ಸೀತೆ
ಸೀತೆ
ಹೆಣ್ಣು ಎಂದರೆ ಎಲ್ಲರಿಗೂ ಹೀಗೆನಾ... ಅವಳ ತ್ಯಾಗ, ಸಹನೆ, ಬಲಿದಾನ ಯಾರಿಗೂ ಕಾಣಿಸುವುದೆ ಇಲ್ಲವೆ..? ಕಂಡರು ಅದು ಯಾವ ಮಹಾ ಎನ್ನುವ ತಾತ್ಸರ ಭಾವವೆ. ಹೆಣ್ಣು ಎನೇ ಮಾಡಿದರು ಎಲೆ ಮರೆ ಕಾಯಿಯಂತೆ ಅವಳ ಜೀವನ. ನಮ್ಮ ಸಮಾಜದಲ್ಲಿ ಹೆಣ್ಣಿಗೆ ಬೆಲೆ ನೀಡುವುದೆ ಬಲು ವಿರಳ.... ಸಾಕ್ಷಾತ ಶಿವನೇ ಪಾರ್ವತಿಗೆ ಅರ್ಧ ಶರೀರ ನೀಡಿದರು ಇನ್ನೂ ಬದಲಾಗುತ್ತಿಲ್ಲಾ ಈ ಸಮಾಜ ಮತ್ತು ನಮ್ಮ ಜಗತ್ತು.
ನನ್ನ ಗತಿಯೇ ಹೀಗಿರುವಾಗ ಇನ್ನೂ ಸಾಮಾನ್ಯ ಮಹಿಳೆಯರ ಸ್ಥಿತಿ ಹೇಗೆ ಉಹಿಸಿಕೊಳ್ಳುವುದು ಅಸಾಧ್ಯ.
ತವರು ಮನೆಯಲ್ಲಿ ಯಾವುದೇ ಕಷ್ಟಗಳು ಇಲ್ಲದಂತೆ ಬೆಳೆದವಳು ನಾನು... ನನ್ನ ತಂದೆಗೆ ಭೂಮಿಯಲ್ಲಿ ದೊರೆತೆ ಆದರು ನನ್ನ ತಂದೆ ಮತ್ತು ತಾಯಿ ಸ್ವಂತ ಮಗಳಿಗಿಂತಾ ಹೆಚ್ಚಾಗಿ ಬೆಳೆಸಿದವರು... ಯಾವತ್ತು ಅನಾಥ ಪ್ರಜ್ಞೆ ಕಾಡದಂತೆ, ಕಣ್ಣಿಗೆ ರೆಪ್ಪೆ ರಕ್ಷಣೆ ನೀಡಿದ ಹಾಗೆ ತುಂಬಾ ಪ್ರೀತಿಯಿಂದ ಬೆಳೆಸಿದರು. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದೆ, ತಾಂದೆ- ತಾಯಿಯರ ಜೊತೆ ತಂಗಿಯಂದಿರ ಜೊತೆ ಬರಿ ಸಂತೋಷದ ದಿನಗಳನ್ನೆ ಸವಿದೆ. ವಿಧಿಯಾಟ.. ಮುಂದೆ ನನ್ನ ಬಾಳಿನಲ್ಲಿ ಇಂತಹ ಘಟನೆಗಳು ಬರುತ್ತೆ ಅಂತಾನೆ ಅಷ್ಟೊಂದು ಜೇನು ತುಂಬಿದ ಜೀವನ ನೀಡಿತ್ತು ಅನಿಸುತ್ತೆ. ಸಾವಿರಾರು ಕನಸುಗಳನ್ನ ಕಂಡು ರಾಮನ ಮಡದಿಯಾದೆ... ಎಲ್ಲರೂ ನನ್ನ ದೈವವನ್ನ ಹೊಗಳುವರೆ ಅಯೋಧ್ಯಯ ಹಿರಿ ಸೊಸೆ, ಪರಮ ಪುರುಷೋತ್ತಮನ ಪಟ್ಟದರಸಿಯೆಂದು. ಆದರೆ ಅಷ್ಟೆ ಬೇಗ ವನವಾಸಿಯು ಆದೆ... ನನ್ನ ಜೊತೆ ಪಾಪಾ ಊರ್ಮಿಳೆಯು ಗಂಡನಿಂದ ದೂರವಾಗಿರುವ ಹಾಗಾಯಿತು. ಗಂಡನಿದ್ದಲ್ಲಿ ಸ್ವರ್ಗ ಅಂತಾ ಗಂಡನ ಹೆಜ್ಜೆಯ ಹಿಂದೆ ಹೆಜ್ಜೆ ಹಾಕಿದೆ ಆದರೆ ಕೊನೆಗೆ ನನಗೆ ಸಿಕ್ಕಿದ್ದೆನು... ಅನುಮಾನದ ಪಿಶಾಚಿಯೋ, ಅಥವಾ ಧರ್ಮದಿಂದ ಆಳುವ ಹುಮ್ಮಸ್ಸಲ್ಲಿ ಕೇವಲ ಒಬ್ಬ ಪ್ರಜೆಯ ಮಾತಿನಿಂದ ಮತ್ತೆ ಕಾಡಿನ
ವಾಸ. ನಮ್ಮ ತಂದೆಗೆ ಕಹೋಡ ಮುನಿಯ ಹೆಂಡತಿ ಸುಜಾತಳ ಶಾಪದ ಫಲವಾಗಿ ನಾವು ನಾಲ್ಕು ಜನ ಹೆಣ್ಣು ಮಕ್ಕಳು ಗಂಡನಿಂದ ದೂರ ಉಳಿಯ ಬೇಕಾಯಿತು. ನೋಡಿ ಇದೆಂತಾ ವಿಪರ್ಯಾಸ ನಮ್ಮ ತಂದೆಯಿಂದಾಗಿ ನಾವು ಶಾಪ ಅನುಭವಿಸ ಬೇಕಾಯಿತು.
ರಾಮನ ಗುಣ ಕೊಂಡಾಡುವರು ಎಲ್ಲರೂ ಆದರೆ ನನ್ನ ತ್ಯಾಗ, ಸಹನೆ ಬಗ್ಗೆ ಮರುಕ ಪಟ್ಟವರು ಕೇವಲ ಬೆರಳೆಣಿಕೆಯಷ್ಟು.
ಗಂಡನಿಗಾಗಿ ಮಳೆ, ಬಿಸಿಲು, ಹಸಿವು, ನಿದ್ರೆ ಮತ್ತು ನೀರಡಿಕೆಗಳನ್ನ ಮರೆತು..., ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದೆ... ಅವಾಗ ಆದ ನೋವು ಅಷ್ಟಿಷ್ಟಲ್ಲಾ... ಹಸಿವು ಆಗುವ ಮುಂಚೆ ಮುೃಷ್ಟಾನ್ನವನ್ನ ಉಂಡವಳು.. ಹಸಿವು ಎಂದರೆ ಗೊತ್ತಿರದವಳು ಎಷ್ಟೊ ದಿವಸ ಅನ್ನ ಆಹಾರಗಳಿಲ್ಲದೆ ಕಳೆದಿದ್ದೆನೆ. ಕೇವಲ ಹಣ್ಣು ಅದು ಸಿಗದಿದ್ದಾಗ ಗೆಡ್ಡೆ ಗೆಣಸು ತಿಂದು ಅರೆ ಹೊಟ್ಟೆಯಲ್ಲಿ ಮಲಗಿದ್ದೆನೆ. ಹೊಟ್ಟೆಯಲ್ಲಿ ಸಂಕಟವಿದ್ದರೂ ನನ್ನ ರಾಮನಿಗಾಗಿ ಎಲ್ಲವನ್ನು ಮರೆತೆ. ಕ್ಷಣ ಕಾಲ ಕೂಡತುಂತುರು ಮಳೆಯಲ್ಲೂ ನೆನೆಯದವಳು, ಎಷ್ಟೋ ವರ್ಷ ಗುಡುಗು, ಮಿಂಚು, ಸಿಡಿಲು ಭೋರ್ಗರೆವ ಮಳೆಗೆ ತತ್ತರಿಸಿ ಗುಬ್ಬಿಯ ಹಾಗೆ ಮುದುರಿ ಕುಳಿತೆ. ಅಂತಃಪುರದಿಂದ ಸುರ್ಯನನ್ನ ಕಂಡವಳು, ಅವನ ಶಾಖ ಪ್ರಖರತೆಯನ್ನ ಕಾಡಿನಲ್ಲಿ ಅನುಭವಿಸಿದೆ. ಕಾಡು ಪ್ರಾಣಿಗಳ ಶಬ್ದ, ವಿಷ ಜಂತುಗಳ ಅನಿರೀಕ್ಷಿತ ಆಗಮನ ಎಲ್ಲ ಭಯವನ್ನ ಮನದಲ್ಲೆ ಅನುಭವಿಸಿದ್ದೆನೆ. ಹೆಣ್ಣು ಎಂದರೆ ಎಷ್ಟು ನಾಜೂಕೂ ನಾನಂತು ಹೂವಿನ ಹಾಗಿದ್ದವಳು ಇದನ್ನೆಲ್ಲಾ ಹೇಗೆ ಸಹಿಸಿದೆ ಎನ್ನುವುದೆ ವಿಚಿತ್ರ..
ಶೂರ್ಪನಖಿಯ ಮೂಗು ಕತ್ತರಿಸಿದವರು ಇವರು... ಅವಳು ಮೋಹಗೊಂಡಿದ್ದು ಇವರ ಮೇಲೆ ಆದರೆ ಅದರ ಕಷ್ಟ ಅನುಭವಿಸಿದ್ದು.. ನಾನು.
ಕನಸಲ್ಲು ಅಷ್ಟು ಭಯಾನಕ ರಾಕ್ಷಸರನ್ನ ಕಾಣದವಳು ನಿಜ ಜೀವನದಲ್ಲಿ ಅವರ ಮಧ್ಯ ದಿನಗಳನ್ನ ಕಳೆದವಳು...ಭಯಾನಕ ರೂಪಾ ಅವರ ಕೊರೆ ಹಲ್ಲುಗಳು ಪ್ರತಿಯೊಂದು ನಡುಕ ತರಿಸುವ ದೃಶ್ಯಗಳು. ಮಿಥೆಲೆಯನ್ನ ಬಿಟ್ಟು ಬೇರೆ ಊರೆ ಗೊತ್ತಿಲ್ಲದವಳು ಅಂಗೈಯಲ್ಲಿ ಜೀವ ಹಿಡಿದು ಏಳು ಸಮುದ್ರದಾಚೆಯು ಜೀವಿಸಿ ಮರಳಿ ಮತ್ತೆ ಬಂದೆ. ಎಲ್ಲ ರೀತಿಯ ನರಕ ಅನುಭವಿಸಿದೆ ನನ್ನ ಶೀಲ ಉಳಿಸಿಕೊಳ್ಳಲು ವಿವಿಧವಾದ ಕಷ್ಟಗಳನ್ನೆಲ್ಲಾ ಸಹಿಸಿದೆ.
ಮರಳಿ ಬಂದಾಗ ರಾಮ ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು ಎದೆಯಲ್ಲಿ ಬಚ್ಚಿಟ್ಟುಕೊಳ್ಳುವ ಎಂದು ಕೊಂಡವಳು ಅಗ್ನಿ ಪರಿಕ್ಷೇ ನೀಡಬೇಕಾಯಿತು. ಮನದಲ್ಲಿ ಹೇಳಲಾಗದ ಸಂಕಟ ಮತ್ತು ವೇದನೆ ನನ್ನ ಕಷ್ಟ ಕಾರ್ಪಣ್ಯಕ್ಕೆ ಸಿಕ್ಕ ಫಲವೆಂದು ಅನುಭವಿಸಿದೆ. ಎಲ್ಲವನ್ನು ಮರೆತು ವೈಭವದ ಜೀವನ ನಡೆಸತೊಡಗಿದೆ.... ಸುಖಿ ಜೀವನಕ್ಕೆ ಕಲಶವಿಟ್ಟಂಟೆ ಗರ್ಭವತಿಯು ಆದೆ. ನೂರಾರು ಕನಸು ಕಂಡಿದ್ದೆ ನನ್ನ ರಾಮನ ಜೊತೆ ನವಮಾಸ ಕಳೆಯಬೇಕು... ನನ್ನ ಗರ್ಭದ ಶಿಶುವಿನ ಚಲನ ವಲನವನ್ನ ಗಂಡನ ಜೊತೆಗುಡಿ ನೋಡಿ ಆನಂದಿಸಬೇಕು... ಬಸರಿಯ ಬಯಕೆ ಎನ್ನುವ ಹಾಗೆ ಮಿಥಿಲೆಯಿಂದ ನನಗೆ ಬೇಕಾದ ಪದಾರ್ಥಗಳು ತರಿಸಿಕೊಳ್ಳಬೇಕು... ಪ್ರತಿ ದಿನವು ರತ್ನ ಖಚಿತವಾದ ವಸ್ತ್ರಗಳನ್ನುಟ್ಟು, ಅಮೂಲ್ಯವಾದ ಒಡವೆ ತೊಟ್ಟು ಸಿಂಗರಿಸಿಕೊಳ್ಳುವ ಆಸೆ... ವಿಧವಿಧವಾದ ತಿಂಡಿಗಳನ್ನ ಭಕ್ಷ್ಯಗಳನ್ನ ಸವಿಯಬೇಕು... ನನ್ನ ರಾಮನ ಜೊತೆ ದಿನಗಳನ್ನ ಕಳೆಯಬೇಕು... ಶಿಶುವಿಗಾಗಿ ತೊಟ್ಟಿಲು ಮಾಡಿಸಬೇಕು... ಸೀಮಂತ ಹೀಗೆ ಹಲವಾರು ಬಯಕೆ ಚಿಗುರೊಡೆದಿತ್ತು... ಆದರೆ ನನಗೆ ಆದದ್ದು ಏನೂ. ಎಲ್ಲ ಹೆಣ್ಣು ಮಕ್ಕಳು ಗರ್ಭ ಧರಿಸಿದಾಗ ಸಂತೋಷ ಪಟ್ಟರೆ ನನ್ನದು ದುಃಖದ ಪರಿಸ್ಥಿತಿ.. ಗರ್ಭವನ್ನೆ ಅನುಮಾನಿಸಿದವರು... ಗರ್ಭಿನಿಯಾಗಿ ಮತ್ತೆ ಕಾಡು ಸೇರಿದೆ.. ಛೆ.. ನನ್ನಂತಹ ಜೀವನ ಶತ್ರುವಿಗೂ ಬೇಡ. ಮಕ್ಕಳನ್ನ ಹೆತ್ತು ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಿದೆ.. ಕಡೆಗೂ ನನ್ನ ಕರ್ತವ್ಯಕ್ಕೆ ಲೋಕದಿಂದ ಮೆಚ್ಚುಗೆಯ ಮಾತುಗಳು ಬಂದಿದ್ದು ಕಡಿಮೆಯೆ.
ಇಷ್ಟೆಲ್ಲಾ ನಾನು ಮಾಡಿದರು ಕಡೆಗೆ ಎಲ್ಲರೂ ಅನ್ನುವುದು ರಾಮಾಯಣ.. ಸೀತೆ ಅಲ್ಲಿ ಕೇವಲ ಒಂದು ಪಾತ್ರ ಮಾತ್ರ.. ರಾಮನ ಹೆಂಡತಿ ಮಾತ್ರ..
ನನ್ನ ಅಂತರಾಳವನ್ನ ಬಲ್ಲವರು ಬಹಳ ವಿರಳ...
