ಲೇಖನ - ಸಂವಿಧಾನ
ಲೇಖನ - ಸಂವಿಧಾನ
ಅಂಬೇಡ್ಕರ್ ರವರು ದೇಶದ ಏಳಿಗೆಗೆ ತಮ್ಮ ವಿಶಾಲ ಜ್ಞಾನದಿಂದ ಸಂವಿಧಾನವನ್ನು ರಚಿಸಿದರು.
ಅವರು ಜಾತಿ ಧರ್ಮಗಳನ್ನು ತಮ್ಮ ಬದುಕಿನಲ್ಲಿ ನಿಂದಿಸದೆ ಬಂದ ಕಂಟಕಗಳನ್ನು ಎದುರಿಸಿ ಬೆಳೆದು ಸಾಧಿಸಿದ ಸಮತೆಯ ಶಿಲ್ಪಿ. ದೇಶಭಕ್ತಿ, ಈಶಭಕ್ತಿ, ಜ್ಞಾನ, ಸಂಸ್ಕಾರ, ಸಮಾಜಸೇವೆ ಮತ್ತು ವಿದ್ಯೆ ಅವರ ಉಸಿರಾಗಿತ್ತು.
ಭಾರತ ಇತಿಹಾಸವನ್ನು ನಿರ್ಮಿಸಿದ ಪ್ರಜಾಪ್ರಭುತ್ವ ರಾಷ್ಟ್ರ. ಬ್ರಿಟಿಷರ ದಬ್ಬಾಳಿಕೆಯನ್ನು ಮೆಟ್ಟಿನಿಂತು ಅವರನ್ನು ದೇಶದಿಂದ ಅಟ್ಟಿ ಸ್ವಾತಂತ್ರ್ಯವನ್ನು ಪಡೆದುಕೊಂಡ ದೇಶ. ಸಂವಿಧಾನವನ್ನು ರಚಿಸಿಕೊಂಡು ಅದನ್ನು ಅನುಸರಿಸುತ್ತಿರುವ ದೇಶ. ಭಾರತ ದೇಶದ ಸಂವಿಧಾನವು ರಾಜಕೀಯ ವ್ಯವಸ್ಥೆ, ಹಕ್ಕುಗಳು, ಮಿತಿಗಳು, ಕರ್ತವ್ಯ ಮತ್ತು ಸರ್ಕಾರದ ರಚನೆಯ ಚೌಕಟ್ಟನ್ನು ಹೊಂದಿದೆ. ಇದು ದೇಶದ ನಾಗರೀಕರ ಹಕ್ಕುಗಳು ಕರ್ತವ್ಯಗಳನ್ನು ತಿಳಿಸುತ್ತದೆ. ಸಂವಿಧಾನವನ್ನು ಉಲ್ಲಂಘಿಸುವ ಯಾವುದೇ ಕೆಲಸವನ್ನು ಮಾಡಲೂ ಯಾರೊಬ್ಬರಿಗೂ ಅಧಿಕಾರವಿಲ್ಲ. ಅದು ಮುಖ್ಯಮಂತ್ರಿಯಾಗಲಿ, ಪ್ರಧಾನಿಯಾಗಲಿ, ರಾಷ್ಟ್ರಪತಿಯಾಗಲಿ ಯಾರಿಗೂ ಅಂಥಹ ಅಧಿಕಾರವಿಲ್ಲ. ಜನವರಿ ೨೬ ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.೧೯೫೦ ರಲ್ಲಿ ಭಾರತವನ್ನು ಸಂವಿಧಾನವನ್ನು ಜಾರಿಗೊಳಿಸಿತು. ಈ ಸಂವಿಧಾನ ರಚನೆಯಲ್ಲಿ ಡಾ. ಅಂಬೇಡ್ಕರ್ ರವರದು ಪ್ರಮುಖ ಪಾತ್ರವಾಗಿತ್ತು. ೨೯೯ ಜನರ ಪರಿಶ್ರಮದ ಫಲ ಇದಾಗಿದೆ.
ವಿಶ್ವದ ಅತ್ಯಂತ ದೊಡ್ಡ ರಚನೆಯ ಸಂವಿಧಾನ ಇದಾಗಿದೆ. ಇದರಲ್ಲಿ ೪೪೮ ಲೇಖನಗಳನ್ನು ೨೫ ಭಾಗಗಳನ್ನಾಗಿ ಮಾಡಿ ೧೨ ವೇಳಾಪಟ್ಟಿಗಳಲ್ಲಿ ಆಯೋಜಿಸಲಾಗಿದೆ. ನಮ್ಮ ದೇಶ ಹಲವಾರು ಸಂಸ್ಕೃತಿ, ಜಾತಿಗಳು ಮತ್ತು ಧರ್ಮಗಳಿಂದ ಕೂಡಿದೆ. ಸಂವಿಧಾನವನ್ನು ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ. ಇಲ್ಲಿಯವರೆಗೂ ಸಂವಿಧಾನದಲ್ಲಿ ೧೦೪ ತಿದ್ದುಪಡಿಗಳಾಗಿವೆ. ಅದರಲ್ಲಿ ಹೊಸ ನಿಯಮ ಮತ್ತು ಕಾನೂನುಗಳನ್ನು ಸೇರಿಸಲಾಗಿದೆ. ಸಂವಿಧಾನದ ಮೂಲ ರಚನೆಯನ್ನು ಯಾರಿಗೂ ತಿರುಚುವ ಹಕ್ಕಿಲ್ಲ. ಬ್ರಿಟಿಷ್ ಸಂವಿಧಾನದಲ್ಲಿ ಸ್ಪಷ್ಟತೆ ಕಾಣುವುದಿಲ್ಲ. ಆದರೆ ಭಾರತದ ಸಂವಿಧಾನ ಸ್ಫಟಿಕಸ್ಪಷ್ಟತೆಯನ್ನು ಹೊಂದಿದೆ. ಇದು ದೇಶದ ರಾಜಕೀಯ , ಕಾರ್ಯಾಂಗ ಮತ್ತು ಕಾನೂನು ವ್ಯವಸ್ಥೆಗಳ ಸೂಕ್ಷ್ಮ ಅಂಶಗಳನ್ನು ಕೇಂದ್ರೀಕರಿಸುತ್ತದೆ. ಭಾರತದ ನಾಗರೀಕರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಗಮನಿಸುತ್ತದೆ. ಭಾರತದ ಸಂವಿಧಾನವನ್ನು ಭಾರತೀಯರು ರಚಿಸಿದ್ದಾರೆ. ಅದರಲ್ಲಿ ವಿದೇಶೀಯರ ಹಸ್ತಕ್ಷೇಪವಿಲ್ಲ.
ಸಂವಿಧಾನವು ಎಲ್ಲಾ ನಾಗರೀಕರಿಗೆ ಸೂಚನೆಗಳನ್ನು ನೀಡುತ್ತದೆ. ಸರ್ಕಾರಗಳು ಬರುತ್ತವೆ, ಹೋಗುತ್ತವೆ, ರಾಜಕೀಯ ಪಕ್ಷಗಳು ರಚಿಸಲ್ಪಡುತ್ತವೆ ಮತ್ತು ವಿಸರ್ಜಿಸಲ್ಪಡುತ್ತವೆ ಆದರೆ ದೇಶವು ಮುಂದುವರೆಯಬೇಕು . ಪ್ರಜಾಪ್ರಭುತ್ವ ಸ್ಥಿರತೆಯನ್ನು ಹೊಂದಿರಬೇಕು.
ಹೆಚ್. ಪ್ರಸನ್ನ ಕುಮಾರ್.
