ತುಂಬಿದ ಸಂಸಾರ.ಭಾಗ 11.
ತುಂಬಿದ ಸಂಸಾರ.ಭಾಗ 11.
ಹೆಣ್ಣು ಮಕ್ಕಳಿಬ್ಬರು ಖುಷಿಯಿಂದ ಅಪ್ಪನ ಮಾತಿಗೆ ಬೆಲೆ ಕೊಟ್ಟು ಮದುವೆಗೆ ಒಪ್ಪಿಗೆ ಕೊಟ್ಟಿದ್ದರು. ಆದರೆ ಮನೆಯಲ್ಲಿ ಯಾರಿಗೂ ಇಷ್ಟವಿಲ್ಲದಿದ್ದರೂ ಸಹ ತಾವೂ ಒಪ್ಪಿದವರಂತೆ ಬಂದ ಜನರ ಎದುರಲ್ಲಿ ನಾಟಕೀಯವಾಗಿ ನಗುತ್ತ ಇದ್ದರು. ಇದೆಲ್ಲವನ್ನು ಸೂಕ್ಷ್ಮವಾಗಿ ಸಿದ್ದಪ್ಪನವರು ನೋಡಿದ್ದರು. ಏನಾದರೂ ಮಾಡಲಿ ಎಲ್ಲರೂ ನಗುತ್ತ ಇದ್ದಾರಲ್ಲ ಅಷ್ಟೇ ಸಾಕು ಎಂದು ಮನಸ್ಸಿನಲ್ಲಿ ಸಂತಸ ಪಟ್ಟಿದ್ದರು.
ಮುಂದೆ ದಿನಗಳೆದಂತೆ ಮನೆಯಲ್ಲಿ ಎರಡನೆಯ ಸೊಸೆಯ ಕಿರಿಕಿರಿ ಹೆಚ್ಚಾಗತೊಡಗಿತು. ತನ್ನ ಓರಗಿತ್ತಿಯಾದ ಜಾನಕಿಯ ಜೊತೆಗೂ ಜಗಳ ಮಾಡತೊಡಗಿದಳು. ಆಕೆಗೆ ಹೇಗಾದರೂ ಮಾಡಿ ಬೇರೆ ಮನೆ ಮಾಡುವುದಿತ್ತು. ಅದಕ್ಕೆಲ್ಲ ಆಕೆಯ ಗಂಡ ಮತ್ತು ಮಾವ ಅವಕಾಶ ಕೊಡಲಿಲ್ಲ. ಅದು ಅವಳಿಗೆ ಸ್ವಲ್ಪ ಅಸಮಾಧಾನ ಮಾಡಿತ್ತು. ತವರಿಗೆ ಹೋಗುವ ಬೆದರಿಕೆ ಹಾಕಿದಳು. ಮಾವನಿಗೆ ಸ್ವಲ್ಪ ಮನೆ ಮರ್ಯಾದೆಯ ಹೆದರಿಕೆ ಇದೆ , ಅದಕ್ಕಾಗಿ ನಾನು ತವರಿಗೆ ಹೋಗುವ ಬೆದರಿಕೆ ಹಾಕಿದರೆ ಬೇರೆ ಮನೆ ಮಾಡುವ ನನ್ನ ಆಸೆಗೆ ಒಪ್ಪಿಗೆ ಕೊಡುವರೇನೋ ಎಂದು ತಿಳಿದು ಜ್ಯೋತಿ ಸ್ವಲ್ಪ ದ್ವನಿ ಏರಿಸಿದಳು. ಆದರೆ , ಆಕೆಯ ಗಂಡ ಮತ್ತು ಮಾವ ಅವಳ ಅಪ್ಪನೊಂದಿಗೆ ಈ ವಿಷಯದ ಕುರಿತು ಮಾತಾಡಿದ್ದರು. ಜ್ಯೋತಿಯ ಅಪ್ಪ ಮಗಳಿಗೆ ಸರಿಯಾಗಿ ಬೈಯ್ದಿದ್ದರು. ಅವಳ ಆಸೆಗೆ ತಾವೆಂದೂ ಸಮ್ಮತಿ ಕೊಡುವುದಿಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದರು. ಇದರಿಂದ ರಾಜೇಶ ಆಕೆಗೆ ಮನಸ್ಸಿಗೆ ಬಂದಂತೆ ಮಾಡೆಂದು ಹೇಳಿ ಕೆಲಸಕ್ಕೆ ಹೊರಟನು. ಮಾವನೂ ಸುಮ್ಮನೇ ಇದ್ದಿದ್ದರಿಂದ ಆಕೆಗೆ ಇನ್ನೂ ಕೋಪ ಉಕ್ಕಿತು. ಏನು ಮಾಡಕ್ಕಾಗದೆ ಸುಮ್ಮನಿರಲೇ ಬೇಕಾಯಿತು.
ಇಷ್ಟರಲ್ಲಿ ತನ್ನಿಬ್ಬರು ಮದುವೆ ಆಗದ ಗಂಡು ಮಕ್ಕಳಿಗೆ ತನ್ನ ಅಕ್ಕ ಮತ್ತು ತಂಗಿಯ ಹೆಣ್ಣುಮಕ್ಕಳನ್ನು ತಂದುಕೊಂಡು ಮದುವೆ ಮಾಡಲು ಎಲ್ಲರನ್ನು ಒಪ್ಪಿಸಿದ್ದರು ಈ ಶೆಟ್ಟರು. ಇಬ್ಬರು ಗಂಡು ಮಕ್ಕಳು ಹಾಗೂ ಗೀತಾ ಲತಾಳ ಮದುವೆಯನ್ನು ಒಟ್ಟಿಗೆ ಅದ್ಧೂರಿಯಾಗಿ ಮಾಡಿ ಮುಗಿಸಿದರು.
ಈಗ ಮನೆಯಲ್ಲಿ ನಾಲ್ವರು ಸೊಸೆಯರು , ಮಕ್ಕಳು , ಎಲ್ಲರೊಂದಿಗೆ ಸಿದ್ದಪ್ಪ ದಂಪತಿಗಳು ತುಂಬಿದ ಕುಟುಂಬವನ್ನು ಕಟ್ಟಿಕೊಂಡಿದ್ದರು. ಈ ನಡುವೆ ಜ್ಯೋತಿ ಗರ್ಭಿಣಿ ಆದಳು. ಮನೆಗೆ ಮೊಮ್ಮಗುವಿನ ಆಗಮನದ ಸೂಚನೆ ಬಂದ ತಕ್ಷಣವೇ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿ ಆಗಿತ್ತು. ಆ ವೇಳೆಗೆ ಜ್ಯೋತಿ ರಾಣಿಯಾದಳು. ಎಲ್ಲರೂ ಜ್ಯೋತಿಯ ಆರೈಕೆ ಮಾಡುವವರೇ. ಜ್ಯೋತಿ ಅದು ಬೇಕಾ? ಜ್ಯೋತಿ ಇದು ಬೇಕಾ? ಜ್ಯುಸ್ ಕುಡಿತೀರಾ ಎಂದು ಒಬ್ಬರು ಕೇಳಿದರೆ, ಹಣ್ಣು ಹೆಚ್ಚಿ ಕೊಡಲಾ ಎಂದು ಮತ್ತೊಬ್ಬರು ಕೇಳುತ್ತಿದ್ದರು. ಜಾಣಕಿಯಂತೂ ಜ್ಯೋತಿಗೆ ಒಂದು ಕೆಲಸ ಮಾಡಲೂ ಬಿಡುತ್ತಿರಲಿಲ್ಲ. ಮನೆ ಮಗಳಂತೆ ಎಲ್ಲರೂ ಆರೈಕೆ ಮಾಡುತ್ತಿರುವುದನ್ನು ಕಂಡ ಜ್ಯೋತಿಯ ಮನಸ್ಸು ತುಂಬಾ ನೊಂದುಕೊಂಡಿತು. ತಾನೆಂತಹ ತಪ್ಪು ಮಾಡಿದೆನೆಂದು ಪಶ್ಚಾತಾಪ ಪಟ್ಟಳು. ಈ ಮನೆಗೆ ತಕ್ಕ ಸೊಸೆಯಲ್ಲ ಎಂದು ತನ್ನನ್ನು ತಾನೇ ಬೈಯ್ದುಕೊಂಡಳು. ತನ್ನಿಂದಾದ ತಪ್ಪಿಗೆ ತುಂಬಾನೇ ವ್ಯಥೆ ಪಟ್ಟಳು. ಮೊದಲಿಗೆ ಮಾವನ ಹತ್ತಿರ ಹೋಗಿ ಕಾಲಿಗೆ ಬಿದ್ದು ಕ್ಷಮೆ ಕೇಳಿದಳು. ಅತ್ತೆಗೂ ಕ್ಷಮೆ ಕೇಳಿದಳು. ಅತ್ತೆ ಮಾವನ ಸಮಾಧಾನದ ಪ್ರೀತಿಯ ಮಾತು ಕೇಳಿ ಕಣ್ಣೀರು ಉಕ್ಕಿ ಬಂತು. ಗಂಡನ ಕಾಲಿಗೆ ಬಿದ್ದು ಗಳಗಳನೆ ಅತ್ತಳು. ತನ್ನ ತಪ್ಪಿನ ಕುರಿತು , ತನ್ನ ಹೊಲಸು ಬುದ್ಧಿಯ ಕುರಿತು ಮಾತಾಡಿ ಕ್ಷಮೆ ಕೋರಿದಳು. ರಾಜೇಶ ಪ್ರೀತಿಯಿಂದ ತನ್ನ ಕುಟುಂಬದ ಕುರಿತು ಮತ್ತೊಮ್ಮೆ ತಿಳಿಸಿ ಹೇಳಿ ಆಕೆಗೆ ಕೂಡು ಕುಟುಂಬದ ಬಗ್ಗೆ ಆಕೆಗಿರುವ ಕೀಳರಿಮೆ ಮತ್ತು ತಪ್ಪು ತಿಳುವಳಿಕೆಯನ್ನು ದೂರಮಾಡಿದನು. ಆಗ ಆಕೆಗೆ ಕೂಡು ಕುಟುಂಬದಲ್ಲಿ ತಾನು ಇರಬೇಕು ಮತ್ತು ತನ್ನ ಮಗು ಈ ಕೂಡು ಕುಟುಂಬದಲ್ಲಿಯೇ, ಎಲ್ಲರೊಂದಿಗೆ ಬೆಳೆಯಬೇಕೆಂದು ಆಸೆ ಪಟ್ಟಳು.ಈ ಎಲ್ಲ ಬದಲಾವಣೆಗಳನ್ನು ಗಮನಿಸಿದ ಮನೆಯವರೆಲ್ಲರೂ ಜ್ಯೋತಿಯನ್ನು ಮನಸ್ಪೂರ್ತಿ ಅಪ್ಪಿಕೊಂಡರು.
ಕೊನೆಗೆ ಮನೆಯಿಂದ ಹೊರಹೋಗಬೇಕೆಂದ ಸೊಸೆಯು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟು ತವರಿಗೂ ಹೋಗದೆ ಗಂಡನ ಮನೆಯಲ್ಲೇ ಬಾಣಂತನ ಮಾಡಿಸಿಕೊಂಡಳು.
ಈಗಂತೂ ಸಂತೋಷ , ಖುಷಿ , ನೆಮ್ಮದಿ ಎಲ್ಲವೂ ಸಿದ್ದಪ್ಪನವರ ಕುಟುಂಬದಲ್ಲಿ ತುಂಬಿತುಳುಕುತ್ತಿತ್ತು. ನೆಮ್ಮದಿಯ ನಿರಾಳ ಭಾವವು ಸಿದ್ದಪ್ಪನವರ ಮನದಲ್ಲಿ ಮನೆ ಮಾಡಿತ್ತು. ಚಿಕ್ಕ ಮಕ್ಕಳಿಬ್ಬರ ಮದುವೆಯ ನಂತರ ಇರುವ ಆಸ್ತಿಯನ್ನೆಲ್ಲ ಭಾಗ ಮಾಡಿ ಕೊಟ್ಟು ತಾನು ಮತ್ತು ತನ್ನ ಧರ್ಮಪತ್ನಿಯೊಡಗೂಡಿ ತೀರ್ಥಯಾತ್ರೆ ಕೈಗೊಳ್ಳುವ ಯೋಚನೆ ಮಾಡಿದ್ದರು. ಆದರೀಗ ಸೊಸೆಯ ಮನ ಪರಿವರ್ತನೆ ಆಗಿ ಮತ್ತೆ ಮೊದಲಿನ ಚೆಂದದ ಕುಟುಂಬ ತನ್ನದಾಯಿತೆಂದು ಖುಷಿಯಿಂದ ಬೀಗಿದರು.
ಹೀಗೆ ಸಿದ್ದಪ್ಪನವರ ಅಂದದ ಕುಟುಂಬ ಚೆಂದದ ಕುಟುಂಬವಾಗಿ, ನಾಲ್ಕಾರು ಮಂದಿಗೆ ಮಾದರಿ ಕುಟುಂಬವಾಯಿತು.
***************************************
ಧನ್ಯವಾದಗಳು
