STORYMIRROR

PRASANNA KUMAR

Abstract Thriller Others

4  

PRASANNA KUMAR

Abstract Thriller Others

ಘಟನೆ

ಘಟನೆ

2 mins
334

                         

 

      ಸುಬ್ಬಣ್ಣ ಒಬ್ಬ ಸ್ಕೌಟ್ ಶಿಕ್ಷಕ.  ಶಾಲೆಯಲ್ಲಿ ಪಿ.ಇ. ಮಾಸ್ಟರ್. ಸುಮಾರು  ೩೮ ರಿಂದ ೪೦ ವರ್ಷಗಳ ಅನುಭವ . ಜಾಣ, ವಿದ್ಯಾವಂತ, ವಿವೇಕ, ವಿವೇಚನೆ, ಸಮಾನಭಾವ ಮತ್ತು ದಯಾಗುಣ ಇರುವ ವ್ಯಕ್ತಿ.  ಪರಿಶ್ರಮಿಯಾದ ಅವರಿಗೆ ಯಾವ ಕೆಲಸವೂ ಕಷ್ಟ ಎನ್ನಿಸುವುದಿಲ್ಲ.  ಕವಿತೆ, ನಾಟಕರಚನೆ ಮತ್ತು ನಿರ್ದೇಶನ, ಲಾವಣಿ ರಚನೆ, ಹಾಡುವುದು, ಕೊಳಲು ನುಡಿಸುವುದು  ಹವ್ಯಾಸ.  ತಾವೇ ರಚಿಸಿದ ಪ್ರೇರಣಾಪೂರ್ವಕ ನಾಟಕಗಳಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಪಾತ್ರಧಾರಿಗಳನ್ನಾಗಿ ಮಾಡುವುದು ನಿರ್ದೇಶಿಸುವುದು ವಿಶೇಷ.  ದೈಹಿಕ ಶಿಕ್ಷಣದಲ್ಲಿ ಬರುವ  ವ್ಯಾಯಾಮ , ಪಿರಾಮಿಡ್ಸ್ ಮತ್ತು ಯೋಗಾಸನಗಳ ಮೂಲಕ ಫ಼ೀಲ್ಡ್ ಡಿಸ್ ಪ್ಲೇ  ನಡೆಸಿಕೊಡುವುದು ಉತ್ತಮವಾದ ಪ್ರಯೋಗ. ಅದಕ್ಕೆ ಮಹಾಭಾರತ, ಪುರಾಣಗಳು, ರಾಮಾಯಣ ಇವುಗಳ ಘಟನಾವಳಿಗಳನ್ನು ಅವುಗಳಲ್ಲಿ ಪರಿಚಯಿಸುವುದು ಅವರ ಪರಿಕಲ್ಪನೆಗೆ ಸಂಬಂಧ ಪಟ್ಟ ವಿಷಯ. ಅದನ್ನು ರೂಡಿಸಿಕೊಂಡಿರುವ ಸುಬ್ಬಣ್ಣ ಉತ್ತಮ ಬ್ಯಾಂಡ್ ಮಾಸ್ಟರ್ ಎಂದು ಪೋಲಿಸರಿಂದ ಪ್ರಶಂಸೆಗೆ ಪಾತ್ರರಾಗಿದ್ದವರು.

ಕಾವ್ಯಪ್ರಶಸ್ತಿಗಳು, ಗೌರ್ನರ್ ರಿಂದ ಉತ್ತಮ ಸ್ಕೌಟ್ ಶಿಕ್ಷಕ, ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಹೆಮ್ಮೆ. ಇಷ್ಟಾದರೂ ಅಹಮ್ಮಿಲ್ಲದೆ ಇರುವ ಸರಳ ಜೀವನ. ಮನೆಯ ವಾತಾವರಣಗಳಲ್ಲಿ ಯಾರೇ ಆಗಲಿ ಎಷ್ಟೇ ಮೋಸ ಮಾಡಿದರೂ ಅದನ್ನು ಸರಿದೂಗಿಸಿಕೊಂಡು ಹೋಗುವ ಸದ್ಗುಣ. ಜಗಳಗಳಿಂದ ಸದಾ ದೂರ. ಕಥೆಗಳನ್ನು, ನಡೆದ ಘಟನೆಗಳನ್ನು ಕುತೂಹಲ ಉಂಟುಮಾಡುತ್ತಾ ಹೇಳುವುದು ವಿಶೇಷ ಕಲೆ. 

 

      ಸ್ಕೌಟ್ ಶಿಕ್ಷಣಕ್ಕೆ ಸಂಬಂಧ ಪಟ್ಟಂತೆ  ಕ್ಯಾಂಪ್ ಗೆ ಹೋಗುವ ದಿನ ಬಂತು. ಸುಮಾರು ೪೦ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಕೊಟ್ಟರು.  ಪ್ರೈವೇಟ್ ಬಸ್ ನಲ್ಲಿ ಹಣ ಹೆಚ್ಚಾಗುತ್ತದೆ ಎಂದು ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಗೊತ್ತು ಮಾಡಿಕೊಂಡರು.  ಹೊರಡುವ ದಿನ ಬಂದೇ  ಬಿಟ್ಟಿತು. ಪೋಷಕರಿಗೆ ಸಂತೋಷ ಮತ್ತು ಆತಂಕ. ಆದರೆ ಇಂಥಹ ಶಿಕ್ಷಕರು ಮಕ್ಕಳ ಜೊತೆ ಇರುವುದು ಧೈರ್ಯದ ವಿಷಯವಾಗಿತ್ತು. ಶುಭಹಾರೈಕೆಗಳೊಂದಿಗೆ ಎಲ್ಲರೂ ಹೊರಟರು. ದೊಡ್ಡಬಳ್ಳಾಪುರದ ಸ್ಕೌಟ್ ಕ್ಯಾಂಪ್ ನಡೆಯುವ ದೊಡ್ಡ ಮೈದಾನದ ವಾತಾವರಣಕ್ಕೆ ಎಲ್ಲರೂ ತಲುಪಿದರು.  ನಿಯಮದಂತೆ ಎಲ್ಲರೂ ಅವರವರಿಗೆ ಗೊತ್ತು ಪಡಿಸಿದ ಸ್ಥಳಕ್ಕೆ ಹೋಗಿ ತಂಗಿದರು. 

      ಮರುದಿನ ಬೆಳಿಗ್ಗೆ ನಿಗಧಿತ ಸಮಯಕ್ಕೆ ಕ್ಯಾಂಪ್ ಆರಂಭವಾಯಿತು. ಮಕ್ಕಳು ಹಾಗೂ ಶಿಕ್ಷಕರು ಶಿಸ್ತು,ಸಂಯಮ, ನಿಯಮಗಳನ್ನು ಅನುಸರಿಸಿ ಅಂದಿನ ಕಾರ್ಯಕಲಾಪಗಳಲ್ಲಿ ತೊಡಗಿದರು. ಶಿಕ್ಷಕರು ಹಲವು ವಿಷಯಗಳನ್ನು ಮಕ್ಕಳಿಗೆ ತಿಳಿಸಿದರು. ಚಟುವಟಿಕೆಗಳಲ್ಲಿ ಪಾಲ್ಗೊಂಡ ಮಕ್ಕಳು ತಮಗೆ ತಿಳಿದಿರುವ ಅನೇಕ ವಿಷಯಗಳನ್ನು ಭಾಷಣದ ಮೂಲಕ ಮತ್ತು ಚರ್ಚೆಯ ಮುಖೇನ ಹಂಚಿಕೊಂಡರು. ಹೀಗೆಯೇ ಎರಡು ದಿನಗಳನ್ನು ಕಳೆದರು. ಮೂರನೆಯ ದಿನದ ಸಂಜೆಯ ಸಮಯದಲ್ಲಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸುಮಾರು ರಾತ್ರಿ ೯ ಗಂಟೆಗೆ ಊಟವನ್ನು ಮುಗಿಸಿದರು. 

 

         ಕೆಲವರು ದೇವರು, ನ್ಯಾಯ, ನೀತಿ, ಧರ್ಮ, ದೆವ್ವ ,ಭೂತ, ಪ್ರೇತ ಎಂದು ಮಾತನಾಡಿಕೊಂಡು ಹೋಗುತ್ತಿರುವಾಗ ಒಬ್ಬ ವಿದ್ಯಾರ್ಥಿ ಸುಬ್ಬಣ್ಣನವರ ಬಳಿ ಬಂದು ಸರ್ ಒಂದು ಥ್ರಿಲ್ಲಿಂಗ್ ಇನ್ಸಿಡೆಂಟ್ ಹೇಳಿ ಸರ್ ವಿಷಲ್ ಹಾಕುವುದರ ಒಳಗೆ ಕೇಳುತ್ತೇವೆ ಎಂದ. ಎಲ್ಲರೂ ಕುತೂಹಲದಿಂದ ಹೇಳಿ ಸರ್ ಎಂದರು. ಆಯ್ತು ಎಂದ ಸುಬ್ಬಣ್ಣ ಒಂದು ಘಟನೆಯನ್ನು ಹೇಳಿದರು.

 

       ಒಂದು ದಿನ ನಾಗಪ್ಪ ಮತ್ತು ಉರಗಪ್ಪ ಇಬ್ಬರೂ ಸ್ನೇಹಿತರು. ಚಿಕ್ಕಬಳ್ಳಾಪುರದ ದಾರಿಯಲ್ಲಿರುವ ಆವತಿಯ ಮಾರ್ಗದಲ್ಲಿ ಸೈಕಲ್ ಸವಾರಿ ಮಾಡಿಕೊಂಡು ಸುಮಾರು ರಾತ್ರಿ ೨ ಗಂಟೆಯ ಸಮಯದಲ್ಲಿ ಬರುತ್ತಿದ್ದರು. ಸೆಕೆಂಡ್ ಶೋ ಸಿನಿಮಾ ನೋಡಿಕೊಂಡು ಮನೆಗೆ ತೆರಳುತ್ತಿದ್ದರು. ನೋಡಿದ ಸಿನಿಮಾದ ಹೆಸರು ದೆವ್ವದ ಮನೆ. ಬಹಳ ಭಯಾನಕ ಮತ್ತು ರೋಚಕವಾಗಿದ್ದ ಸಿನಿಮಾ. ಅದರ ಬಗ್ಗೆ ಮಾತನಾಡಿಕೊಂಡು ಬರುತ್ತಿದ್ದರು. 

   

      ದೆವ್ವಗಳಲ್ಲಿ ಹೆಣ್ಣು ದೆವ್ವ ಹೆಚ್ಚು ಕಾಟ ಕೊಡುತ್ತೆ ಅಲ್ವ ಎಂದ ಉರಗಪ್ಪ. ಹೌದಪ್ಪ ಹೌದು ದೆವ್ವ ಅಷ್ಟೇ ಅಲ್ಲ ಹೆಂಗಸರೇ ಹಾಗೆಅಂಥ ನಾಗಪ್ಪ ಹೇಳಿದಾಗ ಅದಕ್ಕೆ ಉರಗಪ್ಪ ಸುಮ್ನೆ ಇರಪ್ಪ ನೀನು ಮನೇಗೆ ಹೋಗೋ ತನಕ ಎಂದ . ಆವತಿಯ ದಾರಿಯ ರೈಲ್ವೆ ಗೇಟ್ ಬಳಿ ಬರುತ್ತಿದ್ದಂತೆ ಉರಗಪ್ಪ ಥಟ್ಟನೆ ಸೈಕಲ್ ನಿಲ್ಲಿಸಿ ಬಿಟ್ಟ. ಮುಖದಲ್ಲಿ ಭಯ ಕಾಣುತ್ತಿತ್ತು ತಿಳಿಯದೆ ಕೈ ಕಾಲು ನಡುಗಿ ಬೆವರಿಳಿಯುತ್ತಿತ್ತು. ನಾಗಪ್ಪ ಯಾಕೊ ಸೈಕಲ್ ನಿಲ್ಲಿಸಿ ಬಿಟ್ಟೆ ಏನಾಯ್ತು ಎಂದ. ಅದಕ್ಕೆ ಅವನು –“ಅಲ್ಲಿ ಅಲ್ಲಿ ಅಲ್ನೋಡೋ ಭೂತ !!! “ ನನ್ನ್ಯಾಕೋ ಭೂತ ಅಂಥ ಬೈಯ್ತೀಯೋ ಕತ್ತೆ , ಅಂಥ ನಾಗಪ್ಪ ಅಂದಾಗ ನೀನಲ್ಲ ಕಣೋ ಅಲ್ ಅಲ್ ಅಲ್ನೋಡೋ ಎಂದವನೆ ಸೈಕಲ್ಲನ್ನು ತಳ್ಳಿದವನೆ ಓಡಿಹೋಗಿ ಮರಗಳ ಮರೆಯಲ್ಲಿ ನಿಂತು ಬಿಟ್ಟ. ಭಯದಿಂದ ನಾಗಪ್ಪನೂ ಎದ್ನೋ ಬಿದ್ನೋ ಎಂದು ಅವನ ಹಿಂದೆ ಹೋದ. ಇಬ್ಬರೂ ಮರೆಯಲ್ಲಿ ನಿಂತರು. ಬೆಟ್ಟು ಮಾಡಿ ಉರಗಪ್ಪ ತೋರಿಸಿದ ಅಗೋ ಅಲ್ನೋಡು ಅಲ್ಲಿ ನಿಂತಿರುವುದೇನು ಅಂತ.  ಹೌದಲ್ವೇನೊ ಅದು ಭೂತಾ ನ, ದೆವ್ವಾನ ಗೊತ್ತಾಗ್ತಿಲ್ಲ. ಜೋರಾಗಿ ಬೀಸಿದ ಗಾಳಿಗೆ ಆ ಆಕೃತಿ ತನ್ನ ಎರಡೂ ಕೈಗಳನ್ನು ಮೇಲೆ ಎತ್ತಿತು. ಇಬ್ಬರಿಗೂ ಭಯ ನಡುಕ ಹೆಚ್ಚಿ ಪ್ರಜ್ಞೆ ತಪ್ಪಿದರು. ಯಾರೊಬ್ಬರೂ ಆ ಸಮಯದಲ್ಲಿ ಅವರ ಹತ್ತಿರ ಬರಲಿಲ್ಲ.  ಇದ್ದಕ್ಕಿದ್ದಂತೆ ಇಬ್ಬರಿಗೂ ಜ್ಞಾನ ಬಂತು. ಆಗ ಉರಗಪ್ಪ - “ ಲೋ ನಾಗಪ್ಪ ಏಳೋ ಮೇಲೆ ಸುಮಾರು ಬೆಳಗಿನ ಝಾವ ನಾಲ್ಕುಗಂಟೆ ಆಗಿರಬಹುದು ಎಂದನು “ ನಾಗಪ್ಪ ಎದ್ದವನೇ ಭಯದಿಂದಲೇ ತನ್ನ ಗಡಿಯಾರವನ್ನು ನೋಡಿಕೊಂಡನು. ಸಮಯ ೪-೧೦ ಆಗಿತ್ತು. ಮತ್ತೆ ಇಬ್ಬರೂ ಆಕೃತಿಯತ್ತ ನೋಡಿದರು. ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಒಂದು ಲಾರಿಯ ಹೆಡ್ ಲೈಟ್ ಬೆಳಕು ಅದರ ಮೇಲೆ ಬಿತ್ತು. ಈಗ ಇಬ್ಬರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡು ಅದರ ಹತ್ತಿರ ಹೋದರು. ಅದನ್ನು ನೋಡಿದ ಕೂಡಲೆ ಜೋರಾಗಿ ನಕ್ಕರು. ಮತ್ತೊಮ್ಮೆ ತಮ್ಮ ಬಳಿಯಿದ್ದ ಬ್ಯಾಟರಿಯನ್ನು ಆನ್ ಮಾಡಿ ಇನ್ನೊಮ್ಮೆ ನೋಡಿದರು. ಅದು ರೈಲ್ವೆ ಮಾರ್ಗದಲ್ಲಿ ನಿಲ್ಲಿಸಿದ್ದ ಹ್ಯಾಂಡ್ ಪೋಸ್ಟ್ ಆಗಿತ್ತು. ಯಾರೋ ತುಂಟ ಹುಡುಗರು ಅದಕ್ಕೆ ಹರಿದು ಹೋಗಿದ್ದ ಬಿಳಿಯ ಬಟ್ಟೆಯನ್ನು ಹೊದಿಸಿ ಹೋಗಿದ್ದರು.  ನಡಿಯಪ್ಪ ನಡಿ ಸಿನಿಮಾ ನೋಡಿದ್ದಕ್ಕೂ , ಇಲ್ಲಾಗಿದಕ್ಕೂ ಸರೀ. . . ಹೋಯ್ತು. ಇನ್ನು ಮನೆ ಬಾಗಿಲ ಮುಂದೆ ಎಲ್ಲರೂ ಕಾದಿರ್ತಾರೆ ಬರ್ಲಿಲ್ಲ ಅಂತ ಎಂದು ನಾಗಪ್ಪ ಹೇಳ್ದಾಗ ಸಮಯ ೪-೩೦ ಆಗಿತ್ತು. ೫ ಗಂಟೆಗೆ ಮನೆಗೆ ತಲುಪಿದ ಅವರಿಗೆ ಮನೆಯಲ್ಲಿ ಎಲ್ಲರೂ ತರಾಟೆಗೆ ತೆಗೆದು ಕೊಂಡರು. ಸ್ವಲ್ಪ ಸಮಯದ ನಂತರ ನಡೆದ ಘಟನೆಯನ್ನು ಹೇಳಿದಾಗ ಎಲ್ಲರೂ ಗೊಳ್ಳೆಂದು ನಕ್ಕರು. ನಗು ನಿಮ್ಗೆ ಆದರೆ ನಮ್ ಕತೆ ಆಗ… ಎಂದ ಉರಗಪ್ಪ. ಇನ್ಮೇಲೆ ರಾತ್ರಿಹೊತ್ತು ಸಿನಿಮಾಗೆ ಹೋಗೋದು ಬಿಟ್ಬಿಡಿ ಯಾವ ಭೂತ , ಪ್ರೇತ, ದೆವ್ವನೂ… ಬರಲ್ಲ , ಸಿಗಲ್ಲ ಎಂದು ಅಂಜಲಿ ನಕ್ಕಳು. ಸ್ನಾನದ ನಂತರ ಉರಗಪ್ಪ ಮತ್ತು ನಾಗಪ್ಪ ನಡೆದ ಘಟನೆಯನ್ನು ಮತ್ತೆ ಮೆಲುಕು ಹಾಕುತ್ತಾ ಕಾಫ಼ೀ ಕುಡಿದರು.

 

        ಸುಬ್ಬಣ್ಣ ಮೇಷ್ಟ್ರು ಆ ಹಿಂದಿನ ಘಟನೆಯನ್ನು ಹೇಳಿ ಮುಗಿಸಿದರು. ಎಲ್ಲರೂ ನಿದ್ರಿಸಲು ಹೋದರು. ಕೆಲವರು ನಿರಾಳವಾಗಿ ನಿದ್ರಿಸಿದರೆ ಇನ್ನೂ ಕೆಲವರು ಆಗಾಗ ಕಣ್ ಬಿಡುತ್ತಿದ್ದರು. ಬೆಳಗಾಯ್ತು ಎಲ್ಲರೂ ತಮ್ಮತಮ್ಮ ಮನೆಗಳಿಗೆ ಹೊರಡಲು ಅನುವಾದರು. ಸ್ನಾನ ತಿಂಡಿಯನ್ನು ಮುಗಿಸಿದರು . ಕೆ.ಎಸ್.ಆರ್.ಟಿ.ಸಿ ಬಸ್ ರೆಡಿಯಾಗಿತ್ತು. ಲಗುಬಗೆಯಿಂದ ವಿದ್ಯಾರ್ಥಿಗಳು ಹತ್ತಿದರು. ಸಿಂಚನ ಸರ್ ನೀವು ಹೇಳಿದ ಘಟನೆ ಮಜಕೊಡ್ತು ಸರ್ ಎಂದಳು. ಶಶಾಂಕ ಸರ್ ವಿಶಾಖನ ಹೋಲ್ಡ್ ಆಲ್ ಬೆಳಗಿನ ಸಮಯದಲ್ಲಿ ಒದ್ದೆಯಾಗಿತ್ತು ಎಂದನು. ಎಲ್ಲರೂ ಜೋರಾಗಿ ನಕ್ಕರು ಆಗ ವಿಶಾಖ ಹೇಳಿದ ಇಲ್ಲ ಸರ್ ವಾಟರ್ ಬಾಟಲ್ಗೆ ಮುಚ್ಚಳ ಹಾಕಿರಲಿಲ್ಲ ಎಂದನು. ಬಸ್ ಹಾರ್ನ್ ಮಾಡ್ತಾ ಹೊರಟಿತು. ಡ್ರೈವರ್ ಮಕ್ಕಳ ಮಾತಿಗೆ ನಗುತ್ತಾ ಗಾಡಿಯನ್ನು ಬೆಂಗಳೂರಿನ ಕಡೆಗೆ ತಿರುಗಿಸಿದನು.

 


Rate this content
Log in

Similar kannada story from Abstract