ಅವನಿಲ್ಲದ ಅವಳು
ಅವನಿಲ್ಲದ ಅವಳು
ತಲೆಗೆರಿದ ಅಮಲು ಅವನು, ಇಳಿಯುವ ಇರಾದೆ ಇಲ್ಲದವನು. ಬೇರೆ ನಶೆಯಾದರು ಕೆಲವು ಗಂಟೆಗಳದ್ದು, ಆದರೆ ಅವನ ನಶೆ ಈ ಜನುಮಕೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಅವನ ಅಮಲಿನಿಂದ ಹೊರಬರಲು ದಾರಿ ತಿಳಿಯದೋ ಅಥವಾ ಬರುವ ಮನಸ್ಸು ಮಾಡದೇ ಅದೇ ಗುಂಗಿನಲ್ಲಿ ಇದ್ದೆನೋ ಅರ್ಥವಾಗುತ್ತಿಲ್ಲ.
ಅಪರಿಮಿತವಾದ ಕೌತುಕ ಭಾವಗಳ ಖುಷಿಯ ಖಜಾನೆ ಅವನು. ಎಷ್ಟು ಅನುಭವಿಸಿದರು ಖಾಲಿಯಾಗದ ಒಲವ ನಿಧಿಯವನು. ಈ ಜನುಮಕೆ ಇಷ್ಟು ಮಾತ್ರ ಅನುಭವಿಸಲು ಸಾಧ್ಯವಾದ ಅಮೃತ ಸಿಂಚನ ಅವನು. ಮುಗಿಯದ ಖಜಾನೆಯನ್ನು ಪೂರ್ತಿ ಅನುಭವಿಸುವ ಹುಕಿಗೆ ಬಿದ್ದಿರುವೆ ನಾನು.
ಅವನ ಹೆಸರು ನೆನೆದು ತೆಗೆದುಕೊಳ್ಳುವ ಪ್ರತಿ ಕ್ಷಣದ ಉಸಿರಿಗೂ ಗೊತ್ತು ನನ್ನ ಮನದ ತೋಳಲಾಟ.
ಪ್ರತಿ ಕ್ಷಣದ ಉಸಿರಾಟವು ಅವನಿಗಾಗಿಯೇ,
ಆದರೆ ಅವನಿಗೆ ಕೇಳಿಸುತ್ತಿಲ್ಲ ನನ್ನ ಧೀರ್ಘವಾದ ಉಸಿರಾಟ.
ಮನವನ್ನು ಸಂಭಾಳಿಸುತ್ತಿರುವೆ ಉಸಿರಿನ ಕಣ ಕಣದಲ್ಲೂ ಇರುವವನಿಗೆ ಯಾಕಿ ಹುಡುಕಾಟ?
ಪ್ರತಿ ಬೆಳದಿಂಗಳನ್ನು ಅವನ ಎದೆಯ ಮೇಲೆ ತಲೆಯಿಟ್ಟು ಮಲಗುತಿದ್ದವಳನ್ನ ಕಿಟಕಿ ಇಂದ ಇಣುಕಿ ನೋಡುವ ಚಂದ್ರಮ.
ನಮ್ಮಿಬ್ಬರ ಮಧ್ಯ ಚಂದಿರನ ಬೆಳಕಿಗೂ ಅವಕಾಶ ಕೊಡದೆ ಕಿಟಕಿ ಪರದೆಯ ಸರಿಸಿ ಅವನ ಬಿಗಿದಪ್ಪಿ ಮಲಗುತಿದ್ದೆ.
ಆದರೆ ಇಂದು ಚಂದಿರನ ಬೆಳದಿಂಗಳಿಗೂ ಗೊತ್ತಾಗಿರಬೇಕು ಅವನಿಲ್ಲದ ನಾನು ಅಪೂರ್ಣಳೆಂದು.
ಪ್ರೀತಿ ಎಂದರೆ ಕೊಟ್ಟು ಪಡೆಯುವ ವ್ಯವಹಾರವೇ?
ಅಲ್ಲ, ಅವನ ಹೃದಯ ನನಗಾಗಿ ಮಿಡಿಯದಿದ್ದರೂ, ನನ್ನ ಹೃದಯ ಅವನನ್ನೇ ಜಪಿಸುವುದು.
ಅವನ ಕಣ್ಣುಗಳು ನನ್ನ ಕನಸು ಕಾಣದಿದ್ದರೂ, ನನ್ನ ಕಣ್ಣಿನಲ್ಲಿ ಅವನದೇ ಅಚ್ಚಳಿಯದ ಚಿತ್ರವಿರುವುದು.
ಅವನ ಜಗತ್ತಿನಲ್ಲಿ ನಾನು ಇಲ್ಲದಿದ್ದರೂ, ನನಗೆ ಅವನ ವಿನಹ ಬೇರೆ ಜಗತ್ತೇ ತಿಳಿಯದು.
ಅವನು ನನ್ನೊಟ್ಟಿಗೆ ಜೀವಿಸದಿದ್ದರೂ, ನಾನು ಅವನೊಟ್ಟಿಗೆ ಕಳೆದ ಹಸಿರಾದ ನೆನಪುಗಳ ಜೊತೆಗೆ ಜೀವನ ಕಳೆಯುವೆ.
ನೆನಪುಗಳಿಗೆ ವಿಳಾಸ ಬೇಕಿಲ್ಲ, ವಿರಹಕ್ಕಿಂತ ಸುಡುವ ಬೆಂಕಿ ಬೇರೆಯಿಲ್ಲ, ಮನಸ್ಸನ್ನು ಕಲ್ಲಾಗಿಸಲು ಇವೆರಡು ಸಾಕಲ್ಲ.

