STORYMIRROR

Shridevi Patil

Drama Inspirational Others

4  

Shridevi Patil

Drama Inspirational Others

ತುಂಬಿದ ಕುಟುಂಬ. ಭಾಗ 2.

ತುಂಬಿದ ಕುಟುಂಬ. ಭಾಗ 2.

2 mins
485

ಸಿದ್ದಪ್ಪ ಶೆಟ್ಟರು ಮಕ್ಕಳೆಲ್ಲರಿಗೂ ಯಾವಾಗಲೂ ಒಳ್ಳೆಯದನ್ನೇ ಕಲಿಸುತ್ತ , ಉತ್ತಮ ನಾಗರೀಕರನ್ನಾಗಿ ಮಾಡುವಲ್ಲಿ ಬಹಳ ಶ್ರಮ ವಹಿಸಿದರು. ಯಾರಾದರೂ ಬಂದು , " ಏನ್ರಿ ಶೆಟ್ಟರೆ , ನಿಮ್ಮ ಮಕ್ಕಳು ಬೆಳಿತಿದ್ದಾರೆ , ಚಿಕ್ಕ ಮಕ್ಕಳ ತರ ಅದೇನು ಇನ್ನು ಬುದ್ದಿ ಹೇಳ್ತಿದೀರಾ , ಬಿಟ್ಟ ಬಿಡ್ರಿ , ಅವರು ದೊಡ್ಡವರಾದ್ರು " ಅಂದ್ರೆ ಸಿದ್ದಪ್ಪ ಶೆಟ್ರು , ಕಲಿಯೋಕೆ ವಯಸ್ಸಿನ ಮಿತಿ ಇಲ್ಲ ಮಾರಾಯ್ರೆ , ಮನಶ್ಯಾ ಸಾಯೋವರಿಗೂ ಕಲಿತಾನೆ ಇರ್ತಾನೆ , ಮಕ್ಕಳಾದ್ರೂ ಸರಿ , ದೊಡ್ಡವರಾದ್ರೂ ಸರಿ ಅಂತ ತಿರುಗೇಟು ಕೊಟ್ಟೆ ಬಿಡುತ್ತಿದ್ದರು. ಅದು ತಿರುಗೇಟು ಅನ್ನೋದಕ್ಕಿಂತ ಹೆಚ್ಚಾಗಿ ಸತ್ಯವಾದ ಮಾತೇ ಅಲ್ಲವೇ.


ಶೆಟ್ಟರು ತಮ್ಮ ಮಕ್ಕಳು ಎಲ್ಲರೂ ಓದಿನಲ್ಲೇ ಮುಂದುವರಿಯಬೇಕೆಂದು ಪಟ್ಟು ಹಿಡಿದವರಲ್ಲ. ಯಾಕೆಂದರೆ ಅವರು ಸರಸ್ವತಿ ಮಾತೇ ಎಲ್ಲರನ್ನೂ ಕೈ ಹಿಡಿಯುವುದಿಲ್ಲ ಎಂದು ಹೇಳುತ್ತಿದ್ದರು. ಆದ್ದರಿಂದ ಓದು ಎನ್ನುವುದು ಜ್ಞಾನ ಹೆಚ್ಚಿಸುವುದಕ್ಕೆ ಇರಲಿ , ಅದರ ಜೊತೆಗೆ ಜೀವನೋಪಾಯಕ್ಕೆ ಯಾವುದಾದರೂ ಒಂದು ಕೆಲಸವೂ ಇರಲಿ. ಸಮಯ , ಸಂದರ್ಭ ಹೀಗೆಯೇ ಇರುತ್ತದೆ ಎಂದು ಹೇಳೋಕಾಗಲ್ಲ ಎಂದು ಮಕ್ಕಳಿಗೆ ಶಿಕ್ಷಣದ ಜೊತೆಗೆ ಉಪಜೀವನಕ್ಕೆ ಬೇಕಾದ ಕೆಲವೊಂದು ಸಣ್ಣ ಪುಟ್ಟ ಕೆಲಸ ಮಾಡುವುದನ್ನು ಹೇಳಿಕೊಡುತ್ತಿದ್ದರು.


ನಾಲ್ಕು ಜನ ಗಂಡು ಮಕ್ಕಳು ಎಷ್ಟೊಂದು ಅನ್ಯೋನ್ಯೆತೆಯಿಂದ ಬದುಕುತ್ತಿದ್ದರೆಂದರೆ ಒಬ್ಬರನ್ನೊಬ್ಬರು ಬಿಟ್ಟು ಇರಲಾರದಷ್ಟು ಖುಷಿಯಿಂದ ಇರುತ್ತಿದ್ದರು. ಮೊದಲ ಮಗ ಬೆಳೆದು ದೊಡ್ಡವನಾಗುತ್ತಿದ್ದಂತೆ ಆತನಿಗೆ ಒಂದು ಸಣ್ಣ ಕಿರಾಣಿ ಅಂಗಡಿ ಹಾಕಿ ಕೊಟ್ಟು ಚಿಕ್ಕದಾಗಿ ಒಂದು ವ್ಯಾಪಾರ ಆರಂಭ ಮಾಡಿಸಿ ಕೊಟ್ಟರು ಶೆಟ್ಟರು. ಅದೊಂದು ಚಿಕ್ಕ ಊರಾಗಿದ್ದರಿಂದ ಎಲ್ಲರೂ ಸಣ್ಣ ವಸ್ತು ಬೇಕಾದರೂ ಪಕ್ಕದ ಊರಿಗೆ ಹೋಗಬೇಕಾಗಿತ್ತು. ಹಳ್ಳಿಯ ಜನರಿಗೂ ಉಪಯೋಗ ಆಗುವಂತೆ , ತನ್ನ ಮಗನಿಗೂ ಅನುಕೂಲ ಆಗುವಂತೆ ಆ ಒಂದು ಕಿರಾಣಿ ಅಂಗಡಿ ಕೈ ಹಿಡಿಯಿತು.


ಓದಿದ್ದು ಅಲ್ಪವಾದರೂ , ಜೀವನ ಮಾಡಲು ಬುದ್ಧಿಶಕ್ತಿಯೇ ಮುಖ್ಯವಲ್ಲವೇ. ಹಾಗೆ ದೊಡ್ಡ ಮಗನಾದ ಶಂಕರ್ ಶೆಟ್ಟರ್ ಒಂದು ಜೀವನದ ಹಾದಿ ಹಿಡಿದನು. ಆತನಲ್ಲಿರುವ ಬುದ್ಧಿಶಕ್ತಿಯನ್ನು ಚೆನ್ನಾಗಿ ಉಪಯೋಗಿಸಿಕೊಂಡು ತನ್ನ ಪುಟ್ಟ ಅಂಗಡಿಯನ್ನು ದಿನದಿಂದ ದಿನಕ್ಕೆ ದೊಡ್ಡದು ಮಾಡುವತ್ತ ಶ್ರಮಿಸಿದನು. ತನ್ನ ತಂದೆಯಂತೆ ಆತನೂ ಬಡವರನ್ನು, ಕೈಲಾಗದವರನ್ನು ಕಂಡರೆ ತುಂಬಾ ಮರಗುತ್ತಿದ್ದನು. ತನ್ನಿಂದಾದ ಸಹಾಯವನ್ನು ಮಾಡುತ್ತಿದ್ದನು. ಕಾಳು ಕಡಿ ಕೊಟ್ಟು ಕಳುಹಿಸುತ್ತಿದ್ದನು. ಶಂಕರನನ್ನು ಕಂಡರೆ ಎಲ್ಲರೂ ತಂದೆಗೆ ತಕ್ಕ ಮಗ ಎಂದು ಹೇಳುತ್ತಿದ್ದರು.


ಈ ಮಾತು ಸಿದ್ದಪ್ಪ ಶೆಟ್ಟರ ಕಿವಿಗೆ ಬಿದ್ದೊಡನೆ ಅದೇನೋ ಒಂದು ಗತ್ತಲ್ಲಿ , ಎದೆ ಸೆಟೆಸಿ , ಒಂದು ಹಮ್ಮಿನಲ್ಲಿ ಓಡಾಡುತ್ತಿದ್ದರು. ತನ್ನ ನಾಲ್ಕು ಮಕ್ಕಳಲ್ಲಿ ಮೊದಲನೆಯ ಮಗ ಹೀಗೆ , ಇವನಂತೆಯೇ ಉಳಿದ ಮೂವರು ಕೂಡ ಆಗಲಿ ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಿದ್ದರು.


ಅದು ನಿಜವೇ ಹೌದು. ಎಲ್ಲ ಅಪ್ಪ ಅಮ್ಮನಿಗೆ ಇದೇ ಆಸೆ ಇರುತ್ತದೆ. ತಮ್ಮ ಮಕ್ಕಳೆಲ್ಲರೂ ಬೆಳೆದು , ತಮ್ಮ ಹೆಸರು ಬೆಳೆಸಿ ,ಅಂತವರ ಅಪ್ಪ ಇವರು ಅಂತ ಹೇಳಲಿ ಎಂದೇ ಬಯಸುತ್ತಾರೆ. ಮಕ್ಕಳಿಂದ ತಮ್ಮನ್ನು ಜನರು ಗುರುತಿಸಿದರೆ , ಆಗ ಅವರಿಗಾಗುವ ಆನಂದ ಮತ್ತೆಲ್ಲಿಯೂ ದೊರಕಲಾರದು. ಇಲ್ಲಿ ಸಿದ್ದಪ್ಪನವರೂ ಸಹ ಅದನ್ನೇ ಬಯಸುತ್ತಿದರು.


ಅದೇನೋ ಹೇಳುತ್ತಾರಲ್ಲಾ , ಎಲ್ಲರೂ ಒಂದೇ ತರನಾಗಿ ಇರಲ್ಲ. ಐದು ಬೆರಳು ಸಮನಾಗಿಲ್ಲ. ಹಾಗೆಯೇ ಮನುಷ್ಯರೆಲ್ಲರ ಅಭಿರುಚಿ , ಭಾವನೆಗಳು ಸಹ ಬೇರೆ ಬೇರೆ ಆಗಿಯೇ ಇರುತ್ತವೆ.


ಹಾಗಾದರೆ ಮುಂದಿನ ಭಾಗದಲ್ಲಿ ಸಿದ್ದಪ್ಪನವರ ಉಳಿದ ಮಕ್ಕಳ ಅಭಿರುಚಿಗಳ ಬಗ್ಗೆ ನೋಡೋಣ..




Rate this content
Log in

Similar kannada story from Drama