Ravindra Kumar N (CBSE)

Others

1  

Ravindra Kumar N (CBSE)

Others

ಈ ಬಾರಿಯೂ ನಾ ಹಾಸ್ಯ ಬರಹಬರೆಯಲಿಲ್ಲ

ಈ ಬಾರಿಯೂ ನಾ ಹಾಸ್ಯ ಬರಹಬರೆಯಲಿಲ್ಲ

13 mins
207



ಕಳೆದ ಬಾರಿ ಹಾಸ್ಯ ಬರಹ ಬರೆಯಲೇಬೇಕೆಂಬ ಅತ್ಯುತ್ಸಾಹದಿಂದ ಕುಳಿತಿದ್ದೂ ಆಯಿತು ಮತ್ತು ಆ ಉತ್ಸಾಹಕ್ಕೆ ನನ್ನ ದೇ ಮನೆಯಲ್ಲಿ ಸಿಕ್ಕ ಅಭೂತಪೂರ್ವ ಪ್ರೋತ್ಸಾಹ(?) ದಿಂದ ಬಹಳ ದಿನಗಳ ಕಾಲ ಉತ್ತೇಜಿತನಾಗಿದ್ದೆ . (ಅಂದ್ರೆ ನಿರುತ್ಸಾಹಿಯಾಗಿದ್ದೆ . ಮತ್ತೆ ಹಂಗ್ಯಾಕೆ ಬರ್ದಿದೀರಿ ಅಂದ್ರಾ ? ಕಾರಣ ಇದೇರೀ . ನಾನು ಏನಾದರೂ ಈಥರಾ ಬರೆಯುವಾಗ ಅಕಸ್ಮಾತ್ ನನ್ನ ಪೂರ್ಣಾಂಗಿ ಐ ಮೀನ್ ಮೈ ಕು.ಸು. ನ್ಯಾ - ಕುಟುಂಬದ ಸುಪ್ರೀಂ ನ್ಯಾಯಮೂರ್ತಿ   ನೋಡಿ ಓದಿ( ತೆಗೆದು ಒಂದು )ಬಿಟ್ಟರೆ ಅನ್ನೋ ಭಯ . ಆಕ್ಚುಯಲಿ ಭಯ ಏನಲ್ಲಾ ಸ್ವಲ್ಪ ಹೆದರಿಕೆ ಅಷ್ಟೇ . ) ನಂತರ ಮತ್ತೆ ಅದೇನೋ ಈ ಬಾರಿಯಾದರೂ ಒಂದು ಹಾಸ್ಯ ಬರಹ ಬರೆಯಲು ಆರಂಭಿಸಬೇಕು ಎಂದುಕೊಂಡೆ . ಕೈಯಲ್ಲಿ ಮೊಬೈಲ್ ಹಿಡಿದುಕೊಂಡೆ . ( ಎಲ್ರೂ ಪೆನ್ನು ಪೇಪರ್ ನಲ್ಲಿ ಬರೆದರೆ ನಾನ್ಯಾಕೆ ಮೊಬೈಲ್ ನಲ್ಲಿ ಟೈಪಿಸ್ತೀನಿ ಗೊತ್ತಾ . ಲಾಭ ಇದೆ ಅದರಿಂದ . ನನ್ನ ಕೈಬರಹ ಅದೆಷ್ಟು ಸುಂದರ ಎಂದರೆ ಅನೇಕ ಬಾರಿ ಓದಿದ ಮೇಲೆಯೇ ನಾನು ಏನು ಕೆತ್ತಿದ್ದೀನಿ ಅನ್ನೋದು ನನಗೂ ಗೊತ್ತಾಗೋದು ಸ್ವಲ್ಪ ಕಷ್ಟವೇ . ಆ ಕಷ್ಟ ಯಾಕೆ ಅಂತ ಅಷ್ಟೇ . ) ಅಂದಹಾಗೆ ನಾನೇನು ಹೇಳ್ತಾ ಇದ್ದೆ ? ನೀನೇನು ಹೇಳ್ತಾ ಇದಿಯೋ ಅದರ ಜ್ಞಾನ ನಿನಗಿರಬೇಕು ಕಣೋ ಬೇಕೂಫಾ ... . ಬೇರೆಯವರನ್ನು ಕೇಳಿದರೆ ? ಅಂತ ಯಾರೋ ನನಗೆ ಉಗಿದು ಒಂದು ಬಾಟಲು ಉಪ್ಪಿನ ಕಾಯಿ ಕಳಿಸುವ ಮುಂಚೆಯೇ ನಾನೇ ಹೇಳೋಕೆ ಶುರು ಹಚ್ಕಂಬಿಡ್ತೀನಿ . 

ಈ ಬಾರಿಯಾದ್ರೂ ಒಂದು ಒಳ್ಳೆಯ ಹಾಸ್ಯ ಲೇಖನ ಬರೀಬೇಕು ಅಂತ ಕೂತ್ನಾ ? ಇಲಿಯ ವಾಸನೆ ಹಿಡಿದು ಬೆಕ್ಕು ಹಾರಿ ಬರುವ ಹಾಗೆ ಕೇಶಿ ಬಂದ . " ಏನ್ ಸಾ ಮತ್ತೆ ಏನೋ ಬರಿಯಾಕೆ ಸುರು ಮಾಡುದ್ರಾ" ಅಂದ . " ಮಾಡೋಣ ಅಂತಾನೇ ಇದ್ದೆ ಸ್ವಾಮಿಗಳೇ , ಆದರೆ ಅದೇ ಸಮಯಕ್ಕೆ ಸರಿಯಾಗಿ ತಮ್ಮ ಆಗಮನ ಆಗಿದೆ . ಅಂದರೇ ...... ನನ್ನ ಲೇಖನಕ್ಕೆ ಶಂಖುಸ್ಥಾಪನೆ ಆದಹಾಗೆಯೇ ." ಅಂದೆ . " ಏ ಅಸ್ಟೋಂದೆಲ್ಲಾ ಮರ್ವಾದೆ ಯಾಕೆ ಸಾ ?" ಅಂದ ಹಿರಿಹಿರಿಹಿಗ್ಗುತ್ತಾ . ಎಲಾ ನನ್ನ ಮಗನೇ , ನನ್ನ ವ್ಯಂಗ್ಯ ಅರ್ಥ ಆಗ್ದೇ ಇರೋ ಅಷ್ಟು ಮೂರ್ಖ ಏನಲ್ಲಾ ನೀನು . ನನ್ನ ಉರ್ಸೋಕೆ ನನ್ನ ಮುಂದೆ ನಾಟಕ ಆಡ್ತಿದೀಯಾ ಅನ್ಕೊಂಡು " ಏನೋ ಬಂದಿದ್ದು ? ಏನಾದ್ರೂ ಬೇಕಿತ್ತಾ ? " ಅಂದೆ . " ಸಾ ನಿಮ್ಮ ಕೈನಾಗಿರೋ ಮೊಬೇಲ್ನಾಗೆ ಏನಾರ ತೋರ್ಸಿ ಸಾ " ಅಂದ . " ಯಾಕಪ್ಪಾ ಅಕ್ಕನ ಹತ್ತಿರ ಬೈಸ್ಕೋಬೇಕಾ " ಅಂದೆ . " ಹಂಗೇನಿಲ್ಲಾ ಸಾ ಅಕ್ಕ ದೇವುಸ್ತಾನಕ್ ಓಗವ್ರೆ . ಅವ್ರು ವಾಪಸ್ ಬರ ಗಂಟ ಅಸ್ಟೇಯಾ . ನೀವು ಯಾವಾಗ್ಲೂ ಮಡಿಕ್ಕಂಡಿರ್ತೀರಲ್ಲಾ ಈ ಮೊಬೇಲ್ ನಾಗೆ ಅಂತದ್ದೇನೈತೆ ಅಂತ ನೋಡವಾ ಅಂತ . ತೋರ್ಸಿ ಸಾ " ಅಂದ . ಏನೋ ಪಾಪ ಕೇಳ್ತಿದಾನೆ . ಯಾವಾಗಲೂ ಕೇಳೋನಲ್ಲಾ . ತೋರ್ಸಣಾ ಅಂತ ಮೋಬೈಲ್ ನಲ್ಲಿ ಫೇಸ್ಬುಕ್ ತೋರುಸ್ದೆ . " ಇಲ್ಲೇನ್ ಬರ್ದವ್ರೇ ? " ಅಂತ ಕೇಳ್ದ . " ಓ ಇಲ್ಲಾ , ಇಲ್ಲಿ ಏನಾದರೂ ಬರೆಯಿರಿ ಅಂತ ಬರ್ದಿದೆ " ಅಂದೆ . " ಓ ..... ಅದ್ಕೇಯಾ ... " ಅಂತ ರಾಗ ಎಳೆದು ನಿಲ್ಲಿಸಿದ . " ಅಪ್ಪಾ , ತಂದೆ " ಅಂದೆ . ಅಂದ್ಬಿಟ್ಟು ಮುಂದಿನ ಪದ ಹೇಳೋ ಅಷ್ಟರಲ್ಲಿ " ಎಲ್ಡೂ ಒಂದೇ ಏಳಿ ಸಾ " ಅಂದ . " ಏನೋ ಅದು ಎರಡೂ ಒಂದೇ " ಅಂತ ನನಗೆ ಅರ್ಥ ಆಗದೇ ಕೇಳಿದೆ . " ಅದೇ ಸಾ , ನೀವೇಳುದ್ರಲ್ಲಾ. ಅಪ್ಪ , ತಂದೆ ಅಂತ . ಅವೆಲ್ಡೂ ಒಂದೆಯಾ , ಅಂದೆ ." ಅಂದ . " ಓಡಾಡುವ  ಜ್ಞಾನದ ತುಂಡೇ " ಎಂದು ವ್ಯಂಗ್ಯವಾಗಿ ಸಂಬೋಧಿಸಿದೆ . ಹುಡುಕಾಡಲಾರಂಭಿಸಿದ . " ಏನೋ ಹುಡುಕ್ತಾ ಇದೀಯಾ ? " ಅಂದೆ . " ಅದೇನೋ ತುಂಡು ಅಂದ್ರಲ ಸಾ . ಅದ್ಯಾವ್ ತುಂಡು ?ಎಲ್ಲಿಕ್ಕಿದೀರಾ ? ಅಂತ ಉಡುಕ್ತಾ ಇದ್ದೆ " ಅಂದ . ಇನ್ನು ಬೇರೆ ಏನೇ ಹೇಳಿದರೂ ಅದು ಇನ್ನೇತಕ್ಕೋ ತಿರುಗೀತು ಎಂದುಕೊಂಡು " ಏಯ್ , ಸುಮ್ನೆ ಏನೇನೋ ಹೇಳಿ ಮಾತು ಬದ್ಲಾಯಿಸ್ ಬೇಡಾ . ನನ್ನ ಮೊಬೈಲ್ ನಲ್ಲಿ ಫೇಸ್ಬುಕ್ ನೋಡಿ ಓ ಅದ್ಕೇಯಾ ಅಂತ ರಾಗ ಎಳಿದ್ಯಲ್ಲಾ ಯಾಕೆ ? ನಿಂಗೇನ್ ಗೊತ್ತಾಯ್ತು ? ಹೇಳೋ ‌." ಅಂದೆ . " ಅದೇ ಸಾ ನೀವ್ಯಾಕೆ ಯಾವಾಗ್ಲೂ ಮೊಬೇಲ್ನಾಗೆ ಮುಳುಗಿರ್ತೀರಾ ಅಂತ ಗೊತ್ತಾಗೋತು ಸಾ " ಅಂದ ." ಏನೋ ನಿನಗೆ ಗೊತ್ತಾಗಿದ್ದು ? " ಅಂದೆ . " ಅದೇ , ಅಲ್ಲಿ , ಇಲ್ಲಿ ಏನಾದರೂ ಬರೆಯಿರಿ ಅಂತ ಅವ್ರೇ ಬರ್ದವ್ರೇ . ನೀವೂ ಅದ್ಕೇ ಏನೋ ಬರೀತಾನೇ ಇತ್ತಿರಾ . ಬರೀತಾನೇ ಇತ್ತಿರ ‌. ಅಕ್ಕಂತಾವ ಬೋಸ್ಕೊಂತಾನೇ ಇತ್ತಿರ . " ಅಂದ . ಎಲಾ ಇವನ ಎಷ್ಟು ದಿನಗಳಿಂದ ನಾನು ಈ ಮೊಬೈಲ್ ಗೆ ಅಂಟ್ಕೊಂಡಿದೀನಿ . ನನಗೇ ಹೊಳೀಲಿಲ್ವಲ್ಲಾ ಇದು . ಅನ್ಕೊಂಡೆ . " ಪರವಾಗಿಲ್ಲ ಕಣೋ . ಚೆನ್ನಾಗೇ ಮಾತಾಡ್ತೀಯಾ . ಒಂದೊಂದ್ಸಲ ." ಅಂದೆ . " ಓ ಔದಾ ಸಾ ? ಅದೇನೋ ನಿಮ್ತಾವ ಮಾತಾಡೋವಾಗ ಅಂಗಾಯ್ತದೆ ಸಾ . ನಮ್ಮನೇ ಪಕ್ಕ ಒಬ್ಬ ಗುಲ್ಡೂ ನನ್ಮಗ ಅವ್ನೇ ‌ . ಅವುಂತಾವ ಮಾತಾಡ್ದಾಗ್ಲೂ ಅವ್ನೂ ಇಂಗೇ ಅಂತಾನೆ " ಅಂದ .  ಬಹುಶಃ ಕರೆದು ಉಗಿಸಿಕೊಳ್ಳೋದು ಇದೇ ಇರ್ಬೇಕು ಅನ್ನಿಸ್ತು . ವಿಷಯ ಛೇಂಜ್ ಮಾಡಿದೆ . " ಅಲ್ವೋ , ಮೊಬೈಲ್ ನಲ್ಲಿ ಏನೋ ನೋಡ್ಬೇಕೂ ಅಂದ್ಯಲ್ಲೋ . ಬಾರೋ ನೋಡೋ " ಅಂದೆ . " ಬ್ಯಾಡ ಬುಡಿ ಸಾ . ಕೆಲ್ಸಾ ಐತೆ . ಬತ್ತಿನಿ . " ಅಂತ ಎದ್ದೋದ . ಒಳ್ಳೇದೇ ಆಯ್ತು ಅನ್ಕೊಂಡು ಏನಾದರೂ ಹೊಸ ವಿಷಯ ತಗೊಂಡು ಅದರ ಮೇಲೆ ಹಾಸ್ಯ ಲೇಖನ ಬರೆಯೋಣ ಅನ್ಕೊಂಡೆ .

 ಇದಾಗಿ ಐದು ನಿಮಿಷ ಕಳೀತೋ ಇಲ್ವೋ ಸೀದಾ ಮತ್ತೆ ಹತ್ತಿರ ಬಂದ . " ಸಾ ನಿಮ್ಮುನ್ನೊಂದ್ ಮಾತ್ ಕೇಳ್ಬೇಕಿತ್ತು . ಕೇಳ್ಳಾ ? " ಅಂದ . " ಕೇಳ್ಬೇಡಾ ಅಂದ್ರೆ ಸುಮ್ನಿರೋ ಜಾಯಮಾನಾನೇ ಅಲ್ವಲಪ್ಪ ನಿಂದು . ಕೇಳು ಏನು ಕೇಳ್ಬೇಕೂ ಅಂತಿದೀಯಾ " ಅಂದೆ . ಸಾ , ಈ ಲೋಕದಾಗೆ ಸತ್ಯ ಏಳೋರಿಗೆ ಬೆಲೇನೇ ಇಲ್ಲ . ಔದಾ ಸಾ .? " ಅಂದ . ಯಾವುದೋ ಘನವಾದ ವಿಷಯಕ್ಕೇ ತಳಪಾಯ ಹಾಕ್ತಾ ಇದಾನೇನೋ ಅನ್ಕೊಂಡು " ಯಾಕೋ ? ಏನಾಯ್ತೋ ? ಇದ್ದಕ್ಕಿದ್ದಂತೆ ಈ ವಿಚಾರ ಯಾಕೋ ಈಗ ? " ಅಂದೆ. " ಮತ್ತಿನ್ನೇನು ಸಾ ? ಅಕ್ಕ ಯೋಳ್ತಿದ್ರು , ಅಕ್ಕ ಮನೇಗ್ ತರೋ ಅಲ್ಲುಜ್ಜೋ ಪೇಟು ಹಲ್ನ ಕಿಲೀನೇ ಮಾಡಾಕಿಲ್ಲಂತೆ . ಮತ್ತೆ ಟೀವೀನಾಗೆ ಯೋಳ್ತಾವ್ರೆ ಇದೇ ಒಳ್ಳೆಯದು ಇದೆ ಒಳ್ಳೆಯದು ಅಂತ . ಇದು ಮೋಸ ಅಲ್ವಾ ಸಾ ? " ಅಂದ . " ಲೋ ಅದು ಪೇಟು ಅಲ್ಲ ಕಣೋ . ಪೇಸ್ಟ್ ಕಣೋ . " ಅಂದೆ . " ಸಾ ನಾನೇನೇಳುದ್ರೂ ನೀವೇನೇಳುದ್ರು ಅದು ಮಾತ್ರ ಅದೇ ಅಲ್ವಾ ಸಾ . ಆ ಇಸ್ಯ ಬುಡಿ . ಏಟುಕೋಂದ್ ಸುಳ್ಳೇಳವ್ರೇ ಅಂತ ನಾನೇಳ್ತಿದ್ರೆ ನೀವು ಏನೇನೋ ಯೋಳ್ತಿವ್ರಲ್ಲಾ . ಅಕ್ಕ ಮನೇಗ್ ತರೋ ಪೇಸಟನ್ನ ಬರೇ ಎಂಟ್ ಜನ ದಾಗುಟ್ರು ಸಂದಾಗೈತೆ . ಅಂತ ಯೋಳವ್ರೇ . ಇದು ಸುಳ್ಳೇಳ್ದಂಗೆ ಮೋಸ ಮಾಡ್ದಂಗೆ ತಾನೇ " ಅಂದ . ನನಗೆ ತಲೇ ಬುಡ ತಿಳೀಲಿಲ್ಲ . " ಪುಣ್ಯಾತ್ಮ , ಅದೇನು ಹೇಳ್ಬೇಕೂಂತ ಇದೀಯಾ ಅದನ್ನ ಅರ್ಥ ಆಗೋ ಹಾಗೆ ಹೇಳೋ . ತಲೆ ತಿನ್ಬೇಡ್ವೋ " ಅಂದೆ . " ಸಂದಾಕೇಳುದ್ರಿ . ಈ ತಲೆಯಾಗೇನೈತೆ ಅಂತ ತಿನ್ನಕಾಯ್ತದೆ ? ನಿಮ್ ತಲೇ ಇಸ್ಯ ಬುಡಿ . ಇಲ್ನೋಡಿ . " ಅಂತ ನನ್ನ ಕರೆದುಕೊಂಡು ಹೋಗಿ ಟೀವಿ ಮುಂದೆ ಕೂರಿಸಿದ . ಅಯ್ಯೋ ನನಮಗನೇ , ಇಲ್ಯಾಕೋ ಕರ್ಕೊಂಡು ಬಂದು ಕೂರಿಸ್ದೇ . ನನ್ನ ಬಲಹೀನತೆ ಮೇಲೇ ಆಟ ಆಡ್ತೀಯಲ್ಲೋ ಅಂತ ಮನಸ್ಸಿನಲ್ಲೇ ಶಪಿಸುತ್ತಾ ಕುಳಿತೆ . ಯಾಕೇಂತಿರೋ ? ಟೀವಿ ಮುಂದೆ ನಾನು ಕುಳಿತು ಬಿಟ್ಟರೆ ಈ ಬಾಹ್ಯ ಪ್ರಪಂಚಕ್ಕೂ ನನಗೂ ಸಂಬಂಧವೇ ಕಡಿದುಹೋಗಿಬಿಟ್ಟು ನಾನು ಸಮಾಧಿ ಸ್ಥಿತಿ ಅಲ್ಲಲ್ಲ ಕಳೆದೇ ಹೋಗಿರ್ತೀನಿ . ಅಂಥಾ ಸಮಯದಲ್ಲೇ ನನ್ನ ಕು.ಸು.ನ್ಯಾ ರಿಂದ ವಿಶೇಷ ಆದೇಶಗಳು . ಉದಾಹರಣೆಗೆ ರೀ ಒಲೇ ಮೇಲೆ ಹಾಲಿಟ್ಟಿದೀನಿ . ಉಕ್ಕದೇ ಇರೋ ಹಾಗೆ ನೋಡ್ಕೊಂಡು ಇನ್ನೇನು ಉಕ್ತಾ ಇದೆ ಅನ್ನೋವಾಗ ಸ್ಟೌ ಆಫ್ ಮಾಡಿ. ಇತ್ಯಾದಿ ಎಲ್ಲಾ ಸೂಚನೆಗಳನ್ನೂ ನನ್ನವಳು ಕೊಡೋದೇ ನಾನು ಟೀವಿ ಯಲ್ಲಿ ಸಂಪೂರ್ಣವಾಗಿ ಕಳೆದುಹೋಗಿದ್ದಾಗ . ಆಗಲೇ ಅವಳಿಗೂ ಈ ಎಲ್ಲಾ ಸೂಚನೆಗಳನ್ನು ನೀಡಲು ಸುಮುಹೂರ್ತ ಸುಸಂದರ್ಭ . ಆಗಲೇ ಅವಳಿಗೆ ಸ್ಫೂರ್ತಿ ಸೃಜನಶೀಲತೆ ಒಟ್ಟೊಟ್ಟಿಗೆ ಬಂದು ಧಾಳಿಯಿಡುವುದು . ಪರಿಣಾಮ ? ನೀವು ಊಹಿಸಿದ್ದು ಸಂಪೂರ್ಣ ಸರಿ . ಹಾಲಿಗೂ ಅತ್ಯಂತ ಉತ್ಸಾಹ ಶಕ್ತಿ ಹೆಚ್ಚಾಗಿ ಅದು ಉಕ್ಕಿ ಸ್ಟೌನ ಬರ್ನರ್ ಮೇಲೆಲ್ಲಾ ಹರಿದು ಸ್ಟೌನ ಕೆಳಗಿರುವ ಕಟ್ಟೆಯ ಮೇಲೆಯೂ ಹರಿಯುತ್ತಾ ಕಟ್ಟೆಯಿಂದ ಕೆಳಕ್ಕೆ ಒಳ್ಳೆಯ ಲಯ ಮತ್ತು ತಾಳಗಳಲ್ಲಿ ತೊಟ್ಟಿಕ್ಕಿ ನೆಲವನ್ನೂ ನಿಧಾನವಾಗಿ ಆಕ್ರಮಿಸಲಾರಂಭಿಸುತ್ತದೆ . ಅದೇ ಸಮಯದಲ್ಲಿ ಬರ್ನರ್ ಮೇಲೆ ಬಿದ್ದ ಹಾಲು ಬರ್ನರ್ ನ ಬಿಸಿಗೆ ಸುಟ್ಟು ಸೀದು ಆ ಸೀದ ವಾಸನೆ ಆಫ್ ಆಗದ ಬರ್ನರ್ ನಿಂದ ಹೊರಗೆ ಬರುತ್ತಿರುವ ಗ್ಯಾಸ್ ನೊಂದಿಗೆ ಬೆರೆತು ನನ್ನ ಮತ್ತು ನನ್ನವಳ ಮೂಗುಗಳಿಗೆ ಏಕಕಾಲಕ್ಕೆ ತಲುಪಿ ಲೈಟ್ನಿಂಗ್ ಸ್ಪೀಡ್ ನಲ್ಲಿ ಅವಳು ಅಡಿಗೆ ಮನೆಗೆ ಹಾರಿ ಬರ್ನರ್ ಆಫ್ ಮಾಡುವಷ್ಟರಲ್ಲಿ ನಾನು ಸಮಾಧಿ ಸ್ಥಿತಿಯಿಂದ ಹೊರಬಂದು ನಾನೂ ಅಡಿಗೆ ಮನೆಗೆ ಹೋಗಿ ಅವಳ ಹಿಂದೆಯೇ ನಿಂತು ಅವಳು ಬರ್ನರ್ ಆಫ್ ಮಾಡುವುದಕ್ಕೆ ಸಾಕ್ಷಿಯಾಗಬೇಕು . ನಂತರ ಅವಳ ಕಣ್ಣುಗಳಿಂದ ಲೇಸರ್ ನೋಟ ಹೊರಬರಬೇಕು . ಅದು ನನ್ನನ್ನು ತಲುಪಿ ನಿಶ್ಚೇಷ್ಟಿತನನ್ನಾಗಿಸಬೇಕು . ಮತ್ತೆ ಇನ್ನೆಂದೂ ನಾನು ಇಂಥಾ ತಪ್ಪು ಮಾಡುವುದಿಲ್ಲ ಎಂದು ಆ ಕ್ಷಣವೇ ಪ್ರತಿಜ್ಞೆ ಮಾಡಬೇಕು . ಮತ್ತು ಆ ಪ್ರತಿಜ್ಞೆಯನ್ನು ಸ್ವಲ್ಪ ಸಮಯದ ನಂತರ ಸಂಪೂರ್ಣ ವಾಗಿ ಮರೆತು ಹೋಗಬೇಕು . ಇದು ಹೀಗೆ ನಡೆಯುತ್ತಾ ಬಂದು ನಮ್ಮ ಮನೆಯಲ್ಲಿ ಸಂಪ್ರದಾಯವೇ ಆಗಿಹೋಗಿದೆ . ಅದಕ್ಕೇ ಈ ಘಟನೆ ಅವಳಿಲ್ಲದೇ ಇದ್ದಾಗ ಘಟಿಸುವುದು ಬೇಡ ಎಂದು ಮುಂಜಾಗ್ರತಾ ಕ್ರಮವಾಗಿ " ಏಯ್ ನಂಗೆ ಟೀವಿ ನೋಡ್ತಾ ಕೂತ್ಕೊಳೋ ಅಷ್ಟು ಪುರಸೊತ್ತು ಇಲ್ಲ ಕಣೋ . ಏನಾದ್ರೂ ಹೇಳೋದಿದ್ರೆ ಬೇಗ ಹೇಳು " ಅಂದೆ . " ಓ ಬನ್ನಿ ಸಾ ನಿಮ್ಗೆ ಎಷ್ಟು ಕೆಲ್ಸಾ ಐತೆ ನಂಗೊತ್ತಿಲ್ಲವ್ರಾ ? ಐದ್ನಿಮ್ಸದಾಗೆ ಏನೂ ಆಗಾಕಿಲ್ಲ ಬನ್ನಿ " ಅಂದ . ಇವತ್ಯಾಕೋ ನನ್ನ ಹಣೇಬರಹ ನೇ ಚೆನ್ನಾಗಿಲ್ಲ . ಇವತ್ತು ಇವನೊಬ್ಬನೇ ನನ್ನನ್ನು ತೊಳೀತಾ ಮರ್ಯಾದೆ ತೆಗೀತಿದಾನಲ್ಲಾ . ಹೋಗ್ಲಿ ಏನಾದರೂ ವಾಪಸ್ ಹೇಳೋಣವೆಂದರೆ ಅವನು ಹೇಳಿದ್ದರಲ್ಲಿ ಸುಳ್ಳು ತಪ್ಪು ಏನೂ ಇಲ್ಲ . ಛೇ ಇವನಿಂದ ತಪ್ಪುಸ್ಕೋಬೇಕು ಅಂದ್ರೆ ಅವನು ಅದೇನು ತೋರಿಸ್ತಾನೋ ಅದನ್ನು ನೋಡಿ ನಂತರ ನನ್ನ ಕೆಲಸ ಮಾಡಲು ತೆರಳುತ್ತೇನೆ ಎಂದುಕೊಂಡು ಅವನನ್ನೇ ಹಿಂಬಾಲಿಸಿದೆ . ಅವನ ಅದೃಷ್ಟಾನೋ ನನ್ನ ದುರದೃಷ್ಟಾನೋ ಅವನು ಮುಂಚೆ ನೋಡಿ ನನಗೆ ತೋರಿಸಬೇಕೆಂದಿದ್ದ ಜಾಹೀರಾತು ಬಂದೇಬಿಟ್ಟಿತು . ಅದರಲ್ಲಿ ಅದ್ಯಾವುದೋ ಪೇಸ್ಟ್ ಅನ್ನು ತೋರಿಸಿ ಹತ್ತು ಜನ ಡಾಕ್ಟರ್ ರಲ್ಲಿ ಎಂಟು ಜನ ಶಿಫಾರಸು ಮಾಡಲಾದ ನಂಬರ್ ಒನ್ ಬ್ರಾಂಡ್ ಅಂತ ಹೇಳ್ತಾರೆ . ಅದನ್ನು ಕೇಳಿಕೊಂಡು ಈ ಮಹಾನುಭಾವ ನನ್ನ ಹತ್ತಿರ ಬಂದು ಆ ಜಾಹೀರಾತಿನ ‌ಸತ್ಯಾಸತ್ಯತೆ ಬಗ್ಗೆ ವಿಚಾರಿಸ್ತಾ ಇದಾನೆ . " ಏಯ್ , ಅದೆಲ್ಲ ಜಾಹೀರಾತು ಕಣೋ . ಜನಗಳನ್ನ ಆಕರ್ಷಣೆ ಮಾಡಿ ತಮ್ಮ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಮಾರಾಟ ಮಾಡೋದಕ್ಕಾಗಿ ಹೀಗೆಲ್ಲ ಹೇಳ್ತಾರೆ . ಅದಿಕ್ಕೆಲ್ಲಾ ನೀನು ತಲೆಕೆಡಿಸಿಕೊಂಡು ನನ್ನ ತಲೇನೂ ಹಾಳುಮಾಡಬೇಡ " . ಅಂದೆ . ಕೇಶಿ ನನ್ನ ಕಡೆ ತುಂಬಾ ಗಂಭೀರವಾದ ನೋಟವೋಂದನ್ನು ಬೀರಿದ . 

ಆ ನೋಟ ಹೇಗಿತ್ತೆಂದರೆ ಅದೇನು ಪದೇಪದೇ ನಿನ್ನ ತಲೆ ಬಗ್ಗೇನೇ ಮಾತಾಡ್ತಾ ಇದೀಯಲ್ಲ . ನಿಜವಾಗಿಯೂ ನಿನಗೆ ತಲೆ ಅನ್ನೋದು ಒಂದು ಇದೆಯಾ ? ಅಕಸ್ಮಾತ್ ಇದ್ದರೆ ಅದು ಕೆಲಸ ಮಾಡುತ್ತಾ ? ಇಷ್ಟರ ಮೇಲೆ ಕೆಲಸ ಮಾಡಿದರೂ ಸರಿಯಾಗಿ ಮಾಡುತ್ತಾ ? ಎನ್ನುವ ಅನುಮಾನಗಳು ಮಿಳಿತವಾಗಿದ್ದವೇನೋ ಎನಿಸಿತು . ಆ ನೋಟದ ಬಗ್ಗೆ ಏನಾದರೂ ಹೆಚ್ಚು ಕೇಳಿದರೆ ನನ್ನ ಮಿದುಳಿನ ಅಸ್ತಿತ್ವವನ್ನೇ ಈ ಬೃಹಸ್ಪತಿಯು ಪ್ರಶ್ನಿಸಿಬಿಟ್ಟರೆ ? ನಂತರ ಆಗುವ ಹೊಚ್ಚ ಹೊಸ ಅವಮಾನವನ್ನು ಸಹಿಸಿಕೊಳ್ಳುವುದು ಹೇಗೆ ? ಎನ್ನುವ ಪ್ರಶ್ನೆ ಮೂಡಿ ಒಂದು ರೀತಿಯ ನಡುಕ ಮೂಡಿ ಆ ನೋಟದ ಬಗ್ಗೆ ಏನೂ ಪ್ರಶ್ನಿಸದೇ ಆ ನೋಟಕ್ಕೂ ನನಗೂ ಸಂಬಂಧವೇ ಇಲ್ಲ ನಾನು ಅವನ ನೋಟವನ್ನು ಗಮನಿಸಿಯೇ ಇಲ್ಲ ಎನ್ನುವಂತೆ ನಟಿಸಿದೆ . " ಸಾ ಅದ್ಕೇ ನಿಮ್ಗೇನೂ ತಿಳಿಯಾಕಿಲ್ಲ ಅನ್ನದು . ಅತ್ತು ಜನ ದಾಗುಟ್ರುಗುಳಾಗೆ ಎಂಟ್ ಜನಾ ಉಪಯೋಗುಸ್ರೀ ಅಂತ ಯೋಳಿದರೇ ಅಂದ್ರೆ ಯೋಚ್ನೆ ಮಾಡಿ ಸಾ . ಈ ಜಾಯೀರಾತುನೋರು ಎಂಗ್ ಸುಳ್ಳು ಏಳ್ತಾ ಅವ್ರೆ ಅಂತ ತಿಳಿಯಾಕಿಲ್ವಾ ? " ಅಂದ . ಇವನಿಗೇನಾದ್ರೂ ಒಂದು ಉತ್ತರ ಕೊಟ್ಟು ಇಲ್ಲಿಂದ ಜಾಗ ಖಾಲಿ ಮಾಡಿ ಈ ಸಾರಿಯಾದ್ರೂ ಒಂದು ಹಾಸ್ಯ ಲೇಖನ ಬರೆಯೋಕೆ ಪ್ರಯತ್ನ ಪಡಬೇಕು ಅಂತ ಮನಸ್ಸು ಮಾಡಿ " ಅವರೆಲ್ಲೋ ಸುಳ್ಳು ಹೇಳ್ತಿದ್ದಾರೆ ? ಅವರ ಪೇಸ್ಟ್ ನ ಬಗ್ಗೆ ಹತ್ತು ಜನ ಡಾಕ್ಟರ್ ಗಳನ್ನು ವಿಚಾರಿಸಿದ್ದಾರೆ . ಅವರಲ್ಲಿ ಎಂಟು ಜನ ನಿಮ್ಮ ಪೇಸ್ಟ್ ಚೆನ್ನಾಗಿದೆ ಅಂತ ಹೇಳಿದಾರೆ . ಅದನ್ನೇ ಇವರು ಎಲ್ಲರಿಗೂ ತಿಳೀಲಿ ಅಂತ ಒಂದು ಜಾಹೀರಾತು ಮಾಡಿ ಪ್ರಚಾರ ಮಾಡ್ತಿದಾರೆ . ಅದರಲ್ಲೇನಿದೆ ? ಹೋಗಲೇ . ಕೆಲ್ಸಾ ನೋಡು ." ಅಂದೆ . ನಾನು ಆಡೋ ಮಾತುಗಳನ್ನೆಲ್ಲಾ ತುಂಬಾ ಗಮನ ಇಟ್ಟು ಕೇಳಿಸಿಕೊಂಡ . " ನಂಗೀಗ ಗೊತ್ತಾಯ್ತು ಬುಡೀ ಸಾ . ಅಕ್ಕೋರ್ ಗೂ ನಿಮ್ಗೂ ಯಾಕೆ ಒಂದಾಕಿಲ್ಲ ಅಂತ ." ಅಂದ . ಅಯ್ಯೋ ನನ್ನ ಮಗನೇ ಬಿಟ್ಟರೆ ನನ್ನ ಸಂಸಾರಕ್ಕೆ ಬತ್ತಿ ಇಟ್ಟು ಗಂಡ ಹೆಂಡತಿ ಮಧ್ಯೆ ಜಗಳ ತಂದು ಹಾಕಿ ಮಜಾ ತಗೋಳೋ ನಾರದಮುನಿ ಅಪರಾವತಾರ ಆಗ್ತಿದಾನೆ ಎನ್ನಿಸಿತು . " ಏಯ್ ಬಾಯಿಗೆ ಬಂದ ಹಾಗೆ ಬೊಗಳಿದರೆ ನಿನ್ನನ್ನು ಹುಟ್ಲಿಲ್ಲಾ ಅನ್ನಿಸಿಬಿಡ್ತೀನಿ " ಅಂದೆ . ಈ ಎಚ್ಚರಿಕೆ ಅವನ ಮೇಲೆ ಎಳ್ಳಷ್ಟೂ ಪ್ರಭಾವ ಬೀರಿದ ಲಕ್ಷಣಗಳು ಗೋಚರಿಸಲಿಲ್ಲ . ಏಕೆಂದರೆ ಇದೇ ಮಾತುಗಳನ್ನು ಸಾಕಷ್ಟು ಬಾರಿ ಆಡಿದ್ದೇನೆ . ಹೀಗಾಗಿ ಈ ಬಾರಿ ಆಡಿದ ಮಾತೂ ಕೂಡಾ ಯಾವುದೇ ಪರಿಣಾಮವನ್ನು ಬೀರಲೂ ಅಶಕ್ತವಾಯಿತು . ನಾನು ನನ್ನ ಯೋಚನೆ ಮುಂದುವರೆಸುವಷ್ಟರಲ್ಲಿ  " ಅಲ್ಲಾ ಸಾ , ಆ ಎಂಟ್ ಜನಾ ಒಪ್ಕಂಡಿದ್ ಮಾತ್ರ ನಿಮ್ಗೆ ಕಾಣ್ತೈತಲ್ಲಾ . ಉಳುದೋರ್ ಇಬ್ರು ಏನ್ ಯೋಳಿರ್ ಬೋದು ಅಂತ ಯೇಚ್ನೆನೇ ಮಾಡ್ನಿಲ್ವಲಾ ನೀವು ? ಅದ್ಕೇ ಅಕ್ಕೋರು ನಿಮ್ಗೆ ವಸಿ ಬುದ್ಧಿ ಕಮ್ಮಿ ಅನ್ನದು " ಅಂದ . " ಲೇಯ್ ನಿಮ್ಮಕ್ಕ ನನ್ನ ಏನಾರ ಅನ್ಲೀ , ಅದು ನಂಗೂ ಅವ್ಳ್ಗೂ ಬಿಟ್ಟಿದ್ದು . ಈಗೇನು ಉಳಿದ ಇಬ್ಬರು ಏನು ಹೇಳಿದ್ದಾರೆ ಅಂತ ತಾನೇ ನಿನ್ನ ಪ್ರಶ್ನೆ ? " ಅಂದೆ . " ಔದು ಅದು ನನ್ನ ಅನುಮಾನಾನೇಯಾ . ಆದ್ರೆ ನಂಗೆ ಅನ್ನಿಸ್ತದೆ ಸಾ . ಈ ಇಬ್ರು ದಾಗುಟ್ರುಗುಳು ನಿಜ ಯೋಳ್ತಾವ್ರೇ ಅಂತ . " ಅಂದ . " ಮತ್ತೆ ಆ ಎಂಟು ಜನ ಹೇಳಿದ್ದು ಸುಳ್ಳಾ ? " ಅಂದೆ . ನೋಡಿ ಸಾ ಯಾಪಾರ ಮಾಡದೂ ಅಂದ್ರೆ ಅಲ್ಪ ಸ್ವಲ್ಪ ಮೋಸಾನೂ ಮಾಡೇ ಮಾಡ್ತಾರೆ ಅಲ್ಲವ್ರಾ . ಅಂದ್ಮ್ಯಾಕೆ ಈ ನಿಜಾ ಯೋಳ್ತಾ ಇರೋ ದಾಗುಟ್ರುಗುಳ್ನ ಕ್ಯಾರೇ ಅನ್ದೆ ಉಳ್ದೋರಿಗೇನೇ ದುಡ್ ಕೊಟ್ಟು ಒಪ್ಸಿರ್ಬೋದು . ಈ ಇಬ್ರು ನಿಜಾ ಯೋಳವ್ರೇ . ದುಡ್ಡು ಕಾಸು ಏನೂ ಬ್ಯಾಕಾಗಿಲ್ಲ . ಅಂದಿರ್ತಾರೆ . ಅದಿಕ್ಕೇ ಯಾವಾಗೇಳುದ್ರೂನೂ ಬರೀ ಈ ಎಂಟ್ ಜನುದ್ದೇ ಯೋಳ್ತರೇ . ಇನ್ನಿಬ್ರುದ್ದು ಯಾಕೇ ಏನೂ ಯೋಳಾಕಿಲ್ಲ ? ಯಾಕಂದ್ರೆ ಆ ಇಬ್ರು ಸತ್ಯ ಏಳ್ತಾವ್ರೇ . ಅದ್ಕೇ ಇಷ್ಟ ಆಗ್ನಿಲ್ಲ . ತಿಳ್ಕೋಳಿ . " ಅಂದ . ಎಲಾ ಇವನ , ಏನೋ ಪಾಪ ಸ್ವಲ್ಪ ಹೊತ್ತು ಟಿವಿ ನೋಡ್ತಾನೆ ಅಂದುಕೊಂಡಿದ್ದರೆ ಏನೇನ್ ಅಬ್ಸರ್ವ್ ಮಾಡಿದಾನಪ್ಪ . ಹೋಗ್ಲಿ ಸಿಟ್ ಮಾಡಿಕೊಳ್ಳೋಣ ಅಂದ್ರೆ ಅವನು ಹೇಳ್ತಾ ಇರೋದ್ರಲ್ಲಿ ನಿಜ ಇರಬಹುದು ಅನ್ನಿಸ್ತಾಯಿದೆ . ಅಂತೂ ಈ ನನ್ ಮಗಾನೂ ನನಗೆ ಬುದ್ಧಿ ಹೇಳೋ ಹಾಗಾಗಿಬಿಟ್ಟ. ಅಲ್ಲಲ್ಲ ನನ್ನ ಹಣೆಬರಹ ಇವ್ನಿಂದಾನೂ ಬುದ್ಧಿ ಹೇಳಿಸಿಕೊಳ್ಳುವ ಹಾಗಾಯಿತು . ಅಯ್ಯೋ ನನ್ನ ಕರ್ಮವೇ ಅಂದುಕೊಂಡು ಮನಸ್ಸಿನಲ್ಲಿಯೇ ಹಣೆ ಚಚ್ಚಿಕೊಂಡು ಸುಮ್ಮನಾದೆ. " ಅದಿಕ್ಕೆ ಸಾ , ನಾನ್ ಯೋಳಿದ್ದು ಸತ್ಯ ತುಂಬಾ ಜನಿಕ್ಕೆ ಇಷ್ಟ ಆಗಾಕಿಲ್ಲ ಅಂತ " . ಎಂದು ಹೇಳಿ ಮಾತು ನಿಲ್ಲಿಸಿದ . 

ಅಷ್ಟು ಹೊತ್ತಿಗೆ ಸರಿಯಾಗಿ ನನ್ನ ಕು ಸು ನ್ಯಾ ಅರ್ಥಾತ್ ನನ್ನ ಪತ್ನಿ ಒಳಗೆ ಬಂದಳು. ಸದ್ಯ ಇನ್ನೂ ಇವನಿಂದ ಎಷ್ಟು ಮರ್ಯಾದೆ ಕಳೆದುಕೊಳ್ಳಬೇಕಿತ್ತು ಅದರಿಂದ ಬಚಾವಾದೆ ಎಂದುಕೊಂಡು ಹಿಗ್ಗಿದೆ . ಆದರೆ ಈ ನನ್ನ ಹಿಗ್ಗು ಬಹಳ ಕಾಲ ಉಳಿಯಲಿಲ್ಲ . ಅವಳು ಒಳಗೆ ಬಂದ ಕೂಡಲೇ ಅವನು ಅವಳಿಗೆ ಅಲ್ಲಿಯವರೆಗೂ ನಡೆದಿದ್ದ ಎಲ್ಲ ವಿದ್ಯಮಾನಗಳನ್ನು ವರದಿ ಒಪ್ಪಿಸಿದ. ಎಲ್ಲವನ್ನೂ ಕೇಳಿಸಿಕೊಂಡ ಅವಳು " ಏನೂಂದ್ರೆ , ನಿಮಗೆ ಕೇಶಿಯಷ್ಟೂ ಬುದ್ಧಿ ಇಲ್ಲ ಅನ್ನೋದನ್ನ ಪ್ರೂವ್ ಮಾಡಿಕೊಂಡ್ರಲ್ಲ . ಅದೇನು ಓದಿದಿರೋ ಅದು ಏನು ಕಲ್ತಿದಿರೋ ಇಬ್ಬರಿಗೆ ಗೊತ್ತು ನೋಡಿ ಈ ಜಗತ್ತಿನಲ್ಲಿ . " ಅಂದಳು. " ಯಾರದು ಇಬ್ಬರು ಎಂದು ನಾನು ಪೆದ್ದುಪೆದ್ದಾಗಿ ಕೇಳಿದೆ " . ಕಿಸಕ್ಕನೆ ನಕ್ಕು " ಇಬ್ಬರು ಯಾರು ಅಂತ ಗೊತ್ತಿಲ್ವಾ ? ಒಬ್ಬರು ನೀವು . "  ಇನ್ನೊಬ್ಬರು ..... ಇನ್ನೊಬ್ಬರು ....." ಎಂದು ಸ್ವಲ್ಪ ತಡೆದಳು . " ಯಾರದು ? ಇನ್ನೊಬ್ಬರು ಯಾರು ?" ಎಂದೆ " ಇನ್ಯಾರು ? ನಿಮ್ಮನ್ನು ಹುಟ್ಟಿಸಿದ ಆ ದೇವರು " ಎಂದು ಬಾಯಿ ಮೇಲೆ ಕೈ ಇಟ್ಟುಕೊಂಡು ಜೋರಾಗಿ ಬರುತ್ತಿರುವ ನಗೆಯನ್ನು ತೆಗೆದುಕೊಂಡು ಒಳಗೆ ಹೋದಳು . ಆದರೆ ಕೇಶಿ ಜೋರಾಗಿಯೇ ನಕ್ಕು ನನ್ನ ಮಾನವನ್ನು ನಿರಾತಂಕವಾಗಿ ಕಳೆದೇ ಬಿಟ್ಟ . ನನ್ನ ಅದೃಷ್ಟ ನನ್ನ ಮಾನ ಕೇವಲ ಮೂರೇ ಮೂರು ಅಲ್ಲ ಅಲ್ಲ ಇಬ್ಬರೇ ಇಬ್ಬರ ಮಧ್ಯೆ ಮತ್ತು ಇಬ್ಬರಿಂದ ಮಾತ್ರವೇ ಹೋಗಿದ್ದು ಸ್ವಲ್ಪ ಸಮಾಧಾನ ತಂದಿತು . 6 ಕೋಟಿ ಕನ್ನಡಿಗರಲ್ಲಿ ಕೇವಲ ಜುಜುಬಿ ಇಬ್ಬರು ಮಾತ್ರ ನನ್ನ ಮಾನ ತೆಗೆದರೆ ಏನು ನಷ್ಟ ಇಲ್ಲ ಎಂದುಕೊಂಡು ನನ್ನ ಮನಸ್ಸನ್ನು ನಾನೇ ಸಮಾಧಾನ ಪಡಿಸಿಕೊಂಡೆ . " ಅಂದರೆ ಆರು ಕೋಟಿ ಕನ್ನಡಿಗರು ನಿನ್ನ ಮಾನವನ್ನು ಕಳೆಯಬೇಕು ಎಂದುಕೊಂಡಿದ್ದೀಯೇನು ? ಎಂದು ನನ್ನ ಅಂತರಾತ್ಮ ಫಟಾರನೆ ನನ್ನ ಕೆನ್ನೆಗೆ ರಾಚಿದಂತೆ ಕೇಳಿದ್ದು ನನ್ನ ಬುದ್ಧಿಯನ್ನು ಕೆಲಕಾಲ ಮಂಕಾಗಿಸಿ ಬಿಟ್ಟಿತು . 

ಕೆಲವೇ ಕ್ಷಣಗಳಲ್ಲಿ ಫಿನಿಕ್ಸ್ ನ ಹಾಗೆ ನನ್ನ ಮನಸ್ಸು ಎಚ್ಚೆತ್ತು ಚೇತರಿಸಿಕೊಂಡು ಮತ್ತೆ ಹಾಸ್ಯ ಲೇಖನವನ್ನು ಬರೆಯಲೇಬೇಕು ಬಿಡಬಾರದು ಎನ್ನುವ ದೃಢ ನಿರ್ಧಾರವನ್ನು ನೆನಪಿಸಿಕೊಳ್ಳುವಂತೆ ಮಾಡಿತು . ಛಲದಂಕಮಲ್ಲನ ಹಾಗೆ ಮತ್ತೆ ಬರೆಯಲು ಕುಳಿತೆ . ಒಂದು ಒಳ್ಳೆಯ ಕಾರ್ಯಕ್ಕೆ ನೂರೆಂಟು ವಿಘ್ನಗಳು ಎನ್ನುವ ಹಾಗೆ ನನ್ನ ಪತ್ನಿಯಿಂದ ಕಾಲ್. " ರೀ ಕೇಶಿ ಜೊತೆ ಚಪ್ಪಲಿ ಅಂಗಡಿಗೆ ಹೋಗಿ ಅವನಿಗೊಂದು ಜೊತೆ ಚಪ್ಪಲಿ ಕೊಡಿಸಿಕೊಂಡು ಬನ್ನಿ " ಎಂದಳು . ಅವನಿಗೇಕೆ ಈಗ ಚಪ್ಪಲಿ ಎಂದು ಕೇಳಬೇಕು ಎಂದುಕೊಂಡೆ . ಆದರೆ ಒಳಮನಸ್ಸು ಯಾಕೆ ಸುಮ್ಮನೆ ಅಕಸ್ಮಾತ್ ಅಲ್ಪಸ್ವಲ್ಪ ಉಳಿದಿರುವ ಮರ್ಯಾದೆ (?) ಯನ್ನೂ ಕಳೆದುಕೊಳ್ಳುತ್ತೀಯಾ ತೆಪ್ಪಗಿರು . ನೀನು ಕೇಳಿದೆ ಎಂದು ಮಾತ್ರಕ್ಕೆ ಚಪ್ಪಲಿ ಕೊಡಿಸುವ ಕಾರ್ಯಕ್ರಮ ನಿಲ್ಲದು ನಿನಗೆ ನಿನ್ನ ಜೇಬಿಗೆ ಟ್ಯಾಕ್ಸ್ ಬೀಳುವುದು ತಪ್ಪದು ಅಂದಮೇಲೆ ಏಕೆ ಕೇಳುವೆ ಎಂದು ಅಪರೂಪಕ್ಕೆ ಒಂದು ಉತ್ತಮ ಸಲಹೆಯನ್ನು ನೀಡಿತು . ಅದೂ ಸರಿ ಎನಿಸಿತು . ಏಕೆಂದರೆ ಈ ಕೇಶಿಗೆ ಮನೆಯಲ್ಲಿ ತನ್ನ ಕೆಲಸವನ್ನು ಯಾರ ಬಳಿ ಹೇಳಿದರೆ ನೆರವೇರಿಸಿ ಕೊಳ್ಳಬಹುದು ಎನ್ನುವುದು ತುಂಬಾ ಚೆನ್ನಾಗಿ ಮನದಟ್ಟಾಗಿ ಹೋಗಿದೆ . ನನ್ನ ಮನೆಯ ಸಂಸಾರದ ಗುಟ್ಟು ನನಗಿಂತ ಚೆನ್ನಾಗಿ ಕೇಶಿಗೇ ತಿಳಿದಿರುವಾಗ ನಾನು ಅಶಕ್ತ ನಿಸ್ಸಹಾಯಕ . ತನ್ನ ಕೆಲಸ ಆಗಬೇಕು ಎನ್ನುವಾಗ ಕೇಶಿ ಸೀದಾ ನನ್ನ ಪತ್ನಿಯ ಬಳಿ ಹೋಗಿ ತನ್ನ ಅಹವಾಲು ಸಲ್ಲಿಸುತ್ತಾನೆ . ಆ ಅಹವಾಲು ನಂತರ ಒಂದು ಸುಗ್ರೀವಾಜ್ಞೆ ಆಗಿ ಹೊರಬೀಳುತ್ತದೆ. ಆ ಸುಗ್ರೀವಾಜ್ಞೆಯನ್ನು ವಿಧಿ ಇಲ್ಲದೆ ಪಾಲಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ನನ್ನದಾಗುತ್ತದೆ. ಇದಿಷ್ಟೂ ಕೇಶಿಗೆ ಬಹಳ ಚೆನ್ನಾಗಿ ಗೊತ್ತು ಹಾಗೂ ಅದನ್ನು ಅವನು ಚೆನ್ನಾಗಿಯೇ ಬಳಸಿಕೊಳ್ಳುತ್ತಾನೆ. ಈಗಲೂ ಅವನು ಮಾಡಿದ್ದು ಅದೇ ತನಗೆ ಒಂದು ಜೊತೆ ಚಪ್ಪಲಿ ಬೇಕಾಗಿತ್ತು . ಅದಕ್ಕೆ ನನ್ನನ್ನೇ ನೇರವಾಗಿ ಕೇಳಬಹುದಾಗಿತ್ತು . ನನ್ನನ್ನು ಕೇಳಿದರೆ "ಹಳೆಯದನ್ನೇ ರಿಪೇರಿ ಮಾಡಿಸಿಕೋ . ಮೊನ್ನೆ ತಾನೆ ತೆಗೆಸಿ ಕೊಟ್ಟಿದ್ದೇನೆ . " ಎಂದೆಲ್ಲಾ ಪುರಾಣ ಹೇಳುತ್ತೇನೆ . ಅದು ಅವನಿಗೆ ಇಷ್ಟವಾಗುವುದಿಲ್ಲ . ಹಾಗೆಂದು ನನಗೆ ಈ ವಿಷಯದಲ್ಲಿ ಬದಲು ಹೇಳಲು ಅವನಿಗೆ ಆಗುವುದಿಲ್ಲ . ಅದಕ್ಕಾಗಿ ಅವನು ಇವಳ ಬಳಿ ಹೋಗಿ ಗೋಗರೆಯುತ್ತಾನೆ . ಅವಳು ಅವನ ಅಹವಾಲನ್ನು ಹಿಂದೂ ಮುಂದು ನೋಡದೆ ಆರ್ಡರ್ ಅನ್ನಾಗಿ ಪರಿವರ್ತಿಸಿ ನನಗೆ ಕಾರ್ಯರೂಪಕ್ಕೆ ತರಲು ರವಾನಿಸುತ್ತಾಳೆ .  ಆದರೂ ಅಸ್ತ್ರ ಗಳಿದ್ದೂ ಬಳಸಲಾಗದ ದ್ವಂದ್ವದಿಂದ ಬಳಲಿದ ಕರ್ಣನಂತೆ ನನ್ನ ಜೀವನ ಎಂದು ನನ್ನನ್ನು ನಾನೇ ದಾನಶೂರ ಕರ್ಣನಿಗೆ ಹೋಲಿಸಿಕೊಂಡು ತೃಪ್ತಿ ಪಡುತ್ತೇನೆ . ಕರ್ಣನ ಹಾಗೆ ನೀನೇನು ದಾನ ಮಾಡಿದ್ದೀಯಾ ಎಂದು ಯಾರಾದರೂ ಕೇಳಿದರೆ ನನ್ನ ಬಳಿ ಉತ್ತರ ಸಿದ್ಧವಿದೆ ನಾನು ನನ್ನ ಜೀವನವನ್ನೇ ನನ್ನ ಪತ್ನಿಗೆ ದಾನ ಮಾಡಿಬಿಟ್ಟಿದ್ದೇನೆ ಆ ಲೆಕ್ಕದಲ್ಲಿ ಕರ್ಣನಿಗೆ ಹೋಲಿಸಿದರೆ ನಾನೇ ಒಂದು ತೂಕ ಹೆಚ್ಚು ಎನ್ನಿಸಿ ಹೆಮ್ಮೆ ಪಟ್ಟುಕೊಳ್ಳುತ್ತೇನೆ . ನನ್ನ ಪರ್ಸು , ಅದರಲ್ಲಿರುವ ದುಡ್ಡು , ನನ್ನ ಮನೆಯ ಟಿವಿ , ಆ ಟಿವಿಯ ರಿಮೋಟು ಹಾಗೂ ನಾನು ಬಯಸಿದ ಚಾನೆಲನ್ನು ನೋಡುವ ಭಾಗ್ಯ ಇವೆಲ್ಲವನ್ನು ದಾನ ಮಾಡಿಬಿಟ್ಟಿದ್ದೇನೆ . ಕರ್ಣನಾದರೋ ತನ್ನಲ್ಲಿದ್ದ ಅಸ್ತ್ರ ಶಸ್ತ್ರಗಳನ್ನು ಮಾತ್ರ ದಾನ ಮಾಡಿದ ನಾನು ನನ್ನ ಮನರಂಜನೆಯನ್ನು ದಾನ ಮಾಡಿದ್ದೇನೆ ಈಗಲಾದರೂ ನನ್ನ ತ್ಯಾಗ ಬಲಿದಾನ ಕರ್ಣನದಕ್ಕಿಂತಲೂ ಹೆಚ್ಚು ಎಂದು ನೀವೆಲ್ಲ ಒಪ್ಪುವಿರಾ ?  . ಇರಲಿ ಬಿಡಿ . ನನ್ನ ವಿಷಯದಲ್ಲಿ ನನ್ನ ಬೆನ್ನನ್ನು ನಾನೇ ಕಟ್ಟಿಕೊಳ್ಳಬೇಕು ವಿಧಿ ಇಲ್ಲ. ಯಾರ ಆಜ್ಞೆಯನ್ನು ಮೀರಿದರೂ ನಡೆಯುತ್ತದೆ . ಪತ್ನಿಯ ಆಜ್ಞೆಯನ್ನು ಮೀರಿದರೆ ನಡೆಯುವುದಿರಲಿ ಕುಂಟುವುದು ತೆವಳುವುದು ಕೂಡ ಅಸಾಧ್ಯ ಎನ್ನುವುದು ಎಲ್ಲಾ ಅನುಭವೀ ಸಂಸಾರಸ್ಥರ ಅಂಬೋಣ . ಮದುವೆಯಾದ ಮೇಲೆ ಪತಿಗೆ ಮೌನವೇ ಆಭರಣ ಮುಗುಳ್ನಗೆ ಶಶಿಕಿರಣ ಎನ್ನುವ ಹಾಡಿನ ಪಲ್ಲವಿ ಹೆಚ್ಚು ಹೊಂದುತ್ತದೆ ಎಂದು ನನಗೆ ಮನವರಿಕೆಯಾಗಿದೆ . ಹಾಗಾಗಿ ಅವಶ್ಯಕತೆ ಇಲ್ಲದಿದ್ದರೂ ಮುಗುಳ್ನಗೆಯನ್ನು ಮುಖದ ಮೇಲೆ ಧರಿಸಿಕೊಂಡು ಕೇಶಿಯೊಡನೆ ಚಪ್ಪಲಿ ಅಂಗಡಿಗೆ ಹೊರಟೆ. ಮಾರ್ಗಮಧ್ಯದಲ್ಲಿ ಕೇಶಿ ಏನೋ ಕೇಳಲು ಬಾಯಿ ತೆಗೆದ. ಸುಮ್ಮನೆ ಬಾಯಿಮುಚ್ಚಿಕೊಂಡು ಬಾ ಎನ್ನುವುದನ್ನು ನನ್ನ ನೋಟವೇ ಅವನಿಗೆ ಹೇಳಿತು. ಅವನಿಗೂ ಏನನ್ನಿಸಿತೋ ಏನೋ ನನ್ನ ಜೊತೆ ಏನೂ ಮಾತನಾಡದೆ ಅಂಗಡಿಗೆ ಬಂದ . ಅಂಗಡಿಯಲ್ಲಿ ತನಗೆ ಬೇಕಾದ ಚಪ್ಪಲಿಯನ್ನು ತಾನೇ ಆರಿಸಿದ ನಾನು ಸ್ವಾಭಾವಿಕವಾಗಿ ಎಲ್ಲರೂ ವಿಚಾರಿಸುವಂತೆ ಅಂಗಡಿಯವನಿಗೆ ಕೇಳಿದೆ " ಏನಪ್ಪಾ ? ಈ ಚಪ್ಪಲಿ ಬಾಳಿಕೆ ಬರುತ್ತದೆಯೇ ? " . ಅಂಗಡಿಯವನು ಇನ್ನೂ ಏನೋ ಹೇಳುವುದಕ್ಕೆ ಮುಂಚೆಯೇ ಕೇಶಿ ಜೋರಾಗಿ ನಗಲು ಆರಂಭಿಸಿದ. ತನಗೆ ಬರುತ್ತಿದ್ದ ನಗುವನ್ನು ತಡೆದುಕೊಂಡು ನಿಂತ . ಅಂಗಡಿಯವನು ತುಂಬಾ ಚೆನ್ನಾಗಿ ಬಾಳಿಕೆ ಬರುತ್ತದೆ ಎನ್ನುವುದರ ಬದಲು " ಹಲ್ಲಲ್ಲಿ ಕಚ್ಚೆಳಿರಿ ಸಾರ್ . ತುಂಡಾದ್ರೆ ನೀವ್ ಕೇಳಿದ್ ಕೊಡ್ತೀನಿ " . ಅಂದ . ಅಯ್ಯೋ ದರಿದ್ರದೋನೇ ನಾನು ಕೇಳಿದ್ದನ್ನು ನೀನು ಕೊಡಬೇಕು ಅಂದ್ರೆ ಕಾಲಿಗೆ ಹಾಕೋ ನಾಯಿ ನಾಲಿಗೆ ಥರಾ ಇರೋ ಈ ಚಪ್ಪಲೀನ ನಾನೀಗ ಬಾಯಲ್ಲಿ ಹಾಕಿ ಕಚ್ಚಿ ಎಳೆದು ಟೆಸ್ಟ್ ಮಾಡಬೇಕು . ನನ್ನ ಕರ್ಮ ಇನ್ನೂ ಏನೇನು ಕೇಳಬೇಕೋ ಶಿವನೇ ಅಂದುಕೊಂಡು ಆಮೇಲೆ ಅವನು ಖಂಡಿತ ಬಾಳಿಕೆ ಬರುತ್ತದೆ ಸಾರ್ ಎಂದು ನೀಡಿದ ಆಶ್ವಾಸನೆಯನ್ನು ಕೇಳಿಕೊಂಡು ಇಬ್ಬರೂ ಹೊರಗೆ ಬಂದೆವು . ಅಲ್ಲಿಯವರೆಗೂ ತನ್ನ ನಗುವನ್ನು ತಡೆಹಿಡಿದು ಕೊಂಡಿದ್ದವನು ಹೊಟ್ಟೆ ಹಿಡಿದುಕೊಂಡು ನಗಲಾರಂಭಿಸಿದ " ಯಾಕೋ ಗೂಬೆ ? ಸುಮ್ಮನೆ ನಗುತ್ತಿದ್ದೀಯಾ ? ಕಾರಣ ಹೇಳಿ ನಗು . ಇಲ್ಲಾಂದ್ರೆ ನಿನ್ನ ಬೆನ್ನಿನ ಮೇಲೆ ಗುದ್ದಿ ಗುದ್ದಿ ಇಲ್ಲೇ ನಿನ್ನನ್ನು ಸಾಯಿಸಿಬಿಡ್ತೀನಿ " ಎಂದೆ . " ಸುಮ್ಕೆ ಬನ್ನಿ ಸಾ .ಕೈಲಾಗದೇನಾದ್ರೂ ಇದ್ರೆ ಏಳಿ " ಅಂದ . ಥತ್ತೇರಿಕೆ ಮತ್ತೆ ಅವಮಾನ . ಅದೂ ಈ ನನ್ನ ಮಗನಿಂದ . ಆದರೂ ಸಹಿಸಿಕೊಂಡೆ ಮತ್ತು ಬಿಡದೆ " ಯಾಕೆ ನಗ್ತಾ ಇದೀಯಾ " ಅಂತ ತುಂಬಾ ಗಂಭೀರವಾಗಿ ಕೇಳ್ದೆ . ಈ ಬಾರಿ ಅವನಿಗೆ ಉತ್ತರ ಕೊಡಲೇಬೇಕು ಅನ್ನಿಸಿತೇನೋ . ಅದಕ್ಕೆ ಹೇಳಲಾರಂಭಿಸಿದ . " ಮತ್ತಿನ್ನೇನು ಸಾ .‌ ಯಾವ ಅಂಗಡಿಯವನು ತಾನೇ ಅವನು ಮಾರೋ ಸಾಮಾನು ಬಾಳ್ಕೆ ಬರಕಿಲ್ಲ ಚೆನ್ನಾಗಿಲ್ಲ ಅಂತ ಯೋಳ್ತನೆ ಯೋಳಿ ? ಅಂಗೇಳೀರೆ ಅವನ ಅವನ ಅಂಗಡಿನಾಗೆ ಯಾವನಾದ್ರು ಏನಾದ್ರೂ ಸಾಮಾನು ಕೊಂಡ್ಕತರ ? " ಎಂದು ಹೇಳಿ ನನ್ನ ಕಡೆ ಒಮ್ಮೆ ನೋಡಿ ತನ್ನ ನಗು ಮುಂದುವರೆಸಿದ . ಆ ನೋಟದಲ್ಲಿ ಅಯ್ಯೋ ಪೆಕರು ಮುಂಡೇದೇ ಎನ್ನುವ ಭಾವವಿತ್ತೇನೋ ? ಗೊತ್ತಿಲ್ಲ . ಆದರೆ ನನಗೆ ಹೌದು ಅನ್ನಿಸಿತು ನಾನ್ಯಾಕೆ ಇವನ ಮುಂದೆ ಅಂಗಡಿಯವನಿಗೆ ಆ ಪ್ರಶ್ನೆ ಕೇಳಿ ಇವನು ನನ್ನನ್ನು ಆಡಿಕೊಂಡು ನಗಲು ಅವಕಾಶ ಮಾಡಿಕೊಟ್ಟೆನು ಎನ್ನಿಸಿತು . ಆದರೆ ಅಷ್ಟು ಹೊತ್ತಿಗೆ ಆಗಬಾರದು ಆಗಿಯೇ ಹೋಗಿತ್ತು . ಆದರೂ ಕೇಶಿಗೆ " ನೋಡು ಅಂಗಡಿಯಲ್ಲಿ ನಡೆದದ್ದನ್ನು ಹೋಗಿ ಮಸಾಲೆ ಹಚ್ಚಿ ನಿನ್ನ ಅಕ್ಕನಿಗೆ ಒಪ್ಪಿಸಿ ಬಿಡಬೇಡ ಆಮೇಲೆ ನನ್ನ ಕಥೆ ಅಷ್ಟೇ " ಅಂದೆ " ಅಷ್ಟೇ ತಾನೇ ಬಿಡಿ ಸಾ . ಮಸಾಲೆ ಆಕದೇನೆ ಅಂಗೇ ಹೇಳ್ತೀನಿ ಸರೀನ್ರಾ " ಅಂತ ಹೇಳಿ ಮನೆಗೆ ಓಡಿ ಹೋದ ನಾನು ಅಯ್ಯೋ ಹೋಗೋ ಏನಾದರೂ ಮಾಡಿಕೊಳ್ಳಿ . ಏನೋ ಅಬ್ಬಬ್ಬಾ ಎಂದರೆ ಅವಳೂ ಸ್ವಲ್ಪಹೊತ್ತು ಆಡಿಕೊಂಡು ನಗುತ್ತಾಳೆ . ಅಷ್ಟೇ ತಾನೇ . ನಕ್ಕಾಗ ನನ್ನವಳು ಚೆನ್ನಾಗಿ ಕಾಣುತ್ತಾಳೆ ಎಂದುಕೊಂಡು ಸಂಪೂರ್ಣವಾಗಿ ನಿರ್ಲಕ್ಷಿಸಿದೆ . ನಿಧಾನವಾಗಿ ನಡೆದುಕೊಂಡು ಮನೆಗೆ ಬಂದೆ . ಅಷ್ಟುಹೊತ್ತಿಗಾಗಲೇ ಕೇಶಿ ಇವಳ ಬಳಿ ಹೇಳಿಕೊಂಡು ಇನ್ನೊಮ್ಮೆ ಬಿದ್ದು ಬಿದ್ದು ನಗಲಾರಂಭಿಸಿದ ಅವನ ಜೊತೆಯಲ್ಲಿ ಇವಳು ನಗುತ್ತಾ ಹೇಳಿದಳು " ರೀ ನಾನು ಆಗಲೇ ಹೇಳಲಿಲ್ಲವೇ ? ನಿಮಗೆ ಕೇಶಿಯಷ್ಟೂ ಕೂಡ ಬುದ್ಧಿ ಇಲ್ಲ ಅಂತ . ಅದನ್ನು ಮತ್ತೆ ಪ್ರೂವ್ ಮಾಡಿಬಿಟ್ಟಿರಿ " ಎಂದು ಮತ್ತೆ ಹೇಳಿದಳು . ಮೂರನೆಯವರ್ಯಾರೂ ನನ್ನ ಮಾನ ತೆಗೆಯದ ಹಾಗೆ ಇವರಿಬ್ಬರೇ ತೆಗೆಯುತ್ತಾ ಅದು ನಾಲ್ಕು ಗೋಡೆಗಳನ್ನು ದಾಟಿ ಹೋಗದೇ ಇರುವ ಹಾಗೆ ಕಾಯುತ್ತಿದ್ದಾರೆ ಎಂದುಕೊಂಡು ತಲೆಯನ್ನೇ (?) ಕೆಡಿಸಿಕೊಳ್ಳದೆ ಸುಮ್ಮನಾದೆ . ( ಹಾಗಲ್ಲದೆ ಬೇರೆ ದಾರಿಯಾದರೂ ಎಲ್ಲಿದೆ ) 

ನೀವಿಬ್ಬರೂ ಏನಾದರೂ ಹೇಳಿಕೊಳ್ಳಿ ಎಂದು ಮನಸ್ಸಿನಲ್ಲಿ ಅಂದುಕೊಂಡು ಮತ್ತೆ ಮೊಬೈಲ್ ಹಿಡಿದು ಹಾಸ್ಯ ಬರಹ ಬರೆಯಲು ಕುಳಿತೆ . ಪದೇಪದೇ ಕೇಶಿಯ ಮುಖವೇ ಎದುರಿಗೆ ಬಂದೂ ಬಂದೂ ಅಣಕಿಸಿದಂತೆ ಆಗಿ ಇರಿಟೇಶನ್ ಜಾಸ್ತಿಯಾಗಿ ಮೊಬೈಲ್ ಆಫ್ ಮಾಡಿ ಸೀದಾ ಹೋಗಿ ಹೊದ್ದು ಮಲಗಿದೆ . ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎನ್ನುವಂತೆ ನನಗೆ ಇನ್ನೂ ಹಾಸ್ಯ ಬರಹ ಬರೆಯಲು ಸೂಕ್ತ ಸಮಯ ಒದಗಿ ಬಂದಿಲ್ಲ. ಯಾವಾಗ ಬರುತ್ತದೆಯೋ ಆ ಶಿವನೇ ಬಲ್ಲ . 



Rate this content
Log in