ನಮ್ಮ ಕಡೆ ಮದುವಿ ಸಂತಿ
ನಮ್ಮ ಕಡೆ ಮದುವಿ ಸಂತಿ
ಎಲ್ಲಾರಿಗೂ ಕೊರೋನಾ ಸಮಂದ ಮನ್ಯಾಗ ಕುಂತ ಭಾಳ ಬ್ಯಾಸರ್ ಆಗಿರಬೇಕ ಅಲಾ? ಏನ ಮಾಡುದ್ರಿ ಜೀಂವ ಉಳಿಬೇಕಂದ್ರ ಮನ್ಯಾಗ ಇರಬೇಕಲಾ. ಎಲ್ಲಾರಿಗೂ ತಿನ್ನುದು ಟಿ.ವಿ ನೋಡುದು ಮಾಡಿ ಬ್ಯಾರೆ ಕೆಲಸ ಇರಲಾರದಂಗ ಆಗ್ಯದ. ಅಂತಾದರಾಗ ಟಿ.ವಿ ನೋಡಿದ್ರು, ಮೊಬೈಲ್ ನೋಡಿದ್ರು, ಬಾಜುಕಿನ ಮನ್ಯಾವರ ಜೊತೆ ಮಾತಾಡಿದ್ರೂ ಬರೆ ಕೊರೋನಾ ಸುದ್ದಿನ. ಇದು ಬಿಡ್ರಿ ಬೀಗರ ಜೊತೆ ಮಾತಾಡ್ಬೇಕಂತ ಫೋನ ಮಾಡಿದ್ರ ಅವರು ಅದ ಸುದ್ದಿ ಹೇಳುದಾ. ಕೇಳಿ ಬ್ಯಾಸರ್ ಆಗಿದ್ರ ಇಲ್ಲೊಂದ ಹೊಸಾದ ಸುದ್ದಿ ಹೇಳ್ತಿನಿ ಕೇಳ್ರಿ. ಬ್ಯಾಸಗಿ ಚಾಲು ಆದ್ರ ನಮ್ಮ ಕಡೆ ಮದ್ವಿ ಸೀಸನ್ ಚಾಲು... ಅರಬಿ ಸಂತಿ, ಭಾಂಡೆ ಸಂತಿ, ಬಂಗಾರ ಸಂತಿ ಅಂತಹೇಳಿ ಹಿಂಡ ಹಿಂಡ ಮಂದಿನ ಹೋಗ್ತದ್ರಿ ಬಜಾರಕ್ಕ. ಆದ್ರ ಬೆಂಗಳೂರ ಕಡೆ ಹಂಗಲ್ರಿ ಮದವಿ ಆಗು ಹುಡುಗಾ, ಹುಡುಗಿ ಮತ್ತ ಭಾಳ ಅದ್ರ ಅವರ ಅಪ್ಪಾ ಅಮ್ಮಾ ಅಷ್ಟ ಹೋಗ್ತಾರ. ಆದ್ರ ನಮ್ಮ ಕಡೆ ಹಂಗಲ್ಲ ನೋಡ್ರಿ ಹುಡುಗನ ಕಡೆ ಒಂದು ಇಪ್ಪತ್ತ ಇಪ್ಪತ್ತೈದ ಮಂದಿ ಮತ್ತ ಹುಡುಗಿ ಕಡೆ ಇಪ್ಪತ್ತರ ಮ್ಯಾಲೆ. ಅದು ಏನು ಬರೆ ಹುಡುಗಿಗೊಂದ ಐದು ಸೀರಿ ಮತ್ತ ಹುಡುಗಗ ಒಂದ ಎರಡ ಜೋಡ ಅರಬಿ ಸಮಂದ ಐವತ್ತ ಮಂದಿ ದಂಡ ಹೋಗುದು.
ಬ್ಯಾರೆ ಊರಿನ ಕಡೆ ಹೇಂಗೊ ಗೊತ್ತಿಲ್ಲಾ ಆದ್ರ ನಮ್ಮ ಕಡೆ ಮದ್ವಿ ಆದ್ರ ಹುಡುಗಿ ಜೊತೆ ಮನಿಗೆ ಬೇಕಾಗು ಭಾಂಡೆ ಎಲ್ಲಾ ಕೊಡಸ್ತಾರಿˌ ಇತಿತ್ಲಾಗ ಒಂದು ಮದುವ್ಯಾಗ ಹುಡುಗಿಗೆ ಭಾಂಡಿ ತಿಕ್ಕು ಸಾಬನ ಜೊತೆ ತಂತಿನು ಕೊಟ್ಟಾರ...!. ಪುಣ್ಣೆಕ ಬಚ್ಚಲಾ ತಿಕ್ಕು ಬ್ರಶ್ ಕೊಡುದ ಬಿಟ್ಟಾರ...!
ಹೌದ್ರಿ ನಮ್ಮ ಕಡೆ ಮಂದಿ ಭಾಳ ಮಜಾ ಮಜಾ ಮಾಡ್ತಾರಿ... ಮದುವಿ ಆಗು ಹುಡುಗಿಗೆ ಸೀರಿ ಪಸಂದ ಬರತದೊ ಇಲ್ಲೊ ಗೊತ್ತಿಲ್ಲಾ ಆದ್ರ ಜೋಡ ಹೋದ ಮುದಕ್ಯಾರಿಗೆ ಮಾತ್ರ ಅಂಗಡ್ಯಾನ ಸೀರಿ ಎಲ್ಲಾ ತೋರಸಿದ್ರು ಪಸಂದ ಬರುದಿಲ್ರಿ. ಇನ್ನು ಏನರ ಹುಡಗ್ಯಾರನ ಸೀರಿ ನೋಡ್ರ್ಯವ್ವಾ ಅಂದ್ರ ಮುಗಿತ ಕಥಿ...ಅವರ ಕೇಳು ಅಂತಾ ಸೀರಿ ಕುಂತ ತಯಾರ ಮಾಡ್ಬೇಕ್ ನೋಡ್ರಿ.
ಮೊನ್ನೆ ಸೀರಿ ತರಾಕ ಅಂಗಡಿಗೆ ಹೋಗಿದ್ದೆ.. ಅಲ್ಲೆ ಬಾಜು ಒಬ್ರು ಮದವಿ ಸಂತಿ ಮಾಡಕ ಬಂದಿದ್ರೂ . ಹುಡುಗಿ ಸೀರಿ ನೋಡಾಕತ್ತಿದ್ರೂ ಅದರಾಗ ಹುಡುಗಿ ಅಜ್ಜಿ ಅಂಗಡ್ಯಾಂವಗ ಹೇಳ್ತಾಳ ನೋಡತಮ್ಮಾ ಶರಗನ್ಯಾಗ ಕಿಸ್ನ ಕುಂತಾನ ನೋಡು ಅಂತಾದ ಕೊಡ ಅಂದ್ಲು... ಯಪ್ಪಾ ಅಂಗಡ್ಯಾಂವಗ ತಿಳಿಯವಾಲ್ದು ಏನ.. ಬೇ ಎಂತಾದ ಚಂದಂಗೆ ಹೇಳ ಅಂದಾ. ಅದ್ಕ ಅಜ್ಜಿ ಗೆಳತಿ ಹೇಳಿದ್ಳು ಅದನೋ ತಮ್ಮಾ ಕೈಯಾಗ ಪೀಪಿ ಹಿಡ್ಕೊಂಡ, ತಲ್ಯಾಗ ನವಿಲ ಪುಚ್ಚಾ ಹಾಕೊಂಡಿರತೈತಲಾ ಹುಡುಗಾ ಅದ ಕಿಸ್ನಾ ಅಂತಾದು... ಅಂಗಡ್ಯಾಂವಗ ಅವಾಗ ತಿಳಿತ ನವಿಲ ಪುಚ್ಚಾ ಅನಾನಾ ಸೆರಗಿನೊಳಗ ಕೃಷ್ಣನ ಡಿಸೈನ್ ಇದಿದ್ದ ಸೀರಿ ಬೇಕಾಗಿತ್ತು.. ಪಾಪಾ.., ಆಮೇಲೆ ಇನ್ನೊಬ್ಬಕಿ ಅಕಿ ಮೂಲಿಮನಿ ಮಾದೇವಿ ಮನಿಗೆ ಬಣ್ಣಾ ಹೊಡಸ್ಯಾಳ ನೋಡು ಅಂತಾ ಬಣ್ಣ ತೋರ್ಸ ಅಂದಳು. ಅಲ್ಲಾ ಇವರ ಮೂಲಿಮನಿ ಮಾದೇವಿ ಅಂಗಡ್ಯಾಂವಗ ಹೇಂಗ ಗೊತ್ತಿರಬೇಕ ನೋಡ್ರಿ.
ಹುಡುಗಿ ಜೊತೆ ಆಯಿ ಸೀರಿ ತಾಯಿ ಸೀರಿ ಕೊಡ್ತಾರಿ. ಹುಡುಗಿಗೆ ಜಲ್ದಿ ಪಸಂದ ಬಂದ್ರು ಆಯಿಗಿ ಮತ್ತ ಅವ್ವಗ ಮಾತ್ರ ಪಸಂದ ಬರಾಂಗಿಲ್ರಿ.. ಹುಡುಗಿ ಸೀರಿ ಕಿಂತಾ ಅವರ ಸೀರಿ ಹುಡುಕುದ ಹೆಚ್ಚಾಗತದ. ಹಾ ಮತ್ತ ಇನ್ನೊಂದ ಹುಡುಗನ ಸಂತಿ ಮಾಡಾಕತ್ತಾರ ಹುಡುಗಗ ಎರಡ ಜೋಡ ಮಸ್ತನು ಅರಬಿ ಮತ್ತ ಬೂಟ್, ವಾಚ್, ಟಾವೆಲ್ ಎಲ್ಲಾ ತೊಗೊಂಡಾರಿ ಮತ್ತ ಅದರಾಗ ಒಬ್ಬ ಜಗಳಾ ತಗದಾನ್ರಿ ನೀವು ಹುಡುಗಗ ಬನೆನ(ಬನಿಯನಾ) ಮತ್ತ ಅಂಡರವೇಟ್ (ಅಂಡರವೀಯರ್) ತೊಗೊಂಡಿಲ್ಲಾ ಅಂತ.. ಅದಕ್ಕ ಹುಡುಗಿ ಕಡೆಯವ ಒಬ್ಬ ಎದ್ದ ನಿಂತ ಒಟ್ಟ ನಿಮಗ ಅರಬಿ ಬದಲಿ ಹತ್ತಸಾವಿರ ಕೊಡತಿವಿ ಅಂದಿದ್ವಿ ಅಷ್ಟ ಸಂತಿ ಮಾಡಿರಿ ಇನ್ನೂ ನೀವು ಏನರ ತೊಗೊರಿ ಬಿಡ್ರಿ ನಮಗ ಗೊತ್ತಿಲ್ಲಾ ಅಂದಾ.
ಅದಕ್ಕ ಹುಡಗನ ಕಡೆಯವಾ ಸಿಟ್ಟಿಲ್ಲೆ ಎದ್ದ ನಿಂತ ನೀವು ಹಿಂಗ ಅಂತಿರಂತ ನಾ ಜೋಡ ಯಾದಿ (ನಮ್ಮ ಕಡೆಗೆ ಎಂಗೆಜಮೆಂಟ ಮಾಡುವಾಗ ಗಂಡು ಮತ್ತು ಹೆಣ್ಣಿನ ಮನೆಯವರು ಕೊಡುತೊಗೊಳುವುದನ್ನ ಒಂದು ಪತ್ರದಲ್ಲಿ ಬರೆದು ಸಾಕ್ಷಿಯಾಗಿ ಐದು ಜನ ಸಹಿ ಮಾಡಿರುತ್ತಾರೆ ಅದೆ ಯಾದಿ) ತಂದಿನಿ ಇದರಾಗ ಬನೆನ ಮತ್ತ ಅಂಡರವೆಟ್ ನೀವು ಕೊಡಸಬೇಕಂತ ಖುದ್ದ ಬರದ ಸೈ ಮಾಡಿರಿ ನೋಡ್ರಿಲ್ಲಿ ಅಂದಾ..., ಮತ್ತ ಲಾಸ್ಟ ಪಂಚ ಒಂದ ಹೇಳಿದಾ ಅವಾ ಹುಡುಗಿ ಕಡೆಯವರಿಗೆ. ನೀವು ಕೊಡಸಿದ್ರ ಕೊಡಸ್ರಿ ಬಿಟ್ರ ಬಿಡ್ರಿ ನಿಮ್ಮ ಅಳ್ಯಾ ಅದಾನ ಅವಾ ನಾವೆನ ಅಂಡರವೇಟ್ ಬನೆನ ಹಾಕಲಾರದ ಹಂಗ ಕುಂಡರಸ್ತಿವಿ ಮದವ್ಯಾಗ ಅಂದಾ.. ನೋಡ್ರಿ ನಮ್ಮ ಕಡೆ ಮದವಿ ಅಂದ್ರ ಇಷ್ಟ ಮಜಾದಾಗ ಮಾಡ್ತಾರ..
