STORYMIRROR

Shridevi Patil

Drama Inspirational Others

4  

Shridevi Patil

Drama Inspirational Others

ತುಂಬಿದ ಕುಟುಂಬ. ಭಾಗ 6.

ತುಂಬಿದ ಕುಟುಂಬ. ಭಾಗ 6.

2 mins
384

ರಾಜೇಶ ಎಷ್ಟೇ ಸಮಾಧಾನವಾಗಿ ಬುದ್ದಿ ಹೇಳಿದರೂ , ಅರ್ಥ ಮಾಡಿಸಿದರೂ ಯಾವುದಕ್ಕೂ ಒಪ್ಪದೇ , ತನ್ನ ಮೊಂಡು ವಾದವೇ ಸರಿಯೆನ್ನುತ್ತ ಜ್ಯೋತಿ ಎಲ್ಲ ಕುಟುಂಬದಲ್ಲೂ ತಮ್ಮ ತಮ್ಮ ಬದುಕಿಗೆ ಪ್ರಾಮುಖ್ಯತೆ ಕೊಟ್ಟೆ ಕೊಡುತ್ತಾರೆ , ನೀವು ಮಾತ್ರ ನಿಮ್ಮ ಅಣ್ಣ , ತಮ್ಮ ಎಂದೆನ್ನುತ್ತ ನನ್ನನ್ನು ಕಡೆಗಣಿಸುತ್ತಿದ್ದೀರಿ , ನಾವೂ ಕೂಡ ನಮಗೆ ಅಂತ ಬದುಕೋಣ , ನಮಗಾಗಿ ಹಣವನ್ನು ಕೂಡಿಡೋಣ. ನೀವಂತೂ ದುಡಿದು , ಬಂದ ಸಂಬಳವನ್ನೆಲ್ಲ ನಿಮ್ಮ ತಂದೆ ಕೈಗೆ ಒಪ್ಪಿಸಿಬಿಡ್ತೀರಿ , ನನಗೆ ಒಂದು ಕರ್ಚೀಫು ಕೊಡಿಸುವುದಾದರೂ ಅದಕ್ಕೆ ಹತ್ತು ರೂಪಾಯಿ ನಿಮ್ಮ ಅಪ್ಪನೇ ಕೊಡಬೇಕು , ಏನ್ರಿ ಇದು? ನನಗೆ ಇದು ಇಷ್ಟ ಆಗಲ್ಲ ಎನ್ನುತ್ತಾ ಸ್ವಲ್ಪ ದ್ವನಿ ಏರಿಸಿದಳು. ಆಗ ರಾಜೇಶ ಕೋಪ ಬಂದು ಕೆನ್ನೆಗೆ ಒಂದು ಏಟು ಬಾರಿಸಿದನು. ಒಂದೇ ಏಟು ಅಷ್ಟೇ , ಅದಕ್ಕೆ ಅವಳು ಅವನೊಂದಿಗೆ ಅದೆಷ್ಟು ಜಗಳ ಮಾಡಿದಳು ಎಂದರೆ ಆಕೆಯನ್ನು ಆತ ತವರಿಗೆ ಕಳುಹಿಸಲೇಬೇಕೆಂದು ಪಟ್ಟು ಹಿಡಿದಳು.


ತೀರಾ ಸಾಕಾಗಿ ರಾಜೇಶ , ಮದುವೆಯಾಗಿ ಇನ್ನೂ ಸರಿಯಾಗಿ ಆರು ತಿಂಗಳ ಸಹ ಕಳೆಯಲಿಲ್ಲ. ಇದೇನು ಶಿವಾ ಎಂದು ಬಹು ನೊಂದುಕೊಂಡನು. ಆದರೆ ಆತ ತನ್ನ ಕುಟುಂಬವನ್ನು ಆಕೆಗೋಸ್ಕರ ಬಿಟ್ಟು ಕೊಡಲು ತಯಾರಿರಲಿಲ್ಲ. ಇತ್ತೀಚಿಗೆ ಬಂದವಳು ಇವಳು. ನನ್ನ ಕುಟುಂಬದ ನನ್ನವರ ಬಗ್ಗೆ ಮಾತಾಡಲು ಇವಳಿಗೇನು ಗೊತ್ತು , ಮತ್ತು ಇವಳಿಗೇನು ಅಧಿಕಾರವಿದೆ , ನನ್ನವರು ಹೇಗೆಂದು ನನಗೆ ತಿಳಿದಿದೆ , ಚಿಕ್ಕಂದಿನಿಂದ ಇಲ್ಲಿಯವರೆಗೂ ನೋಡುತ್ತಿದ್ದೇನೆ ನನ್ನ ಅಪ್ಪ ಯಾರಿಗೂ ಕೇಡು ಬಯಸಿಲ್ಲ , ಕೇಡು ಮಾಡಿಲ್ಲ , ಎಲ್ಲರೂ ತನ್ನವರೆಂದು ನಡೆದುಕೊಳ್ಳುತ್ತಿರುವಾಗ ಜ್ಯೋತಿ ಈಗೀಗ ಬಂದವಳು , ಹುಚ್ಚಿಯಂತೆ ಏನೋ ಮಾತಾಡುತ್ತಾಳೆ ಅಂತ ನಾನು ಚಿಂತಿಸುವುದು ಬೇಡ. ಅಪ್ಪನೊಂದಿಗೆ ಕುಳಿತು ಈ ಸಮಸ್ಯೆಯ ಕುರಿತು ಮಾತಾಡಲೇ ಬೇಕು. ಜೊತೆಗೆ ಅಮ್ಮ ಅಣ್ಣನೂ ಇರಬೇಕು. ಆಗ ಏನಾದರೂ ಪರಿಹಾರ ಸಿಗಬಹುದು ಎಂದು ಯೋಚಿಸಿದನು.


ಅಷ್ಟರಲ್ಲಾಗಲೇ ಅಪ್ಪನಿಗೆ ರಾಜೇಶನ ಕೋಣೆಯಲ್ಲಿ ಆಗುತ್ತಿರುವ ಮಾತಿನ ಚಕಮಕಿ ಬಗ್ಗೆ ಚಿಕ್ಕ ಮಗಳು ಅಪ್ಪನಿಗೆ ತಿಳಿಸಿರುತ್ತಾಳೆ. ( ಚಿಕ್ಕ ಮಗಳು ಅತ್ತಿಗೆಯನ್ನು ಊಟಕ್ಕೆ ಕರೆಯಲೆಂದು ಕೋಣೆಗೆ ಬರುತ್ತಿರುವಾಗ , ಅಣ್ಣ ಅತ್ತಿಗೆಯ ಮಾತುಗಳನ್ನು ಕೇಳಿ , ಜಗಳ ಜೋರೆ ಆಗುತ್ತಿದೆ ಎಂದು ಓಡಿ ಹೋದವಳೇ ಅಪ್ಪನಿಗೆ ಎಲ್ಲವನ್ನು ತಿಳಿಸಿರುತ್ತಾಳೆ.) ಆಗ ರಾಜೇಶ ರಾತ್ರಿ ಎಲ್ಲರೂ ಊಟ ಆದಮೇಲೆ , ತಮ್ಮ ತಮ್ಮ ಕೋಣೆಗೆ ಮಲಗಲು ಹೋದರು. ಅಣ್ಣ ಶಂಕರನಿಗೆ ಸೂಕ್ಷ್ಮವಾಗಿ ಹೇಳಿದ್ದರಿಂದ , ಶಂಕರ ಜಾನಕಿಗೆ ಮಲಗಲು ಹೇಳಿ ಅಪ್ಪನ ಕೋಣೆಗೆ ನಡೆದನು. ಅಲ್ಲಿ ಅಪ್ಪ ಅಮ್ಮ ಜೊತೆಯಾಗಿ ಕುಳಿತು ಎಲೆ ಅಡಿಕೆ ಹಾಕಿಕೊಳ್ಳುತ್ತಿದ್ದರು.


ಆಗ ಶಂಕರ ಕೋಣೆಯೊಳಗೆ ಬಂದಿದ್ದನ್ನು ನೋಡಿ ಸಿದ್ದಪ್ಪನವರು ಯಾಕೋ ಮಗನೇ ಎನ್ನುತ್ತಾ ಹತ್ತಿರ ಕರೆದರು. ಅಷ್ಟರಲ್ಲಿ ರಾಜೇಶ ಬಂದು ಅಪ್ಪ ನಾನು ನಿಮ್ಮಹತ್ತಿರ ಸ್ವಲ್ಪ ಮಾತನಾಡಬೇಕು ಎಂದು ಹೇಳಿದನು. ಆಗ ಸಿದ್ದಪ್ಪನವರು ಎನ್ ವಿಷ್ಯಾ ರಾಜಾ ಎಂದು ಕೇಳುತ್ತ ಮಂಚ ಬಿಟ್ಟು ಬಂದು ತಮ್ಮ ಕುರ್ಚಿಗೆ ಆಸೀನರಾದರು.



ರಾಜೇಶ , ತನ್ನ ಅಪ್ಪ , ಅಮ್ಮ , ಅಣ್ಣನಿಗೆ ಏನು ಹೇಳಿದನು, ಅದಕ್ಕೆ ಅವರ ಉತ್ತರವೇನು, ಎಂಬುದನ್ನು ಮುಂದಿನ ಭಾಗದಲ್ಲಿ ನೋಡೋಣ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Drama