ನಾನೇಕೆ ಹಾಸ್ಯ ಲೇಖನ ಬರೆಯುವುದಿಲ್ಲ
ನಾನೇಕೆ ಹಾಸ್ಯ ಲೇಖನ ಬರೆಯುವುದಿಲ್ಲ
ಪ್ರಬಂಧ : ನಾನೇಕೆ ಹಾಸ್ಯ ಬರಹ ಬರೆಯಲಿಲ್ಲ ?
ಹಾಸ್ಯ ಬರಹ : " ರೀ ಏನ್ಮಾಡ್ತಿದೀರಾ ? " ಈ ಪ್ರಶ್ನೆಗೆ ಇನ್ಯಾರು ಅಧಿಕಾರಿ ? ನಿಮ್ಮ ಊಹೆ ಸರಿ . ಈ ಪ್ರಶ್ನೆಯ ಅಧಿಕಾರಿ ನಿಮ್ಮ ಪತ್ನಿಯೇ ಅಲ್ಲಲ್ಲ ನನ್ನ ಪತ್ನಿಯೇ . ಪ್ರಶ್ನೆ ಬಂದ ಕೂಡ್ಲೇ ಸಂಪೂರ್ಣ ಗಮನವೆಲ್ಲಾ ಪತ್ನಿಯೆಂಬ ಪ್ರತೀ ಕುಟುಂಬದ ಸರ್ವೋಚ್ಚ ನ್ಯಾಯಾಲಯದ ( ಕು = ಕುಟುಂಬದ ಸ= ಸರ್ವೋಚ್ಚ ನ್ಯಾ = ನ್ಯಾಯಾಲಯ ಅಥವಾ ಕುಟುಂಬದ ಸುಪ್ರೀಂ ಕೋರ್ಟ್ -- ಕು. ಸು. ಕೋ .) ಕರೆಗೆ ಓಗೊಟ್ಟೆ . " ರೀ ಕೇಳಿಸ್ತಾ ? " ಅಯ್ಯಯ್ಯೋ ಕೇಳಿಸಲಿಲ್ಲಾ ಅಂದ್ರೆ ಮುಂದೆ ಪರ್ಮನೆಂಟಾಗಿ ಕೇಳಿಸೋದೂ ಅನುಮಾನವೇ . ಹಾಗಾಗಿ ಮುಂದಿನ ಅವಘಡಗಳಿಂದ ರಕ್ಷಣೆ ಪಡೆಯಲು ತಕ್ಷಣವೇ " ಹ್ಞೂ ಹೇಳೂ " ಅಂದೆ . " ಈ ಮೊಬೈಲ್ ಇಟ್ಕೊಂಬಿಟ್ರೆ ನಿಮಗೆ ಹೆಂಡತಿ ಬೇಡ ಮಗ ಬೇಡ ಮನೆ ಸಂಸಾರ ಏನೂ ಬೇಡಾ " ಓಹೋಹೋ ಶುರುವಾಯಿತು ಅರ್ಚನೆ ಎಂದುಕೊಂಡು " ಈಗೇನಾಯಿತೇ" ಎಂದೆ . " ಮೊಬೈಲ್ ಇಟ್ಟುಕೊಂಡು ಏನು ಮಾಡ್ತಿದ್ರೀ ? " ಅಂದಳು . " ಒಂದು ಹಾಸ್ಯ ಬರಹ ಬರೆಯೋಣಾ ಅಂತ ಅನ್ಕೊಂಡಿದ್ದೀನಿ . ಕಣೆ " ಅಂದೆ . ಕಿಸಕ್ಕನೆ ನಕ್ಕಳು . " ಲೇ ಯಾಕೇ ನಾನು ಹಾಸ್ಯ ಲೇಖನ ಬರಿಯೋದು ನಿಂಗಿಷ್ಟ ಇಲ್ವಾ ? " ಅಂದೆ. " ನನ್ನಿಷ್ಟ ಹಾಗಿರ್ಲೀ , ನಿಮ್ಮ ಹಾಸ್ಯ ಬರಹಾನ ಓದೋರ್ಯಾರು ? " ಅಂದ್ಳು . " ಯಾಕೇ ಹಾಗಂತೀಯಾ? " ಅಂದೆ . " ಯಾಕಾ ? ಯಾರು ಓದ್ತಾರೆ ಅನ್ನೋ ಮಿನಿಮಂ ಪರಿಜ್ಞಾನ ಇಲ್ದೇ ಬರೀತೀನಿ ಅಂತಿದೀರಲ್ಲಾ ಏನ್ ಹೇಳ್ಳಿ ನಿಮ್ಮ ಬುದ್ಧೀಗೆ " ಅಂದ್ಲು . ಹೌದಲ್ವಾ . ಕನ್ನಡಿಗರು ಮೆಚ್ಚೋ ಹಾಗೆ ಬರೆಯೋದು ಅಂದ್ರೆ ಏನ್ ತಮಾಷೆನಾ . ಕನ್ನಡಿಗರು ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ತಾನೇ ಅಂತ ನಾನೂ ಅನ್ಕೋತಿದ್ದೆ . " ನಿಮ್ಮ ಮುಖಾ ನೋಡ್ಕೊಂಡಿದೀರಾ ಕನ್ನಡೀಲಿ ? " ಅಂದ್ಳು . " ಏಯ್ , ನನ್ನ ಮುಖಾ ನೋಡಿ ನನ್ ಲೇಖನಾನ ಓದೋರ್ಯಾರೂ ಇರಲ್ಲ ಬಿಡೆ . ಅದಿಕ್ಕೇ ಎಂಥೆಂಥವರೋ ತಮ್ಮ ಫೋಟೊ ಕೊಡದೇ ಬರೀ ಲೇಖನಾನ ಮಾತ್ರ ಪ್ರಕಟಿಸೋದು " . ಅಂದೆ . ತೀರಾ ಕೈ ಹಿಡಿದೋಳೇ ನನ್ನ ವದನಾರವಿಂದ(?)ಕ್ಕೆ ಇನ್ನೂ ಹೆಚ್ಚಿನ ಗೌರವ ಮರ್ಯಾದೆಗಳನ್ನು ತೋರಿಸ್ತಾ ಇದ್ಳೋ ಏನೋ .
ಅಷ್ಟೊತ್ತಿಗೆ ಸರಿಯಾಗಿ ನನ್ನ ಮರ್ಯಾದೆ (?) ಉಳಿಸೋಕೇ ಅಂತಾನೇ ನಮ್ಮ ಕೇಶಿ ಬಂದ . ಅವನ ನಿಜವಾದ ಹೆಸರು ಕೇಶವಪ್ರಸಾದ . ನಾವೆಲ್ಲಾ ಕೇಶಿ ಕೇಶಿ ಅಂತ ಕರೀತೀವಿ . ಯಾಕೇಂದ್ರೆ ಅವನ ಹೇರ್ ಸ್ಟೈಲ್ ಒಳ್ಳೇ ಹಸಿವಿನಿಂದ ಸಾಯ್ತಿದ್ದ ಇಲಿ ಹೇಗೆ ಸಿಕ್ಕಿದ್ದನ್ನು ಎಲ್ಲೆಂದರಲ್ಲಿ ಕಚ್ಚಿ ಕುಲಗೆಡಿಸಿಡುತ್ತೋ ಹಂಗೇ ಇವನ ಕೇಶರಾಶೀನೂ ಅದೆಂಥದೋ ಸ್ಟೈಲ್ ಮಾಡೋಕೆ ಹೋಗಿ ಎಕ್ಕುಟ್ಟಿಹೋಗಿತ್ತು . ಮಾನ ಮುಚ್ಕೋಳೋಕೇ ಅಂತ ತಲೇಗೆ ಒಂದು ಟೋಪಿ ಹಾಕ್ಕೊಂಡು ಬರೋನು . ಇವತ್ತೂ ಬಂದ . " ಏನೋ ಕೇಶಿ ಬಂದಿದ್ದೂ " ಅಂದೆ . " ಸಾ ನಿಮ್ಮುನ್ನೊಂದ್ ಮಾತ್ ಕೇಳ್ತೀನಿ ತಪ್ ತಿಳೀಬಾರ್ದು" . ಅಂದ . ಅವ್ನು ಯಾವಾಗ್ಲೂ ಮಾತು ಶುರು ಮಾಡೋದೇ ಹಾಗೆ . " ನಮ್ ಕನ್ನಡ್ದಾಗೆ ತುಂಬಾ ಜನ ಪದ್ಯ ಗಿದ್ಯ ಎಲ್ಲಾ ಬರ್ದೀದಾರೆ ಅಲ್ವಾ ಸಾ ? " ಅಂದ . " ಹ್ಞೂ ಕಣೋ " ಅಂದೆ . " ಅವರನ್ನೆಲ್ಲಾ ಕವಿಗಳು ಅಂತಾರೆ ಕಣೋ " ಅಂದೆ . " ನಾನೂ ನೋಡೀನಿ ಬಿಡೀ ಸಾ ". ಅಂದ . " ನೀನೆಲ್ಲಿ ನೋಡಿದೀಯಪ್ಪಾ " ಅಂದೆ . " ಮೊನ್ನೆ ಮೊನ್ನೆ ನಮ್ಮನೆ ಹತ್ರಾನೇ ಕವ್ಕೋಂಡಿರ್ಲಿಲ್ವಾ ." ಅಂದ . " ಅಪ್ಪಾ ಸ್ವಾಮಿ , ಅದು ಕವ್ಕೊಳೋದಲ್ಲಪ್ಪಾ . ಗುಂಪುಗೂಡೋದು " ಅಂತ ತಿದ್ದಿದೆ . " ಎಲ್ಲಾ ಒಂದೇ ಬುಡೀ ಸಾ . ಕವಿಯೋದೂ ಅಂದ್ರೆ ಒಟ್ಟಿಗೆ ಸೇರೋದೂ ಅಂತ ತಾನೇ . ನೋಡಕ್ಕಾ , ಸಾರು ನಂಗೇನೂ ಬರಲ್ಲಾ ಅಂತ ಹೆಂಗ್ ಯೋಳ್ತರೇ " ಅಂದ . ನನ್ನವಳು " ಹೌದು ಕಣೋ ಕೇಶಿ ಏನೋ ಸ್ವಲ್ಪ ಗೊತ್ತಿರ್ಬೋದು ಅಂತ ಮರ್ಯಾದೆ ಕೊಟ್ಟು ಕೇಳಿದ್ರೆ ಹಂಗೇ ಕಣೋ . ನಿಂಗೆ ಈಗೇನ್ ವಿಷಯ ಬೇಕು ನನ್ಕೇಳೂ " ಅಂದ್ಳು .
ಕೇಸು ಆ ಕಡೆಗೆ ಶಿಫ್ಟ್ ಆಗಿದ್ದು ನಂಗೆ ಖುಷಿ ಕೊಡ್ತು . ನಾನು ಯಾರೇನಾದ್ರೂ ಹೇಳ್ಳಿ ಇವತ್ತು ಶತಾಯಗತಾಯ ಒಂದು ಒಳ್ಳೆಯ(ಅನುಮಾನಾನೇ. ಆದ್ರೂ) ಹಾಸ್ಯ ಬರಹ ಬರೀಲೇ ಬೇಕು ಅಂತ ಛಲ ಹಿಡಿದು ಕೂತೆ . ಮತ್ತೆ ಕೈಲಿ ಮೊಬೈಲ್ ಹಿಡ್ಕೊಂಡೆ . ಪುಸ್ತಕ ಹಿಡ್ಕೊಂಡು ಪೆನ್ನಿಂದ ಕೈಲೇನಾದ್ರೂ ಬರೆದೇ ಅನ್ಕೊಳಿ . ನನ್ನ ಬರಹ ಎಂಥಾ ಗ್ರಾಫಾಲಜಿಸ್ಟಿಗೂ ತಿಳಿಯದಷ್ಟು ಸ್ಪಷ್ಟವಾಗಿ(?) ಬರೀತೀನಿ . ಮತ್ತೆ ಅದನ್ನು ಓದಿ ಏನು ಬರಿದಿದ್ದೀನಿ ಅನ್ನೋದನ್ನ ಅರ್ಥ ಮಾಡ್ಕೋಬೇಕು ಅಂದ್ರೆ ಅದಿನ್ನೊಂದು ಮಹಾ ಪ್ರಯಾಸದ ಸಾಹಸ . ನನ್ನ ಕೈಬರಹವನ್ನು ಮೀರಿಸೋ ಹಾಗೆ ಯಾವ ಡಾಕ್ಟರ್ ಕೂಡಾ ಬರೆಯೋದಿಲ್ಲ (ಡಾಕ್ಟರ್ ಗಳ ಕ್ಷಮೆ ಇರಲಿ . ಸಾಮಾನ್ಯವಾಗಿ ಅವರು ಬರೆದಿದ್ದನ್ನು ಓದಕ್ಕಾಗೋದು ಮೆಡಿಕಲ್ ಶಾಪ್ ನೋರಿಗೆ ಮಾತ್ರ . ) ಹಾಗಾಗಿ ನನ್ನ ಸಾಹಿತ್ಯ ಸೇವೆಯೆಲ್ಲಾ ಮೊಬೈಲಿನಲ್ಲೇ . ಇನ್ನೇನು ಶುರು ಮಾಡಬೇಕೂ ಅಷ್ಟರಲ್ಲಿ ನನ್ನ ಸು.ಕೋ. ಕೂಗಿದಳು ಅಲ್ಲಲ್ಲ ಕರೆದಳು . " ಏನೂಂದ್ರೇ , ರೀ ಕೇಶಿ ಏನ್ಕೇಳ್ತಿದಾನೆ ಕೇಳುಸ್ಕೊಳೀ " ಅಂದ್ಳು . ಕು. ಸು.ಕೋ. ಆರ್ಡರ್ ಮೀರಲು ಸಾಧ್ಯವೇ ?. " ಏನೋ ಕೇಶಿ ಅದೂ" ಅಂದೆ . " ಅದೇ ನಾನೇಳುದ್ನಲಾ ಸಾ ಈ ಪದ್ಯ ಗಿದ್ಯ ಬರಿಯೋರು ಅವ್ರುನ್ನೆಲ್ಲಾ ಅದೇನೋ ಅಂತಾರಲ್ಲ ಏನೇಳಿ " ಅಂತ ನನ್ನೇ ಕೊಶ್ಚನಿಸಿದ. ನಾನು " ಸಾಹಿತಿನೇನೋ" ಅಂದೆ ." ಅದೇ ಅದೇ ಸಾಯಿತಿ ಸಾಯಿತಿ . " ಅಂದ . " ಲೋ ಅದು ಸಾಯಿತಿ ಅಲ್ವೋ " ಎನ್ನಲು ಹೋದವನು ಸುಮ್ಮನಾದೆ . ಒಂದರ್ಥದಲ್ಲಿ ಸರಿಯಾಗಿ ಬರೆದವ ಸಾಹಿತಿ ಇಲ್ಲದಿದ್ದರೆ ಸಾಯಿತಿ ಅಂದುಕೊಂಡು ಸುಮ್ಮನಾದೆ . " ಸಾ ಈ ತರಾ ಪದ್ಯ ಗಿದ್ಯ ಬರಿಯೋದೆಲ್ಲಾ ಸುಲಭಾನಾ ಸಾ" ಅಂದ . ತುಂಬಾ ವಿವರಣೆ ಕೊಡಬೇಕೂ ಅಂತ ಅತೀ ಉತ್ಸಾಹದಿಂದ ಬಾಯಿ ತೆರೆದವನಿಗೆ ಕು.ಸು.ಕೋ ನಿಂದ ಅಪ್ಪಣೆ. " ಅವನಿಗರ್ಥ ಆಗೋ ಹಾಗೆ ಹೇಳ್ಬಾರ್ದಾ ?" ತಕ್ಷಣವೇ ತಲೆಯಲ್ಲಿ ಮಿಂಚೊಂದು ಹೊಳೆದು" ಏನೋ ಗೊತ್ತಿಲ್ಲ ಕಣೋ ಕೇಶಿ . ತುಂಬಾ ಓದ್ಕೊಂಡೋರಿಗೆ ಸುಲಭ . ನನ್ನಂಥೋರಿಗೆ ಅಲ್ಲಲ್ಲ ನನಗೆ ಕಷ್ಟ " ಅಂದೆ . " ಓ ಔದಾ ಸಾ " ಅಂತ ಸ್ವಲ್ಪ ಹೊತ್ತು ಸುಮ್ಮನಾದ . ಶಾಂತಿ ನೆಲೆಸಿತು ಎಂದು ಅಂದ್ಕೊಳೋ ಅಷ್ಟರಲ್ಲಿ " ಏ ಕಷ್ಟ ಅಂತ ಬುಡಕಾಯ್ತದಾ ಸುಮ್ಕಿರಕಾಯ್ತದಾ ಯೋಳಿ ಸಾ . ನಾನೂ ಸಾಯಿತ್ಯ ಕುರ್ಸಿ ಮಾಡಬೇಕು ಸಾ. ಆರ್ಸೀವಾದ ಮಾಡಿ" ಅಂದ . ಅದು ಕುರ್ಸಿ ಅಲ್ಲ ಕೃಷಿ ಆರ್ಸೀವಾದ ಅಲ್ವೋ ಆಶೀರ್ವಾದ ಅಂತ ತಿದ್ದೋಕೆ ಹೋದೋನು ಇನ್ನು ಕೃಷಿ ಅಂದ್ರೆ ಏನು ಅಂತ ಕೇಳಿ ನಾನು ವ್ಯವಸಾಯ ಅಥವಾ ಬೇಸಾಯ ಅಂತ ಅರ್ಥ ಹೇಳಿ ಅದನ್ನ ಈ ಪುಣ್ಯಾತ್ಮ ತುಂಬಾ ಚೆನ್ನಾಗಿ ತಿಳ್ಕೊಂಡು ನನ್ನ ಪುಸ್ತಕಗಳನ್ನೆಲ್ಲಾ ನೆಲಸಮಾಧಿ ಮಾಡಿ ಸಾ ಸಾಯಿತ್ಯ ಕೃಸಿ ಮಾಡಿದೀನಿ ಬನ್ನಿ ನೋಡಿ ಸಾ ಅಂತ ನನ್ನನ್ನೇ ಕರೆದು ತೋರಿಸಿಯಾನು ಮತ್ತು ಆರ್ಸೀವಾದನ ತಿದ್ದೋಕೆ ಹೋದ್ರೆ ಅದು ವಾದಕ್ಕೆ ಎಡೆ ಮಾಡಿ ಹಾಸ್ಯ ಬರಹ ಬರೀಬೇಕೂ ಅನ್ನೋ ನನ್ನ ಉಸ್ತಾಹ ಅಲ್ಲಲ್ಲ ಉತ್ಸಾಹ ( ಥೂ .ಎಷ್ಟು ಬೇಗ ಸಹವಾಸ ಪ್ರಭಾವ ) ತಕ್ಷಣ ಹೃದಯಾಘಾತ ಹೊಂದಿ ಸತ್ತೇ ಹೋದೀತೆಂದು ಭಾವಿಸಿ" ಲೋ ಕೇಶಿ ನೀನು ಹೀಗೆ ಹನುಮಂತನ ಹಾಗೆ ಬಗ್ಗಿ ನಿಂತ್ರೆ ಆಶೀರ್ವಾದ ಮಾಡೋಕೆ ನಾವೇನ್ ರಾಮ ಸೀತೇನಾ" ಅಂದೆ . " ನಂಗೆ ನೀವಿಬ್ರೂ ಅದೇಯಾ " ಅಂತ ಹೇಳಿ ಎದ್ದೋದ .
ಮಾರನೇ ದಿನವೇ ಬಂದ . " ನೋಡಿ ಸಾ ನಾನೂ ಪದ್ಯ ಬರ್ದಿವ್ನೀ" ಅಂದ ." ಅಲೆಲೇ ನಿರಕ್ಷರಕುಕ್ಷಿ ನೀನೂ ಪದ್ಯ ಬರ್ದ್ಯಾ ? " ಅಂದೆ . " ಯಾಕಾಗ್ಬಾರ್ದೂ ? ಕಾಳಿದಾಸ ಏನು ಹುಟ್ಟ್ಹುಟ್ತಲೇ ಕವೀನಾ" ಅಂತ ನನ್ನ ಕು.ಸು.ಕೋ ಹೇಳಿದಳು . ಇದ್ಯಾಕೋ ತೀರಾ ಅತಿಯಾಯ್ತು ಅನ್ಸುದ್ರೂ ಸುಮ್ನಾದೆ . ತಾಳಿ ಕಟ್ಟಿದ್ಮೇಲೆ ತಾಳ್ಕೋಬೇಕು ತಾನೆ ಅನ್ಕೊಂಡು " ಏನು ಪದ್ಯ ಬರ್ದಿದೀಯೋ ? " ಅಂದೆ . ಓದಿದ .
ಪದ್ಯ ಒಂದು. ಅವಳು ಬಂದಳು ಅಲ್ಲಿ ನಿಂತಳು
ಕಾಲು ನೋಯಲು ಕುಂತಳು .
ಪದ್ಯ ಎರಡು .ಕೆಸರಿನಲ್ಲಿ ಕಾಲು ಇಟ್ಟೆ
ಪಚ್ ಪಚ್
ಗೋಡೆ ಮೇಲೆ ಹಲ್ಲಿ ಹೇಳ್ತು
ಲೊಚ್ ಲೊಚ್ .
" ಹೆಂಗೈತೆ " ಅಂದ .
" ಇದೇನು ಪದ್ಯಾನೋ ? ಅದು ಹೇಗೆ ಅಷ್ಟು ಬೇಗ ಬರೆದೆಯೋ " ಎಂದೆ . " ಏನಿಲ್ಲ ಸಾ . ನಿಮ್ಮನೆಯಿಂದ ವಸಿ ದೂರ್ದಾಗೇ ಬಸ್ಟಾಪ್ ಐತಲ್ವಾ " ಅಂದ . " ಇದೆ "ಅಂದೆ . " ನಿನ್ನೆ ನಿಮ್ಮನೆ ಬಿಟ್ಟು ಸೀದಾ ಅಲ್ಲಿಗೋದ
ೆ . ಹೆಂಗೂ ಮನೇಗೋಬೇಕಿತ್ತಲ್ಲಾ ಅದಿಕ್ಕೆ . ನಾನು ಹೋದೇಟ್ಗೇ ಒಬ್ಳು ಬಂದ್ಲು . ಸ್ವಲ್ಪ ಹೊತ್ತು ನಿಂತ್ಳು . ಕಾಲ್ ನೋಯ್ತಾ ಅದೆ ಅಂತ ಅಲ್ಲೇ ಕಟ್ಟೇ ಮ್ಯಾಗೆ ಕುಂತ್ಳು . ಬಸ್ಸಿಳ್ದು ನಮ್ಮನೆ ಕಡೆ ನಡ್ಕೊಂಡ್ ಓಯ್ತಾ ಇದ್ನಾ ಚೂರು ಮಳೆ ಬಂದು ರಸ್ತೆ ಮ್ಯಾಗಳ ಗುಂಡಿಯಾಗೆ ಕೆಸರು ತುಂಬ್ಕಂಡಿತ್ತು . ನೋಡ್ದೇನೆ ಕಾಲ್ ಮಡುಗ್ದೇ . ಪಚ್ ಅಂತ ಸಬ್ದ ಆತು . ಮನೇಗೋದ್ನಾ ? ಅಲ್ಲಿ ನಮ್ಮನೆ ಗೋಡೆ ಮ್ಯಾಕೆ ಒಂದಲ್ಲಿ ಲೊಚ್ ಲೊಚ್ ಅಂತ ಸಬ್ದ ಮಾಡ್ತು . ನಾನ್ ಬೇರೆ ಪದ್ಯ ಬರೀಬೇಕು ಅಂತ ಅನ್ಕೊಂಡಿದ್ನಾ . ಇವುನ್ನೇ ಅಕ್ಕುಂತಾವ ಯೋಳ್ದೇ . ಇಂಗೇ ಬರಿ ಎಲ್ಡೆಲ್ಡು ಪದ್ಯ ಆಯ್ತವೇ ಅಂದ್ರು . ಬರುಸ್ಕಂಡು ಬಂದೇ " ಅಂದ . ಎಲಾ ನಿನ್ನಾ ? ಇಷ್ಟೆಲ್ಲಾ ಕೆಲಸ ಮಾಡಿ ಕ.ಸು.ಕೋ ನಿಂದಲೇ ಬರೆಸಿಕೊಂಡು ಬಂದಿದೀಯಾ ಅಂದ್ರೆ ಇವನ್ನು ಹೊಗಳಲೇ ಬೇಕು . ವಿಧೀನೇ ಇಲ್ಲಾ . ಆದ್ರೆ ನನ್ನ ಕವಿ ಮನಸ್ಸು ಒಪ್ತಾ ಇಲ್ವೇ ? ಏನು ಮಾಡೋದೂ ಏನು ಮಾಡೋದೂ ಅಂತಿದ್ದಾಗ್ಲೇ ಒಂದು ಉಪಾಯ ಹೊಳೀತು . " ಲೋ ಕೇಶೀ ಎಷ್ಟು ಚೆನ್ನಾಗಿ ಬರ್ದಿದೀಯೋ ಅಲ್ಲಲ್ಲ ಬರುಸ್ಕೋಂಡ್ ಬಂದೀದೀಯೋ . ಇವು ಯಾವ ಪ್ರಕಾರದ ಪದ್ಯಗಳು ಅಂತ ಒಂಚೂರು ಕೇಳೋ " ಅಂತ ಛೂ ಬಿಟ್ಟು ಸುಮ್ಮನಾದೆ .
ಬಾಣ ಸೀದಾ ಗುರಿಯೆಡೆಗೆ ಪ್ರಯಾಣ ಬೆಳೆಸಿತು . ನನ್ನ ಕು..ಸು.ಕೋ ಬಿರುಗಾಳಿಯಂತೆ ಅಪ್ಪಳಿಸಿದಳು . ಹವಾಮಾನದ ಬದಲಾವಣೆಯಾಗುವ ಸಂದೇಹ (ಶ) ಮೊದಲೇ ಇದ್ದುದರಿಂದ ತಯಾರಾಗಿಯೇ ಇದ್ದೆ . " ಏನ್ರೀ ನಿಮ್ಮ ಮಾತಿನ ಅರ್ಥ ? " ಎನ್ನುತ್ತಾ ನಾನು ಆಗಾಗ ಧೂಳು ಹೊಡೆದು ಕಣ್ಣಿಗೊತ್ತಿಕೊಂಡು ಓದದೇ ಮತ್ತೆ ಭಕ್ತಿಯಿಂದ ಸ್ವಸ್ಥಾನದಲ್ಲಿರಿಸುವ ಸರ್ವಜ್ಞನ ತ್ರಿಪದಿಗಳು ಪುಸ್ತಕವನ್ನು ಆಲ್ಮೋಸ್ಟ್ ಕಣ್ಣಿಗೆ ತುರುಕುವಷ್ಟು ನಯವಾಗಿ ಹಿಡಿದಳು ." ಆ ಸರ್ವಜ್ಞ ಬರ್ದಿರೋ ಪದ್ಯಗಳಲ್ಲಿ ಮೂರು ಸಾಲು ತಾನೇ ಇರೋದು ? " ಅಂದಳು . " ಹೌದು" ಅಂದೆ . " ಮೂರು ಸಾಲಿನ ಪದ್ಯ ತ್ರಿಪದಿ ಆದ್ರೆ ಎರಡು ಸಾಲಿನ ಪದ್ಯಗಳು. ದ್ವಿಪದಿಗಳು ಆಗಲ್ವೇನ್ರೀ ? ಅದೂ ಅಲ್ಲದೇ ಜಾನಪದ ಸಾಹಿತ್ಯ ಇರೋ ಥರಾ ಇಲ್ವಾ " ಎಂದಳು . ಎಲಾ ಇವಳ ಲಾಜಿಕ್ಕೇ ? ಬಸ್ಟಾಪಿಗೆ ಬಂದು ನಿಂತು ಕುಂತು ಬಸ್ಸು ಹತ್ತಿ ಹೋದವಳ ಮೇಲೆ ಬರೆದ ಅಲ್ಲಲ್ಲ ರಚಿಸಿದ ಎರಡು ಸಾಲನ್ನು. , ಈ ಕೇಶಿ ಕೆಸರಲ್ಲಿ ಕಾಲಿಟ್ಟು ಮನೆಗೋಗಿ ಹಲ್ಲಿನೋಡಿದ್ದನ್ನೆಲ್ಲಾ ಪದ್ಯ ಅಂತ ಬರೆದಿದ್ದೂ ಅಲ್ಲದೇ ಅವುಗಳನ್ನು ಸರ್ವಜ್ಞನ ತ್ರಿಪದಿಗಳ ರೇಂಜಿಗೆ ಜಾನಪದ ಸಾಹಿತ್ಯದ ಶ್ರೇಷ್ಠ ಮಟ್ಟಕ್ಕೆ ಏರಿಸೋದನ್ನ ನೋಡಿ ನನಗೆ ವೀರಾವೇಷ ಉಕ್ಕಿ ಹರಿಯಲಾರಂಭಿಸಿತು . ನನ್ನೊಳಗೆ ಅಲ್ಲಿಯವರೆಗೂ ಮಲಗಿ ನಿದ್ರಿಸುತ್ತಿದ್ದ ಕವಿಪುಂಗವ ಎದ್ದು ನುಗ್ಗು ವೀರಾ ನಾನಿದ್ದೇನೆ ಹೆದರಬೇಡಾ ಎಂದು ಹುರಿದುಂಬಿಸಿದ .
ನಾನೂ ಆಗತಾನೇ ಹೊರಹೊಮ್ಮಿದ ಉತ್ಸಾಹದಿಂದ "ಲೇ ಏನೂಂತ ಮಾತಾಡ್ತೀಯೇ ? ಇವನ ಬಸ್ಟಾಪ್ ಪದ್ಯಕ್ಕೂ ಕೆಸರಲ್ಲಿ ಕಾಲಿಟ್ಟು ಅದೇ ಕಾಲಲ್ಲಿ ನಡೆದುಕೊಂಡು ಮನೆಗೋಗಿ ತನ್ನ ಮನೇಲಿರೋ ಗೋಡೇ ಮೇಲಿನ ಹಲ್ಲಿ ನೋಡಿ ಪದ್ಯ ಅಂತ ಬರ್ಕೊಂಡು ಬಂದ್ರೆ ಅದಕ್ಕೂ ಆ ಮಹಾನ್ ಶ್ರೇಷ್ಠ ಕವಿ ಸರ್ವಜ್ಞನ ವಚನಗಳಿಗೂ ಎಲ್ಲಿಂದೆಲ್ಲಿಯ ಸಂಬಂಧಾನೇ ? ಸಾಲದ್ದಕ್ಕೆ ಜಾನಪದ ಸಾಹಿತ್ಯ ಅಂತ ಬೇರೆ ಹೇಳ್ತೀಯಲ್ಲಾ " ಅಂದೆ . " ರೀ ಅದೆಲ್ಲಾ ಕತೆ ಪುರಾಣ ಬೇಕಾಗಿಲ್ಲ . ನಂಗೂ ಅಲ್ಪಸ್ವಲ್ಪ ಸಂಸ್ಕೃತ ಬರುತ್ತೆ . ಏಕಂ ಅಂದ್ರೆ ಒಂದು . ದ್ವೇ ಅಂದ್ರೆ ಎರಡು " ಅಂತ ಹತ್ತರವರೆಗೆ ಹೇಳಿ ನನ್ನತ್ತ ವಿಜಯೋನ್ಮತ್ತದ ನಗೆ ಬೀರಿದಳು . " ಅಂಗ್ ಕೇಳಿ ಅಕ್ಕೋ . ಏನೋ ಶಾನೆ ಓದ್ಕಂಡವರೆ ಅಂತ ಕೇಳೀರೆ ಎಂಗಾಡ್ತರೆ ಸಾರು " ಅಂತ ಕೇಶೀನೂ ಅವಳಿಗೇ ಸಾಥ್ ಕೊಟ್ಟ . ನನಗೆ ಏನು ಮಾಡಬೇಕು ಎಂದು ತೋಚದೇ ತಲೆಕೆರೆದುಕೊಂಡೆ . ಆ ರಭಸಕ್ಕೆ ಎರಡು ಮೂರು ತಲೆಕೂದಲುಗಳ ಆತ್ಮಾಹುತಿ ಆಯಿತು . ಅದರ ಪ್ರಭಾವವೋ ಅಥವಾ ಆ ತಲೆಕೂದಲುಗಳ ಆತ್ಮಗಳ ( ನೋ ಕೊಶ್ಚನ್ಸ್ ಪ್ಲೀಸ್ ) ಆಶೀರ್ವಾದವೋ ಏನೋ ನನ್ನ ಮಿದುಳಿನಲ್ಲೂ ಒಂದು ಐಡಿಯಾ ಹೊಳೆದೇಬಿಟ್ಟಿತು . ಅದರಂತೆ ಮೊದಲು ಅವಳ ದಾರಿಗೇ ಹೋದೆ . " ಆಯ್ತಮ್ಮ ನೀನು ಹೇಳಿದ ಹಾಗೇ ಮೂರು ಸಾಲಿನ ಪದ್ಯಕ್ಕೆ ತ್ರಿಪದಿ ಎನ್ನುತ್ತಾರೆ . "ಎಂದೆ . " ಅದನ್ನು ನೀವೇನು ಯೋಳದೂ . ಇಲ್ಲೇ ಕೊಟ್ಟಿಲ್ಲವಾ " ಅಂತ ಕೇಶೀನೇ ತಿವಿದ . ಕು.ಸು.ಕೋ . ಕೂಡಾ ತಕ್ಷಣವೇ ಕಿಸಕ್ಕನೆ ನಕ್ಕಳು . ಹೆಂಡತಿಯರು ಅವರವರ ಗಂಡಂದಿರನ್ನು ಉರಿಸುವ ಕಲೆಯಲ್ಲಿ ಬಲು ನಿಪುಣರಪ್ಪಾ . ಈ ವ್ಯಂಗ್ಯ ನಗೆ ಎಷ್ಟು ಉರಿಸುತ್ತೆ ಅಂದ್ರೆ ಫ್ರೆಶ್ ಗಾಯದ ಮೇಲೆ ಫ್ರೆಶ್ ಉಪ್ಪಿನಕಾಯಿ ಹಾಕಿದರೆ ಎಷ್ಟು ಉರಿಯುತ್ತೋ ಅದರ ಹತ್ತರಷ್ಟು . ಹೋಗಿ ಹೋಗಿ ಎದೇ ಸೀಳಿದ್ರೆ ಎರಡಕ್ಷರಾ ಇಲ್ದೇ ಇರೋ ಈ ನನ್ನ ಮಗಾನೂ ನನ್ನನ್ನು ಮರ್ಯಾದೆ ತೆಗೆಯೋ ಹಾಗೆ ಆಗೋದ್ನಲ್ಲಾ . ತೆಗೀಲಿ ತೆಗೀಲಿ . ಎಷ್ಟು ತೆಗೀತಾನೆ ಮಹಾ ? ನನ್ನ ಹತ್ತಿರ ಇರೋ ಮರ್ಯಾದೆ ಸಮುದ್ರದಷ್ಟು . ಅದ್ರಲ್ಲಿ ಇವನೂ ನನ್ನ ಕು.ಸು.ಕೋ. ನು ತೆಗೆದ್ರೂ ಎರಡು ಮೂರು ಕೊಡದಷ್ಟು ತೆಗೀಬಹುದು . ಅಷ್ಟೇ ತಾನೇ .ತೆಕ್ಕೊಂಡು ಹೋಗ್ಲೀ . ಅಷ್ಟಕ್ಕೆಲ್ಲಾ ಟೆನ್ಷನ್ ಯಾಕೆ ಅಂತ ಒಳಗೊಳಗೇ ಸಮಾಧಾನ ಮಾಡ್ಕೊಂಡು " ಹೋ ಹೋ ಸಮಾಧಾನ ಸಮಾಧಾನ . ಇರ್ರಪ್ಪಾ ನಿಮ್ಮ ಲೈನಿಗೇ ಬರ್ತಾ ಇದೀನಿ . ಮತ್ತೆ ಕೇಳ್ತಿದೀನಿ . ಆ ಪುಸ್ತಕದಲ್ಲೂ ಪ್ರಿಂಟ್ ಮಾಡಿರೋ ಹಾಗೆ ಮೂರು ಸಾಲಿನ ಪದ್ಯಕ್ಕೆ ತ್ರಿಪದಿ ಅಂತಾರೆ . ನಾಲ್ಕು ಸಾಲಿನ ಪದ್ಯಕ್ಕೆ ? ಅಂದೆ ಚೌಪದಿ " ಅಂದಳು . " ವೆರಿಗುಡ್ . ಕರೆಕ್ಟಾಗೇ ಹೇಳಿದಿ. ಹಾಗಾದ್ರೆ ಐದು ಸಾಲಿನ ಪದ್ಯಕ್ಕೆ ಏನಂತಾರೆ ಹೇಳು " ಅಂದೆ ಕೇಶಿ " ನಂಗೊತ್ತು ನಂಗೊತ್ತು " ಅಂತ ಕೂಗಿದ . "ಏನೋ ನಿಂಗೊತ್ತಿರೋದು " ಅಂದೆ . " ಐದು ಸಾಲಿನ ಪದ್ಯಕ್ಕೆ ದ್ರೌಪದಿ ಅಂತಾರೆ ಅಂತ ತಾನೇ ನೀನು ಹೇಳೋದು " ಅಂದೆ . ಹೌದು ಹೌದು ಅಂತ ಕಣ್ಣರಳಿಸಿ "ನೋಡಕ್ಕೋ ನಂಗೂ ಕನ್ನಡ ಸಾಯಿತ್ಯ ಯಾಕರ್ಣ ( ತಪ್ಪು ತಿಳೀಬೇಡಿ ಅದು ವ್ಯಾಕರಣ . ಕೇಶೀ ಬಾಯಲ್ಲಿ ಬಳಲಿ ಬೆಂಡಾಗಿ ಕೆಟ್ಟು ಕುಲಗೆಟ್ಟು ಯಾಕರ್ಣ ಆಗಿದೆ . ಕೇಳೋದಕ್ಕೆ ಕರ್ಣ ಕಠೋರವಾಗಿದ್ದರೂ ಸಹಿಸಿಕೊಳ್ಳಬೇಕಾಗಿ ಸವಿನಯ ಪ್ರಾರ್ಥನೆ) ಗೊತ್ತದೆ" ಅಂದ . ಅವನು ಹೇಳಿದ ಸ್ಟೈಲು ಹೇಗಿತ್ತು ಅಂದ್ರೆ ಶಬ್ದ ಮಣಿ ದರ್ಪಣ ರಚಿಸಿದ ಆಗಿನ ಕೇಶೀರಾಜನ ಆತ್ಮದ ತುಂಡೊಂದು ಇವನಲ್ಲಿ ಆವಾಹನೆ ಆಗಿದೆ ಅನ್ನೋ ಹಾಗಿತ್ತು . ಗೊತ್ತಿತ್ತು ನನ್ಮಗನೆ ಹೀಗೇ ಬೊಗುಳ್ತೀಯಾ ಅಂತ ಗೊತ್ತಿತ್ತು . ಅಂತ ಅವನ ಮೇಲೆ ಇನ್ನೂ ಚೆನ್ನಾಗಿ ಹರಿಹಾಯಬೇಕು ಇವಳ ಮೇಲಿನ ಸಿಟ್ಟನ್ನೆಲ್ಲಾ ಈ ನನ್ನಮಗನ ಮೇಲೆ ತೀರಿಸಿಕೊಂಡುಬಿಡಬೇಕು ( ಏಕೆಂದರೆ ಅದು ಸು.ಕೋ. ಮೇಲೆ ಅಸಾಧ್ಯ ಅದಕ್ಕೆ ) ಅಂದುಕೊಂಡೆ. ಅಷ್ಟರಲ್ಲಿ ಕು.ಸು.ಕೋ ಆರ್ಡರ್ ಅಪ್ಪಳಿಸಿತು . " ರೀ ಅವನಿಗೆ ತಿಳಿದಿದ್ದನ್ನು ಅವನು ಹೇಳಿದ . ಇಷ್ಟಕ್ಕೂ ಎಷ್ಟು ಚೆನ್ನಾಗಿ ಲಿಂಕ್ ಮಾಡಿದಾನೆ ನೋಡಿ . ದ್ರೌಪದಿಗೆ ಐದು ಜನ ಗಂಡಂದಿರು ತಾನೇ . ಒಬ್ಬೊಬ್ಬರದು ಒಂದೊಂದು ಲೈನು ತಾನೇ . ಅದೂ ಅಲ್ದೇ ಎಷ್ಟು ಚೆನ್ನಾಗಿ ಪ್ರಾಸ ಗೀಸಾನೆಲ್ಲಾ ಹೊಂದ್ಸಿ ಬರ್ದಿದಾನೆ .ಏನ್ ತಪ್ಪು ? " ಎಂದು ಪಾಟೀ ಸವಾಲು ಹಾಕಿದಳು . ಅಯ್ಯೋ ಭಗವಂತಾ . ಒಂದೇ ಸಾಲನ್ನು ಎರಡಾಗಿ ತುಂಡು ಮಾಡಿ ಅದರಲ್ಲೇ ಪ್ರಾಸ ಹುಡುಕುವ ಇವರಿಬ್ಬರು ನಿಶಿತಮತಿಗಳಿಗೆ ನನ್ನ ಸಾಹಿತ್ಯದ ಬಗೆಗಿನ ಅಲ್ಪಜ್ಞಾನದ ಸಹಾಯವಾಗಲೀ ಸಹಕಾರವಾಗಲೀ ಅನವಶ್ಯಕ . ಇನ್ನು ಹೆಚ್ಚೇನಾದರೂ ಮಾತು ಮುಂದುವರೆಸಿದೆನಾದರೆ ನನ್ನ ಬುದ್ದಿ ಭ್ರಷ್ಟವಾಗಿ ನೆನಪೆಲ್ಲಾ ನೆಗೆದುಬಿದ್ದು ಇರುವ ಅಲ್ಪಸ್ವಲ್ಪ ಸಾಹಿತ್ಯಾಸಕ್ತಿಯೂ ಮರೆಯಾಗಿ ಆ ಸ್ಥಾನವನ್ನು ಅಳಿಸಲಾಗದ ಅಚಲ ವಿರಕ್ತಿ ಆವರಿಸಿಕೊಂಡು ಎಲ್ಲರಿಂದಲೂ ಎಲ್ಲವುಗಳಿಂದಲೂ ದೂರವಾದೇನು ಎನ್ನುವ ಭಯ ಕಾಡಿತು. ಇಷ್ಟೊಂದು ವ್ಯಾಕರಣ ಮೀಮಾಂಸೆ ಎಲ್ಲವನ್ನೂ ಅರೆದು ಕುಡಿದವರ ಎದುರು ಮಾತನಾಡಿ ಏನೇನೂ ಲಾಭವಿಲ್ಲ ಎಂದುಕೊಂಡು " ಮೇಡಂ ನನ್ನನ್ನು ದಯವಿಟ್ಟು ಬಿಟ್ಟು ಬಿಡಿ . ತಮಗೆ ಮತ್ತು ಈ ಮನೆಯ ಮಹಾಜ್ಞಾನಿ ಕೇಶಿಗೆ ಇರುವಷ್ಟು ಸಾಹಿತ್ಯಜ್ಞಾನ ಆಲ್ಲಲ್ಲಾ ಸಾಯಿತ್ಯ ಜ್ಞಾನ ಈ ಅಲ್ಪನಿಗೆಲ್ಲಿ ? ದೊಡ್ಡ ಮನಸ್ಸು ಮಾಡಿ ಕ್ಷಮಿಸಿಬಿಡಿ " ಎಂದು ದೊಡ್ಡದೊಂದು ನಮಸ್ಕಾರ ಹಾಕಿಬಿಟ್ಟೆ .
" ಹಾಗೆ ಬನ್ನಿ ದಾರಿಗೆ " ಎಂದು ಹೇಳಿ " ಬಾರೋ ಕೇಶಿ " ಎಂದು ಅವನನ್ನೂ ಎಳೆದುಕೊಂಡು ಹೋದಳು . ಹಾಸ್ಯ ಬರಹವೊಂದನ್ನು ಬರೆಯಬೇಕೆಂಬ ನನ್ನ ನಿರ್ಧಾರ ನನ್ನನ್ನು ನೋಡಿ ಗಹಗಹಿಸಿ ನಗುತ್ತಿತ್ತು .