ಹಂಸವೇಣಿ ಕುಲಾಲ್

Drama Tragedy Children

4  

ಹಂಸವೇಣಿ ಕುಲಾಲ್

Drama Tragedy Children

ಕರುಣಾಮಯಿ

ಕರುಣಾಮಯಿ

5 mins
214


    ಜಾರಿ ಹೋಗುತ್ತಿರುವ ಬೇಸರದ ಛಾಯೆ ಹೊತ್ತು ಆ ರವಿ, ಆ ತಾಯಿಯ ಆಕ್ರಂದನ ನೋಡಿ ಸಾಂತ್ವನದ ನುಡಿ ನುಡಿಯ ಬೇಕೇನಿಸಿದ್ದರೂ  , ಅವನ ಗಂಟಲನ್ನು ಸಹ ಆ ನೋವಿನ ಪದರ ಆವರಿಸಿ ಬಿಟ್ಟಿತ್ತು. ಆ ದಿನದ ನೋವು ಅವನ ಹೃದಯವನ್ನು ಹಿಂಡಿತು. ಅದೇ ನೋವ ಹೊತ್ತು, ಎಷ್ಟು ಬೇಗ ವಿದಾಯ ಹೇಳಿ ಹೋಗುವೆನೋ ಎನ್ನುತ್ತಾ ಸಮಯವನ್ನು ನೋಡಿಕೊಳ್ಳುತ್ತಿದ್ದ.


ಸ್ಮಶಾನ ಮೌನ ತುಂಬಿದ ಆ ದಾರಿಯಲ್ಲಿ ನಡೆದು ಬರುತ್ತಿದ್ದಳು ಶಿಕ್ಷಕಿ ಸವಿತಾ. ನರಮನುಷ್ಯರು ಎನಿಸಿಕೊಂಡ ಒಬ್ಬರು ಕಾಣಲಿಲ್ಲ ಆಕೆಗೆ. ಕಾರಣ ತಿಳಿದಿತ್ತು, ಎಲ್ಲರೂ ಆ ಅಂತ್ಯಸಂಸ್ಕಾರಕ್ಕೆ ಸ್ಮಶಾನದ ಕಡೆ ನಡೆದಿದ್ದಾರೆ ಎಂಬುದು. ಆಕೆಗೂ ಅಳು ಒತ್ತರಿಸಿ ಬರುತ್ತಿದೆ. ಆದರೆ ಜೋರಾಗಿ ಅತ್ತು ತನ್ನ ಸಂಕಟವ ನಿವಾರಿಸಿಕೊಳ್ಳುವ ಸಮಯ ಅಲ್ಲ ಇದು. ಅವಳ ಕಣ್ಣೀರ ಧಾರೆ ಆಕೆ ಹಿಡಿದಿರುವ  ಕರವಸ್ತ್ರಕ್ಕಷ್ಟೇ   ತಿಳಿದಿತ್ತು. ದಡಬಡಿಸಿ ಬರುತ್ತಿದ್ದವಳ ಕಾಲನ್ನು ತಡೆಯಿತು, ಆ ಆಕ್ರಂದನದ ಧ್ವನಿ.


'ಯಾರದು?' 

ಎನ್ನುತ್ತಾ ಸುತ್ತಲೂ ಒಮ್ಮೆ ಕಣ್ಣಾಡಿಸಿದಳು. ಸದ್ಯಕ್ಕೆ ಅಲ್ಲಿ ಯಾರೂ ಇರಲಿಲ್ಲ, ಆದರೆ ಅಳುವಿನ ಧ್ವನಿ ಮಾತ್ರ ನಿಲ್ಲುತ್ತಿಲ್ಲ. ಸೂಕ್ಷ್ಮತೆಯಲ್ಲಿ ಗಮನಿಸಿದಳು, ಅದೊಂದು ಮುಳ್ಳಿನ ಪೊದೆ. ಅದರ ಮೇಲೆ ಸೀರೆಯ ಕುಣಿಕೆ ಇತ್ತಷ್ಟೇ. ಮತ್ಯಾರು ಕಾಣಲಿಲ್ಲ. ಆದರೂ ಆಕ್ರಂದನದ ಧ್ವನಿ ಕೇಳುತ್ತಲೇ ಇತ್ತು.



" ಯಾರು? ಯಾಕೆ ? ಏನಾಯ್ತು ? ಇಷ್ಟು ಅಳ್ತಾ ಇದ್ದೀರಾ ? ಇಲ್ಲಿ ನನ್ನ ಕಣ್ಣಿಗೆ ಯಾರು ಕಾಣಿಸ್ತಾ ಇಲ್ಲ?"

ಎಂಬ ಪ್ರಶ್ನೆಗೆ ಮತ್ತೂ ಜೋರಾದ ಆಕ್ರಂದನದ ಧ್ವನಿ ಜೊತೆಗೆ,

"ನೀವು ಸವಿತಾ ಟೀಚರ್ ಅಲ್ವಾ? ನನ್ನ ಮಗಳು ಇರೋ ಸ್ಕೂಲ್ ಟೀಚರ್ ನೀವೇ "

ಎಂದು ಅಲ್ಲೇ ಪೊದೆಯ ಮೇಲೆ ಬಿದ್ದಿದ್ದ ಸೀರೆಯ ಕುಣಿಕೆ ನುಡಿಯಿತು. ಆಶ್ಚರ್ಯದಲ್ಲಿ ಅದರ ಬಳಿ ನಿಂತಳು.


"(ತೊದಲುತ್ತ) ನೀ..ನಾ.. ಮಾತಾಡಿದ್ದು ?"


"ಹೌದು ! ನೀವು ನನ್ ಮಗಳು ಮನ್ವಿತಾ, ಕ್ಲಾಸ್ ಟೀಚರ್ ಅಲ್ವಾ ?"


"ಹೌದು ನಾನೇ"

ಎಂದು ಬಿಕ್ಕಳಿಸಿದಳು.


"ನೀವು ನನ್ನ ಮಗಳನ್ನ ನೋಡಕ್ಕೆ ಬಂದಿರೋದು ಅಲ್ವಾ?"


"ಹಾ ಹೌದು. ನಾನು ಇವತ್ತು ಸ್ಕೂಲ್ಗೆ ಬಂದಿರ್ಲಿಲ್ಲ, ನನಗೆ ಈಗ ವಿಷಯ ತಿಳೀತು"


"ಇದೇ ದಾರೀಲ್ಲಿ ನನ್ನ ಮಗಳನ್ನ ಹೊತ್ಕೊಂಡು ಹೋದ್ರು. ನನ್ನ ಇಲ್ಲೇ ಬಿಸಾಕಿ ಬಿಟ್ರು. ನನ್ನು ಕರ್ಕೊಂಡು ಹೋಗಿ ಟೀಚರ್"


"ಇಲ್ಲಿ ನಿನ್ನ ಬಿಸಾಕಿದ್ದು ಯಾರು? ಯಾಕೆ?"


"ನನ್ ಮಗಳು ಮನ್ವಿತಾ ಪ್ರಾಣ ನನ್ನಿಂದ ಹೋಯ್ತು, ಅದು ಅವ್ರ್ಗೆ ಗೊತ್ತಾಗಿ ನನ್ನ ಇಲ್ಲಿ ತಂದು ಬಿಸಾಕಿ ಹೋದ್ರು "


"(ಕೋಪದಲ್ಲಿ) ಅದು ನೀನೇನಾ ? ನಾಚ್ಕೆ ಆಗ್ಬೇಕು ನಿನಗೆ, ಏನು ಮಾಡಿತ್ತು ಆ ಮಗು? ಈಗ ಚಿಗುರೋ ಕುಡಿ ಅದು. ಸಾಯಿಸ್ಬಿಟ್ಟಲ್ಲ"

ಎಂದು ಅಲ್ಲಿಂದ ನಡೆದು ಹೋಗುತಿದ್ದವಳ ಕಾಲನ್ನು ಯಾರೋ ಹಿಡಿದಂತಾಗಿ ನೋಡಿದಳು, ಆ ಸೀರೆಯ ಕುಣಿಕೆ ಬಂದು ಅವಳ ಕಾಲ ಸುತ್ತಿತ್ತು.


"ಟೀಚರ್ ನನ್ನೂ  ಕರ್ಕೊಂಡು ಹೋಗಿ. ಬಿಟ್ಟು ಹೋಗ್ಬೇಡಿ"


"ಆ ಮಗು ಪ್ರಾಣ ತೆಗೆದಿದ್ದು ಅಲ್ದೆ, ಅಲ್ಲಿಗೆ ಬರ್ಬೇಕಾ ನೀನು? ಥೂ ನಾಚ್ಕೆ ಆಗೋಲ್ವಾ ನಿಂಗೆ ?"


"ಸಾಕು ನಿಲ್ಸಿ. ಪದೇ ಪದೇ ಅದ್ನೆ ಹೇಳಿ, ಅರ್ಧ ಸತ್ತಿರೋ ನನ್ನ ಇನ್ನೂ ಸಾಯಿಸ್ಬೇಡಿ. ನಿಜ ಹೇಳ್ತೀನಿ ಕೇಳಿ, ನನ್ನಿಂದ ಅಲ್ಲ ನನ್ನ ಮಗು ಸತ್ತಿದ್ದು. ಅವಳ ಸಾವಿಗೆ ಅವಳ ಅಪ್ಪ-ಅಮ್ಮ ಅನ್ನಿಸಿಕೊಂಡವರು ಕಾರಣ"


"ಏನ್ ಹೇಳ್ತಾ ಇದ್ದೀಯಾ? ಸರಿಯಾಗಿ ಹೇಳು?"


"ವಿದ್ಯೆ ಕೊಡೋ ಗುರುಗಳು ನೀವು, ನಿಮ್ಮತ್ರ ಸುಳ್ಳು ಹೇಳಿ ನಾನೇನು ಸಾಧಿಸ್ಲಿ. ಮೊದ್ಲು ನನ್ನ ಮಗಳನ್ನ ನೋಡೋಕ್ಕೆ ನನ್ನೂ  ಕರ್ಕೊಂಡು ಹೋಗ್ತೀನಿ ಅಂತ ಮಾತ್ ಕೊಡಿ"


" ಖಂಡಿತಾ. ಜೊತೆಗೆ ಕರ್ಕೊಂಡು ಹೋಗ್ತೀನಿ ಏನು ಹೇಳು?"


"ಹೇಳ್ತೀನಿ''


ಹೆಸರಿಗೆ ಅಷ್ಟೆ ಅವ್ರು ತಂದೆ-ತಾಯಿ, ನನ್ನ ಮಗಳಿಗೆ . ಹೆತ್ತಿದು ಅವ್ಳು ಇರ್ಬಹುದು, ಆದ್ರೆ ಮನ್ವಿತಾ ನನ್ನ ಮಗ್ಳಾಗಿ ಬೆಳ್ದಿದ್ದು. ಹುಟ್ದಾಗ ಲಾಲಿ ಹಾಡಿ ತೂಗಿ ನನ್ನ ಮಡಿಲಲ್ಲಿ ಮಲ್ಗಿದ್ದು. ಇನ್ನೂ ಆ ಮಗೂಗೆ ವರ್ಷನೇ ಆಗಿಲ್ಲ, ಆಫೀಸು ಅಂತ ಅವ್ಳ ಅಮ್ಮ ನನ್ನ ಮಡಿಲಿಗೆ ಹಾಕಿ ಹೋದ್ಳು. ನನ್ನ ಮಡಿಲಲ್ಲಿ ಎಂತಾ ಸುಖ ನಿದ್ದೆ ಮಾಡ್ತಾ ಇದ್ಳು. ಈಗ್ಲೂ ಅವ್ಳಿಗೆ ನಾನೇ ಬೇಕಿತ್ತು ಮಲಗೊಕ್ಕೆ, ಆದ್ರೆ ಇವತ್ತು ? ಇವತ್ತು, ನನ್ನ ಬಿಟ್ಟು ಒಬ್ಳೇ" 

ಅಳಲು ಶುರುವಿಟ್ಟಿತು. ಸವಿತಾಗೆ ಮನಕಲಕಿದ ಅನುಭವವಾಯಿತು. ಆ ಸೀರೆಯ ಕುಣಿಕೆಗೆ ಸಮಾಧಾನ ಮಾಡಿ, ಅದರ ಗಂಟನ್ನು ಬಿಚ್ಚಿ ತನ್ನ ಕೈಯಲ್ಲಿ ಎತ್ತಿ ಹಿಡಿದಳು.


"ಮುಂದೆ ಹೇಳು"


"ಆಗ ನನ್ನ ಮಗಳಿಗೆ ಬರೀ ಮೂರು ವರ್ಷ. ಮನೇಲಿ ನೋಡ್ಕೊಳ್ಳೋಕೆ ಕಷ್ಟ ಅಂತ ಕರ್ಕೊಂಡೋಗಿ, ಆ ಪ್ಲೇ ಹೋಮ್ಗೆ ಸೇರಿಸಿ ಬಿಟ್ರು. ಅವತ್ತು ನನ್ನ ಮಗಳನ್ನ ಬಿಟ್ಟು ಇದ್ದಿದ್ದು ಎಷ್ಟು ಕಷ್ಟ ಆಯ್ತು. ಅವಳು ಒಂದು ದಿನ ನನ್ನ ಬಿಟ್ಟು ಇರ್ತಾ ಇರ್ಲಿಲ್ಲ. ಬಂದ ತಕ್ಷಣ ಓಡಿ ಬಂದು ನನ್ನ ತಬ್ಕೊಂಡು 'ಅಲ್ಗೆ ಹೋಗಲ್ಲ' ಅಂತ ತುಂಬಾ ಅತ್ತಳು. ಅವ್ಳ ಅಪ್ಪ ಅನ್ನಿಸಿಕೊಂಡ ಆ ಮನುಷ್ಯ ನನ್ನ ಮಗಳಿಗೆ , ದಿನ ದಿನ ಏಳ್ಕೊಂಡ ಹೋಗಿ ಅಲ್ಗೆ ಬಿಟ್ ಬರ್ತಿದ್ದ. ನನ್ನ ಮಗಳ ಅಳು ಅವ್ನಿಗೆ ಎಲ್ಲಿ ಕಾಣಿಸ್ತಿತ್ತು. ಅವ್ಳು ಹೋಗಿ ಬರೋಗಂಟ ಜೀವ ಕೈಯಲ್ಲಿ ಹಿಡ್ದು ಬಾಗ್ಲು ಕಾಯ್ತಾ ಇದ್ದೆ. ಒಂದು ದಿನಾನೂ ನನ್ನ ಮಗಳ ಆಟನ ಕಣ್ತುಂಬಾ ನೋಡ್ಲಿಲ್ಲಾ. ಆ ಅದೃಷ್ಟ ಇದ್ರು ಅನುಭವಿಸೋಕ್ಕೆ ಕೇಳಿ ಬಂದಿರ್ಬೇಕು ಅಲ್ವಾ?


ಸವಿತಾ ಸೀರೆಯ ಮಾತನ್ನು ಕೇಳುವುದರಲ್ಲಿ ತುಂಬಾ ತಲ್ಲೀನಳಾದಳು . ಮಧ್ಯ-ಮಧ್ಯ ಬಿಕ್ಕಳಿಸುತ್ತಾ ತನಗೆ ತಾನೇ ಸಮಾಧಾನ ತಂದುಕೊಂಡ ಸೀರೆ,


"ಮುಂದೆ ಸ್ಕೂಲ್ಗೆ ಸೇರಿಸಿದ್ರು ಅವಳು ಹೋಗಿ ಎಷ್ಟೊತ್ತಿಗೆ ಜೋಪಾನವಾಗಿ ಬರ್ತಾಳೆ ಅಂತ ನೋಡ್ತಾ ಇದ್ದೆ. ಬಂದ ತಕ್ಷಣ ನನ್ನ ತಬ್ಬಿ ದಿನದ ವರದಿನೇಲ್ಲಾ ನನ್ನ ಮುಂದೆ ಇಡ್ತಾ ಇದ್ಳು, ನನ್ನ ಬಂಗಾರ. ನನ್ನ ಬಿಟ್ಟಿರೋದು ಅವಳಿಗೂ ಕಷ್ಟ ಆಯ್ತು, ಒಂದಿನ ಸ್ಕೂಲ್ಗೆ ಕರ್ಕೊಂಡು ಹೊರಟೇಬಿಟ್ಳು. ಆಮೇಲೆ ದಿನ ಅವ್ಳ ಜೊತೆ ನಾನು ಸ್ಕೂಲ್ಗೆ ಹೋಗೋದೇ ಆಯ್ತು. ಸ್ಕೂಲಲ್ಲಿ ಮಾರ್ಕ್ಸ್ ಬಂದ್ರೆ ಎಷ್ಟು ಕುಣಿತಿದ್ದೆ ನಾನು ಗೊತ್ತಾ? ಪ್ರೈಸ್ ಬಂದಾಗ ನಾನು ಅವ್ಳು ಸೇರಿ ಎಷ್ಟು ಆನಂದ ಪಡ್ತಾ ಇದ್ವಿ, ಬರೀ ಕೆಲ್ಸ ಅಂತ ಸುತ್ತೋ ಅವ್ಳ ಅಪ್ಪ-ಅಮ್ಮಂಗೆ ಇದ್ಯಾವುದೂ ಬೇಕಿರ್ಲಿಲ್ಲ. ನನ್ನ ಮಗ್ಳು ಹೇಗೋ ನನ್ನ ಜೊತೆ ಆಡಿ ಬೆಳೆದ್ಳು"


"ಹಾಗಾದ್ರೆ ಮನ್ವಿತಾ ಆ ನೋವಿಂದ ಆತ್ಮಹತ್ಯೆ ಮಾಡಿಕೊಂಡಿದ್ದ? ನಂಗೆ ಈಗ್ಲೂ ನಂಬೊಕ್ಕೆ ಆಗ್ತಾ ಇಲ್ಲ. ಫೀಫ್ತ್ ಸ್ಟ್ಯಾಂಡರ್ಡ್ ಹುಡ್ಗಿ, ನನ್ನ ಸ್ಟೂಡೆಂಟ್ ಅವ್ಳು . ಅವ್ಳ ಆ ಪುಟ್ಟ ಮಾತು ಕಣ್ಣ ಮುಂದೆ ಇದೆ. ಆದ್ರೆ ಇವತ್ತು ಅವ್ಳು.. ಅವ್ಳು.. ಇಲ್ಲ"


"ನಾನು ನನ್ನ ಮಗಳು ಚೆನ್ನಾಗೇ ಇದ್ವಿ ಎಲ್ಲಿವರ್ಗೆ? ಅವ್ರ ಅಮ್ಮ-ಅಪ್ಪ ಮಧ್ಯೆ ಜಗ್ಳ ಬರೋ ತನಕ. ಚಿಕ್ಕ ವಿಷಯಕ್ಕೆ ಶುರು ಆಯ್ತು. ಇವ್ರ ಜಗಳ, ದಿನ ಬರೀ ಕಿರ್ಚಾಟ, ಈಗೀಗ ಗಂಡ-ಹೆಂಡತಿ ಹೊಡೆದಾಟ. ಕೊನೆಗೆ ಅದು ಡೈವರ್ಸ್ ಆಗೋ ಸ್ಥಿತಿಗೆ ಬಂತು. ಕುಟುಂಬದ ಮಾತು ಬೇಡವಾಯ್ತು. ನನ್ನ ಮಗಳು ಹತ್ರ ಬಂದು ಅಳ್ತಾ ಎಲ್ಲ ಹೇಳ್ತಾ ಇದ್ಳು. ಕಣ್ಣು ಒರೆಸಿ ಸಮಾಧಾನ ಮಾಡ್ತಾಇದ್ದೆ. ಇವ್ರ ಜಗಳ ಥೂ! ಕೇಳಿ ಕೇಳಿ ನಂಗೆ ಈ ಮನೆ ಬಿಟ್ಟು ಹೋಗೋದ ಅನಿಸ್ತಿತ್ತು. ನನ್ನಮಗಳಿಗೋಸ್ಕರ ಇದ್ದೆ. ದಿನ ಇವ್ರ ಜಗಳ ನೋಡಿ ನನ್ನ ಮಗಳು ಬಂದು ನಾನು ಸಾಯ್ತೀನಿ, ಸಾಯ್ತೀನಿ ಅಂತ ಹೇಳ್ತಾ ಇದ್ಳು. ಏನೋ ಮಾತಿಗೆ ಅಂತಾ ನಾನು ಇದ್ದೆ. ಆದ್ರೆ ಇವತ್ತು ನನ್ನ ಹತ್ರ ಬಂದ್ಳು, ನನ್ನತ್ತು ಕರ್ಕೊಂಡು ಆ ಫ್ಯಾನ್ಗೆ ನೇತಾಕಿ (ಬಿಕ್ಕಳಿಸಿ ಅತ್ತಿತ್ತು) ನನ್ನ ಕೂಗು ಅವ್ಳಿಗೆ ಕೇಳಿಸ್ಲೇ ಇಲ್ಲ. ಬೇಡ ಮಗ್ಳೆ ಅಂತ ಗಂಟಲು ಬೀರಿ ಕೂಗ್ದೇ. ನನ್ನ ಮಡಿಲಲ್ಲಿ ಲಾಲಿ ಹಾಡಿ ಮಲಗಿಸ್ತಿದ್ದೆ ಅವ. ಆದ್ರೆ ಇವತ್ತು ನನ್ನಿಂದಾನೇ ಚಿರ ನಿದ್ರೆಗೆ ಹೋದ್ಳು. ನನ್ ಮಗ್ಳು ಬೇಕು ನಂಗೆ ಬೇಕು,"


ಆಕ್ರಂದನ ಮತ್ತೂ ಜೋರಾಯಿತು.


"ನನ್ನ ಕ್ಷಮಿಸು. ತಿಳಿದೇ ನಿನಗೆ ಏನೇನೋ ಹೇಳ್ಬಿಟ್ಟೆ"


"ಪರ್ವಾಗಿಲ್ಲ ಬಿಡಿ ಟೀಚರ್. ಎಲ್ಲಾರ ಕಣ್ಣಿಗೂ ನಾನು ಇಂದು ದೋಷಿಯಾಗಿ ನಿಂತಿದ್ದೀನಿ. ಕೊನೆದಾಗಿ ನನ್ ಮಗಳ ಮುಖ ನೋಡ್ಬೇಕು ಕರ್ಕೊಂಡು ಹೋಗಿ" 

ಎಂದಾಗ ಸೀರೆಗೆ ಸಾಂತ್ವನ ಹೇಳಿ ಮಸಣದ ಕಡೆಗೆ ಹೆಜ್ಜೆ ಇಟ್ಟಳು ಸವಿತಾ. ಆತುರವಾಗಿ ಓಡಿದಳು. ಜನರ ಗುಂಪು ಅಲ್ಲಿ ಸೇರಿತ್ತು. ಬೇಗ ನಡೆದಳು ಗುಂಪನ್ನ ತೂರಿ ಮುಂದೆ ಹೋದಳು. ಆದರೆ ಸಮಯ ಮೀರಿತ್ತು. ಮನ್ವಿತಾ ದೇಹಕ್ಕೆ ಆಗಷ್ಟೇ ಅವರ ತಂದೆ ಅಗ್ನಿಸ್ಪರ್ಶ ಮಾಡಿಬಿಟ್ಟರು. ಕೊನೆಗೂ ಇವರಿಬ್ಬರಿಗೂ ಮನ್ವಿತಾ ಮುಖದರ್ಶನ ಆಗಲೇ ಇಲ್ಲ. ಇಬ್ಬರಿಗೂ ದುಃಖ ತಡೆಯಲಾಗಲಿಲ್ಲ.


"ನೋಡಿ ಟೀಚರ್ ಒಂದು ಚೂರು ಬೆಂಕಿ ತಾಗಿದ್ರೆ ಬಂದು ಉರಿ ಅಂತ ಅಳ್ತಾ ಇದ್ಳು ಈಗ ಅವಳನ್ನೇ ಬೆಂಕಿಲಿ ಸುಟ್ಟು ಬಿಟ್ರಲ್ಲ"


ಅಲ್ಲೇ ದುಃಖಿಸುತ್ತಿದ್ದ ಮನ್ವಿತಾ ತಂದೆ-ತಾಯಿಯನ್ನು ನೋಡಿ ಸವಿತಾಗೆ ಕೋಪ ತಡೆಯಲಾಗಲಿಲ್ಲ.


"ಈಗ ಅಳ್ತೀದ್ದಾರೆ, ಆದ್ರೆ ಏನು ಪ್ರಯೋಜನ, ಮನ್ವಿತಾ ಮತ್ತೆ ಬರ್ತಾಳಾ? ಕೊನೆಗೂ ಅವಳ ಮುಖ ನೋಡೋ ಭಾಗ್ಯ ಕೂಡ ಇಲ್ಲ. ಅದು ನನ್ನಿಂದಾನೆ, ನಾನೇ ತಡ ಮಾಡಿದ್ದು ಕ್ಷಮಿಸು"



ಅಲ್ಲಿದ್ದ ಜನರೆಲ್ಲ ' ಹೀಗಾಗಬಾರದಿತ್ತು ' ಎಂದು ಒಂದೆರಡು ಕಣ್ಣೀರ ಹನಿಯ ಜಾರಿಸಿ ತಮ್ಮ ಮನೆಯ ದಾರಿ ಹಿಡಿದರು.



"ನನ್ನ ಮಗಳನ್ನ ಬಿಟ್ಟು ನಾನು ಇರಲ್ಲ ಟೀಚರ್. ಅವ್ಳು ಅಷ್ಟೇ ಯಾವತ್ತೂ ನನ್ನ ಬಿಟ್ಟು ಇರ್ತಾ ಇರ್ಲಿಲ್ಲ"



ಸವಿತಾಳ ಕೈಯಲ್ಲಿದ್ದ ಸೀರೆ ಹಾರಿ ಹೋಯಿತು. ಮೇಲೆ ಹಾರಿ-ಹಾರಿ ಉರಿಯುತ್ತಿದ್ದ ಬೆಂಕಿಯಲ್ಲಿ ಆಹುತಿ ಆಯಿತು. ಮನ್ವಿತಾ ಉಸಿರು ಹೋದ ದಿಕ್ಕನ್ನೇ ಆ ಸೀರೆಯು ಹಿಂಬಾಲಿಸಿತು. ಇಬ್ಬರ ಆತ್ಮಗಳು ಒಂದಾದವು. ಜಾರಿ ಹೋಗುತ್ತಿದ್ದ ಆ ರವಿಯು ಈ ದೃಶ್ಯ ಕಂಡು ಮರುಗಿದ. ಕರುಣಾಮಯಿ ಹೃದಯಕ್ಕೆ ಅನಂತ ಧನ್ಯವಾದ ಸಲ್ಲಿಸಿ ತನ್ನೊಡನೆ ಕರೆದುಕೊಂಡು ನಡೆದ. 


ಹುಟ್ಟಿನಿಂದಲೂ ಜೊತೆಗಿದ್ದ ಈ ಸೀರೆ ಸಾವಿನಲ್ಲೂ ಮನ್ವಿತಾ ಜೊತೆಯಾಯಿತು. ಸವಿತಾ ಎಷ್ಟೇ ಕೂಗಿಕೊಂಡರು ಕೇಳಿಸಿಕೊಳ್ಳಲಿಲ್ಲ. ಆ ದೃಶ್ಯ ನೋಡಿ ಹೃದಯವೇ ಒಡೆದಂತಾಯ್ತು ಆಕೆಗೆ.


"ನಿಜಕ್ಕೂ ನೀನು ಕರುಣಾಮಯಿ


ಎಂಬ ಮಾತಷ್ಟೇ ಅವಳ ಉದ್ಗಾರವಾಯಿತು. ಜೊತೆಗೆ 

ಕಣ್ಣೀರು ಬೆರೆತಿತ್ತು.


*********


ಕೊನೆಗೂ ಸಾವಿನಲ್ಲೂ ಈ ತಾಯಿ, ತನ್ನ ಮಗಳನ್ನ ಹಿಂಬಾಲಿಸಿ ನಡೆದೇ ಬಿಟ್ಟಳು.


ಮುಕ್ತಾಯ.






Rate this content
Log in

Similar kannada story from Drama