STORYMIRROR

Shridevi Patil

Drama Inspirational Others

4  

Shridevi Patil

Drama Inspirational Others

ತುಂಬಿದ ಕುಟುಂಬ. ಭಾಗ 5.

ತುಂಬಿದ ಕುಟುಂಬ. ಭಾಗ 5.

2 mins
393

ಸಿದ್ದಪ್ಪನವರ ಎರಡನೆಯ ಸೊಸೆಯಾದ ಜ್ಯೋತಿಗೆ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಳ್ಳಲು ತುಸು ಕಷ್ಟವಾಗುತ್ತಿದೆಯೆಂದು ಸೂಕ್ಷ್ಮವಾಗಿ ಸಿದ್ದಪ್ಪನವರಿಗೆ ತಿಳಿದಾಗ , ತುಂಬಾ ಸಮಾಧಾನವಾಗಿ , ಜ್ಯೋತಿಯನ್ನು ಕರೆದು ಮಾತಿಗಿಳಿದರು. ನೋಡು ಜ್ಯೋತಿ ಇಲ್ಲಿ ಇರುವವರೆಲ್ಲ ನಿನ್ನವರೇ , ನೀನು ನಮ್ಮೆಲ್ಲರಲ್ಲಿ ಒಬ್ಬಳು. ನೀನು ಮನ ಬಿಚ್ಚಿ ಎಲ್ಲರೊಂದಿಗೆ ಮಾತನಾಡು , ನಿನಗೆ ಬರತಕ್ಕಂತಹ ಕೆಲಸಗಳನ್ನು ಮಾಡು , ನಿನ್ನ ನಾದಿನಿಯರಿಬ್ಬರು ನಿನಗಿಂತ ಚಿಕ್ಕವರಿದ್ದಾರೆ , ಅವರೊಂದಿಗೆ ಕುಳಿತು ಅವರಿಗೂ ನೀ ಓದಿ ತಿಳಿದುಕೊಂಡಿದ್ದನ್ನು ಹೇಳಿಕೊಡು , ನಿನ್ನ ಅಮ್ಮನಂತೆ ಇರುವ ನಿನ್ನ ಅತ್ತೆಯೊಂದಿಗೆ ಕೆಲಸಗಳನ್ನು ಹೇಳಿಸಿಕೊಂಡು , ಅಡುಗೆ ಮಾಡುವುದನ್ನು ಹೇಳಿಸಿಕೊಂಡು ಕಲಿತುಕೊ , ಏನಾದರೂ ಬೇಸರವಾದರೆ ನಿನ್ನ ಅತ್ತೆಯ ಮಡಿಲಲ್ಲಿ ತಲೆಯಿಟ್ಟು ಮಲಗಿ ಸಮಾಧಾನ ಮಾಡಿಕೋ , ನಾವಿಬ್ಬರು ಅತ್ತೆ ಮಾವ ಅಂತ ನೋಡಬೇಡ , ನಿನ್ನ ಅಪ್ಪ ಅಮ್ಮನಂತೆ ನಾವಿಬ್ಬರು. ಯಾವುದಕ್ಕೂ ಸಂಕೋಚ ಮಾಡಿಕೊಳ್ಳಬೇಡ. ನೀನು ನಮ್ಮ ಲತಾ , ಗೀತಾಳಂತೆ ನಮ್ಮ ಮಗಳೇ ಎಂದು ತಿಳಿಸಿ ಹೇಳಿ ಸಮಾಧಾನ ಮಾಡಿದರು.


ಆಗ ಜ್ಯೋತಿ , ಹಾಗೇನಿಲ್ಲ ಮಾವಾ , ಸ್ವಲ್ಪ ಸಮಯ ಕೊಡಿ ಹೊಂದಿಕೊಳ್ಳುವೆ , ಹೊಸ ಜಾಗ , ಹೊಸ ಜನ ಅದಕ್ಕೆ ಹೀಗಾಗ್ತಿದೆ ಅಂತ ಹೇಳಿ ಜಾರಿಕೊಂಡಳು ಜ್ಯೋತಿ. ಆದರೆ ಜ್ಯೋತಿಗೆ ಕೂಡು ಕುಟುಂಬ ಇಷ್ಟವೇ ಇರಲಿಲ್ಲ. ಒಬ್ಬಳೇ ಬೆಳೆದಿದ್ದರಿಂದ ಆಕೆಗೆ ಒಬ್ಬಳೇ ಇರುವುದು , ತಾನು ತನ್ನ ಗಂಡ ಮಾತ್ರ ಇರುವುದು , ಈ ಜಾಯಿಂಟ್ ಫ್ಯಾಮಿಲಿ ಇಷ್ಟವೇ ಇರಲಿಲ್ಲ. ಆದರೆ , ಒಮ್ಮೆಲೇ ಗಂಡನಿಗೆ ಇದನ್ನೆಲ್ಲ ಹೇಳಲು ಕಷ್ಟ. ಆ ಮನೆಯಲ್ಲಿ ವೈಯಕ್ತಿಕ ಎಂಬ ಪದದ ಬಳಕೆ ತುಂಬಾ ಕಮ್ಮಿ ಇತ್ತು. ಹೀಗಿರುವಾಗ ಮದುವೆಯಾದ ಹೊಸತರಲ್ಲಿ ತಾನು ಗಂಡನ ಮುಂದೆ ಬೇರೆ ಇರುವ , ಒಬ್ಬರೇ ಇರುವ ಬಗ್ಗೆ ಮಾತನಾಡುವುದು ಸರಿಯಲ್ಲ , ಈ ಸಮಯ ಸೂಕ್ತವೂ ಅಲ್ಲ ಎಂದು ಸ್ವಲ್ಪ ಸುಮ್ಮನಾದಳು.


ಆದರೆ , ಆಕೆಯ ವರ್ತನೆ ರಾಜೇಶನಿಗೆ ಒಮ್ಮೊಮ್ಮೆ ಮುಜುಗರವನ್ನುಂಟು ಮಾಡುತ್ತಿತ್ತು. ಎಷ್ಟೋ ಸಲ ರಾಜೇಶ ಸಂಭಾಳಿಸುತ್ತಿದ್ದ. ಒಮ್ಮೊಮ್ಮೆ ಕೋಣೆಯಲ್ಲಿ ಕರೆದು ಜ್ಯೋತಿಗೆ ಸಿಟ್ಟು ಮಾಡಿ ಬೈಯ್ದು ಬುದ್ಧಿ ಹೇಳುತ್ತಿದ್ದ. ಆ ಸಮಯಕ್ಕೆ ಅತ್ತು , ನಾಟಕ ಮಾಡಿ ತಪ್ಪಾಯ್ತು ಅಂತ ಕೇಳಿ ಮತ್ತದೇ ರಾಗ ತೆಗೆಯುತ್ತಿದ್ದಳು. ಗಂಡನನ್ನು ಹೇಗಾದರೂ ಮಾಡಿ ತಾನು ಹೇಳುವ ಮಾತಿಗೆ ಕೇಳುವಂತೆ ಮಾಡಿಕೊಳ್ಳಬೇಕೆಂದು ಏನೇನೋ ಹರಸಾಹಸ ಮಾಡುತ್ತಿದ್ದಳು. ಆದರೆ , ಆಕೆಗೆ ಗೊತ್ತಿರಲಿಲ್ಲ ಅವರೆಲ್ಲ ಸಿದ್ದಪ್ಪನವರು ಬೆಳೆಸಿದ ಮಕ್ಕಳೆಂದು. ಆದರೂ ರಾಜೇಶ ಜ್ಯೋತಿಗೆ ಆಕೆ ಮಾಡುತ್ತಿರುವ ಕೆಲಸ ಸರಿಯಿಲ್ಲವೆಂದು ಬೈಯ್ದು , ತಿಳಿಸಿ ಹೇಳಿ ತನ್ನ ಕುಟುಂಬದ ಕುರಿತು ಹೇಳಿದನು.


ಆಗ ಜ್ಯೋತಿ ನೋಡಿ ನಾನು ನೀವು ನೌಕರಿ ಮಾಡುತ್ತೀರಿ , ನೌಕರಿ ಮಾಡುವ ಊರಲ್ಲಿ ನಾನು ನೀವು ಇಬ್ಬರೇ ಇರಬಹುದು ಎಂದು ಅಂದುಕೊಂಡೆ ಮದುವೆ ಆಗಿದ್ದು , ಈ ಅವಿಭಕ್ತ ಕುಟುಂಬದಲ್ಲಿ ನನಗೆ ನಂಬಿಕೆಯೂ ಇಲ್ಲ , ಪ್ರೀತಿಯೂ ಇಲ್ಲ. ಇಲ್ಲಿ ಎಲ್ಲರೂ ಒಳಗೊಳಗೇ ತಮ್ಮ ತಮ್ಮ ಬಗ್ಗೆಯೇ ಯೋಚಿಸುತ್ತಿರುತ್ತಾರೆ , ನಾನು ಎಷ್ಟೊಂದು ಸಿನಿಮಾಗಳಲ್ಲಿ ನೋಡಿಲ್ಲ ಬಿಡಿ ಎಂದು ಎದುರುತ್ತರ ಕೊಟ್ಟಳು. ರಾಜೇಶನಿಗೆ ತುಂಬಾ ಸಿಟ್ಟು ಬಂದು ಕೆನ್ನೆಗೆ ಒಂದು ಬಾರಿಸಿದನು. ತಿಳಿ ಹೇಳಿದರೂ ತಿಳಿದುಕೊಳ್ಳಲಾರದ ವಯಸ್ಸೇನೂ ಅಲ್ವಲ್ಲಾ ನಿಂದು ಎಂದು ಬೈಯ್ದನು.


ಹಾಗಾದರೆ ಜ್ಯೋತಿಯ ಮುಂದಿನ ನಡೆ ಏನು ಅಂತ ಮುಂದಿನ ಭಾಗದಲ್ಲಿ ನೋಡೋಣ.




Rate this content
Log in

Similar kannada story from Drama