Ravindra Kumar N (CBSE)

Others

3.0  

Ravindra Kumar N (CBSE)

Others

ಯಾವ ಮದುವೆ ಒಳ್ಳೆಯದು

ಯಾವ ಮದುವೆ ಒಳ್ಳೆಯದು

4 mins
131


 ನಮ್ಮ ಸಮಾಜದ ಈಗಿನ ಪರಿಸ್ಥಿತಿಯಲ್ಲಿ ನಿಶ್ಚಿತ ವಿವಾಹವೋ,ಪ್ರೇಮ ವಿವಾಹವೋ, ಯಾವುದು ಉತ್ತಮ? ನಿಮ್ಮ ಅಭಿಪ್ರಾಯವೇನು?

ಅಸಲಿಗೆ ವಿವಾಹ ಉತ್ತಮ ಅಂತ ಹೇಳುವವರು ಮದುವೆ ಮಾಡಿಸುವ ದಲ್ಲಾಳಿಗಳನ್ನು ಬಿಟ್ಟರೆ ಮದುವೆಯಾದವರು ಯಾರೂ ಹೇಳರು. 

ತಮ್ಮ ತಮ್ಮಲ್ಲೇ ಹೊಡೆದಾಡಿ ಸತ್ತರು ಯಾದವರು 

ಹೊಡೆದಾಡಿದರೂ ವಂಶ ಬೆಳೆಸುವರು ಮದುವೆಯಾದವರು 

ಎಂದು ಡುಂಡಿರಾಜ್ ಸಾಹೇಬರು ಯಾವಾಗಲೋ ಅಪ್ಪಣೆ ನೀಡಿಲ್ಲವೇ ? ಇತ್ತೀಚೆಗಂತೂ ಲಿವಿಂಗ್ ಟುಗೆದರ್ ಗೆ ಕಾನೂನಿನ ಮಾನ್ಯತೆ ಬೆಂಬಲ ಎಲ್ಲವೂ ಸಿಕ್ಕಮೇಲೆ ಮದುವೆಯಾಗುವವರು ಯಾರು ? ಮದುವೆಯ ಈ ಬಂಧ ಎಂದು ಎಸ್ಪಿ ಬಾಲಸುಬ್ರಹ್ಮಣ್ಯಂ ಸರ್ ಹಾಡಿದ ಮಧುರವಾದ ಗೀತೆ ಈಗಾಗಲೇ ಮದುವೆಯಾದವರು ಗುನುಗುನಿಸಬೇಕಷ್ಟೇ. 

ವಿವಾಹಾಯ ವಿದ್ಯಾ ವಿನಾಶಾಯ ಎಂದು ಸೂಕ್ತಿಯೊಂದು ಹೇಳಿದರೆ ವಿವಾಹಾಯ ಸರ್ವರೀತಿ ಸ್ವಾತಂತ್ರ್ಯ ವಿನಾಶಾಯ ಎಂದು ಅನುಭವೀ ಸೂಕ್ತಿಯೊಂದು ಹೇಳುತ್ತದೆ. ಮದುವೆಯಾಗುವವರೆಗೂ ಹುಚ್ಚು ಬಿಡದು. ಹುಚ್ಚು ಬಿಡದೆ ಮದುವೆಯಾಗೋದು ಎನ್ನುವಂತೆ . ಆದಿಕವಿ ಪಂಪನೇ ಹೇಳಿಲ್ಲವೇ ಸಂಸಾರ ಸಾರೋದಯಂ ಅಂತ . ಅಂದ್ರೆ ಸಂಸಾರ ಅಂತ ಆರಂಭ ಆದಮೇಲೆ ದಿನಾ sorrow ಉದಯ ಇಲ್ಲವೇ ಸಾರಿನ ಉದಯ . ಗಂಡ ಗಂಡಾಂತರದ ಆಗರವಾದರೆ ಅಥವಾ ಹೆಂಡತಿ ಪ್ರಾಣಕಾಂತೆಯಾಗುವ ಬದಲು ಪ್ರಾಣಕ್ಕೇ ಕುತ್ತಾದರೆ ಆಗ ಇಬ್ಬರಲ್ಲಿ ಒಬ್ಬರಿಗೆ ಬದುಕಿನ ನಿಜ ಸಾರದ ಉದಯ. 

ವಿಷಯ ಹೇಗಿದೆ ಎಂದರೆ ನಾವಾಗಿಯೇ ನೇಣಿನ ಹಗ್ಗದ ಮೇಲೆ ಭಾರೀ ಪ್ರೀತಿಯನ್ನು ಬೆಳೆ‌ಸಿಕೊಂಡು ಆಮೇಲೆ ಅದನ್ನು ಶ್ರದ್ಧೆಯಿಂದ ಕುತ್ತಿಗೆಗೆ ಸುತ್ತಿಕೊಂಡು ಪ್ರಾಣಬಿಡುವುದೋ ಅಥವಾ .ಹಿರಿಯರು ತಯಾರಿಸಿಟ್ಟುದಕ್ಕೆ ಸುಮ್ಮನೆ ಕುತ್ತಿಗೆ ನೀಡಿ ಒದ್ದಾಡುವುದೋ ಎನ್ನುವಂತಿದೆ. ಪ್ರೇಮ ವಿವಾಹವೋ ನಿಶ್ಚಿತ ವಿವಾಹವೋ ಒಟ್ಟಿನಲ್ಲಿ ಮದುವೆ ಆದಮೇಲೆ ಹೌದಪ್ಪನ ಚಾವಡಿಯ ಖಾಯಂ ಮೆಂಬರುಗಳು . 

ಇರಲಿ . ಇವೆಲ್ಲವೂ ಅಸಹ್ಯಂ ಅನುಭೋಕ್ತವ್ಯಂ ಎನ್ನುವಂತೆ. ಕೆಲವರ ಮನೆ ದೋಸೆ ತೂತಾದರೆ ಇನ್ನು ಕೆಲವರ ಮನೆ ಕಾವಲಿಯೇ ತೂತು. ಮತ್ತೂ ಕೆಲವರ ಒಲೆ , ಸೌಟು ಪಾತ್ರೆ ಎಲ್ಲವೂ ತೂತೇ. ಇಷ್ಟೆಲ್ಲಾ ತೂತುಗಳಿದ್ದರೂ ಆ ತೂತುಗಳನ್ನು ಮುಚ್ಚಿಕೊಂಡು ಭಗವಂತನಿತ್ತುದನು ಹಚ್ಚಿಕೊಂಡು ನಚ್ಚಿಕೊಂಡು ಬದುಕಿಗೆ ನಂಚಿಕೊಂಡು ಹೋಗಲು ಕಲಿಸುವುದೇ ಈ ವಿವಾಹದ ನಂತರದ ಬದುಕು. ಇದು ಇನ್ನೊಬ್ಬರನ್ನು ನೋಡಿ ಕಲಿಯುವ ಅಥವಾ ಪುಸ್ತಕ ನೋಡಿ ಮಾಡುವ ಅಡಿಗೆಯಂತಲ್ಲ. ಇಲ್ಲಿ ಪ್ರತಿಯೊಬ್ಬರೂ ಕಲಿಯುತ್ತಾ ಪರಸ್ಪರ ಒಲಿಯುತ್ತಾ ಬದುಕಿನಲ್ಲಿ ಶಾಂತಿ ಸಮಾಧಾನ ಗಳಿಗೆ ಅಲೆಯುತ್ತಾ ಸಾಗಬೇಕು. 

ಭಾರತೀಯ ಜೀವನ ಶೈಲಿಯಲ್ಲಿ ವಿವಾಹಕ್ಕೆ ಅತ್ಯಂತ ಹೆಚ್ಚಿನ ಮಹತ್ವ ನೀಡಲಾಗಿದೆ. ಏಕೆಂದರೆ ಇದು ಮನುಜನ ಕೌಮಾರ್ಯವನ್ನು ಕಳೆದು ಪ್ರೌಢರನ್ನಾಗಿ ಮಾಡುವ ಜವಾಬ್ದಾರಿಯುತ ಪ್ರಜೆಗಳನ್ನಾಗಿಸುವುದು ಹಾಗೂ ಬದುಕಿನ ನಿಜವಾದ ತಿರುಳನ್ನು ಅರಿತು ವಾನಪ್ರಸ್ಥಕ್ಕೆ ಅಣಿಯಾಗಿಸುವ ಮಹಾನ್ ಘಟ್ಟ. ಇಂಥಾದ್ದೊಂದು ಮಹತ್ವದ ಘಟ್ಟಕ್ಕೆ ಜೀವನದ ಮಟ್ಟಕ್ಕೆ ಕಾಲ ಕಳೆದಂತೆ ಹಲವು ತಿರುವುಗಳು ಬಂದಿವೆ . ಆದರೂ ನಮ್ಮಲ್ಲಿ ಇನ್ನೂ ವಿವಾಹದ ಬಗ್ಗೆ ಇರುವ ಗೌರವ ನಂಬಿಕೆಗಳು ಕುಂದಿಲ್ಲ. ವಿವಾಹೇತರ ಸಂಬಂಧದ ಬಗ್ಗೆ ಗೌರವವೂ ಇಲ್ಲ. 

ನಿಶ್ಚಿತ ವಿವಾಹವನ್ನು ಸಾಧಕವನ್ನು ನೋಡುವುದಾದರೆ ಬಹುಶಃ ಈ ವಿವಾಹ ನಾನೆನ್ನುವ ಅಹಂಕಾರದ ಬುಡಕ್ಕೇ ಬಲವಾದ ಕೊಡಲಿಯೇಟು ನೀಡುತ್ತದೆ. ನಾನತ್ವವನ್ನು ಹಂತಹಂತವಾಗಿ ಕಳೆದುಕೊಳ್ಳುವ ಮಾನವ ದೈವತ್ವವನ್ನು ಪಡೆದು ವಿಜೃಂಭಿಸನೇ. ಹಿರಿಯರು ನೋಡಿ ಮಾಡುವ ಈ ವಿವಾಹದಲ್ಲಿ ಎರಡೂ ಕುಟುಂಬಗಳ ನಡುವೆ ಒಂದು ವಿಶೇಷ ಬಾಂಧವ್ಯ ಏರ್ಪಾಡಾಗುತ್ತದೆ. ಶಾಸ್ತ್ರ ಸಂಪ್ರದಾಯಗಳ ಜೊತೆಗೆ ನೂರಾರು ಹಿರಿಯರು ಕಿರಿಯರ ಶುಭ ಹಾರೈಕೆಗಳ ಆಶೀರ್ವಾದಗಳ ಶ್ರೀರಕ್ಷೆ ತಿಳಿದೋ ತಿಳಿಯದೆಯೋ ದೂರದವರೂ ಹತ್ತಿರವಾಗಿ ವಸುಧೈವ ಕುಟುಂಬಕಂ ಎನ್ನುವ ಆರ್ಷೇಯೋಕ್ತಿ ಅನುರಣಿಸುತ್ತಾ ಹೋಗುತ್ತದೆ. ಇದೆಲ್ಲಾ ವೃಥಾ ಖರ್ಚು ಈ ಗೊಡ್ಡು ಸಂಪ್ರದಾಯಗಳನ್ನು ನಾವೇಕೆ ಅನುಸರಿಸಬೇಕು ಎನ್ನುವ ಕ್ಯಾಂತಿಕಾರೀ ಮನೋಭಾವದವರು ಒಂದು ಕಾಲದಲ್ಲಿ ನಮ್ಮ ಇಂಥಾ ಎಲ್ಲಾ ಆಚರಣೆಗಳನ್ನು ಹೀಗಳೆದು ಪಾಶ್ಚಿಮಾತ್ಯರೇ ಇಂದು ಇದಕ್ಕೆ ಮನಸೋತು ಹೀಗೆ ಹಿರಿಯರಿಂದ ಮದುವೆ ನಿಶ್ಚಯ ಮಾಡಿಕೊಂಡು ಶಾಸ್ತ್ರೋಕ್ತವಾಗಿ ಮದುವೆ ಆಗುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕು.  ಸಾಂಸಾರಿಕ ಜೀವನದಲ್ಲಿ ಧುತ್ತೆಂದು ಎದುರಾಗುವ ಹಲವು ಸಂಕಟ ಸಮಸ್ಯೆಗಳು ಹಿರಿಯರು ಮಾರ್ಗದರ್ಶನದಲ್ಲಿ ಧೂಳೀಪಟ ವಾಗುತ್ತವೆ. ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಮಾರ್ಗಾಯಾಸವೊಂದನ್ನು ತಪ್ಪಿಸಲಾಗದಿದ್ದರೂ ಗಮ್ಯವನ್ನು ಸೇರುವುದು ಸುಲಭಸಾಧ್ಯ. ಒಟ್ಟಿನಲ್ಲಿ ಈಗಿನ ಪರಿಸ್ಥಿತಿಯಲ್ಲಿ ನಿಶ್ಚಿತ ವಿವಾಹವೇ ಸೂಕ್ತ ಎಂದೆನಿಸುತ್ತದೆ. ಅದರರ್ಥ ಇದರಲ್ಲಿ ಬಾಧಕಗಳಿಲ್ಲವೆಂದಲ್ಲ. ಇವೆ. ಆದರೆ ಅವುಗಳ ಪರಿಹಾರಕ್ಕೆ ಗುರುಹಿರಿಯರ ವಿಶೇಷವಾದ ಹಾರೈಕೆ ಆಶೀರ್ವಾದಗಳಿವೆ. ಸದಾ ಬೆನ್ನು ಕಾಯುತ್ತವೆ. ಬಾಧಕವೆಂದರೆ ಇಷ್ಟೆಲ್ಲಾ ಇದ್ದರೂ ಕೆಲವೊಮ್ಮೆ ಕೆಲವು ಸಂದರ್ಭಗಳಲ್ಲಿ ಯಾರೂ ನೆರವಿಗೆ ಬಾರದೇ ಆ ಸಂಸಾರ ಬೀದಿಗೆ ಬಂದ ಉದಾಹರಣೆಗಳೂ ಇವೆ. 

ಇತ್ತೀಚೆಗಂತೂ ಚಿಕ್ಕ ಪುಟ್ಟ ವಯಸ್ಸಿನಲ್ಲೇ ಕೆಲಸಕ್ಕೆ ಬಾರದ ಲವ್ವು ಗಿವ್ವು ಎಂದು ಪ್ರೈಮರಿ ಹೈಸ್ಕೂಲು ದಿನಗಳಲ್ಲೇ ತಿರುಗಾಡುವ ಮೆರೆದಾಡುವ ಮಕ್ಕಳನ್ನು ಹೆಚ್ಚಾಗಿ ನೋಡುತ್ತಿದ್ದೇನೆ. ಅದಕ್ಕೆ ಪೋಷಕರ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲ.          

              “ಮರ್ಕಟಸ್ಯ ಸುರಾಪಾನಂ

               ಮಧ್ಯೇ ವೃಶ್ಚಿಕ ದ್ವಂಶನಂ

               ತನ್ಮಧ್ಯೇ ಭೂತಸಂಚಾರೋ

               ಯದ್ವಾತದ್ವಾ ಭವಿಷ್ಯತಿ”  

ಅರ್ಥಾತ್ ಮೊದಲೇ ಕಪಿ. ಚಂಚಲತೆಗೆ ಹೆಸರಾದುದು. ಅಂಥಾ ಕಪಿಗೆ ಹೆಂಡ ಕುಡಿಸಿ ಚೇಳನ್ನು ಕಡಿಸಿದರೆ ಸಾಲದೂ ಎಂಬಂತೆ ಅದರ ಮೈಮೇಲೆ ಭೂತದ ಆವಾಹನೆಯೂ ಆದರೆ ಇನ್ನು ಆ ಕಪಿಯನ್ನು ಹಿಡಿಯಲಾದೀತೇ ? ಪ್ರೇಮ ವಿವಾಹದಲ್ಲಿ ನಡೆಯುತ್ತಿರುವುದೂ ಅದೇ. ಸಮಾಜದ ಯುವಕ ಯುವತಿಯರ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಾಗಿ ಈ ದಿಸೆಯಲ್ಲಿ ಹಾಳುಗೆಡವಿದ್ದು ಪ್ರೇಮವನ್ನೇ ವೈಭವೀಕರಿಸುವ ಹೆತ್ತವರನ್ನೇ ಧಿಕ್ಕರಿಸಿ ತಮ್ಮದೇ ಬದುಕನ್ನು ಕಟ್ಟಿಕೊಂಡು ಗೆದ್ದವರ ಕಥೆಗಳನ್ನೇ ತೋರಿಸಿ ಎಂದರೆ ಅತಿಶಯೋಕ್ತಿಯಾಗಲಾರದು. ಅಪ್ಪನ ಶ್ರಮದ ಹಣ ಬೇಕು ಬಯಸಿದ್ದನ್ನು ಕೊಡಿಸಲು ಅಪ್ಪ ಬೇಕು. ಪ್ರೀತಿಯೇ ದೈವ ಎನ್ನುವ ಜೋಡಿಗಳಿಗೆ ತಂದೆತಾಯಿಗಳ ನಿರಪೇಕ್ಷ ಪ್ರೀತಿ ವಾತ್ಸಲ್ಯದಲ್ಲಿ ದೈವತ್ವ ಕಾಣುವುದೇ ಇಲ್ಲ. ಮಗಳಿಗೆ ಉತ್ತಮವಾದ ವರವನ್ನು ಹುಡುಕುವ ಅಪ್ಪ ಅಮ್ಮ ಇವರ ಪಾಲಿಗೆ ವಿಲನ್ ಗಳು . ಇಷ್ಟಾದರೂ ಬಾಹ್ಯ ಸೌಂದರ್ಯಕ್ಕೆ ಬಲಿಬಿದ್ದು ಎಲ್ಲರನ್ನೂ ಎದುರು ಹಾಕಿಕೊಂಡು ಸ್ವಾರ್ಥ ಸಹಿತ ಬದುಕನ್ನೇ ವೈಭವೀಕರಿಸುವ ಅದನ್ನೇ ತಮ್ಮ ಜೀವನದ ಬಹುದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುವ ಪ್ರೇಮಿಗಳು ಕಡೆಗೆ ತಮ್ಮ ಮಕ್ಕಳ ಪ್ರೇಮ ವಿವಾಹ ವಿರೋಧಿಗಳೇ. ಕೆಲವು ದಿನಗಳ ಕಾಲ ನೋಡಿದವರ ಮೇಲೆ ಮೂಡುವ ನಂಬಿಕೆ ಜನ್ಮದಾತರ ವಿರೋಧವನ್ನೇ ಕಟ್ಟಿಕೊಂಡು ಮನೆಬಿಟ್ಟೇ ಓಡಿಹೋಗಿ ಯಾವ ಗುರುಹಿರಿಯರ ಆಶೀರ್ವಾದವೇ ಇಲ್ಲದೇ ಎಲ್ಲರೂ ಇದ್ದೂ ಯಾರೂ ಇಲ್ಲದಂತೆ ಅನಾಥವಾಗಿ ರಿಜಿಸ್ಟ್ರಾರ್ ಆಫೀಸಿನಲ್ಲಿ ಮದುವೆ ಅಂತ ಆಗಿ ನಂತರ ದೇಹದ ಬಿಸಿ ಆರಿದ ಬಳಿಕ ಪರಸ್ಪರ ನಿಕೃಷ್ಟರು. ಬರೀ ಹುಳುಕುಗಳೇ ಎದ್ದು ಕಾಣುತ್ತಾ ಹೊಂದಿಕೆಯ ಬಾಳಿನ ಸವಿಯನ್ನೇ ಮರೆಸಿ ಅವರವರ ಅಹಂಕಾರವನ್ನೇ ಸ್ವಾಭಿಮಾನವೆಂದು ಕಲ್ಪಿಸಿಕೊಂಡು ಕೊನೆಗೆ ಕೌಟುಂಬಿಕ ನ್ಯಾಯಾಲಯಗಳಲ್ಲಿ ವಿಚ್ಛೇದನ ಪಡೆದು ಮತ್ತೆ ಸ್ವಾತಂತ್ರ್ಯ ಘೋಷಿಸಿಕೊಳ್ಳುವ ಪರಿಸ್ಥಿತಿ. ಇದರ ಮಧ್ಯೆ ಇವರಿಬ್ಬರ ನಡುವೆ ಹುಟ್ಟಿರಬಹುದಾದ ಪ್ರೀತಿಯ ದ್ಯೋತಕವಾದ ಮಗು ಅಪ್ಪ ಅಮ್ಮ ಇಬ್ಬರ ಆರೈಕೆಯಲ್ಲೂ ಬೆಳೆಯಬೇಕಾದ ಮಗು ಒಬ್ಬರು ಪ್ರೀತಿಯಿಂದ ವಂಚಿತರಾಗಿ ಬೆಳೆಯುವ ಕರ್ಮ. ಈ ವಂಚಿತರು ಬರೀ ಮಗುವಲ್ಲ ಅದರ ಅಪ್ಪನೂ ಕೂಡಾ. ತನ್ನದೇ ಮಗುವನ್ನು ತಾನೇ ಪ್ರೀತಿಸಲೂ ಆಗದ ಸ್ಥಿತಿ. ಸಾಲದ್ದಕ್ಕೆ ಇದನ್ನು ಪೋಷಿಸುವ ಕೆಲಸ ಬುದ್ಧಿ ಜೀವಿಗಳ ಬಳಗದ ಬೆಂಬಲ. ಒಬ್ಬಂಟಿಯಾಗಿ ಜೀವನ ನಡೆಸಬಲ್ಲೆ ನನ್ನ ಮಗುವನ್ನೂ ಸಾಕಬಲ್ಲೆ ಎನ್ನುವ ಹೆಣ್ಣಿನ ಆಲೋಚನೆಗೆ ಬೆಲೆ ತೆರುವುದು ಆ ಮಗುವೇ ಹೊರತು ಈ ಹೆಣ್ಣಿನ ಆಲೋಚನೆಯಂತೂ ಅಲ್ಲ. ಏಕೆಂದರೆ ಆಕೆ ಮಗುವಿಗೆ ಅಪ್ಪನನ್ನು ಬಿಟ್ಟು ಬೇರೇನನ್ನು ಬೇಕಾದರೂ ಕೊಡಬಹುದು. ಎರಡನೇ ಸಂಬಂಧವಾಗಿ ಅಪ್ಪನನ್ನೇ ಕೊಟ್ಟರೂ ಆ ಅಪ್ಪ ಮಗುವಿನ ನಡುವಿನ ಬಾಂಧವ್ಯ ಕುದುರುವುದು ನೂರಾರರಲ್ಲಿ ಒಂದೋ ಎರಡೋ ಇರಬಹುದು. ಇನ್ನು ಉಳಿದವುಗಳ ಕಥೆ ಅಷ್ಟೇ. ಅದನ್ನೇ ಸಾಧನೆ ಬೆಲೆ ಎಂದೆಲ್ಲಾ ವೈಭವೀಕರಿಸುವ ಮಹಾನ್ ಜ್ಞಾನಿಗಳು ಆ ಮಕ್ಕಳ ಮೂಕವೇದನೆಯನ್ನೊಮ್ಮೆ ನೋಡಬೇಕು . ಇಂಥದ್ಯಾವುದೂ ಆಗಬಾರದು , ನಮ್ಮ ಬದುಕು ಸುಖಮಯವಾದಂತೆ ನಮ್ಮ ಮಕ್ಕಳ ಬದುಕೂ ಸುಖಮಯವಾಗ ಬೇಕೆಂದರೆ ನೀವು ಪ್ರೀತಿಸಿದವರನ್ನು ನಿಮ್ಮ ಮನೆಯವರಿಗೆ ತೋರಿಸಿ ಒಪ್ಪಿಸಿ ಮನವೊಲಿಸಿ ನಂತರ ಮದುವೆಯಾಗಿ. ಆಗ ಅದು ನಿಮ್ಮ ನಿಜವಾದ ಸಾಧನೆ. ಲೋಕ ಮೆಚ್ಚುವ ಕೆಲಸ. ಅಂಥಾ ಕೆಲಸವನ್ನು ಮಾಡಿದ ಜೋಡಿಗಳನ್ನೂ ಕೂಡಾ ನಾನು ಬಹಳ ಹತ್ತಿರದಿಂದ ಬಲ್ಲೆ. ಏಳು ವರ್ಷಗಳಿಂದ ಅತ್ಯಂತ ರಹಸ್ಯವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಇಬ್ಬರೂ ಅವರ ತಂದೆತಾಯಿಗಳನ್ನು ಒಪ್ಪಿಸಿ ಮನವೊಲಿಸಿ ಎರಡೂ ಕಡೆಯವರೂ ಮನ: ಪೂರ್ವಕವಾಗಿ ಒಪ್ಪಿ ಆ ಪ್ರೇಮಿಗಳು ದಂಪತಿಗಳಾಗಿದ್ದಾರೆ. ನನ್ನ ಮನೆಗೂ ಬಂದು ಇಬ್ಬರೂ ನನ್ನ ಕಾಲಿಗೆ ( ನನಗೆ ಸುತಾರಾಂ ಇಷ್ಟವಿಲ್ಲದಿದ್ದರೂ ) ನಮಸ್ಕರಿಸಿ ಮದುವೆಗೆ ಆಹ್ವಾನಿಸಿ ಆನಂದಭಾಷ್ಪ ತೋರಿಸಿದ ಜೋಡಿಗಳು ಇಂದಿಗೂ ಎಂದೆಂದಿಗೂ ನಾನು ಯಾರಿಗಾದರೂ ಎದೆಯುಬ್ಬಿಸಿಕೊಂಡು ಉದಾಹರಿಸಬಲ್ಲವರು.  ಅದರ ಬದಲು ದರಿದ್ರ ಲವ್ ಜಿಹಾದ್ ನಂಥಾ ಮೋಸಕ್ಕೆ ಒಳಗಾಗಿ ಏನೋ ಆಗಬೇಕೆಂದು ಬಯಸಿದ್ದು ಇನ್ನೇನೋ ಆಗುವುದರ ಬದಲಾಗಿ ಹೀಗಾದರೂ ಆಗಲಿ. 



Rate this content
Log in