ನಿರ್ಧಾರ....
ನಿರ್ಧಾರ....
ಶ್ರಾವಣ ಮಾಸ..... ಎಲ್ಲೆಡೆ ಹಬ್ಬ ಹರಿದಿನಗಳ ಸಂಭ್ರಮ.....ಫಲ ಪುಷ್ಪಗಳು ಯಥೇಚ್ಛವಾಗಿ ಸಿಗುವ ಕಾಲ....ಘಂ ಎನ್ನುವ ಸೇವಂತಿಗೆ.... ಅಬ್ಬಾ ಎಂತಹ ಸುವಾಸನೆ ಎಂದು ಹೂವನ್ನು ಕೈಯಲ್ಲಿ ಹಿಡಿದು ಆಸ್ವಾದಿಸುತ್ತಿದ್ದವಳಿಗೆ ತಲೆ ಮೇಲೆ ಪಟ್ ಎಂದು ಹೊಡೆತ ಬಿದ್ದಾಗ ಅಮ್ಮಾ ಎಂದು ತಲೆ ಎತ್ತಿ ನೋಡಿದಳು ಕಣ್ಣಲಿ ನೀರು ತುಂಬಿಕೊಂಡು.....
ಅವನೇ..... ಎದುರಿನಲ್ಲಿ ದೈತನಂತೆ ನಿಂತಿದ್ದ....
ಏನೇ ಹೂವನ್ನು ಕೈಯಲ್ಲಿ ಹಿಡಿದು ಮೈ ಮರೆತು ನಿಂತೆ.... ಡ್ಯೂಟಿಗೆ ಹೊತ್ತಾಯಿತು.... ಆಯ್ತಾ ತಿಂಡಿ ಎಂದಾಗ ಹೂ ರೀ ಎಂದು ಅಡುಗೆ ಮನೆಗೆ ಹೋಗಿ ಬಿಸಿ ಬಿಸಿಯಾಗಿ ಹಬೆಯಾಡುವ ಉಪ್ಪಿಟ್ಟಿನ ಜೊತೆ ಮಾಮಿಡಿ ಉಪ್ಪಿನ ಕಾಯಿ ಹಾಕಿ ಗಂಡನ ಮುಂದೆ ಹಿಡಿದಳು ಮೀರಾ.....
ಕೇಶವ.... ಕಾಫಿ ಎಂದ ....ತಂದೆ ಎಂದು ಕಾಫಿ ಲೋಟ ಕೈಗಿಟ್ಟು....ರೀ ಸಂಜೆ ಪಕ್ಕದ ಮನೆಯ ಲಕ್ಷ್ಮಿ ಕುಂಕುಮಕ್ಕೆ ಕರೆದಿದ್ದಾರೆ.... ನೀವು ಬಂದ ಮೇಲೆ ಹೋಗಿ ಬರ್ತೀನಿ....
ನೀವು ಎಷ್ಟು ಹೊತ್ತಿಗೆ ಬರ್ತೀರಾ ಎಂದಳು....
ಹಾ.....ಮಹಾರಾಣಿ ಅವರಿಗೆ ಟೈಂ ಬೇರೆ ಹೇಳ್ಬೇಕೋ???
ಬರ್ತೀನಿ ಎಂದು ಬಿರಬಿರನೆ ಹೊರಟ....
ಮೀರಾ.... ಅಯ್ಯೋ ಮದುವೆ ಯಾಗಿ ವರುಷ ಕಳೆದರೂ ಒಂದು ನಗು ಒಂದು ಸಿಹಿಮಾತು ಏನು ಇಲ್ಲವೇ....
ಅಸಲು ಈ ಮನುಷ್ಯನಿಗೆ ಭಾವನಗಳೇ ಇಲ್ಲವೇ???
ಎಂದುಕೊಂಡಳು.
ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ತನಗೆ... ಅಮ್ಮ ಅವರಿವರ ಮನೆಯಲ್ಲಿ ಅಡುಗೆ ಮಾಡಿ... ತನ್ನನ್ನು ಓದಿಸಿದರು.
ಓದು ಮುಗಿಸಿ ಚಿಕ್ಕ ಪುಟ್ಟ ಕೆಲಸ ಮಾಡುತ್ತಿದ್ದವಳನ್ನು ಆತುರಾತುರವಾಗಿ ಈ ಮನುಷ್ಯನಿಗೆ ಕಟ್ಟಿ ತನ್ನ ಜವಾಬ್ದಾರಿಯನ್ನು ಕಳೆದುಕೊಂಡ ಮೇಲೆ ಸ್ವರ್ಗ ಸೇರಿದರು.
ಬಂಧು ಬಳಗ ಯಾರೆಂದು ಗೊತ್ತಿಲ್ಲದ ಬದುಕು ತನ್ನದು ಎಂದು ಯೋಚಿಸುತ್ತಾ ಕುಳಿತವಳಿಗೆ ...
ಹೊಟ್ಟೆ ಚುರ್ ಎಂದಿತು.... ತಿಳಿ ಸಾರು ಅನ್ನ ಮಾಡಿ ಊಟಮಾಡಿ ಮಲಗಿದ್ದವಳಿಗೆ....ಯಾರೋ ಬಾಗಿಲು ಬಡಿದ ಶಬ್ದ ದಡಬಡಿಸಿ ಎದ್ದು ಹೋಗಿ ತೆರೆದು ನೋಡಿದಾಗ ಕೇಶವ....
ಬೇಗ ಬೇಗ ಮುಖ ತೊಳೆದು ಬಂದು ಬಿಸಿ ಬಿಸಿ ಕಾಫಿ ಜೊತೆ ಗರಿಗರಿಯಾದ ಎರಡು ಕೋಡುಬಳೆ ತಂದು ಗಂಡನ ಮುಂದೆ ಇಟ್ಟಳು.
ಬಾಯಿ ಚಪ್ಪರಿಸುತ್ತಾ ತಿಂದವನು ಎದ್ದು ಎಲ್ಲೋ ರೆಡಿಯಾಗಿ ಹೊರಟವನನ್ನು ....ರೀ ಪಕ್ಕದ ಮನೆಗೆ ಕುಂಕುಮಕ್ಕೆ ಹೋಗಿ ಬರ್ತೀನಿ ಎಂದಳು...
ಸರಿ ಸರಿ ಬೇಗ ಬಂದುಬಿಡು.... ನೋಡು ರಾತ್ರಿ ನಾನು ಬರೋದು ತಡವಾಗುತ್ತೆ... ಎಂದು ಬಿರಬಿರನೆ ಹೊರಟ.
ರಾತ್ರಿ ಹನ್ನೊಂದರ ಆಸುಪಾಸಿರಬಹುದು....ಟಕಟಕ ಬಾಗಿಲು ಬಡಿದಾಗ ... ಆಗ ತಾನೇ ಮಲಗಿದ್ದ ಮೀರಾ ಎದ್ದು ಬಂದು ಬಾಗಿಲು ತೆಗೆದಾಗ ಗಂಡ ಕಂಠ ಪೂರ್ತಿ ಕುಡಿದು ತೂರಾಡುತ್ತಿದ್ದ....
ರೀ..... ನಿಮಗೆ ಎಷ್ಟು ಸರಿ ಹೇಳಿದ್ದೀನೀ.... ಕುಡಿಯಬೇಡಿ ಎಂದು ಎನ್ನಲು.... ರಪ್ಪನೆ ಕೆನ್ನೆಯ ಮೇಲೆ ಬಾರಿಸಿದ....ಕೇಶವ...
ಆ ರಭಸಕ್ಕೆ ತಲೆ ಸುತ್ತಿ ಬಂದಂತಾಯ್ತು..... ಜಾರುತ್ತಿದ್ದ ಕಂಬನಿಯನ್ನು ಒರೆಸಿಕೊಂಡು... ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದಳು.
ಲೇ.... ಬಾಗಿಲು ತೇಗಿಯೆ ಎಂದು ಅರಚಿದ ಕೇಶವನ ಮಾತು ಕೇಳಬಾರದು ಎಂದು ಗಟ್ಟಿಯಾಗಿ ಕಿವಿಮುಚ್ಚಿಕೊಂಡಳು.
ರಾತ್ರಿಯೆಲ್ಲಾ ಹೊರಳಾಡಿ ಹೊರಳಾಡಿ ನಿದ್ದೆ ಇಲ್ಲದೆ ತಲೆ ಸಿಡಿಯುತ್ತಿತ್ತು ....ಕೇಶವ ಏನು ನಡೆದಿಲ್ಲ ಎನ್ನುವಂತೆ ಎದ್ದು ರೆಡಿಯಾಗಿ ನಿಂತವನನ್ನು ಒಮ್ಮೆ ನೋಡಿ ಮೈಯೆಲ್ಲಾ ಉರಿಯಿತು.....
ಲೇ.... ಆಯ್ತಾ ತಿಂಡಿ ಎಂದ.....ಹೂ ಎಂದು ನೆನ್ನೆಯ ಅನ್ನಕ್ಕೆ ಒಗ್ಗರಣೆ ಹಾಕಿ ಕೊಟ್ಟಳು.
ತಿಂದು ಹೊರಟವನ ಕಣ್ಣಲಿ ಒಂದಿಂಚು ಪಶ್ಚಾತಾಪದ ಕುರುಹು ಕಂಡು ಬರಲಿಲ್ಲ....
ಅಂದರೆ ತಾನೊಬ್ಬ ಅನಾಥೆ ತನಗೆ ಹೇಳುವವರು ಕೇಳುವವರು ಯಾರೂ ಇಲ್ಲ ಎಂದರಿತ ಕೇಶವ...ಮನ ಬಂದಂತೆ ನಡೆದುಕೊಳ್ಳುತ್ತಿದ್ದ.
ಇತ್ತೀಚೆಗೆ ಅವನು ನಡುವಳಿಕೆ ಇನ್ನೂ ಹದಗೆಟ್ಟಿತ್ತು...
ಎಲ್ಲಾ ಕೆಲಸ ಮುಗಿಸಿ ರಾತ್ರಿಗೆ ಅಡುಗೆ ಮಾಡಿಟ್ಟವಳನ್ನು
ಕಾಡುತ್ತಿದ್ದ ಪ್ರಶ್ನೆ ಒಂದೇ.... ಇದೆಲ್ಲಾ ಇನ್ನೂ ಎಷ್ಟು ದಿನ.....ಈ ಮನುಷ್ಯ ಖಂಡಿತ ಬದಲಾಗಲ್ಲ....
ಯೋಚಿಸಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದವಳೇ ತನ್ನ ಬಟ್ಟೆ ಬರೆ ಎಲ್ಲಾ ತೆಗೆದುಕೊಂಡು ಮನೆಗೆ ಬೀಗ ಹಾಕಿ ಪಕ್ಕದ ಮನೆಯ ಸುನೀತಳ ಕೈಲಿ ಕೀ ಕೊಟ್ಟು ಬಸ್ಸ್ ನಿಲ್ದಾಣದ ಕಡೆ ನಡೆದಳು....
ಮನಸು ಹೇಳಿತು ಎಲ್ಲಿಗೆ.... ಬುದ್ಧಿ ನಡೆಯಿತು ಬದುಕುವ ಕಡೆಗೆ ನಡೆ ನಿನ್ನವರಾರು ಇಲ್ಲದಿದ್ದರೆ ಏನು ಬದುಕುವ ಛಲವಿಹುದಲ್ಲಾ ನಡೆ ಮುಂದೆ ಮುಂದೆ ಎಂದು.
