ಸಮಯ ಹೀಗೆಯೇ ಇರದು.
ಸಮಯ ಹೀಗೆಯೇ ಇರದು.


ಗೌರಿ , ಗಂಗಾ , ಭುವನ್, ಗಗನ್ , ಒಡಹುಟ್ಟಿದವರು. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಇವರು, ತಾಯಿಯ ಪ್ರೀತಿಯಿಂದ ವಂಚಿತರಾದವರು. ಆದರೆ ಗೌರಿ ಹಿರಿಯ ಅಕ್ಕ , ತನ್ನ ತಂಗಿ ಇಬ್ಬರು ತಮ್ಮಂದಿರಿಗೆ ತಾಯಿಯಾಗಿ , ತಾಯಿ ಪ್ರೀತಿಯನ್ನು , ತಾಯಿಯ ಕೈ ತುತ್ತನ್ನು ಕೊಟ್ಟು ಬೆಳೆಸಿದ್ದಳು. ಅಪ್ಪ ಇದ್ದರು. ಅಪ್ಪ ತನ್ನ ಮಕ್ಕಳಿಗೆ ಯಾವುದೇ ಕೊರತೆ ಬರಲಾರದೆ ನೋಡಿಕೊಳ್ಳುತ್ತಿದ್ದನು. ಊರಿನ ಜನರೆಲ್ಲರೂ, ತಮ್ಮ ಸಂಬಂಧಿಕರೆಲ್ಲರೂ ಎಷ್ಟೇ ಒತ್ತಾಯ ಮಾಡಿದರೂ ಸಹ ಎರಡನೇ ಮದುವೆ ಆಗಲಿಲ್ಲ. ಮಕ್ಕಳೇ ಸರ್ವಸ್ವ ಎಂದು ಬದುಕಿದ ಜೀವವದು. ಹೀಗೆಯೇ ಸುಮಾರು ಒಂದು ಹತ್ತು ವರ್ಷ ಕಳೆಯಲು ಮಕ್ಕಳೆಲ್ಲರೂ ಶಾಲೆಗೆ ಹೋಗಲು ಆರಂಭಿಸಿದರು. ಗೌರಿ ಮಾತ್ರ ಮನೆ ಕೆಲಸ ಮಾಡುತ್ತಿದ್ದಳು. ತಮ್ಮ ತಂಗಿಯರು ಅಪ್ಪನನ್ನು ನೋಡಿಕೊಳ್ಳುವ ಜವಾಬ್ದಾರಿಯುತ ಕೆಲಸ ಆ ಗೌರಿಯದಾಗಿತ್ತು. ಯಾವಾಗಲೂ ಪ್ರೀತಿಯಿಂದ ಬೇಸರಿಸಿಕೊಳ್ಳದೆ ತನ್ನ ಕೈಲಾದ ಮಟ್ಟಿಗೆ ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಹೀಗೆಯೇ ಬದುಕು ಒಂದು ರೀತಿ ಸಾಗಿತ್ತು.
ಗೌರಿ ದಿನಕಳೆದಂತೆ ಮದುವೆ ವಯಸ್ಸಿಗೆ ಬಂದಳು. ಅಪ್ಪ ಗೌರಿಯ ಮದುವೆ ಮಾಡಬೇಕೆಂದು ಯೋಚಿಸಿದನು. ಆ ಪ್ರಕಾರ ತನ್ನ ಹೆಂಡತಿಯ ತಮ್ಮನಾದ ಮಂಜುವಿಗೆ ಕೊಟ್ಟು ಮದುವೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಯೋಚಿಸಿ ಮದುವೆ ಪ್ರಸ್ತಾಪ ಸಲ್ಲಿಸಿದರು. ಆಗ ಮಂಜು ಮತ್ತೆ ಅವರ ಅಪ್ಪ ಅಮ್ಮ ಖುಷಿಯಾಗಿ ಒಪ್ಪಿಕೊಂಡರು. ಸರಳವಾಗಿ, ಸುಂದರವಾಗಿ ಮಂಜು ಗೌರಿ ಮದುವೆ ಆಯಿತು. ಹೀಗೆ ಗೌರಿ ಮದುವೆ ಆದ ಮೇಲೆ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ತನ್ನ ಮಕ್ಕಳಂತೇ ಇರುವ ತಮ್ಮಂದಿರು ತಂಗಿಯನ್ನು ಬಿಟ್ಟು ಹೋಗಲು ತುಂಬಾ ಒದ್ದಾಡಿದಳು. ಆದರೇನು ಮಾಡುವುದು ಹೋಗಲೇ ಬೇಕಿತ್ತು. ಚಿಕ ತಮ್ಮ ಗಗನ್ ಮಾತ್ರ ತಾಯಿಯನ್ನು , ತಾಯಿ ಪ್ರೀತಿಯನ್ನು ಅಕ್ಕನಲ್ಲೇ ಕಂಡಿದ್ದನು. ಹುಟ್ಟಿ ಮೂರು ತಿಂಗಳಿಗೆ ತಾಯಿ ತೀರಿಕೊಂಡಿದ್ದಳು. ಆಗ ಗೌರಿ ಒಂದ್ ಒಂಬತ್ತು ಹತ್ತು ವರ್ಷದವಳಷ್ಟೇ. ಆಗಿಂದ ಇಲ್ಲಿಯವರೆಗೂ ಗಗನ್ ಭುವನ್, ಗಂಗಾಳನ್ನು ಪ್ರೀತಿಯಿಂದ ನೋಡಿಕೊಂಡಿದ್ದಳು.
ಇತ್ತ ಮದುವೆ ಆದಮೇಲೆ ಗಂಡನ ಮನೆ ಅಂದರೆ ಅಜ್ಜಿ ಮನೆಯೇ ಗಂಡನ ಮನೆ ಆಗಿತ್ತು. ಅಲ್ಲಿ ಹೋದ ಮೇಲೆ ಗೌರಿ ದೇಹ ಮಾತ್ರ ಅಲ್ಲಿ ಗಂಡನ ಮನೆಯಲ್ಲಿತ್ತು. ಮನಸ್ಸು ಪೂರ್ತಿಯಾಗಿ ತವರು ಮನೆಯಲ್ಲಿತ್ತು. ಈಗಿನ ಹಾಗೆ ಆಗ ಫೋನಿನ ವ್ಯವಸ್ಥೆ ಇಷ್ಟೊಂದು ವೇಗದಲ್ಲಿರಲಿಲ್ಲ. ಎಲ್ಲೋ ಊರಲ್ಲಿ ಒಂದೋ, ಎರಡು ಲ್ಯಾಂಡ್ ಫೋನ್ ಗಳಿರುತ್ತಿದ್ದವು. ಗೌರಿಗೆ ಗಗನ್ ಚಿಂತೆಯಾಗ್ತಿತ್ತು. ಗೌರಿ ಊಟ ಮಾಡಿಸಿದರೆ ಮಾತ್ರ ಮಾಡುತ್ತಿದ್ದ ಗಗನ್ ಇಲ್ಲವೆಂದರೆ ಊಟಕ್ಕೆ ಬರುತ್ತಿರಲಿಲ್ಲ. ಆಗ ಚಿಂತಿಸುತ್ತಿದ್ದ ಗೌರಿಗೆ ಉಪಾಯವೊಂದು ಹೊಳೆದು, ಯನ್ನ ಅಜ್ಜಿ ಅಜ್ಜನ ಒಪ್ಪಿಗೆ ಪಡೆದು ತನ್ನ ಚಿಕ್ಕ ತಮ್ಮನನ್ನು ಮಾತ್ರ ತನ್ನ ಜೊತೆ ಇರಲು ಕರೆಸಿಕೊಂಡಳು.
ಮಂಜು ದುಡಿಮೆ ಅಷ್ಟಕ್ಕಷ್ಟೇ ಇದ್ದಿದ್ದರಿಂದ ಮಂಜುಗೆ ಗಗನ್ ಬಂದಿರುವುದು ಇಷ್ಟವಾಗಲಿಲ್ಲ. ಮಂಜು ಆಸೆ ಪಟ್ಟಿದ್ದು ಗೌರಿಯನ್ನಲ್ಲ, ಅವಳ ಅಪ್ಪ ಕೊಡುವಂತಹ ಆ ವರದಕ್ಷಿಣೆ ರೂಪದ ಹಣ ಮತ್ತು ಹೊಲದಲ್ಲಿ ಸಿಗುವ ಗೌರಿಯ ಪಾಲನ್ನು !
ಗಗನ್ ಅಜ್ಜಿ ಮನೆಯಲ್ಲಿ ಅಕ್ಕನ ಹಿಂಬಾಲು ಮುಂಬಾಲು ಆಗಿ ಯಾವಾಗಲೂ ಅಕ್ಕನ ಸೆರಗನ್ನು ಹಿಡಿದು ಓಡಾಡುತ್ತಿದ್ದನು. ಮಂಜು ಜೊತೆ ಏಕಾಂತವಾಗಿರಲೂ ಕೂಡ ಬಿಡುತ್ತಿರಲಿಲ್ಲ. ದಿನೇ ದಿನೇ ಮಂಜುವಿಗೆ ಎದು ಸಹಿಸಲಾರದಷ್ಟು ಯಾಗತೊಡಗಿತು. ಗೌರಿ ತಮ್ಮನನ್ನು ಪಕ್ಕದಲ್ಲಿ ಮಲಗಿಸಿಕೊಳ್ಳುವುದು, ಅವನೊಂದಿಗೆಯೇ ದಿನ ಕಳೆವುದು , ನೋಡಿ ನೋಡಿ ರೋಸಿ ಹೋದ ಮಂಜು ಗೌರಿಗೆ ಸೂಕ್ಷ್ಮ ವಾಗಿ ಹೇಳಿದ.
ಗೌರಿಗೆ ಅರ್ಥವಾದರೂ ಕೂಡ ಗಗನ್ ನನ್ನು ದೂರ ಇಡಲು ಮನಸ್ಸು ಮಾಡಲಿಲ್ಲ.
ಇತ್ತ ಗೌರಿ ಅಪ್ಪನಿಗೆ ತುಸು ವ್ಯಾರದಲ್ಲಿ ನಷ್ಟ ಉಂಟಾಗಿ ಸಾಲದ ಸುಳಿಯಲ್ಲಿ ಸಿಲುಕಿದನು. ಇದರಿಂದ ಸಾಲದಿಂದ ಪಾರಾಗಲು ಇರುವ ದಾರಿಯನ್ನು ಹುಡುಕುತ್ತಿರುವಾಗ ಮಕ್ಕಳೆಲ್ಲರೂ ಒಟ್ಟಾಗಿ ಹೊಲ ಮಾರಲು ಹೇಳಿದರು.ಆ ಪ್ರಕಾರ ಗಗನ್ ಭುವನ್ ಹೆಸರಿಗೆ ಒಂದೆರಡು ಎಕರೆ ಮಾತ್ರ ಬಿಟ್ಟು ಉಳಿದ ಹೊಲ ಆರಿ ಸಾಲದಿಂದ ಮುಕ್ತನಾಗಿ ಗೌರಿ ಅಪ್ಪ ಮತ್ತೆ ವ್ಯಾಪಾರ ಶುರು ಮಾಡಿದನು.
ಗೌರಿ ಗಂಡ ಮಂಜುಗೆ ಇದು ಬಿಸಿ ತುಪ್ಪವಾಯಿತು. ಗೌರಿಗೆ ಹಿಂಸೆ ಮಾಡಲು ಶುರುವಾದನು. ಅಜ್ಜ ಅಜ್ಜಿಯೂ ಸಹ ಗೌರಿ ಪರ ನಿಲ್ಲಲಿಲ್ಲ. ಕುಡಿದು ಬರುವುದು, ಹೋಡೆಯುವುದು ಬಡಿಯುವುದು ನಡೆಯುತ್ತಿತ್ತು. ಆಗ ಗಗನ್ ಅಕ್ಕನ ಕಣ್ಣೀರು ವರೆಸಿ ಊಟ ಮಾಡಿಸುತ್ತಿದ್ದನು.
ಯಾರೇ ಆಗಲಿ ಎಷ್ಟು ಅಂತ ತಡೆದುಕೊಳ್ಳುತ್ತಾರೆ ಹೇಳಿ, ಮಕ್ಕಳು ಆಗದೆ ಇರುವುದು ಸಹ ಗೌರಿ ಜೀವನಕ್ಕೆ ಮತ್ತೊಂದು ಮುಳ್ಳಾಯಿತು.
ಗೌರಿ ಅಪ್ಪ ಮಕ್ಕಳ ಸಲುವಾಗಿ ಮದುವೆ ಆಗಲಿಲ್ಲ ಎನ್ನುವುದು ಎಷ್ಟು ಸತ್ಯವೋ , ಮಂಜು ಮಕ್ಕಳಿಗಾಗಿ ಎರಡನೆ ಮದುವೆ ಆಗಿದ್ದು ಅಷ್ಟೇ ಸತ್ಯವಾಗಿತ್ತು.
ಎರಡನೇ ಹೆಂಡತಿ ಬಂದು ವರುಷದೊಳಗೆ ಗಂಡು ಮಗು ಹೆತ್ತು ಕೊಟ್ಟು ಮನೆಯ ಯಜಮಾನಿಕೆ ಮಾಡುವಲ್ಲಿ ಮುಂದಾದಳು. ಗೌರಿಗೆ ಇನ್ನಷ್ಟು ನೋವು, ಹಿಂಸೆ ಕೊಡುವಲ್ಲಿ ಮಂಜು ಕಿವಿಗೆ ಅವಳ ವಿರುದ್ಧ ಪಿತೂರಿ ಮಾಡುತ್ತ ಏನೇನೋ ಹೇಳಿ ಹೊಡೆಸುತ್ತಿದ್ದಳು. ಆದರೂ ಗೌರಿ, ಮೌನಗೌರಿಯಾಗಿ ಎಲ್ಲವನ್ನು ಸಹಿಸಿಕೊಂಡಿದ್ದಳು.
ತವರಿಗೆ ಹೋಗುವುದು ದೊಡ್ಡ ವಿಷಯವಾಗಿರಲಿಲ್ಲ ಗೌರಿಗೆ. ಗಂಡನನ್ನು ಬಿಟ್ಟು ಬಂದವಳೆಂದು ತನ್ನ ತಂಗಿಗೆ , ತಮ್ಮಂದಿರಿಗೆ ಮದುವೆ ಆಗದೆ ಹೋದರೆ ಎನ್ನುವ ಚಿಂತೆಯಲ್ಲಿ ಗಂಡನ ಹಿಂಸೆ ಅನುಭವಿಸುತ್ತ ಸುಮ್ಮನೆ ಅಲ್ಲೇ ಇದ್ದಳು. ಗೌರಿಯ ಸವತಿ ಗಗನನ್ನು ಮನೆಯಿಂದಾಚೆ ಕೂಡ ಹಾಕಿಯಾಗಿತ್ತು. ಇದರಿಂದ ಗೌರಿ ಬಹು ನೊಂದುಕೊಂಡಿದ್ದಳು.
ದಿನೇ ದಿನೇ ಆ ಸವತಿಯ ಕಾಟ ಹೆಚ್ಚತೊಡಗಿತು. ಗೌರಿಯ ತಮ್ಮಂದಿರು ನೋಡಿ ನೋಡಿ ಸಾಕಾಗಿ ಅಪ್ಪನೊಂದಿಗೆ ಮಾತಾಡಿಕೊಂಡು ತಮ್ಮ ಅಕ್ಕನನ್ನು ತಮ್ಮೊಂದಿಗೆ ಇರಲು ಕರೆದುಕೊಂಡು ಬರಲು ಅಕ್ಕನ ಮನೆಗೆ ಹೋದರು. ಆದರೆ ಗೌರಿ,
" ಸಮಯ ಹೀಗೆಯೇ ಇರುವುದಿಲ್ಲ, ನನಗೂ ಒಳ್ಳೆಯ ಸಮಯ ಬರುತ್ತದೆ, ಕಾಯುತ್ತೇನೆ ದಯವಿಟ್ಟು ನನಗೆ ಒತ್ತಾಯ ಮಾಡಬೇಡಿ, ನಾನು ಇಲ್ಲೇ ಇರುವುದು ಒಳ್ಳೆಯದು " ಎಂದು ತಮ್ಮಂದಿರನ್ನು ಕಳಿಸಿದಳು. ಅಲ್ಲಿ ಅಕ್ಕನ ಕೆಲಸದಾಳಿನಂತಹ ಪರಿಸ್ತಿತಿಯನ್ನು ಕಂಡು ತಮ್ಮಂದಿರು ಮರುಗಿದರು.
ಗೌರಿಯ ಸವತಿ ಹೃದಯಾಘಾತದಿಂದ ತೀರಿಹೋದಾಗ ಗೌರಿಯೇ ಆ ಮಗುವಿಗೆ ತಾಯಿಯಾಗಬೇಕಾಗಿ ಬಂದಿತು. ಗೌರಿ ಒಂದಿಷ್ಟು ಬೇಸರಿಸಿಕೊಳ್ಳದೆ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವಿನಂತೆ ನೋಡಿಕೊಂಡಳು. ಆಗ ಮಂಜುವಿಗೆ ಗೌರಿಯ ಮುಗ್ದ ಹೃದಯ, ತಾಯಿಯ ಪ್ರೀತಿಯ ಬಗ್ಗೆ ತಿಳಿಯಿತು. ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿ ಮತ್ತೆ ಗೌರಿಯೊಂದಿಗೆ ಖುಷಿಯಾಗಿ, ಸಂತೋಷದಿಂದ ಜೀವನ ಶುರು ಮಾಡಿದನು.
ಗೌರಿ ಈಗ ಖುಷಿಯಾದ ಕುಟುಂಬದ ಒಡತಿ. ತಂಬ ತಮ್ಮಂದಿರಿಗೆ, ತಂಗಿಗೆ ತಾನೇ ಮುಂದೆ ನಿಂತು ಮದುವೆ ಮಾಡಿಸಿದಳು.. ಎಲ್ಲವೂ ಚೆನ್ನಾಗಿಯೇ ಸಾಗಿತು..
ಹೀಗೆ ಸಮಯ ಯಾವಾಗಲೂ ಒಂದೇ ರೀತಿಯಾಗಿರಲ್ಲ. ಸ್ವಲ್ಪ ತಾಳ್ಮೆಯಿಂದ ಕಾದರೆ ಒಳ್ಳೆಯ ಸಮಯ ಬಂದೆ ಬರುತ್ತದೆ..