ಹಂಸವೇಣಿ ಕುಲಾಲ್

Classics Inspirational Others

4  

ಹಂಸವೇಣಿ ಕುಲಾಲ್

Classics Inspirational Others

ಸುವ್ವಿ ಸುವ್ವಲಾಲಿ - ೧

ಸುವ್ವಿ ಸುವ್ವಲಾಲಿ - ೧

3 mins
1.3K



ಅಳುವ ಕಂದನ ಸ್ವರ ಕೇಳಿಸುತ್ತಿದೆ. ಆ ಧ್ವನಿಯು ಎಚ್ಚರಿಕೆಯ ಕರೆ ಘಂಟೆ ಅರ್ಜುನ್ ಪಾಲಿಗೆ.


ಇಂದು ಅವನ ಮುದ್ದು ಮಗಳಿಗೆ ಒಂದು ವರ್ಷ ತುಂಬಿದ ಸಂಭ್ರಮ. ಅವಳನ್ನ ತನ್ನ ತೋಳುಗಳಲ್ಲಿ ಬಂಧಿಸಿ, ಮುದ್ದಿಸಿ, ಬಾಟಲ್ ನಲ್ಲಿ ಹಾಲು ನೀಡಿದ. ಹೊಟ್ಟೆ ತುಂಬಿದ ಸಂತಸಕ್ಕೆ ಕಿಲ-ಕಿಲ ಎಂದು ನಕ್ಕಿತು ಕಂದಮ್ಮ. ಅವಳನ್ನ ಮುದ್ದಾಗಿ ಅಲಂಕರಿಸಿ ಕಣ್ಣು ತುಂಬಿಕೊಂಡ ಆತ.


ಅರ್ಜುನ್ ಗಣಿತ ಪ್ರಾಧ್ಯಾಪಕ. ಸೀತಾರ ಹಾಗೂ ರಾಜಾರಾಂ ಅವರ ದ್ವಿತೀಯ ಪುತ್ರ. ಕರಣ್ ಇವರ ಮೊದಲನೇ ಪುತ್ರ. ಕೊನೆಯವಳು ಅಂಕಿತ.


ಅರ್ಜುನ್ ಪ್ರಾಧ್ಯಾಪಕ ವೃತ್ತಜೀವನವನ್ನು ಪ್ರಾರಂಭಿಸಿದಾಗ, ಅವನ ಬಾಳಿಗೆ ಬಲಗಾಲಿಟ್ಟು ಬಂದವಳೇ ಅನಘ. ಎರಡು ಕುಟುಂಬಗಳ ವಿರೋಧದ ನಡುವೆಯೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


ಅನಘ ಕುಟುಂಬ ಈ ಮದುವೆಯ ನಂತರ ಮಗಳ ಜೊತೆಗಿನ ಸಂಬಂಧವನ್ನೇ ತೊರೆದರು. ಒಲ್ಲದ ಮನಸ್ಸಿನಿಂದಲೇ ಅರ್ಜುನ್ ಕುಟುಂಬ ಅವಳನ್ನ ಸ್ವೀಕರಿಸಿತು.



ಪ್ರೀತಿಯ ಸುಮಧುರ ಗಾನಲಹರಿ ಅವರ ಜೀವನದ ಮೆಟ್ಟಿಲಾಯಿತು. ಪತಿಯ ಮನದ ಆಲಯದಲ್ಲಿ ಸ್ವರ್ಗವನ್ನೇ ಕಂಡಳು ಆಕೆ. ಪತ್ನಿಯ ಪ್ರೇಮದ ಸಾಗರದಲ್ಲಿ ದಿನಗಳನ್ನೆ ಮರೆತ ಆತ. ಇವರ ಸುಖ ಸಂಸಾರದ ಗುರುತ್ತಿನಂತೆ ಅನಘ ತಾಯಿಯಾಗುವ ಸೂಚನೆ ನೀಡಿದಳು. ಅರ್ಜುನ್ ಗಂತೂ ಕಾಲು ನಿಲ್ಲುತ್ತಲೇ ಇಲ್ಲ. ಆಕೆಯನ್ನು ನೆಲದ ಮೇಲೆ ಓಡಾಡಲು ಬಿಡುತ್ತಿರಲಿಲ್ಲ. ಕಣ್ಣಿನ ರೆಪ್ಪೆಯಂತೆ ನೋಡಿಕೊಳ್ಳುತ್ತಿದ್ದ.


ಇಂದಿಗೆ ಒಂದು ವರ್ಷ ಅರ್ಜುನ್ ಜೀವನದಲ್ಲಿ ಬದಲಾವಣೆಯ ತಿರುವು ದೊರಕಿ. ಅನಘ ಹೆಣ್ಣು ಮಗುವಿಗೆ ಜನುಮ ನೀಡಿದಳು. ಇದರೊಂದಿಗೆ ಮಗುವಿಗೆ ಜನ್ಮ ನೀಡುವ ಸಮಯದಿ ರಕ್ತಸ್ರಾವ ಹೆಚ್ಚಾಗಿ ಆಕೆ ಕಣ್ಣು ಮುಚ್ಚಿದಳು.


ಅನಾಘಳನ್ನು ಕಳೆದುಕೊಂಡರು ಅವಳು ನೀಡಿ ಹೋದ ಆ ಕಂದಮ್ಮ ಅರ್ಜುನ್ ಗೆ ಈಗ ಪ್ರಪಂಚ. ಪ್ರಪಂಚದ ಜೊತೆಗೆ ಸಂವಹನ ದೊರೆಯುವ ಸಮಯದಲ್ಲೇ ತಾಯಿಯ ಲಾಲಿ ಹಾಡನ್ನ ಕೇಳೋ ಭಾಗ್ಯ ಕಳೆದುಕೊಂಡ ಆ ಮಗುವನ್ನು, ತಂದೆಯ ಪ್ರೀತಿಯ ಜೊತೆಗೆ ತಾಯಿಯ ವಾತ್ಸಲ್ಯ, ಮಮತೆಯನ್ನು ಕೊಟ್ಟು ತಾನೊಬ್ಬನೇ ಬೆಳೆಸಬೇಕಾದ ಪ್ರತಿಜ್ಞೆ ಆತ ಮಾಡಿದ. ಮಗುವಿನ ತುಂಟಾಟ ಮಡದಿಯ ಅಗಲುವಿಕೆಯ ನೋವನ್ನು ತಕ್ಕಮಟ್ಟಿಗೆ ಮರೆಮಾಚಿಸಿತು.



ಅರ್ಜುನ್ ಕೆನ್ನೆಗೆ ಕಂದಮ್ಮ ತನ್ನ ಮುದ್ದು ತುಟಿಯ ಸೋಕಿಸಿದಾಗ ಮಡದಿ ಭಾವಚಿತ್ರದ ಮುಂದೆ ನಿಂತು ಭೂತಕಾಲದ ನೆನಪಲ್ಲಿ ಕಳೆದು ಹೋಗಿದ್ದ ಆತ ಎಚ್ಚರಗೊಂಡ. ಕಣ್ಣಿನ ಅಂಚಿನಲ್ಲಿ ಹನಿಯ ಬಿಂದುಗಳು ಸಂಗ್ರಹವಾಗಿತು. ಮಗಳ ಎರಡು ಕೆನ್ನೆಗೆ ಮುತ್ತಿಟ್ಟ.


"ಅನು ನಮ್ಮ ಮಗಳು ಎಲ್ಲಾ ನಿನ್ನ ತರಾನೇ ಕಣೆ. ನಿನ್ನ ಆಸೆಯಂತೆ ನಾನು, ನಮ್ಮ ಮಗುವನ್ನ ನೋಡಿಕೊಳ್ಳುತ್ತ ಇದ್ದೀನಿ ಅಲ್ವಾ? ಇವರೆಲ್ಲರ ಕಣ್ಣಿಗೆ ನೀನು ಇಲ್ಲದೆ ಇರಬಹುದು; ನನ್ನ ಮತ್ತೆ ನಮ್ಮ ಕಂದನ ಜೊತೆ ನೀನು ಇದ್ದೆ ಇದ್ದೀಯ ಅನ್ನೋ ನಂಬಿಕೆ ನನಗೆ ಇದೆ"

ಭಾವುಕನಾದ.



"ಬಾ... ಅ..."

ಮುದ್ದಾಗಿ ಅವಳ ಭಾಷೆಯಲ್ಲಿ ನುಡಿದಳು ಕಂದಮ್ಮ. ಆ ಪುಟ್ಟ ಕೈಗಳಿಗೆ ಅಷ್ಟೇ ಪುಟ್ಟದಾದ ಬಳೆಯ ತೊಡಿಸಿದ್ದ ಅರ್ಜುನ್. ಅದು ಆ ಕಂದನ ಕಣ್ಣುಗಳಿಗೆ ಹೊಸದಾಗಿ ಕಂಡಿತ್ತು. ತನ್ನ ಬಾಯಿಯಿಂದ ಅದನ್ನು ಕಚ್ಚಲು ಶುರು ಮಾಡಿದಳು.


"ತುಂಟಿ..."

ಮತ್ತೊಮ್ಮೆ ಮಗಳ ಮೋಗವನೆಲ್ಲಾ ಮುದ್ದಿಸಿ ಕೊಠಡಿಯಿಂದ ಹೊರಗೆ ನಡೆದ.


ಮಗುವಿನ ಜನುಮ ದಿನವಾದ್ದರಿಂದ ಮನೆಯಲ್ಲಿ ಪೂಜೆಯನ್ನು ಏರ್ಪಡಿಸಿದ್ದ ಅರ್ಜುನ್. ಇದಂತೂ ಮನೆಯ ಯಾರಿಗೂ ಇಷ್ಟವಿಲ್ಲ. ಅರ್ಜುನ್ ಮಮತೆ, ವಾತ್ಸಲ್ಯ, ಪ್ರೀತಿ ಅಷ್ಟೇ ಈ ಮನೆಯಲ್ಲಿ ಆ ಕಂದಮ್ಮ ಕಂಡಿರುವುದು. ಎಲ್ಲರಿಂದ ತಿರಸ್ಕೃತ ನೋಟ ಮಗುವಿನ ಪಾಲಿಗೆ. ಅರ್ಜುನ್ ಮುಖವನ್ನು ನೋಡಿ ಬಾಯಿಗೆ ಬೀಗ ಹಾಕಿಕೊಂಡಿರುವರು ಮನೆಯ ಸದಸ್ಯರು. 


ಅರ್ಜುನ್ ಕಾಲೇಜ್ ಗೆ ಹೋದಾಗ ಅವನ ತಾಯಿ ಸೀತಾರಾ ಅವರ ಬಳಿ ಮಾತ್ರ ಹೋಗುತ್ತಿದ್ದಳು ಈ ಪುಟ್ಟಕಂದಮ್ಮ. ಬೇರೆಯವರಿಗೆ ಆ ಮಗುವಿನ ಅಳು ಕಿರಿಕಿರಿ ಎನಿಸುತ್ತಿತ್ತು.



       *********************



"ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||"


ಗುರುರಾಘವೇಂದ್ರರ ಶ್ಲೋಕದ ಜೊತೆ ಪೂಜೆಯನ್ನು ಮಾಡಿ ಮಂಗಳಾರತಿ ತಂದಳು ಅಮೃತಾ.



ಅಮೃತಾ, ಕೋಟ್ಯಾಧಿಪತಿಗಳ ಸಾಲಿನಲ್ಲಿ ಒಬ್ಬರೆಂದು ಪ್ರಸಿದ್ಧರಾದ ಗುಣಪಾಲ ಹಾಗೂ ಮಾಲತಿ ಅವರ ದ್ವಿತೀಯ ಪುತ್ರಿ. ಆಕಾಶ್ ಇವರ ಮೊದಲ ಪುತ್ರ. ತಂದೆಯ ವ್ಯವಹಾರ ಮುಂದುವರೆಸಿಕೊಂಡು ಹೋಗುತ್ತಿರುವ.

ವೈದ್ಯಕೀಯ, ಅಮೃತಾ ಅತೀ ಆಸೆ ಪಟ್ಟು ಆರಿಸಿದ ಕ್ಷೇತ್ರ. ಪಸ್ತುತ ಆಕೆ ಮಕ್ಕಳ ತಜ್ಞೆಯಾಗಿದ್ದಾಳೆ. 



ತಂದೆ-ತಾಯಿ ಮತ್ತು ತನ್ನ ಪ್ರೀತಿಯ ಅಣ್ಣನಿಗೆ ಮಂಗಳಾರತಿ ನೀಡಿದ್ದಳು. ಮನೆಯ ರಾಜಕುಮಾರಿಯ ಜನುಮ ದಿನದ ಸಂಭ್ರಮ ಇಂದು. ಅಮೃತಾ ತಾಯಿಯ ಮಡಿಲಿಗೆ ಸೇರಿ ಇಂದಿಗೆ ಇಪ್ಪತ್ತಾರು ವರ್ಷಗಳು ತುಂಬಿದೆ. 


" ಜನುಮ ದಿನದ ಶುಭಾಷಯಗಳು ಮಗಳೆ"

ಗುಣಪಾಲ ಅವರು ಮಗಳ ಹಣೆಗೆ ಮುತ್ತಿಟ್ಟರು. ಜೊತೆಗೆ ಅವಳ ಕೈಗೆ ಉಡುಗೊರೆಯಾಗಿ ಹೊಸದಾದ ಕಾರಿನ ಕೀ ನೀಡಿದರು.


"(ಸಂತಸದಲ್ಲಿ) ಥ್ಯಾಂಕ್ಸ್ ಅಪ್ಪ"

ಎಂದೇಳಿ ಅವರನ್ನ ತಬ್ಬಿದಳು.


"ಅಮ್ಮು ಪುಟ್ಟ, ಇಷ್ಟಕ್ಕೇ ಫುಲ್ ಖುಷಿ ಆಗ್ಬೇಡ. ನಿನ್ನ ಅಣ್ಣ ಅದಕ್ಕಿಂತ ನಿನಗೆ ಇಷ್ಟ ಆಗೋ ಗಿಫ್ಟ್ ಕೊಡ್ತಾನೆ"


ತಂಗಿಯ ಕೈ ಎಳೆದು,

"ಹ್ಯಾಪಿ ಬರ್ತ್ ಡೇ ಅಮ್ಮು"

ಹಣೆಗೆ ಅಣ್ಣನ ಪ್ರೀತಿಯ ಮುತ್ತಿನ ಮುದ್ರೆ ಒತ್ತಿದ. ನಂತರ ಬ್ಲಾಂಕ್ ಚೆಕ್ಕಿಗೆ ಸಹಿ ಹಾಕಿ ಅವಳಿಗೆ ಕೊಟ್ಟ.


"ಅಮ್ಮು... ನಿನ್ನ ಫ್ರೀ ಕ್ಯಾಂಪಸ್ ಗೆ. ಅದೆಷ್ಟು ಬೇಕೋ ನೀನೇ ಫಿಲ್ ಮಾಡ್ಕೋ"

ತಂದೆಯ ಮುಂದೆ ಅವಳಿಗೆ ತನ್ನ ಉಡುಗೊರೆ ಇಷ್ಟವಾಗಿದೆ ಎಂದು ಉಬ್ಬಿದ.


"ನನ್ನ ಮಗಳಿಗೆ ಅಮ್ಮನ ಕಡೆಯಿಂದ ಇದು"

ಅವಳ ಕತ್ತಿಗೆ ಚಿನ್ನದ ಸರ ಹಾಕಿ ಮುತ್ತು ನೀಡಿದರು.



ಭಾವುಕದ ಗಳಿಗೆ ಅವಳಿಗೆ. ಅವರ ಮುಂದೆ ತನ್ನ ಭಾವನೆಗಳನ್ನು ಅದುಮಿ ಹಿಡಿದಳು.


"ಹಾಸ್ಪಿಟಲ್ ಗೆ ಹೋಗ್ಬೇಕು ಲೇಟ್ ಆಗುತ್ತೆ"

ಎಂದೇಳಿ ಅಲ್ಲಿಂದ ನಡೆದಳು.


"ನಾನು ಇವಳಿಗೆ ಲಾಲಿ ಹಾಡಿ ಮಲಗಿಸ್ತಾ ಇದ್ದಿದ್ದು ಕಣ್ಣ ಮುಂದೆ ಬರ್ತಾ ಇದೆ. ಆಗ್ಲೇ ಇವಳಿಗೆ ಇಪ್ಪತ್ತಾರು ವರ್ಷ ಆಗಿದೆ ಅಂದ್ರೆ ನಂಬೋದಕ್ಕೆ ಆಗ್ತಾ ಇಲ್ಲ"

ನಡೆದು ಹೋಗುತ್ತಿದ್ದ ಮಗಳನ್ನ ಕಂಡು ತಾಯಿಯ ಮನಸ್ಸು ಈ ಮಾತುಗಳನ್ನು ನುಡಿಯಿತು.


ತಮ್ಮ ಪತ್ನಿಯ ಮಾತುಗಳಿಗೆ ನಕ್ಕರು ಗುಣಪಾಲ.


ತನ್ನ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡ ಅಮೃತಾ. ಇಷ್ಟು ಸಮಯ ತಡೆದಿದ್ದ ತನ್ನ ನೋವನ್ನು ಕಣ್ಣೀರಿನ ಮೂಲಕ ಹೊರ ಹಾಕಿದಳು.

ಕಾರಣ! ಇಂತಹ ರಾಜಕುಮಾರಿಯ ಮನಸ್ಸಲ್ಲಿ ಇರುವ ನೋವಾದರೂ ಏನು?


ಹೌದು, ಈ ದಿನಕ್ಕೆ ಎರಡು ವರ್ಷಗಳ ಹಿಂದೆ ಅವಳ ಜೀವನದಲ್ಲಿ ಅದೊಂದು ಘಟನೆ ನಡೆದಿದೆ. ಅದೇ ಅವಳನ್ನು ಸುಡುತ್ತಿರುವ ನೋವು. ಮನಸ್ಸಿನಲ್ಲೇ ಅದನ್ನೇ ನೆನೆದು ಕೊರಗುತ್ತಿದ್ದಾಳೆ. ಅವಳ ಮನಸ್ಸಿನ ಜ್ವಾಲಾಮುಖಿ ಎಲ್ಲರ ಮುಂದೆ ಪುಟ್ಟಿದೆಬ್ಬಿಸಲು ಅವಳಿಂದ ಆಗುತ್ತಿಲ್ಲ.


ಅವಳ ಮನದಲ್ಲಿ ಅಡಗಿರುವ ಆ ನೋವು ಅದೇನೆಂದು ಮುಂದೆ ತಿಳಿಯುತ್ತದೆ.


ಆ ನೋವನ್ನು ಕಣ್ಣೀರಿನ ಮೂಲಕ ಹೊರ ಹಾಕಿ, ಮನಸನ್ನ ಸಂತೈಸಿ ಮೊದಲಿನಂತೆ ಹೊರ ಬಂದಳು. ಎಲ್ಲರ ಜೊತೆ ಪ್ರೀತಿಯ ಮಾತುಗಳನ್ನು ಆಡುತ್ತಾ ಬೆಳಗ್ಗಿನ ಉಪಹಾರ ಮುಗಿಸಿದಳು. ನಂತರದಲ್ಲಿ ಆಸ್ಪತ್ರೆಯ ಕಡೆಗೆ ನಡೆದಳು.


ಆ ನಗುವಿನ ಮುಖವಾಡದ ಹಿಂದೆ ಇರುವ ಅವಳ ಮನದ ನೋವು ಯಾರಿಗೂ ತಿಳಿದಿಲ್ಲ.


       *********************


ಮುಂದುವರೆಯುತ್ತದೆ......






Rate this content
Log in

Similar kannada story from Classics