ಸುಡದ ಬೆಂಕಿ!
ಸುಡದ ಬೆಂಕಿ!
ದಯವಿಟ್ಟು ಕಾಲಚಕ್ರವನ್ನು ಎಂಭತ್ತು ವರ್ಷ ಹಿಂದಕ್ಕೆ ತಿರುಗಿಸಿ ಇದನ್ನು ಓದಿ.
ತಮಿಳುನಾಡಿನ ಮದುರೈ ನಲ್ಲಿನ ಮದ್ಯಮ ವರ್ಗದ ಒಂದು ಕುಟುಂಬ. ಇಲ್ಲಿರುವುದು ನಮ್ಮ ಕಥಾನಾಯಕಿ ಭವಾನಿ ಅವಳ ಅಣ್ಣ ತಂದೆ ಮತ್ತು ತಾಯಿ . ಭವಾನಿಗೆ ಎಂಟನೇ ವಯಸ್ಸಿನಲ್ಲೇ ಮದುವೆ ಮಾಡಿದ್ದಾರೆ. ಗಂಡ ಯಾರೆಂದು ಸಹ ಗೊತ್ತಿಲ್ಲಾ. ಅಂದರೆ ಮಕ್ಕಳಾಟ ದಂತೆ ನಡೆದು ಹೋಯ್ತು ಮದುವೆ.ಮಕ್ಕಳು ದೊಡ್ಡವರಾದ ಮೇಲೆ ಉಳಿದ ಶಾಸ್ತ್ರ .ಅಲ್ಲಿಯವರೆಗೂ ಮಗಳು ಅಮ್ಮನ ಮನೆಯಲ್ಲಿ. ಹೀಗಿರಬೇಕಾದರೆ ಹುಡುಗನಿಗೆ TB ಬಂದು ಒಂದು ತಿಂಗಳಲ್ಲಿ ಜೀವ ಹೋಯ್ತು. ಆಟವಾಡಿಕೊಂಡಿದ್ದ ಭವಾನಿಗೆ ಚಿಕ್ಕಮ್ಮ ಪದ್ದಕ್ಕ ಬಂದು, ನಿನ್ನ ಗಂಡ ಇನ್ನಿಲ್ಲಮ್ಮ. ನಿನಗೆ ಇಂತ ಗತಿ ಬರಬಾರದಿತ್ತು ಅಂತ ಕಣ್ಣೀರು ಹಾಕ್ತಿದಾರೆ. ಭವಾನಿಗೆ ಏನೂ ಅರ್ಥ ಆಗಲ್ಲ. ನೀವೇಕೆ ಅಳ್ತಾ ಇದೀರಿ. ಹೋದರೆ ಹೋಗಲಿ ಬಿಡಿ ಅಂತಾಳೆ. ಅಯ್ಯೋ ಪಾಪ ಮಗೂಗೆ ಏನೂ ಗೊತ್ತಿಲ್ಲ. ಈಗಲೇ ವಿಧವೆ ಪಟ್ಟ ಕಟ್ಬಿಟ್ರು. ಮುಂದಿನ ಶಾಸ್ತ್ರ ಎಲ್ಲಾ ಹೇಗಪ್ಪಾ ಮಾಡೋದು, ನೋಡಕ್ಕಾಗಲ್ಲ ನನ್ನ ಕೈಯಲ್ಲಿ ಅಂತ ಹೊರಗೆ ಹೋದ್ರು. ದಿನಗಳು ಕಳೆಯಿತು ವರ್ಷಗಳು ಉರುಳಿತು. ಭವಾನಿಗೆ ಹತ್ತು ವಯಸ್ಸಿರಬಹುದು. ಇವಳ ಸೋದರಮಾವ ಅಂದರೆ ಭವಾನಿಯ ಅಣ್ಣನ ಮಗ ಸೋಮಸುಂದರ ಇವಳು ಮೊದಲಿಂದಲೂ ಒಟ್ಟಿಗೆ ಆಡ್ತಾ ಬೆಳೆದಿರೋರು. . ಈಗ ಅವನಿಗೆ ಹದಿನೈದು ಹದಿನಾರು ವರ್ಷ ಇರ ಬಹುದು.ಅವನು ಏಳು ವರ್ಷದವನಿದ್ದಾಗ ಉಪನಯನ ಮುಗಿದು ವೇದಾಧ್ಯಯನ ಮಾಡಲು ಮೈಸೂರಿಗೆ ಹೊರಟು ಹೋಗಿದ್ದ. ವೇದಾಧ್ಯಯನ ಮುಗಿಸಿ ಗುರುಗಳಿಂದ ಭೇಷ್ ಅನಿಸಿಕೊಂಡ ವಿದ್ಯಾರ್ಥಿ ಸೋಮು ಮನೆಗೆ ವಾಪಸ್ ಬಂದಿದ್ದಾನೆ. ತಲೆಯಲ್ಲಿ ಹೆಂಗಸಿನಂತೆ ಉದ್ದ ಜುಟ್ಟು ಹಣೆಯಲ್ಲಿ ವಿಭೂತಿ. ಬಿಳೀ ಪಂಚೆ ಮೇಲೊಂದು ಬಿಳೀ ಅಂಗವಸ್ತ್ರ. ನೋಡಿದರೆ ಇವನೊಬ್ಬ ವಿಧ್ಯಾ ಪಾರಂಗತ ಅಂತ ಸುಲಭವಾಗಿ ಹೇಳಬಹುದು ಹಾಗಿದ್ದಾನೆ.
ರಾತ್ರಿ ಮಲಗಲು ದಪ್ಪಕಡ್ಡಿಚಾಪೆ ಮಾತ್ರ .ಊಟ ಸಹಾ ಮೊದಲಿನಂತಿಲ್ಲ. ಪ್ರತಿದಿನ ತಟ್ಟೆ ಬದಲು ಬಾಳೆ ಎಲೆ . ಸಾರು ಅನ್ನ, ಹುಳಿ ಮಜ್ಜಿಗೆ ಉಪ್ಪು ಇದ್ದರೆ ದಿನದ ಊಟ ಮುಗೀತು. ಅಮ್ಮನ ಜೊತೆ ಹೋಗಿ ಸೋಮುನ ನೋಡಿದ್ಲು. ಎಷ್ಟು ಬದಲಾವಣೆ , ಇನ್ನು ನಾನು ಇವನನ್ನ ಸೋಮ ಅಂತ ಕೂಗಕ್ಕಾಗಲ್ಲ . ದೊಡ್ಡೋನಾಗಿ ಬಿಟ್ಟಿದ್ದಾನೆ ಅಂತ ಮನಸ್ಸಲ್ಲೇ ಅಂದುಕೊಂಡ್ಲು. ಇವಳು ಯಾರು ನೋಡಿದ್ಯಾ ಸೋಮು,ಅಂತ ಅಮ್ಮ ಕೇಳಿದ್ರು .ಓಹ್ ಇವಳು ನಿಮ್ಮಮಗಳು ಭವಾನಿ ಗೊತ್ತು ಬಿಡಿ, ಅಂತ ಹೆಚ್ಚು ಮಾತನಾಡದೆ ಹೊರಟು ಬಿಟ್ಟ. ಒಂದು ದಿನ ಭವಾನಿ ತಂದೆ ತಾಯಿ ಮದ್ರಾಸಿನಲ್ಲಿ ಒಂದು ಮದುವೆಗೆ ಹೋಗಲೇ ಬೇಕಿತ್ತು.ಭವಾನಿಯನ್ನ ಮೂರು ದಿನ ಯಾರ ಮನೇಲಿ ಬಿಟ್ಟು ಹೋಗೋದು ಅನ್ನೋ ಚಿಂತೆ .ಆಗ ಯಶೋದಳಿಗೆ ತಕ್ಷಣ ಹೊಳೆದದ್ದು ಎರಡು ರಸ್ತೆ ದಾಟಿದರೆ ಇರೋ ಅಣ್ಣನ ಮನೆ. ಅಣ್ಣ ಒಬ್ಬ ಜಡ್ಜ್.
ಹೆಸರು ಶಂಕರ್ .ಜಡ್ಜ್ ಆದರೂ ಸಂಸ್ಕೃತ ಭಾಷೆಯ ಜೊತೆ ಅನೇಕ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಪ್ರತಿದಿನ ಸಂಜೆ ಇವರ ಮನೆ ಒಂದು ಸಂಸೃತ ಪಾಠ ಶಾಲೆ ಯಂತೆ ಇರುತ್ತಿತ್ತು.
ಶಂಕರ್ ಗೆ ಒಬ್ಬನೇ ಮಗ ಅವನೇ ಸೋಮಸುಂದರ್ ಉರುಫ್ ಸೋಮು. ಜಡ್ಜ್ ಶಂಕರ್ ಮನೇಲಿ ಇರೋರು ಮೂರು ಜನ ಮಾತ್ರ ಗಂಡ ಹೆಂಡತಿ ಮಗ ಸೋಮು. ಹೆಂಡತಿ ಹಾಸಿಗೆ ಹಿಡಿದು ಮೂರು ವರ್ಷವಾಗಿದೆ.
ಅಡುಗೆ ಇಂದ ಎಲ್ಲಾ ಕೆಲಸಕ್ಕೂ ಕೆಲಸದವರು ಇದ್ದಾರೆ.ಭವಾನಿಯನ್ನ ಮೂರುದಿನ ನಿಮ್ಮ ಮನೇಲಿ ಬಿಟ್ಟಿರೋಣ ಅಂತ ಬಂದಿದೀನಿ . ಒಂದು ಮದುವೆ ಗಾಗಿ ಮದರಾಸ್ ಗೆ ಹೋಗಬೇಕಾಗಿದೆ ಅಂತ ಅಣ್ಣನಿಗೆ ಹೇಳಿ ಒಂದು ಬಟ್ಟೆ ಬ್ಯಾಗ್ ಒಂದನ್ನ ಕೊಟ್ಟು ಹೊರಟೇ ಬಿಟ್ರು ಭವಾನಿಯ ಅಮ್ಮ.ಸಂಜೆವರೆಗೂ ಮನೆಯಲ್ಲಿ ಈಗ ಸೋಮ,ಭವಾನಿ ಮತ್ತು ಹಾಸಿಗೆ ಹಿಡಿದಿರುವ ಅತ್ತೆ. ಅತ್ತೆ ಪಾರ್ಶ್ವ ವಾಯು ಪೀಡಿತರಾದ್ದರಿಂದ ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲಿಲ್ಲ. ಹೊರಗೆ ಹೋಗಿದ್ದ ಸೋಮ ಆಗತಾನೆ ಬಂದ. ಭವಾನಿಯನ್ನ ಕಂಡರೂ ಕಾಣದಂತೆ ಓಡಾಡುತ್ತಿದ್ದಾನೆ. ಬಹಳ ದೊಡ್ಡ ಮನುಷ್ಯನ ರೀತಿ ಕಾಣುತ್ತಿದ್ದಾನೆ. ಅಲ್ಲೇ ನಿಂತು ಅವನನ್ನೇ ಮೈಮರೆತು ನಿಂತುಬಿಟ್ಟಾಗ ಏನೋ ಹೇಳಿಕೊಳ್ಳಲಾಗದ ತುಡಿತ. ಅವನು ಸರಸರ ಓಡಾಡುವುದನ್ನು ನೋಡುತ್ತಾ ಬಾಲ್ಯದ ಆ ದಿನಗಳ ಬೆನ್ನೇರಿ ಹೋದಳು ಒಂದು ಕ್ಷಣ.ಅವನ ಮೇಲೆ ಕುದುರೆ ಸವಾರಿ ಮಾಡಿದ್ದು , ಅವನು ತನ್ನನ್ನು ಕೂಸುಮರಿ ಮಾಡಿದ್ದು , ಬಿದ್ದಾಗ ಗಾಯಕ್ಕೆ ಎಂಜಲು ಹಾಕಿದ್ದು , ಏನೇನೋ ಸಿಹಿ ನೆನೆಪುಗಳು ಮತ್ತಷ್ಟು ಕಾಡಿದೆ. ಒಳಗಿನಿಂದ ಅತ್ತೆ ಜೋರಾಗಿ ಏನೋ ಶಬ್ದ ಮಾಡಿದಾಗ ಮರಳಿ ಈ ಲೋಕಕ್ಕೆ ಬಂದಳು.
ಸೋಮ ತನ್ನನ್ನ ಒಂದು ಸಲವೂ ನೋಡಿಲ್ಲ. ಅನ್ನೋದೇ ಆಶ್ಚರ್ಯ. ಸೋಮ ಸಂಧ್ಯಾವಂದನೆ ಮುಗಿಸಿ ತನ್ನ ಕೋಣೆಗೆ ಹೋದ. ಬಾಗಿಲು ಅರ್ಧ ಮುಚ್ಚಿದೆ.ಏನು ಮಾಡುತ್ತಿರಬಹುದು ಎಂದು ಕುತೂಹಲ. ಹೊರಗೆ ಬಂದ ಪಾಟೀ ಪಾಟೀ ಅಂತ ಕೂಗಿದ ಅಡುಗೆ ಮಾಡೋ ಹೆಂಗಸು ಬಂದರು. ಊಟ ಹಾಕ್ತೀರಾ ಅಂತ ಕೇಳ್ದ.ಆಯ್ತು ಇಬ್ಬರಿಗೂ ಹಾಕ್ತೀನಿ ಅಂತ ನೆಲದಮೇಲೆ ಎಲೆ ತಟ್ಟೆ ಎರಡನ್ನೂ ಪಕ್ಕ ಪಕ್ಕದಲ್ಲಿ ಹಾಕಿದರು ಎಲೆಯನ್ನು ಸ್ವಲ್ಪ ದೂರ ಎಳೆದು ಕೂತುಕೊಂಡು ಸೌಜನ್ಯಕ್ಕಾದರೂಬಾ ಯಾವಾಗ ಬಂದಿದ್ದು ಅಮ್ಮ ಹೇಗಿದ್ದಾರೆ ನೀನು ಹೇ ಗಿದೀಯೆ ಒಂದೂ ಇಲ್ಲ. ಅಷ್ಟೊಂದು ವಿಧ್ಯೆ ಕಲಿಸಿದ ಗುರುಗಳು ಇದನ್ನ ಯಾಕೆ ತಿಳಿಸಿ ಕೊಡಲಿಲ್ಲವೋ ಗೊತ್ತಿಲ್ಲ. ಇಬ್ಬರದೂ ಊಟ ಆಯ್ತು. ಊಟ ಬಡಿಸಿದ ಪಾಟಿ ಒಬ್ಬರೇ ಇವಳಿಗೆ ಈಗ ಮಾತಾಡಕ್ಕೆ. ನೋಡು ಸೋಮಣ್ಣ ಎಷ್ಟು ಬದಲಾಗಿದ್ದಾನೆ. ನನ್ನ ಹತ್ತಿರ ಎಷ್ಟು ಬೇಕೋ ಅಷ್ಟೇ ಮಾತು. ಹೆಂಗಸರನ್ನು ಕಂಡರೆ ಒಂದು ಮೈಲಿ ದೂರ ಅನ್ನೋ ಹಾಗೆ ಆಡ್ತಾನೆ. ಒಂದು ಮದುವೆ ಆದ್ರೆ ಸರಿ ಹೋಗ್ತಾನೋ , ಮದುವೇನೇ ಬೇಡ ಅಂತಾನೋ ದೇವರಿಗೆ ಗೊತ್ತು ಅಂದರು ಪಾಟಿ. ಕೋಣೆಗೆ ಹೋಗಿ ಏನೋ ಓದುತ್ತಾ ಕುಳಿತ. ಸಣ್ಣ ದೀಪ .ದೀಪದ ಬೆಳಕಲ್ಲಿ ಮುಖ ಮಾತ್ರ ಕಾಣ್ತಾ ಇದೆ. ಬೇರೆ ಕಡೆ ಬೆಳಕಿಲ್ಲ.
ಧೈರ್ಯ ಮಾಡಿ ತಾನೇ ಮಾತಾಡಿಸಬೇಕು ಅಂತ ಬಂದು ನನ್ನ ಮೇಲೆ ಕೋಪಾನ ಅಂದಳು. ಇಲ್ಲ . ಮತ್ತೆ ಈಗೀಗ ಮಾತೇ ಆಡಲ್ಲ ಏಕೆ ಅಂತ ಹತ್ತಿರ ಹೋಗಿ ಪಕ್ಕದಲ್ಲಿ ಕೂತ ತಕ್ಷಣ ಬೆಂಕಿ ಬಿದ್ದ ಹಾಗೆ ಎದ್ದು ನಿಂತು. ನಾನು ಓದಬೇಕು ನೀನು ಪಾಟಿ ಹತ್ತಿರ ಇರು ಇನ್ನೇನು ಈಗ ಅಪ್ಪ ಬಂದು ಬಿಡ್ತಾರೆ ಅಂದ. ಹೊರಗೆ ಬಂದು ಕಂಬದ ಪಕ್ಕದಲ್ಲಿ ಕೂತು ತನ್ನಮಯ್ಯಿಗೆ ಬಿದ್ದ ಬೆಂಕಿ ಆರೋ ವರೆಗೂ ಕಣ್ಣು ಮುಚ್ಚಿ ಕೂತಳು. ಯಾರಿಗೂ ಹೇಳದೆ ತನ್ನನ್ನ ತಾನೇ ವಿರಹದಲ್ಲಿ ಸುಟ್ಟುಕೊಂಡು ದಿನ ಕಳೆದಳು ಪಾಪ ವಿಧವೆ ಪಟ್ಟಕ್ಕೇರಿದ್ದ ಆ ಚಿಕ್ಕವಯಸ್ಸಿನ ಭವಾನಿ.