ಹಾಸ್ಯ: ಒಂದು ಕಪ್ ಕಾಫಿಯ ಸುತ್ತ
ಹಾಸ್ಯ: ಒಂದು ಕಪ್ ಕಾಫಿಯ ಸುತ್ತ
ಬೆಳಿಗ್ಗೆ ಆರು ಗಂಟೆಗೆ ಎದ್ದು.... ಹಲ್ಲು ಉಜ್ಜಿ... ಪೇಪರ್ ಹಿಡಿದು ಕೂತ ಗುಂಡೂರಾಯರು..... ಹೆಡ್ಲೈನ್ ಓದುವಷ್ಟರಲ್ಲಿ ಕಣ್ಣು ಅಡುಗೆ ಮನೆ ಕಡೆ ಹರಿದಾಡಿ ಹರಿದಾಡಿ ಸುಸ್ತಾಗಿತ್ತು.....
ರಮು ....ರಮು..... ಎಂದು ಮೆಲ್ಲಗೆ ಕೂಗಿದಾಗ...
ರೀ..... ನಿಮಗೆ ಎಷ್ಟು ಸಲ ಹೇಳಿದ್ದೀನಿ ರಮ್ಮು...ಜಿನ್ನು ಅಂತ ಕರೀಬೇಡಿ ಅಂತ...
ನಮ್ಮ ಅಪ್ಪ ಅಮ್ಮ ನನಗೆ ಲಕ್ಷಣವಾಗಿ ರಮಾಬಾಯಿ ಅಂತ ಹೆಸರು ಇಟ್ಟಿದ್ದಾರೆ.... ಅದನ್ನು ಕರೆಯೋಕೆ ನಿಮಗೇನು ದಾಡಿ.....
ಹೌದೌದು ಲಕ್ಷಣವಾಗಿ ಹೆಸರಿಗೆ ಮಾತ್ರ.....
ಒಮ್ಮೆ ಅದರೂ ನಿನ್ನ ವದನಾರವಿಂದವ ನೋಡಿಕೊಂಡು ಇದ್ದೀಯಾ ಎಂದು ಸೆಳೆಯಬೇಕೆಂದು ಕೊಂಡವನ ಮಾತು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡಿತ್ತು....
ರಮಾ ಏನಿಲ್ಲ ಗಂಟೆ ಏಳಾಗ್ತಾ ಬಂತು....ಗಂಟಲೆಲ್ಲಾ ಒಣಗಿಹೋಗ್ತಾಇದೆ.... ನೀನು ದೊಡ್ಡ ಮನಸ್ಸು ಮಾಡಿ ಒಂದು ಚೂರು ಕಾಫಿ ಕೊಟ್ಟರೆ.....
ಕೊಟ್ಟರೆ ಎಂದು ಗುಟುರು ಹಾಕಿದ ಮಡದಿಯ ಮುಖ ನೋಡಿ....
ಕೊಟ್ಟರೆ ಕುಡಿದು ಕೃತಾರ್ಥರಾನಾಗುತ್ತೇನೆ ಎಂದು ತನ್ನ ಇಪ್ಪತ್ತು ನಾಲ್ಕು ಹಲ್ಲು ಗಿಂಜಿದನು....
ಮುಚ್ಚಿ ಬಾಯಿ ಸಾಕು ಎಂದು ಮಾಡಿದಿ ಹೇಳಿದಾಗ....
ಅಯ್ಯೋ ಯಾಕೆ ಬಾಯಿ ದುರ್ನಾತವೇ...... ಈಗ ತಾನೇ ಹಲ್ಲು ಉಜ್ಜಿ ಬಂದಿದ್ದೇನೆ ಎಂದರು.......
ಹೌದೌದು ನಿಮ್ಮನ್ನು ಟೂತ್ ಪೇಸ್ಟ್ ಅಡ್ವರ್ಟೈಸಿಂಗ್ ಗೆ ಕರೀತಾ ಇದ್ದಾರೆ ಅಂತೆ ಎಂದು ... ದೊಡ್ಡದಾಗಿ ಕಣ್ಣು ಬಿಟ್ಟು ಅಡುಗೆ ಮನೆಗೆ ನಡೆದಳು ರಮಾಬಾಯಿ.
ಅಬ್ಬಾ ಸಧ್ಯ ಬೈದೋ ...ಬಡಿದೋ .... ಕಾಫಿ ಕೊಟ್ಟರೆ ಸಾಕು ಎಂದು ಆಸೆಯಿಂದ ಮತ್ತೆ ಪೇಪರ್ ಹಿಡಿದು ಕೂತರು ರಾಯರು.
ಗಂಟೆ ಏಳೂವರೆ ಆಯ್ತು..... ಮತ್ತೆ ರಮಾ ರಮಾ ಎಂದರು.....
ಅತ್ತ ಕಡೆ ಆ ಹೂ ಏನು ಕೇಳದಾಗ.... ಅಡುಗೆ ಮನೆ ಹತ್ತಿರ ಬಂದು....
ಲೇ ಎಂದಾಗ ಅರ್ಧ ಲೋಟ ಕಾಫಿ ತಂದು ಗಂಡನ ಕೈಯಲ್ಲಿ ಇಟ್ಟು ನೋಡಿ.....
ಕಾಫಿ ಕುಡಿದು ತೆಪ್ಪಗೆ ಕುಳಿತುಕೊಳ್ಳಿ.....
ಮತ್ತೆ ರಮಾ....ರಮಾ ಅಂತಾ ಬಾಯಿ ಹರಿದುಕೊಂಡರೋ..... ಅಷ್ಟೇ...
ಮಕ್ಕಳಿಗೆ ಡಬ್ಬಿ ಕಟ್ಟಬೇಕು.... ಕೆಲಸಕ್ಕೆ ಹೊರಡುವ ಹೊತ್ತು ಎಂದು ದಡಬಡಿಸಿ ಹೊರಟರು.
ಅಲ್ಲಾ ಗಂಡ ಅನ್ನೋ ಭಯ ಭಕ್ತಿ ಸ್ವಲ್ಪವೂ ಇಲ್ಲ.... ಎಂದುಕೊಂಡು ತೆಪ್ಪಾಗಾದರು.
ಅಷ್ಟರಲ್ಲಿ ಬಂದ ಗೆಳೆಯ ರಂಗಾ....ಲೋ ಗುಂಡೂ.... ಏನೋ ಮಾಡ್ತಾ ಇದ್ದೀಯ ಎಂದು ದಪ್ಪ ಧ್ವನಿಯಲ್ಲಿ ಕೂಗಿದಾಗ.....ಲೋ ಮಾರಾಯ ಮೆಲ್ಲಗೆ ಕರಿಯೋ...
ಎಂದರು ರಾಯರು.
ಯಾಕೋ ಏನಾಯ್ತು.... ಎಂದಾಗ....ಹೇ.ಏನಿಲ್ಲಾ....
ಎಂದರು.
ಅಲ್ಲಾ ಮಾರಾಯ ನೀನು ವಾಕಿಂಗ್ ಬಂದು ಎರಡು ಮೂರು ದಿನ ಆಯ್ತು.... ಅದಕ್ಕೆ ಬಂದೆ ನೋಡಿಕೊಂಡು ಹೋಗಲು ಎಂದರು.
ನೋಡಿ ಆಯ್ತಲ್ಲ ಇನ್ನೂ ಹೊರಡು ಎಂದು ಮನದಲ್ಲೇ ಗೆಳೆಯನ ಬೈದು ಕೊಂಡರು.
ಅಬ್ಬಾ ಏನು ಚಳಿ ಇವತ್ತು.... ನೋಡು ನನ್ನಾಕೆ ಇನ್ನೂ ಎದ್ದೆ ಇರಲಿಲ್ಲ.... ಎಂದು ತನ್ನ ಎರಡು ಕೈಗಳನ್ನು ತಿಕ್ಕಿಕೊಳ್ಳುತ್ತಾ ಗೆಳೆಯನ ಮುಖ ನೋಡಿದರು.
ಅಯ್ಯೋ ಇವನ ಮಾತಿನ ವರಸೆ ನೋಡಿದರೆ.....
ಮಾರಾಯ ಕಾಫಿಗೆ ಇಲ್ಲಿ ಬಂದಂತಿದೆ...
ಏನು ಮಾಡೋದು.... ಎಂದು ಗಟ್ಟಿ ಮನಸ್ಸು ಮಾಡಿ....
ರಮಾ.... ರಮಾ.... ಎಂದರು....
ಹಾ..... ಎಂದು ಜೋರಾಗಿ ಗದರಿದಾಗ.... ಏನಿಲ್ಲ ಏನಿಲ್ಲ...
ನಾನೇ ಬಂದೆ ಎಂದು.... ಮೆಲ್ಲಗೆ ಅಡುಗೆ ಮನೆಗೆ ಹೋಗಿ...
ಲೇ ಗೆಳೆಯ ರಂಗಾ ಬಂದಿದ್ದಾನೆ....ಪಾಪ ಚಳಿಗಾಲ ಅಲ್ವಾ.... ಒಂದು ಕಪ್ ಕಾಫಿ ಸಿಗುತ್ತೇನೋ ಎಂದು....
ಮೆಲ್ಲಗೆ ನುಡಿದರು ರಾಯರು.
ಹೂ ..... ಕಾಫಿ ನಾ.... ಕೊಡ್ತೀನಿ ಕೊಡ್ತೀನಿ ಎಂದು ದೊಡ್ಡ ಕಣ್ಣು ಬಿಟ್ಟು ಗಂಡನ ನೋಡಿದಾಗ...
ಅಯ್ಯೋ ಮಾರಾಯ್ತಿ..... ಗೊತ್ತಾಯ್ತಾ ಬಿಡು ಎಂದು...
ರಂಗಾ ಬಾ ವಾಕಿಂಗ್ ಹೊಗೋಣಾ.. ಎಂದು ಗೆಳೆಯನ ಕೈ ಹಿಡಿದು ಹೊರನಡೆದರು.
