ರಮೇಶನು ತಾನು ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವಂತಾಯಿತು.


ಇತ್ತ ಅಪ್ಪನಿಗೆ ಅರಿವು ಮೂಡಿಸಲೆಂದೇ ವಿದೇಶಕ್ಕೆ ಹೋಗಿದ್ದ ರೋಹನ್ ಒಂದು ವರ್ಷದ ನಂತರ ಊರಿಗೆ ಬಂದು ತನ್ನ ಅಪ್ಪನ ಕಸುಬನ್ನೇ ಮುಂದುವರಿಸಿ ಮರಗಳನ್ನು ನೆಟ್ಟು ಕಾಡುಗಳನ್ನು ಬೆಳೆಸಿದ ಹಾಗೂ ಗೌರಿಯಂತಹ ಅನೇಕ ಹಸುಗಳನ್ನು ಕೊಂಡುಕೊಂಡ.


ಹಸಿರಿಲ್ಲದೆ ಉಸಿರಿಲ್ಲ ಅದರೊಂದಿಗೆ ಪ್ರಾಣಿಗಳ ಆಸರೆಯೂ ಬೇಕು ಮಾನವರು ಚೆನ್ನಾಗಿ ಬದುಕಲು ಎಂದು ಅರ್ಥ ಮಾಡಿಕೊಂಡ ಅವರು ತಮ್ಮ ವೃದ್ಧಾಪ್ಯದಲ್ಲಿ ಮಗನ ಆಸರೆಯಲ್ಲಿ, ಮರ ಗಿಡಗಳು, ಹಸುಗಳೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸಿದರು.


Rate this content
Log in

Similar kannada story from Classics