ಸುಮಿತ್ರ
ಸುಮಿತ್ರ
'ಸುಮಿತ್ರ.... ಏ ಸುಮಿತ್ರ ಅಲ್ಲಿ ನೋಡು ನಿನ್ನ ಬಿಂದಿಗೆ ನೀರನ್ನು ಯಾರೋ ತೊಗೊಂಡು ಹೋಗ್ತಿದ್ದಾರೆ.'
"ಹೌದಾ..! ಅಯ್ಯೋ ಪಾಪಾ ನೀರು ಇಲ್ಲ ಅನ್ಸತ್ತೆ ಅವರ ಹತ್ರ ತೊಗೊಂಡು ಹೋಗ್ಲಿ ಬಿಡಿ, ನನ್ನ ಹತ್ರ ಇನ್ನೊಂದು ಬಿಂದಿಗೆ ನೀರಿದೆ ಅಕ್ಕ.. ನಾಳೆ ತನಕ ಅದರಲ್ಲೇ ನೋಡಿ ಬಳಸ್ತೀನಿ."
'ನಿನ್ನೊಬ್ಬಳು..., ಅಲ್ವೇ ನಾಳೆ ನಲ್ಲಿಗೆ ನೀರು ಬಂದು, ನಿನ್ನ ಸರತಿ ಬಂದು ನೀರು ಸಿಗೋ ತನಕ ಅಷ್ಟು ಸಾಕಾಗುತ್ತಾ. ಅದು ಅಲ್ಲದೆ ಬೇಸಿಗೆ ಬಿಸಿಲು ಬೇರೆ.' ಅಂದು ಪಕ್ಕದ ಮನೆ ಸಾವಿತ್ರಿ ಅವಳ ಬಿಂದಿಗೆ ಸೊಂಟದಲ್ಲಿ ಇಟ್ಟುಕೊಂಡು ಮನೆಗೆ ಹೋದಳು.
ಬೇಸಿಗೆ ಕಾಲದಲ್ಲಿ ನೀರು ಸಿಗೋದೇ ಕಷ್ಟ ಅಂತದ್ರಲ್ಲಿ ಸುಮಿತ್ರಳ ಬಿಂದಿಗೆ ನೀರು ಯಾರೋ ತೊಗೊಂಡು ಹೋದ್ರು. ಆದ್ರೆ ಸುಮಿತ್ರಾ ಯಾರು ಏನೇ ಕೇಳಿದ್ರು ಅಥವಾ ತೊಗೊಂಡ್ರು ಯಾಕೆ ಅಂತಾ ಕೇಳೋ ಜಾಯಮಾನ ಅವಳದಲ್ಲ. ಇದ್ದಿದ್ರಲ್ಲೇ ತೃಪ್ತಿ ಪಡೋ ಜೀವ ಅದು. ವಿಶಾಲ ಮನೋಭಾವದ ಸುಮಿತ್ರ... ಇಡೀ ಬೀದಿ ಜನರಿಗೆ ಪಾಪದ ಹೆಂಗಸು.
ಸುಮಿತ್ರ ಕೇವಲ 11 ವರ್ಷದವಳಿದ್ದಾಗ ಮದುವೆ ಆಗಿ ಬಂದಳು. ದೊಡ್ಡ ಮನೆತನ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಆಸ್ತಿವಂತರು. ಗಂಡ ಹಗಲೆಲ್ಲ ಹೊಲದಲ್ಲಿ ಕೆಲಸ ಸಂಜೆ ಆದ್ರೆ ಕುಡಿತ. ಕುಡಿದು ಎಲ್ಲೋ ಬಿದ್ದಿರೋನು, ಯಾರಾದರೂ ತಂದು ಮನೆಗೆ ಬಿಟ್ಟು ಹೋಗೋರು. ಚಿಕ್ಕ ಹುಡುಗಿ ಸುಮಿತ್ರ ಹಾಗೆ ಕುಡುಕ ಗಂಡನ ಜೊತೆ ಸಂಸಾರ ಸಾಗರಕ್ಕೆ ಇಳಿದು ನಿಧಾನವಾಗಿ ಈಜುವ ಪ್ರಯತ್ನ ನಡೆಸಿದಳು. ಗಂಡ ಒಂದು ದಿನವೂ ಒಂದು ಮೊಳ ಹೂವು ತಂದು ಕೊಟ್ಟಿದ್ದು ಗೊತ್ತಿಲ್ಲ. ಸಾಲು ಸಾಲಾಗಿ ನಾಲ್ಕು ಮಕ್ಕಳನ್ನ ಮಾತ್ರ ಕೊಟ್ಟಿದ್ದ. ದುಡಿದ ಹಣ ಅವನ ಮೋಜಿಗೆ ಮುಗಿದು ಹೋಗುತಿತ್ತು. ಮಕ್ಕಳಿಗೆ ತನ್ನ ಸೀರೆಯಲ್ಲಿ ಬಟ್ಟೆ ಹೊಲಿದು ಹಾಕುತ್ತೀದಳು.
ಅತ್ತೆ ಮನೇಲಿ ಮಕ್ಕಳಿಗೆ ತನಗೆ ಎರಡು ಹೊತ್ತು ಊಟ ಸಿಗುವುದೇ ಅವಳ ಭಾಗ್ಯವಾಗಿತ್ತು.
ಗಂಡನಿಂದ ಚಿನ್ನ, ಬೆಳ್ಳಿ, ವಸ್ತ್ರ, ಜಾತ್ರೆ ಮತ್ತು ಸುತ್ತಾಟ ಅಂತ ಯಾವ ಬೇಡಿಕೆಯು ಅವಳು ಇಟ್ಟಿಲ್ಲ ಮತ್ತು ಅಂತಹ ಆಸೆಗಳನ್ನು ಬಲಿ ಕೊಟ್ಟು ಸಂಸಾರ ಮಾಡುತ್ತಿದ್ದಳು. ಗಂಡ ಇನ್ನೋಬಳ ಸಂಗ ಮಾಡಿದಾಗಳು ನಗು ನಗುತ್ತಾ ಸುಮ್ಮನಿದ್ದಳು.
ಗಂಡ ಖುಷಿಯಾಗಿ ಇದ್ದರೆ ಸಾಕು ಎಂದು ತನ್ನ ಆಸೆ ಆಕಾಂಕ್ಷೆಗಳನ್ನ ತ್ಯಾಗ ಮಾಡಿದ್ದಳು ಗಂಡನಿಗಾಗಿ.
ಗಂಡ ಕುಡಿದು ಕುಡಿದು ಸತ್ತು ಹೋದ. ಅತ್ತೆ ಮನೆಯವರು ನಿನ್ನ ಮತ್ತು ನಿನ್ನ ಮಕ್ಕಳನ್ನ ನೋಡಿಕೊಳಲ್ಲೂ ಸಾಧ್ಯವಿಲ್ಲ ಎಂದಾಗ ನಗು ನಗುತ್ತಾ ಹೊರನಡೆದಳು. ಆಸ್ತಿ, ಹೊಲ, ಮತ್ತು ಮನೆ ಏನು ಸಿಗಲ್ಲ ಎಂದು ಖಾಲಿ ಹಾಳೆ ಮೇಲೆ ಹೆಬ್ಬಟ್ಟು ಒತ್ತಿ, "ನೀವಾದರೂ ಖುಷಿಯಾಗಿರೀ ಯಾವಾಗಲಾದರೂ ಮಾತನಾಡಿಸಿ, ನಾವಿರುವಲ್ಲಿಗೆ ಬನ್ನಿ ನನಗೆ ಆಸ್ತಿ ಮುಖ್ಯ ಅಲ್ಲ ಸಂಬಂಧಗಳು ಮುಖ್ಯ" ಎಂದು ಕೈಮುಗಿದಳು. ಸುಮಿತ್ರ ಸಂಬಂಧಗಳಿಗಾಗಿ ಜೀವನಂಶವನ್ನು ತ್ಯಜಿಸಿದಳು.
ಬೀದಿ ಬದಿಯಲ್ಲಿ ಧರ್ಮಾತ್ಮರು ಕೊಟ್ಟ ಜಾಗದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದಳು.
ಮಕ್ಕಳಿಗಾಗಿ ಹಗಲು ಇರುಳು ದುಡಿಯುತ್ತಿದ್ದಳು. ಊಟ, ನಿದ್ದೆ, ವಿಶ್ರಾಂತಿ ಎನ್ನದೆ ಜೀವನ ಕಳೆದಳು. ಆ ಜೀವಕ್ಕೆ ಹೊಸ ಸೀರೆ, ಚಿನ್ನ ಬಿಡಿ ಒಳ್ಳೆಯ ಊಟ ಕೂಡ ಕಾಣಲಿಲ್ಲ.
ಮದುವೆ ಆಗಿ ಹೆಣ್ಣುಮಕ್ಕಳು ಗಂಡನ ಮನೆಗೆ ಹೋದರು ಶಕ್ತಿಯಾನುಸರ ಅವರ ಮದುವೆ ಮಾಡಿ ಕಳುಹಿಸಿದ್ದಳು.
ಆಸರೆ ಆಗಬೇಕಿದ್ದ ಗಂಡು ಮಕ್ಕಳೇ ಪೋಲಿ ಅಲೆಯುತ್ತಿದ್ದರು. ವಯಸ್ಸಾದರೂ ಮಕ್ಕಳಿಗೆ ಅವಳೇ ದುಡಿದು ಹಾಕಬೇಕು. ದುಡಿದು ಬಲಳಿದ ಜೀವ ಸಾಕಾಗಿತ್ತು. ತವರಿನವರು ಕಡೆ ಕಾಲದಲ್ಲಿ ಏನಾದರೂ ಕೊಟ್ಟಾರು ಎಂಬ ಆಸೆ ಇತ್ತು ಅವಳಿಗೆ. ಅದರಂತೆ ಅವಳ ಅಣ್ಣ ಒಂದು ದಿನ ಬಂದು ನಿನಗೆ ಒಂದು ಮನೆ ಕೊಡುವುದಾಗಿ ಮಾತಾಗಿದೆ ನಿನ್ನ ಪಾಲಿನದು ಎಂದು ಪತ್ರದಲ್ಲಿ ಹೆಬ್ಬೆಟ್ಟು ಒತ್ತಿಸಿಕೊಂಡು ಹೋದ.
ಸುಮಿತ್ರ ತವರಿನವರು ಕಟ್ಟಿಸಿ ಕೊಟ್ಟ ಮನೆಗೆ ಖುಷಿ ಇಂದ ಹೋಗಿ ವಾಸಿಸ ತೊಡಗಿದಳು. ದುಡಿದು ಸ್ವಲ್ಪ ಹಣ ಕುಡಿಸಿಟ್ಟಿದ್ದಳು ಅದರಲ್ಲಿ ಅವಳಿಗೆ ಚಿನ್ನದ ಓಲೆ ಒಂದು ಜೊತೆ ಒಂದು ಒಳ್ಳೆ ಸೀರೆ ಕೊಂಡು ಉಡುವ ಆಸೆ. ಒಂದು ದಿನ ಒಬ್ಬರಿಂದ ಒಂದು ಸುದ್ದಿ ಗೊತ್ತಾಯಿತು. ಅವಳ ಈ ಮನೆ ಅವಳ ಹೆಸರಿನಲ್ಲಿ ಇಲ್ಲ, ಅವಳು ಜೀವಂತ ಇರುವವರೆಗೂ ಮಾತ್ರ ಅನುಭವಿಸಬಹುದು.... ಮುಂದೆ ಅದು ಅವರ ಅಣ್ಣನ ಸೊತ್ತು. ಈ ವಿಷಯ ಕೇಳಿ ಮುಗುಳು ನಕ್ಕಳು ಮಾತ್ರ. ಅವರ ತಾಯಿ ಇಂದ ಬಂದ ಮನೆಕೂಡ ಅವಳಿಗೆ ಗೊತ್ತಿಲ್ಲದ ಹಾಗೆ ಬರೆಸಿಕೊಂಡಿದ್ದರು ಇರಲಿ ಅಣ್ಣನಾದರೂ ಸುಖವಾಗಿರಲಿ ಎಂದು ಸುಮ್ಮನಾದಳು.
ಸರಕಾರಿಯವರು ಅರ್ಧ ಬೆಲೆಗೆ ಬಡವರಿಗೆ ಮನೆ ಕೊಡುವ ಸುದ್ದಿ ಕೇಳಿ ತನ್ನ ಓಲೆಗಾಗಿ ಕುಡಿಸಿಟ್ಟ ಹಣ ಗಂಡು ಮಕ್ಕಳಿಗಾಗಿ ಮನೆ ಖರೀದೀಸಿದಳು.
ಕಡೆಯ ತನಕ ಮತ್ತೊಬ್ಬರ ಹಂಗಲ್ಲಿ ಇರದೇ ಸ್ವತಂತ್ರಳಾಗಿ ಬದುಕಿದ ಜೀವ.
ಪ್ರತಿ ಹೆಜ್ಜೆಗೂ ತ್ಯಾಗ ಮಾಡುತ್ತ ಬದುಕಿದ ಜೀವ.
ಇದು ನೈಜ ಘಟನೆ...
