ಮಗುವಿನ ಹಿರಿತನ
ಮಗುವಿನ ಹಿರಿತನ


ಆ ಮಗುವಿಗೆ ಸುಮಾರು ಒಂದೂವರೆ ವರ್ಷದ ಒಳಗಿನ ವಯಸ್ಸು . ಮುದ್ದಾಗಿತ್ತು . ಅದರ ಅಕ್ಕ ಅದಕ್ಕಿಂತ ಸ್ವಲ್ಪ ದೊಡ್ಡವಳು ಅಷ್ಟೇ. ಅಕ್ಕ ತಂಗಿಯನ್ನು ಎತ್ತಿಕೊಂಡು ನಮ್ಮ ಮನೆಯ ಒಳಗೆ ಬಂದಳು. ನನ್ನ ಪತ್ನಿ ತಂಗಿಯನ್ನು ಎತ್ತಿಕೊಂಡು ಮುದ್ದಾಡುತ್ತಾ ಮಲಗಿದ್ದ ನನ್ನ ಕಿವಿಯ ಹತ್ತಿರ ತಂದಳು. ಅದು ಏನೋ ಶಬ್ದ ಮಾಡಿದ್ದರಿಂದ ನಾನೂ ಎದ್ದೆ. ಪಾಪು ಹೆದರಿತೇನೋ ? ಸ್ವಲ್ಪ ಹಿಂದೆ ಹೋಯಿತು . ನಂತರ ಅವಳ ಅಕ್ಕನ ಬಳಿ ಹೋಯಿತು . ನನ್ನ ಪತ್ನಿ ಅಡಿಗೆ ಮನೆಯಿಂದ ಎರಡೆರಡು ಬಿಸ್ಕತ್ತು ತಂದು ಅಕ್ಕನ ಕೈಗೆರಡು ತಂಗಿಯ ಕೈಗೆರಡು ಇಟ್ಟಳು. ಎರಡೂ ಕೈಚಾಚಿ ತೆಗೆದುಕೊಂಡೆವು. ತಂಗಿ ತಾನು ಬಿಸ್ಕತ್ತನ್ನು ಬಾಯಿಗಿಡುವ ಮುನ್ನವೇ ನನಗೆ ತನ್ನ ಬಾಲಭಾಷೆಯಲ್ಲಿ " ಕಾ " ಎಂದು ಚಾಚಿದಳು. ತೆಗೆದುಕೊ ಎಂದು ಸೂಚಿಸಿದಳು. ನನಗಂತೂ ತಡೆಯಲಾರದಷ್ಟು ಸಂತೋಷವಾಯಿತು. ತಕಗಿಗೋಂದು ಹೂ ಮುತ್ತ ಹಣೆಗಿಟ್ಟು ತಾನೇ ತಿನ್ನಲು ಹೇಳಿದೆ . ಆ ಎಳೆಯ ಮಗುವಿನ ಪ್ರೌಢ ವರ್ತನೆ ನನ್ನ ಮನ ತುಂಬಿತ್ತು .