ಸ್ವಾತಂತ್ರ್ಯ ಯೋಧ ಅಮರ ರಹೆ
ಸ್ವಾತಂತ್ರ್ಯ ಯೋಧ ಅಮರ ರಹೆ
ಸರಕಾರಿ ಆಸ್ಪತ್ರೆಯ ವಾರ್ಡಿನ ಹಾಸಿಗೆಯಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ಮುದುಕ ಮಲಗಿದ್ದ, ಅವನು ಸ್ವಾತಂತ್ರ್ಯ ಯೋಧನೆಂದು ಊರಿಗೇ ತಿಳಿದಿತ್ತು. ಹದಿಹರೆಯದ ವಯಸ್ಸಿನಲ್ಲಿ ಮನೆ ತೊರೆದು ದೇಶಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿದ್ದ. ಯಾರು ಇಲ್ಲದ ಮುದುಕ ಬಡವರ ನೋವಿಗೆ, ಶೋಷಿತರ ಕಾವಿಗೆ ತಹತಹಿಸುತ್ತ ಅವರ ಸಹಾಯಕ್ಕಾಗಿ ಧಾವಿಸಿ ಅನ್ಯಾಯ ಕಂಡುಬಂದಲ್ಲಿ ಹತ್ತಾರು ಜನರನ್ನು ಸೇರಿಸಿಕೊಂಡು ಪ್ರತಿಭಟನೆಗೆ ಇಳಿಯುತ್ತಿದ್ದ. ಬೇರೆಯವರಿಗಾಗಿಯೇ ತನ್ನ ಬದುಕು ಎಂಬಂತಿದ್ದ ಮುದುಕನಿಗೆ ಬೆನ್ನು ನೋವು ಆವರಿಸಿಕೊಂಡು ಬಿಟ್ಟಿತ್ತು. ತೀರ ಮುದ್ದೆಯಾಗಿದ್ದ ಮುದುಕನನ್ನು ಯಾರೋ ತಂದು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಅವನು ಸ್ವಾತಂತ್ರ್ಯ ಯೋಧನಾದರೇನು? ಅವನೊಬ್ಬ ಅನಾಥ, ನಿಷ್ಪ್ರಯೋಜಕ, ಅವನಿಂದ ಏನೂ ಸಿಕ್ಕುವುದಿಲ್ಲವೆಂದು ತಿಳಿದ ಕೂಡಲೇ ಯಾವ ವೈದ್ಯರೂ ಅತ್ತ ಸುಳಿದಿರಲಿಲ್ಲ. ಬಿಳಿಯ ಬಟ್ಟೆಯೊಳಗೆ ಸೈತಾನನ್ನು ಮುಚ್ಚಿಟ್ಟುಕೊಂಡವರಿಗೆ ಮುದುಕನ ನರಳಾಟ ಕೇಳಿಸಲೇ ಇಲ್ಲ. ಈ ಲೋಕಕ್ಕೆ ಸಂಬಂಧವಿಲ್ಲದವನಂತಿದ್ದ ಮುದುಕ ಕೊನೆಗೂ ನೋವಿನಿಂದ ಮುಕ್ತಿಪಡೆದು ಉಸಿರು ನಿಲ್ಲಿಸಿಕೊಂಡಿದ್ದ ಅವನ ಸುತ್ತಲೂ ಜನ ಲಬೋ ಎಂದು ಸೇರಿದರು, “ಸ್ವಾತಂತ್ರ್ಯ ಯೋಧ ಅಮರ ರಹೆ” ಎಂದು ಕೂಗಿದರು. ಗಣ್ಯಾತೀಗಣ್ಯರು, ಪತ್ರಕರ್ತರು, ಇತರೆ ಸುದ್ದಿಮಾಧ್ಯಮದವರು ಧಾವಿಸಿ ಬಂದು ಆಸ್ಪತ್ರೆಯ ಆವರಣದೊಳಗೆ ಮುದುಕನ ದೇಶಪ್ರೇಮ ಕುರಿತು ಭಾಷಣ ಕೊರೆದರು. ಮುದುಕನ ಆತ್ಮ ಒಂದು ಕಡೆ ಕುಳಿತು ಊಸರವಳ್ಳಿಗಳ ಮಾತು ಆಲಿಸುತ್ತ ವಿಷಾದದ ನಿಟ್ಟುಸಿರು ಚೆಲ್ಲತೊಡಗಿತ್ತು.
