ಮಮತೆಯ ಕರೆಯೋಲೆ
ಮಮತೆಯ ಕರೆಯೋಲೆ
ಶಿಸ್ತಾಗಿ ಅಲಂಕರಿಸಿಕೊಂಡು ಕಾಲೇಜಿಗೆ ಹೊರಟ ಮಗನನ್ನು ನೋಡಿ.... ತಾಯಿ ಅನಸೂಯಾ....
ರಾಜು.... ಸಂಜೆ ಬೇಗನೆ ಮನೆಗೆ ಬರ್ತೀಯಾ ಕಂದಾ... ಎನ್ನಲು ಯಾಕಮ್ಮ.... ಸಂಜೆ ಆಗಲ್ಲ ಸ್ನೇಹಿತರ ಜೊತೆ
ಸಿನಿಮಾಗೆ ಹೋಗ್ಬೇಕು ಎಂದು ಶಿಳ್ಳೆ ಹಾಕುತ್ತಾ.. ಬೈಕ್ ಸ್ಟಾರ್ಟ್ ಮಾಡಿ ಹೋರಟ ಮಗನನ್ನು ನೋಡಿ ನಿಟ್ಟುಸಿರು ಬಿಟ್ಟು... ರಾಶಿಯಾಗಿ ಬಿದ್ದಿದ್ದ ಮಣ್ಣಿನ ರಾಶಿಯತ್ತ ತೆರಳಿದಳು ಅನಸೂಯಾ.
ಗಂಡ ನಿಂಗಪ್ಪ ಕಳೆದ ಎರಡು ವರ್ಷಗಳಿಂದ ಲಕ್ವಾ ಹೊಡೆದು ಮಲಗಿದ್ದ...... ಮನೆಯ ಜವಾಬ್ದಾರಿ, ಮಕ್ಕಳ ಜವಾಬ್ದಾರಿ ಎಲ್ಲವೂ ತನ್ನ ಹೆಗಲಿಗೆ ಬಿದ್ದಾಗ ಹೇಗೆ ನಿಭಾಯಿಸುವುದು ಎಂದು ಚಿಂತಿಸುತ್ತಿದ್ದ ಅನುಸೂಯಳ ಕೈ ಹಿಡಿದಿದ್ದು ಕುಲ ಕಸಬಾದ ಗಡಿಗೆ ಕೆಲಸ.
ಚಿಕ್ಕ ವಯಸ್ಸಿನಲ್ಲೇ ತಾತನ ಜೊತೆ ಜೊತೆಗೆ ಮಣ್ಣಿನ ಕುಡಿಕೆ, ಮಡಿಕೆ ಮಾಡುವುದನ್ನು ಕಲಿತಿದ್ದಳು...
ಮದುವೆ, ಮಕ್ಕಳು ಇದೆಲ್ಲದರ ನಡುವೆ ಎಲ್ಲವನ್ನೂ ಮರೆತಿದ್ದ ಅನುಸೂಯ ಗಂಡ ಹಾಸಿಗೆ ಹಿಡಿದ ಮೇಲೆ...
ಚಿಕ್ಕ ಪುಟ್ಟ ಸಾಮಾನುಗಳನ್ನು ಮಾಡಿ ಮಾರಿ ಜೀವನ ನಡೆಸುತ್ತಿದ್ದಳು.
ಆದರೆ ಎರಡು ವರ್ಷಗಳ ನಂತರ ಗಣೇಶನ ಹಬ್ಬಕ್ಕೆ ಯಾವ ಅಡಚಣೆ ಇಲ್ಲವಾದಾಗ....ಕೈ ಸಾಲ ಮಾಡಿ ಮಣ್ಣು, ಬಣ್ಣ ಎಲ್ಲವನ್ನು ತಂದು ಗಣೇಶನ ಮಾಡಿ, ಮಾರಿದ ಹಣದಿಂದ ಸಲ್ಪ ನೆಮ್ಮದಿಯ ಜೀವನ ನಡೆಸುವ ಬಯಕೆ ಅವಳದ್ದು.
ಒಂದು ಬಂಡಿ ಮಣ್ಣು ಹದಾ ಮಾಡಿ.... ಮೂರ್ತಿಗಳನ್ನು ಮಾಡಿ ಜೋಡಿಸಿ ಇಟ್ಟಳು.... ಆದರೆ ಯಾಕೋ ಒಬ್ಬಳಿಗೆ ಸಾಕು ಸಾಕೆನಿಸಿತು.... ಮೈ ಕೈ ಎಲ್ಲಾ ನೋವು..
ಸುಮ್ಮನೆ ಒಂದು ಕಡೆ ಹಾಗೇ ಕೂತು ಬಿಟ್ಟಳು....
ಸಂಜೆ ಮನೆಗೆ ಬಂದ ಮಗ ಅಮ್ಮನ ನೋಡಿ... ಅಮ್ಮ ಏನಾಯ್ತು ಎಂದು ಹಣೆ ಮುಟ್ಟಿ ನೋಡಿದ ಜ್ವರ ಸುಡುತ್ತಿತ್ತು.... ಅಮ್ಮ ನಿನಗೆ ಮೈ ಹುಷಾರಿಲ್ಲ... ನಡೀ ಡಾಕ್ಟರ್ ಹತ್ರ ಹೋಗೋಣ ಎನ್ನಲು...
ಬೇಡ ಒಂದು ಮಾತ್ರೆ ತಂದು ಕೊಡು ನುಂಗಿ ಮಲಗ್ತೀನಿ.
ನಾಳೆ ಬೆಳಿಗ್ಗೆ ಗಣೇಶನಿಗೆ ಬಣ್ಣ ಹಾಕಿ....ತೀಡಬೇಕು ಹಬ್ಬ ಹತ್ತಿರ ಬರುತ್ತಿದೆ.... ಎಂದು ಮುಲುಗಿದಳು.
ಬೆಳಿಗ್ಗೆ ಎದ್ದ ಅನಸೂಯಾಳಿಗೆ ಸುಸ್ತು ಹಾಗೆ ಇತ್ತು... ರಾಜು ಕಾಫಿ ಮಾಡಿ ಬ್ರೆಡ್ ಕೊಟ್ಟು.... ಮಾತ್ರೆ ನುಂಗಿಸಿದ
ಅಮ್ಮ ಇವತ್ತು ಕಾಲೇಜಿಗೆ ಹೋಗಲ್ಲ...
ನಾನೇ ಗಣೇಶನ ವಿಗ್ರಹವನ್ನು ತಯಾರುಮಾಡಿ ಇಡುತ್ತೇನೆ... ನೀನು ಮಲಗು ಎನ್ನಲು ಕಣ್ಣಲಿ ನೀರು ತುಂಬಿಕೊಂಡು...ಸರಿ ಎಂದಳು.
ರಾಜು ಎಲ್ಲಕ್ಕೂ ಬಣ್ಣ ಹಚ್ಚಿ ಒಣಗಿಸಿ... ಹುಲ್ಲಿನ ಮೇಲೆ ಇರಿಸಿದ.
ಎರಡು ದಿನಗಳ ನಂತರ ಅನುಸೂಯ ಹುಷಾರಾದಳು..
ಅಮ್ಮ ಗಣೇಶ ಎಲ್ಲಾ ತಯಾರು.... ಟೆಂಪೋ ತರ್ತೀನಿ... ಎಲ್ಲಾ ತುಂಬಿಸು ನಾನು ಪೇಟೆಯಲ್ಲಿ ಮಾರಿ ಬರುತ್ತೇನೆ.
ನೀನು ರೆಸ್ಟ್ ಮಾಡು ಎಂದ.... ರಾಜು ನಿಂಗೆ ವ್ಯಾಪಾರ ತಿಳಿಯಲ್ಲಾ...ತಡಿ ನಾನು ಬರ್ತೀನಿ ಇಬ್ಬರೂ ಹೋಗೋಣ ಎನ್ನಲು.... ಸರಿ ಅಮ್ಮ ಎಂದ.
ರಾಜು, ಅನುಸೂಯ ಇಬ್ಬರ ಶ್ರಮ ವ್ಯರ್ಥವಾಗಲಿಲ್ಲ... ಎಲ್ಲಾ ಗಣಪತಿಗಳು ವ್ಯಾಪಾರ ಆಗಿ... ಎರಡು ಕಾಸು ಸಂಪಾದನೆ ಆಯಿತು ಎಂದು ಅನುಸೂಯ ಮನದಲ್ಲೇ ದೇವರಿಗೆ ವಂದಿಸಿದರು.
ರಾಜು ನಿನ್ನ ಸಹಕಾರ ಇಲ್ಲದಿದ್ದರೆ.. ನಾನು ಏನು ಮಾಡ್ತಾ ಇದ್ದೆನೋ ಕಂದಾ... ಎನ್ನಲು ಅಮ್ಮ ನೀನು ನನ್ನ ಮತ್ತು ಅಪ್ಪನ ಎಷ್ಟು ಚೆನ್ನಾಗಿ ನೋಡಿಕೋತೀಯಾ....
ನಾನು ನಿನಗೆ ಅಷ್ಟು ಕೂಡ ಮಾಡಬಾರದಾ???
ಇನ್ನು ಮೇಲೆ ಕಾಲೇಜು ಬಿಟ್ಟ ತಕ್ಷಣ ಮನೆಗೆ ಬಂದು ನಿನ್ನ ಕೆಲಸದಲ್ಲಿ ನಾನೂ ಅದೆಷ್ಟೂ ಸಹಾಯ ಮಾಡ್ತೀನಿ ಎಂದ ಮಗನ ತಲೆ ಸವರಿ ಹರಸಿದರು ಅನುಸೂಯ.
