Ravindra Kumar N (CBSE)

Others

5.0  

Ravindra Kumar N (CBSE)

Others

ಚಿಲ್ಲರೆ

ಚಿಲ್ಲರೆ

4 mins
108



ಕೆಲವು ದಿನಗಳ ಹಿಂದೆ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿದೆ. ಮುನ್ನೂರಾ ಅರವತ್ತನಾಲ್ಕು ರೂಪಾಯಿ ಐವತ್ತು ಪೈಸೆ ಆಗುವಲ್ಲಿ ನನ್ನ ಗಾಡಿಯ ಟ್ಯಾಂಕ್ ತುಂಬಿತ್ತು. ಮುನ್ನೂರಾ ಎಪ್ಪತ್ತು ರೂಪಾಯಿ ಕೊಟ್ಟು ಚಿಲ್ಲರೆಗಾಗಿ ಕಾದೆ . ಪೆಟ್ರೋಲ್ ಹಾಕಿದೆ ಹುಡುಗ ಐದು ರೂಪಾಯಿ ಕೈಗಿತ್ತು " ಸರ್ ಉಳಿದ ಚೇಂಜ್ ತರುತ್ತೇನೆ ಇರಿ " ಎಂದು ಹೇಳಿ ಒಂದೇ ಕ್ಷಣದಲ್ಲಿ ಉಳಿದ ಐವತ್ತು ಪೈಸೆಯನ್ನೂ ನನ್ನ ಕೈಗಿರಿಸಿದ. " ಐವತ್ತು ಪೈಸೆಗೇಕಪ್ಪಾ ಇಷ್ಟು ಓಡಾಡಿದೆ ? " ಎಂದೆ. ಅವನಿಂದ ಬಂದ ಉತ್ತರ ನನ್ನ ಬಾಯಿ ಕಟ್ಟಿಸಿತ್ತು. "  ನಿಮ್ಮ ಶ್ರಮದ ಗಳಿಕೆಯ ಕಿಂಚಿತ್ ಭಾಗವನ್ನೂ ನಾನು ಹಗುರವಾಗಿ ಪರಿಗಣಿಸುವುದಿಲ್ಲ ಸರ್ " ಎಂದ. ನನ್ನ ಕೈಯಲ್ಲಿ ಅವನಿಟ್ಟಿದ್ದ ಐದೂವರೆ ರೂಪಾಯಿಗಳನ್ನೂ ಅವನ ಕೈಯಲ್ಲಿ ಇಟ್ಟು " ನಿನ್ನ ಆಲೋಚನೆ ತುಂಬಾ ಉತ್ಕೃಷ್ಟ. ತಗೋ ಇಟ್ಟುಕೋ " ಎಂದೆ. ಬೇಡವೆಂದವನಿಗೆ ಕೊಟ್ಟೇ ಬಂದೆ. 

ಮನೆಯ ಪ್ರಿಂಟರ್ ಮುಷ್ಕರ. ಸಂಕ್ರಾಂತಿಗೆಂದು ನಾಲ್ಕು ಸಾಲಿನ ಪದ್ಯವೊಂದನ್ನು ಬರೆದು ಅದರ ಪ್ರಿಂಟ್ ಔಟ್ ತೆಗೆಯಲು ಹತ್ತಿರದ ಜೆರಾಕ್ಸ್ ಮತ್ತು ಪ್ರಿಂಟೌಟ್ ನೀಡುವ ಅಂಗಡಿಯನ್ನು ಹುಡುಕುತ್ತಾ ಹೊರಟೆ. ನಾವಿರುವ ಏರಿಯಾದಲ್ಲಿ ಇದ್ದ ಅಂಗಡಿ ಮುಚ್ಚಿದ್ದುದರಿಂದ ದೂರದ ಅಂಗಡಿಗೆ ಭೇಟಿ ಕೊಟ್ಟೆ. ಆ ಅಂಗಡಿಯಲ್ಲಿ ತುಂಬಾ ಚೂಟಿಯಾದ ಒಬ್ಬ ಹುಡುಗ .  ಒಂದು ಪ್ರಿಂಟೌಟ್ ತೆಗೆದುಕೊಂಡು ಅದನ್ನೇ ಜೆರಾಕ್ಸ್ ಮಾಡಿಸಿದೆ. ಅವರು ಅಂಗಡಿಯಲ್ಲಿ ಎಲ್ಲಾಕಡೆ ಗಿಂತಲೂ ಪ್ರಿಂಟೌಟ್ ಮತ್ತು ಜೆರಾಕ್ಸ್ ನ ಬೆಲೆ ವಿಪರೀತ. ಹಾಗೆಂದು ಅಲ್ಲಿ ನಡೆದ ಪ್ರತಿ ಬೇರೆ ಕಡೆಗಳಲ್ಲಿ ಪಡೆದ ಪ್ರತಿಯ ಗುಣಮಟ್ಟ ಒಂದೇ. ಕೆಲವೇ ಪ್ರತಿಗಳಿಗೆ ಹತ್ತೊಂಬತ್ತೂವರೆ ರೂಪಾಯಿ ನಾನು ಕೊಡಬೇಕಾಗಿ ಬಂದಿತು. ಅಂಗಡಿಯಲ್ಲಿ ಈ ಹುಡುಗನ ಜೊತೆಗೆ ಒಂದು ಹುಡುಗಿ . ಇಪ್ಪತ್ತು ರೂಪಾಯಿ ಎಂದು ಆ ಹುಡುಗ ಹೇಳಿದ. " ಯಾಕೆ ಮಗು , ನಾನು ಕೊಡಬೇಕಾಗಿರುವುದು ಹತ್ತೊಂಬತ್ತೂವರೆ ರೂಪಾಯಿ ತಾನೇ. " ಎಂದೆ . ಅಷ್ಟು ಚಿಕ್ಕ ಹುಡುಗನ ಮುಖದಲ್ಲಿ ಬಂದ ವಿಚಿತ್ರ ವಿಶಿಷ್ಟ ವಿಕಾರೀ ಮುಗುಳ್ನಗು ನನ್ನಲ್ಲಿ ಸ್ವಲ್ಪ ಅಸಹನೆಯನ್ನು ಉಂಟು ಮಾಡಿತು. " ರೌಂಡಪ್ ಮಾಡಿದೆ ಅಂಕಲ್ " ಅಂದ ತುಂಬಾ ಉಡಾಫೆಯಿಂದ. ಅಂಕಲ್ ಚಿಲ್ಲರೆ ಇಲ್ಲ . ಏನ್ ಮಾಡ್ಲೀ. ಎಂದೇನಾದರೂ ನಯವಾಗಿ ಹೇಳಿದ್ದಿದ್ದರೆ ಬಹುಶಃ ನಾನು ಸುಮ್ಮನೆ ಬಂದುಬಿಡುತ್ತಿದ್ದೆನೇನೋ . ಆದರೆ ಚಿಕ್ಕ ಹುಡುಗನಾದರೂ ಅವನ ಆ ಉಡಾಫೆಯ ಉತ್ತರ ನನ್ನನ್ನು ಅಲ್ಲಿಯೇ ಹಿಡಿದು ನಿಲ್ಲಿಸಿತು " ಈ ಅಂಗಡಿಯಲ್ಲಿ ದೊಡ್ಡೋರು ಯಾರಿದ್ದಾರೆ ಮಗು ? " ಎಂದು ಮೃದುವಾಗೇ ಕೇಳಿದೆ. ಇದ್ದ ಇನ್ನೊಬ್ಬಳು ಬಂದಳು " ಚಿಕ್ಕ ಹುಡುಗರನ್ನೆಲ್ಲಾ ಯಾಕಮ್ಮ ವ್ಯಾಪಾರಕ್ಕೆ ನಿಲ್ಲಿಸೋದು ? " ಎಂದು ನಯವಾಗಿ ಗದರಿದೆ. ನಂತರ " ನೋಡಮ್ಮ , ಚಿಲ್ಲರೆ ಇಲ್ಲ ಎಂದರೆ ಅದನ್ನು ನಯವಾಗಿ ಹೇಳಲು ನಿಮ್ಮಂಥಾ ದೊಡ್ಡವರು ಇರಬಾರದೇ " ಎಂದು ಹೇಳಿ ಹೊರಡಲನುವಾದೆ. ಮುಂದೆ ನಡೆದದ್ದು ಈ ಲೇಖನಕ್ಕೆ ನಿಜವಾದ ಪ್ರೇರಣೆ. ನನ್ನನ್ನೇ ನೋಡಿ ಆ ಹುಡುಗಿ ಕಿಸಕ್ಕನೆ ನಕ್ಕಳು . ಆ ಹುಡುಗನೂ " ಚಿಲ್ರೆ ಅಂಕಲ್" ಅಂದಿದ್ದು ಕೇಳಿಸಿಯೇ ಬಿಟ್ಟಿತು. 

ಹೋದವನು ಮರಳಿ ಬಂದು ಐವತ್ತು ಪೈಸೆ ಚೇಂಜ್ ಕೊಡು ರಾಜಾ . ಚೇಂಜ್ ಇಲ್ಲಾ ಅಂದ್ರೆ ಚಾಕ್ಲೇಟ್ ಕೊಡು. ಏನಮ್ಮಾ ನಾನು ಐವತ್ತು ಪೈಸೆ ಕಡಿಮೆ ಕೊಟ್ಟರೆ ನೀವು ಒಪ್ಪುತ್ತೀರಾ ? ಬೇರೆ ಎಲ್ಲ ಕಡೆಗಿಂತಲೂ ನಿಮ್ಮಲ್ಲಿ ವಿಪರೀತ ಬೆಲೆ ಆದರೂ ನನಗೇನೋ ಅರ್ಜೆಂಟ್ ಇದ್ದಿದ್ದರಿಂದ ನಿಮ್ಮ ಬಳಿ ಬರಬೇಕಾಯಿತು. ಅದಕ್ಕೆ ಹೀಗಾ ವರ್ತಿಸೋದು ? ನನಗೆ ನನ್ನ ಐವತ್ತು ಪೈಸೆ ಬೇಕೇ ಬೇಕು. ಇಲ್ಲಾ ಬದಲಾಗಿ ಚಾಕ್ಲೇಟ್ ಆದರೂ ಬೇಕು. " ಎಂದು ಸ್ವಲ್ಪ ಜೋರಾಗಿಯೇ ಹೇಳಿದೆ. ಅವಳೇಕೋ ಸ್ವಲ್ಪ ಹೆದರಿದಂತೆ ಕಂಡಳು. ತಕ್ಷಣವೇ ಐವತ್ತು ಪೈಸೆ ಆ ಹುಡುಗನೂ ಕೈಲಿ ಕೊಟ್ಟು ಕೊಡು ಎಂದು ಹೇಳಿದರೆ ಕೊಡಲು ಆ ಹುಡುಗನಿಗೆ ತನ್ನ ಈಗೋ ಅಡ್ಡ. ಅಂತೂ ಇಂತೂ ಬಲವಂತ ಮಾಡಿ ಅವನ ಕೈಲಿ ಐವತ್ತು ಪೈಸೆ ಕೊಡಿಸಿದಳು. " ನೋಡಿ , ನಿಮಗೆ ಐವತ್ತು ಪೈಸೆ ಎಂದರೆ ಬೆಲೆ ಗೌರವ ಏನೂ ಇಲ್ಲದೇ ಇರಬಹುದು. ಆದರೆ ನನಗೆ ಅದರ ಬೆಲೆ ಚೆನ್ನಾಗಿಯೇ ಗೊತ್ತು. ಈ ಒಂದು ಐವತ್ತು ಪೈಸೆ ಕಡಿಮೆಯಾದರೂ ನೂರು ರೂಪಾಯಿ ಸಂಪೂರ್ಣ ನೂರಲ್ಲ. ಸಾವಿರ ಅಥವಾ ಕೋಟಿ ಕೂಡಾ ಸಂಪೂರ್ಣ ಕೋಟಿಯಲ್ಲ ನೆನಪಿಟ್ಟುಕೊಳ್ಳಿ. ನೀವು ನಕ್ಕಿದ್ದು ನನ್ನ ಐವತ್ತು ಪೈಸೆ ಮೇಲಷ್ಟೇ ಅಲ್ಲ. ಅದನ್ನು ದುಡಿಯಲು ನಾನು ಪಟ್ಟ , ಪಡುವ , ಪಡುತ್ತಿರುವ ಶ್ರಮದ ಮೇಲೂ ಕೂಡಾ " ಎಂದು ಹೇಳಿ ಈಕಡೆ ಬಂದೆ. ಕೂಡಲೇ ನಾನಾ ಘಟನೆಗಳು ತಲೆಯಲ್ಲಿ ಕುಣಿಯಲಾರಂಭಿಸಿದವು. ಪ್ರತೀದಿನ ಟೋಲ್ ಗಳಲ್ಲಿ ಫೀ ನೀಡುವವರಿಗೆ ಮಲಳಿಸಬೇಕಾದ ಒಂದು ಅಥವಾ ಎರಡು ಕೆಲವೊಮ್ಮೆ ಐದು ರೂಪಾಯಿಗೂ ಒಂದೋ ಎರಡೋ ಚಾಕ್ಲೇಟ್ ಕೊಟ್ಟು ನಿರಾತಂಕವಾಗಿ " ಚೇಂಜ್ ಇಲ್ಲಾ " ಎಂದು ಬಿಡುತ್ತಾರೆ . ಹೀಗೇ ಇಡೀ ದಿನ ಮಾಡಿ ಅವರು ಗಳಿಸುವ ಮೊತ್ತ ಎಷ್ಟೋ ಸಾವಿರಗಳು ಎಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲಿ ಮತ್ತೆ ಅವರವರಲ್ಲಿ ಪಾಲು. ಕೆಲವು ಆಟೋ , ಟ್ಯಾಕ್ಸಿ , ಸಿಟಿ ಬಸ್ ಗಳಲ್ಲಿ ಕಂಡಕ್ಟರ್ ಗಳು (ಎಲ್ಲರೂ ಅಲ್ಲ ) ಬಹುಶಃ ಎಲ್ಲೆಲ್ಲಿ ನಗದು ವ್ಯವಹಾರ ಮಾಡುತ್ತೇವೋ ಅಲ್ಲೆಲ್ಲ ( ಬ್ಯಾಂಕ್ ಗಳನ್ನು ಹೊರತುಪಡಿಸಿ ) ಈ ರೀತಿ ಚಿಲ್ಲರೆ ಅಭಾವವೆಂದು ಗ್ರಾಹಕರನ್ನು ಯಾಮಾರಿಸುವುದು ಸರ್ವೇ ಸಾಮಾನ್ಯವಾಗಿದೆ. ( ಎಲ್ಲೆಲ್ಲಿ ಪೇಟಿಎಂ , ಗೂಗಲ್ ಪೇ ಗಳಂಥವುಗಳಿಂದ ಹಣ ಸಂದಾಯ ಮಾಡಿದಾಗ ಈ ಸಮಸ್ಯೆ ಇರದು. ) 

ಓದುಗರೇ ಇದನ್ನೆಲ್ಲಾ ಓದುವಾಗ ಜುಜುಬಿ ಐವತ್ತು ಪೈಸೆ , ಒಂದು ರೂಪಾಯಿಗೆಲ್ಲಾ ಹೀಗಾಡುತ್ತಾನಲ್ಲಾ ಎಂದು ನಿಮಗನ್ನಿಸಿದ್ದರೆ ನಿಮ್ಮ ನೆನಪಿಗಾಗಿ ಒಂದು ಸಣ್ಣ ವಿಷಯ ಹೇಳುತ್ತೇನೆ. ಕೇವಲ ಐದು ಪೈಸೆ ಐದೇ ಐದು ಪೈಸೆ ಒಂದು ಕಂಪನಿಗೆ ಕೋಟ್ಯಂತರ ರೂಪಾಯಿಗಳ ನಿವ್ವಳ ಲಾಭ ತಂದಿರಿಸುತ್ತಿದೆ ಎಂದರೆ ನಂಬುತ್ತೀರಾ ? 

ಬಾಟಾ ಕಂಪನಿಯ ಯಾವುದೇ ಶೂ ಚಪ್ಪಲಿ ಇತ್ಯಾದಿಗಳನ್ನು ಖರೀದಿಸಿದರೂ ಪ್ರತಿ ಉತ್ಪನ್ನದ ಬಿಲ್ ಎಷ್ಟೋ ರೂಪಾಯಿಯೊಂದಿಗೆ ತೊಂಬತ್ತೈದು ಪೈಸೆ ಆಗಿರುತ್ತದೆ. ಆ ಐದು ಪೈಸೆಯ ಬಗ್ಗೆ ಗ್ರಾಹಕರು ತಲೆಕೆಡಿಸಿಕೊಳ್ಳುವುದಿಲ್ಲ. ಅಂಗಡಿಯವನೂ ಕೂಡಾ ಐದು ಪೈಸೆ ಚಲಾವಣೆಯಲ್ಲಿದ್ದಾಗಲೂ ಗ್ರಾಹಕರಿಗೆ ಮರಳಿಸಲಿಲ್ಲ. ಹನಿ ಹನಿ ಕೂಡಿದರೆ ಹಳ್ಳ ನದಿ ಸಮುದ್ರ ಏನು ಬೇಕಾದರೂ ಆಗಬಹುದು. ಪ್ರತೀ ಹನಿಯನ್ನೂ ವ್ಯಾಪಾರಿ ಶ್ರದ್ಧೆಯಿಂದ ಕೂಡಿಸಿದರೆ ಗ್ರಾಹಕ ಕೆಲಸಕ್ಕೆ ಬಾರದ ಡಿಗ್ನಿಟಿ , ಫಾಲ್ಸ್ ಪ್ರೆಸ್ಟೀಜ್ ಗಾಗಿ ಅಥವಾ ಯಾವುದೋ ಸಂಬಂಧವೇ ಇಲ್ಲದ ಆಗಂತುಕರ ಎದುರು ತನ್ನ ಸೋ ಕಾಲ್ಡ್ ಇಮೇಜ್ ಮೆಯಿನ್ ಟೇನ್ ಮಾಡಿಕೊಳ್ಳಲು ಈ ಚಿಲ್ಲರೆಯನ್ನು ಬಹು ಸುಲಭವಾಗಿ ಕಡೆಗಣಿಸುತ್ತಾರೆ. ಗ್ರಾಹಕರ ಇಂಥಾ ಆಲೋಚನೆಗಳೇ ವ್ಯಾಪಾರಿಗಳ ಕ್ಯಾಶ್ ಪಾಯಿಂಟ್ ಗಳು. ಪ್ರತಿಯೊಬ್ಬರೂ ಶ್ರಮಪಟ್ಟೇ ದುಡಿಯುವವರು ಎಂದಾಗ ಆ ಶ್ರಮದ ಸ್ವಲ್ಪ ಭಾಗ ಸುಮ್ಮನೆ ಕೈಯಿಂದ ನಷ್ಟವಾಗುತ್ತಿದೆಯಲ್ಲಾ ಎಂದು ಯೋಚಿಸಿದರೆ ಬಹುಶಃ ಇಂಥದ್ದಕ್ಕೆಲ್ಲಾ ಕಡಿವಾಣ ಹಾಕಬಹುದೇನೋ ? 

ಏರ್ ಪೋರ್ಟ್ ಗಳಲ್ಲಿ ಕಾಫಿ ಕೆಫೆಟೇರಿಯಾ ಗಳಿರುತ್ತವೆ. ಅಂಥದ್ದೊಂದು ಕೆಫೆಟೇರಿಯಾ ದಲ್ಲಿ ನಾನು ಕಾಫಿಯೊಂದನ್ನು ಖರೀದಿಸಿದೆ ತೊಂಬತ್ತು ರೂಪಾಯಿ. ನೂರು ರೂಪಾಯಿ ಕೊಟ್ಟರೆ " ಸಾರಿ ಸರ್ ನೋ ಚೇಂಜ್ " ಎಂದು ಒಂದು ಸ್ಮೈಲ್ ನೀಡಿ ಹುಡುಗಿ ಕ್ಯಾಶ್ ಬಾಕ್ಸ್ ಗೆ ಕ್ಯಾಶ್ ಹಾಕಿಕೊಂಡು ಸುಮ್ಮನಾಗಿಬಿಟ್ಟಳು. ಅರ್ಥಾತ್ ಹತ್ತು ರೂಪಾಯಿಗೆ ಒಂದು ಸ್ಮೈಲಾ ? ಎಂದು ಕೊಳ್ಳುವ ವೇಳೆಗೆ ಇನ್ನೊಬ್ಬ ಗ್ರಾಹಕರೂ ಕಾಫಿ ಖರೀದಿಸಿದರು. ಅವರಿಗೂ ಅದೇ ಸ್ಮೈಲ್ ಜೊತೆಗೆ ಅದೇ ಉತ್ತರ. ಆತ ತಕ್ಷಣವೇ ಚೇಂಜ್ ಪ್ಲೀಸ್ ಎಂದರು. ಐ ಡೋಂಟ್ ಹ್ಯಾವ್ ಸರ್ ಅಂದಳು. ದಟ್ಸ್ ಯುವರ್ ಪ್ರಾಬ್ಲಂ. ಗೆಟ್ ಮಿ ದ ಚೇಂಜ್ ಪ್ಲೀಸ್ ಎಂದು ನಗುಮುಖದಲ್ಲೇ ಸ್ವಲ್ಪ ಒರಟಾಗಿ ಹೇಳಿದ ಅವರಿಗೆ ಒಳಗೆ ಹೋಗಿ ನನಗೂ ಅವರಿಗೂ ನಮ್ಮ ಹಣ ವಾಪಸ್ ಮಾಡಿದಳು. ಆತ ಹೇಳಿದ್ದು ನನಗೇಕೋ ಸರಿಯೆನಿಸಿತು ನಾನೆಷ್ಟು ದುಡಿಯುತ್ತೇನೆ ಎನ್ನುವುದು ಮುಖ್ಯವಲ್ಲ. ಆದರೆ ಯಾವ ಮಾರ್ಗದಲ್ಲಿ ದುಡಿಯುತ್ತೇನೆ ಹಾಗೂ ಹಾಗೆ ದುಡಿಯುವಾಗ ನಾನು ಪಟ್ಟ ಶ್ರಮಕ್ಕೆ ನಾನೇ ಎಷ್ಟು ಬೆಲೆ ನೀಡುತ್ತೇನೆ ಎನ್ನುವುದು ಮುಖ್ಯ. ಇದರ ಬಗ್ಗೆ ಇತರರೇನೆಂದುಕೊಳ್ಳುತ್ತಾರೆ ಎಂದು ನಾನು ಯೋಚಿಸುತ್ತಾ ಹೋದರೆ ನಾನು ದುಡಿದದ್ದಕ್ಕಿಂತ ಕಳೆದಿದ್ದೇ ಜಾಸ್ತಿ ಆದೀತು . ನಾನಾಗಿಯೇ ಮೆಚ್ಚಿ ಟಿಪ್ಸ್ ಕೊಡುವುದು ಇದಕ್ಕೆ ಸೇರದು " ಎಂದರು. " ಸರ್ ತಮ್ಮ ವೃತ್ತಿ " ಎಂದೆ . ಇಂಡಸ್ಟ್ರಿಯಲಿಸ್ಟ್. ನನ್ನದೇ ಎಂಟು ಫ್ಯಾಕ್ಟರಿ ಇವೆ. ಒಂಬತ್ತನೆಯದು ಕೆಲ ಸಮಯದಲ್ಲೇ ಆರಂಭವೂ ಆಗುತ್ತದೆ ಎಂದು ಹೇಳಿದಾಗ ನನ್ನ ಆಲೋಚನೆ ಸರಿ ಎನ್ನಿಸಿತು. 


Rate this content
Log in