Ravindra Kumar N (CBSE)

Others

5.0  

Ravindra Kumar N (CBSE)

Others

ಮಾಂತ್ರಿಕ ಗೆದ್ದನೇ ?

ಮಾಂತ್ರಿಕ ಗೆದ್ದನೇ ?

2 mins
2.9K


ಸುತ್ತಲೂ ಸಂಪೂರ್ಣ ನಿರ್ಮಾನುಷ್ಯ. ಗೂಬೆಗಳಿಗೆ ಚೆನ್ನಾಗಿ ಕಣ್ಣು ಕಾಣುವ ಸಮಯ . 

ಸುಯ್ ಎಂದು ಬೀಸಲೋ ಬೇಡವೋ ಎನ್ನುವ ಅನುಮಾನದಲ್ಲಿ ಸುಳಿಯುತ್ತಿರುವ ಗಾಳಿ. ಮರಗಿಡಗಳ ಎಲೆಗಳೂ ನಾವು ಅಲ್ಲಾಡಿ ಸಾಧಿಸಬೇಕಾದದ್ದೇನಿದೆ ಎಂದುಕೊಂಡು ನಿಶ್ಚಲವಾದಂತೆ ತೋರುತ್ತಿದೆ. 

ಆಗ..... 

ಅಲ್ಲಿ ...

ಆ ಸರಿ ರಾತ್ರಿಯಲ್ಲಿ ...... 

ವಿಶಾಲವಾದ ಸ್ಮಶಾನದ ಮಧ್ಯದಲ್ಲಿ ........

ಅಂದು ಮಧ್ಯಾಹ್ನ ತಂದು ಮಣ್ಣು ಮಾಡಿದ ಯುವತಿಯ ಗೋರಿಯ ಪಕ್ಕದಲ್ಲಿ ......

ಬೆಂಕಿಯ ಕೆನ್ನಾಲಿಗೆ ಎಷ್ಟೋ ದೂರದವರೆಗೂ ಕಾಣಿಸುತ್ತಿತ್ತು. ಮಧ್ಯೆ ಫಟಾರ್ ಎನ್ನುವ ಚಿಟ್ ಪಟ ಎನ್ನುವ ಒಣ ಕಟ್ಟಿಗೆ ಉರಿಯುವ ಶಬ್ದ. 

ಓಂ ......... ಹ್ರೀಂ....... ಎನ್ನುತ್ತಾ ಒಬ್ಬ ವ್ಯಕ್ತಿ ಆ ಧಗಾಯಿಸಿಕೊಂಡು ಉರಿಯುವ ಬೆಂಕಿಗೆ ತಲೆ ಬುರುಡೆ ಯಲ್ಲಿ ತಾನು ಸಂಗ್ರಹಿಸಿದ್ದ ರಕ್ತದಲ್ಲಿ ಕೈಯನ್ನು ಅದ್ದಿ ಒಂದೊಂದೇ ಹನಿ ರಕ್ತವನ್ನು ಅಗ್ನಿಗೆ ಆಹುತಿ ನೀಡುತ್ತಿದ್ದಾನೆ. ಕೈಯಲ್ಲಿ ಮೂಳೆಯೊಂದನ್ನು ಹಿಡಿದು ಗಾಳಿಯಲ್ಲಿ ಏನೇನೋ ಬರೆದ . 

ಜಗತ್ತಿನ ಯಾವುದೇ ಅಗೋಚರ ಶಕ್ತಿಯನ್ನು ತನ್ನ ಕೈವಶ ಮಾಡಿಕೊಳ್ಳಬಲ್ಲ ಮಹಾನ್ ಶಕ್ತಿ ಶಾಲಿ ಮಾಂತ್ರಿಕ .

ಅವನು ನಿಜವಾದ ಹೆಸರೇ ಯಾರಿಗೂ ತಿಳಿದಿಲ್ಲ. ಎಲ್ಲಾ ಭಗವಾನ್ ಸ್ವಾಮಿ ಅಂತ ಕರೀತಾರೆ . ಅವನ ಶಕ್ತಿಯ ಆಳ ಕೂಡಾ ಯಾರಿಗೂ ಗೊತ್ತಿಲ್ಲ. ಆದರೆ ಇಡೀ ಊರಿಗೇ ಗೊತ್ತಿಲ್ಲದ ರಹಸ್ಯ ಒಂದಿತ್ತು. ಈ ಭಗವಾನ್ ಸ್ವಾಮಿ ಇಡೀ ಊರಿಗೆ ಊರೇ ಮಲಗಿ ನಿದ್ರಿಸುವಾಗ ತನ್ನ ಸಾಧನೆ ಮುಂದುವರೆಸ್ತಿದ್ದ. ಯಾರು ಹತ್ರಾನೂ ಮಾತು ಕಥೆ ಏನೂ ಇಲ್ಲ. ಇಂಥಾ ಸ್ವಾಮಿ ಯಾವುದೋ ಸಿದ್ಧಿಯ ವಶಕ್ಕಾಗಿ ಸದ್ದಿಲ್ಲದೇ ಸಾಧನೆ ನಡೆಸುತ್ತಿದ್ದಾನೆ. 

ಪಕ್ಕದಲ್ಲಿದ್ದ ಗೋರಿ ಇದ್ದಕ್ಕಿದ್ದಂತೆ ಅಲ್ಲಾಡಿದಂತಾಯಿತು. 

ಬೆಂಕಿಯ ಉಂಡೆಗಳಂಥಾ ಕಣ್ಣುಗಳಲ್ಲಿ ಅದೆಂಥದೋ ತೃಪ್ತಿ ಮೂಡಲಾರಂಭಿಸಿತು. ಉತ್ಸಾಹ ಜಾಸ್ತಿಯಾಯಿತು. ಆದರೆ ಆತ ಉದ್ವೇಗಗೊಳ್ಳಲಿಲ್ಲ. 

ಮಂತ್ರೋಚ್ಛಾರಣೆ ನಿಲ್ಲಿಸಲಿಲ್ಲ. 

ಸಮಯ ಸರಿದ ಹಾಗೆ ಆ ಗೋರಿಯ ಮಣ್ಣನ್ನು ಸೀಳಿಕೊಂಡು ಕೈಗಳು ಮೇಲೆದ್ದು ಹಸಿವು ಹಸಿವು ತಿನ್ನಲು ಏನಿದೆ ಎಂದು ಪ್ರಶ್ನಿಸಲಾರಂಭಿಸಿದವು. ಅಲ್ಲೇ ತಂದಿರಿಸಿಕೊಂಡಿದ್ದ ಜೀವಂತ ಕುರಿ ಯೊಂದನ್ನು ಆ ಕೈಗಳಲ್ಲಿ ಅನಾಮತ್ತಾಗಿ ಎತ್ತಿ ಇರಿಸಿದ. ನೋಡನೋಡುತ್ತಲೇ ಕುರಿ ಗೋರಿಯೊಳಗೆ ಹೋಗಲಾರಂಭಿಸಿತು. ಪ್ರಾಣಭಯದಿಂದ ಅದು ಅರಚಿಕೊಳ್ಳುತ್ತಿದ್ದರೆ ಕರುಣೆ ತೋರುವವರು ಯಾರೂ ಅಲ್ಲಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಕುರಿ ಮರೆಯಾಗಿ ಗೋರಿಯ ಮಣ್ಣು ಸಂಪೂರ್ಣವಾಗಿ ಜರುಗಲಾರಂಭಿಸಿತು. 

ಒಳಗೆ ಹೂಳಲ್ಪಟ್ಟ ಹೆಣ್ಣಿನ ದೇಹ ಮೇಲೆ ಬರಲಾರಂಭಿಸಿತು. 

ಕೆಲವು ಕ್ಷಣಗಳು ಕಳೆದವು. 

ಹೆಣ ಸಂಪೂರ್ಣ ಮೇಲೆ ಬಂದಿದೆ. ಆಗ ತಾನೇ ತಂದು ಮಲಗಿಸಿದ ಹಾಗೆ ಕಾಣುತ್ತಿದೆ . 

ಮಟ್ಟಸವಾದ ದೇಹ. ಸುಂದರಿ ಎಂದೇ ಹೇಳಬಹುದಾದ ಅಂಗಸೌಷ್ಟವ. ಸಾಮಾನ್ಯದವರಾದರೆ ಪರವಶರಾಗುತ್ತಿದ್ದರೇನೋ ? 

ಆದರೆ .....

ಆದರೆ......

ಅವನು ಭಗವಾನ್ ಸ್ವಾಮಿ.

ಅದರಲ್ಲೂ ಯಾವುದೋ ಗುರಿ ಸಾಧನೆಗಾಗಿ ಪಣ ತೊಟ್ಟವನು. ಅಂಥವನು ವಿಚಲಿತನಾಗಲು ಸಾಧ್ಯವೇ ಇಲ್ಲ. ನಿರ್ವಿಕಾರ ನಿರ್ಲಿಪ್ತ ಭಾವದಿಂದ ತೃಪ್ತಿಯಿಂದ ನೋಡಿದ. ಅದೇನೋ ಮಂತ್ರ ಹೇಳಿ ಅದರ ಮೇಲೆ ರಕ್ತ ಪ್ರೋಕ್ಷಣೆ ಮಾಡಿದ. ಯಾವುದೋ ಶಕ್ತಿ ಆ ಹೆಣದೊಳಗೆ ಪ್ರವೇಶಿಸಿತು. 

ಅದರ ಸಂಕೇತವಾಗಿ ...‌

ಸುತ್ತ ಮುತ್ತ ಇರುವ ಗಿಡ ಮರಗಳಲ್ಲಿ ನಿದ್ರಿಸುತ್ತಿದ್ದ ಹಕ್ಕಿಗಳೆಲ್ಲ ಕಿಚಪಿಚ ಸದ್ದು ಮಾಡುತ್ತಾ ಹಾರಿಹೋದವು. ಇಡೀ ಪ್ರಾಂತ್ಯದಲ್ಲಿ ಇದ್ದಕ್ಕಿದ್ದಂತೆ ಶಾಖ ಏರಲಾರಂಭಿಸಿತು. 

" ಬೇಡಾ ನಿಲ್ಲಿಸೂ ಇಲ್ಲದಿದ್ದರೆ " ಎಂದ ಸ್ವಾಮಿಯ ಕರ್ಕಶವಾದ ಗಂಟಲಿನಿಂದ ಬಂದ ಅಣತಿಯಂತೆ ಮತ್ತೆ ವಾತಾವರಣ ತಂಪಾಗಲಾರಂಭಿಸಿತು. 

ಮತ್ತೆ ಸ್ವಾಮಿಯ ಕಣ್ಣುಗಳು ಪ್ರಜ್ವಲಿಸಿದವು. 

ಅವಳು ಎದ್ದು ಕುಳಿತಳು. ನಿಧಾನವಾಗಿ ತನ್ನ ಕತ್ತನ್ನು ಸ್ವಾಮಿಯ ಕಡೆ ತಿರುಗಿಸಿದರು. ಅವಳು ಕಣ್ಣುಗಳಲ್ಲಿ ಅದೆಂಥದೋ ವಿಚಿತ್ರ ಬೆಳಕು. ಕಣ್ರೆಪ್ಪೆಗಳು ತೆರೆದೇ ಇವೆ. ಕಟವಾಯಿಯಲ್ಲಿ ರಕ್ತ ತೊಟ್ಟಿಕ್ಕುತ್ತಿದೆ. ಬೆತ್ತಲೆ ದೇಹದ ಮೇಲೆ ಅಲ್ಲಲ್ಲಿ ರಕ್ತ ಸಿಂಚನವಾಗಿದೆ. ಆದರೆ ಅವಳಿಗೆ ಇದ್ಯಾವುದೂ ಗಮನದಲ್ಲಿಲ್ಲ. 

ಪೂಜೆ ಇನ್ನೇನು ಒಂದು ಹಂತಕ್ಕೆ ಬಂದು ತಲುಪಿದೆ ಎನ್ನುವುದರೊಳಗಾಗಿ ......

ಆಗಬಾರದ್ದು ನಡೆಯಿತು. 

ಕ್ಷಣಾರ್ಧದಲ್ಲಿ ಅವಳು ಮತ್ತೆ ಗೋರಿ ಸೇರಿಬಿಟ್ಟಳು. ಎಲ್ಲವೂ ಮೊದಲಿನಂತೆಯೇ ಆಗಿಹೋಯಿತು. ಸ್ವಾಮಿಗೆ ಈಗ ಉದ್ವೇಗ ಹೆಚ್ಚಾಗಲಾರಂಭಿಸಿತು. 

ಯಾಕೆ ?

ಯಾಕೆ ಹೀಗಾಯಿತು ? 

ಇನ್ನೇನು ಸಿದ್ಧಿಯ ಒಂದು ಹಂತಕ್ಕೆ ತಲುಪಿದೆ ಎನ್ನುವುದರೊಳಗಾಗಿ ಹೀಗಾಯಿತಲ್ಲ. ಏನು ಕಾರಣ ಇರಬಹುದು ? ಎಂದು ಯೋಚಿಸುವಷ್ಟರಲ್ಲಿ ಧಗಧಗ ಉರಿಯುವ ಬೆಂಕಿಯ ಉರಿಯ ತುದಿಯಲ್ಲಿ ಪ್ರತ್ಯಕ್ಷನಾದ ಇನ್ನೋರ್ವ ಮಾಂತ್ರಿಕ ನಾನಿರುವವರೆಗೂ ನಿನ್ನ ಮತ್ತು ಈ ರೀತಿ ಲೋಕಕಂಟಕವಾದ ಸಿದ್ಧಿಯನ್ನು ಪಡೆಯಲು ಯತ್ನಿಸುವವರ ಎಲ್ಲಾ ಯತ್ನಗಳನ್ನೂ ಮಣ್ಣುಗೂಡಿಸುತ್ತಿರುತ್ತೇನೆ ಎಂದು ಹೇಳಿ ಗಹಗಹಿಸಿ ನಗುತ್ತಾ ತನ್ನ ಕೈಯಲ್ಲಿದ್ದ ರುದ್ರಾಕ್ಷಿ ಮಾಲೆಯಿಂದ ರುದ್ರಾಕ್ಷಿ ಯೊಂದನ್ನು ಕಿತ್ತು ಜೈ ಶಂಕರ ಎಂದು ಹೇಳಿ ಸ್ವಾಮಿಯ ಕಡೆಗೆ ತೂರಿದ. 

ಬೆಳಕಿಗಿಂತಲೂ ವೇಗವಾಗಿ ಬಂದ ಆ ರುದ್ರಾಕ್ಷಿ ಬೆಳೆಯುತ್ತಾ ಬಂದು ಸ್ವಾಮಿಯನ್ನು ತಲುಪುವಷ್ಟರಲ್ಲಿ ಬೃಹದಾಕಾರದ ಬಂಡೆಯಂತಾಗಿ ಸ್ವಾಮಿಯನ್ನು ಅಪ್ಪಳಿಸಿತು. ಏನಾಯಿತು ಎಂದು ಸ್ವಾಮಿ ಯೋಚಿಸುವಷ್ಟರಲ್ಲಿ ಸ್ವಾಮಿಯ ತಲೆ ಒಡೆದು ಹಲವಾರು ತುಣುಕುಗಳಾಗಿ ಸೀಳಿ ಹೋಯಿತು. ಸ್ವಾಮಿಗೆ ಆರ್ತನಾದ ಮಾಡಲೂ ಸಮಯ ಸಿಗದೆ ದಾರುಣವಾಗಿ ಸತ್ತ. 

ಬೆಳಗಾಗುತ್ತಿದ್ದಂತೆ ಸ್ವಾಮಿಯ ಸಾವಿನ ಸುದ್ದಿ ಊರೆಲ್ಲ. ಎಲ್ಲರ ಬಾಯಲ್ಲೂ ಮರುಕದ ಮಾತು. 


Rate this content
Log in