Shridevi Patil

Drama Inspirational Others

4  

Shridevi Patil

Drama Inspirational Others

ತುಂಬಿದ ಕುಟುಂಬ . ಭಾಗ 1.

ತುಂಬಿದ ಕುಟುಂಬ . ಭಾಗ 1.

2 mins
475


ಅದೊಂದು ತುಂಬಿದ ಕುಟುಂಬ. ಮನೆ ತುಂಬಾ ಜನರು. ಸಂತೋಷ , ನಗು ತುಂಬಿ ತುಳುಕುತ್ತಿತ್ತು. ನೆಮ್ಮದಿ ಎನ್ನುವುದು ಕಾಲು ಮುರಿದು ಆ ಮನೆಯಲ್ಲಿಯೇ ಇತ್ತೇನೋ ಎನ್ನುವಷ್ಟು ನೆಮ್ಮದಿ ಆ ಮನೆಯಲ್ಲಿತ್ತು. ಹಬ್ಬ ಹರಿದಿನಗಳ ಆಚರಣೆ ವೇಳೆ ತುಂಬಾ ಗದ್ದಲದ ಬೀಡಾಗಿರುತ್ತಿತ್ತು.


ಸಿದ್ದಪ್ಪ ಶೆಟ್ಟರು ಊರಲ್ಲಿ ಅಷ್ಟೇ ಅಲ್ಲದೆ , ಸುತ್ತ ಹತ್ತಾರು ಕಡೆ ಹೆಸರು ಮಾಡಿದ ದೊಡ್ಡ ಕುಟುಂಬದ ಹಿರಿ ತಲೆ. ಅವರ ಮಾತೆಂದರೆ ವೇದ ವಾಕ್ಯವಾಗಿತ್ತು. ಅದು ಮನೆಯಲ್ಲಾಗಿರಲಿ ಅಥವಾ ಊರಲ್ಲಿ ಆಗಿರಲಿ. ಯಾವುದೇ ನಿರ್ಧಾರ , ನಿರ್ಣಯ ಆಗಬೇಕಾದರೂ ಅಲ್ಲಿ ಸಿದ್ದಪ್ಪ ಶೆಟ್ಟರ ಮುಂದಾಳತ್ವ ಇರಲೇಬೇಕಾಗಿತ್ತು. ನ್ಯಾಯಕ್ಕೆ ಬದ್ಧರಾಗಿ , ಅನ್ಯಾಯಕ್ಕೆ ಜಾಗ ಕೊಡದ ಸಿದ್ದಪ್ಪ ಅವರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು , ಊರಿನ ಸರ್ವತೋಮುಖ ಅಭಿವೃದ್ಧಿ ಮಾಡುವುದರಲ್ಲಿ ನಿರತರಾಗಿರುತ್ತಿದ್ದರು.

ಯಾವುದೇ ಒಂದು ಕೆಲಸಕ್ಕೆ ಹಣದ ಅವಶ್ಯಕತೆ ಇದ್ದರೆ , ಸಿದ್ದಪ್ಪನವರು ತಮ್ಮ ಸ್ವಂತದ ಹಣ ನೀಡಿ ಆ ಕೆಲಸ ಮುಗಿಯುವಂತೆ ಮಾಡುತ್ತಿದ್ದರು. ಹೀಗಾಗಿ ಆ ಊರಲ್ಲಿ ಸಿದ್ದಪ್ಪ ಶೆಟ್ಟರು ಎಂದರೆ ಎಲ್ಲರೂ ಗೌರವ , ಪ್ರೀತಿ ಕೊಟ್ಟು ಆದರಿಸುತ್ತಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಿದ್ದಪ್ಪನವರು ಬೇಕಾಗಿದ್ದರು.


ಹೊರಗಡೆ ಹೀಗೆ ಹೆಸರು ಮಾಡಿದ ಸಿದ್ದಪ್ಪ ಶೆಟ್ಟರು ಮನೆಯಲ್ಲಿಯೂ ಸಹ ಎಲ್ಲ ಮಕ್ಕಳೂ, ಮೊಮ್ಮಕ್ಕಳು , ಎಲ್ಲರನ್ನು ಒಂದೇ ತರನಾಗಿ ನೋಡಿಕೊಳ್ಳುತ್ತಿದ್ದರು. ಯಾವುದರಲ್ಲಿಯೂ ಭೇದಭಾವ ಮಾಡದೆ ಮನೆಯಲ್ಲಿ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು. ತಮ್ಮನ ಮಕ್ಕಳಾಗಲಿ, ತನ್ನ ಮಕ್ಕಳಾಗಲಿ ಯಾರೇ ಆದರೂ ಸರಿ , ಅವರೆಲ್ಲರಿಗೂ ಒಂದೇ ಸಮನಾಗಿ ಪ್ರೀತಿ ಹಂಚುತ್ತಿದ್ದರು. ಅಕ್ಕ ತಂಗಿಯರನ್ನು ವರ್ಷಕ್ಕೇರಡು ಬಾರಿ ತವರಿಗೆ ಕರೆಯಿಸಿ , ಸ್ವಲ್ಪ ದಿನ ತವರಲ್ಲಿ ಉಳಿಸಿಕೊಂಡು , ಅವರಿಗೆ ಬಟ್ಟೆ ಬರೆ ಕೊಡಿಸಿ , ಎಣ್ಣೆ ಸ್ನಾನ ಮಾಡಿಸಿ , ಕೈ ತುಂಬಾ ಚುಕ್ಕೆ ಬಳೆ ಇಡಿಸಿ , ಆಮೇಲೆ ಮಡಿಲಕ್ಕಿ ತುಂಬಿಸಿ , ಊಟಕ್ಕೆ ಬುತ್ತಿ ರೊಟ್ಟಿ ಕಟ್ಟಿಸಿ ಮರಳಿ ಅವರ ಗಂಡನ ಮನೆಗೆ ಸ್ವತಃ ತಾವೇ ಕಳುಹಿಸಿ ಬರುತ್ತಿದ್ದರು. ಈ ಸಿದ್ದಪ್ಪ ಶೆಟ್ಟರ ಸ್ವಭಾವ ಮೆಚ್ಚುವಂತಹದ್ದು ಎಂದು ಊರಲ್ಲಿ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಇವರಿಗೆ ನಾಲ್ಕು ಜನ ಗಂಡು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು. ಶಂಕರ್ ಶೆಟ್ಟರ್, ರಾಜೇಶ್ ಶೆಟ್ಟರ್, ವಸಂತ್ ಶೆಟ್ಟರ್ ,


ಕಿರಣ್ ಶೆಟ್ಟರ್ ಇವು ಮಕ್ಕಳಿಗೆ ತಾವೇ ಆರಿಸಿ ಇಟ್ಟಂತಹ ಹೆಸರುಗಳು. ಇನ್ನು ಹೆಣ್ಣು ಮಕ್ಕಳಿಗೆ ಲತಾ , ಗೀತಾ ಅಂತ ಹೆಸರಿಟ್ಟಿದ್ದರು. ಗಂಡು ಮಕ್ಕಳನ್ನು ಓದಿನ ಜೊತೆಗೆ ಗರಡಿ ಮನೆಗೂ ಬಿಡುತ್ತಿದ್ದರು. ಅಲ್ಲಿ ಮೈ ಕೈ ದಂಡಿಸಿ , ಸ್ವಲ್ಪ ಕಟ್ ಮಸ್ತಾಗಿ ಬೆಳೆಯಲಿ ಎಂದು. ಇನ್ನು ಹೆಣ್ಣು ಮಕ್ಕಳಿಗೆ ಹೊಲಿಗೆ ತರಭೇತಿ ಕೊಡಿಸಲು ಹೆಂಡತಿ ಲಕ್ಷ್ಮೀದೇವಿಗೆ ಹೇಳಿದ್ದರು. ಯಾರು ಏನೇ ಮಾಡಿದರೂ ಅದು ಮನೆಗೆ ಮತ್ತು ತಮಗೆ ಗೌರವ , ಮರ್ಯಾದೆ ತರುವಂತದ್ದಿರಬೇಕು. ನಾಲ್ಕಾರು ಮಂದಿಗೆ ಉಪಯೋಗವಾಗುವಂತಹ ಕೆಲಸ ಮಾಡಿರೆಂದು ಆಗಾಗ ಎಲ್ಲ ಮಕ್ಕಳನ್ನೂ ಕೂರಿಸಿಕೊಂಡು ಬುದ್ದಿ ಹೇಳುತ್ತಿದ್ದರು. ಒಟ್ಟಿನಲ್ಲಿ ಸಿದ್ದಪ್ಪ ಶೆಟ್ಟರು ಸಂಸ್ಕಾರ ನೀಡುವಲ್ಲಿ , ಬುದ್ದಿ ತಿಳಿಸಿಕೊಡುವಲ್ಲಿ , ರೀತಿ ನೀತಿ ಪಾಲಿಸಲು ತಿಳಿಹೇಳುವಲ್ಲಿ ಬಲು ಉತ್ಸುಕರಾಗಿರುತ್ತಿದ್ದರು.


ಮುಂದುವರೆಯುವುದು..





Rate this content
Log in

Similar kannada story from Drama