Shridevi Patil

Comedy Inspirational Others

4  

Shridevi Patil

Comedy Inspirational Others

ನೀರಿನ ದೆಸೆಯಿಂದ ಹೊಡೆಸಿಕೊಂಡಿದ್ದು

ನೀರಿನ ದೆಸೆಯಿಂದ ಹೊಡೆಸಿಕೊಂಡಿದ್ದು

2 mins
296


ಹಳೆಯ ನೆನಪುಗಳನ್ನು ಬರೆದು ಆತ್ಮೀಯರೊಂದಿಗೆ ಹಂಚಿಕೊಂಡಾಗ, ಆಗ ಸಿಗುವ ಖುಷಿಯೇ ಬೇರೆ ಅಲ್ಲವೇ? ಈಗ ನಾನು ನನ್ನ ಹಳೆಯ ನೆನಪುಗಳ ಖಜಾನೆಯಿಂದ ನೀರಿನ ಸಮಸ್ಯೆ ಹಾಗೂ ನಾನು ನೀರು ತರುತ್ತಿದ್ದ ಬಗೆಯನ್ನು ಹೊರತೆಗೆದು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಕೊಂಡಿರುವೆ.

ನನ್ನ ಊರು ತುಂಬಾ ಚಿಕ್ಕದು. ಈಗ ಸ್ವಲ್ಪ ಬೆಳೆದಿದೆ. ಬೆಳೆದಿದೆ ಎಂದರೂ ಇರುವ ಮನೆಗಳಲ್ಲಿಯ ಜನರು ಆಸ್ತಿ ಭಾಗ ಮಾಡಿಕೊಂಡು , ಒಂದು ಮನೆ ಇರುವಲ್ಲಿ ಮೂರು ನಾಲ್ಕು ಮನೆ ಮಾಡಿದ್ದರಿಂದ ಊರು ಬೆಳೆದಂತಾಗಿದೆ. ಉಳಿದ ಯಾವೊಂದು ವ್ಯವಸ್ಥೆಯೂ ಇಲ್ಲ, ಈಗಲೂ ಐದನೆಯ ತರಗತಿಯವರೆಗೆ ಮಾತ್ರ ನಮ್ಮೂರಲ್ಲಿ ಶಾಲಾ ವ್ಯವಸ್ಥೆ ಇದೆ. ಮುಂದೆ ಕಲಿಯಬೇಕೆಂದರೆ ಪಕ್ಕದೂರಿಗೆ ಹೋಗಲೇಬೇಕು. ಎಷ್ಟು ಚಿಕ್ಕದೆಂದರೆ ನಮ್ಮೂರಲ್ಲಿ ಈಗಲೂ ಹೇಳಿಕೊಳ್ಳುವಂತಹ ದೊಡ್ಡ ಕಿರಾಣಿ ಅಂಗಡಿಗಳಿಲ್ಲ. ಕಿರಾಣಿ ಅಥವಾ ದಿನಸಿ ಸಾಮಾನು ತರಬೇಕಾದರು ಸಹ ಪಕ್ಕದೂರಿಗೆ ಹೋಗಲೇಬೇಕು. ಇನ್ನು ಬಟ್ಟೆ ಬರೆ ಅಂಗಡಿ , ಸ್ಟೀಲ್ ಪಾತ್ರೆ ಅಂಗಡಿ , ಬಂಗಾರದ ಅಂಗಡಿ ಇವೆಲ್ಲ ದೂರದ ಮಾತೇ..!

ಇಂತಹ ಊರಿನಲ್ಲಿ ನೀರಿನ ಸಮಸ್ಯೆ ಬಗ್ಗೆ ಕೇಳಲೇಬೇಡಿ. ಎಷ್ಟೊಂದು ಸಮಸ್ಯೆಯಿತ್ತೆಂದರೆ ಸುಮಾರು ಒಂದು , ಒಂದೂವರೆ ಕಿಲೊ ಮೀಟರ್ ದೂರದಿಂದ ನೀರು ತರಬೇಕಿತ್ತು. ಬಿಸಿಲಿರಲಿ , ಮಳೆಯಿರಲಿ , ನೀರು ಬೇಕೆಂದರೆ ತರಲೇಬೇಕಿತ್ತು. ಆ ಸಮಯದಲ್ಲಿ ನಾವು ಚಿಕ್ಕವರು . ದೊಡ್ಡವರ ಜೊತೆಗೆ ನೀರು ತರಲು ಹೋಗುತ್ತಿದ್ದೆವು. ಕೈ ಬೋರು ಇದ್ದಲ್ಲಿ ಹೋಗಿ ನೀರು ತರುವುದೇ ಒಂದು ಹಬ್ಬ. ಹಾರಿ ಹಾರಿ ಬೋರು ಹೊಡೆಯುವುದೇ ಒಂದು ದೊಡ್ಡ ಕೆಲಸ ನಮಗೆ.

ಕೈ ಬೋರು ಇದ್ದಿದ್ದೇ ಒಂದು ನಮ್ಮೂರಲ್ಲಿ. ನಮ್ಮ ಅಜ್ಜಿ ತುಂಬಾ ಸಂಪ್ರದಾಯವಾದಿ ಅಜ್ಜಿ. ಅಲ್ಲಿ ಬೇರೆ ಜಾತಿಯವರು ಬಂದು ನಿಂತಿದ್ದರೆ ನಾವು ಒಂದೆರಡು ಕೊಡ ಬೋರನ್ನು ತೊಳೆಯಲಿಕ್ಕೆಂದೇ ತುಂಬಿಸಬೇಕಿತ್ತು. ಗೌಡ್ರ ಮನೆಯವರು ಎಂದರೆ ಅಲ್ಲಿ ಎಲ್ಲರೂ ನಮಗೆ ಗೌರವ ಕೊಡುತ್ತಿದ್ದರು. ಆದರೂ ನಮ್ಮಜ್ಜಿ ಮಾತ್ರ ತಮ್ಮ ಗತ್ತನ್ನು ಬಿಡುತ್ತಿರಲಿಲ್ಲ. ನಾವು ಬೋರು ಹೊಡೆದು ಹೊಡೆದು ಸುಸ್ತಾಗಿ ಹೋಗುತ್ತಿದ್ದೆವು.

ಅಲ್ಲಿಂದ ಮುಂದುವರೆದು , ಸ್ವಲ್ಪ ವರ್ಷಗಳ ನಂತರ , ನಮ್ಮ ಮನೆಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಒಬ್ಬರು ತಮ್ಮ ಹೊಲದಲ್ಲಿ ಬೋರು ತೆಗೆಸಿದರು. ದೇವರ ದಯೆಯಿಂದ ಸ್ವಲ್ಪ ಸಮೀಪವಾಯಿತು. ನಮ್ಮದು ಕೂಡು ಕುಟುಂಬವಾಗಿದ್ದರಿಂದ ಜನರು ಹೆಚ್ಚು , ನೀರಿನ ಬಳಕೆಯೂ ಹೆಚ್ಚು . ಆದರೆ ನಮ್ಮ ಮನೆಯಲ್ಲಿ ನೀರು ತರಬೇಕೆಂದರೆ ಕ್ಯಾತೆ ತೆಗೆಯುವವರೆ ಹೆಚ್ಚಿರುತ್ತಿದ್ದರು. ಎದಿರು ಬದಿರು ಆಗಿ ತರೋಣ ಎನ್ನುತ್ತಿದ್ದರು. ಆಗಲ್ಲ ಎನ್ನುವ ಮಾತೇ ಇರುತ್ತಿರಲಿಲ್ಲ. ಎಷ್ಟೇ ಕಷ್ಟವಾದರೂ ತರಲೇಬೇಕಿತ್ತು.

ನಾನು ಮನೆ ಕಡೆ ಆಗ್ತೀನಿ , ನಾನು ಕೆಳಗೆ ಆಗ್ತೀನಿ ಎನ್ನುವವರೆ ಹೆಚ್ಚು. ಏಕೆಂದರೆ ಮೇಲಾದರೆ ಕೆಳಗೆ ಕೊಡ ತರುವವರು ಕಾಣುವವರೆಗೆ ಮನೆಯ ಕಟ್ಟೆಯ ಮೇಲೆ ಕುಳಿತುಕೊಳ್ಳಬಹುದು ಎಂದು , ಕೆಳಗಾದರೆ ನೀರಿನ ನಮ್ಮ ಸರದಿ ಬರುವವರೆಗೂ ಕುಳಿತುಕೊಳ್ಳಬಹುದು ಎಂದು. ಮದ್ಯದಲ್ಲಾದರೆ ನೀರಿನ ಕೊಡ ಅಥವಾ ಬಿಂದಿಗೆ ಹೊರುವುದು ತಪ್ಪುವುದಿಲ್ಲ ಎಂದು ಜಗಳ ಮಾಡುತ್ತಿದ್ದೆವು. ಏನೇ ಜಗಳಗಳು ಆದರೂ ನೀರು ತರುವುದು ಮಾತ್ರ ಬಿಡುವ ಹಾಗಿರಲಿಲ್ಲ.

ಹೀಗೆ ಒಮ್ಮೆ ಒಬ್ಬೊಬ್ಬರಿಗೆ ಹತ್ತು ಕೊಡ ನೀರು ತರುವಂತೆ ಚಿಕ್ಕಪ್ಪ ಆಜ್ಞೆ ಮಾಡಿದ್ದರು. ಮಾತು ಮೀರುವಂತಿಲ್ಲ. ಎಲ್ಲರೂ ತರಲೇಬೇಕಿತ್ತು. ನಾನು ಹೋಗಿದ್ದೆ. ದೂರ ಅಂತಾ ನಾನು ತುಂಬಿದ ಕೊಡವನ್ನು ತಲೆ ಮೇಲಿಟ್ಟುಕೊಂಡು ಬರುತ್ತಿದ್ದೆ. ನನ್ನ ಎದುರಿಗೆ ನನ್ನ ತಮ್ಮ ಕುಮಾರ ಹಾಗೂ ಅತ್ತೆ ಮಗ ಗುರು ಬರುತ್ತಿದ್ದರು. ಇಬ್ಬರು ನನಗೆ ಕೊಡ ಕೈಬಿಟ್ಟು ಚಪ್ಪಾಳೆ ಹೊಡೆಯಲು ಹೇಳುದರು .

ನಾನು ತುಂಬಾ ಜಾಣೆ , ಆಯ್ತು ಅಂತ ಎರಡು ಚಪ್ಪಾಳೆ ಹೊಡೆದೆ ನೋಡಿ , ಕೊಡ ಸಹ ಎರಡು ಪೀಸಾಗಿತ್ತು. ಚಿಕ್ಕಪ್ಪನ ಕೈಬೆರಳು ನನ್ನ ಕೆನ್ನೆ ಮೇಲೆ ಚಪ್ಪಾಳೆ ಹೊಡೆದಾಗಿತ್ತು.

ಹೀಗೆಯೇ ಇನ್ನೊಂದು ಸಲ ಚಿಕ್ಕಪ್ಪ ಯಾರು ಬೇಗ ಆರು ಕೊಡ ನೀರು ತಂದು ಹಾಕುವರೊ ಅವರಿಗೆ ಒಂದು ಡ್ರೆಸ್ಸು ತರಲಾಗುವುದು ಎಂದಾಗ ನಾನು ಜಾಣೆ ಅಲ್ಲವೇ, ಬೇಗ ಬೇಗ ತಂದು ಹಾಕಿದ್ದೆ. ನೀರು ಮಾತ್ರ ಬಂದಿತೆ ವಿನಃ ನನಗೆ ಡ್ರೆಸ್ಸು ಬರಲೇ ಇಲ್ಲ. ದಿನಾ ತರುವ ನೀರಿಗೆ ಯಾರು ತಾನೇ ಹೊಸ ಡ್ರೆಸ್ಸು ತಂದಾರು ನೀವೇ ಹೇಳಿ..

ಆಗಿನ ನೀರಿನ ಸಮಸ್ಯೆ ಈಗಿಲ್ಲ. ನಮ್ಮದೇ ಬೋರಿದೆ ಕಾರ್ಪೊರೇಷನ್ನಿನ ನಲ್ಲಿ ನೀರೂ ಸಾಕಷ್ಟು ಬರುತ್ತಿದೆ. ಹೀಗಾಗಿ ಯಾವ ಸಮಸ್ಯೆ ಇಲ್ಲ.

ನಾನಂತೂ ನೀರಿನ ದೆಸೆಯಿಂದ ಎಷ್ಟೋ ಸಲ ಹೊಡೆಸಿಕೊಂಡ ಉದಾಹರಣೆಗಳಿವೆ. ನೀವು ಯಾರಾದರೂ ನನ್ನಂತೆ ಹೀಗೆ ಕೊಡ ಕೈಬಿಟ್ಟು ಹೊಡೆಸಿಕೊಂಡಿದ್ದೀರಾ? ಹೊಡೆಸಿಕೊಂಡಿದ್ದರೆ ಕಾಮೆಂಟ್ ಮೂಲಕ ತಿಳಿಸಿ.....

ಧನ್ಯವಾದಗಳು...



Rate this content
Log in

Similar kannada story from Comedy