Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಸೂರ್ಯೋದಯ

ಸೂರ್ಯೋದಯ

3 mins
8


ಸೂರ್ಯೋದಯ 

ಈ ನಮ್ಮ ನಿತ್ಯ ಜೀವನದಲ್ಲಿ ಎಲ್ಲವೂ ಯಾಂತ್ರಿಕವಾಗಿರುವಾಗ, ಅದರಲ್ಲೂ ಮಹಾನಗರಗಳಲ್ಲಿ ಉಸಿರಾಡುವ ಗಾಳಿಗೂ ಅಭಾವವಾಗಿತುವ ಈ ದಿನಗಳಲ್ಲಿ , ಪ್ರತಿದಿನವೂ ಅದೇ ಓಟ. ಬೆಳಿಗ್ಗೆ ಎಷ್ಟು ಬೇಗ ಎದ್ದರೂ  ಆಫ಼ೀಸ್ ಗೆ ಹೊರಡುವಾಗ ಅದೇ ತರಾತುರಿ, ಅದೇ ಗಡಿಬಿಡಿ, ಏನೋ ಒಂದನ್ನು ಮರೆತು ಹೊರಡುವುದು. ಈ ಮಹಾನಗರದ  ಯಾಂತ್ರಿಕತೆಗೆ ಬೇಸತ್ತ ಮನಸ್ಸು , ಆಗಾಗ ಹೊರಗಡೆ ಪ್ರವಾಸ ಹೋಗಬೇಕೆಂದು ಬಯಸುವುದು ಸಹಜ ಹಾಗೂ ಆರೋಗ್ಯಕರ ಬದಲಾವಣೆಗೆ ಅದು ಅಗತ್ಯ ಕೂಡ. 
ನನಗೂ ಹೀಗೆ ಅನ್ನಿಸುತ್ತಿತ್ತು. 
ಇತ್ತೀಚೆಗೆ ಮನೆಯ ಹಾಗೂ ಆಫ಼ಿಸಿನ ಕೆಲಸದ ಒತ್ತಡ ಹೆಚ್ಚಾಗಿ, ಒಂದು ವಾರದ ಕಾಲ ಎಲ್ಲಾದರೂ ಪ್ರಕೃತಿ ಮಧ್ಯದಲ್ಲಿ ಹಸಿರು ಗಿಡ ಮರಗಳು, ಸ್ವಚ್ಛವಾದ ಗಾಳಿ, ಶುದ್ಧವಾದ ನೀರು ಹರಿಯುವ ಜನದಟ್ಟಣಿಯಿರದ ಪ್ರಶಾಂತವಾದ ಜಾಗದಲ್ಲಿ ಕಾಲ ಕಳೆದು ಬರಬೇಕಿನಿಸಿ, ಆಫ಼ೀಸ್ ಗೆ ಒಂದು ವಾರ ರಜ ಅರ್ಜಿ ಸಲ್ಲಿಸಿದೆ. ನನ್ನ ರಜ ಚೀಟಿಯನ್ನು ನೋಡಿದ ಕೂಡಲೇ ನನ್ನ ಬಾಸ್ ನ ಪಿತ್ತ ನೆತ್ತಿಗೇರಿ ನನ್ನ ಮೇಲೆ ಗುರುಗಾಯಿಸುತ್ತಾ,ವಾರದ ರಜ ಮಂಜೂರು ಮಾಡುವುದು ಕಷ್ಟ ಅಂತ ಹೇಳಿ ಬಿಟ್ಟಾಗ, ಕಡೆಗೆ ನಾನು ನನ್ನ ಅಜ್ಜಿಗೆ ಸೀರಿಯೆಸ್ (ಈಗಾಗಲೇ ಸ್ವರ್ಗದಲ್ಲಿರುವ ಅಜ್ಜಿಯ ನೆಪ ) ಅಂತ ಹೇಳಿ, ಹೇಗೋ ಬಾಸ್ ಮುಂದೆ ಹತ್ತು ನಿಮಿಷ ಸತ್ಯಾಗ್ರಹ ಹೂಡಿದಂತೆ ಕುಳಿತು, ಕಡೆಗೂ ಒಂದು ವಾರ ರಜ ಮಂಜೂರು ಮಾಡಿಸಿಕೊಂಡಾಗ, ಮಹಾಭಾರತ ಯುದ್ಧದಲ್ಲಿ ವಿಜಯಿಯಾದ ಅರ್ಜುನನಂತೆ ಆಗಿತ್ತು ನನ್ನ ಪರಿಸ್ಥಿತಿ. ಹೇಗೋ ಕಡೆಗೂ ನನ್ನ ರಜ ಮಂಜೂರಾಗಿ ಹೋಯಿತು. 
ನಂತರ ’ನಾನು ಬಯಸಿದ ಆ ಜಾಗ ಯಾವುದು? ಎಲ್ಲಿಗೆ ಹೋಗುವುದು?’ ತಲೆ ಕೆಡಿಸಿಕೊಂಡೆ. ನನ್ನ ಪತಿದೇವರಿಗೆ ನನ್ನಂತೆ ಹೊರಗಡೆ ಸುತ್ತಾಡುವ ಆಸೆಯೇ ಇರಲಿಲ್ಲ. ಅವರು ತಾನು ಎಲ್ಲಿಗೂ ಬರಲಾಗುವುದಿಲ್ಲ, ಎಂದು ಹೇಳಿ ನನಗೆ ಹೊರಡಲು ಅನುಮತಿ ಕೊಟ್ಟರು. ’ಈ ಮನುಷ್ಯನಿಗೆ ಈ ಬೆಂಗಳೂರಿನ ಯಾಂತ್ರಿಕತೆಯೇ ಚೆನ್ನ,ಯಾವ ಭಾವನೆಗಳೂ ಇಲ್ಲದ ಬರಡು ಮನುಷ್ಯ, ಏನಾದರೂ ಮಾಡಿಕೊಳ್ಳಲಿ’ ಅಂತ ಮನಸ್ಸಿನಲ್ಲೇ ಬಯ್ದುಕೊಂಡು , ನಾನು ಹೊರಡುವುದಕ್ಕೆ ರೆಡಿ ಆದೆ. ಆದರೆ ಒಬ್ಬಳೇ ಹೇಗೆ ?ಎಲ್ಲಿಗೆ ಹೋಗುವುದು? ಯೋಚನೆ ಶುರುವಾದಾಗ, ನನ್ನ ಕ್ಲೋಸ್ ಫ಼್ರೆಂಡ್ ತಾರಿಣಿ ಯ ನೆನಪಾಯಿತು. ಅವಳು ಶಿವಮೊಗ್ಗದ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದಳು, ಅವಳಿಗಿನ್ನೂ ಮದುವೆಯಾಗಿರಲಿಲ್ಲ, ಒಬ್ಬಳೇ ಮನೆ ಮಾಡಿಕೊಂಡಿದ್ದಳು. ನನ್ನನ್ನು ಅವಳ ಊರಿಗೆ ಕರೆಯುತ್ತಲೇ ಇದ್ದಳು. ನಾನು ಅವಳಿಗೆ ಫೋನ್ ಮಾಡಿ ನನ್ನ ಮನಸ್ಸಿನ ಬೇಸರವನ್ನು ಹೇಳಿಕೊಂಡು, ನನಗೆ ಒಂದು ಬದಲಾವಣೆಬೇಕಾಗಿದೆಯೆಂದು ಅವಳ ಹತ್ತಿರ ಗೋಳಾಡಿ ಕೊಂಡಾಗ, ಅವಳು ಕೂಡಲೇ ಹೊರಟು ಬರುವಂತೆ ಹೇಳಿದಳು. 
ನನ್ನ ಪತಿದೇವರಿಗೆ ನಾನು ಶೀವಮೊಗ್ಗಕ್ಕೆ ಹೊರಡುವ ವಿಷಯ ತಿಳಿಸಿ, ಅಂದು ರಾತ್ರಿಯ ಟ್ರೈನ್ ನಲ್ಲಿ ಹೊರಟೇ ಬಿಟ್ಟೆ. ಯಾಕೋ ಮನಸ್ಸು ಜಡವಾಗುತ್ತಿದೆ ಎನ್ನುವ ಸಂದರ್ಭದಲ್ಲಿ, ಯಾರನ್ನೂ ಕಾಯಬಾರದು ಅಂತ ಅನ್ನಿಸಿ, ಒಬ್ಬಳೇ ಧೈರ್ಯವಾಗಿ ಶಿವಮೊಗ್ಗೆಯ ಟ್ರೈನ್ ಹಿಡಿದೆ. ನನ್ನ ಗೆಳತಿ ತಾರಿಣಿ, ರೈಲ್ವೇ ನಿಲ್ದಾಣಕ್ಕೆ ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋಗಿದ್ದಳು. 

ಬೆಳಗಿನ ಜಾವದ ಶಿವಮೊಗ್ಗೆಯ ತಂಪಾದ ಹವೆ ನನ್ನ ಮುಖವನ್ನು ಸ್ಪರ್ಶಿಸಿದಾಗ, ಅದೇನೋ ಒಂದು ರೀತಿ ಮನಸ್ಸಿಗೆ ತಂಪಾಯಿತು. ಉಸಿರುಗಟ್ಟಿಸುವ ವಾತಾವರಣ ಹೋಗಿ,ತಂಗಾಳಿ ಕುಳಿರ್ಗಾಳಿ ನನ್ನ ಮನಸ್ಸಿನ ಮೇಲೆ ಅದೇನೋ ಹಿತವಾದ ಪರಿಣಾಮ ಮಾಡಿತು. ಮುಖವನ್ನು ಮೇಲೆತ್ತಿ ತಂಗಾಳಿಯನ್ನು ನಿಧಾನವಾಗಿ ಎಳೆದುಕೊಂಡಾಗ, ಹೊಸ ಚೈತನ್ಯ ಮೂಡಿದಂತಾಯಿತು. 
ತಾರಿಣಿಯ ಮನೆ ತಲುಪಿ, ಸ್ವಲ್ಪ ವಿಶ್ರಾಂತಿ ಪಡೆದ ನಂತರ, ಶಿವಮೊಗ್ಗದ ಸುತ್ತಲಿರುವ, ಮಲೆನಾಡಿನ ಬನಗಳಲ್ಲಿ ಸುತ್ತಾಡುವ ಪ್ಲಾನ್ ಮಾಡಿದೆವು. ಸಾಗರ, ವರದಹಳ್ಳಿಯ ಶ್ರಿಧರಾಶ್ರಮ, ಕುಪ್ಪಳ್ಳಿ ಮುಂತಾದ ಸ್ಥಳಗಳಿಗೆ ಹೋಗುವ ಪ್ಲಾನ್ ಮಾಡಿಕೊಂಡೆವು. 
ಎರಡು ಮೂರುದಿನಗಳು ಸುಂದರ ಪ್ರಕೃತಿಯ ತಂಪಾದ ತಾಣಗಳಲ್ಲಿ ಹಸಿರು ಬನಗಳಲ್ಲಿ ಸ್ವಚ್ಚ್ಂದವಾದ ಹಕ್ಕಿಯಂತೆ ಸುತ್ತಾಡಿದೆವು. ಕಡೆಯ ದಿನ ರಾಷ್ಟ್ರಕವಿ ಕುವೆಂಪು ಅವರ ಜನ್ಮ ಭೂಮಿ ಕುಪ್ಪಳ್ಳಿಯನ್ನು ನೋಡಲು ಹೊರಟೆವು. 
ಅಬ್ಬ, ನಾವು ಬೆಳಗಿನಝಾವ ಶಿವಮೊಗದಿಂದ ಹೊರಟು , ಸೂರ್ಯೋದಯದ ಸಮಯಕ್ಕೆ ಸರಿಯಾಗಿ ಕುಪ್ಪಳ್ಳಿಯ ಕವಿಶೈಲದ 
ನವಿಲುಕಲ್ಲಿನ  ಮೇಲೆ  ಸೂರ್ಯೋದಯ ವನ್ನು ವೀಕ್ಷಿಸಲು ಕುಳಿತೆವು. 
ಅಬ್ಬ, ಅದೆಂತಹ ಸುಂದರ ವಾತಾವರಣ. ಮೂಡಣದಲ್ಲಿ ಬಾಲ ಅರುಣ ತನ್ನ ಹೊಂಬಣ್ಣವನ್ನು ನಿಧಾನವಾಗಿ ಹರಡುತ್ತಾ,]ಮೆಲ್ಲಮೆಲ್ಲನೆ ಉದಯಿಸುವ ಆ ರಮ್ಯ ನೋಟವನ್ನು ಕಣ್ಣು ತುಂಬಿಕೊಂಡವು. ಕುವೆಂಪುರವರು ಪ್ರತಿದಿನವೂ ಈ ಸೂರ್ಯೋದಯವನ್ನು ವೀಕ್ಷಿಸುತ್ತಿದ್ದರೆಂದು ನಾನು ಓದಿದ್ದನ್ನು ನೆನಪು ಮಾಡಿಕೊಂಡೆ. ನಿಜಕ್ಕೂ ಇದೊಂದು ಸುಂದರವಾದ ಅದ್ಭುತ ಕ್ಷಣ. 
"ಜೇನುತುಪ್ಪದಲ್ಲಿ ತೊಯ್ದ ಹಣ್ಣಿನಂತೆ 
ಹೊಸ ಚೆಲ್ವಿನ ಬಲೆಯ ನೇಯ್ದ ಹೆಣ್ಣಿನಂತೆ 
ಸವಿಗೆ ಸವಿಯ ಪೇರಿಸಿತ್ತು ಭದ್ರಮಾಸಮ್
ಕವಿಗೆ ಕವಿಯ ತೋರಿಸಿತ್ತು ಸುಪ್ರಭಾತಂ"

ಈ ಸೂರ್ಯೋದಯ ಮತ್ತು ಸೂರ್ಯಾಸ್ತ ಪ್ರತಿದಿನವೂ ನಿರಂತರವಾಗಿ ನಡೆಯುವ ಪ್ರಕೃತಿಯ ದಿನಚರಿಯೇ ಆದರೂ, ಅದನ್ನು ನೋಡಿ ಆಸ್ವಾದಿಸುವ ಸಮಯ ಸಮಾಧಾನಗಳು ಈ ಆಧುನಿಕ ತಾಂತ್ರಿಕ ಯುಗದಲ್ಲಿ ಯಾರೊಬ್ಬರಿಗೂ ಇಲ್ಲ. 
ಈ ಪ್ರಕೃತಿಯ ಚಮತ್ಕಾರವನ್ನು ವೀಕ್ಷಿಸಿ ಆನಂದವನ್ನು ಮನಸ್ಸಿಗೆ ತುಂಬಿ ಕೊಳ್ಳುವುದರಲ್ಲೂ ಅದೆಷ್ಟು ತೃಪ್ತಿ ಇದೆ ಅಂತ ನನಗೆ ಅಂದು ಮೊದಲಬಾರಿಗೆ ಹೊಳೆಯಿತು. ಅದಕ್ಕೇ ಅಲ್ಲವೇ ಈ ಕುಪ್ಪಳ್ಳಿಯ ಮಹಾನ್ ಚೇತನ ಕುವೆಂಪುರವರು ಪ್ರತಿದಿನವೂ ಸೂರ್ಯೋದಯ ಸೂರ್ಯಾಸ್ತಗಳನ್ನೂ ತಪ್ಪದೇ ವೀಕ್ಷಿಸಿ ಆನಂದ ಪಡುತ್ತಿದ್ದುದ್ದು, ಮತ್ತು ಅದನ್ನೇ ತಮ್ಮ ಕವಿತೆಯಾಗಿ ಹರಿಸಿದ್ದು ’
"ಆನಂದಮಯ ಈ ಜಗ ಹೃದಯ....... ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ"  
ನನಗೆ ಅಮ್ದು ನಿಜಕ್ಕೂ ಜೀವನದ ಈ ಸಣ್ಣ ಸಂತೋಷ ಅದೆಷ್ಟು ತೃಪ್ತಿ ಕೊಟ್ಟಿತೆಂದರೆ, ಮುಂದೆ ಬೆಂಗಳೂರಿನಲ್ಲಿ ನಮ್ಮ ಮನೆಯ ತಾರಸಿಯ ಮೇಲೆ ನಿಂತೂ ಸಹ ಈ ಸೂರ್ಯೋದಯವನ್ನು ವೀಕ್ಷಿಸಿ ಪ್ರತಿದಿನವೂ  ನನ್ನ ಮನಸ್ಸನ್ನು ಪ್ರಫುಲ್ಲಗೊಳಿಸಿಕೊಳ್ಳಬೇಕೆಂದು ತೀರ್ಮಾನ ಮಾಡಿದೆ. 
ಒಂದು ವಾರದ ರಜೆ ಮುಗಿಸಿ ಬೆಂಗಳೂರಿಗೆ ಮರಳಿ ಬಂದಾಗ, ನನ್ನ ಮನಸ್ಸು ಹಗುರವಾಗಿತ್ತು. ಅಂದಿನಿಂದ ಮೊದಲುಗೊಂಡು ಪ್ರತಿದಿನವೂ ನಮ್ಮ ಮನೆಯ ತಾರಸಿಯ ಮೇಲೆ ನಿಂತು ಸೂರ್ಯೋದಯವನ್ನು ವೀಕ್ಷಿಸುತ್ತಾ ಕಣ್ಮನಗಳನ್ನು ತುಂಬಿಕೊಂಡು, ಹೊಸ ಉತ್ಸಾಹವನ್ನು ಪಡೆಯುತ್ತೇನೆ. ಇದೊಂದು  ಸಣ್ಣ ಸಂತೋಷ, ಕಾಸು ಖರ್ಚಿಲ್ಲದೇ ಜಗತ್ತಿನ ಎಲ್ಲೆಡೆಯೂ ಸುಲಭವಾಗಿ ಸಿಗುವ ದಿನನಿತ್ಯದ ಸಂತೋಷ ಅಂತ ನನಗೆ ಅನ್ನಿಸಿತು.

ವಿಜಯ ಭಾರತೀ.ಎ.ಎಸ್‌


Rate this content
Log in

Similar kannada story from Abstract