ಹೆಣ್ಣಿನ ಗುಟ್ಟು
ಹೆಣ್ಣಿನ ಗುಟ್ಟು


ಒಬ್ಬ ರಾಜಕುಮಾರ ಪಕ್ಕದ ದೇಶದ ರಾಜಕುಮಾರನ ವಿರುದ್ಧ ಯುದ್ಧ ಮಾಡಿ ಅವನ ರಾಜ್ಯವನ್ನು ಗೆದ್ದ . ಇಬ್ಬರೂ ಅವಿವಾಹಿತರು. ಹೀಗೆ ಗೆದ್ದ ರಾಜಕುಮಾರ ಸೋತವನ ಹತ್ತಿರ ಹೇಳಿದ. ನಾನು ನನ್ನ ಪರಾಕ್ರಮ ತೋರಿಸಲು ಮಾತ್ರ ಯುದ್ದ ಮಾಡಿದೆ. ಬೇಕಾದರೆ ಈಗಲೂ ನಾನು ನಿನ್ನ ರಾಜ್ಯ ಹಿಂದುರಿಗಿಸುವೆ ,ಆದರೆ ನಾನು ಕೇಳುವ ಒಂದು ಪ್ರಶ್ನೆಗೆ ಸರಿಯಾದ ಉತ್ತರ ಕೊಡಬೇಕಷ್ಟೇ. ಆಗಲೆಂದು ಒಪ್ಪಿದ . ರಾಜಕುಮಾರ ಹೇಳಿದ, ನೋಡು ನಾನು ಒಂದು ಹುಡುಗಿಯನ್ನ ಪ್ರೀತಿಸುತ್ತಿದ್ದೇನೆ. ಅವಳು ಒಂದು ಪ್ರಶ್ನೆ ಕೇಳಿ ಅದಕ್ಕೆ ಸರಿಯಾದ ಉತ್ತರ ಕೊಟ್ಟರೆ ಮಾತ್ರ ನನ್ನ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ನೀನು ಸರಿಯಾದ ಉತ್ತರ ಕೊಟ್ಟು ನನಗೆ ಸಹಾಯ ಮಾಡಿದರೆ ನಿನಗೆ ನಿನ್ನ ರಾಜ್ಯ ವಾಪಸ್ ಕೊಡುವುದೇ ಅಲ್ಲದೆ ಇಂದಿನಿಂದ ನಾವಿಬ್ಬರೂ ಒಳ್ಳೆಯ ಮಿತ್ರರೂ ಆಗಿರುತ್ತೇವೆಂದ.' ಎಲ್ಲಾ ಹೆಣ್ಣು ಮಕ್ಕಳು ಒಂದು ವಿಚಾರದಲ್ಲಿ ಮಾತ್ರ ಒಂದೇ ರೀತಿಯಾಗಿ ಯೋಚಿಸುತ್ತಾರೆ.'ಅದು ಯಾವುದು? ಎಂದು ಇವನ ಪ್ರಶ್ನೆ. ಅದಕ್ಕೆ ಯೋಚಿಸಿ ತಿಳಿಸಲು ಒಂದು ದಿನದ ಸಮಯ ಸಹಾ ಕೊಟ್ಟ. ಅರಮನೆಗೆ ಬಂದು ಯೋಚನಾಕ್ರಾಂತನಾಗಿ ಕೂತಿದ್ದು ಕಂಡು ಮಂತ್ರಿ ಕಾರಣ ಕೇಳಿದ. ನಡೆದ ವಿಷಯ ತಿಳಿಸಿದ . ಅದಕ್ಕೆ ಮಂತ್ರಿ ಹೇಳಿದ್ದು, ಒಂದು ಹೆಣ್ಣಿನ ಮನವನ್ನ ಮತ್ತೊಂದು ಹೆಣ್ಣೇ ಅರಿಯುವುದು ಕಷ್ಟ . ಆದರೂ ಇದಕ್ಕೆ ಒಂದು ಉಪಾಯ ಇದೆ ಎಂದಾಗ ಎದ್ದು ನಿಂತು ತಕ್ಷಣ ಹೇಳು ರಾಜ್ಯಕ್ಕಾಗಿ ನಾನು ಏನು ಮಾಡಲೂ ಸಿದ್ಧನಾಗಿದ್ದೇನೆ ಎಂದ ರಾಜಕುಮಾರ. ನಮ್ಮ ಊರಿನ ಹೊರಗಿರುವ ಕಾಳಿ ಗುಡಿಯ ಹಿಂದೆ ಒಬ್ಬಳು ಮುದುಕಿ ಇದ್ದಾಳೆ.ನಾನು ಇದುವರೆಗೂ ಅವಳನ್ನ ನೋಡಿಲ್ಲ. ಆದರೆ ಅವಳು ರಾತ್ರಿ ಸಮಯದಲ್ಲಿ ಮಾತ್ರ ಹೊರಗೆ ಬರುತ್ತಾಳೆಂದು ಕೇಳಿದ್ದೇನೆ .ಅವಳಿಗೆ ಮಾಟ ಮಂತ್ರದ ಬಗ್ಗೆಯೂ ತಿಳಿದಿದೆ ಎಂದು ಹೇಳುತ್ತಾರೆ. ಬೇಕಿದ್ದರೆ ಪ್ರಯತ್ನ ಮಾಡಿ ಎಂದ. ಮಧ್ಯರಾತ್ರಿ ಸರಿಯಾಗಿ ಹನ್ನೆರಡು ಗಂಟೆಗೆ ಒಬ್ಬನೇ ಮಾರುವೇಷದಲ್ಲಿ ಹೊರಟ. ಮೊದಲು ದೂರದಲ್ಲಿ ನಿಂತು ನೋಡಿದ. ಆ ಮುದುಕಿ ಒಂದು ಪುಟ್ಟ ದೀಪ ಹಿಡಿದುಕೊಂಡು ಹೊರ ಬಂದಳು. ಅದೇ ಸಮಯಕ್ಕೆ ಹೋಗಿ ನಮಸ್ಕಾರ ಮಾಡಿದ. ತಕ್ಷಣ ಆ ಮುದುಕಿ ನನಗೆ ನಮಸ್ಕಾರ ಮಾಡಬಾರದು , ನೀನು ಎಷ್ಟಾದರೂ ರಾಜ ಕುಮಾರ ಎಂದಾಗ ಮಾರು ವೇಶದಲ್ಲಿದ್ದರೂ. ಕಂಡು ಹಿಡಿದ ಮುದುಕಿಯ ಬಗ್ಗೆ ಭಯ ಹಾಗೂ ಆಶ್ಚರ್ಯವಾಯ್ತು. ಆಗ ನಿನ್ನಿಂದ ನನಗೊಂದು ಸಹಾಯ ಬೇಕಿದೆ ಅಂತ ಹೇಳಿ ಮುಗಿಸುವ ಮೊದಲೇ, ನಿನಗೆ ಕಳೆದು ಹೋದ ರಾಜ್ಯ ವಾಪಾಸ್ ಬೇಕಿದೆ, ಗೆದ್ದಿರುವ ರಾಜಕುಮಾರ , ನಿನಗೊಂದು ಪ್ರಶ್ನೆ ಕೇಳಿ ಉತ್ತರ ಕೊಟ್ಟರೆ ರಾಜ್ಯ ವಾಪಸ್ ಪಡೆಯಬಹುದು ಎಂದು ಹೇಳಿದ್ದಾನೆ. ಒಂದೇ ದಿನದಲ್ಲಿ ಸಾಧ್ಯವಾಗದಿದ್ದರೆ ರಾಜ್ಯವೇ ಕೈಬಿಟ್ಟು ಹೋಗುತ್ತೆ , ಜೊತೆಗೆ ಮಿತ್ರನೊಬ್ಬ ದೊರೆಯುವ ಆಸೆಯೂ ಬಿಡಬೇಕಾಗುತ್ತದೆ. ಅಷ್ಟೇ ಅಲ್ಲವೇ ಎಂದಳು ಮುದುಕಿ. ಒಳಗೆ ಕರೆದು. ಒಂದು ಪಾತ್ರೆಯಲ್ಲಿ ನೀರನ್ನು ಕುಡಿಯಲು ಕೊಟ್ಟು
ಹೇಳಿದಳು. ಆಯ್ತು ನಿನಗೆ ರಾಜ್ಯ ವಾಪಸ್ ದೊರೆತು , ನಿನ್ನ ಮಿತ್ರನಿಗೆ ಪ್ರೇಯಸಿ ದೊರೆತು, ನೀವಿಬ್ಬರೂ ಒಳ್ಳೆಯ ಮಿತ್ರರೂ ಆಗುವಿರಿ. ಆದರೆ ಇದರಿಂದ ನನಗೇನು
ಲಾಭ ಎಂದಳು. ನಿನಗೆ ಏನು ಬೇಕಾದರೂ ಕೊಡಲು ಸಿದ್ದ ಎಂದ . ಎಂದೂ ಯಾರಿಗೂ ಹೀಗೆ ಏನು ಬೇಕಾದರೂ ಕೊಡ್ತೀನಿ ಅಂತ ಮಾತು ಕೊಡಬೇಡ. ಅದರಲ್ಲೂ. ಒಬ್ಬ ರಾಜಕುಮಾರನಾಗಿ ಹೀಗೆ ಮಾತು ಕೊಡ ಬಾರದು ಎಂದರೂ ಕೇಳದೆ ಆತುರದಲ್ಲಿ ಭಾಷೆ ಕೊಟ್ಟ. ಆಗ ಆ ಮುದುಕಿ, ಎಲ್ಲಾ ಹೆಣ್ಣು ಗಳೂ ಯಾವುದೇ ವಿಷಯದಲ್ಲಾಗಲಿ ತನ್ನ ತೀರ್ಮಾನವೇ ಅಂತ್ಯ ವಾಗಬೇಕೆಂದು ಬಯ ಸುತ್ತಾರೆ. ಇದು ಎಲ್ಲ ಹೆಣ್ಣಿನ ಮನೋಭಿಲಾಷೆ ಎಂದಳು. ಆಯ್ತು ಈಗ ಹೇಳು ನಿನಗೆ ಏನು ಬೇಕು ಎಂದಾಗ ಈಗ ಬೇಡ ನಿನ್ನ ಕೆಲಸ ಮುಗಿದಮೇಲೆ ಇಲ್ಲಿಗೆ ಬಂದಾ ಗ ತಿಳಿಸುತ್ತೇನೆ ಎಂದಳು. ತಕ್ಷಣ ಅಲ್ಲಿಂದ ಹೊರಟ. ರಾಜ್ಯವೂ ವಾಪಸ್ ಬಂತು. ಇಬ್ಬರೂ ಮಿತ್ರರಾಗಿ ರಾಜಕುಮಾರನಿಗೆ ಮದುವೆಯೂ ಆದಮೇಲೆ ಮುದುಕಿಯನ್ನು ಕಾಣಲು ಬಂದ . ಕತ್ತಲಲ್ಲಿ ಹೊರಗೆ ಕಾಣಲಿಲ್ಲ . ಮನೆ ಒಳಗೆ ಬಂದ. ಅಲ್ಲೆಲ್ಲೂ ಮುದುಕಿ ಕಾಣಲಿಲ್ಲ. ಕೊನೆಗೆ ಒಂದು ಮೂಲೆಯಲ್ಲಿ ಎಲ್ಲಾ ಆಭರಣಗಳನ್ನು ಧರಿಸಿ ದೇವತೆಯಂತೆ ಇರುವ ತರುಣಿಯೊಬ್ಬಳು ಕೂತಿರುವುದು ಕಂಡು ಹೆದರಿದ. ಆಗ ಭಯ ಬೇಡ ನಾನೇ ಆ ಮುದುಕಿ ಹೊರಗೆ ಹೋದಾಗ ನಾನು ಮುದುಕಿಯಾಗುತ್ತೇನೆ ಒಳಗೆ ಇದ್ದಾಗ ಹೀಗೆ ಇರುತ್ತೇನೆ. ಎಂದಿತು ಆ ಸುಂದರ ತರುಣಿ. ಆಗ ಕೇಳಿದ ನಾನು ನಿನಗೆ ಮಾತು ಕೊಟ್ಟ ಹಾಗೆ ಬಂದಿದ್ದೇನೆ ಏನು ಬೇಕು ಕೇಳು ಎಂದ ರಾಜಕುಮಾರ. ಅದಕ್ಕೆ ನೀನು ನನ್ನನ್ನ ವಿವಾಹವಾಗಬೇಕೆಂದಳು. ಅಲ್ಲೇ ಒಂದು ಕ್ಷಣ ಮೂರ್ಛೆ ಹೋದ. ಕಣ್ಣು ಬಿಟ್ಟಾಗ ಅವಳ ತೊಡೆಯಮೇಲೆ ತಲೆ ಇಟ್ಟು ಮಲಗಿದ್ದಾನೆ. ಹೆದರಿ ಎದ್ದು ಕುಳಿತ. ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡವನು ಈಗ ವಿಧಿ ಇಲ್ಲದೆ ಒಪ್ಪಲೇ ಬೇಕಾಯಿತು. ಆಗ ತರುಣಿ ಹೇಳಿದಳು .ಈಗ ನಿನಗೊಂದು ಪ್ರಶ್ನೆ . ನಾನು ಹೀಗಿರುವುದು ಇಷ್ಟವಾದರೆ ನೀನೇ ಪ್ರತಿ ದಿನ ರಾತ್ರಿ ಇಲ್ಲಿಗೆ ಬರಬೇಕು .ಇಲ್ಲವೇ ನಿನ್ನ ಅರಮನೆಗೆ ಬರಬೇಕೆಂದರೆ ಮುದುಕಿಯಾಗಿ ನಾನು ಬರಬೇಕು. ಈಗ ಹೇಳು ನಿನಗೆ ಯಾವುದು ಒಪ್ಪಿಗೆ. ಪಾಪ ಎರಡೂ ಕಷ್ಟದ ಕೆಲಸವೇ ಆಗಿತ್ತು.ಒಂದುದಿನ ಸಮಯ ಕೊಡು ಎಂದು ಕೇಳಿ ಅಲ್ಲಿಂದ ತನ್ನ ಹೊಸ ಮಿತ್ರನ ಬಳಿ ರಾತ್ರಿಯೇ. ಕುದುರೆ ಏರಿ ಹೊರಟು ತನ್ನ ಕಷ್ಟದ ಪರಿಸ್ಥಿತಿಯನ್ನು ವಿವರಿಸಿದ. ನೀನು ಮಾಡಿದ ಉಪಕಾರ ಮರೆತಿಲ್ಲ. ಹೇಗಾದರೂ ಸಂಜೆ ಒಳಗೆ ಇದಕ್ಕೊಂದು ಪರಿಹಾರ ಹುಡುಕೋಣ ಎಂದು ಹೇಳಿ , ರಾಣಿಯ ಬಳಿ ಇಬ್ಬರೂ ಹೋಗಿ ಅವಳಿಗೂ ವಿವರಿಸಿದರು.ಏನೂ ಉತ್ತರ ಕೊಡದೆ ಕೋಣೆಯ ಒಳಗೆ ಹೋಗಿ ಬಾಗಿಲು ಹಾಕಿ ಕೊಂಡಳು. ಅವಳ ವಿಚಿತ್ರ ವರ್ತನೆಯಿಂದ ಇಬ್ಬರಿಗೂ ಒಂದು ಕ್ಷಣ ಭಯವಾಯಿತು. ಹೊರಬಂದಾಗ ಅವಳ ಕೈಯಲ್ಲೊಂದು ಚಿತ್ರಪಟವಿತ್ತು. ಅದನ್ನ ತೋರಿಸಿದಾಗ ರಾತ್ರಿ ಕಂಡ ಅದೇ ತರುಣಿಯ ಚಿತ್ರ. ನಿಮಗೆ ಇವರು ಹೇಗೆ ಪರಿಚಯ ಅಂತ ಕೇಳಿದಾಗ ಹಿಂದೆನಡೆದ ಒಂದು ಕತೆಯನ್ನು ಹೇಳಿದಳು. ಅದರಂತೆ ಇವರಿಬ್ಬರೂ ಅಕ್ಕ ತಂಗಿಯರು. ಒಬ್ಬ ಋಷಿಯ ಶಾಪದಿಂದ ಅವಳು ಈ ರೀತಿ ಇದ್ದಾಳೆಂದು ವಿವಾಹವಾದರೆ ಮೂಲರೂಪಕ್ಕೆ ಮರುಳುವುದಾಗಿ ತಿಳಿಸಿ ನೀವು ನನ್ನಲ್ಲಿಗೆ ಬಂದಿದ್ದು ಒಳ್ಳೆಯದೇ ಆಯಿತು. ಹೆದರದೆ ವಿವಾಹವಾಗಿ. ಮತ್ತೊಂದು ವಿಷಯ . ಅವಳನ್ನ ಮುದುಕಿಯ ರೂಪದಲ್ಲಿ ಒಪ್ಪಿರುವುದಾಗಿ ಹೇಳಿ. ಇಲ್ಲದಿದ್ದರೆ ಮತ್ತೊಂದು ಸಂಕಷ್ಟ ಎದುರಿಸಬೇಕಾದೀತು ಎಂದಳು. ಸಂತೋಷದಿಂದ ಹೊರಟ.