radheya kanasugalu

Comedy Classics Inspirational

4  

radheya kanasugalu

Comedy Classics Inspirational

ಜವಾರಿ ಕುಟುಂಬದ ಮದುವೆ ಸಂಭ್ರಮ

ಜವಾರಿ ಕುಟುಂಬದ ಮದುವೆ ಸಂಭ್ರಮ

3 mins
284



ಎಲ್ಲರ ಕುಟುಂಬದಲ್ಲೂ ಖುಷಿ, ದುಃಖ, ಹಾಸ್ಯ ಘಟನೆಗಳು ನಡದೆ ಇರುತ್ತೆ. ಜಗಳ ಅಂತೂ ಸರ್ವೇ ಸಾಮಾನ್ಯ. ಇಂದು ನಾನು ನಮ್ಮ ತುಂಬು ಕುಟುಂಬದ ಮದುವೆ ವಿಚಾರ ಹೇಳ್ತಿನಿ ಕೇಳಿ.


ನಮ್ಮ ಕಡೆ ಮದವಿ ಹೆಂಗ ಮಜಾದಾಗ ಮಾಡ್ತಾರ ಅನ್ನುದು ನಾ ಅವಾಗ ಹೇಳೀನಿ ನಿಮಗ. ನನ್ನ ಲೇಖನ "ನಮ್ಮ ಕಡೆ ಮದ್ವಿ ಸಂತಿ" ಒಳಗ.

ಇನ್ನು ನಮ್ಮ ಅವ್ವ ಅಪ್ಪನ ಮದ್ವಿ ಕಥಿ ನಮ್ಮ ಭಾಷಾದಾಗ ಹೇಳ್ತಿನಿ ಕೇಳ್ರಿ.


ಎಲ್ಲರಿಗೂ ಅವರ ಅವ್ವ ಅಪ್ಪನ ಮದ್ವಿ ಬಗ್ಗೆ ಅಜ್ಜಿ ಇಲ್ಲ ಅಜ್ಜ ಹೇಳ್ತಾರ ಅದ್ರ ನಮಗ ಆ ಭಾಗ್ಯ ಇಲ್ರಿ.

ಯಾಕಂದ್ರ ನಮ್ಮ ಮಮ್ಮಿ ಅವ್ವ-ಅಪ್ಪ ನಮ್ಮ ಮಮ್ಮಿ ಸಣ್ಣಕಿ ಇದ್ದಾಗ ತೀರಕೊಂಡಿದ್ರು. ಪಪ್ಪಾ ಅವರ ಮಮ್ಮಿ-ಪಪ್ಪಾ ನಾ ಸಣ್ಣಕಿ ಇದ್ದಾಗ ತೀರಕೊಂಡರು. ಅದಕ್ಕ ನೋಡ್ರಿ ನಮ್ಮ ಮಮ್ಮಿ ಮತ್ತ ಪಪ್ಪಾ ಅವರ ಮದ್ವಿ ಕಥಿ ಅವರ ಹೇಳತಿದ್ರು, ಹೇಳುದ್ರಾಗ ಇಬ್ಬುರದ ಎರಡ ಸಲ ಜಗಳ ಅಕ್ಕಿತ್ತು. ನಮ್ಮ ಅಪ್ಪವರ ಸ್ವಾದರತ್ತಿ ಅಕಿ ಸ್ವಲ್ಪ ಹೇಳ್ಯಾಳ ನಾನೂ ಅದ ಹೇಳ್ತಿನ್ರಿ.


ನಮ್ಮ ಅವ್ವಗ ಅವ್ವ ಅಪ್ಪ ಇರಲಿಲ್ಲ ಹಾಂಗಾಗಿ ಅಕಿ ಮದ್ವಿ ಅವರ ಅಣ್ಣನ ಹೆಂಡ್ತಿ ಅವರ ವೈನಿ ಮದ್ವಿ ಮಾಡ್ಯಾರ. ಯಾಕಂದ್ರ ನಮ್ಮ ಅವ್ವನ ಅಣ್ಣನು ಜಲ್ದಿ ತೀರಕೊಂಡಿದ್ರು.

ಮೊದಲು ನಮ್ಮ ಪಪ್ಪಾ ನೋಡಾಕ ಹೋಗ್ಯಾರ. ನಮ್ಮ ಮಮ್ಮಿ ಅವರಿಗೆ ಪಸಂದ ಬಂದಾಳು ಮತ್ತ ಹುಡುಗ ಚಂದ ಇದ್ದ ಇವರಿಗೂ ಪಸಂದ ಬಂದದ. ಹುಡುಗಿ ಕಡೆಯವರು ಇನ್ನು ಹುಡುಗನ ಮನಿ ನೋಡಕ್ ಹೋದ್ರು.

ನಮ್ಮ ಮಮ್ಮಿ ಮನಿ ಕಡೆ ಭಾಳ್ ಶ್ರೀಮಂತ ಮತ್ತ ಪಪ್ಪಾ ಅವರು ಬಡೂರು.. ಸಣ್ಣ ಮನಿ ಮತ್ತ ಮನಿ ತುಂಬ 15 ಮಂದಿ. ಅದನ್ನ ನೋಡಿ ನಮ್ಮ ಮಮ್ಮಿನ ವೈನಿ ಅಂದ್ರ ನಮ್ಮ ಮಾಮಿ, "ಯಪ್ಪಾ ಇಲ್ಲಿ ಹೆಂಗ ಕೊಡುದ ಹುಡುಗಿನ, ಊರಾನ ಮಂದಿ ಏನ್ ಅಂದಾರ" ಅಂತ ಜೋಡ ಹೋದ ಹಿರ್ಯಾರಿಗೆ ಹೇಳ್ಯಾರು.


ವಾಪಸ ಊರಿಗೆ ಹೋಗಿ ನಮ್ಮ ಮಮ್ಮಿಗೆ ಅಂದ್ರಂತ "ತಂಗಿ ಹುಡುಗ ಚಂದ ಅದನ, ಯಾವ ಚಟಾ ಇಲ್ಲ, ಮತ್ತ ಮನ್ಯಾನ ಮಂದಿ ಛೋಲೋ ಗರೀಬ ಆದರೂ ಆದ್ರ.... ಭಾಳ ಬಡೂರ ಅದರ ಬ್ಯಾಡ" ಅದ್ಕ ನಮ್ಮ ಅವ್ವ "ವೈನಿ ಅಂವ ಚಂತನಾ ದುಡದ ಬಂದು ಸಂಜಿಕ ತಂದ ಹಾಕ್ಲಿ ಹೊತ್ತಿಗೆ ನಾ ಅವಂಗ ಅಗಾಕಿ" ಅಂದ್ರಂತ

ಇದೊಂದ್ ಕಥಿ ಆದ್ರ....

 

"ನಿಮ್ಮ ಅಪ್ಪನ ಮಾದವ್ಯಾಗ್ ಮೂರು ಟ್ರಕ್ ಮಾಂದಿ ಬಂದಿತ್ತು, ಮತ್ತ ದೊಡ್ಡ ನಮ್ಮ ಗೋರ್ಮೆಂಟ್ ಸಾಲ್ಯಾಗ ಲಗ್ನ ಮಾಡಿದ್ವಿ, ನಮ್ಮ ಮನಿ ಮಂದಿಗೆಲ್ಲ ಹೊಸ ಅರ್ಬಿ ತೊಗೊಂಡಿದ್ವಿ. ತಂಗಿ ಊಟಕ್ಕ ಶಿರಾ, ಮಸಾಲಿ ಅನ್ನ, ಭಜಿ, ಉಪ್ಪಿನಕಾಯಿ ಮತ್ತ ನುಗ್ಗಿಕಾಯಿ ಹಾಕಿ ಸಾರು ಮಾಡ್ಸಿದ್ರು... ನಾ ಅರೆ 4 ಬಟ್ಲಾ ಸಾರ ಕುಡ್ದಿದ್ನಿ. ಅಂಥ ಲಗ್ನ, ಅಟ್ ಮಂದಿ ಮತ್ತ್ ಅಂಥ ಊಟ ಎಲ್ಲು ಆಗಿದ್ದಿಲ್ಲ." ಅಂದ್ರು ನಮ್ಮ ಅಪ್ಪನ ಸ್ವಾದರತ್ತಿ.

ನೋಡ್ರಿ ಇವಾಗಿನ ಹಂಗ ಅವಾಗ ವರ್ಷಕ್ಕ ನಾಕ ಸಲ ಅರಬಿ ತೊಗೊತ್ತಿರಲಿಲ್ಲ 2 ವರ್ಷಕ್ಕೊಮ್ಮೆ ಇಲ್ಲ ಯಾರಾದರ ಮದ್ವಿ ಇದ್ದಾಗ ಅಷ್ಟ. ಬರಿ ಹುಗ್ಗಿ ಅಥವಾ ಸಜ್ಜಕ ಮತ್ತ ಅನ್ನ, ಸಾರು ಅದ್ರ ಊಟ ಮುಗಿತ್ರಿ. ಶಿರಾ ಮತ್ತ ಭಜಿ ಮಾಡ್ಸಯಾರಂದ್ರ ಭಾರಿ ಅಡುಗೆ ಅದ.



ನಮ್ಮವ್ವ ಹೇಳತಿದ್ಲು " ಬಿಗರ್ ಲಿಬ್ಬನ್ (ಮದುವೆ ದಿಬ್ಬಣ) ಬಂದ್ರ ಕುಡ್ಯಾಕ್ ನೀರು ಕೊಟ್ಟಿರಲಿಲ್ಲ ಇಂಥ ಮಂದಿ ಇದು" ಅಂತಿದ್ಲು. ಅದ್ಕ ನಮ್ಮ ಅಪ್ಪ "ಇವರು ಹೊಳಿ ನೀರ ಕುಡದ ಮಂದಿ ಅದ್ಕ ನಾವು ಕೆರಿ ನೀರು ಕೊಡ್ಲಿಲ್ಲ" ಯಾಕಂದ್ರ ಅವಾಗ ಬಿಜಾಪುರದಾಗ ನೀರಿನ ಸಮಸ್ಯೆ ಬಾಳಿತ್ತು.


ಇನ್ನು ಅವಾಗ ಮದ್ವಿ ಮಾಡ್ಸಕ್ ಬಂದ ಭಡಜಿ ಮದ್ವಿ ಮಾಡಿಸುವಾಗ ನಮ್ಮವ್ವನ್ ಹಿಂದ ಕುಂತ ಗೆಳತಿ ಕಡೆ ನೋಡಿ, "ನೀರು ಬಿಡ್ರಿ, ಅಕ್ಷತಾ ಹಾಕ್ರಿ, ಹೂವ ಹಾಕ್ರಿ ಮತ್ತ ಅರಿಶಿಣ ಕುಂ ಕುಮ ಎರಸ್ರಿ" ಅಂತ ಹೇಳತಿದ್ದಂತ.. ಅದ್ಕ ನಮ್ಮ ಅವ್ವ ಅಪ್ಪ ಮಾಡತಿದ್ರು. ನಮ್ಮ ಅವ್ವನ ಹಿಂದ್ ಕುಂತ ಗೆಳತಿ ಗಾಬ್ರಿ ಆಗಿ ಭಡಜಿ ನನ್ನ ನೋಡ್ಕೋತ ಮಂತ್ರ ಹೇಳಾಕತ್ತಾನ ಸುಡ್ಲಿ ಅಂದು ಎದ್ದು ಹೋದ್ಲಂತ. ಮತ್ತ್ ಹುಡುಗಿ ಹಿಂದ ಯಾರಾರ ಬೇಕಲಾ ಯಾವ್ ಹೆಂಗಸರ ಬಂದ್ರು ಅವರನ್ನ ನೋಡವಂತ..... ಕಡಿಕ ನಮ್ಮವ್ವನ ಕಡೆ ಒಬ್ಬಾಕಿ ಹೆಣಮಗಳು ಜಗಳ ತಗದಳಂತ... "ಏನ್ ಭಡಜಿ ಆದಿ ನಿ... ಎಂದ ಹೆಂಗಸರನ ಕಂಡಿ ಇಲ್ಲೋ ನಿನ್ನ ಕಣ್ಣಾಗ ಗೊಡಚಿ ಬೆಳೀಲಿ" ಅಂತ ಬೇಗಳ ಚಾಲು... ಎಲ್ಲಾ ಹೆಂಗಸರು ಜೋಡಾಗಿ ಬೀಗರಿಗೆ ಎಂಥ ಭಡಜಿ ತಂದಿರಿ ಅಂದ್ರಂತ. ಅದ್ಕ ಭಡಜಿ ಹೆಂಗಸರ ಬಾಯಿಗಿ ಅಂಜಿ ನಡಗಕೋತ ತಲಿ ತಳಗ ಹಾಕಿ "ನಾ ಬ್ರಾಹ್ಮಣ ಇದ್ದೀನ್ರಿ ಹಂಗ ಎಲ್ಲಾ ಮಾಡಾವಲ್ಲ". ಅದ್ಕ ನಮ್ಮ ಅಪ್ಪ "ಬಾಯರ್ ಅವರು ಕಣ್ಣ ಮೆಳ್ಳ ಅದಾವ್ರಿ, ನನ್ನ ಕಡೆ ನೋಡಾಕತ್ರ ನಿಮ್ಮ ಕಡೆ ನೋಡಾಕತ್ರ ಅನಸತದ ಅಂದ್ರಂತ"






ಇನ್ನು ಯಾರೋ ಅಡುಗೆ ಮಾಡಾವ ಬಂದು "ಕಟಗಿ ಖಾಲಿ ಆಗ್ಯಾವ ತಂದು ಕೊಟ್ರ್ ಅಡುಗೆ ಮುಂದಿಂದು ಮಾಡ್ತೀನಿ" ಅಂದಂತ ಅದ್ಕ ನಮ್ಮಪ್ಪ ಎದ್ದು ಕಟಗಿ ತಾರಕ್ ಹೋದ್ರಂತ. ಯಾಕಂದ್ರ ಬಡುರ ಮದ್ವಿ ಆಳು ಇರಲ್ಲ.

ಅದ್ಕ ನಮ್ಮ ಅವ್ವ ಇನ್ನೂ ಹೇಳ್ತಾಳ "ತಾಳಿ ಕಟ್ಟಿ 1 ತಾಸ್ ಆಗಿರಲಿಲ್ಲ ಕಟಗಿ ತಾರಕ್ ಎದ್ದು ಹೋದ ನಿಮ್ಮ ಅಪ್ಪ, ಕಡಿಕ ಗಂಡನ ಹೆಂಡ್ತಿಗೆ 1 ತುತ್ತು ಶಿರಾ ಉಳದಿತ್ತು ಊಟ ಇರಲಿಲ್ಲ". ಅಂತ....



ಇನ್ನೂ ಫೋಟೋ ನೋಡ್ಬೇಕು ಅವಾಗೆಲ್ಲಿ ಫೋಟೋಗ್ರಾಫರ್... ನಮ್ಮ ದೊಡ್ಡಪ್ಪನ ಕಡೆ ಇದ್ದ ಕ್ಯಾಮೆರ ಒಬ್ಬ ಹುಡುಗಗ ತಗಿ ಅಂತ ಕೊಟ್ರ ಹುಡುಗ ಮತ್ತ ಹುಡುಗಿ ಹಿಂದ ನಿಂತು ಮಂದಿದು ಮುಖನ ಬಂದಿಲ್ಲ ಒಬ್ಬರದು... ರುಂಡ ತಗಡು ದಡದ ಫೋಟೋ ಅಷ್ಟ ತಗದಾನ. ಏನೋ ಒಂದೈತಿ ಒಂದಿಲ್ಲ ಬಡೂರ್ ಲಗ್ನ ಆಗ್ಯದ... ಅಂತ ಅವ್ವ, ಅಪ್ಪ ಹೇಳತಿದ್ರು.


ಹೆಂಗಾದ್ರೂ ಅವರು ಮದ್ವಿ ಆಗಿ 28 ವರ್ಷ ಆತು ಆರಾಮ ಅದರ. ಮದ್ವಿ ಒಳಗ್ ಎಷ್ಟ ಕೊರತಿ ಇದ್ರೂ ಮಸ್ತ್ ಆತು ನಮ್ಮ ಮದ್ವಿ ಅಂತಾರ. ನಮ್ಮ ಅಪ್ಪ ಅವರ ಮದ್ವಿ ಅವರ ಮಾಡ್ಕೊಂಡರ. ಇವಾಗಿನ ಅವರು ಹಂಗ ಲಕ್ಷ ಲಕ್ಷ ಖರ್ಚು ತಂದೆ ತಾಯಿ ಮಾಡಿದ್ರು ಇನ ಅದು ಕಮ್ಮಿ ಇತ್ತು ಅದು ಆಗಿಲ್ಲ ಇದು ಆಗಿಲ್ಲ ಅಂತಾರ...



ಹೆಂಗಾದ್ರೂ ಕುಡಿ ಬಾಳುದು ಚೊಲೋ ಇದ್ರ್ ಸಾಕು... ಆವಾಗಿನ ಲಗ್ನದಾಗ ರೊಕ್ಕಾ ಆಡಂಬರಕ್ಕಿಂತ ಬಂಧು ಬಳಗ ಅನು ಪ್ರೀತಿ ವಿಶ್ವಾಸ ಹೆಚ್ಚಿತ್ತು.


Rate this content
Log in

Similar kannada story from Comedy