ಮುಗ್ಧ
ಮುಗ್ಧ


ಇದೊಂದು ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಘಟನೆ.ರಾಮಣ್ಣ ಒಬ್ಬ ರೈತ .ತಂದೆ ತಾಯಿ ಇಬ್ಬರೂ ಹದಿನೈದು ದಿನಗಳ ಅಂತರದಲ್ಲಿ ಕಾಲವಾಗಿ , ಇದ್ದ ಒಬ್ಬಳೇ ತಂಗಿಯ ಜವಾಬ್ದಾರಿ ರಾಮಣ್ಣನ ಹೆಗಲಿಗೆ ಬಿತ್ತು..ಪಕ್ಕದ ಹಳ್ಳಿಯ ಪಟೇಲರ ಮಗ ಚಂದ್ರಣ್ಣ ತನ್ನ ತಂಗಿಗೆ ಸರಿಯಾದ ವರ ಅಂತ ಹೋಗಿ ಮಾತು ಕತೆ ಮುಗಿಸಿ ಮದುವೆಯನ್ನು ಅದ್ದೂರಿಯಾಗಿ ಮಾಡಿದ. ತಾನೊಂದು ಬಗೆದರೆ ದೈವ ಒಂದು ಬಗೆಯಿತು ಅನ್ನುವ ಹಾಗೆ ಮದುವೆಯಾಗಿ ಮೂರೇ ತಿಂಗಳಲ್ಲಿ ಚಂದ್ರಣ್ಣ ಗದ್ದೆಯಲ್ಲಿ ಕೆಲಸಮಾಡುತ್ತಿದ್ದ ಸಮಯದಲ್ಲಿ ಹಾವು ಕಚ್ಚಿ ತಕ್ಷಣ ಚಿಕಿತ್ಸೆ ಸಿಗದೆ ಪ್ರಾಣ ಬಿಟ್ಟ. ವಿಧಿ ಇಲ್ಲದೇ ತನ್ನ ಮನೆಗೆ ತಂಗಿಯನ್ನು ಕರೆದು ಕೊಂಡು ಬಂದ .
ತಂಗಿ SSLC ವರೆಗೂ ಓದಿದ್ದರಿಂದ ಮನೆಯಲ್ಲಿ ಒಬ್ಬಳೇ ಕೂರುವ ಬದಲು ಕೆಲಸಕ್ಕಾದರೂ ಹೋದರೆ ಒಳ್ಳೆಯದೆಂದು ಯೋಚಿಸುತ್ತಿದ್ದಾಗ ಸ್ನೇಹಿತನೊಬ್ಬ ನಮ್ಮ MLA ಒಳ್ಳೆಯವರು . ಬಹಳ ಜನಕ್ಕೆ ಸಹಾಯ ಮಾಡಿದ್ದಾರೆ. ಬೇಕಾದರೆ ನನಗೆ ಪರಿಚಯದವರು ಬೆಂಗಳೂರಿನಲ್ಲಿ ಒಬ್ಬರಿದ್ದಾರೆ . ಅವರನ್ನ ಮೊದಲು ಬೇಟಿಮಾಡು ಅಂತ ಅವರ ವಿಳಾಸ ಕೊಟ್ಟಾಗ ಮಾರನೆ ದಿನವೇ ಬೆಂಗಳೂರಿಗೆ ಹೊರಟ. ಮೆಜೆಸ್ಟಿಕ್ ಹತ್ತಿರದ ಒಂದು ಹೋಟೆಲ್ ರೂಮಲ್ಲಿ ಆ ವ್ಯಕ್ತಿ ಇದ್ದ. ಅವನನ್ನ ಕಂಡು ವಿಷಯ ತಿಳಿಸಿ ಹೇಗಾದರೂ ಮಾಡಿ ಒಂದು ಕೆಲಸ ಕೊಡಿಸಬೇಕೆಂದು ಕೈ ಮುಗಿದ. ಅದಕ್ಕೆ ನಾನು MLA ಅಲ್ಲಪ್ಪ ನಾಳೆ ಅವರಿಗೆ ಹೇಳಿ ಹೇಗಾದರೂ ಸಹಾಯಮಾಡಿ ಅಂತ ಹೇಳ ಬಹುದು ಅಷ್ಟೇ. ನಾನು ಹೇಳಿದರೆ ಮಾಡಿಕೊಟ್ಟೆ ಕೊಡ್ತಾರೆ ಆಗಲ್ಲ ಅನ್ನೋ ಮಾತೇ ಇಲ್ಲ. ಅದರಲ್ಲೂ ಹಳ್ಳಿಯವರೆಂದರೆ ಅವರಿಗೆ ಬಹಳ ಅಭಿಮಾನ ಅಂತ ಹೇಳಿ , ಸ್ವಲ್ಪ ಹಣ ಖರ್ಚಾಗುತ್ತೆ . ಸರ್ಕಾರಿ ಕೆಲಸ ಅಂದ ಮೇಲೆ ನಿಮಗೆಲ್ಲಾ ಗೊತ್ತಿರೋದು ತಾನೇ ಅಂದ. ಎಷ್ಟು ಖರ್ಚಾಗಬಹುದು ಅಂತ ಕೇಳಿದ. ಸುಮಾರು ಎರಡು ಲಕ್ಷ ಆಗಬಹುದು. ಕೆಲಸ ಮಾತ್ರ ಗ್ಯಾರಂಟಿ.ಒಳ್ಳೆ ಕಡೆ ಪೋಸ್ಟಿಂಗ್ ಬೇಕಂದರೆ ಇನ್ನೂ ಒಂದು ಲಕ್ಷ ಆಗುತ್ತೆ. ನಿಮ್ಮಹಳ್ಳಿಗೆ ಹತ್ತಿರ ಯಾವುದಾದರೂ ಊರಿಗೆ ಹಾಕಿಸಿಕೊಡಬಹುದು. ಯೋಚನೆ ಮಾಡು.ಹದಿನೈದು ದಿನದಲ್ಲಿ
ನಮ್ಮ ಸಾಹೇಬರು ಐವತ್ತು ಜನನ್ನ ಕೆಲಸಕ್ಕೆ ಸೇರಿಸ ಬೇಕೆಂದಿದ್ದಾರೆ . ಈಗ ಬಿಟ್ಟರೆ ಇನ್ನೆರಡು ವರ್ಷ ಆಗಲ್ಲ.
ನಿನ್ನ ತಂಗಿ ಹೆಸರು ಹೇಗಾದರೂ ಸೇರಿಸಿ ಬಿಡೋಣ ಸರಿಯಾದ ಸಮಯಕ್ಕೆ ಬಂದಿದಿಯೇ ಅಂದ. ಸಾರ್ ಜಮೀನು ಮಾರಿ ಬೇಕಾದರೆ ಹಣ ಹೊಂದಿಸ್ತಿನಿ ಒಂದು ವಾರ ಟೈಂ ಕೊಡಿ ಸಾಕು ಅಂತ. ಹೇಳಿ ಅಲ್ಲಿಂದ ವಾಪಸ್ ಬಂದ. ಎರಡೇ ದಿನದಲ್ಲಿ ಜಾಮೀನು ಮಾರಿ ಬಂದ ಹಣ ವನ್ನ ಒಂದು ಕೈ ಚೀಲದಲ್ಲಿ ಹಾಕ್ಕೊಂಡು ಅದೇ ಹೋಟೆಲ್ ಗೆ ಬಂದ. ಬಾಗಿಲು ತಟ್ಟಿದ. ಬಾಗಿಲು ತೆಗೆದು ಅದೇ ಮನುಷ್ಯ ಒಳಗೆ ಕರೆದು.ಅಲ್ಲಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದ. ಬೇಡವೆಂದ.ಬಲವಂತವಾಗಿ ಮೇಲೆ ಕೂಡಿಸಿದ. ಬೆಲ್ ಮಾಡಿ ರೂಮ್ ಬಾಯಿ ಗೆ ಎರಡು ಕಾಫಿ ತರಲು ಹೇಳಿದ ಕಾಫಿ ಬಂತು ಕುಡಿಯಲು ಕೊಟ್ಟು ತಾನೂ ಕುಡಿದ.ತಂದಿದ್ದ ಕೈ ಚೀಲ ಕೊಡಲು ಅಯ್ಯೋ ಅದನ್ನ ನಾನು ಕೈ ಇಂದ ಸಹಾ ಮುಟ್ಟಲ್ಲ. ಅದೇನಿದ್ರು ನಮ್ಮ ಅಣ್ಣನ ವ್ಯವಹಾರ ಅಂದ. ಸಾರ್ ಬೆಂಗಳೂರಿನ ಜನ ಅಂದರೆ ಭಯ ಇದು ನಿಮ್ಮಹತ್ತಿರ ಇರಲಿ ಅಂದಾಗ ಅದಕ್ಕಾದ್ರೆ ಕೊಡಪ್ಪ ಇಲ್ಲೆ ಇಟ್ಟಿರುತ್ತೇನೆ ಅಂತ ತೆಗೆದು ತಲೆಕೆಳಗೆ ಇಟ್ಟುಕೊಂಡ. ಒಂದು ಕೆಲಸ ಮಾಡು ಕೆಳಗೆ ಧೋಬಿ ಅಂಗಡಿ ಇದೆ ಇಪ್ಪತ್ತು ರೂಪಾಯಿ ಕೊಟ್ಟು ರೂಮ್ ನಂಬರ್ 52 ಅಂತ ಹೇಳಿದರೆ ಬಟ್ಟೆ ಕೊಡುತ್ತಾನೆ ಸ್ವಲ್ಪ ತಂದು ಬಿಡು ಅಂತ ಅವನನ್ನೇ ಕಳುಹಿಸಿದ. ಆ ಕಡೆ ಅವನು ಹೋದ ತಕ್ಷಣ ಚೀಲದಲ್ಲಿ ಹಣ ನೋಡಿ ಲಕ್ಷ್ಮೀ ಮನೇಗೆ ಬಂದಿದ್ದಾಳೆ ಎಂದು ಸಂತೋಷ ಪಟ್ಟ. ಬಟ್ಟೆ ಬದಲಾಯಿಸಿ ಹಣದ ಚೀಲ ಮತ್ತೆ ಇವನಿಗೆ ಕೊಟ್ಟು ನಿನ್ನ ಹತ್ತಿರ ಇರಲಿ ಹೆದರಿಕೆ ಬೇಡ ನಾನು ಇದೀನಿ.ಎಂದು ಹೇಳಿ ಇಬ್ಬರೂ ಕೆಳಗೆ ಇಳಿದು ಬಂದರು. ಒಂದು ಟ್ಯಾಕ್ಸಿ ಬಂದು ನಿಂತಾಗ ಕುಳಿತುಕೊಳ್ಳಲು ಹೇಳಿದ. ವಿಧಾನ ಸೌಧದ ಬಳಿ ಬಂದು ನಿಂತಾಗ ಇಬ್ಬರೂ ಕೆಳಗೆ ಇಳಿದರು.ಇನ್ನೂರ ಐವತ್ತು ರೂಪಾಯಿ ರಾಮಣ್ಣನ ಕೈಲೇ ಕೊಡಿಸಿದ. ಚೀಲ ಹುಷಾರು ಅಂತ ಹೇಳಿ ವಿಧಾನ ಸೌಧ ಕಡೆ ನಡೆದು ಬಂದರು. ಅಲ್ಲಿಯವರೆಗೂ ರಾಮಣ್ಣ ವಿಧಾನ ಸೌಧ ನೋಡಿದ್ದಿಲ್ಲ. ಎದುರಿಗೆ ಬರುತ್ತಿದ್ದ ಒಬ್ಬವ್ಯಕ್ತಿ ಯನ್ನ ಸಾಹೇಬರು ಬಂದಿದಾರಾ ಅಂತ ಕೇಳಿದ.ಇಲ್ಲ ಅಂದ ಆ ವ್ಯಕ್ತಿ. ಆಗ ಮಧ್ಯಾನ್ಹ ಹನ್ನೆರಡು ಗಂಟೆ. ಮೊದಲು ಊಟಕ್ಕೆ ಹೋಗೋಣ ಅಂತ ಆಟೋ ದಲ್ಲಿ ಒಂದು ಹೋಟೆಲ್ ಗೆ ಬಂದರು .. ರಾಮಣ್ಣ ಅದುವರೆಗೂ ಅಂತಹ ಹೋಟೆಲ್ ನೋಡಿರಲಿಲ್ಲ. ಊಟ ಆರ್ಡರ್ ಮಾಡಿದ.
ಎಷ್ಟು ಬೇಕಾದ್ರೂ ತಿನ್ನಬಹುದು ಎಂದು ಮೊದಲೇ ಹೇಳಿದ. ಹೊಟ್ಟೆ ತುಂಬಾ ತಿಂದು ಬಹಳ ಚೆನ್ನಾಗಿದೆ ಅಂತ ಸಂತೋಷಪಟ್ಟು. ನೂರು ರೂಪಾಯಿ bill ನೋಡಿ ಹೆದರಿದ.ಕೊಟ್ಟಿರು ನಾನು purse ಮರೆತು ಬಂದೆ ರೂಂಗೆ ಹೋದಮೇಲೆ ಕೊಡ್ತೀನಿ ಅಂದ. ರಾಮಣ್ಣನೆ ಕೊಟ್ಟ. ಮತ್ತೆ ಹೊರಗೆ ಬಂದಾಗ ಅಲ್ಲಿ ಯಾರ ಹತ್ತಿರಾನೋ ಮಾತನಾಡಿ ಸಾಹೇಬರು ಇದ್ದಾರಂತೆ ನಡಿ ಇನ್ನೆಲ್ಲಾದರೂ ಹೊರಟು ಹೋದರೆ ಕಷ್ಟ ಅಂತ ಬೇಗಬೇಗ ಹೊರಟರು.ಅಲ್ಲಿಗೆ ಬಂದಾಗ ಮತ್ತೆ ಯಾರನ್ನೋ ಕೇಳಿದ ಸಾಹೇಬರು ಇದ್ದಾರಾ . ಅವರು ಈಗ ಮೀಟಿಂಗ್ ಗೆ ಹೋದರು ಅಂದರು. ಪಕ್ಕದಲ್ಲಿದ್ದ ಒಂದು ರೂಮಿಗೆ ಹೋದರು . ಅಲ್ಲಿ ಮೂರು ನಾಲ್ಕು ಜನ ಕುಳಿತಿದ್ದು ಒಬ್ಬನಿಗೆ ಹೇಳಿದ ಇವರ ತಂಗಿಯ ಹೆಸರು ಸೇರಿಸಕ್ಕೆ ಆಗುತ್ತಾ . ಆಗತ್ತೆ ಏಕೆ ಆಗಲ್ಲ .ನೀನು ಹೇಳಿದ ಮೇಲೆ ಆಯ್ತು ಬಿಡು . ಅಂದರು.ರಾಮಣ್ಣನ ಮುಖದಲ್ಲಿ ನಗು. ಏನಪ್ಪಾ ಅದೃಷ್ಟ ಸಾಹೇಬರನ್ನ ನೋಡದೆ ನಿನ್ನ ಕೆಲಸ ಆಗಿಹೋಯ್ತು ಅಂದ .ನೀನು ಊರಿಗೆ ಹೋಗಿ ಮುಂದಿನ ತಿಂಗಳು ಬಸ್ ಬರುವಾಗ ನಿನ್ನ ತಂಗಿ ಯನ್ನ ಕರೆದುಕೊಂಡು ಬಾ ಕೆಲವು ಕಡೆ ಸೈನ್ ಮಾಡಬೇಕಾಗುತ್ತದೆ ಅಂದ . ಮರೆಯದೆ ಚೀಲ ವಾಪಸ್ ತೆಗೆದುಕೊಂಡು ರೈಲು ನಿಲ್ದಾಣಕ್ಕೆ ಬಾಡಿಗೆ ಕಾರಿನಲ್ಲೇ ಕಳಿಸಿ ಕೊಟ್ಟ . ಒಂದು ತಿಂಗಳ ನಂತರ ತಂಗಿ ಜೊತೆ ಅದೇ ಹೋಟೆಲ್ ರೂಮ್ ಗೆ ಬಂದಾಗ ತಿಳಿಯಿತು ಅವನು ಖಾಲಿ ಮಾಡಿ ಒಂದು ತಿಂಗಳಾಯಿತು ಎಂದು. ಯಾರನ್ನ ಕೇಳಿದರು ಅವನು ಯಾರು ಎಲ್ಲಿಗೆ ಹೋಗಿದ್ದಾನೆ ಒಂದೂ ಗೊತ್ತಿಲ್ಲ. ಆಗ ಪಾಪ ತಾನು ಮೊಸ ಹೋಗಿರುವುದಾಗಿ ಅರಿವಾಯ್ತು. ಊರಿಗೆ ವಾಪಸ್ ಬಂದ.
.