ಕಲಿಯುಗ
ಕಲಿಯುಗ
ಒಮ್ಮೆ ಒಬ್ಬ ವೃದ್ಧರು ಪ್ರತಿದಿನ ದೇವಸ್ಥಾನದಲ್ಲಿ ಒಬ್ಬರೇ ಕುಳಿತು ಕಣ್ಣೀರು ಸುರಿಸುತ್ತಾ ಮನದಲ್ಲೇ ತಮ್ಮ ವೇದನೆಯನ್ನ ದೇವರ ಬಳಿ ಹೇಳಿಕೊಳ್ಳುತ್ತಿದ್ದರು. ಇದನ್ನ ಸೂಕ್ಷ್ಮವಾಗಿ ಗಮನಿಸಿದ ಒಬ್ಬ ತರುಣ ತಾನೂ ಪಕ್ಕದಲ್ಲಿ ಕೂತು ಈ ವೃದ್ಧರಿಗೆ ಅವರ ಆಸೆ ಪೂರೈಸೆಂದು ಕೇಳಿ ಕೊಳ್ಳುತ್ತಿದ್ದ , ಅಂದು ರಾತ್ರಿ ಆ ತರುಣನ ಕನಸಿನಲ್ಲಿ ದೇವರು ಬಂದು, ಆ ವೃದ್ದರು ಮನೆಯಲ್ಲಿ ಯಾರ ಅನುಕಂಪವೂ ಇಲ್ಲದೆ ಜೀವನದಲ್ಲಿ ಬಹಳ ನೊಂದು ಮುಕ್ತಿಗಾಗಿ ಬೇಡಿಕೊಳ್ಳುತ್ತಿದ್ದಾರೆ , ಆದರೆ ಅವರಿಗೆ ಇನ್ನೂ ಇಪ್ಪತ್ತು ವರ್ಷ ಆಯುಸ್ಸಿದೆ. ಆದ್ದರಿಂದಾಗಿ ಹೀಗೆ ಇನ್ನೂ ಬಹಳ ಕಷ್ಟ ಅನುಭವಿಸಬೇಕಿದೆ. ಆದರೆ ನೀನು ಈಗ ಅವರ ಸಹಾಯಕ್ಕೆ ಬಂದಿರುವ ಕಾರಣ ಒಂದು ದಾರಿ ಇದೆ ಅದೇನೆಂದರೆ ಅವರ ಎಲ್ಲಾ ಸಂಕಷ್ಟ.ಗಳನ್ನು ಮತ್ತು ಅವರ ಉಳಿದ ಆಯುಸ್ಸನ್ನ ನೀನು ತೆಗೆದು ಕೊಳ್ಳುವಹಾಗಿದ್ದರೆ ನಾಳೆಯೇ ಅವರಿಗೆ ಮುಕ್ತಿ ಕೊಡಲು ಸಾಧ್ಯ. ಯೋಚಿಸಿ ನಾಳೆ ಬಂದಾಗ ತಿಳಿಸು ಎಂದು ಹೇಳಿ ಅಂತರ್ಧಾನನಾದ. ನಿದ್ದೆಯಿಂದ ಎದ್ದವನೇ ಅದೇ ಚಿಂತೆಯಲ್ಲಿ ಮುಳುಗಿದ ಆ ತರುಣ ಅಂದು ದೇವಸ್ಥಾನಕ್ಕೆ ಹೋಗಲಿಲ್ಲ. ಮಾರನೇ ದಿನವೂ ಯಾವ ನಿರ್ಧಾರಕ್ಕೂ ಬರಲಾಗದೆ ಅಂದೂ ಸಹ ಹೋಗಲಿ
ಲ್ಲ. ರಾತ್ರಿ ಮತ್ತೆ ಕನಸಲ್ಲಿ ಬಂದ ದೇವರು ಅವನ ನಿರ್ಧಾರದ ಬಗ್ಗೆ ಕೇಳಿದ . ಅವರ ಆಯುಸ್ಸೂ ಬೇಡ ಕಷ್ಟವೂ ಬೇಡ ಎಂದು ಹೇಳಿಬಿಟ್ಟ . ದೇವರು ನಕ್ಕು ನಿನ್ನನ್ನು ಪರೀಕ್ಷಿಸಲು ಕೇಳಿದ ಪ್ರಶ್ನೆ ಅಷ್ಟೇ ಒಬ್ಬರ ಆಯುಸ್ಸು ಅಥವಾ ಅವರ ಕರ್ಮ ಫಲ ಮತ್ತೊಬ್ಬರಿಗೆ ಕೊಡಲು ಕಲಿಯುಗದಲ್ಲಿ ಅಸಾಧ್ಯ ಎಂದ.
ಎಚ್ಚರವಾಗಿ ನೋಡುತ್ತಾನೆ ಅದು ಬರೀ ಕನಸು. ಎಂದಿನಂತೆ ದೇವಸ್ಥಾನಕ್ಕೆ ಬಂದ. ಆ ವೃದ್ಧರು ಎಲ್ಲಿದ್ದಾರೆಂದು ಹುಡುಕಿದ .ಎಲ್ಲೂ ಕಾಣದಾಗಿ ಅರ್ಚಕರನ್ನು ಕೇಳಿದ . ಅದಕ್ಕೆ ಅವರು ನಮ್ಮ ಮನೆ ಪಕ್ಕದಲ್ಲೇ ಇರೋದು . ಅವರ ಕಷ್ಟ ಯಾರಿಗೂ ಬರೋದು ಬೇಡ .ಪಾಪ ದಿನವೂ ಇಲ್ಲಿಗೆ ಬರ್ತಿದ್ರು. ನೆನ್ನೆ ರಾತ್ರಿ ಮಲಾಗಿದ್ದೋರು ಎದ್ದೇ ಇಲ್ಲ . ಒಳ್ಳೆ ಸಾವು ಅಂದರು. ತರುಣ ಒಂದು ಕ್ಷಣ ದಿಗ್ಭ್ರಮೆಯಾಗಿ ಗೋಡೆಗೆ ಹಾಗೆ ಒರಗಿ ನಿಂತ.