ನಾನು ಮತ್ತು ನನ್ನ ಮುಂಜಾನೆ
ನಾನು ಮತ್ತು ನನ್ನ ಮುಂಜಾನೆ
ಅದೊಂದು ಮುಂಜಾನೆ… ಗಿಡಗಳ ಎಲೆಗಳಲ್ಲಿ ಇಬ್ಬನಿ ಮುತ್ತು ಪೋಣಿಸಿದಂತೆ ಸುಂದರವಾಗಿ ಕಾಣುತ್ತಿತ್ತು. ಆಗಸದಲ್ಲಿ ಎಲ್ಲೆಡೆ ಹಾಲ್ಗಡಲಿನಂತೆ ಮೇಘಗಳ ಸಿಂಗಾರ. ರವಿಯ ಕಿರಣಗಳಿಗೆ ಮಂಜಿನ ಕಣಗಳು ಕರಗಿ ಧರೆಗೆ ವಾಲುತ್ತಿದ್ದವು. ಹಕ್ಕಿಗಳ ಚಿಲಿಪಿಲಿ ನಾದಲಹರಿ ಕಿವಿಗಿಂಪಾಗುವ ಜೊತೆ ಜೊತೆಗೆ ನಯನಗಳಿಗೆ ಮನೋಹರ ನೋಟದ ಉಡುಗೊರೆ.
ರವಿಯ ಬರುವಿಕೆಗೆ ಕಾಯುವ ವೃಂದಾವನದಲ್ಲಿನ ಕುಸುಮಗಳು ಅವನನ್ನು ಸ್ವಾಗತಿಸಲೆಂದೇ ಅರಳುವಂತೆ, ಪುಷ್ಪದ ನಗೆಯ ನೋಡಿ ಸೂರ್ಯನ ಮೊಗವು ನಾಚಿ ಕೆಂಪಾಗುವಂತೆ, ಇದ ನೋಡಿ ಕವಿ ಮನಸ್ಸುಗಳಲ್ಲಿ ಭಾವನೆಗಳ ಕಾರಂಜಿ ಚಿಮ್ಮುವುದರಲ್ಲಿ ಯಾವುದೇ ಅನುಮಾನ ಬೇಡ. ಮುಂಜಾನೆಯ ದಿವ್ಯ ನೋಟವು ಆ ದಿನವಿಡೀ ಹೊಸಹೊಸ ಕಲ್ಪನೆಗೆ ನಾಂದಿ ಹಾಡುತ್ತದೆ. ಮೊಬೈಲ್ನಲ್ಲಿ ಸೆರೆಹಿಡಿದ ಛಾಯೆಗಿಂತ ಮನಸ್ಸಲ್ಲಿ ಬಂಧಿಯಾದ ಪ್ರಕೃತಿಯ ಆ ರಮಣೀಯ ಮಧುರ ದೃಶ್ಯ ಎಂದೂ ಮಾಸದು.
ನಮ್ಮ ಪ್ರಕೃತಿಯ ವಿಸ್ಮಯವೇ ಹಾಗೆ… ಕಣ್ಣುಹಾಯಿಸಿದ ತಡೆಯ ತುಂಬಾ ಒಂದೊಂದು ಅದ್ಭುತ ಮನೆಮಾಡಿರುತ್ತದೆ. ಆಕರ್ಷಣೆಯ ಹಸಿರು ಕಣ್ಣ ತಂಪುಗೊಳಿಸುತ್ತದೆ. ಆದರೆ ಈ ದಿನಗಳಲ್ಲಿ ಇಂತಹ ದೃಶ್ಯಗಳೇ ಮಾಯವಾಗುತ್ತಿವೆ. ನಮ್ಮ ಮುಂದಿನ ಪೀಳಿಗೆಗೆ ಇಂತಹ ಸವಿ ನೋಟವನ್ನು ಮೊಬೈಲ್ನಲ್ಲಿ ಅಥವಾ ಫೋಟೋದಲ್ಲಿ ಬಿಟ್ಟರೆ ಬೇರೆ ಎಲ್ಲಿಯೂ ಸಿಗಲಾರದೇನೋ…. ಆದುದರಿಂದ ಪರಿಸರವನ್ನು ಉಳಿಸಿ ಬೆಳೆಸೋಣ. ಎಲ್ಲರೂ ಅದನೋಡಿ ಸವಿಯಲಿ…ನಲಿಯಲಿ.
