radheya kanasugalu

Classics Inspirational Children

3.0  

radheya kanasugalu

Classics Inspirational Children

ಅವ್ವ

ಅವ್ವ

3 mins
407



ನನ್ನ ಅವ್ವ! ಅವ್ವ, ಅಮ್ಮ, ಮಮ್ಮಿ ಈ ಶಬ್ದಗಳೊಳಗ ಏನೋ ಒಂದು ಮ್ಯಾಜಿಕ್ ಅದಲಾ. ಅವು ಬರೆ ಶಬ್ದ ಅನ್ನುಕ್ಕಿಂತ ಎಲ್ಲಾರ ಜೀವನಕ್ಕ ಜೀವಮೃತ ಇದ್ದಂಗ.

ಏನ ತ್ರಾಸ ಬಂದ್ರು ಮೊದಲ ನೆನಪ ಆಗುದು ಅವ್ವ. ನಾವು ನಮಗ ಬೇಕಾಗಿದ್ದು, ಬ್ಯಾಡಗಿದ್ದು ಏನಾದ್ರು ಮೊದ್ಲ ಕೇಳುದು ಅವ್ವಗ. ಭಾಳ ಖುಷಿ ಆದಾಗ ಮೊದಲ ಅವ್ವನ್ನ ನೆನಸ್ತಿವೋ ಇಲ್ಲೋ ಗೊತ್ತಿಲ್ಲ ಅದ್ರ ಸಂಕ್ಟ ಆದಾಗ ದೇವರನ್ನ ನೆನಸ್ತಿವೋ ಇಲ್ಲೋ ಗೊತ್ತಿಲ್ಲ ಆದ್ರ ಮೊದ್ಲ ಅವ್ವನ ಮುಂದ ಹೇಳಿ ಸಮಾಧಾನ ಆಗ್ತಿವಿ.

ಸಾಲ್ಯಾಗ ಮಾಸ್ತರ ಬೈದಿದ್ದು, ಗೆಳತ್ಯಾರ ಜೋಡಿ ಜಗಳಾ ಮಾಡಿದಾಗ, ಗೆಳಯರು ಕಾಡ್ಸಿದಾಗ, ಓಣ್ಯಾಗಿನ ದೊಡ್ಡವರು ಬೆದರಿಸಿದ್ದು, ಆಟದಾಗ ಸೋತಾಗ, ಪರೀಕ್ಷೆದಾಗ ಮಾರ್ಕ್ಸ್ ಕಮ್ಮಿ ಬಂದಾಗ, ಹೊಸ ಅಂಗಿ ಬೇಕಾದಾಗ, ಹಳಿ ಬಳಿ ರಿಬ್ಬನು ಸಾಕಾದಾಗ ಅಳಮೋತಿ ಮಾಡ್ಕೊಂಡ ಹೇಳುದ ಅವ್ವಗ.

ದೊಡ್ಡವರದಾಗ ಕಾಲೇಜದಾಗ ದೋಸ್ತರ ಜೋಡಿ ಜಗಳ ಆದಾಗ, ಹುಡುಗಿ ಬಿಟ್ಟ ಹೋದ್ರ, ಮನಿ ಊಟ ನೆನಪ ಆದ್ರ, ಕೆಲಸ ಸಿಕ್ಕ ಮ್ಯಾಲೆ ಬಾಸ್ ಕಡೆ ಬೈಸ್ಕೊಂಡಾಗ ಮೊದ್ಲ ಅವ್ವಗ ಫೋನ್ ಮಾಡಿ ಮಾತಾಡಿ ಸಮಾಧಾನ ಮಾಡ್ಕೋತೀವಿ.

ಮದ್ವಿ ಆದ್ಮ್ಯಾಲ್ ಅತ್ತಿ ಬೈದಳು, ಮಕ್ಕಳು ಕಾಡಾಕತ್ತಾವ, ಆರಾಮ ಇಲ್ಲಾಂದ್ರೂ ಎಲ್ಲ ನಾನ್ ಮಾಡಬೇಕು ಅಂತ ಮೊದ್ಲು ಅಳ್ಕೋತ ಫೋನ್ ಹೋಗುದು ಅವ್ವಗ.


ಹೌದಲ್ಲ? ಅವ್ವ ಎಲ್ಲಾರ ಸಮಸ್ಯೆಗೂ ಕಷ್ಟಕ್ಕೂ ಪರಿಹಾರ ಅದಾಳ. ಆದ್ರ ಒಂದು ದಿವಸರೆ ವಿಚಾರ ಮಾಡಿರೆನ ಅಕಿ ಕಷ್ಟ ಏನ ಅಂತ. ಗಂಡ ಮಕ್ಕಳು ಅನ್ಕೊಂಡಿರ್ತೀರಿ ನನಗ ಕೆಲಸ ಸಿಕ್ಕಮ್ಯಾಲೆ ಹೊಸ ಸೀರಿ ಕೊಡ್ಸುನು ಖುಷಿ ಆಗ್ತಾಳ ಅಂತ. ಇನ್ನೂ ಹುಡಗ್ಯಾರ ಒಂದು ಹೊತ್ತು ಭಾಂಡೆ ತೋಳದ್ರ ಅವ್ವಗ ಕೆಲಸದಾಗ ಹಗರ ಆಗತ್ತಾ ಅಂತ. ಮೊದ್ಲ ಅಕಿ ಕಷ್ಟ ತಿಳ್ಕೋರಿ ಸಾಕು.


ನಾವು ಸಣ್ಣವರಿದ್ದಾಗ "ಯವ್ವ ಕುಸ ಏಳುದ್ರಾಗ ಕೆಲಸ ಮುಗಸ್ಬೇಕ, ಪಾಪ ಅದು ಎದ್ದ ಮ್ಯಾಲಿ ಅದ್ಕ ಜಳಕ, ತಿನ್ಸುದು, ಉಣಸುದು, ಆಟ ಇದ್ರಾಗ ಹೊತ್ತ ಕಳಿಬೇಕು. ಅದು ಎದ್ದ ಮ್ಯಾಲೆ ನಾ ಕೆಲಸ ಮಾಡ್ಕೋತ ಕುಂತ್ರ ಅದು ಅತ್ತ, ಅತ್ತ ಹೈರಾಣ ಆಕ್ಕೆತಿ", ಅಂತ ಅವ್ವ ಕಣ್ಣ ತುಂಬಾ ನಿದ್ದಿ ಮಾಡುದ ಬಿಡ್ತಾಳ ನಮ್ಮ ಜೊತಿ ಹೊತ್ತ ಕಳಿಯು ಸಲುವಾಗಿ ತನ್ನ ಹೊತ್ತ ಓಡಸ್ತಾಳ.

"ಹುಡುಗುರ ಸಾಲಿಗೆ ಹೊಕ್ಕಾವು ದೌಡ ದೌಡ ಅಡಿಗಿ ಮಾಡ್ಬೇಕ, ಹುಡುಗರ ಸಾಲಿ ಇಂದ ಹಸದ ಬರತಾವ ಇದೆಲ್ಲ ತಿನ್ನುದು ಅವುಕ ಇಟ್ರ ಆತು ನಾ ಏನ ಮನ್ಯಾಗ ಇರಾಕಿ ಅರ್ಧಾ ತಿಂದ್ರು ನಡಿತದ" ಅಂತ ಹೊಟ್ಟ ತುಂಬಾ ಊಟ ಮಾಡುದು ವಿಚಾರ ಮಾಡಲ್ಲ ಅಕಿ.

"ಯವ್ವ ನಾ ಪ್ರವಾಸಕ್ಕ ಹೋಗಾಂವ ನನಗ ಯಾಡ ಸಾವಿರ ಬೇಕು" ಅಂತ ಮಗಾ ಕೇಳಿದ್ರ ಆತು ವರ್ಷಾನಗಟ್ಟಲೆ ಚಾಪುಡಿ, ಸಕ್ಕರಿ ಡಬ್ಯಾಗ ಕೂಡಿಟ್ಟ ರೊಕ್ಕ ಕೊಳ್ಳಾಗಿನ ಸವದ ಹೋದ ಬಂಗಾರ ಗುಂಡ ಹೊಸಾದ ಮಾಡ್ಸ್ಕೊಬೇಕು ಅಂದಕಿ "ನನ್ನ ಬಂಗಾರ ಗುಂಡ ಯಾರ ನೋಡ್ತಾರ ನಾ ಏನ ಮನ್ಯಾಗ ಇರಾಕಿ, ನನ್ನ ಮಗಾ ನಾಕ ಊರು ಅಡ್ಯಾಡಿ ನೋಡಿ ಬರ್ಲಿ" ಅಂತ ಕಳಾಸಕಿ.

ಮಗಳ ಬಂದು "ಅವ್ವ ಬೇ (ಅಮ್ಮ) ಮತ್ತ ನಮ್ಮ ಗೆಳತಿ ಪಂಚಮಿ ಹಬ್ಬಕ್ಕ ಹೊಸಾ ಅರಬಿ ತೊಗೊತಾಳಂತ ಸಾಲ್ಯಾಗ ಸರಸ್ವತಿ ಪೂಜೆಕ ಹಾಕೊಂಡ ಹೋಗಾಕ. ನನಗು ಬೇಕ ಬೇ ಹೊಸಾ ಅರಬಿ" ಆತು ಮತ್ತ್ಯಾಕೋ ತಗದ ಇಟ್ಟಿದ್ದ ರೊಕ್ಕ ಮಗಳ ಅರಬಿಗೆ ಹೊದು.

ಅವ್ವ ಇದೆಲ್ಲ ಕಷ್ಟ ಅಂತ ಮಾಡುದಿಲ್ಲ ಬ್ಯಾಸರ ಪಡುದಿಲ್ಲ ನನ್ನ ಮಕ್ಕಳಿಗೆ ಇಷ್ಟ ಅಂತ ಮಾಡ್ತಾಳ. ನೀವು ಅಕಿಗೆ ಸೀರೆ ಕೊಟ್ಟು, ಒಡವಿ ಕೊಟ್ಟು, ಅಕಿ ಕೈಯ್ಯಾಗ ಒಡ್ಯಾಡಿ ಕೆಲಸ ಮಾಡುದ್ರಿಂದ ಖುಷಿ ಅಲ್ಲ.


ನೀವು ಸಾಲ್ಯಾಗ ನೂರಕ್ಕ ನೂರು ಮಾರ್ಕಸ್ ತೊಗೊಂಡಿಲ್ಲಾಂದ್ರು ನಡಿತೈತಿ, ದೊಡ್ಡ ಕೆಲಸ ಮಾಡಿ ಕಂತಿ, ಕಂತಿ ರೊಕ್ಕ ತಂದಿಲ್ಲಾಂದ್ರು ನಡಿತೈತಿ, ನೀವು ಬಂಗಾರ ಪದಕ ತರುದ ಬ್ಯಾಡ..., ಆದ್ರ ನಾಕ್ ಮಂದಿ ಏನ್ ನಿಮ್ಮ ಮಗಾ/ಮಗಳ ಹಿಂಗ ಅದಾನಲ್ರಿ/ಅದಾಳಲ್ರಿ ಅನ್ನುವಂಗ ಆಗಬ್ಯಾಡ್ರಿ. ನೀವು ಏನ ಮಾಡಿಲ್ಲಾಂದ್ರು ಸಾಕ, ಇದ್ರ ಇಂತಾ ಮಕ್ಕಳ ಇರಬೇಕ ನೋಡ್ರಿ ಅಂದ್ರ ಸಾಕ ಅವ್ವ ಹಿಗ್ಗಿ ಊರಗಲ ಅಕ್ಕಾಳು.

ಇದ ನೀವು ಅಕಿ ದೈಹಿಕ ಕಷ್ಟಕ್ಕ ಫಲ ಕೊಟ್ಟಂಗ.

ಕೆಟ್ಟ ಚಟಾ ಮಾಡಿ, ಅಡ್ಡ ದಾರಿ ಹಿಡದು, ಹೆಣ್ಣಮಕ್ಕಳಿಗೆ ಕಾಡಸ್ಕೊತ, ಕೆಟ್ಟ ಹೆಸರ ತೊಗೊಂಡ್ರ ಅಕಿಗೆ ಇಷ್ಟ ದಿನ ಆದ ತ್ರಾಸ ಕಿಂತ ಮಾನಸಿಕ ತ್ರಾಸ ಭಾಳ ಆಗತೈತಿ.



ಹೆಣ್ಣಮಕ್ಕಳು ಅವ್ವನ ಹೆಸರ ಉಳಸುವಂಗ ಬಾಳೆ (ಜೀವನ ) ಮಾಡಿ ತೋರ್ಸಿದ್ರ ಅಕಿ ಅಷ್ಟ ನಶಿಬವಾನ ಯಾರು ಇರುದಿಲ್ಲ.

ಕೆಟ್ಟ ಹೆಸರ ತೊಗೊಂಡ ಅವ್ವನ ಮನಸ್ಸಿಗೆ ಮತ್ತಷ್ಟ ತ್ರಾಸ ಕೊಡಬ್ಯಾಡ್ರಿ.


ತಾಯಿ ಮಕ್ಕಳಿಗೆ ಒಳ್ಳೆಯದನ್ನು ಕಲಿಸುತ್ತಾಳೋ ಇಲ್ಲವೋ ಗೊತ್ತಿಲ್ಲ ಆದರೆ ಕೆಟ್ಟದನ್ನು ಮಾತ್ರ ಹೇಳಿಕೊಡಿವುದಿಲ್ಲ.

ಅವಳ ಕಷ್ಟವನ್ನು ಅರ್ಥ ಮಾಡಿಕೊಂಡು ಇನ್ನಾದರೂ ಸುಧಾರಿಸೋಣ.


Rate this content
Log in

Similar kannada story from Classics