ಆಘಾತ
ಆಘಾತ
ರಾಮಚಂದ್ರರಾಯರು ಖ್ಯಾತ ಕ್ರಿಮಿನಲ್ ಲಾಯರ್. ಕೋರ್ಟ್ ನಲ್ಲಿ ಲಾಯರ್ ಆದ್ರೂ ಮನೇಲಿ ನ್ಯಾಯಾಧೀಶರು.ಇವರ ಹಾಕಿದ ಗೆರೆ ದಾಟುವ ಹಾಗಿಲ್ಲ ಅಷ್ಟು ಸ್ಟ್ರಿಕ್ಟ್. ಇವರ ಕೆಳಗೆ ಇಪ್ಪತ್ತು ಜನ ಜೂನಿಯರ್ ಗಳು ಕೆಲಸ ಮಾಡುತ್ತಿದ್ದಾರೆ . ಭಾರಿ ಕೇಸ್ ಗಳು ಗೆದ್ದಾಗೆಲ್ಲ ಸಾಮಾನ್ಯವಾಗಿ ಇವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಇರುತ್ತೆ..ಇನ್ನೂರು ಜನ ಒಟ್ಟಿಗೆ ಕುಳಿತು ಊಟ ಮಾಡುವಷ್ಟು ದೊಡ್ಡ ಹಾಲ್ ನಲ್ಲಿ ಸಾಲಾಗಿ ಊಟಕ್ಕೆ ಕುಳಿತಿದ್ದಾರೆ. ಎಲ್ಲರನ್ನೂ ಮಾತನಾಡಿಸುತ್ತಾ ಬರುತ್ತಿದ್ದಾಗ ಒಬ್ಬ ಕೊಳಕು ಬಟ್ಟೆ ಹಾಕಿಕೊಂಡು ಕೈಯ್ಯಲ್ಲೊಂದು ಬಟ್ಟೆ ಗಂಟು ಇಟ್ಟುಕೊಂಡು ಊಟಕ್ಕೆ ಕುಳಿತಿದ್ದಾನೆ. ಇನ್ನೇನು ಮೊದಲ ತುತ್ತು ಬಾಯಲ್ಲಿ ಇಟ್ಟು ಕೊಳ್ಳಬೇಕೆನ್ನುವಷ್ಟರಲ್ಲಿ ಯಾರೋ ನೀನು ಏಳೋ ಮೇಲೆ ಅಂದರು ರಾಯರು. ಯಾರೋ ಇವನನ್ನ ಒಳಗೆ ಬಿಟ್ಟಿದ್ದು ಅಂತ ಕೂಗಾಡಿದರು . ಅವರ ಜೊತೆಗೆ ಇದ್ದ ಒಬ್ಬ ಜ್ಯೂನಿಯರ್ ಹೇಳ್ದ ಬಿಡಿ ಸಾರ್ ಊಟ ತಾನೇ ಮಾಡ್ಕೊಂಡ್ ಹೋಗ್ಲಿ.ಅವನ ಮಾತು ಕೇಳಲಿಲ್ಲ.ಇನ್ನೇನು ಬಾಯಿಗೆ ಮೊದಲ ತುತ್ತು ಹೋಗ್ಬೇಕು ಅಷ್ಟರಲ್ಲಿ ಕೈ ಹಿಡಿದು ಎಳೆದಿದ್ದಕ್ಕೆ ಹಾಗೆ ಪಕ್ಕಕ್ಕೆ ಉರುಳಿದ ಎಡಗೈಲಿದ್ದ ಬಟ್ಟೆ ಗಂಟಿಗೆ ಕೈ ಒರೆಸಿಕೊಂಡು ಮೇಲೆದ್ದ. ಅಲ್ಲಿದ್ದ ಎಲ್ಲರೂ ಇವರಿಬ್ಬರನ್ನು ನೋಡ್ತಾ ಇದಾರೆ. ಅಲ್ಲಿಂದ ಹೋಗೋವಾಗ ಅವನು ಹೇಳ್ದ . ಹಸಿವು ಅನ್ನೋದು ನಿನಗೆ ಗೊತ್ತಿಲ್ಲ. ಒಂದೇ ತಿಂಗಳಲ್ಲಿ ನೀನೆ ನನಗೆ ಊಟ ಹಾಕುತ್ತೀಯೆ ಆಗ ಈ ಕೋಪವಾಗಲಿ ಸಂತೋಷವಾಗಲಿ ನಿನ್ನಲ್ಲಿ ಇರಲ್ಲ. ಬೇಕಾದ್ರೆ ಬರೆದಿಟ್ಟುಕೊ ಅಂತ ಕೂಗಾಡಿದ ಆಗ ಕೈ ಎತ್ತಿ ಹೊಡೆಯೋದಕ್ಕೆ ಹೋದ್ರು. ಅಲ್ಲಿದ್ದವರೆಲ್ಲಾ ಬಿಡಿ ಸಾರ್ ಅವನೆಲ್ಲೋ ಹುಚ್ಚ ಅಂತ ಕಾಣುತ್ತೆ ಆಂದರು. ಉಳಿದವರನ್ನು ಮಾತನಾಡಿಸಿ ಏನೂ ಆಗೇ ಇಲ್ಲ ಅನ್ನುವಹಾಗೆ ಒಳಗೆ ಹೋದರು.
ಆರು ತಿಂಗಳು ಕಳೆದಿರಬೇಕು ರಾಯರ ಮನೇಲಿ ಮತ್ತೊಂದು ಕಾರ್ಯಕ್ರಮ. ಮಗಳು ಅಳಿಯ ಹೆಚ್ಚಾಗಿ ಓಡಾಡಿ ಎಲ್ಲ ಕೆಲಸ ನಿರ್ವಹಿಸುತ್ತಿದ್ದರು. ಇದ್ದಕ್ಕಿದ್ದಹಾಗೆ ಅಳಿಯನಿಗೆ ಎದೆ ನೋವು . ತಕ್ಷಣ ಹತ್ತಿರವಿದ್ದ ಕ್ಲಿನಿಕ್ ಗೆ ಕರೆದೊಯ್ದರು. ಡಾಕ್ಟರ್ ಇವರಿಗೆ ಚಿರುಪರಿಚಿತರು.ಎಲ್ಲಾ ಚೆಕ್ ಮಾಡಿ ಏನು ಆಗಿಲ್ಲ ಗ್ಯಾಸ್ಟ್ರಿಕ್ ಪ್ರಾಬ್ಲಮ್ ಅಂತ ಹೇಳಿ ಮನೆಗೆ ಹೋಗಿ ಅಂತ ಕಳುಹಿಸಿದರು. ಸ್ವಲ್ಪ ಸಮಯದಲ್ಲೇ ಮತ್ತೆ ತಲೆ ಸುತ್ತು ವಾಂತಿ ಎಲ್ಲರಿಗೂ ಭಯವಾಗಿ ದೊಡ್ಡ ಆಸ್ಪತ್ರೆ ಗ
ೆ ಕಾರಿನಲ್ಲಿ ಕರೆದು ಕೊಂಡು ಹೋಗುವಾಗ ಆಸ್ಪತ್ರೆ ತಲುಪುವ ಮೊದಲೆ ಕೈಕಾಲು ತಣ್ಣಗೆ ಆಗಿಹೋಯ್ತು. ಸದಾ ನಗು ತುಂಬಿದ್ದ ಮನೆಯಲ್ಲಿ ಇಂದು ಸೂತಕದ ಛಾಯೆ ನೀರವ ಮೌನ. ಮುಂದೆ ಏನು ಮಾಡಬೇಕೆಂದೇ ತೋಚುತ್ತಿಲ್ಲ ಮಗಳನನ್ನ ಸಮಾಧಾನ ಮಾಡಲು ಯಾರಿಂದಲೂ ಆಗುತ್ತಿಲ್ಲ.
ಆ ದಿನದ ಕೆಲಸ ಮುಗಿಯಿತು. ವೈಕುಂಠ ಸಮಾರಾಧನೆ ಗೆ ಬಹಳ ಜನ.ಅರ್ಧ ಊರೇ ಸೇರಿದೆ. ಸ್ನೇಹಿತರು ಸಂಭಂದಿಕರು ಅಕ್ಕಪಕ್ಕದವರು ಎಲ್ಲರೂ ಊಟಕ್ಕೆ ಕೂತಿದ್ದಾರೆ. ಭಾರವಾದ ಹೃದಯದಿಂದ ಎಲ್ಲರನ್ನೂನೋಡುತ್ತಾ ಎಲ್ಲಾ ವಿಧಿಲಿಖಿತ ನೋಡಿ ಚೆನ್ನಾಗಿದ್ದ ಮನುಷ್ಯ ಇಂದು ಇಲ್ಲ. ಇದೇ ಜೀವನ ಅಂತ ಸುಲಭವಾಗಿ ಹೇಳಿದರು ಅನುಭವಿಸುವುದು ಕಷ್ಟ. ಅಂತ ಬಹಳ ಹತ್ತಿರದ ಸಂಬಂಧಿಕರಿಗೆ ಹೇಳುತ್ತಿದ್ದಾಗ ರಾಯರ ಕಣ್ಣಿಗೆ ಅಂದು ಹೇಳಿ ಹೋಗಿದ್ದ ಅದೇ ಕೊಳಕು ಬಟ್ಟೆಯ ವ್ಯಕ್ತಿ ಕಂಡ. ಹಿಂದಿನದೆಲ್ಲಾ ನೆನಪಾಯ್ತು. ಇದೇನು ಅವನು ಹೇಳಿದ್ದಕ್ಕೆ ಹೀಗೆಲ್ಲಾ ಆಯಿತೇ ಅಥವಾ ಕಾಕತಾಳೀಯವೋ ಅಂತ ಅವನನ್ನೇ ನೋಡುತ್ತಾ ಒಂದು ನಿಮಿಷ ನಿಂತು ಅವನ ಬಳಿ ಹೋಗಲು ಏಕೋ ಹೆದರಿದರು . ಅಷ್ಟರಲ್ಲಿ ಅವನು ಊಟ ಮಾಡುತ್ತಿದ್ದುದನ್ನು ದೂರದಿಂದಲೇ ನೋಡುತ್ತಿದ್ದಾಗ.ಯಾರೋ ಒಳಗೆ ಕರೆದ ಹಾಗಾಗಿ ಆಕಡೆ ನಡೆದರು. ಆ ವ್ಯಕ್ತಿಯ ಹತ್ತಿರ ಮಾತನಾಡಬೇಕೆಂದು ಮನಸು ಹೇಳುತ್ತಿದೆ ಆದರೆ ಮತ್ತೆ ಏನಾದರೂ ಹೇಳುತ್ತಾನೆ ಎನ್ನುವ ಭಯ ಕಾಡುತ್ತಿದೆ. ಯಾರೊಂದಿಗೂ ಹೇಳಿಕೊಳ್ಳದೆ ತಾವೇ ಕೊರಗುವಂತಾಯ್ತು. ಅಷ್ಟರಲ್ಲಿ ಒಬ್ಬರಾದ ಮೇಲೆ ಒಬ್ಬರು ಬಂದು ಹೋಗಿ ಬರುವುದಾಗಿ ಹೇಳುತ್ತಿದ್ದಾರೆ . ಅವನೂ ಬರಬಹುದೆಂದು ಭಯವಿತ್ತು. ಆದರೇ ಬರಲಿಲ್ಲ ಸ್ವಲ್ಪ ನಿರಾಳ ವಾಯ್ತು. ಯಾರೋ ರಾಯರನ್ನು ಸಾರ್ ನಿಮ್ಮ ಕಕ್ಷಿದಾರನಂತೆ ಯಾರೋ ನಿಮ್ಮನ್ನ ನೋಡಬೇಕೆಂದು ಹೊರಗೆ ನಿಂತಿದಾನೆ ಬನ್ನಿ ಅಂದರು. ಹೊರಗೆ ಹೋಗಿ ನೋಡಿದರೆ ಅದೇ ವ್ಯಕ್ತಿ. ಏನು ರಾಯರೇ ಜ್ಞಾಪಕ ಬಂತ. ನನ್ನ ಇಡೀ ಸಂಸಾರವನ್ನು ನಿರ್ನಾಮ ಮಾಡಿದವರು ನೀವೇ ತಾನೇ.ನಾನು ಒಬ್ಬ ಇನ್ನೂ ಸತ್ತಿಲ್ಲ .ದೆವ್ವ ಆಗಿ ಆದ್ರೂ ನಿಮ್ಮನ್ನ ಕಾಡೇ ಕಾಡ್ತೀನಿ..ಇದು ಪ್ರಾರಂಭ ಅಷ್ಟೇ ಅಂತ ಹೋದ. ರಾಯರು ಹಿಂದಿನ ಆ ದಿನಗಳಲ್ಲಿ ಆಸ್ತಿಗಾಗಿ ಅಣ್ಣತಮ್ಮಂದಿರ ಕೊಲೆ ಮಾಡಿದವನ ಬಗ್ಗೆ ವಾದ ಮಾಡಿ ಗೆಲ್ಲಿಸಿಕೊಟ್ಟು ಅಪಾರ ಹಣಗಳಿಸಿದ್ದು ಜ್ಞಾಪಕ ಬಂದು ಒಂದು ನಿಮಿಷ ಗದ್ಗದಿತರಾದರು.