ಸರಸ
ಸರಸ


ಕಲ್ಬುರ್ಗಿ ಇಂದ ಕೆಲಸಕ್ಕಾಗಿ ಮೂರುಜನ ಹುಡುಗಿಯರು ಸರಸ, ರಾಣಿ ದಿವ್ಯ, ಒಬ್ಬ ಮೇಸ್ತ್ರಿ ಜೊತೆಗೆ ಬೆಂಗಳೂರಿಗೆ ಬಂದಾಗ, ಸರಸಳಿಗೆ ಬಟ್ಟೆ ಹೊಲಿಯೋದು ಸ್ವಲ್ಪಸ್ವಲ್ಪ ಗೊತ್ತಿದ್ದರಿಂದ ಒಂದು ವಾರದಲ್ಲೇ ಪೀಣ್ಯ ದಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿ ಒಂದರಲ್ಲಿ ಕೆಲಸ ಸಿಕ್ತು. ರಾಣಿ ಮತ್ತು ದಿವ್ಯ ಅದೇ ಮೇಸ್ತ್ರಿ ಹತ್ತಿರ ಕಟ್ಟಡದ ಕೆಲಸಕ್ಕೆ ಹೋಗ್ತಿದ್ರು. ಮೂರು ಜನರೂ ಒಂದೇ ಮನೆ ಮಾಡ್ಕೊಂಡು ಇದ್ದರು. ರಾಣಿ , ದಿವ್ಯ ಇಬ್ಬರಿಗೂ ಶನಿವಾರಗಳಂದು ವಾರದ ಕೂಲಿ ಕೊಡಕ್ಕೆ ಇವರ ಮನೆಗೆ ಬೇರೊಬ್ಬ ನಾಗ ಅನ್ನೋ ಮೇಸ್ತ್ರಿ ಬರ್ತಿದ್ದ. ಹೇಗೋ ಆ ಮೇಸ್ತ್ರಿಗೂ ಈ ಸರಸಳಿಗೂ ಪ್ರೇಮಾಂಕುರವಾಯ್ತು. ಅವನನ್ನ ಹೊಗಳಿ ಅಟ್ಟಕ್ಕೇರಿಸಿದ ಇಬ್ಬರು ಸ್ನೇಹಿತೆಯರಿಂದ ಅವನು ಒಳ್ಳೆಯವನೆಂದೇ ತಿಳಿದು ಮದುವೆಗೂ ಒಪ್ಪಿ ಧರ್ಮಸ್ಥಳದಲ್ಲಿ ಮದುವೇನೂ ಆಯ್ತು. ಬೇರೆ ಮನೆಮಾಡಿದರು. ಸ್ನೇಹಿತೆಯರು ಅವನ ಬಗ್ಗೆ ಹೇಳಿದ್ದೆಲ್ಲ ಬರೀ ಸುಳ್ಳು ಮೋಸ ಅಂತ ತಿಳಿಯಕ್ಕೆ ಹೆಚ್ಚು ದಿನ ಬೇಕಾಗಲಿಲ್ಲ. ಅವನಿಗೆ ಕುಡಿತದ ಜೊತೆ ಬೇರೆಲ್ಲ ಕೆಟ್ಟ ಹವ್ಯಾಸಗಳು ಇತ್ತು.
ಸರಸಳಿಗೂ ಸಂಪಾದನೆ ಇದ್ದುದರಿಂದ ಹೇಗೋ ಎರಡು ವರ್ಷ ಕಷ್ಟಪಟ್ಟು ಅವನ ಜೊತೆ ಸಂಸಾರ ಮಾಡಿದಳು. ಆ ತಪ್ಪಿಗೆ ಒಂದು ಹೆಣ್ಣು ಮಗು ಬೇರೆ ಕೊಟ್ಟಿದ್ದ. ಹೆಣ್ಣುಮಗು ಆಯ್ತು ಅಂತ ಕುಡಿತ ಹೆಚ್ಚಾಗಿ ಅವನು ಒಂದು ದಿನ liver damage ಆಗಿ ತೀರಿಕೊಂಡ. ಮಗುವನ್ನು ನೋಡಿಕೊಂಡು ಕೆಲಸಕ್ಕೆ ಹೋಗಲು ಬಹಳ ಕಷ್ಟ ಅಂತ ಊರಿಂದ ಅವಳ ದೊಡ್ಡಮ್ಮನನ್ನ ಕರೆದುತಂದಳು. ಅವರಿಗೂ ವಯಸ್ಸಾಗಿತ್ತು. ಹೇಗೋ ಮಗುವನ್ನ ನೋಡಿಕೊಳ್ಳುತ್ತಿದ್ದಾರಲ್ಲ ಅಂತ ಒಂದು ವರ್ಷ ಕಳೆದಾಗ. ಆ ಹೆಂಗಸಿಗೆ ಆರೋಗ್ಯ ಕೈ ಕೊಡ್ತು. ಆಸ್ಪತ್ರೆಗೆ ಸೇರಿಸಿ , ಕೆಲಸಕ್ಕೂ ಹೋಗದೆ ಮಗುವನ್ನು ನೋಡಿಕೊಳ್ಳುವುದು ಬಹಳ ಕಷ್ಟ ವಾಯ್ತು. ದೊಡ್ಡಮ್ಮನ್ನ ಕರೆದು ತಂದ ತಪ್ಪಿಗೆ ತನ್ನ ಕೈಲಿದ್ದ ಹಣ ಖಾಲಿ ಆಯ್ತು.
ಬೇರೊಬ್ಬರ ಸಹಾಯದದಿಂದ ಅರೋಗ್ಯ ಸ್ವಲ್ಪ ಸುಧಾರಿಸಿದ ಮೇಲೆ ಅವರನ್ನ ಊರಿಗೆ ಕಳಿಹಿಸಿ ಕೊಟ್ಟಾಯ್ತು. ಆ ಕೆಲಸ ಬಿಟ್ಟು ಮನೆ ಹತ್ತಿರವಿದ್ದ ಮತ್ತೊಂದು ಗಾರ್ಮೆಂಟ್ ಫ್ಯಾಕ್ಟರಿಗೆ ಸೇರಿದಳು. ಇಲ್ಲಿ ಮಕ್ಕಳನ್ನ ನೋಡಿಕೊಳ್ಳುವ ಅನುಕೂಲ ವಿದ್ದುದರಿಂದ ಹಾಗೇ ಅಲ್ಲೇ ಶಾಲೆಯೂ ಇದ್ದುದರಿಂದ ಒಳ್ಳೆಯದಾಯ್ತು.&nbs
p;ಹೇಗೋ ಮನೆ ಮಗು ಕೆಲಸ ಅಂತ ಜೀವನ ಕಳೆಯುತ್ತಿದ್ದಾಗ, ಅದೇ ಫ್ಯಾಕ್ಟರಿಯಲ್ಲೇ ಇವಳ ಗ್ರೂಪ್ ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸೂಪರ್ವೈಸರ್ ಎಲ್ಲ ತ್ಯಾಗಕ್ಕೂ ಸಿದ್ದ ಅಂತ ಸರಸಳ ಕೈ ಹಿಡಿದ. ಒಂಟಿ ಜೀವನದಿಂದ ಬೇಸತ್ತಿದ್ದ ಸರಸಳಿಗೂ ಒಪ್ಪಿಗೆಯಾಯ್ತು. ಇಬ್ಬರ ಸಂಬಳ ಒಂದು ಹೆಣ್ಣು ಮಗು. ಮುಂದಿನ ಒಳ್ಳೆಯ ದಿನಗಳ ಭರವಸೆ ಹೊತ್ತು ಅನ್ಯೋನ್ಯದಿಂದ ಜೀವನ ನಡೆಸುತ್ತಿದ್ದರು. ದಿನಗಳು ಕಳೆಯಿತು.
ಮಗಳು SSLC ಓದುತ್ತಿದ್ದಾಗ ಅದೇ ಸ್ಕೂಲಿನ ಟೀಚರ್ ಕಲ್ಬುರ್ಗಿಯವರೇ ಆದ ಒಬ್ಬರು ಒಂದು ದಿನ ಮದುವೆಯಾಗುವುದಾಗಿ ಹೇಳಿದಾಗ ಇವಳಿಗೆ ಶಾಕ್. ಅದಕ್ಕೆ ಕಾರಣ ಅಮ್ಮನಂತೆಯೇ ಇವಳ ರೂಪ. ಇಡೀ ತರಗತಿಗೆ ಬುದ್ದಿವಳಷ್ಟೆ ಅಲ್ಲದೆ ರೂಪವತಿ. ತಾಯಿಗೆ ಈ ವಿಷಯ ತಿಳಿಸಿದಾಗ ರಾತ್ರಿ ಮೂರು ಜನವೂ ಕೂತು ಒಂದು ನಿರ್ಧಾರಕ್ಕೆ ಬಂದರು. ಇವಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು. ಮತ್ತು ಮೊದಲ ತಂದೆಯ ವಿಷಯ ಅವರಿಗೆ ತಿಳಿಸ ಬಾರದು ಅಂತ. SSLC ಪರೀಕ್ಷೆ ಮುಗಿದ ತಕ್ಷಣ ಮದುವೇನೂ ಆಯ್ತು.
ಇಡೀ ಜೀವನ ಬಡತನದಲ್ಲಿ ಬೆಂದ ತಾಯಿ ತನ್ನ ಒಬ್ಬಳೇ ಮಗಳಿಗೆ ಮದುವೆ ಮಾಡಿಕೊಂಡು ಅತ್ತೆಮನೆಗೆ ಹೋಗುವಾಗ ಹೇಳಿದ ಮಾತು (ಕೈಹಿಡಿದುಕೊಂಡು ) ಮಗಳೇ ನೀನು ನನಗೆ ಒಂದು ಭಾಷೆ ಕೊಡ್ತಿಯ . ಏನಂದ್ರೆ ಎಂದೂ ನಾವು ಕಷ್ಟ ಪಟ್ಟಿದ್ದು ನಿಮ್ಮ ಅತ್ತೆ ಮನೆಯವರ ಮುಂದೆ ಹೇಳಿಕೊಳ್ಳಲ್ಲ ಅಂತ. ಅವರು ಅನುಕೂಲಸ್ಥರು. ಅವರಿಗೆ ನಾವು ನಿರ್ಗತಿಕರು ಅನ್ನೋದು ಗೊತ್ತಾಗ್ದೇ ಇರಲಿ. ಆ ಕಷ್ಟ ನಮ್ಮ ಮನೆಗೆ ಕೊನೆಯಾಗಲಿ. ನೀನು ಸುಖವಾಗಿರು. ನನ್ನ ಯೋಚನೆ ಬಿಡು. ನನ್ನ ನೋಡಬೇಕೆನಿಸಿದರೆ ಗಣೇಶನ ಗುಡಿ ಪಕ್ಕದ ಪಾರ್ಕ್ ಗೆ ಬಾ. ಆದರೆ ನೀನು ಬರೀ ಕಯ್ಯಲ್ಲಿ ಬರಬೇಕು. ಇದು ನನ್ನ ಮೇಲಾಣೆ. ಅ ಮನೆಯಿಂದ ಏನೋ ತೊಗೊಂಡು ಹೋಗಿ ತಾಯಿಗೆ ಕೊಡ್ತಾಳೆ ಅಂದು ಕೊಂಡಾರು. ಬಡವರೆಲ್ಲಾ ಹಣವಂತರ ಕಣ್ಣಿಗೆ ಕಳ್ಳರಂತೆ ಕಾಣ್ತಾರಮ್ಮ. ನಿನಗೆ ಅದೆಲ್ಲ ಅರ್ಥ ಆಗಲ್ಲ. ನಿನಗದು ಬೇಡ. ನನ್ನ ಮಾತು ಕೇಳಿದರೆ ನೀನು ಸುಖವಾಗಿ ಇರಬಹುದು ಅಂತ ಹೇಳಿ ಗಳಗಳನೆ ಅತ್ತಾಗ ಗಂಡ ಸಮಾಧಾನ ಮಾಡಿದ. ಮಗಳು ಕಾರು ಹತ್ತಿ ಅತ್ತೆಮನೆಗೆ ಹೊರಟಾಗ, ಎರಡನೇ ಗಂಡನಾದರೂ ಒಳ್ಳೆಯವನನ್ನೇ ಕರುಣಿಸಿದ್ದಕ್ಕೆ ದೇವರನ್ನು ಮನದಲ್ಲೇ ವಂದಿಸಿ ಗಂಡನಜೊತೆ ಭಾರವಾದ ಹೃದಯ ಹೊತ್ತು ಮನೆಕಡೆ ಹೊರಟಳು.