ತುಂಬಿದ ಸಂಸಾರ. ಭಾಗ 7.
ತುಂಬಿದ ಸಂಸಾರ. ಭಾಗ 7.
ರಾಜೇಶ ತನ್ನ ಹೆಂಡತಿ ಜ್ಯೋತಿ ಮಾಡುವ ಜಗಳದಿಂದಾಗಿ , ಆಕೆಯ ವಿಚಿತ್ರ ಸ್ವಭಾವದ ವರ್ತನೆಗಳಿಂದಾಗಿ ರೋಸಿ ಹೋಗಿದ್ದ. ಹಾಗಾಗಿ ಅಪ್ಪ , ಅಣ್ಣ , ಹಾಗೂ ಅಮ್ಮನೊಂದಿಗೆ ಮಾತನಾಡಿದರೆ ಏನಾದರೂ ಪರಿಹಾರವಾದರೂ ಸಿಗುತ್ತದೆಯೆಂದು ಆತ ಅಂದು ರಾತ್ರಿ ಅಪ್ಪನ ಕೋಣೆಯಲ್ಲಿ ಮಾತನಾಡಲು ಬಂದು ಅಪ್ಪನೆದುರು ನಿಂತನು.
ರಾಜೇಶ್: ಅಪ್ಪ , ನಿಮ್ಮತ್ರ ಒಂದು ವಿಷಯದ ಕುರಿತು ಮಾತಾಡಬೇಕಿತ್ತು.
ಅಪ್ಪ: ಏನು ವಿಷ್ಯ ರಾಜಾ , ಅಂತದ್ದೇನಾಯ್ತು?
ರಾಜೇಶ್: ಏನಿಲ್ಲ ಅಪ್ಪ , ಅದು.. ಅದೂ..
ಶಂಕರ್: ಅಪ್ಪ ಅದು ಅವನು ಎನ್ ಹೇಳ್ತಿದ್ದಾನೆ ಅಂದ್ರೆ , ಜ್ಯೋತಿ ಈ ಮನೆಗೆ ಹಾಗೂ ಮನೆ ಜನರೊಂದಿಗೆ ಹೊಂದಿಕೊಳ್ಳಲು ಕಷ್ಟ ಪಡ್ತಿದಾಳೆ ಅಂತ ಹೇಳ್ತಿದ್ದಾನೆ ಅಷ್ಟೇ.
ಅಪ್ಪ: ಹೌದೇನೋ ರಾಜಾ , ನಿಮ್ಮಣ್ಣ ಹೇಳ್ತಿದ್ದದ್ದು ನಿಜಾನಾ?
ರಾಜೇಶ್: ಹೌದು ಅಪ್ಪ ಅದರ ಜೊತೆಗೆ ಮತ್ತೊಂದು ಇದೆ.
ಅಪ್ಪ: ಮತ್ತೊಂದಾ? ಏನೋ ಅದು?
ಅಮ್ಮ: ನನಗೂ ಸ್ವಲ್ಪ ಅನುಮಾನ ಬಂದಿತ್ತು ರಾಜಾ .
ರಾಜೇಶ್: ಅಪ್ಪ ಅದು ಜ್ಯೋತಿಗೆ ಇಲ್ಲಿ ಹೊಂದಿಕೊಳ್ಳೋಕೆ ಆಗ್ತಾ ಇಲ್ವಂತೆ , ಇಷ್ಟೊಂದು ಜನರಿರೋದಕ್ಕೆ ಸರಿ ಆಗ್ತಿಲ್ವಂತೆ , ಜೊತೆಗೆ ಈ ಅವಿಭಕ್ತ ಕುಟುಂಬ ಅಂದ್ರೇನೇ ಅವಳಿಗೆ ಇಷ್ಟ ಇಲ್ವಂತೆ.
ಶಂಕರ್: ಹಂಗಂದ್ರೆ ಏನೋ ಅರ್ಥಾ?
ರಾಜೇಶ್: ಅಣ್ಣಾ , ಅವಳು ಒಂಟಿಯಾಗಿ ಬೆಳೆದಿದ್ದರಿಂದ ಇಲ್ಲಿ ಹೊಂದಿಕೊಳ್ಳೋಕೆ ಕಷ್ಟ ಆಗ್ತಿದೆ ಅಂತ ನಾನು ತಿಳ್ಕೊಂಡಿದ್ದೆ , ಆದರೆ ಅವಳಿಗೆ ಈ ಕೂಡು ಕುಟುಂಬದ ಮೇಲೆ ನಂಬಿಕೆನೆ ಇಲ್ವಂತೆ.
ಶಂಕರ್: ಹಾಗಾದ್ರೆ ಮುಂದೆ?
ಅಪ್ಪ: ಶಂಕರಾ , ನೀ ತಡಿ ಮಗಾ , ರಾಜೇಶ, ನಾನು ಒಂದು ವಾರದ ಮುಂಚೆನೇ ನಿನ್ನ ಹೆಂಡತಿ ಜೊತೆಗೆ ಮಾತಾಡಿದಿನಿ ನಾನು , ಸೂಕ್ಷ್ಮವಾಗಿ ನೋಡಿದ ನಾನು ಈಗಾಗಲೇ ಕರೆಸಿ ಮಾತಾಡಿ ಆಗಿದೆ. ಟೈಮ್ ಕೊಡಿ ಮಾವಾ ತಿದ್ದಿಕೊಳ್ತನಿ ಅಂದವಳು ಈಗ ಈ ರೀತಿ ಮಾಡಿದರೆ ಏನು ಮಾಡುವುದು?
ಅಮ್ಮ: ರೀ ಯೋಚನೆ ಮಾಡಿ ಮುಂದಿನ ನಿರ್ಧಾರ ಮಾಡಿ , ಯಾರು ದುಡುಕಬೇಡಿ.
ರಾಜೇಶ್: ಅಪ್ಪ , ಮಾತೆತ್ತಿದರೆ ನಮ್ಮ ಅಪ್ಪನ ಮನೆಯಲ್ಲಿ ಹಾಗಿದ್ದೆ , ಹೀಗಿದ್ದೆ , ಅಂತ ಭಾಷಣ ಮಾಡ್ತಾ ನಿಲ್ತಾಳೆ. ಯಾವಾಗಲೂ ಅವರಪ್ಪನ ಮನೆದೇ ಹೇಳ್ತಾ ಇರೋಳು ಇನ್ಮೇಲೆ ಅಲ್ಲಿಯೇ ಇರ್ಲಿ ಬಿಡಿ. ನನಗಂತೂ ಸಾಕಾಗಿ ಹೋಗಿದೆ. ನೆಮ್ಮದಿಯೇ ಇಲ್ಲದಂತಾಗಿ ಬಿಟ್ಟಿದೆ. ಯಾವ ದೇವರ ಶಾಪವೋ ಬರುತ್ತಿದ್ದ ನಿದ್ದೆಯೂ ಬರ್ತಾ ಇಲ್ಲ. ಅವಳ ಸಣ್ಣಪುಟ್ಟ ತಪ್ಪುಗಳು ದೊಡ್ಡದಾಗುವ ಮುಂಚೆಯೇ ಅವರಪ್ಪನ ಮನೆಗೆ ಕಳುಹಿಸಿ ಕೊಡುವುದು ಸೂಕ್ತವಲ್ಲವೇ?
ಶಂಕರ್: ಅವಸರ ಮಾಡ್ಬೇಡ ರಾಜಾ , ನೋಡೋಣ ಬುದ್ದಿ ಹೇಳಿ ಸಮಯ ಕೊಟ್ಟರೆ ತಿದ್ದಿಕೊಳ್ಳಬಹುದು.
ರಾಜೇಶ್: ಅಣ್ಣಾ ,ನೀವ್ ತಿಳ್ಕೊಂಡ ಹಾಗೆ ಅವಳು ಇಲ್ಲ , ತುಂಬಾ ಒರಟಾಗಿ ಮಾತಾಡ್ತಾಳೆ. ಇಲ್ಲಿ ಯಾರಿಗೂ ಬೆಲೆ ಕೊಡ್ತಿಲ್ಲ. ತುಂಬಿದ ಮನೆಯಲ್ಲಿ ಹುಳಿ ಹಿಂಡುವ ತರ ಇದ್ದಾಳೆ. ನಮ್ಮ ಮನೆ ಎಂತದ್ದು ?ಅಪ್ಪನ ವರ್ಚಸ್ಸು ಎಂತದ್ದು ? ಇದನ್ನೆಲ್ಲ ಹೇಳಿದರೆ ಕೇಳಿ ತಿಳಿದುಕೊಳ್ಳುವ ಸಂಯಮವೂ ಇಲ್ಲ ಅವಳಿಗೆ. ನನಗಂತೂ ಸಾಕಾಗಿ ಹೋಗಿದೆ ಅಣ್ಣಾ.
ಮುಂದುವರೆಯುವುದು..
