STORYMIRROR

Ravindra Kumar N (CBSE)

Others

1  

Ravindra Kumar N (CBSE)

Others

ಗಣ್ಯ ವ್ಯಕ್ತಿಯ ಸ್ವಗತ

ಗಣ್ಯ ವ್ಯಕ್ತಿಯ ಸ್ವಗತ

8 mins
3.1K



ಧ್ವನಿವರ್ಧಕ ದಿಂದ ಜೋರಾಗಿ ಮೂಡಿಬರುತ್ತಿತ್ತು ಶ್ರೀಯುತರು ಮಹಾನ್ ಸಮಾಜ ಸುಧಾರಕರು ಹಗಲಿರುಳು ಸಮಾಜದ ಉದ್ಧಾರಕ್ಕಾಗಿ ದುಡಿಯುವವರು ತಮ್ಮ ಬಳಿ ಸಹಾಯ ಕೇಳಿಕೊಂಡು ಬಂದವರಿಗೆ ಇಲ್ಲ ಎನ್ನದಂಥಾ ಕೊಡುಗೈ ದಾನಿ ಶ್ರೀಯುತರು ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ನಿರ್ದೇಶಕ ಹಾಗೂ ಚಿತ್ರ ಕಥಾ ಲೇಖಕ ಒಟ್ಟಿನಲ್ಲಿ ಬಹುಮುಖ ಪ್ರತಿಭೆ . ಇತ್ಯಾದಿ ಇತ್ಯಾದಿ ವಿವರಣೆಗಳನ್ನು ನೀಡುತ್ತಾ ನನ್ನನ್ನು ವೇದಿಕೆಯ ಮೇಲೆ ಮೈಕಿನ ಮುಂದೆ ನಿಂತವರು ಹೊಗಳುತ್ತಿದ್ದರು . ಅದನ್ನು ಕೇಳಿಸಿಕೊಳ್ಳುತ್ತಾ ಹಿಗ್ಗಿ ಹೀರೇಕಾಯಿ ಆಗುತ್ತಾ ವೇದಿಕೆಯ ಮೇಲೆಯೇ ಕುಳಿತಿದ್ದ ಕುರ್ಚಿಯಲ್ಲಿ ಹಿಂದೆ ಒರಗಿದೆ. ಈ ಜನ ಸುಮ್ಮನೇ ಹೊಗಳುತ್ತಾರಪ್ಪಾ . 

ಹೌದು . ನಾನೊಬ್ಬ ಚಲನಚಿತ್ರ ನಿರ್ಮಾಪಕ ನಿರ್ದೇಶಕ ಚಿತ್ರಸಾಹಿತ್ಯ ಲೇಖಕ ಚಿತ್ರ ಕಥಾ ಲೇಖಕ ಎಲ್ಲವೂ ನಾನೇ. ಒಂದು ಲೆಕ್ಕದಲ್ಲಿ  ಆಲ್ ರೌಂಡರ್ .  ನಾನು ನಿರ್ದೇಶನ ಮಾಡುವ ಚಿತ್ರಗಳಲ್ಲಿ ಪ್ರತೀ ಪಾತ್ರವನ್ನೂ ವಿಭಿನ್ನವಾಗಿ ಸೃಷ್ಟಿಸುತ್ತೇನೆ . ನನ್ನ ಚಿತ್ರಕಥೆಯೂ ಬಹಳ ವಿಶಿಷ್ಟ ವಿಭಿನ್ನ . ನನ್ನ ಚಿತ್ರಗಳಲ್ಲಿ ಹೆಣ್ಣನ್ನು ಅರೆಬೆತ್ತಲೆಯಾಗಿ ಕೆಲವೊಮ್ಮೆ ಸಂಪೂರ್ಣ ಬೆತ್ತಲೆಯಾಗಿ ತೋರಿಸಿದ್ದೇನೆಂದು ಕೆಲವರ ಅಂಬೋಣ . ಅಂದುಕೊಳ್ಳಲಿ ಬಿಡಿ . ನಾನು ಕೇವಲ ಹೆಣ್ಣನ್ನು ಮಾತ್ರವೇ ನಗ್ನವಾಗಿ ಅಥವಾ ಅರೆನಗ್ನವಾಗಿ ತೋರಿಸುತ್ತೇನೆಯೇ ? ಖಂಡಿತಾ ಇಲ್ಲ . ಗಂಡನ್ನೂ ತೋರಿಸುತ್ತೇನೆ . ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾದ ಪತಿ ಪತ್ನಿಯರ ಸರಸ ಸಲ್ಲಾಪ ಗಳನ್ನು ಅತ್ಯಂತ ನೈಜವಾಗಿ ಚಿತ್ರಿಸುತ್ತೇನೆ . ಹಸಿ ಹಸಿ ಕಾಮವನ್ನು ಹಾಗೆಯೇ ತೋರಿಸುವ ಪ್ರಯತ್ನವನ್ನು ಮಾಡುತ್ತೇನೆ . ಮಧ್ಯೆ ಮಧ್ಯೆ ಸ್ವಲ್ಪ ಸೆಂಟಿಮೆಂಟ್ ಸೇರಿಸಿ ನಾಯಕಿಯನ್ನೋ ಅಥವಾ ಅವರ ಅಮ್ಮನನ್ನೋ ಗ್ಲಿಸರಿನ್ ಕೊಟ್ಟು ಅಳಿಸಿ ಬಿಟ್ಟರೆ ಆಯಿತು . ಅಲ್ಲಿಗೆ ಅದೊಂದು ನೋಡುಗ ವರ್ಗವನ್ನು ತೃಪ್ತಿ ಪಡಿಸಿದಂತಾಯಿತು .  ಅದಕ್ಕೇ ನನ್ನ ಚಿತ್ರಗಳೆಂದರೆ ಜನ ಮುಗಿ ಬೀಳುತ್ತಾರೆ . ಚಿತ್ರ ಬಿಡುಗಡೆ ಆಗುತ್ತಿದೆ ಎನ್ನುವ ಸುದ್ದಿಯನ್ನು ನಮ್ಮ ಮಾಧ್ಯಮದ ಮಿತ್ರರಿಗೆ ನಾನು ಮೊದಲೇ ನೀಡುವುದರಿಂದ ಮತ್ತು ನನ್ನ ಚಿತ್ರಗಳಲ್ಲಿ ನಟಿಸುವ ನಟಿ ನಟಿಯರ " ಆಕರ್ಷಕ " ಫೋಟೋ ಗಳನ್ನು ನೀಡುವುದರಿಂದ ಅವರು ಪತ್ರಿಕೆಗಳಿಗೂ ಬೇಡಿಕೆ ಹೆಚ್ಚಿ ಅವರೂ ನನಗೆ ಬಹಳ ಕೃತಜ್ಞರಾಗಿದ್ದಾರೆ . ಇನ್ನು ಚಲನಚಿತ್ರ ಬಿಡುಗಡೆ ಆಗುವ ಚಿತ್ರ ಮಂದಿರಗಳ ಮಾಲೀಕರಿಂದಂತೂ ಯಾವುದೇ ತಕರಾರಿಲ್ಲ . ಪ್ರತೀ ಪ್ರದರ್ಶನ ಹೌಸ್ ಫುಲ್ ಚಿತ್ರ ಮಂದಿರ ತುಂಬಿದೆ ಎಂದಾದರೆ ಅವರೇಕೆ ಬೇಡ ಎನ್ನುತ್ತಾರೆ ? ಆದರೂ ಆಗಾಗ ಭೇಟಿ ನೀಡಿ ಅವರನ್ನೆಲ್ಲಾ ವಿಶ್ವಾಸದಲ್ಲಿ ಇಟ್ಟುಕೊಂಡಿದ್ದೇನೆ . ಏಕೆಂದರೆ ಯಾರ ಸಹಾಯ ಯಾವಾಗ ಬೇಕಾಗುವುದೋ ಬಲ್ಲವರಾರು ? ಯಾವುದೋ ಒಂದು ಚಿತ್ರದಲ್ಲಿ ಬಹಳ ಅಶ್ಲೀಲ ಮಾತುಗಳು ಬಳಕೆಯಾಗಿವೆ ಎಂಬ ಕಾರಣಕ್ಕೆ ಆ ಒಂದು ದೃಶ್ಯ ಇರಬಾರದು ಎಂದು ಚಿತ್ರಮಂದಿರವೊಂದರಲ್ಲಿ ಗಲಾಟೆ ಮಾಡಿದ ಗುಂಪೊಂದರ ಬಗ್ಗೆ ಚಿತ್ರಮಂದಿರದ ಮಾಲೀಕರೊಬ್ಬರು ಫೋನ್ ಮಾಡಿದ್ದರು . 

" ಅತ್ಯಂತ ಪ್ರಭಾವಶಾಲಿ ಮಾಧ್ಯಮವಾದಂತಹ ಚಲನಚಿತ್ರಗಳಲ್ಲಿ ಗಂಡಾಗಲೀ ಹೆಣ್ಣಾಗಲೀ ಕಲೆಯ ಹೆಸರಿನಲ್ಲಿ ಬೆತ್ತಲಾಗುವುದನ್ನು ಅಂಥಾ ಕಥೆಗಳನ್ನೇ ಹೊಸೆದು ಹಸಿ ಹಸಿ ಕಾಮವನ್ನು ಇನ್ನೂ ವರ್ಣರಂಜಿತವಾಗಿ ಚಿತ್ರಿಸಿ ತೆರೆಯ ಮೇಲೆ ತರುವುದಾದರೂ ಏಕೆ ? ತನ್ಮೂಲಕ ಆ ನಿರ್ದೇಶಕ ಲಕ್ಷಾಂತರ ಹದಿಹರೆಯದ ಮನಸ್ಸುಗಳ ಮೇಲೆ ಏಕಕಾಲಕ್ಕೆ ಅತ್ಯಾಚಾರ ಎಸಗುತ್ತಿಲ್ಲವೇ ? ಆರೋಗ್ಯವಂತ ಸಮಾಜದ ಹೊಣೆಗಾರಿಕೆ ನಿಯಂತ್ರಣ ಮಂಡಳಿಯವರದ್ದೂ ಅಲ್ಲವೇ ? ಆಗ ಮೇಲಿಂದ ಮೇಲೆ ಆಗುವ ಆಗುವ ಮಾನಸಿಕ ಅತ್ಯಾಚಾರಗಳು ವ್ಯಭಿಚಾರಗಳ ಫಲವೇ ವಾಸ್ತವವಾಗಿ ನಡೆಯುವ ಅತ್ಯಾಚಾರವಲ್ಲವೇ ? ಪರೋಕ್ಷವಾಗಿ ಇಂಥಾ ಚಲನಚಿತ್ರಗಳು ಮತ್ತು ಅವುಗಳಲ್ಲಿ ನಟಿಸುವ ನಟಿ ನಟಿಯರಿಗೆ ಸಾಮಾಜಿಕ ಬದ್ಧತೆಯೇ ಬೇಡವೇ ? ಅಲ್ಲಿಂದ ಉದ್ಭವವಾದ ಕಾಮಲಾಲಸೆ ಒಬ್ಬನೇ ಒಬ್ಬ ಸಂಯಮಿಯನ್ನು ವಿಕೃತ ಕಾಮಿಯನ್ನಾಗಿಸಿದರೂ ಸಾಕಲ್ಲವೇ ? ಇದರ ಬಗ್ಗೆ ಯಾರಾದರೂ ಯೋಚಿಸಿದ್ದಾರೆಯೇ ? ದೊಡ್ಡ ದೊಡ್ಡ ಚಿತ್ರಪಟಗಳನ್ನು ಮುದ್ರಿಸಿ ಎಲ್ಲರ ಗಮನವನ್ನೂ ಚೀರಿ ಚೀರಿ ಸೆಳೆದು ಅವರ ಆಲೋಚನೆಗಳನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತವಾಗಿಲ್ಲವೇ ? ಇದಕ್ಕೆ ವ್ಯತಿರಿಕ್ತವಾಗಿ ಬ್ಯಾಂಡಿಟ್ ಕ್ವೀನ್ ಚಿತ್ರದಲ್ಲಿ ನಾಯಕಿ ಸಂಪೂರ್ಣವಾಗಿ ಬೆತ್ತಲಾದಾಗ ಅದನ್ನು ಕಾಮದ ದೃಷ್ಟಿಯಿಂದ ನೋಡುವಂಥಾ ಯಾವ ಪ್ರೇಕ್ಷಕರೂ ಚಿತ್ರಮಂದಿರಗಳಲ್ಲಿ ಇರಲಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಅಂಥಾ ಕಲಾತ್ಮಕ ಚಿತ್ರಗಳನ್ನು ಹೊರತು ಪಡಿಸಿದರೆ ಕಮರ್ಷಿಯಲ್ ಚಿತ್ರಗಳಲ್ಲಿ ಅವಶ್ಯಕತೆ ಇರಲಿ ಇಲ್ಲದಿರಲಿ ಅಂಥದ್ದೊಂದು ದೃಶ್ಯವನ್ನು ತುರುಕಿ ಚಿತ್ರ ನಿರ್ಮಾಣ ಮಾಡುವರಿಗೂ ಸಾಮಾಜಿಕ ಬದ್ಧತೆಯೇ ಇಲ್ಲವೆ ? ಇನ್ನು ದ್ವಂದ್ವಾರ್ಥ ಇರುವ ಸಂಭಾಷಣೆಗಳು ಇದಕ್ಕೆ ಪೂರಕವಾಗಿ ನಿಲ್ಲುವುದಿಲ್ಲವೇ ?. ಚಲನಚಿತ್ರ ವಾಣಿಜ್ಯ ಮಂಡಳಿಯೂ ಇಂಥಾ ಚಿತ್ರಗಳ ಚಿತ್ರೀಕರಣಕ್ಕೆ ಚಾಲನೆ , ಅನುಮತಿ ನೀಡುವುದೇಕೆ ? ಉದಾಹರಣೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಡಾ.ರಾಜ್ ಕುಮಾರ್ ಅವರ ಯಾವುದೇ ಚಲನಚಿತ್ರವನ್ನು ಇಂದಿಗೂ ಮನೆಮಂದಿಯೆಲ್ಲಾ ಕುಳಿತು ವೀಕ್ಷಿಸಬಹುದಾಗಿದೆ. ಇದು ಕೇವಲ ಒಂದು ಉದಾಹರಣೆ ಅಷ್ಟೇ. ಭೂಮಿಗೀತ ದಂತಹ ಹಣವನ್ನೇ ಬಳಸದ ಜನಾಂಗವೊಂದರ ಪರಿಚಯ ಮಾಡಿಕೊಡುವ ಸುಂದರ ಚಿತ್ರ ಏಕೆ ಬರುವುದಿಲ್ಲ ? ಕಾರಣ ಇಷ್ಟೇ. ಮೊದಲು ಮನಸ್ಸು ಕೆರಳಿಸುವುದನ್ನು ನೀಡಿ ನಂತರ ಮನಸ್ಸು ಅರಳಿಸುವುದನ್ನು ನೀಡ ಹೋದರೆ ತೆಗೆದುಕೊಳ್ಳುವವರಾರು ? ನೂರಕ್ಕೆ ತೊಂಬತ್ತರಿಂದ ತೊಂಬತ್ತೈದರಷ್ಟು ಚಲನಚಿತ್ರಗಳ ವಿಷಯ ಹದಿಹರೆಯದ ಮನಸ್ಸುಗಳ ನಡುವೆ ನಡೆಯುವ ಪ್ರೀತಿ ಪ್ರೇಮ ಪ್ಯಾರ್ ಮೊಹಬ್ಬತ್ ಇನ್ನೂ ಏನೇನೋ ಕೆಲಸಕ್ಕೆ ಬಾರದ ವಿಷಯ. ಅದನ್ನು ಬಿಟ್ಟು ಬೇರೆ ವಿಷಯವೇ ಇಲ್ಲವೇ ? ಇದಿಷ್ಟೇ ಸಾಲದೆಂಬಂತೆ ಆ ಚಲನಚಿತ್ರಗಳಲ್ಲಿ ಅಳವಡಿಸುವ ನೃತ್ಯಪ್ರಕಾರಗಳೋ ? ಭಗವಂತನಿಗೇ ಪ್ರೀತಿಯಾಗಬೇಕು. ಚಿತ್ರ ವಿಚಿತ್ರವಾಗಿರುವುದೂ ಅಲ್ಲದೇ ಅದಕ್ಕೆ ವಿಶ್ಲೇಷಣೆ ಬೇರೆ. ಈ ತರಹದ ಚಲನಚಿತ್ರಗಳು ಬಂದಾಗ ಸಾಮೂಹಿಕವಾಗಿ ಬಹಿಷ್ಕರಿಸಿ. ಆ ಚಲನಚಿತ್ರವನ್ನು ನೋಡಲು ಯಾರೂ ಹೋಗದೇ ಇದ್ದಾಗ ಉಗ್ರ ಪ್ರತಿಭಟನೆ ನಡೆಸಿದಾಗ ಮುಂದೆ ಅಂಥಾ ಚಿತ್ರಗಳೇ ತೆರೆಕಾಣುವುದಿಲ್ಲ . ಅಲ್ಲವೇ ? " 

 ಎಂದೆಲ್ಲಾ ಏನೇನೋ ಬಾಯಿಗೆ ಬಂದಂತೆ ಚಿತ್ರ ಮಂದಿರದ ಹೊರಗೆ ಯಾರೋ ಗುಂಪು ಕಟ್ಟಿಕೊಂಡು ಜೋರು ಜೋರಾಗಿ ಮಾತನಾಡುತ್ತಿದ್ದಾರೆ ಸಾರ್ ಏನು ಮಾಡಬೇಕು ಪೋಲೀಸ್ ಬರುವ ಸಾಧ್ಯತೆಗಳಿವೆ ಎಂದು . ನಾನು " ಸಮಾಜದಲ್ಲಿ ಶಾಂತಿ ಸಮಾಧಾನ ಕಾಯ್ದುಕೊಳ್ಳಿರಪ್ಪಾ , ಅದು ಪ್ರತಿಯೊಬ್ಬನ ಕರ್ತವ್ಯ . ಇದನ್ನೂ ನಾನೇ ಹೇಳಿಕೊಡಬೇಕೆ ? " ಎಂದು ತಿಳಿಸಿ ಹೇಳಿದೆ . ಇದಾದ ನಂತರ ಆ ಗುಂಪಿನ "ಆದರ್ಶವಾದಿ " ನಾಯಕನನ್ನು ಚಿತ್ರಮಂದಿರದವರೇ ಒಳಗೆ ಕರೆದುಕೊಂಡು ಹೋಗಿ ಚೆನ್ನಾಗಿ " ಸತ್ಕರಿಸಿ " ಕಳಿಸಿದರಂತೆ . ಅದನ್ನೂ ನಾನೇ ಸೂಚ್ಯವಾಗಿ ತಿಳಿಸಿದ್ದೆ . ಬಹಿರಂಗವಾಗಿ ಏನನ್ನೂ ಮಾಡಿ ಹಿಂಸೆಗೆ ಅವಕಾಶ ನೀಡಬೇಡಿ ಎಂದು. ಏಕೆಂದರೆ ನಾಗರೀಕರ ನಾಜೂಕಾದ ಭಾವನೆಗಳಿಗೆ ಧಕ್ಕೆಯಾಗುವುದು ನನಗೆ ಸ್ವಲ್ಪವೂ ಹಿಡಿಸುವುದಿಲ್ಲ . ಇದನ್ನರಿತೇ ನನ್ನ ಮಾತನ್ನು ಚಾಚೂ ತಪ್ಪದೆ ಪರಿಪಾಲಿಸಿ ಆ ಆದರ್ಶವಾದಿಗೆ ಖಾಸಗಿಯಾಗಿ " ಮರ್ಯಾದೆ " ಮಾಡಿ ಅದರ ಫೋಟೋ ಕೂಡಾ ಕಳಿಸಿದ್ದರು. ನನಗೆ ತುಂಬಾ ಸಂಕಟವಾಯಿತು . ಯಾಕೆಂದರೆ ನಾನು ಮೂಲತಃ ಅಹಿಂಸಾವಾದಿ . ಅವನ ಸ್ಥಿತಿ ನೋಡಲಾರದೇ ಚಿತ್ರಮಂದಿರದವರಿಗೆ " ಅ ಹುಡುಗನನ್ನು ಹತ್ತಿರದ ಒಳ್ಳೆಯ ಆಸ್ಪತ್ರೆಗೆ ಸೇರಿಸಿ ಉತ್ತಮ ಚಿಕಿತ್ಸೆ ಕೊಡಿಸಿ . ಏಕೆಂದರೆ ಯುವಕರು ಈ ದೇಶದ ಆಸ್ತಿ . ಹಾಗೆಲ್ಲಾ ಆಸ್ತಿ ನಷ್ಟ ಸಂಭವಿಸಬಾರದು " ಎಂದೆಲ್ಲಾ ಉಪದೇಶಿಸಿದೆ . ಬಹಳ ಒಳ್ಳೆಯ ಜನ. ನನ್ನ ಮಾತಿಗೆ ಗೌರವ ನೀಡಿ ಹಾಗೇ ನಡೆದುಕೊಂಡರೂ ಕೂಡಾ. ಕೊಟ್ಟ ಚಿಕಿತ್ಸೆ ಮತ್ತು ಔಷಧಿಗಳನ್ನು ದಕ್ಕಿಸಿಕೊಳ್ಳಲು ಆಗದೇ ನಿರ್ಬಲ , ಪಾಪ , ಸತ್ತೇ ಹೋದನಂತೆ . ಕೇಳಿ ಇನ್ನೂ ಹೆಚ್ಚು ಸಂಕಟವಾಯಿತು . ಆ ಯುವಕನ ತಂದೆ ತಾಯಿಗಳನ್ನು ಆಸ್ಪತ್ರೆಯಲ್ಲೇ ಭೇಟಿ ಮಾಡಿ ಒಂದು ಬುಟ್ಟಿ ಹಣ್ಣು ಹಂಪಲು ನೀಡಿ ಪರಿಹಾರವೆಂದು ತಕ್ಷಣವೇ ಐದುಸಾವಿರ ರೂಪಾಯಿಗಳನ್ನು ಅಲ್ಲೇ ಸಾರ್ವಜನಿಕರ ಸಮ್ಮುಖದಲ್ಲಿ ಪತ್ರಕರ್ತರು ದೂರದರ್ಶನ ವಾಹಿನಿಗಳ ರಿಪೋರ್ಟರ್ ಗಳು ಎದುರಿನಲ್ಲೇ ನೀಡಿದೆ. ನನಗೆ ಪ್ರಚಾರವೆಂದರೆ ಅಲರ್ಜಿ . ಆದರೆ ನನ್ನ ಹಿಂಬಾಲಕರು ಕೇಳಬೇಕಲ್ಲಾ. ಅಣ್ಣಾ ನೀವು ಸಮಾಜ ಸೇವೆ ಮಾಡೋದು ನಾಲ್ಕು ಜನಕ್ಕೆ ಸ್ಫೂರ್ತಿ ಆಗಬೇಕು ಎಂದೆಲ್ಲಾ ಹೇಳುತ್ತಾರೆ . ನನಗೂ ಸರಿ ಅನ್ನಿಸಿದರೂ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡು ಬಿಟ್ಟೆ . ಏನು ಮಾಡುವುದು ಹೇಳಿ . ಕೆಲವೊಮ್ಮೆ ನಮಗೆ ಇಷ್ಟ ಇಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಲೇಬೇಕಾಗುತ್ತದೆ . 

ಮೊನ್ನೆ ಸಭೆಯೊಂದರಲ್ಲಿ ಹೀಗೆ ಮಾತನಾಡುತ್ತಿದ್ದಾಗ ಯಾರೋ ಇನ್ನೊಬ್ಬರೂ ಇದೇ ಅರ್ಥ ಬರುವಂಥ ಪ್ರಶ್ನೆ ಕೇಳಿದರು. ನಾನು ಹೇಳಿದೆ " ನೋಡಿ , ಮನರಂಜನೆಯನ್ನು ಮನರಂಜನೆಯನ್ನಾಗಿ ಮಾತ್ರ ನೋಡಿ ಸಂತೋಷ ಪಡಬೇಕು. ಅದನ್ನು ಬಿಟ್ಟು ವಿಪರೀತವಾಗಿ ಮುಂದುವರೆದರೆ ಆತ್ಮ ಸಂಯಮ ಎನ್ನುವುದಕ್ಕೆ ಬೆಲೆಯಾದರೂ ಏನು ? ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಏನು ಹೇಳಿದ್ದಾನೆ ಗೊತ್ತೇ

? " ಎಂದು ನಗುನಗುತ್ತಾ ಉತ್ತರಿಸಿದೆ. ಇಡೀ ಸಭಾ ಸ್ತೋಮ ಎಷ್ಟು ಹೊತ್ತಾದರೂ ಚಪ್ಪಾಳೆ ನಿಲ್ಲಿಸಲೇ ಇಲ್ಲ ಅಂತೀನಿ. ಯಾರಾದರೂ ಈ ರೀತಿ ಕೊಂಕು ಎತ್ತಿದರೆ ಅವರ ಬಾಯಿ ಮುಚ್ಚಿಸುವ ಕಲೆಯಲ್ಲಿ ನಾನು ಬಲು ನಿಷ್ಣಾತ ಎಂದು ನನ್ನ ಹತ್ತಿರದಿಂದ ಬಲ್ಲವರು ಹೇಳುತ್ತಾರೆ. 

ಅಂದಹಾಗೆ ಇಷ್ಟೆಲ್ಲಾ ಹೇಳಿದ ನಾನು ನನಗೂ ಸಂಸಾರವಿದೆ . ಒಂದು ಮಗುವಿದೆ . ಆ ಮಗುವನ್ನು ಪ್ರತಿಷ್ಠಿತ ಶಾಲೆಯೊಂದಕ್ಕೆ ಸೇರಿಸಿದ್ದೇನೆ. ಸರ್ಕಾರಿ ಶಾಲೆಗೇ ಸೇರಿಸಬಹುದಾಗಿತ್ತು . ಆದರೆ ನನ್ನ ಅಭಿಮಾನಿಗಳು ಹಿಂಬಾಲಕರು ನನ್ನ ಪತ್ನಿ ಇವರೆಲ್ಲ ಬಿಡಬೇಕಲ್ಲ . ಎಲ್ಲರದ್ದೂ ಒಂದೇ ವರಾತ . ಸರ್ಕಾರಿ ಶಾಲೆಗೆ ನಿಮ್ಮ ಮಗು ಹೋದರೆ , ನಿಮ್ಮ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ಇನ್ನೂ ಅನೇಕರು ತಮ್ಮ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಸೇರಿಸಿ ಬಿಟ್ಟರೆ , ಒಳ್ಳೆಯ ಕಂಪನಿಯ ಬಟ್ಟೆ , ಶೂಗಳು ಪುಸ್ತಕಗಳು ಇವುಗಳನ್ನೆಲ್ಲಾ ಮಾರುವವರಿಗೆ ಹಲವಾರು ಒಳ್ಳೆಯ ಗಿರಾಕಿಗಳು ತಪ್ಪಿ ನಷ್ಟವಾಗಿ ಅವರು ತೊಂದರೆ ಅನುಭವಿಸುವಂತಾಗುವುದಿಲ್ಲವೇ ? ತಿಳಿದೂ ತಿಳಿದೂ ಇನ್ನೊಬ್ಬರಿಗೆ ನೋವು ಕೊಡುವುದಾದರೂ ಹೇಗೆ ? ಹೇಳಿ . ಎಂದೆಲ್ಲಾ ಪರಿಪರಿಯಾಗಿ ಹೇಳಿದರು. ಹೀಗಾಗಿ ಈ ಅನ್ಯಮಾರ್ಗವನ್ನು ತುಳಿಯಲೇ ಬೇಕಾಯಿತು . ಸರ್ಕಾರೀ ಶಾಲೆಗೆ ನನ್ನಿಂದ ಆದ ಈ ನಷ್ಟವನ್ನು ತುಂಬಿಕೊಡಲು ನಾನು ನನ್ನೆಲ್ಲಾ ಸಾರ್ವಜನಿಕ ಭಾಷಣಗಳಲ್ಲಿ ಸಾರ್ವಜನಿಕರು ತಮ್ಮ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ದಾಖಲು ಮಾಡಿಸಬೇಕು ಎಂದು ಹುರಿದುಂಬಿಸುತ್ತೇನೆ. ಹೀಗೇ ಒಮ್ಮೆ ಭಾಷಣ ಮಾಡಿದಾಗ ಯಾರೋ ಈ ಥರದ ಭಾಷಣಗಳಿಂದ ಕ್ರಾಂತಿ ಆಗುವುದಿಲ್ಲ ಎಂದೇನೋ ಅಂದರು ಎನ್ನುವುದು ನನ್ನ ಕಿವಿಗೆ ಬಿತ್ತು . ಏಕೆಂದರೆ ಅವರು ನೇರವಾಗಿ ನನಗೇ ನನ್ನೆದುರು ಹೇಳಿದ್ದು. ಬೀಳದೇ ಇರುತ್ತದೆಯೇ ? ಸಣ್ಣ ಮನಸ್ಸಿನವರು. ಏನಾದರೂ ಹೇಳಿಕೊಳ್ಳಲಿ ಎಂದು ಕೊಂಡು ಆ ಮಾತಿಗೆ ಬೆಲೆಯನ್ನೇ ಕೊಡಲಿಲ್ಲ . ಇವರೆಂದರು ಅಂದು ಮಾತ್ರಕ್ಕೆ ನಾನು ಸಮಾಜಸೇವೆ ತೊರೆದು ಕ್ರಾಂತಿಕಾರಿಯಾಗಲೇ ? ಸಾಧ್ಯವೇ ಇಲ್ಲ. ನಾನು ಮುಂಚೆಯೇ ಹೇಳಲಿಲ್ಲವೇ . ನನಗೆ ಹಿಂಸೆಯಲ್ಲಿ ನಂಬಿಕೆಯೇ ಇಲ್ಲ ಎಂದು.  

ನನ್ನ ಮಗುವೂ ಥೇಟ್ ನನ್ನಂತೆಯೇ . ಶಾಲೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು . 

ಯಾರೋ ಒಂದಿಬ್ಬರು ಶಿಕ್ಷಕರು ನಿಮ್ಮ ಮಗು ಓದುತ್ತಿಲ್ಲ , ಬರೆಯುತ್ತಿಲ್ಲ , ನಾವು ಹೇಳಿದ ಮಾತನ್ನು ಕೇಳುತ್ತಿಲ್ಲ , ತುಂಬಾ ಅವಿಧೇಯತೆ ತೋರುತ್ತದೆ , ಕೊಟ್ಟ ಮನೆಗೆಲಸವನ್ನು ಸ್ವಲ್ಪವೂ ಮಾಡುವುದಿಲ್ಲ , ಕಾರಣ ಕೇಳಿದರೆ ಉಡಾಫೆಯ ಉತ್ತರ ನೀಡುತ್ತದೆ , ಬಾಯಿ ಬಿಟ್ಟರೆ ಬರೀ ಹೊಲಸು ಮಾತುಗಳು ಎಂದೆಲ್ಲಾ ಹೇಳುತ್ತಾರೆ . ಬೆಳೆಯುವ ಮಕ್ಕಳಲ್ಲಿ ಇದೆಲ್ಲಾ ಸಹಜ ತಾನೇ . ಸಹನೆಯೇ ಇರದ ಶಿಕ್ಷಕರು ಇಲ್ಲದ ಭ್ರಮೆಯಲ್ಲಿ ಮಕ್ಕಳಿಂದ ಏನೇನೋ ಅಪೇಕ್ಷೆ ಇಟ್ಟುಕೊಳ್ಳುವುದು ಆನಂತರ ಅದು ನೆರವೇರದಿದ್ದಾಗ ಈ ರೀತಿ ದೂರು ನೀಡುವುದು . ಕಳೆದ ತಿಂಗಳು ಹೀಗೇ ನನ್ನ ಮಗುವಿನ ಮೇಲಿನ ಯಾವುದೋ ವಿಷಯಕ್ಕೆ ನನ್ನ ಮಗುವಿನ ಶಾಲೆಯ ಪ್ರಾಂಶುಪಾಲರು ನಾನು ಬರಲೇಬೇಕು ಎಂದು ಹೇಳಿಕೇಳಿಸಿದ್ದರು . ನನಗೋ ಬಿಡುವೇ ಇಲ್ಲ . ಆದರೂ ವಿದ್ಯೆ ಹೇಳಿಕೊಡುವ ಗುರುಗಳ ಮಾತನ್ನು ತೆಗೆದು ಹಾಕಲಾದೀತೇ . ಒಂದು ತಿಂಗಳ ನಂತರ ಸ್ವಲ್ಪ ಬಿಡುವು ಮಾಡಿಕೊಂಡು ಶಾಲೆಗೆ ಭೇಟಿ ನೀಡಿದೆ. ನನ್ನನ್ನು ಕಂಡವರೇ ತುಂಬಾ ತುಂಬಾ ಗೌರವದಿಂದ ಬರಮಾಡಿಕೊಂಡು ಕರೆಸಿದ ವಿಷಯ ಹೇಳಿದರು . ನನ್ನ ಮಗು ಪಕ್ಕದಲಿ ಕುಳಿತಿದ್ದ ಮಗುವಿಗೆ ಬ್ಲೇಡಿನಿಂದ ಕೈ ಕುಯ್ದು ಆ ಮಗುವಿನ ಕೈಯಿಂದ ರಕ್ತ ಧಾರಾಕಾರವಾಗಿ ಸುರಿಯಿತಂತೆ . ಆದ ನೋವಿಗೆ ಆ ಮಗು ಒದ್ದಾಡುತ್ತಿದ್ದರೆ ನನ್ನ ಮಗು ತೀರ್ಪು ನೀಡಿದ ಜಡ್ಜಿನಂತೆ ನಿಂತಿತ್ತಂತೆ . ನಾನು ತಕ್ಷಣವೇ ಒಬ್ಬ ಡಾಕ್ಟರ್ ಮತ್ತು ನರ್ಸ್ ಅನ್ನು ಪರ್ಮನೆಂಟ್ ಉದ್ಯೋಗಿಯಾಗಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದೆ. ನನ್ನ ಮಗುವೇನೋ ಶಾಲೆಯ ನಿಯಮವನ್ನು ಮೀರಿ ಶಾಲೆಗೆ ಮೊಬೈಲ್ ತೆಗೆದುಕೊಂಡು ಹೋಗುತ್ತಿತ್ತಂತೆ . ಶಿಕ್ಷಕರು ಮಗುವಿನಿಂದ ಮೊಬೈಲ್ ಕಸಿದುಕೊಂಡು ಪ್ರಾಂಶುಪಾಲರ ಬಳಿ ಕೊಟ್ಟಿದ್ದರಂತೆ . ಒಳ್ಳೇ ಫೋನ್ ಅದು. ಆಪಲ್ ಕಂಪೆನಿಯದು. ನನ್ನ ಮಗುವಿಗೆ ಕಳೆದ ವರ್ಷ ಅದರ ಹುಟ್ಟಿದ ಹಬ್ಬದ ದಿನ ಕೊಡಿಸಿದ್ದು. ದೊಡ್ಡವರಾದ ನಾವೇ ಮೊಬೈಲ್ ಬಿಡಲಾಗುವುದಿಲ್ಲ ಎಂದಮೇಲೆ ಇನ್ನು ಚಿಕ್ಕ ಮಕ್ಕಳ ಕೈಲಿ ಆಗುತ್ತದೆಯೇ ? ಇದನ್ನರಿತೇ ನಾನು ಆ ಶಿಕ್ಷಕರ ಎದುರೇ ಪ್ರಾಂಶುಪಾಲರಿಗೆ ಹೇಳಿದೆ " ಸರ್ ಆ ಮೊಬೈಲ್ ಅನ್ನು ಆ ಶಿಕ್ಷಕರೇ ಇಟ್ಟುಕೊಳ್ಳಲಿ. ನೀವು ಕೊಡುವ ಸಂಬಳದಲ್ಲಿ ಆ ಶಿಕ್ಷಕರು ಇಂಥಾ ಒಳ್ಳೆಯ ಫೋನ್ ಖರೀದಿಸಲು ಸಾಧ್ಯವೇ ? ನಾನು ನನ್ನ ಮಗುವಿಗೆ ಬೇರೆ ಫೋನನ್ನೇ ಕೊಡಿಸುತ್ತೇನೆ ಎಂದು ಹೇಳಿ ಹೊರ ಬಂದೆ . ಮುಂಚೆಯೇ ಹೇಳಲಿಲ್ಲವೇ ನನಗೆ ಬಿಡುವೇ ಇರಲಿಲ್ಲ ಎಂದು .ಅದ್ಯಾವುದೋ ಚಿತ್ರ ಗೀತೆಯೇ ಇಲ್ಲವೇ ಗುರುಗಳು ಹೇಳಿದ ಮಾತುಗಳೆಲ್ಲಾ ನಿಜವಲ್ಲ ಅಂತಾ. ಅದನ್ನಾದರೆ ಕೇಳಿಸಿಕೊಂಡು ನಕ್ಕು ಖುಷಿಪಡುವ ಮಂದಿ ಅದನ್ನೇ ಆಚರಿಸಿದರೆ ಬೇಸರಿಸುತ್ತಾರಲ್ಲಾ . ಇದೇ ನನಗೆ ಹಿಡಿಸದ ವಿಷಯ. ಕಾಲಕ್ರಮೇಣ ಎಲ್ಲವೂ ಸರಿಹೋಗುತ್ತದೆ ಬದಲಾಗುತ್ತದೆ ಎಂದು ಬಲವಾಗಿ ನಂಬಿರುವವನು ನಾನು.  ಅಕಸ್ಮಾತ್ ನನ್ನ ಮಗು ಬದಲಾಗದಿದ್ದರೆ ಏನಾಯ್ತು ? ಶಿಕ್ಷಕರು ಬದಲಾಗುವುದಿಲ್ಲವೇ ? ಶಾಲೆಯ ಆಡಳಿತ ಮಂಡಳಿ ಇರುವುದಾದರೂ ಏಕೆ ? ಮಕ್ಕಳೇ ತಪ್ಪು ಮಾಡಿದರೂ ಅವರನ್ನು ಒಪ್ಪವಿಟ್ಟುಕೊಂಡು ಶಿಕ್ಷಕರ ದೃಷ್ಟಿ ಕೋನ ವನ್ನು ಬದಲಿಸುವ ಕೆಲಸ ಮಾಡಲು ತಾನೇ ? ಏಕೆಂದರೆ ಮಕ್ಕಳ ಮನಸ್ಸು ಸೂಕ್ಷ್ಮ. ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕು ಎನ್ನುವುದನ್ನು ಚೆನ್ನಾಗಿ ಅರಿತಿರುವವನು ನಾನು. ಹಾಗೆಯೇ ಶಿಕ್ಷಕರೆಂದರೆ ಅಪಾರ ಗೌರವ ನನಗೆ . ಅವರಿಗೆ ನನ್ನ ಮಗುವಿನಿಂದ ಮತ್ತೊಮ್ಮೆ ಯಾ ಮಗದೊಮ್ಮೆ ಅವಮಾನವಾಗುವುದು ನನಗೆ ಸುತಾರಾಂ ಇಷ್ಟವಿಲ್ಲ. ಅದಕ್ಕೇ ಆ ಮೊಬೈಲ್ ಅನ್ನು ಆ ಶಿಕ್ಷಕರಿಗೇ ಕೊಟ್ಟು ಬಂದಿದ್ದು . ನನ್ನ ಮಗುವಿನ ಶಾಲೆಯ ಶಿಕ್ಷಕರು ಈ ರೀತಿ ನನ್ನ ಬಳಿ ಹೇಳಿದಾಗ ನನಗೆ ನನ್ನ ಮಗು ಮುಂದೆ ರಾಜಕೀಯದಲ್ಲಿ ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವ ಶಕ್ತಿಯನ್ನು ಈಗಿನಿಂದಲೇ ಬೆಳೆಸಿಕೊಳ್ಳುತ್ತಿದೆ ಎಂದು ಸಂತೋಷ ಹೆಮ್ಮೆ ಒಟ್ಟಿಗೇ ಆಯಿತು. ಹೇಗೋ ಓದು ಮುಗಿಯುವುದಂತೂ ನಿಜ . ಅದಕ್ಕೇಕೆ ಸಲ್ಲದ ಟೆನ್ಷನ್ ಅನುಭವಿಸಬೇಕು ? ಅಲ್ಲವೇ . 

ಇನ್ನು ನನ್ನ ಪತ್ನಿಯ ಬಗ್ಗೆ ಹೇಳದಿದ್ದರೆ ಸರಿಯಾಗದು. ಅವಳಿಗೂ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ಶೋಷಣೆಗಳನ್ನು ಕಂಡರೆ ಕೆಂಡದಷ್ಟು ಕೋಪ . ಈ ಮಹಿಳಾ ಶೋಷಣೆಯನ್ನು ವಿರೋಧಿಸಲೆಂದೇ ಹಲವಾರು ಕಡೆಗಳಲ್ಲಿ ಭಾಷಣ ಮಾಡಿ ಜನಗಳನ್ನು ಕಣ್ತೆರೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾಳೆ . ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆಂದೇ ಮನೆಯಲ್ಲಿ ಮನೆಗೆಲಸಗಳಿಗೆಲ್ಲಾ ಹೆಣ್ಣುಮಕ್ಕಳನ್ನೇ ನಿಯಮಿಸಿಕೊಂಡಿದ್ದಾಳೆ . ಹೊಸದಾಗಿ ಮನೆಗೆಲಸಕ್ಕೆ ಸೇರಿಕೊಂಡವಳೊಬ್ಬಳು ಇಷ್ಟು ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಆಗುವುದಿಲ್ಲ ಎಂದೇನೋ ತಕರಾರು ತೆಗೆದಿದ್ದಕ್ಕೆ ಹೆಚ್ಚು ಸಂಬಳ ಕೊಟ್ಟರೆ ದುಡಿಯುವುದನ್ನೇ ಕಡಿಮೆ ಮಾಡಿಬಿಡುತ್ತೀರಿ. ಕೆಲಸ ಮಾಡುವುದನ್ನೇ ನಿಲ್ಲಿಸಿಬಿಡುತ್ತೀರಾ. ಎಂದು ಕೆನ್ನೆಗೆ ಬಾರಿಸಿ ಬುದ್ಧಿ ಹೇಳಿದಳಂತೆ . ನೀವೇ ಹೇಳಿ. ಈಗಿನ ಕಾಲದಲ್ಲಿ ಇಷ್ಟೊಂದು ದೂರದೃಷ್ಟಿ ಇಟ್ಟುಕೊಂಡು ದುಡಿಯುವವರ ಯೋಗಕ್ಷೇಮವನ್ನು ಯಾರು ನೋಡಿಕೊಳ್ಳುತ್ತಾರೆ ? ಮಧ್ಯಮವರ್ಗದ ಮತ್ತು ಕೆಳವರ್ಗದ ಹೆಣ್ಣುಮಕ್ಕಳಿಗೆ ಸ್ವಂತವಾಗಿ ತಮ್ಮ ಕಾಲಿನ ಮೇಲೆ ನಿಲ್ಲುವುದನ್ನು ತೋರಿಸಿಕೊಟ್ಟಿದ್ದಾಳೆ . ಅಂಥವರಿಗಾಗಿಯೇ ಆಶ್ರಮಗಳನ್ನು ತೆರೆದು ನಡೆಸಿಕೊಂಡು ಹೋಗುತ್ತಿದ್ದಾಳೆ . ಅವಳಿಗೂ ಒಂದು ನಿಮಿಷ ಬಿಡುವಿಲ್ಲದ ಕೆಲಸ. ಇವಳು ಬೆಳವಣಿಗೆ ಸಹಿಸದ ಯಾರೋ ಪತ್ರಕರ್ತೆಯೊಬ್ಬಳು ಆಶ್ರಮದ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಗುರುತರವಾದ ಆರೋಪ ಮಾಡಿದಳಂತೆ . ನನ್ನವಳು ನನ್ನ ಅಭಿಮಾನಿಗಳಲ್ಲಿ ಕೆಲವರಿಗೆ ಆ ಪತ್ರಕರ್ತೆಯನ್ನು ಭೇಟಿ ಮಾಡಿಸಿ ಎಂದು ಹೇಳಿದಳಂತೆ . ನನ್ನವಳ ಮಾತಿನ ಮೇಲೆ ತುಂಬಾ ಗೌರವಾದರಗಳನ್ನು ಹೊಂದಿರುವ ಆ ಅಭಿಮಾನಿಗಳು ಆ ಪತ್ರಕರ್ತೆ ಇತ್ತೀಚೆಗೆ ಕಾಣುತ್ತಿಲ್ಲವೆಂದೋ ಇನ್ನುಮುಂದೆ ಕಾಣಿಸಿಕೊಳ್ಳುವುದಿಲ್ಲವೆಂದೋ ಹೇಳಿದರಂತೆ . ಈ ಅಭಿಮಾನಿಗಳೋ ಹನುಮಂತನ ಜಾತಿಗೆ ಸೇರಿದವರು. ಊರು ನೋಡಿಕೊಂಡು ಬನ್ನಿ ಎಂದರೆ ಊರು ಊರಿಗೇ ಬೆಂಕಿ ಹಚ್ಚಿ ಲಂಕಾದಹನದ ಹಾಗೆ ಮಾಡಿ ಇಲ್ಲೊಂದು ಊರಿತ್ತು ಎನ್ನುವ ಕುರುಹೂ ಸಿಗದಂತೆ ಅಳಿಸಿ ಬಂದುಬಿಡುತ್ತಾರೆ. ಎಷ್ಟು ಹೇಳಿದರೂ ಕೇಳುವುದಿಲ್ಲ . 

ಗಂಡಸಿಗೇಕೆ ಗೌರಿ ದು:ಖ ಎನ್ನುವಂತೆ ನಾನು ನನ್ನಾಕೆಯ ವಿಷಯಕ್ಕೆ ತಲೆ ಹಾಕಲು ಹೋಗುವುದಿಲ್ಲ . ಕೆಲವೊಮ್ಮೆ ಯಾರಾದರೂ ನಮ್ಮ ಏಳಿಗೆಯನ್ನು ಸಮಾಜಸೇವೆಯಿಂದ ಬರುವ ಕೀರ್ತಿಯನ್ನು ಸಹಿಸದವರು ನಮ್ಮನ್ನು ನಿಂದಿಸಿದರೆ ನಾನು ಖಂಡಿತಾ ಬೇಸರಿಸುವುದಿಲ್ಲ. ದಾಸರೇ ಹೇಳಿಲ್ಲವೇ ನಿಂದಕರಿರಬೇಕು ಎಂದು. ಅದನ್ನು ಸಾಧ್ಯವಾದಷ್ಟೂ ಪ್ರತಿಪಾದಿಸಲು ಯತ್ನಿಸುತ್ತೇನೆ. ತೀರಾ ನಮ್ಮ ಮುಖಕ್ಕೇ ಮಸಿ ಬಳಿಯುವ ಯತ್ನವನ್ನು ಮಾಡಿದರೆ ಆಗ ಮಾತ್ರ ನಾನು ಸ್ವಲ್ಪ ಸಹನೆ ಕಳೆದುಕೊಂಡೇನು . ಇಲ್ಲದಿದ್ದರೆ ನಾನು ಅತ್ಯಂತ ಶಾಂತ ಸ್ವಭಾವದವನು. ನನ್ನ ಬಗ್ಗೆ ನಾನೇ ಹೊಗಳಿಕೊಳ್ಳುವುದು ಹೇಳಿಕೊಳ್ಳುವುದು ಚಪ್ಪಾಳೆ ಗಿಟ್ಟಿಸುವುದು ನನಗೆ ಎಳ್ಳಷ್ಟೂ ಸೇರದ ವಿಷಯ. 


Rate this content
Log in