ಮುದ್ದು ಮರಿ
ಮುದ್ದು ಮರಿ
ಚಿಕ್ಕ ವಯಸ್ಸಿನಿಂದಲೂ ರಾಗಿಣಿಯ ಮಗನಿಗೆ ನಾಯಿಮರಿ ಎಂದರೆ ತುಂಬಾ ಇಷ್ಟ.ಆದರೆ ಅವರ ಮನೆಯಲ್ಲಿ ನಾಯಿ ಸಾಕಲು ಯಾರೂ ರೆಡಿ ಇರಲಿಲ್ಲ.ಆದರೆ ರಾಗಿಣಿ ಮತ್ತು ಅವಳ ಗಂಡನಿಗೆ ತಮ್ಮ ಮಗ ಚಿನ್ನುವಿನ ಹಠ ತಡೆಯಲಾಗಲಿಲ್ಲ.
ಅವನು ಕಾಲೇಜಿಗೆ ಸೇರಿದ ನಂತರ, ತಾನೇ ಅದನ್ನು ನೋಡಿಕೊಳ್ಳುವುದಾಗಿ ಹೇಳಿ, ಒಂದು ದಿನ ಮನೆಗೆ ಎರಡು ತಿಂಗಳ ಒಂದು ಪುಟ್ಟ ಲ್ಯಾಬ್ ರಾಡಾರ್ ಮರಿಯನ್ನು ತಂದೇ ಬಿಟ್ಟ.
ಸಣ್ಣ ಬುಟ್ಟಿಯಲ್ಲಿ ಮಲಗಿಸಿಕೊಂಡು ಬಂದ ಆ ಮರಿ ನೋಡಲು ತುಂಬಾ ಮುದ್ದು ಮುದ್ದಾಗಿ ಇತ್ತು. ಬಿಳಿ ಬಣ್ಣದ ಮರಿ ತನ್ನ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಎಲ್ಲರ ಹತ್ತಿರ ಬಂದಾಗ ಮೊಲದ ಮರಿ ಯಂತೆಯೇ ಕಾಣುತ್ತಿತ್ತು.ಆದರೆ ನಾಯಿಮರಿ ಎಂದರೆ ಹೆದರುತ್ತಿದ್ದ ರಾಗಿಣಿ ಗೆ ಅದು ಹತ್ತಿರ ಹತ್ತಿರ ಬಂದರೆ ಓಡುತ್ತಿದ್ದಳು. ಆದರೆ ಅವಳ ಮಗನಂತೂ ಅದನ್ನು ಎತ್ತಿಕೊಂಡು ಮನೆಯೆಲ್ಲಾ ಓಡಾಡುತ್ತಿದ್ದ. ಅವನಿಗದೇನೋ ಖುಷಿ. ಕಡೆಗೆ ಮೊದಲ ದಿನ ಅದನ್ನು ಎಲ್ಲಿ ಮಲಗಿಸುವುದೆಂದು ಡಿಸ್ಕಷನ್ ನಡೆದಾಗ, ರಾಗಿಣಿ ಮತ್ತು ಅವಳ ಗಂಡ ಇಬ್ಬರೂ ಅದನ್ನು ಬಾಲ್ಕನಿಯಲ್ಲಿ ಮಲಗಿಸುವುದು ಎಂದು ಡಿಸೈಡ್ ಮಾಡುತ್ತಿದ್ದಾಗ ಚಿನ್ನುವಿಗೆ ಎಲ್ಲಿಲ್ಲದ ಕೋಪ ಬಂದು, ಅದನ್ನು ತಾನು ಹೊರಗಡೆ ಮಲಗಿಸುವುದಿಲ್ಲ, ಅದಕ್ಕೆ ಬೆಲ್ಟ್ ಹಾಕುವಂತಿಲ್ಲ, ಎಂದು ಹೇಳಿ, ಅದನ್ನು ತನ್ನ ರೂಮಿನಲ್ಲಿ ಒಂದು ದೊಡ್ಡ ಪ್ಲಾಸ್ಟಿಕ್ ಟಬ್ ನಲ್ಲಿ ಮೆತ್ತಗೆ ಹಾಸಿ ಮಲಗಿಸಿದ. ರಾತ್ರಿ ಇಡೀ ಅದನ್ನು ನೋಡಿ ಕೊಳ್ಳುತ್ತಾ ಇದ್ದ.
ಹೀಗೆ ಬಂದ ಆ ಮುದ್ದು ನಾಯಿ ಮರಿಗೆ ಟಫಿ ಎಂದು ಹೆಸರಿಟ್ಟು ಅದನ್ನು ಆ ಹೆಸರಿನಿಂದ ಕೂಗಲು ಶುರು ಮಾಡಿದರು. ದಿನಕಳೆದಂತೆ ಟಫಿ ಆ ಮನೆಯ ಎಲ್ಲರಿಗೂ ಇಷ್ಟವಾಗಿ ಎರಡು ತಿಂಗಳು ಅದನ್ನು ಒಂದು ಮಗುವಂತೆ ನೋಡಿಕೊಳ್ಳುತ್ತಿದ್ದರು.
ನೋಡನೋಡುತ್ತಿದ್ದಂತೆ ಅದು ಬೆಳೆದು ಬಿಟ್ಟಿತು.
ಅದನ್ನು ಬೆಳಿಗ್ಗೆ ಸಂಜೆ ವಾಕಿಂಗ್ ಕರೆದುಕೊಂಡು ಹೋಗ ಬೇಕಾಯಿತು. ಮನೆಯಲ್ಲಿ ರಾಗಿಣಿಯನ್ನು ಬಿಟ್ಟು ಉಳಿದ ಮೂವರು ಆ ಕೆಲಸ ಮಾಡುತ್ತಿದ್ದರು.
ಆದರೆ ಚಿನ್ನು ಮಾತ್ರ ಅದನ್ನು ವಿಪರೀತವಾಗಿ ಮುದ್ದಿಸಿ ಹಾಳು ಮಾಡಿದ್ದ. ಅದಕ್ಕೆ ಬೆಲ್ಟ್ ಹಾಕಲೇ ಬಿಡದೆ ಮನೆಯಲ್ಲಿ ಎಲ್ಲಾ ಕಡೆ ಓಡಾಡುವುದಕ್ಕೆ ಶುರು ಮಾಡಿತು. ಮನೆಗೆ ಬಂದವರಿಗೆ ಅದನ್ನು ನೋಡಿ ಭಯವಾಗುತ್ತಿತ್ತು. ಕಡೆಗೆ ಚಿನ್ನುವಿನ ಅಪ್ಪ ಅವನ ಮಾತನ್ನು ಕೇಳದೇ ಟಫಿಗೆ ಬೆಲ್ಟ್ ಹಾಕಿ ಬಾಲ್ಕನಿಯಲ್ಲಿ ಬಿಡುವುದಕ್ಕೆ ಅಭ್ಯಾಸ ಮಾಡಿಸಿದರು.
ಮೊದಮೊದಲು ಅದು ಬೊಗಳಿ ಬೊಗಳಿ ಗಲಾಟೆ ಮಾಡಿ ನಂತರ ಸುಮ್ಮನಾಯಿತು.ಆದರೆ ಚಿನ್ನು ಮನೆಗೆ ಬಂದ ಕೂಡಲೇ ಅದರ ಬೆಲ್ಟ್ ಬಿಚ್ಚಿ ತುಂಬಾ ಫ್ರೀಯಾಗಿ ಬಿಟ್ಟು ಬಿಡುತ್ತಿದ್ದ.
ಅವನ ಅತಿಯಾದ ಪ್ರೀತಿಯ ಪರಿಣಾಮ ವಾಗಿ ಅದು ಗೇಟ್ ತೆಗೆದಿದ್ದಾಗ ಹೊರಗೆ ಹೋಗಿ ಬರಲು ಶುರು ಮಾಡಿತು.
ಒಂದು ದಿನ ಹೀಗೆ ಹೊರಗೆ ಹೋದ ಟಫಿ ಮನೆಗೆ ಬರಲೇ ಇಲ್ಲ. ಕಡೆಗೆ ಕಾಲೇಜು ಮುಗಿಸಿಕೊಂಡು ಮನೆಗೆ ಬಂದ ಅವಳ ಮಗ ಟಫಿ ಎಲ್ಲಿ ಎಂದು ಕೇಳಿದಾಗ , ರಾಗಿಣಿ ಅದು ಹೊರಗೆ ಓಡಿ ಹೋಯಿತು ,ಇನ್ನೂ ಮನೆಗೆ ಬಂದಿಲ್ಲ ಎಂದು ಹೇಳಿದಳು. ಈ ವಿಷಯ ಕೇಳಿದ ಕೂಡಲೇ ಅವಳ ಮಗನಿಗೆ ವಿಪರೀತ ಕೋಪ ಬಂದು ಅದನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಅಮ್ಮನ ಮೇಲೆ ಕೂಗಾಡಿ, ಅದನ್ನು ಹುಡುಕಿಕೊಂಡು ಬರಲು ಹೊರಟೇ ಬಿಟ್ಟ.ಇಡೀ ದಿನ ಸಾಯಂಕಾಲದವರೆಗೆ ಮನೆಯ ಸುತ್ತ ಮುತ್ತ ಎಲ್ಲಾ ಕಡೆ ಹುಡುಕಿದರೂ ಅದು ಎಲ್ಲೂ ಕಾಣಿಸಲಿಲ್ಲ. ರಾತ್ರಿ ಯಾದರೂ ಟಫಿ ಮನೆಗೂ ಬರಲಿಲ್ಲ.
ಒಂದು ದಿನ ಎರಡು ದಿನ ಮೂರು ದಿನ ಕಳೆದರೂ ಟಫಿ ಮನೆಗೆ ವಾಪಸ್ ಬರಲೇ ಇಲ್ಲ.
ಎರಡು ವರ್ಷಗಳಿಂದ ಮನೆಯ ಸದಸ್ಯನಂತೆ ಇದ್ದ ಆ ಮೂಕ ಪ್ರಾಣಿ ಎಲ್ಲರ ಪ್ರೀತಿ ಗಳಿಸಿತ್ತು.ಅದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು.
ಕಡೆಗೆ ರಾಗಿಣಿ ತನ್ನ ಮಗನಿಗೆ ಒಂದು ಮಾತು ಹೇಳಿದಳು.
,"ನೀನು ಅದಕ್ಕೆ ಕೊಟ್ಟ ಅತಿ ಪ್ರೀತಿ ಮತ್ತು ಸಲುಗೆಯಿಂದ ಅದು ಮನೆ ಬಿಟ್ಟು ಹೋಗುವಂತೆ ಮಾಡಿತು. ಅದಕ್ಕೆ ಬೆಲ್ಟ್ ಹಾಕಿ ಒಂದು ಕಡೆ ಕಟ್ಟಿ ಹಾಕಿದಿದ್ದರೆ, ಮತ್ತು ಶಿಸ್ತಿನಿಂದ ಬೆಳೆಸಿದ್ದಿದ್ದರೆ ಇಂದು ಅದು ಹೀಗೆ ಮನೆ ಬಿಟ್ಟು ಹೋಗುತ್ತಿರಲಿಲ್ಲ."
ತನ್ನ ಮಗನ ಅತಿಯಾದ ಪ್ರಾಣಿ ಪ್ರೀತಿ ಕಡೆಗೆ ತಾನು ಆಸೆಪಟ್ಟು ತಂದ ಟಫಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವಂತೆ ಮಾಡಿತು.ಜೀವನದಲ್ಲಿ ಸಾಕು ಪ್ರಾಣಿಗಳಿಗೂ ಶಿಸ್ತು ತುಂಬಾ ಅಗತ್ಯ ವೆಂದು ಅಂದು ಚಿನ್ನು ವಿಗೆ ಅರ್ಥ ವಾಯಿತು.