ವಿಧಿಯಾಟ
ವಿಧಿಯಾಟ


ಇದು ತಮಿಳುನಾಡಿನಲ್ಲಿ ಬಹಳ ವರ್ಷಗಳ ಕೆಳಗೆ ನಡೆದಂತಹ ಘಟನೆ. ಆಗ ಎಲ್ಲರೂ ರೇಡಿಯೋ ಕೇಳುತ್ತಿದ್ದ ಕಾಲ. ಸಂಜೆ ವೇಳೆ ಹಳ್ಳಿ ಹಳ್ಳಿಗಳಲ್ಲಿ ಜಾನಪದ ಸಂಗೀತ ಹೆಚ್ಚು ಜನ ಕೇಳಿ ಆನಂದಿಸುತ್ತಿದ್ದರು. ಆಗ ಒಂದು ಹೆಂಗಸು ಹೆಚ್ಚು ಪ್ರಚಾರದಲ್ಲಿದ್ದಳು. ಅವಳ ಹಾಡೆಂದರೆ ಹಳ್ಳಿಯ ಜನ ಹುಚ್ಛೆದ್ದು ಕುಣಿಯುತ್ತಿದ್ದರು. ಬಹಳ ವರ್ಷಗಳ ಕಾಲ ನಿರಂತರವಾಗಿ ರೇಡಿಯೋದಲ್ಲಿ ಇವಳು ಹಾಡುತ್ತಿದ್ದು ಮನೆಮಾತಾಗಿತ್ತು. ಅಷ್ಟು ಖ್ಯಾತಿಪಡೆದ ಇವಳ ಸಾಂಸಾರಿಕ ಜೀವನ ಮಾತ್ರ ಕಣ್ಣೀರು ತರಿಸುವಂತಿತ್ತು. ಗಂಡ ಕುಡುಕ. ಇದ್ದ ಇಬ್ಬರು ಗಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ಕೊಂಡರೆ ಗಂಡ ಕುಡಿತದ ಹಣದಾಸೆಗೆ ಅವರಿಬ್ಬರನ್ನು ಯಾರಾದೋ ಮನೇ ಕೆಲಸಕ್ಕೆ ಬಿಟ್ಟು ದಾರಿ ತಪ್ಪುವಂತೆ ಮಾಡಿದ . ಗಂಡನ ಕಾಟ ತಡೆಯಲಾರದೆ ಮಕ್ಕಳನ್ನು ಬಿಟ್ಟು ಅಂದಿನ ಮದ್ರಾಸ್ ನಗರಕ್ಕೆ ಬಂದು ಬಿಟ್ಟಳು. ಅಂದಿನಿಂದ ಅವಳು ದುಃಖದ ಹಾಡುಗಳನ್ನೇ ಹೆಚ್ಚಾಗಿ ಹಾಡುತ್ತಿದ್ದು ಇನ್ನೂ ಹೆಚ್ಚು ಪ್ರಚಾರ ದೊರೆಯಿತು. ಅವಳ ಹಾಡೆಂದರೆ ಕಣ್ಣೀರು ಹಾಕದವರೇ ಇರಲಿಲ್ಲ.
ಇವಳ ಒಬ್ಬಮಗ ತಂದೆಯ ಜೊತೆ ಸೇರಿ ಕುಡಿಯುವುದು ಕಲೆತು ಆಸ್ಪತ್ರೆ ಸೇರಿ ಒಂದುದಿನ ಪ್ರಾಣ ಬಿಟ್ಟ. ನಂತರ ಗಂಡ ಊರುಬಿಟ್ಟು ಅಲ್ಲಿ ಇಲ್ಲಿ ಅಲೆದಾಡಿ ಬಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ. ಇವನನ್ನು ಗುರುತಿಸಿದ ಒಬ್ಬರು ಅವನ ಹೆಂಡತಿ ಇರುವ ಜಾಗಕ್ಕೆ ಕರೆದುಕೊಂಡು ಹೋಗುವ ಭರವಸೆ ನೀಡಿ ಮದ್ರಾಸ್ ಗೆ ಕರೆದು ತಂದರು. ಆದರೆ ಆ ಹೆಂಗಸು ಎಲ್ಲಿ ವಾಸ ವಾಗಿದ್ದಾಳೆ ಎನ್ನುವುದು ತಿಳಿಯದಾಗಿ ಅವನಿಗೆ ಸ್ವಲ್ಪ ಹಣ ಕೊಟ್ಟು ಅವರು ಹೊರಟು ಹೋದರು. ಮದ್ರಾಸ್ ನಗರದಲ್ಲಿ ಅಲೆದಾಡುತ್ತಿದ್ದಾಗ ರಸ್ತೆ ಅಫಗಾತವಾಗಿ ತೀರಿಕೊಂಡ. ಮಾರನೇ ದಿನ ಪತ್
ರಿಕೆಯೊಂದರಲ್ಲಿ ಇವನ ಫೋಟೋ ನೋಡಿ ತನ್ನ ಗಂಡನೆಂದು ಹುಡುಕಿಕೊಂಡು ಬರುವ ಹೊತ್ತಿಗೆ ಅನಾಥ ಶವವೆಂದು ಪೋಲೀಸಿನವರೇ ಸುಟ್ಟುಬಿಟ್ಟಿದ್ದರು. ಅಲ್ಲಿಯವರೆಗೆ ಇವಳ ಬಗ್ಗೆ ಯಾರಿಗೂ ತಿಳಿಯದ ವಿಷಯ ಇಡೀ ತಮಿಳು ನಾಡಿಗೆ ತಿಳಿಯಿವಂತಾಯಿತು. ಹೆಂಗಸರೆಲ್ಲ ಇವಳ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಂಡರು.
ಮತ್ತೊಬ್ಬ ಮಗ ಕಳ್ಳತನ ಸುಲಿಗೆ ಕೊಲೆಗಳಂತ ಹೀನ ಕೃತ್ಯಗಳಲ್ಲಿ ತೊಡಗಿದ್ದ. ಒಮ್ಮೆ ಭಾರಿ ಶ್ರೀಮಂತನ ಮಗನ ಕೊಲೆ ಮಾಡಿ ಜೈಲುಸೇರಿದ. ಕೆಲವು ವರ್ಷಗಳ ನಂತರ ನೇಣು ಶಿಕ್ಷೆಗೆ ಕೋರ್ಟ್ ಆದೇಶ ನೀಡಿ ದಿನಾಂಕವೂ ನಿಗದಿಯಾಯ್ತು.
ಹಿಂದಿನ ದಿನ ಅವನನ್ನ ಕೊನೇ ಆಸೆ ಎನೆಂದು ಅಧಿಕಾರಿಗಳು ಕೇಳಿದ್ದಕ್ಕೆ ಪ್ರತಿದಿನ ರೇಡಿಯೋನಲ್ಲಿ ಕೇಳುವ ಆ ಹೆಂಗಸನ್ನ ನಾನು ನೋಡಬೇಕು. ಹಾಗೇ ನನ್ನ ಮುಂದೆ ಅವರು ಹಾಡಬೇಕೆಂದು ಅವನ ಕೊನೇ ಆಸೆ ತಿಳಿಸಿದ. ಆದರೆ ಅವಳು ತನ್ನ ತಾಯಿ ಎಂದು ಮಾತ್ರ ಹೇಳಲಿಲ್ಲ. ಈ ವಿಷಯ ಅಂದು ತಮಿಳು ನಾಡೆಲ್ಲಾ ದೊಡ್ಡ ಸುದ್ದಿ. ಅವನ ಇಚ್ಛೆಯಂತೆ ಆ ಹೆಂಗಸು ಬಂದು ಹಾಡಿದಳು. ಅವಳಿಗೆ ಈ ವ್ಯಕ್ತಿಯನ್ನ ನೋಡಬೇಕೆಂಬ ಕಾತುರ. ಆದರೆ ಅವನಿಗೆ ಮುಖತೋರಿಸಲು ಮನಸ್ಸು ಇರದ ಕಾರಣ ಪೊಲೀಸ್ ಅಧಿಕಾರಿಗಳು ನಿರಾಕರಿಸಿದರು. ಆಗ ಕೊನೆಪಕ್ಷ ಅವನ ಫೋಟೋ ತೋರಿಸಿ ಎಂದಾಗ ಒಪ್ಪಿ ತೋರಿಸಿದರು. ತಾಯಿಯ ಕರುಳು ಮಗನನ್ನ ಗುರುತು ಹಿಡಿದೇ ಬಿಟ್ಟಿತು. ಆ ಕಡೆಯಿಂದ ದೂರದಲ್ಲಿದ್ದ ಅಮ್ಮನನ್ನ ಕಂಡು ಅಮ್ಮಾ ಅಂತ ಅವನೂ ಕೂಗಿದ. ಪೊಲೀಸ್ ಅಧಿಕಾರಿಗಳಿಗೆ ವಿಚಿತ್ರ ಅನುಭವ. ವಿಧಿಯನ್ನು ಶಪಿಸಿ ತಾಯಿ ಮಗ ಎಷ್ಟು ಹೊತ್ತು ಅತ್ತರೂ. ಕೆಲವೇ ಸಮಯ ದಲ್ಲಿ ಅವನು ನೇಣುಗಂಬಕ್ಕೆ ಹೋಗುವ ಸಮಯ ಸಮೀಪಿಸಿಬಿಟ್ಟಿತು.
ವಿಧಿಯಾಟ ಹೀಗೆ ಅಂತ್ಯವಾಗಿತ್ತು.
.