ಸತ್ಯದ ಬೆಲೆ
ಸತ್ಯದ ಬೆಲೆ
(ಇದೊಂದು ಸತ್ಯ ಘಟನೆ ಆಧಾರಿತ ಕಥೆ )
ಒಂದೂರಲ್ಲಿ ಒಂದು ಹೆಂಗಸು ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಅವಳಿಗೊಬ್ಬ ಕುಡುಕ ಗಂಡ. ಮತ್ತು ಮಗಳು. ಮಗಳನ್ನ ಹೇಗಾದರೂ ವಿದ್ಯಾವಂತೆಯಾಗಿ ಮಾಡಬೇಕೆಂದು ಬಹಳ ಕಷ್ಟ ಪಡುತ್ತಿದ್ದಳು. ಮನೆಯೆಲ್ಲಾ ಹುಡುಕಿ ಎಲ್ಲಿ ಇದ್ದರೂ ಹೇಗಾದರೂ ಕದ್ದು ಕುಡಿದು ಹಾಳುಮಾಡುತ್ತಿದ್ದ ಅವಳ ಗಂಡ.
ಸತ್ಯ ಮತ್ತು ನಿಷ್ಟೆಯಿಂದ ಜೀವನ ಮಾಡುವುದನ್ನ ಅಮ್ಮನಿಂದ ಕಲಿತಿದ್ದಳು ಮಗಳು. ಒಮ್ಮೆ ಶಾಲೆಗೆ ರಜೆ ಇದ್ದುದರಿಂದ ಮತ್ತು ಅಮ್ಮನಿಗೆ ಜ್ವರಹೆಚ್ಚಾಗಿದ್ದುದರಿಂದ
ಮಗಳೇ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಳು. ಅಲ್ಲಿಗೆ ಒಬ್ಬ ವೃಧ್ದರು ಬಂದು ತಾಜಾ ಹಣ್ಣುಗಳು ಬೇಕೆಂದರು. ಅದಕ್ಕೆ ಇಲ್ಲ ನಮ್ಮಲ್ಲಿರುವ ಯಾವಹಣ್ಣುಗಳು ತಾಜಾ ಅಲ್ಲ. ಕಾರಣ ಇದು ಮೂರು ನಾಲ್ಕು ದಿನ ಹಿಂದಿನದು ಎಂದಳು.
ಪಕ್ಕದ ಅಂಗಡಿಯವನು ಇದನ್ನ ನೋಡಿ ಇಲ್ಲಿ ಬನ್ನಿ ನಾನು ಕೊಡುತ್ತೀನಿ ತಾಜಾ ಹಣ್ಣು ಇಂದೇ ಬಂದಿದೆ ಅಂದ. ಅವನ ಬಳಿಯೇ ತೆಗೆದುಕೊಂಡು ಹೋದರು. ಮನೆಗೆ ಹೋಗಿ ನೋಡಲು ಅರ್ಧ ಹಣ್ಣುಗಳು ಕೆಟ್ಟು ಹೋಗಿತ್ತು. ಮಾರನೇ ದಿನ ಅದೇ ರೀತಿ ಬಂದು ಈ ಹುಡುಗಿಯ ಅಂಗಡಿಯಲ್ಲಿ ಈ ದಿನ ಏನಾದರೂ ತಾಜಾ ಹಣ್ಣುಗಳು ಬಂದಿದಿಯೇ ಅಂತ ಕೇಳಿದರು. ಅದಕ್ಕೆ ಇಲ್ಲ ತಾಜಾ ಹಣ್ಣು ತರುವುದಕ್ಕೆ ನಮಲ್ಲಿ ಹಣ ಇಲ್ಲ. ಅಮ್ಮ ಬೇರೆ ಹಾಸಿಗೆ ಹಿಡಿದಿದ್ದಾಳೆ ಎಂದಳು. . ನಾನು ಶಾಲೆಗೆ ಹೋಗ್ಬೇಕು. ಅಪ್ಪಾ ನೋಡಿದ್ರೆ ದುಡ್ಡು ಸಿಕ್ಕರೆ ಸಾಕು ಕುಡಿಯಕ್ಕೆ ಹೋಗ್ತಾರೆ ಅಂತ ಹುಡುಗಿ ಸತ್ಯವಾದ ವಿಷಯವನ್ನ ತಿಳಿಸಿದಳು. ಆ ಹಿರಿಯರಿಗೆ
ಇವಳ ನಿಷ್ಠೆ ಮತ್ತು ಸತ್ಯದ ಮಾತುಗಳು ಬಹಳ ಇಷ್ಟವಾಯ್ತು. ಇರುವ ಹಣ್ಣನ್ನ ನಾನು ತೆಗೆದು ಕೊಳ್ಳುತ್ತೀನಿ. ಇರೋದನ್ನೆಲ್ಲ ಕೊಟ್ಟುಬಿಡು ಅಂತ ಹೇಳಿ ಐವತ್ತು ರೂಪಾಯಿ ಕೊಟ್ಟರು. ಆ ಹುಡುಗಿ ಇಲ್ಲಾ ಸರ್ ಇದರ ಬೆಲೆ ಇಪ್ಪತ್ತು ರೂಪಾಯಿ ಮಾತ್ರ. ಬೇಡಾಂತ ಮೂವತ್ತು ರೂಪಾಯಿ ಹಿಂದುರಿಗಿಸದಳು. ಪಕ್ಕದ ಅಂಗಡಿಯವನಿಂದ ಅವಳ ಮನೆ ಎಲ್ಲಿರುವುದೆಂದು ತಿಳಿದು ಮಾರನೇದಿನ ಅವಳ ಅಮ್ಮನನ್ನ ಒಳ್ಳೆಯ ಆಸ್ಪತ್ರೆಗೆ ಸೇರಿಸಿ ತಾವೇ ಹಣ ಕೊಟ್ಟು ಗುಣಮುಖಳಾದ ಮೇಲೆ ಸ್ವಲ್ಪ ಹಣ ಕೊಟ್ಟು ವ್ಯಾಪಾರ ಹೆಚ್ಚು ಮಾಡಲು ಹೇಳಿದರು. ಓದಲು ಆ ಹುಡುಗಿಗೆ ಸಹಾಯವನ್ನೂ ಮಾಡಿದರು. PUC ಆದ ಮೇಲೆ ಅವಳು ಸರ್ಕಾರಿ ಕೆಲಸಕ್ಕೆ ಸೇರುವ ಅಪೇಕ್ಷೆ ತಿಳಿಸಿದಳು. ಅವರು ಅದಕ್ಕೂ ಸಹಕರಿಸಿದರು. ಸಂಜೆ ಕಾಲೇಜ್ ನಲ್ಲಿ ಓದಿ M. A ಮುಗಿಸಿ IPS ಟ್ರೇನಿಂಗ ಮುಗಿಸಿ ದೊಡ್ಡ ಹುದ್ದೆ ಹಿಡಿದಳು. ಈ ಕಡೆ ಅಂಗಡಿಯು ದೊಡ್ಡದಾಗಿ ವ್ಯಾಪಾರವು ಚೆನ್ನಾಗಿ ನಡೆಯುತ್ತಿತ್ತು. ಅಪ್ಪ ಕುಡಿತ ಹೆಚ್ಚಾಗಿ ತೀರಿಕೊಂಡ. ಅಂಗಡಿ ಪಕ್ಕದ ಮನೆಯನ್ನ ತಾವೇ ಖರೀದಿಸಿದರು. ಒಂದು ದಿನ ಇವರಿಗೆ ಸಹಾಯ ಮಾಡಿದ್ದವರು ಬಂದು ನಿಮ್ಮ ಮಗಳನ್ನ ಸೊಸೆ ಮಾಡಿಕೊಳ್ಳಬೇಕೆಂದು ಇದ್ದೇನೆ. ನನ್ನ ಮಗ ಈ ಊರಿನ ಹೆಸರಾಂತ ಲಾಯರ್. ನಿಮ್ಮ ಸಹಮತವಿದ್ದರೆ ಮಾತ್ರ ಎಂದರು. ಸಂತೋಷದಿಂದ ಒಪ್ಪಿ ಮಗಳನ್ನೂ ಒಪ್ಪಿಸಿ ಮದುವೆ ಮಾಡಿಕೊಟ್ಟು ತಾನು ಮಾತ್ರ ಸ್ವಾವಲಂಬಿಯಾಗಿ ಮೂರು ನಾಲ್ಕು ವರ್ಷ ಅದೇ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದಳು.
ಈಗಲೂ ಈ ಹುಡುಗಿ ಚೆನ್ನೈನಲ್ಲಿ ಒಳ್ಳೆಯ ಹೆಸರು ಗಳಿಸಿರುವ ಅಧಿಕಾರಿ. ಬಹಳ ಜನ ಇವರ ಜೀವನದ ಬಗ್ಗೆ ಸಿನೆಮಾ ಮಾಡಲು ಪ್ರಯತ್ನ ಮಾಡಿದರಾದರೂ ಈ ಅಧಿಕಾರಿಗಳು ಒಪ್ಪಲಿಲ್ಲವಂತೆ.