Ashritha Kiran ✍️ಆಕೆ

Classics Inspirational Others

4  

Ashritha Kiran ✍️ಆಕೆ

Classics Inspirational Others

ವೆಂಕಜ್ಜಿಯ ಬುದ್ಧಿವಂತಿಕೆ-3

ವೆಂಕಜ್ಜಿಯ ಬುದ್ಧಿವಂತಿಕೆ-3

2 mins
395



     ಅತಿಯಾದರೆ ಅಮೃತವು ವಿಷ ಎಂಬಂತೆ ವೆಂಕಜ್ಜಿಗೆ ಇತ್ತೀಚೆಗೆ ಮೊಬೈಲ್ ಫೋನ್ ಬೇಸರ ತರಿಸಿತ್ತು.ಲವಲವಿಕೆಯಿಂದ ಓಡಾಡಿಕೊಂಡಿದ್ದ ವೆಂಕಜ್ಜಿ ಕುಳಿತಲ್ಲೇ ಕುಳಿತು ಆಟವಾಡಿ ಕತ್ತು ಸೊಂಟ ಕಾಲು ನೋವು ಆರಂಭವಾಗಿತ್ತು. ಎಚ್ಚರವಹಿಸಿ ಎಲ್ಲಿ ಹಾಸಿಗೆ ಹಾಸಿ ಮಲಗಿಯೇ ಬಿಡುತ್ತೇನೋ ಎಂಬ ಭಯದಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಿ ಮುಂಚಿನ ಹಾಗೆ ಗಿಡ ಮರಗಳನ್ನು ಪೋಷಿಸುವ ದಿನಚರಿಯನ್ನು ಮುಂದುವರಿಸಲು ಆರಂಭಿಸಿದಳು. ಮೊಮ್ಮಕ್ಕಳ ಆಗಮನಕ್ಕೆ ಮನ ಕಾಯುತ್ತಿತ್ತು..ಕಾಯುವಿಕೆಗೆ ಕೊನೆ ಎಂಬಂತೆ ಬೇಸಿಗೆ ರಜಾ ಬಂದೇ ಬಿಟ್ಟಿತು.ಮಗಳು ಮೊಮ್ಮಕ್ಕಳು ಸೊಸೆ ಮೊಮ್ಮಕ್ಕಳು ವರ್ಷದಂತೆ ಈ ವರ್ಷವೂ ವೆಂಕಜ್ಜಿಯ ಮನೆಗೆ ಬಂದಿಳಿದರು.

   

ಮನೆಯ ತುಂಬಾ ಹಬ್ಬದ ವಾತಾವರಣ.ಸಂತೋಷದಲ್ಲಿ ವೆಂಕಜ್ಜಿಯ ಬಾಯಿ ಕಿವಿಯವರೆಗೆ ತಲುಪಿತ್ತು. ಮನೆಯ ಮಹಿಳಾ ಮಣಿಯರು ಮಾತಿಗೆ ಕುಳಿತರೆ ಇಡೀ ಊರು ನಾಡಿನ ಸುದ್ದಿ ಬರುತ್ತದೆ .ಅದರಂತೆ ವೆಂಕಜ್ಜಿಯ ಮಗಳು

"ಅಮ್ಮ ಆ ಮೂಲೆಮನೆ ಸುಭದ್ರಮ್ಮ ನ ಮಗ ಮನೋಹರ ತನ್ನ ಹುಟ್ಟು ಹಬ್ಬವನ್ನು ಅನಾಥಾಶ್ರಮದಲ್ಲಿ ಆಚರಿಸಿದ ಫೋಟೋ ಹಾಕಿದ್ದ. ಹಿರಿಯರೆಂದರೆ ಗೌರವಿಸಬೇಕು ಹಿರಿಯರನ್ನು ನಿರ್ಲಕ್ಷಿಸಬೇಡಿ ಎಂದು ಬರೆದುಕೊಂಡಿದ್ದ .. ಅಂದಹಾಗೆ ಸುಭದ್ರಮ್ಮ ಎಲ್ಲಿದ್ದಾರೆ?" ಎಂದು ಕೇಳಿದಳು.


ಮಾತನಾರಂಬಿಸಿದ ಸೊಸೆ "ಈ ಸುಭದ್ರಮ್ಮ ಯಾರು? ನಿತ್ಯ ಸಂಜೆ ಅತ್ತೆಯೊಂದಿಗೆ ಮಾತನಾಡಲು ಬರುತ್ತಿದ್ದಾರಲ್ಲ ಅವರಾ?" ಎಂದ ಕೇಳಿದಳು.

"ಹೂ ಮಾರಾಯ್ತಿ ಅವಳೇ... ಅವಳು ಅದ್ಯಾವುದೋ ವೃದ್ಧಾಶ್ರಮದಲ್ಲಿ ಇದ್ದಾಳಂತೆ, ಅವಳ ಪಕ್ಕದ ಮನೆಯ ಗೋಪಿ ಬಂದವನು ಹೇಳುತ್ತಿದ್ದ. ಈ ಮನೆ ನನ್ನ ಪಾಲಿಗೆ‌ ಬರೆದುಕೊಡು ಎಂದು ಕೇಳಿದ ತಕ್ಷಣ ಹೇಗೂ ಇರುವವನು ಒಬ್ಬನೇ ಮುಂದೆ ಅವನಿಗೆ ಅಲ್ಲವೇ ಎಂದು ಕಣ್ಣು ಮುಚ್ಚಿ ಬರೆದು ಕೊಟ್ಟಳಂತೆ. ಮನೆ ತನ್ನ ಪಾಲಿಗೆ ಬರುತ್ತಿದ್ದಂತೆ ಅದನ್ನು ಮಾರಿ ಹೆಂಡತಿ ಮಕ್ಕಳೊಡನೆ ಅದೆಂತ ದುಬೆ..ಅಲ್ಲಾ ಅಲ್ಲಾ ದುಬೈಗೆ ಹೋಗಿದ್ದಾನಂತೆ. ಇದ್ದ ಒಂದು ಮನೆಯನ್ನು ಕಳೆದುಕೊಂಡು ಮಗನ ಆಶ್ರಯವು ಇಲ್ಲದೆ ಬೀದಿಯಲ್ಲಿ ಬಿದ್ದಿದ್ದವಳನ್ನು ಯಾವುದು ಆಶ್ರಮದವರು ಬಂದು ಕರೆದುಕೊಂಡು ಹೋದರು ಅಂತ ಸುದ್ದಿ ಬಂತು. ನಾನು ನಿಮ್ಮನೆ ಗೃಹಪ್ರವೇಶಕ್ಕೆ ಬಂದಾಗ ಈ ಘಟನೆಗಳೆಲ್ಲ ನಡೆಯಿತಂತೆ.ಪಾಪ ಸುಬ್ಬಿ, ಅದು ಹೇಗಿದ್ದಾಳೋ ಗೊತ್ತಿಲ್ಲ..." ಎಂದು ಕಣ್ಣೀರು ಒರೆಸಿಕೊಂಡಳು ವೆಂಕಜ್ಜಿ.

 

 "ಅಯ್ಯೋ ರಾಮ..! ಹೆತ್ತ ತಾಯಿನ ಬೀದಿಗೆ ಹಾಕಿ ಅಲ್ಲಿ ಯಾವುದೋ ಆಶ್ರಮದಲ್ಲಿರುವ ವಯಸ್ಸಾದವರನ್ನು ಅಪ್ಪಿಕೊಂಡು ಗೌರವದಿಂದ ನೋಡಿ ಅಂತ ಸ್ಟೇಟಸ್ ಹಾಕಿ ಬುದ್ದಿ ಹೇಳ್ತಿದ್ದನಲ್ಲಾ.. ಎಂಥಾ ನಾಟಕೀಯ ಬದುಕು ಇವನದು.... ಹಿರಿಯರೆಂದರೆ ಗೌರವ ಪ್ರೀತಿ ಎಂದು ಹೇಳುವವನು ಅವನ ತಾಯಿಯನ್ನು ನೋಡಿಕೊಳ್ಳಲಾಗದೆ ಬೀದಿಗೆ ಬಿಟ್ಟಿದ್ದಾನಲ್ಲ ಎಂತಹ ತೋರಗಾಣೆಕೆಯ ಜೀವನ... ಇವನ ನಾಟಕೀಯ ಬದುಕನ್ನು ಅರಿಯದೆ ಇದ್ದವರು ಇವನ ಬಗ್ಗೆ ವಾಟ್ಸಪ್ ಗ್ರೂಪ್ನಲ್ಲಿ ಗುಣಗಾನ ಮಾಡುತ್ತಿದ್ದಾರೆ ಎಲ್ಲರಿಗೂ ಇವತ್ತೇ ಮೆಸೇಜ್ ಹಾಕ್ತೇನೆ" ಎಂದ ಮಗಳನ್ನು ತಡೆದು "ಅದೆಂತದೇ ನಾಟಕ ಮಾಡಿದರು ಸತ್ಯವನ್ನು ಮುಚ್ಚಿಡಲಾಗದು. ನಾಟಕದ ಮುಖವಾಡ ಕಳಚಿ ಬೀಳುವ ಸಮಯ ಬಂದೇ ಬರುತ್ತದೆ ಸುಮ್ಮನಿರು.. ಆ ದೇವರೇ ಅವನಿಗೆ ಸರಿಯಾದ ಶಾಸ್ತಿ ಮಾಡುತ್ತಾನೆ. ನೆಡಿರಿ ನೆಡಿರಿ ಮಕ್ಕಳಿಗೆ ಊಟ ಬಡಿಸಿ ಮಲಗಿಸಿ.."ಎಂದು ಹೇಳುತ್ತಾ ಎಲ್ಲರಿಗೆ ಊಟ ಬಡಿಸಿ ತಾನು ಮಾಡಿ ಮೊಮ್ಮಕ್ಕಳಿಗೆ ಕಥೆ ಹೇಳುತ್ತಾ ನಿದ್ದೆಗೆ ಜಾರಿದಳು..

       ನಾಟಕೀಯ ಜೀವನ

    ನಡೆಸಲಾಗದು ಹೆಚ್ಚು ದಿನ...

   ಸಮಯ ಬರುವುದು ಒಂದು ದಿನ

  ನಾಟಕದ ಮುಖವಾಡ ಕಳಚಿ ಬೀಳುವ ಕ್ಷಣ...


       ಮುಂದುವರೆಯುವುದು........ 


Rate this content
Log in

Similar kannada story from Classics