ಪುಟ್ಟ ತಪ್ಪಿಗೆ ದೊಡ್ಡ ಶಿಕ್ಷೆ
ಪುಟ್ಟ ತಪ್ಪಿಗೆ ದೊಡ್ಡ ಶಿಕ್ಷೆ
ಇದೊಂದು ಕಥೆ. ಬಹಳ ಹಿಂದೆ ಅಂದರೆ ರಾಜರುಗಳ ಆಳ್ವಿಕೆಯ ಕಾಲ. ಒಂದು ಬ್ರಹತ್ ಮಹಾ ಕಾಳಿ ದೇಗುಲ. ದೇಗುಲದ ಮುಂದೆ ಒಬ್ಬ ಚಪ್ಪಲಿ ಹೊಲಿಯುವ ಮನುಷ್ಯ ಕೂತಿರುತ್ತಿದ್ದ . ಒಂದು ದಿನ ಒಬ್ಬ ದೇವರ ದರ್ಶನಕ್ಕಾಗಿ ಬೇಗ ಬೇಗ ಬರುತ್ತಿದ್ದಾಗ ಅವನ ಚಪ್ಪಲಿ ಕಿತ್ತು ಹೋಯ್ತು. ಅದೃಷ್ಟಕ್ಕೆ ಅಲ್ಲೇ ಚಪ್ಪಲಿ ಹೊಲಿಯುವನಿದ್ದ ಕಾರಣ ಅಲ್ಲೇ ಬಿಟ್ಟು, ಹೊಲಿದು ಇಟ್ಟಿರು ಬಂದು ತೆಗೆದು ಕೊಳ್ತೀನಿ ಅಂತ ಹೇಳಿದಾಗ ಅವನ ಎದುರಿಗಿದ್ದ ಒಂದು ಡಬ್ಬದಿಂದ ಒಂದು ಮುಷ್ಠಿ ಕಾಸು ತೆಗೆದು ಸ್ವಾಮಿ ನಾನು ಒಳಗೆ ಬರಲಾಗಲ್ಲ ದಯವಿಟ್ಟು ಇದನ್ನ ಒಳಗೆ ಇರೋ ಹುಂಡಿಗೆ ಹಾಕಿ ಎಂದ. ಆಗಲಿ ಕೊಡು ಅಂತ ತೆಗೆದುಕೊಂಡು ಹಾಕುವ ಮೊದಲು ಅದರಲ್ಲೇ ಸ್ವಲ್ಪ ಕಾಸುತೆಗೆದು ಇವನು ಹಾಕುವ ಹಾಗೇ ಹಾಕಿ ನಂತರ ಅವನ ಹೆಸರಲ್ಲಿ ಹಾಗೆ ಹುಂಡಿಗೆ ಹಾಕುವಾಗ ಕೈಯ್ಯಲ್ಲಿ ಹೊಳೆಯುವ ಒಂದು ವಜ್ರ ಖಚಿತ ಬಂಗಾರದ ಬಳೆ ಕಂಡು ತನ್ನ ಜೇಬಿಗೆ ಇಳಿಸಿ ಕಾಸನ್ನು ಮಾತ್ರ ಹುಂಡಿಗೆ ಹಾಕಿದ . ಆಚೆ ಬಂದು ಚಪ್ಪಲಿ ತೆಗೆದುಕೊಂಡು ಅವನಿಗೆ ಹೊಲಿದ ಕಾಸೂ ಕೊಡದೆ ಸರ ಸರನೆ ಮನೆಕಡೆ ಹೊರಟ. ಅತೀವ ಖುಷಿಯಿಂದ ಇರೋ ಗಂಡನ ನೋಡಿ ಕಾರಣ ಕೇಳಿದಾಗ ಜೇಬಿನಿಂದ ಬಳೆ ತೆಗೆದು ತೋರಿಸಿದ. ಒಂದೇ ಇದೆಯಲ್ಲ ಮತ್ತೊಂದು ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ಅವಳು ಬೇಸರ ಪಡುತ್ತಿದ್ದಾಗ ಅವನಿಗೆ ಒಂದು ಉಪಾಯ ಹೊಳೆಯಿತು. ಇದನ್ನ ಮಾರಿ ಒಂದು ಜೊತೆ ಬಳೆ ತೆಗೆದು ಕೊಳ್ಳೋಣ. ಮಾರಬೇಕೆಂದರೆ ನಮ್ಮೂರಲ್ಲಿ ಇದಕ್ಕೆ ಸರಿಯಾದ ಬೆಲೆ ಕೊಟ್ಟು ಕೊಳ್ಳುವವರು ನಮ್ಮ ಅರಸನನ್ನ ಬಿಟ್ಟರೆ ಯಾರೂ ಇಲ್ಲ . ಅವನ ಬಳಿಯೇ ಕೇಳುತ್ತೇನೆಂದು ಹೊರಟ.
ರಾಜಭಟರಿಗೆ ತೋರಿಸಿ ಒಳಗೆ ಹೋಗಿ ಅರಸನಿಗೆ ಕೊಟ್ಟ ತಕ್ಷಣ ರಾಣಿಯ ಬಳಿಗೆ ಹೋಗಿ ತೋರಿಸಿದ . ಒಂದು ಬಳೆ ಅವನ ಬಳಿ ಇರಬೇಕಾದರೆ ಮತ್ತೊಂದನ್ನ ಏನು ಮಾಡಿದ, ಯಾರಿಗೆ ಮಾರಿದ ಎಲ್ಲಾ ವಿಚಾರಿಸಿ ಎಂದು ರಾಣಿ ಹೇಳಿದಾಗ., ಅರಸ ಹೊರ ಬಂದು ಮತ್ತೊಂದನ್ನ ತಂದರೆ ಮಾತ್ರ ನಿನಗೆ ಸೂಕ್ತ ಬೆಲೆ ಇಲ್ಲದಿದ್ದರೆ ಇಲ್ಲ ಎಂದಾಗ. ಅಲ್ಲಿಂದ ನೇರವಾಗಿ ಚಪ್ಪಲಿ ಹೊಲಿಯುವನ ಬಳಿ ಬಂದು ನಡೆದ ವಿಷಯ ತಿಳಿಸಿದ. ನನಗೇನು ಅದರ ಬಗ್ಗೆ ಗೊತ್ತಿಲ್ಲ ಸ್ವಾಮಿ ನಿಮಗೆ ಬೇಕಿದ್ದರೆ ಈಗಲೂ ಸ್ವಲ್ಪ ಚಿಲ್ಲರೆ ಕೊಡ್ತೀನಿ ನೀವೇ ತೊಗೊಂಡು ಹೋಗಿ ಹಾಕಿ ಅಂದ. ಅವನಿಂದ ಮುಷ್ಟಿಯಷ್ಟು ಚಿಲ್ಲರೆ ತೆಗೆದುಕೊಂಡು ಹೋಗಿ ಹುಂಡಿಗೆ ಹಾಕುವಾಗ ಅಂತಹದೇ ಮತ್ತೊಂದು ಬಳೆ ಕಾಸಿನ ಮಧ್ಯೆ ಇರೋದು ಗಮನಿಸಿ ಅತ್ಯಾಶ್ಚರ್ಯ ವಾಯ್ತು.ಹೊರಬಂದು ಅವನಿಗೆ ನಮಸ್ಕಾರ ಹೇಳೋಣ ವೆಂದರೆ ಅಲ್ಲಿ ಎಲ್ಲೂ ಕಾಣುತ್ತಿಲ್ಲ. ಯಾರನ್ನು ಕೇಳಿದರೂ ಅವನು ಯಾರೋ ಹೊಸಬ ಅವನ ಬಗ್ಗೆ ಗೊತ್ತಿಲ್ಲ ವೆಂದರು. ಅಲ್ಲಿಂದ ನೇರವಾಗಿ ರಾಜನ ಬಳಿ ಬಂದು ಇದನ್ನೂ ಕೊಟ್ಟ. ಅಷ್ಟು ಹೊತ್ತಿಗೆ ರಾಜಭಟರು ಬಂದು ಇವನನ್ನ ಬಂಧಿಸಿ ಹೇಳಿದರು ಇದು ನಮ್ಮ ರಾಜನೇ ದೇವಿಗೆ ಮಾಡಿಸಿದ್ದ ಬಳೆಗಳು. ಕೆಲವು ದಿನಗಳ ಹಿಂದೆ ಕಳ್ಳತನವಾಗಿತ್ತು. ಬಳೆಗಳ ಜೊತೆ ಕಳ್ಳನೇ ಬಂದು ಸಿಕ್ಕಿಬಿದ್ದಿರುವುದೇ ವಿಶೇಷ ಅಂತ ಹೇಳಿ ಕಾರಾಗೃಹಕ್ಕೆ ಕರೆದೊಯ್ದರು. ರಾತ್ರಿ ಕನಸಲ್ಲಿ ಅದೇ ಚಪ್ಪಲಿ ಹೊಲಿಯುವವ ಬಂದು ನಗುತ್ತಾ ನಾನು ಚಿಲ್ಲರೆ ಕೊಟ್ಟರೆ ಅದರಲ್ಲಿ ಉಳಿಸಿ ನಿನ್ನದೆಂದು ಹಾಕಿದಾಗಲೇ, ನಾನು ಬಳೆಗಳನ್ನ ರಾಜನಿಗೆ ತಲುಪಿಸಲು ಸರಿಯಾದ ವ್ಯಕ್ತಿ ನೀನೇ ಅಂತ ಆಗಲೇ ನಿರ್ಣಯಿಸಿದೆ. ಅದರಂತೆಯೇ ಎಲ್ಲಾ ನಡೆದಿದೆ.ನೀನು ತಪ್ಪುಮಾಡಿದ್ದಕ್ಕೆ ಶಿಕ್ಷೆ ಇದು ಎಂದುಹೇಳಿ ಮಾಯವಾದ.