JAISHREE HALLUR

Drama Action Thriller

4  

JAISHREE HALLUR

Drama Action Thriller

ಸೆಂಟಿನಾವಾಂತರ--2

ಸೆಂಟಿನಾವಾಂತರ--2

3 mins
292



  ಗಾಡಿ ಪಾರ್ಕ್ ಮಾಡಿ, ಮೆಟ್ಟಿಲೇರಿ ಆಫೀಸಿನ ವರಾಂಡಾದಲ್ಲಿ ಕಾಲಿಟ್ಟೆ.ಬಲಗೈಯಲ್ಲಿದ್ದ ಹ್ಯಾಂಡ್ ಬ್ಯಾಗನ್ನು ಎಡಗೈಗೆ ವರ್ಗಾಯಿಸಿ, ಜೇಬಿನಲ್ಲಿದ್ದ ಐಡಿ ಕಾರ್ಡ್ ತೆಗೆದು ಉಜ್ಜಿದೆ. ಗಾಜೀನ ಬಾಗಿಲು ತೆರೆದುಕೊಂಡಿತು. ಒಳಗೆ ಆಗಲೇ ಕೆಲವು ಮುಖಗಳು ಕಂಡವು...

  " ಹಲೋ! ಶ್ಯಾಮ್ ಸರ್.." ಮನೀಶ್, HR manager ನ ದನಿ. " ಹಲೋ ಮನೀಶ್" ಎಂದು ಕೈಯೆತ್ತಿದೆ.

   " ಹಲೋ ಸರ್, ಗುಡ್ ಮಾರ್ನಿಂಗ್," ಎದ್ದು ನಿಂತ ಅನಿತಾಳ ದನಿ. ನಸುನಕ್ಕು , "ಗುಡ್ ಮಾರ್ನಿಂಗ್ ಅನಿತಾ.." ಎನ್ನುತ್ತಾ...ನನ್ನ ಕ್ಯಾಬಿನ್ನಿನತ್ತ ನಡೆದೆ.


  ಕೈಲಿದ್ದ ಬ್ಯಾಗನ್ನು ಟೀಪಾಯ್ ಮೇಲಿರಿಸಿ, ಕಟ್ಟಿದ ಟೈಯನ್ನು ಕೊಂಚ ಸಡಿಲಿಸಿಕೊಂಡೆ. ಟೇಬಲ್ ಮೇಲಿನ fileಗಳೆಲ್ಲ ಒಪ್ಪ ಓರಣವಾಗಿದ್ದವು. ನನ್ನ ಹೆಸರಿನ ನಾಮಪಲಕ ಮಾತ್ರ ಕೊಂಚ ಅಡ್ಡಾದಿಡ್ಡಿಯಾದಂತೆ ಕಂಡಿತು. ಬಾಗಿ ಸರಿ ಮಾಡಿದೆ. 

" ಶ್ಯಾಮ್ ಸುಂದರ್ , ಡೆಪುಟೀ ಮೇನೆಜರ್..."

ಪಲಕದಲ್ಲಿನ ಹೆಸರು....👌👍ನಾನೇ ಹೆಮ್ಮೆ ಪಟ್ಟೆ.


   ಫೋನ್ ಕೈಗೆತ್ತಿ, ಅಸಿಸ್ಟಂಟ್ ಗಿರೀಶನನ್ನು ಕರೆಯೋಣವೆನ್ನುಷ್ಟರಲ್ಲಿ...ಏನೋ ಮಂಪರು..ಏನೋ ಪರಿಮಳ ಆ ಫೋನಿಂದ ಬಂದು ಮೂಗಿನ ಹೊಳ್ಳೆ ಅರಳಿಸಿತು. ಅದೇ ಸುವಾಸನೆ, ರಾತ್ರಿ ಕಿವಿಯ ಬಳಿ ಸುಳಿದದ್ದು..ಕಾಲಲ್ಲಿ ಯಾಕೋ ನಡುಕ ಶುರುವಾಯಿತು. ಏನಿದು ? ಕೋಣೇಲಿ ಯಾರೂ ಇಲ್ಲ. ಬಂದವನು ನಾನು ಮಾತ್ರ. ಈ ವಾಸನೆ ಎಲ್ಲಿಂದ ಬಂತು. ಇದು ಅವಳದೇ ವಾಸನೆ . ನಿಸ್ಸಂಧೇಹವಾಗಿ, ಅವಳಿಲ್ಲಿ ಬಂದು ಹೋಗಿರಬೇಕು. ನನ್ನ ಫೋನು ಉಪಯೋಗಿಸಿದ್ದಾಳೆ. ಎಷ್ಟು ಧೈರ್ಯ ಇರಬೇಕು...ಕೋಪ ಹಾಗೇ ಏರಿತು. ಏರಿದ ದನಿಯಲ್ಲಿ ಗಿರೀಶ್....ಎಂದು ಕೂಗಿದೆ...ಅವನು ಬಾಗಿಲನ್ನು ದೂಡಿ ಒಳಗೆ ಬಂದ..

"ಕೂಗಿದ್ರಾ..ಸಾ.‌..." ಎಂದ.


"ಹೂಂ... ನನ್ನ ರೂಮಿಗೆ ಯಾರಾದ್ರೂ ಬಂದಿದ್ರಾ...ನಾ ಬರೋಕೆ ಮುಂಚೆ?" ಕೇಳಿದೆ. ನನ್ನ ಮಾತಲ್ಲಿ ಅಸಮಾಧಾನ ಇರೋದು ಅವನಿಗೂ ಗೋಚರಿಸಿತು.


 " ಇಲ್ಲ ಸಾ....ನಾ ಬಂದಾಗ ಯಾರೂ ಬಂದೇ ಇರಲಿಲ್ಲ. ವಾಚ್ಮೇನ್ ಬಾಗಿಲು ತೆಗದ್ಮೇಲೆ ನಾ ಒಳೀಕ್ ಬಂದಿದ್ದು ಸಾ... ಯಾಕ್ ಸಾ...." ಅಂದವನ ಮಾತನ್ನು ಅರ್ದಕ್ಕೇ ನಿಲ್ಲಿಸಿ, 

" ಸರಿ, ನೀ ಹೋಗು, ಒಂದು ಗ್ಲಾಸ್ ನೀರು ತಗೊಂಬಾ.." ಅಂತ ಕಳಿಸಿದೆ. ತಲೆ ಬಿಸಿಯಾಗಿತ್ತು.

"ಸರಿ ಸರ್, " ಎಂದು ಅವನು ಹೊರಹೋದ. ನಾ ಚಿಂತೇಲಿ ಬಿದ್ದೆ.

   ಸುಮಾರು ಎರಡು ವಾರ ಆಗಿತ್ತು ಅಷ್ಟೇ ರೀಟಾ ಕೆಲಸಕ್ಕೆ ಜಾಯಿನ್ ಆಗಿ. ಅವಳ ಕ್ವಾಲಿಫಿಕೇಶನ್ ಪ್ರಮಾಣಪತ್ರಗಳು, ಅಂಕಪಟ್ಟಿಗಳು, ಇತ್ಯಾದಿಗಳನ್ನು ಪರಿಶೀಲಿಸಿ ಕೆಲಸಕ್ಕೆ ಶಿಫಾರಸು ಮಾಡಿದವನೇ ನಾನು. 

ಜಾಯಿನ್ ಆದ ದಿನದಿಂದ ನಾ ಅವಳನ್ನು ಗಮನಿಸುತಿದ್ದೇನೆ. ಹುಡುಗಿ ಚುರುಕು, ಕೆಲಸದಲ್ಲಿ ಜಾಣೆ. ಹೇಳಿದ ಕೆಲಸವನ್ನು ಫಟಾಫಟ್ ಅಂತ ಹೇಳಿದ್ದಕಿಂತಾ ಹೆಚ್ಚಾಗೇ ಮಾಡಿ ಮುಗಿಸುತ್ತಿದ್ದಳು. ಎಲ್ಲರೊಡನೆ ನಗುನಗುತ್ತಾ, ಪಾದರಸದಂತೆ ಓಡಾಡಿ, ಎಲ್ಲರನ್ನೂ ತುದೀಗಾಲಲಿಟ್ಟು ಕೆಲಸದಲ್ಲಿ ತೊಡಗಿಸುತ್ತಿದ್ದಳು. ಅವಳ ಚಾಕುಚಕ್ಯತೆಗೆ ಬಾಸ್, ಬಹಳ ಖುಷ್! ನಾನು ಯಾವಾಗಲಾದರೂ , ಡಿಸ್ಕಶನ್ಗೇ ಅಂತ ಬಾಸ್ ಚೇಂಬರ್ ಗೆ ಹೋದರೆ, ಏನಾದರೊಂದು ವಿಷಯದಲ್ಲಿ ಮಾತು ಬಂದು, ರೀಟಾಳನ್ನು ಹೊಗಳದೇ ಇರದ ದಿನವಿಲ್ಲ.

" ಓವ್! ಶೀ ಈಜ್ ಇಂಟೆಲಿಜೆಂಟ್ ಯು ನೋ"

" ಓವ್! ಶೀ ಈಜ್ ಅನ್ ಇಮ್ಯಾಜಿನೆಬಲ್ ಗರ್ಲ್..ಟೂ ಗುಡ್ ಶ್ಯಾಂ"....ಅಂತ ಇನ್ನೂ ಹೀಗೇ ಹೊಗಳಿಕೆಗಳು ಕೇಳಿಬರುತ್ತಿದ್ದವು. 

 ನಾನು ಹೂಂ...ಎನ್ನುತ್ತಲೇ ಅವರ ಕ್ಯಾಬಿನ್ ಇಂದ ಹೊರಬರುತ್ತಿದ್ದೆ. ಅದೇ ಗುಂಗಿನಲ್ಲಿ, ತಲೆ ಅಲ್ಲಾಡಿಸುತ್ತ, ಹೊರಬಂದಾಗ ಸುಯ್ಯಂದು ಎದುರಾಗಿದ್ದಳು. ಅವಳು ಬಂದ ರಭಸಕ್ಕೆ ನಾ ಕೈ ಅಡ್ಡಯಿಟ್ಟು ಗಕ್ಕನೆ ನಿಂತೆ. ಅವಳೂ ನಿಂತು ಸಾವರಿಸಿಕೊಂಡು ನಕ್ಕು ಸಾರೀ ಎಂದಳು. ತೀರ ಹತ್ತಿರ ಇದ್ದಳು. ಕಣ್ಣು ಮೂಗು ಬಾಯಿ ಎಲ್ಲವೂ ನಗುತ್ತಿವೆ ಎನಿಸಿತು. ಅವಳನ್ನೇ ದಿಟ್ಟಿಸಿದ್ದೆ .

" ವ್ಹಾಟ್! " ಎಂಬಂತೆ, ಹುಬ್ಬೇರಿಸಿದಳು..

ಏನಿಲ್ಲವೆಂದು ತಲೆ ಕೊಡವಿಕೊಂಡು ನುಡಿದೆ, "ಟೇಕ್ ಕೇರ್ ವೈಲ್ ಮೂವಿಂಗ್ ಅರೌಂಡ್". 

" ಓಕೆ ಶೂರ್ ಸರ್..." ನಗುತ್ತ ಸರ್ರನೆ ಮರೆಯಾದಳು.


ನಾ ನನ್ನ ಸೀಟಿಗೆ ಬಂದು ಕೂತೆ ಅಷ್ಟೇ. ಹಿಂದೆಯೇ ಓಡೋಡಿ ಬಂದಿದ್ದಳು ಮತ್ತೆ. ಮತ್ತಾಕೆ ಬಂದಳಪ್ಪಾ...ಥೋ! ಕೆಲಸ ಮಾಡಲು ಮೂಡೇ ಇಲ್ವಲ್ಲಾ...ಅಂದ್ಕೊತಿದ್ದೆ. 


" ಮಿ! ಶ್ಯಾಂ . , ಐ ನೀಡ್ ಯುವರ್ ಹೆಲ್ಪ್ ಈ ಫಾಯಿಲ್ ಕ್ಲಿಯರ್ ಮಾಡೋಕೆ" ಎನ್ನುತ, ಕೈಲಿದ್ದು ಆರೆಂಜು ಬಣ್ಣದ ಫಾಯಿಲ್ ನನ್ನ ಮುಂದಿರಿಸಿದಳು.

"ಏನಿದು, ಯಾವ ಪ್ರಾಜೆಕ್ಟು", " ಏನು ಹೆಲ್ಪ್ ಬೇಕಾಗಿತ್ತು? ಕೇಳಿದೆ. 

 " ನಂಗೆ ಬಾಸ್ ಹೇಳಿದ್ದಾರೆ, ಪ್ರಾಜೆಕ್ಟ್ ಗೆ ಬೇಕಾದ ಚಾರ್ಟ್ಗಳನ್ನು ರೆಡೀ ಮಾಡೋಕೆ. ನಾಳೆ ಪ್ರೆಸೆಂಟೇಶನ್ ಇದೆಯಲ್ಲಾ.... ಆದರೆ, ಯಾವ ಡೇಟಾ ಕೂಡ ಈ ಫಾಯಿಲಲ್ಲಿ ಪೂರ್ತಿಯಾಗಿಲ್ಲ. ಹೇಗೆ ಚಾರ್ಟ್ ತಯಾರಿಸೋದು, ಗೊತ್ತಾಗ್ತಿಲ್ಲ ಸರ್." ಅಂದಳು. ಪಾಪ, ಹೊಸದಾಗಿ ಬಂದ ಹುಡುಗಿ, ಹೀಗೆ ಕಷ್ಟದ ಕೆಲಸ ಕೊಟ್ರೆ ಹೇಗೆ ನಿಭಾಯಿಸುತ್ತಾಳೆ, ಸಹಾಯ ಮಾಡುವ ಮನಸಾಯಿತು. 

 " ನೋಡಿ, ಈ ಡೇಟಾಗಳ ಬಗ್ಗೆ ಅನಿತಾ ಹತ್ತಿರ ಕಂಪ್ಲೀಟ್ ಮಾಹಿತಿ ಇದೆ. ಮತ್ತೆ ಮೇಲಿನ ಸ್ಟೋರ್ ರೂಮಲ್ಲಿ ಕೆಲವು ದಾಖಲೆಗಳನ್ನು ಹುಡುಕಿ ತೆಗೆಯಬಹುದು. ಅನಿತಾಳ ಸಹಾಯ ಪಡೆದುಕೊಳ್ಳಿ. ಒಳ್ಳೆ ಹುಡುಗಿ ಅವಳು"..ನನ್ನ ಮಾತಿನ್ನೂ ಮುಗಿದೇ ಇರಲಿಲ್ಲ. ಫಾಯಿಲ್ ಕೈಗೆತ್ತಿಕೊಂಡು ಅವಳಾಗಲೇ ಬಾಗಿಲಬಳಿಯಿದ್ದಳು. 

ಅಲ್ಲಿಂದಲೇ " ಥ್ಯಾಂಕ್ಯೂ" ಅಂದಳು..‌‌


ಏನೋ ನೆನಪಾಗಿ, " ವೈಟ್ ರೀಟಾ..!" ಕೂಗಿದೆ.

ಒಮ್ಮೆಲೆ ತಿರುಗಿದಳು. ಅವಳ ಆ ಗತ್ತಿಗೆ, ಉದ್ದನೆಯ ಕೂದಲು ಒಂದು ಸುತ್ತು ಹಾಗೇ ಮುಖವನ್ನು ಸವರಿ ನಿಂತವು. ಅವಾಕ್ಕಾಗಿ ನಿಂತೆ...!

"ವ್ಹಾಟ್ ಸರ್," ಎಂದಳು. 

ಡ್ರಾ ಎಳೆದು ಬೀಗದ ಕೈ ಅವಳ ಮುಂದೆ ಚಾಚಿದೆ. "ಸ್ಟೋರ್ ರೂಂ ಕೀ.." ಎಂದೆ.


" ಓಹ್! ಥ್ಯಾಂಕ್ಯೂ " ಎಂದು ಮುಂದೆ ಬಂದು ಬೀಗ ತೆಗೆದುಕೊಂಡಳು. 

  

"ರಿಟರ್ನ್ ಬ್ಯಾಕ್ ಆಫ್ಟರ್ ಯೂಜ್" ಎಂದೆ ಖಡಕ್ಕಾಗಿ. ಓಹ್! ಶೂರ್ ಸರ್"...ಹೊರಗೋಡಿದಳು. 


  ಅವಳು ಹೋದ ಎಷ್ಟೋ ಹೊತ್ತಿನ ವರೆಗೂ ಆ ಸೆಂಟಿನ ಪರಿಮಳ ಮಾತ್ರ ಇನ್ನೂ ಇಲ್ಲೇ ಸುತ್ತುತ್ತಿತ್ತು. ಉನ್ಮಾದವೆಬ್ಬಿಸುತಿತ್ತು. ನಾನು ಹಾಗೇ ಕಣ್ಮುಚ್ಚಿ ಕುಳಿತೆ. ಕೆಲಸ ಮಾಡಲು ಮೂಡಿಲ್ಲ. ಎಂತದೋ ಸುಮಧುರ ಅನುಭವ. ಎಲ್ಲೋ ತೇಲಿದಂತೆ ಭಾಸವಾಗುತ್ತಿತ್ತು. 


  ( ಮುಂದುವರಿಯುವುದು...)


Rate this content
Log in

Similar kannada story from Drama