Ravindra Kumar N (CBSE)

Inspirational

2  

Ravindra Kumar N (CBSE)

Inspirational

ರಹಸ್ಯ ಧರ್ಮ

ರಹಸ್ಯ ಧರ್ಮ

2 mins
11.9K



ಶೃಂಗಾಳದ್ದು ಸುಮಾರು ಏಳ್ನೂರೈವತ್ತರಿಂದ ಎಂಟುನೂರು ಜನ ದುಡಿಯುವ ಐದು ಬ್ರಾಂಚ್ ಗಳ ಬೃಹತ್ ಸಂಸ್ಥೆ. ಈ ಸಂಸ್ಥೆ ಆಗಾಗ ಇಂಥವರಿಗೆ ಧನಸಹಾಯ ಮಾಡಿದೆ ಅಂಥವರಿಗೆ ಧನ ಸಹಾಯ ಮಾಡಿದೆ ಎಂದು ಪತ್ರಿಕೆಗಳಲ್ಲಿ ದಿನಾ ಫೋಟೋ ಸಮೇತ ಬರುತ್ತಿರುತ್ತದೆ. ಬಡಮಕ್ಕಳಿಗೆ ಆರ್ಥಿಕ ನೆರವು ಬರಪರಿಹಾರಕ್ಕೆ ಆರ್ಥಿಕ ನೆರವು ಇತ್ಯಾದಿ . ಸಮಾಜದಲ್ಲಿ ಬಹಳಷ್ಟು ಮಂದಿಗೆ ಈ ಸಂಸ್ಥೆಯ ಮೇಲೆ ಸದಭಿಪ್ರಾಯವಿದೆ. ಯಾರಾದರೂ ಆ ಸಂಸ್ಥೆಯ ಬಗ್ಗೆ ಮಾತನಾಡಿದರೆ ತಕ್ಷಣವೇ ಇತರರಿಂದ ಪ್ರಶಂಸೆಗಳೇ ವಿನಃ ಬೇರೇನೂ ಕೇಳಿ ಬರಲು ಸಾಧ್ಯವಿಲ್ಲ. ರಂಗನಾಥ್ ಕೂಡಾ ಆ ಸಂಸ್ಥೆಯಲ್ಲಿ ಮೂವತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದವನು ವಾಲಂಟರೀ ರಿಟೈರ್ಮೆಂಟ್ ತೆಗೆದುಕೊಂಡು ಬೇರೆ ಊರಿಗೆ ಬಂದು ತನ್ನ ನಿತ್ಯದ ಜೀವನ ನಡೆಸಲು ಸಾಕಾಗುವಷ್ಟು ದುಡಿಯುತ್ತಾ ಕಾಲ ಕಳೆಯಲಾರಂಭಿಸಿದ್ದ. ಒಂದು ದಿನ ಹೀಗೇ ಅವನ ಕೆಲಸ ನಡೆಯುತ್ತಿರುವಾಗ ಅವನ ಸಹೋದ್ಯೋಗಿ ಸಂಜೀವ್ " ನೋಡಿ ಸಾರ್ ನೀವು ಮುಂಚೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ಒಡತಿಯ ಫೋಟೋ ಪತ್ರಿಕೆಯಲ್ಲಿ ಬಂದಿದೆ " ಎಂದು ಆ ದಿನಪತ್ರಿಕೆಯನ್ನು ರಂಗನಾಥ್ ಗೆ ತೋರಿಸಿದ. ರಂಗನಾಥ್ ಅದರ ಕಡೆ ತಿರಸ್ಕಾರದಿಂದ ನೋಡಿ ವ್ಯಂಗ್ಯದ ನಗೆ ಬೀರಿ ಏನೂ ಮಾತನಾಡದೇ ಕೆಲಸ ಮುಂದುವರೆಸಿದ. 


ಅವನ ಸಹೋದ್ಯೋಗಿ ಬಿಡಬೇಕಲ್ಲ. ಜಿಗಣೆ ಜಾತಿಯವನು. ರಂಗನಾಥ್ ತನ್ನ ವರ್ತನೆಗೆ ಕಾರಣ ಹೇಳುವವರೆಗೂ ಬಿಡದೇ ಪೀಡಿಸಲಾರಂಭಿಸಿದ್ದ. ರಂಗನಾಥ್ ತಡೆಯದೇ ಒಂದು ದಿನ " ಹೆಸರಿಗೆ ತಕ್ಕಂತೆ ಸ್ವಲ್ಪ ಸ್ವಲ್ಪ ನೇ ಜೀವ ತಿಂತೀರಲ್ರೀ " ಎಂದು ತಮಾಷೆ ಮಾಡಿ ಸುಮ್ಮನಾದರೂ ಸಂಜೀವ್ ಸುಮ್ಮನಾಗಿರಲಿಲ್ಲ. ಬಿಡದೇ ಪೀಡಿಸಲಾರಂಭಿಸಿದ್ದ. ಸಿಕ್ಕಲ್ಲಿ ಸಿಕ್ಕಾಗ ಸಿಗ್ಗಿಲ್ಲದೇ ಎಗ್ಗಿಲ್ಲದೆ ಅದೇ ಪ್ರಶ್ನೆ ತಿಳಿಯಲು ಕಾತುರತೆ. ಎಂದಾದರೂ ಒಂದು ದಿನ ರಂಗನಾಥ್ ಈ ವಿಷಯದ ಬಗ್ಗೆ ಬಾಯಿ ಬಿಟ್ಟೇ ಬಿಡುತ್ತಾರೆ ಇಲ್ಲವೇ ಬಾಯಿಬಿಡಿಸಿದರಾಯಿತು ಎನ್ನುವ ಧೋರಣೆಯಿಂದಲೇ ದುಂಬಾಲು ಬೀಳುತ್ತಿದ್ದ. ಕಡೆಗೂ ಆ ಸುದಿನ ಬಂದೇ ಬಂತು. ಇಬ್ಬರೂ ಹತ್ತಿರದ ಹೋಟೆಲ್ ಗೆ ಸಂಜೆ ಕೆಲಸ ಮುಗಿಸಿ ಕಾಫಿ ಸೇವಿಸಲೆಂದು ಬಂದಾಗ ಸಂಜೀವನ ಕಾಟ ತಡೆಯಲಾರದೆ ಅವನ ಅದೇ ಹಳಸಲು ಪ್ರಶ್ನೆಗೆ ರಂಗನಾಥ್ ಉತ್ತರ ಹೇಳಲಾರಂಭಿಸಿದ. " ಹೊರಗಿನವರಿಗೆ ಆ ಸಂಸ್ಥೆ ಉತ್ತಮ ಮೌಲ್ಯಗಳ ಜೊತೆ ಸಮಾಜ ಸೇವೆ ಮಾಡುತ್ತಿದೆ ಎನ್ನುವುದಷ್ಟೇ ಗೊತ್ತು. ಆದರೆ ಒಳಗಿನ ಕಹಿ ಸತ್ಯ ಯಾರಿಗೂ ಗೊತ್ತಿಲ್ಲ ಅದರ ಬಗ್ಗೆ ಯಾರಿಗೂ ಹೆಚ್ಚಿನ ಆಸಕ್ತಿ ಕೂಡ ಇಲ್ಲ. ಸತ್ಯ ಏನೆಂದರೆ ಆ ಸಂಸ್ಥೆಯಲ್ಲಿ ಕೆಲಸದ ವಾತಾವರಣದ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ದಾನಧರ್ಮಗಳ ವಿಷಯದ ಬಗ್ಗೆ ಹೇಳುತ್ತೇನೆ ಕೇಳಿ. ಆ ಸಂಸ್ಥೆಗೆ ಕೆಲಸಕ್ಕೆ ಸೇರಿದ ಮೊದಲ ವರ್ಷ ನಿಮಗೆ ಸಂಬಳದಲ್ಲಿ ಯಾವುದೇ ಕಡಿತ ಇರುವುದಿಲ್ಲ. ಮುಂದಿನ ವರ್ಷದಿಂದ ಪ್ರತಿ ತಿಂಗಳ ಒಂದು ದಿನದ ವೇತನ ಹಿಡಿದುಕೊಂಡು ಉಳಿದದ್ದನ್ನು ನಿಮ್ಮ ಖಾತೆಗೆ ಜಮೆ ಮಾಡುತ್ತಾರೆ. ವರ್ಷದ ಹನ್ನೆರಡು ದಿನ ನೀವು ಸಂಬಳರಹಿತ ಸೇವೆ ಸಲ್ಲಿಸಬೇಕು. ಇದನ್ನು ಯಾರೂ ಎಲ್ಲೂ ಬಾಯಿ ಬಿಡುವುದಿಲ್ಲ. ಮೊದಲ ಏಳೆಂಟು ವರ್ಷಗಳ ಕಾಲ ನನಗೆ ಈ ವಿಷಯವೇ ತಿಳಿದಿರಲಿಲ್ಲ. ನಾನೂ ಕೂಡ ನನಗೆ ಬರುವ ಸಂಬಳವೇ ಇಷ್ಟು ಎಂದು ಪೆದ್ದು ಪೆದ್ದಾಗಿ ನಂಬಿಕೊಂಡೇ ಇದ್ದೆ. ಒಂದು ದಿನ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನಿಜಾಂಶ ಗೊತ್ತಾಯಿತು. ಆದರೂ ವರ್ಷ ವರ್ಷ ಸಂಬಳದಲ್ಲಿ ಬಡ್ತಿ ಸಿಗುತ್ತಿದ್ದುದರಿಂದ ನಾನಿದನ್ನು ಅಷ್ಟು ತಲೆಗೆ ಹಚ್ಚಿಕೊಳ್ಳಲಿಲ್ಲ. ಆದರೆ ಮನಸ್ಸಿಗೆ ತುಂಬಾ ನೋವನ್ನು ಕೊಡುವ ವಿಷಯವೊಂದು ನನ್ನನ್ನು ಆ ಸಂಸ್ಥೆ ಬಿಡುವಂತೆ ಮಾಡಿತು. ಅದೇನೆಂದರೆ ನಮ್ಮೆಲ್ಲರಿಂದ ಒಂದೊಂದು ದಿನದ ಸಂಬಳ ಹಿಡಿಯುತ್ತಿದ್ದರಲ್ಲವೇ . ಅದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಈ ರೀತಿ ದಾನಧರ್ಮಗಳಿಗೆ ವಿನಿಯೋಗ ಮಾಡುತ್ತಿದ್ದರಷ್ಟೇ. ಉಳಿದದ್ದು ಸಂಸ್ಥೆ ಪಾಲಿಗೆ. ಇದರಲ್ಲೇ ತುಂಬಾ ಮನನೋಯುವ ವಿಷಯ ಎಂದರೆ ಸಂಸ್ಥೆಯಲ್ಲಿ ದುಡಿಯುವ ಕೆಳವರ್ಗದ ನೌಕರರಾದ ಆಯಾಗಳು, ಡ್ರೈವರ್ ಗಳು, ಕ್ಲೀನರ್ ಗಳು, ತೋಟದ ಮಾಲಿಗಳು , ಇತ್ಯಾದಿ ಕೆಲಸ ಮಾಡುವವರನ್ನೂ ಬಿಡದೇ ಹಿಂಡುತ್ತಿರುವುದು. ಅವರಿಗೆಲ್ಲಾ ಮೊದಲೇ ನಮಗೆ ಹೋಲಿಸಿದರೆ ಬಹಳ ಕಡಿಮೆ ಸಂಬಳ . ಅದರಲ್ಲೂ ಈ ಕಡಿತ. ತಡೆಯಲಾರದೆ ಹೊರಬಂದು ದುಡಿಯುತ್ತಿದ್ದೇನೆ. ನನ್ನ ಶ್ರಮದ ಭಾಗವನ್ನು ನಾನೇ ಮನಸ್ಪೂರ್ತಿಯಾಗಿ ದಾನ ಮಾಡುತ್ತೇನೆ. ಆದರೆ ಎಲ್ಲಿಯೂ ಹೇಳಿಕೊಳ್ಳುವ ಅವಶ್ಯಕತೆ ನನಗಿಲ್ಲ " ಎಂದು ರಂಗನಾಥ್ ಹೇಳಿ ಮುಗಿಸುವಾಗ ಇಬ್ಬರ ಕಣ್ಣಲ್ಲೂ ನೀರು ತುಂಬಿತ್ತು. 




Rate this content
Log in

Similar kannada story from Inspirational