ಲಕ್ಷ್ಮೀ
ಲಕ್ಷ್ಮೀ


'
ಹತ್ತು ಹನ್ನೊಂದು ವರ್ಷ ವಯಸ್ಸಿನ ಒಬ್ಬ ಹುಡುಗ. ಅವನ ಹೆಸರು ಮಲ್ಲಿಕಾರ್ಜುನ. ಎಲ್ಲರೂ ಪ್ರೀತಿಯಿಂದ ಕರೆಯೋದು ಮಲ್ಲಿ ಅಂತ . ಮಲ್ಲಿ ಗೆ ಇಬ್ಬರು ಅಣ್ಣಂದಿರು ಒಬ್ಬ ತಂಗಿ. ಎಲ್ಲರೂ ತೋಟ ಗದ್ದೆ ಕೆಲಸದಲ್ಲಿ ತಂದೆಗೆ ಸಹಾಯ ಮಾಡ್ಕೊಂಡಿದ್ದರು. ಆದರೆ ಮಲ್ಲಿಗೆ ಮಾತ್ರ ಬೆಂಗಳೂರಿನಲ್ಲಿರುವ ಚಿಕ್ಕಪ್ಪ ವೀರಣ್ಣ ಜೊತೆಯಿರುವುದು ಇಷ್ಟ. ಬಯಸಿದಂತೆ ಅವರಿಗೂ ಅಡಕೆ ವ್ಯಾಪಾರಕ್ಕೆ ಒಬ್ಬರ ಸಹಾಯ ಬೇಕಿದ್ದರಿಂದ ಇವನನ್ನು ತಮ್ಮೊಂದಿಗೆ ಸಿಟಿ ಗೆ ಕರೆದು ತಂದಿದ್ದರು. ಹೀಗಾಗಿ ವಿದ್ಯಾಭ್ಯಾಸ ಮಧ್ಯದಲ್ಲಿ ನಿಂತು ಹೋಗಿತ್ತು. ವೀರಣ್ಣ ಎಲ್ಲೇ ಹೋಗಲಿ ಸಹಾಯಕ್ಕಾಗಿ ಮಲ್ಲಿ ಜೊತೆಯಲ್ಲಿ ಇರಬೇಕು. ಇವರಿದ್ದ ಪ್ರದೇಶದಲ್ಲಿ ಒಂದು ಬಂಗಲೆ ಯಂತಹ ದೊಡ್ಡಮನೆ. ಆ ಪ್ರದೇಶದಲ್ಲಿ ಎಲ್ಲರಿಗೂ ಚಿರಪರಿಚಿತ ಮನೆ ಎಂದರೆ ಲಕ್ಷ್ಮೀ ಯದು. ಈ ಮನೆಗೆ ಹಣವಂತರು ಮಾತ್ರ ಭೇಟಿ ಕೊಡುತ್ತಿದ್ದರು. ಹಣವಂತರಿಗೆ ಲಕ್ಷ್ಮಿಯನ್ನು ನೋಡುವುದೇ ಒಂದು ಕಾರ್ಯಕ್ರಮ ಎಂದರೆ ತಪ್ಪಿಲ್ಲ. ಕಾರಣ ಇಷ್ಟೇ. ಕವಿಯ ವರ್ಣನೆಗೂ ಮೀರಿದ ರೂಪರಾಶಿ . ಹೆಣ್ಣುಗಳೇ ಅಸೂಯೆಪಡುವಷ್ಟು ಸುಂದರ ಮುಖ. ಲಕ್ಷ್ಮೀ ಸುಮಾರು ಇಪ್ಪತ್ತೈದು ವರ್ಷವಿರಬಹುದಾದ ಹೆಂಗಸು.
ಪ್ರತಿ ಶುಕ್ರವಾರ ಮನೆಯ ಸಮೀಪ ಇರುವ ದೇವಿ ಗುಡಿಗೆ ತಪ್ಪದೆ ನಡೆದುಕೊಂಡೇ ಬರೋದು ಅಭ್ಯಾಸ. ರಸ್ತೆಯ ಎರಡೂ ಬದಿಯ ಮನೆಗಳ ಕಿಟಕಿಯಿಂದ ಕದ್ದು ನೋಡುವ ಎಷ್ಟೋಕಣ್ಣುಗಳು ಮತ್ತೆ ಹಿಂದುರಿಗಿ ಹೋಗುವ ಸಮಯಕ್ಕಾಗಿ ಕಾಯುತ್ತಿತ್ತು. ಎಷ್ಟೋ ಜನ ಅದೇ ಸಮಯಕ್ಕೆ ಗುಡಿಗೆ ಬಂದು ಕದ್ದುಮುಚ್ಚಿ ನೋಡುವುದು ಸಾಮಾನ್ಯ ಸಂಗತಿಯಾಗಿತ್ತು . ದೇವಿಗೆ ಮಂಗಳಾರತಿ ಮಾಡಿದಾಗ ಅದೇ ಬೆಳಕಲ್ಲಿ ದೇವಿಯ ಮುಖದ ದರ್ಶನ ಮಾಡಿದ ಕಣ್ಣುಗಳು ಮಂಗಳಾರತಿ ತಟ್ಟೆ ಲಕ್ಷ್ಮಿಯ ಮುಖದ ಬಳಿ ಹಿಡಿದಾಗ ಅದೇ ಬೆಳಕಲ್ಲಿ ಆ ಬಂಗಾರದ ಮುಖವಾಡ ದಂತೆ ಹೊಳೆವ ಮುಖವನ್ನು ನೋಡಿ ಮನಸಾರೆ ಕಣ್ತುಂಬಿಸಿ ಕೊಳ್ಳುತ್ತಿದ್ದರು. ಪರಿಚಯವಿಲ್ಲದಿದ್ದರೂ ಮಾತನಾಡಿಸುವ ಹೆಂಗಳೆಯರು ಎಷ್ಟೋ. ಅವರ ಮಾತುಗಳನ್ನ ಕದ್ದುಮುಚ್ಚಿ ಕೇಳಿಯಾಕೊಳ್ಳುವ ಕಳ್ಳ ಕಿವಿಗಳಿಗೇನೂ ಕಡಿಮೆ ಇರಲಿಲ್ಲ.ಅರ್ಚಕರು ಸಹಾ ಲಕ್ಷ್ಮಿಯ ಬರುವಿಕೆ ಗಾಗಿಯೇ ಕಾದಿರುತ್ತಿದ್ದುದು ತಿಳಿಯದ ಗುಟ್ಟೇನು ಅಲ್ಲ. ಶುಕ್ರವಾರ ಬಂದರೆ ತಟ್ಟೆಗೆ ಐನೂರು ರೂಪಾಯಿ ಹಾಕುವ ಏಕೈಕ ಹೆಣ್ಣು ಅಂದರೆ ಲಕ್ಷ್ಮೀ. ಹಾಗಾಗಿ ಯಾರಿಗೂ ಸಿಗದ ಪ್ರಸಾದದ ಪ್ಯಾಕೆಟ್ ಲಕ್ಷ್ಮಿಗೆ ಮಾತ್ರ ತಪ್ಪುತ್ತಿರಲಿಲ್ಲ.
ಮಲ್ಲಿ ಸಹಾ ವೀರಣ್ಣನ ಜೊತೆ ಆಗಾಗ ಈ ಮನೆಗೆ ಎಷ್ಟೋ ಸಲ ಬಂದಿದ್ದಿದೆ. ಬಂದರೆ ಹೊರಗೆ ಕಲ್ಲಿನ ಜಗುಲಿ ಮೇಲೆ ಸುಮಾರು ಹೊತ್ತು ಕುಳಿತಿರುತ್ತಿದ್ದ. ಒಂದು ದಿನ ಚಿಕ್ಕಪ್ಪನ ಹತ್ತಿರ ಕೇಳಿದ ಯಾರ ಮನೆ
ಇದು ಅಲ್ಲಿ ಅಷ್ಟು ಹೊತ್ತು ಏನು ಕೆಲಸ. ನನಗಂತೂ ಇಲ್ಲಿ ಒಬ್ಬನೇ ಕೂತುಕೊಂಡು ಬೇಜಾರಾಗುತ್ತೆ. ನಾನೂ ನಿಮ್ಮಜೊತೆ ಒಳಗೆ ಬರ್ತೀನಿ ಅಂದ. ಅದಕ್ಕೆ ಅವರು ಬೇಕಾದಷ್ಟು ವ್ಯವಹಾರ ಇರುತ್ತೆ ಅದನ್ನೆಲ್ಲ ಹೇಳಕ್ಕಾಗಲ್ಲ , ಏನಾದ್ರೂ ತೊಗೊಂಡು ತಿನ್ನು ಅಂತ ಹತ್ತು ರೂಪಾಯಿ ಕೊಟ್ರು. ಅಂದಿನಿಂದ ಇಲ್ಲಿಗೆ ಬಂದಾಗಲೆಲ್ಲ ಹತ್ತು ರೂಪಾಯಿ ಮಲ್ಲಿಗೆ ಸಿಗ್ತಾ ಇತ್ತು. ಅದಕ್ಕೆ ಅವನಿಗೂ ಚಿಕ್ಕಪ್ಪನ ಜೊತೆ ಬರೋಕ್ಕೆ ಇಷ್ಟ. ಹೀಗೆ ದಿನಗಳು ಉರುಳಿತು. ವರ್ಷಗಳೇ ಉರುಳಿತು. ಇವನಿಗೆ ಸುಮಾರು ಹದಿನೈದು ಹದಿನಾರು ವರ್ಷ. ಒಂದುದಿನ ಎಂದೂ ನೋಡಿಲ್ಲದ ಆ ಹೆಂಗಸನ್ನ ಬಾಗಿಲ ಮರೆಯಲ್ಲಿ ನೋಡಿದ . ಹಿಂದೆ ಸರಿದು ಮಲ್ಲಿಯನ್ನು ನೋಡಿ ನಕ್ಕು ಆ ಹೆಣ್ಣು ಕೈ ಆಡಿಸಿದ್ದನ್ನು ಕಂಡ. ಅಲ್ಲಿಯವರೆಗೂ ಅಂತಹ ಅನುಭವ ಆಗಿರಲಿಲ್ಲ. ಏನೋ ಮತ್ತೆ ಮತ್ತೆ ನೋಡ ಬೇಕೆನ್ನುವ ಸೆಳೆತದ ಅನುಭವ. ಆ ನಗುಮುಖವನ್ನ ಮರೆಯಲಾಗದೆ ಚಿಕ್ಕಪ್ಪನ ಜೊತೆ ಮನೆಗೆ ನಡೆದ. ದಾರಿಯಲ್ಲಿ ವೀರಣ್ಣ, ಮರೆತೆ ತೊಗೊ ಅಂತ ಹತ್ತರ ಬದ ಲು ಇಪ್ಪತ್ತುರೂಪಾಯಿ ಕೊಟ್ಟಾಗ ಬೇಡವೆಂದ. ಏಕೆ ಬೇಡ ಇಂದು ಇಪ್ಪತ್ತು ಕೊಡ್ತಿದೀನಿ. ನನಗೂ ಏನೋ ಒಂದು ತರಹೆ ಸಂತೋಷ ಇಟ್ಟುಕೋ ಅಂದರು. ನಾನು ಏನು ಚಿಕ್ಕ ಮಗೂನ. ನನಗೆ ಬೇಡ ಅಂದಾಗ ಮಲ್ಲಿ ಮುಖ ನೋಡಿದ್ರು. ಮುಖದಲ್ಲಿ ಏನೋ ಒಂದು ಬದಲಾವಣೆಯಂತೂ ಇದೆ ಆದ್ರೆ ಏನಂತ ಗೊತ್ತಿಲ್ಲ.
ಸುಮ್ಮನೆ ಒಂದು ಮಾತೂ ಆಡದೆ ಮನೆಗೆ ಬಂದರು. ಮಲ್ಲಿ ಮನಸ್ಸಲ್ಲಿ ಏನೋ ಗೊಂದಲ ಏನಂತ ಹೇಳಕ್ಕಾಗದ ವಿಚಿತ್ರ ಅನುಭವ. ರಾತ್ರಿಯೆಲ್ಲಾ ಏನೇನೋ ಕನಸುಗಳು. ಬೆಳಗ್ಗೆ ಎದ್ದಾಗ ತಾನು ಚಿಕ್ಕ ಹುಡುಗನಲ್ಲ ಎನ್ನುವ ಭಾವನೆ. ಮಲ್ಲಿ ಅಂತ ಕೂಗುತ್ತಿದ್ದವರೆಲ್ಲಾ ಮಲ್ಲಣ್ಣ ಅಂತಾರೆ. ಏನೋ ಪುಳಕ. ಅದೇ ಮನೆಗೆ ಒಬ್ಬನೇ ಹೋಗಿ ಬಂದು ಬಿಡೋಣವೇ ಅಂತ ಅನಿಸಿದ್ದು ಉಂಟು. ತಕ್ಷಣ ಬೇಡ ಅಂದುಕೊಂಡು ಸುಮ್ಮನಾದ. ಒಂದು ವಿಷಯ ಗೊತ್ತಿತ್ತು. ಅಲ್ಲಿಗೆ ಹೋಗಬೇಕಾದರೆ ಬಹಳ ಹಣ ಇರಬೇಕು.. ಅಷ್ಟೊಂದು ಹಣ ಎಲ್ಲಿ ತರೋದು. ಸಂಪಾದನೆ ಮಾಡಬೇಕು. ಬೇರೆದಾರಿ ಇಲ್ಲ. ಒಂದೆರಡು ವರ್ಷ ಕಾದು. ಸಂಪಾದನೆಯ ದಾರಿಯನ್ನೇ ಯೋಚಿಸುತ್ತಿದ್ದವನಿಗೆ ಹೊಳೆದದ್ದು ಅರಬ್ ದೇಶಕ್ಕೆ ಹೋಗಿ ದುಡಿಯುವುದು. ಚಿಕ್ಕಪ್ಪನಿಗೆ ಹೇಳಿದ. ಆಯ್ತು ನಿನ್ನ ಕಾಲ ಮೇಲೆ ನೀನು ನಿಲ್ಲೋದಾದರೆ ಸಂತೋಷ ಅಂತ ಸಹಾಯ ಮಾಡಿದರು. ಮಲ್ಲಿಗೆ ಒಂದೇ ಗುರಿ .
ಕಷ್ಟಪಟ್ಟು ಹಣ ಸಂಪಾದನೆ ಮಾಡಬೇಕು. ಮಾಡ್ಕೊಂಡು ಬಂದು ಚಿಕ್ಕಪ್ಪನ ತರ ಒಂದು ದಿನ ಆ ಮನೆಗೆ ಹೋಗಿ ಅಂದು ಆ ಬಾಗಿಲ ಹಿಂದೆ ಕಂಡ ಆ ಮುಖವನ್ನು ಹತ್ತಿರದಿಂದ ನೋಡಬೇಕು. ಮತ್ತೇನೂ ಇಲ್ಲ. ಮತ್ತೊಬ್ಬರ ಸಹಾಯದಿಂದ ಹೇಗೋ ಮಸ್ಕಟ್ ಗೆ ಹೋದ ಹತ್ತು ವರ್ಷ ದುಡಿದ. ಕಷ್ಟಪಟ್ಟು ಎಷ್ಟೋ ದಿನ ಉಪವಾಸ ಇದ್ದು ದುಡಿದ. ಸಾಕಷ್ಟು ಹಣ ಮಾಡಿದ. ಒಂದುದಿನ ವಾಪಸ್ ಬಂದ. ಬಂದವನೇ ಚಿಕ್ಕಪ್ಪನ ಮನೆಗೂ ಹೋಗದೆ ಸೀದ ಆ ಲಕ್ಷ್ಮೀ ಮನೆಗೆ ಮರೆಯದೆ ಹೋದ. ಮನೆ ಬಹಳ ಬದಲಾವಣೆ ಆಗಿದೆ. ಮೊದಲು ಇದ್ದಂತೆ ಸುಣ್ಣ ಬಣ್ಣ ವಿಲ್ಲದ ಗೋಡೆಗಳು. ನೀರುಕಾಣದೆ ಒಣಗಿದ ಗಿಡ ಮರ. .ಬಿದ್ದು ಹೋಗಿರುವ ಗೇಟ್. ಇವನಿಗೆ ಆಶ್ಚರ್ಯ. ಮೆಟ್ಟಿಲು ಹತ್ತಿ ಕಾಲಿಂಗ್ ಬೆಲ್ ಗೆ ಹುಡುಕಾಡಿದ. ಇಲ್ಲ. ಬಾಗಿಲು ಬಡಿದ. ಒಳಗಿನಂದ ಯಾರೂ ಬಂದೆ ಅಂತ ಹೆಣ್ಣಿನ ಧ್ವನಿ. ವಯಸ್ಸಾದ ಒಂದು ಹೆಂಗಸು ಕೊಲಿನ ಆಸರೆಯಿಂದ ನಿಧಾನಕ್ಕೆ ಬಂದು ಬಾಗಿಲು ತೆರೆದಾಗ ನೋಡಿದರೆ ಅದೇ ಮುಖ ಅಂತ ಮನಸ್ಸು ಹೇಳಿತಾದರೂ ನಂಬಲು ಕಷ್ಟ ವಾಗಿದೆ.ಯಾರಪ್ಪ ನೀನು ಏನು ಬೇಕು ಅಂದಾಗ, ತಕ್ಷಣ
ಅಮ್ಮ ನನಗೇನೂ ಬೇಡ ಒಂದು ಲೋಟ ನೀರು ಕೊಡಿ ನಿಮ್ಮ ಹತ್ತಿರಮಾತನಾಡಬೇಕು ಅಂದ.
ಅಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿ ನೀರು ಕೊಟ್ಟು ಹೇಳಪ್ಪ ಏನೂ ಮಾತಾನಾಡಬೇಕಿದೆ ಅಂದಾಗ ನಾನು ಹತ್ತು ಹನ್ನೆರಡು ವರ್ಷಗಳ ಹಿಂದೆ ಆಗಾಗ ನನ್ನ ಚಿಕ್ಕಪ್ಪ ನ ಜೊತೆ ನಿಮ್ಮ ಮನೆಗೆ ಬಂದು ಅವರು ಒಳಗೆಬಂದಾಗ ನಾನು ಹೊರ ಜಗುಲಿಯಲ್ಲಿ ಕೂತಿರುತ್ತಿದ್ದೆ. ಅಕಸ್ಮಾತ್ ಒಂದುದಿನ ನಿಮ್ಮನ್ನ ಬಾಗಿಲ ಹಿಂದೆ ಇದ್ದಾಗ ನೋಡಿ ಅಂದಿನಿಂದ ನಿಮ್ಮನ್ನ ಮತ್ತೆ ನೋಡಬೇಕೆಂದು, ಆದರೆ ಮನೆ ಒಳಗೆ ಬಂದು ನೋಡಬೇಕೆಂದು ಮನಸ್ಸಾಯ್ತು. ಇಲ್ಲಿಗೆ ಬರಬೇಕಾದರೆ ಹಣವಂತರಿಗೆ ಮಾತ್ರಾಸಾಧ್ಯ ಅಂತ ತಿಳಿದಿದ್ದೆ .ಅದಕ್ಕೆ ಹೊರದೇಶಕ್ಕೆ ಹೋಗಿ ದುಡಿದು ಹಣ ತೆಗೆದುಕೊಂಡು ಬಂದೆ ಎಂದು ಮನಸ್ಸುಬಿಚ್ಚಿ ಹೇಳಿದ. ಆಗ ಆ ಹೆಂಗಸು ಅಯ್ಯೋ ಅದು ಆಗ. ಇಂದುಇಲ್ಲಿಗೆ ಯಾರೂ ಬರಲ್ಲ . ನನಗೆ ಈಗ ಯಾರ ಸಹಾಯವೂ ಬೇಕಿಲ್ಲ. ಖಾಯಿಲೆಗಳು ನನ್ನನ್ನ ಮುಕ್ಕಿ ತಿನ್ನುತ್ತಿದೆ. ಎಂದು ಕಣ್ಣು ಮುಚ್ಚುತ್ತೇನೋ ಗೊತ್ತಿಲ್ಲ. ಆ ದೇವಿಗೂ ನನ್ನ ಮೇಲೆ ಕರುಣೆ ಬಂದಿಲ್ಲ ಅಂತ ಕೆಮ್ಮುತ್ತಲೇ ಹೇಳಿದಳು. ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಬೇರೊಂದು ಕುರ್ಚಿ ಸಹಾ ಇಲ್ಲದ ಕಾರಣ ಮಲ್ಲಿ ಎದ್ದುಅವಳ ಸೊಂಟ ಬಳಸಿ ಕೈ ಹಿಡಿದು ಕೊಂಡು ಕುರ್ಚಿಯಲ್ಲಿ ನಿಧಾನವಾಗಿ ಕೂಡಿಸಿದ . ಈಗ ಮನದಲ್ಲಿ ಗೊಂದಲವಿರಲಿಲ್ಲ ಭಾವನೆಗಳಿಗೆ ಬೇರೋಂದು ಅರ್ಥ ಸಿಕ್ಕಿತ್ತು. ತಂದಿದ್ದ ಹಣದ ಚೀಲ ಕೊಟ್ಟು ಕಾಲಿಗೆ ನಮಸ್ಕಾರ ಮಾಡಿ ಕಷ್ಟ ಅಂದಾಗ ನನ್ನ ನಂಬರ್ ಗೆ phone ಮಾಡಿ ಅಂತ ತನ್ನ ಕಾರ್ಡ್ ಕೊಟ್ಟು ಏನೋ ಕಳೆದುಕೊಂಡವನಂತೆ ಭಾರವಾದ ಹೃದಯ ಹೊತ್ತು ಹೊರನಡೆದ. ಒಂದು ವಾರ ಕಳೆದಿರಬಹುದು. ಚಿಕ್ಕಪ್ಪ ವೀರಣ್ಣ ನನ್ನು ಕಾಣಲು ಮನೆಗೆ ಹೋದ. ಇರಲಿಲ್ಲ ಅಲ್ಲೇ ಇದ್ದ ಕೆಲಸದ ಹೆಂಗಸನ್ನ ಕೇಳಿದ. ಅದಕ್ಕೆ ಯಜಮಾನರ ಪರಿಚಯದವರು ಯಾರೋ ಲಕ್ಷ್ಮೀ ಅಂತೆ. ರಾತ್ರಿ ತೀರಿಹೋದರು ಅಂತ phone ಬಂತು. ಅದಕ್ಕೆ ಹೋಗಿದ್ದಾರೆ ಅಂದಳು. ತಾನೂ ಅಲ್ಲಿಗೆ ಓಡಿದ.