ಹಂಸವೇಣಿ ಕುಲಾಲ್

Drama Tragedy

3  

ಹಂಸವೇಣಿ ಕುಲಾಲ್

Drama Tragedy

ಮಿಡಿದ ಹೃದಯಗಳು

ಮಿಡಿದ ಹೃದಯಗಳು

4 mins
406


ಓ ಹೃದಯ, ಕೇಳಿದೆಯಾ?

ಪ್ರೀತಿ ನಿನ್ನ ಪಾಲಲ್ಲ, ಪ್ರೀತಿ ಇನ್ನು ಉಳಿದಿಲ್ಲ

ಓ ಹೃದಯ, ಕೇಳಿದೆಯಾ?

ಪ್ರೀತಿ ನಿನ್ನ ಪಾಲಲ್ಲ, ಪ್ರೀತಿ ಇನ್ನು ಉಳಿದಿಲ್ಲ


"ಅದೇನೋ ಈ ಹಾಡು ಮೊದಲಿನಿಂದಲೂ ನನಗೆ ಅಚ್ಚು ಮೆಚ್ಚು. ಬಹುಶಃ ಇದರ ಸಾಹಿತ್ಯಕ್ಕಿಂತ ಇದರ ಮ್ಯೂಸಿಕ್ ಬೀಟ್ಸ್ ನನ್ನನ್ನ ಅಟ್ರಾಕ್ಷನ್ ಮಾಡಿರಬಹುದು. ಆದ್ರೆ ಈ ದಿನ (ಬಿಕ್ಕಳಿಕೆ) ಈ ಸಾಹಿತ್ಯ ನನ್ನ ಜೀವನಕ್ಕೆ ಹೇಳಿ ಮಾಡಿಸಿದೆ ಅನಿಸ್ತಿದೆ"



ಅಲೆಗಳ ಸ್ಪರ್ಶ ಕಾಲಿಗೆ ಬಂದು ತಾಕುತ್ತಿದೆ. ಅವುಗಳ ಜೊತೆ ತನ್ನ ಮನಸ್ಸನ್ನ ತೆರೆದಿಡೋ ಹಂಬಲದಲ್ಲಿರುವಳು ಅಭಿಜ್ಞಾ


"ಇಷ್ಟು ದಿನ ದೂರದಿಂದ ನಿಮ್ಮನ್ನ ನೋಡ್ತಿದ್ದೆ. ಈ ದಿನ ನಿಮ್ಮನ್ನ ಗಟ್ಟಿಯಾಗಿ ಅಪ್ಪಿಕೊಳ್ಳಬೇಕು ಅನಿಸ್ತಿದೆ. ತಿಳೀತಾ, ನಾನ್ಯಾರೆಂದು?"


"ನಾಗವಲ್ಲಿ ಹ್ಹ,,,ಹ್ಹ,,, ನನ್ನ ಅಭಿಜಿತ್ ನೀಡಿದ ಹೆಸರು ಇದು. ಅವನ ಪರಿಚಯ ನಿಮಗೆ ಇದೆ ಅಲ್ವಾ? ಅವ್ನಿಗೆ ನೀವ್ ಅಂದ್ರೆ ಇಷ್ಟ ಆದ್ರೆ ನನಗೆ ಭಯ ಇತ್ತು. ಆದ್ರೆ ಈ ದಿನ ಇಲ್ಲ"


"ಯಾಕೋ ನನ್ನ ಜೀವನದ ಪುಟಗಳನ್ನ ತೆರೆಯಬೇಕು ಅನಿಸ್ತಿದೆ. ಕೇಳ್ತೀರಾ? ಅಪ್ಪ- ಅಮ್ಮನ ಪ್ರೀತಿಯ ತನುಜೆ ನಾನು. ನನ್ನ ಬಾಲ್ಯದ ನೆನಪು ಅನ್ನೋದೇನಾದರೂ ಇದ್ದಲ್ಲಿ ಅದು ಅಭಿಜಿತ್ ಮಾತ್ರ. ನನಗಿಂತ ಐದು ವರ್ಷ ದೊಡ್ಡವನು. ಆದ್ರೆ ನನ್ನ ಮಾತೇ ಅವನಿಗೆ ವೇದ ವಾಕ್ಯ. ಅಭಿಜಿತ್ ತಂದೆ ಇಹಲೋಕ ತ್ಯಜಿಸಿದ ನಂತರ, ನನ್ನ ಅಪ್ಪ ಅವನಿಗೆ ಜಾಸ್ತಿ ಇಂಪಾರ್ಟೆಂಟ್ ಕೊಡೋಕ್ಕೆ ಸ್ಟಾರ್ಟ್ ಮಾಡಿದ್ರು, ಆಗ ನನಗೆ ಅವನ ಮೇಲೆ ತುಂಬಾ ಕೋಪ ಬರ್ತಿತ್ತು. ಆದ್ರೆ ಅವನು ತುಂಬಾ ಮೃದು ಸ್ವಭಾವದ ಹುಡುಗ. ಅವನಿಗೆ ನನ್ನ ಮೇಲಿದ್ದ ಕಾಳಜಿ ಎಷ್ಟು ಅಂದ್ರೆ ಪದಗಳೇ ಇಲ್ಲ ಆ ದಿನಗಳನ್ನ ವರ್ಣಿಸೋಕ್ಕೆ ನನ್ನಲ್ಲಿ. ಜೀವನದ ಪ್ರತಿ ವಿಷಯದಲ್ಲೂ ನನ್ನ ಹೆಜ್ಜೆಯ ಜೊತೆಗೆ ಹೆಜ್ಜೆ ಇಡುತ್ತಾ ಬಂದ. ಆ ನಂತರ ಅವನ ಮೇಲಿದ್ದ ಕೋಪ ಸ್ವಲ್ಪ, ಸ್ವಲ್ಪ ಬದಲಾಯ್ತು. ನನ್ನಲ್ಲಿ ಭಾವನೆಗಳು ಯಾವಾಗ ಚಿಗುರುವುದಕ್ಕೆ ಶುರುಮಾಡ್ತು ನನಗೆ ಅರಿವಾಗಲೇ ಇಲ್ಲ. ಆದರೂ ಅದೊಂತರ ಅರಿಯದ ಸಿಹಿ ವೇದನೆ. ಒಂದು ಕ್ಷಣಕ್ಕೂ ಇಬ್ಬರೂ ದೂರ-ದೂರ ಇರೋದಕ್ಕೆ ಇಷ್ಟ ಪಡ್ತಾ ಇರ್ಲಿಲ್ಲ. ನನ್ನ ಕಾಟ ತಡೆಯುವುದಕ್ಕೆ ಆಗದೆ ನಾಗವಲ್ಲಿ ಅಂತ ಹೆಸರು ಕೊಟ್ಟಿದ್ದೆ ಅವನು"


"ಅವನೆಡೆಗಿದ್ದ ವಿಶೇಷವಾದ ಭಾವನೆ ಪ್ರೀತಿ ಎಂದರಿವಾಗಲು ತುಂಬಾ ಸಮಯ ಹಿಡಿಯಲಿಲ್ಲ. ಅದೇನೋ ಅಭಿ ಹತ್ತಿರ ಇದ್ದ ಅಂದ್ರೆ ಹೃದಯ ತನಗೆ ತಾನೇ ಜೋರಾಗಿ ಮಿಡಿಯಲು ಆರಂಭಿಸುತ್ತೆ. ನನ್ನ ಮನಸ್ಸಿನ ಭಾವನೆಯನ್ನು ಅವನಲ್ಲಿ ಹೇಳ್ಕೋಬೇಕು, ಅವನಿಗೂ ನಾನಂದ್ರೆ ಇಷ್ಟ ಎಂದು ಮನದಲ್ಲೇ ಕನಸುಗಳನ್ನು ಹೆಣೆಯತೊಡಗಿದ್ದೆ"


"ಆದರೆ ಯಾವ ಅಂಜಿಕೆ ನನ್ನ ಬಾಯಿಂದ ಪದಗಳನ್ನು ಕಟ್ಟಿ ಹಾಕಿತೋ ನನಗಿಂದಿಗೂ ತಿಳಿದಿಲ್ಲ..! 

ಸತತ ಪ್ರಯತ್ನಗಳ ನಂತರವೂ ನನ್ನ ಮನದ ಭಾವನೆ ಅವನಿಗೆ ಹೇಳಲಾಗಲೇ ಇಲ್ಲ. ಹೀಗಿರುವಂತೆ ಒಂದು ದಿನ ಅಭಿ ತಾನಾಗೇ ಬಂದು, ನಾನೊಬ್ಬ ಹುಡುಗಿನ ಇಷ್ಟ ಪಡ್ತಾ ಇದ್ದೀನಿ ಅಂದಾಗಲೂ ನನಗೆ ಬೇಜಾರಾಗಲಿಲ್ಲ, ಕೋಪಾನೂ ಬರಲಿಲ್ಲ. ಯಾಕಂದ್ರೆ ನನ್ನ ಮಟ್ಟಿಗೆ ಅವನ ಜೀವನದಲ್ಲಿ ನಾನೊಬ್ಬಳೇ ನಾಯಕಿಯಾಗಿದ್ದೆ. ಅವನ ಮಾತು ಕೇಳಿ ಅಂದ್ರೆ ಅಭಿ ನನ್ನನ್ನು ಪ್ರೀತಿಸ್ತಿದ್ದಾನೆ ಎಂದು ನನಗೆ ನಾನೇ ಪ್ರೀತಿಯ ರೆಕ್ಕೆ ಕಟ್ಟಿಕೊಂಡು ಆಕಾಶದ ಎತ್ತರಕ್ಕೆ ಹಾರಾಡಿ ಭೂಮಂಡಲವನ್ನೆಲ್ಲಾ ಮನದಲ್ಲೇ ಸುತ್ತಿ ಬಂದಿದ್ದೆ"


"ಆದರೂ ಅವನ ಮನದಲ್ಲೇನಿದೆ ಎಂಬುದನ್ನು ತಿಳಿಯಲಾಗಲಿ ಅಥವಾ ನನ್ನ ಮನದ್ದಲ್ಲಿರೋದನ್ನಾಗಲಿ ಹೇಳುವ ಪ್ರಯತ್ನ ನಾನು ಮಾಡಲೇ ಇಲ್ಲ"



ದಿನಗಳು ಸಾಗಿತ್ತು, ಯಾರ ಕೈಗೂ ಸಿಗದೆ.. 


"ಒಂದು ತಿಂಗಳ ಹಿಂದೆ ತಿಳಿದ ಸತ್ಯ ಕರ್ಣ ಕಠೋರವೆನಿಸಿತ್ತು. ಅಭಿಯ ಹೃದಯದಲ್ಲಿ ಇದ್ದ ಸತ್ಯ.!! 


ಅಭಿ ಇಷ್ಟ ಪಡ್ತಿರೋದು ಮತ್ತು ಇಷ್ಟ ಪಟ್ಟಿರೋದು ಅಭಿಲೋಕ ಎಂಬ ಹುಡುಗಿಯನ್ನು. ಅವಳಿಗೂ ಕೂಡ ಅವನೆಂದರೆ ತುಂಬಾ ಇಷ್ಟ. ನನ್ನ ಹೃದಯದ ಹಕ್ಕಿ ಕಟ್ಟಿಕೊಂಡಿದ್ದ ರೆಕ್ಕೆ ಕತ್ತರಿಸಿಕೊಂಡು ಪ್ರಾಣವನ್ನೇ ಬಿಟ್ಟ ಅನುಭವ"


"ಆದರೂ ಈ ಹೃದಯದಲ್ಲಿ ತುಂಬಾ ಶಕ್ತಿಯಿದೆ. ಇನ್ನೂ ಜೀವಂತವಾಗಿ ಉಸಿರಾಡುತ್ತಿದೆ ಅದಕ್ಕೆ. ಇನ್ನು ಇವರ ಮಧ್ಯೆ ಇರಲು ನನಗೆ ಸಾಧ್ಯವಿಲ್ಲ. ಹಾಗೆಂದು ಅಭಿಯನ್ನು ದೂರುವಂತೆಯೂ ಇಲ್ಲ.. ಕಾರಣ ನಾನ್ಯಾವತ್ತೂ ನನ್ನ ಮನಸ್ಸಿನ ಭಾವನೆ ಅವನಿಗೆ ಹೇಳಲೇ ಇಲ್ಲ.!!


ಮನಸ್ಸಿನ ಭಾವನೆಗಳಿಗೆ ಸಮಾಧಿ ಕಟ್ಟಿ, ಎಲ್ಲರಿಂದ ದೂರವಾಗಿ ಸಾವನ್ನು ಬಯಸಿ ಅಲ್ಲ... ನೆನಪುಗಳಿಂದ ದೂರ ಸರಿಯುವ ಸಲುವಾಗಿ ಎಂಬಿಎ ಮಾಡೋ ನೆಪದಲ್ಲಿ ಫಾರಿನ್'ಗೆ ಹೋಗ್ತಾ ಇದೀನಿ"



ತನ್ನ ನೆನಪುಗಳನ್ನು ಮೆಲುಕು ಹಾಕುತ್ತಾ ಅಲೆಗಳ ನಡುವೆ ಕಳೆದುಹೋಗಿದ್ದವಳನ್ನು ಮೊಬೈಲ್ ಶಬ್ಧ ಎಚ್ಚರಿಸಿ ಮನೆ ಕಡೆಗೆ ಹೆಜ್ಜೆ ಹಾಕುವಂತೆ ಸೂಚಿಸಿತ್ತು.


     ಮರುದಿನ ಅಭಿಜ್ಞಾ ಫಾರಿನ್ಗೆ ಹೊರಟು ನಿಂತಿರುವಳು. ಮೊದಲೇ ಎಲ್ಲಾ ಸಿದ್ಧತೆ ನಡೆದಿತ್ತು. ಎಲ್ಲರೂ ಅವಳನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ..ಅಭಿಜಿತ್ ಹಾಗೂ ಅಭಿಲೋಕ ಕೂಡಾ.


'ಹುಷಾರು ಕಣೇ...'


ಎದುರಲ್ಲಿ ನಿಂತು ಅವನು ಹೇಳಿದಾಗ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಅವಳಿಗೆ ಇರಲಿಲ್ಲ. ಇಷ್ಟು ವರ್ಷಗಳು ಜೊತೆಗಿದ್ದು ಅವಳನ್ನೊಬ್ಬಳನ್ನೇ ಈಗ ಕಳಿಸಿಕೊಡುವುದು ಅವನಿಗೂ ಕಷ್ಟವೇ. ಗಂಟಲು ತುಂಬಿತು...ಸುಮ್ಮನೆ ತಲೆ ಆಡಿಸಿದಳು.


ಅವರಿಂದ ದೂರ ನಡೆದ ಅಭಿಜಿತ್ ಅಲ್ಲಿದ್ದ ಕನ್ನಡಿಯೊಂದರಲ್ಲಿ ಅವಳ ಮುಖವನ್ನೇ ನೋಡುತ್ತಾ ನಿಂತುಬಿಟ್ಟ. ಅವನ ಕಣ್ಣಿನಲ್ಲಿ ಅಶ್ರುಧಾರೆ.


'ಹೇಗೆ ಮನಸ್ಸು ಬಂತು ನಿನಗೆ ನನ್ನನ್ನು ಬಿಟ್ಟು ಹೋಗೋದಕ್ಕೆ? ಒಂದು ಮಾತು ಕೂಡ ಇಲ್ಲದೆ.. ಇಷ್ಟು ಕಠಿಣ ಹೃದಯ ನಿನ್ನದೆಂದು ನಾನಂದುಕೊಂಡಿರಲಿಲ್ಲ'


ಕನ್ನಡಿಯಲ್ಲಿ ಕಾಣುತ್ತಿರುವ ಅವಳ ಪ್ರತಿಬಿಂಬವನ್ನು ಮೆಲ್ಲನೆ ಸ್ಪರ್ಶಿಸಿದ.


"ನಿನ್ನನ್ನಾ ಹೋಗ್ಬೇಡ ಅಂತ ಹೇಳೋ ಧೈರ್ಯ ನನ್ನಲಿಲ್ಲ. ಯಾಕಂದ್ರೆ..? ಯಾಕಂದ್ರೆ, ಈ ಹೃದಯದ ಹೆಸರು ನೀನು. ನನ್ನ ಹೃದಯದಲ್ಲಿ ಮೀಟುವ ಸ್ವರ ನಿನ್ನ ಧ್ವನಿ. ಆದರೆ ನಾನು ನಿಸ್ಸಹಾಯಕ.! ಡ್ಯಾಡಿ, ನಮ್ಮಿಂದ ದೂರ ಆದಾಗ ಅಂಕಲ್.. ನಮಗೆ ಆಶ್ರಯ ನೀಡಿದ್ರು. ಅವರಿಂದ ನಾನು ಈ ಮಟ್ಟಿಗಿದ್ದೇನೆ ಈ ದಿನ. 


ನಿಜ ಹೇಳ್ತೀನಿ ಕಣೋ, ನಾನು ಪ್ರೀತಿಸ್ತಿರೋ ಹುಡುಗಿ ನೀನೇ, ನೀನೇ,,,, ಇದನ್ನ ಹೇಳಬೇಕೆಂದು ಕಾಯ್ತಿದ್ದೆ. ಆದ್ರೆ ನನ್ನ ಪ್ರಯತ್ನಗಳೆಲ್ಲಾ ಸೋತುಹೋಯಿತು, ನಿನ್ನ ಕಣ್ಣನ್ನ ನೋಡುವಾಗ. ಆ ಹುಡುಗಿ ನೀನೆ ಅಂತ ಇನ್ನೇನು ಹೇಳ್ಬೇಕು ಅನ್ನುವಾಗಲೇ, ಅಂಕಲ್ ಬಂದು ಒಂದು ಸತ್ಯ ಹೇಳಿದ್ರು. ನಿನ್ನನ್ನ ಅವರ ಫ್ರೆಂಡ್ ಮಗನಿಗೆ ಮದುವೆ ಮಾಡಿಸ್ತೀನಿ ಎಂದು ಮಾತು ಕೊಟ್ಟಿರುವುದು. ನೀನು ಅವನನ್ನು ಮದುವೆಯಾಗಿ ಸುಖವಾಗಿ ಇರಬಲ್ಲೆ ಎಂಬ ಕನಸನ್ನು ಕಂಡಿದ್ದಾರೆ ಅವರು.

ಅಷ್ಟೇ ಅಲ್ಲದೇ ಅದರ ಜೊತೆಗೆ ಅಂಕಲ್ ನನ್ನನ್ನು ಪ್ರಶ್ನೆ ಮಾಡಿದ್ರು 'ನೀನು ಯಾರನ್ನೋ ಇಷ್ಟ ಪಡ್ತಾ ಇದ್ದೀಯಾ ಅಂತ ಅಭಿ ಹೇಳಿದ್ಲು, ಯಾರು?' ಎಂದು ಕೇಳಿದ್ರು. ಆದರೆ ಏನು ಮಾಡ್ಲಿ? ಇರೋ ಸತ್ಯನಾ ಹೇಳೋಕ್ಕಾಗದೆ ಸುಳ್ಳನ್ನೇ ಸತ್ಯವೆಂದು ಎಲ್ಲರಿಗೂ ಹೇಳಿಬಿಟ್ಟೆ"


"ನಿನ್ನನ್ನು ನನ್ನ ಹೃದಯದಲ್ಲಿಟ್ಟು ಆರಾಧಿಸ್ತಿದ್ದೀನಿ. ಆದರೆ ನಿನ್ನ ಜೊತೆ ನಾನು ಇರೋದಕ್ಕೆ ಆಗಲ್ಲ. ಇದೇ ಸತ್ಯ. ನೀನು ಯಾವಾಗಲೂ ಯಾರು ಆ ಹುಡುಗಿ ಅಂತ ಕೇಳ್ತಾ ಇದ್ದೆ ಅಲ್ವಾ?

ನೀನೇ ಅಂತ ಹೇಳಿ.. ನಿನ್ನಿಂದ ಬರೋ ಪ್ರತ್ಯುತ್ತರಕ್ಕೆ ಕಾಯ್ತಾ ಇರ್ತೀನಿ ಅನ್ಕೊಂಡಿದ್ದೆ. ಆದ್ರೆ ಈ ದಿನ...?!


ಹೋಗು.. ಇದೇ ಸರಿ. ನನ್ನ ಮನಸ್ಸಿಂದ ದೂರ ಹೋಗ್ಬೇಕು ಅಂದ್ರೆ, ನೀನು ನನ್ನ ಕಣ್ಣಿನಿಂದಲೇ ದೂರ ಇರ್ಬೇಕೇನೋ..?"


ಕೈಯನ್ನು ಮುಷ್ಟಿ ಮಾಡಿ ಹೃದಯದ ಮೇಲೆ ಹೊಡೆದುಕೊಂಡ.


"ಅಭಿ,,, ಏನೋ? ನಿನ್ನ ಫ್ರೆಂಡ್ ಹೋಗ್ತಾ ಇದ್ದಾಳೆ ನೋಡು"


ಯಾವುದೋ ಮೂಲೆಯಿಂದ ಧ್ವನಿಯೊಂದು ಕೇಳಿದಂತೆನಿಸಿ.. ಅವನ ಹೃದಯ,


"ನನ್ನಿಂದ ದೂರ, ಶಾಶ್ವತವಾಗಿ ದೂರ ಹೋಗ್ತಿದ್ದಾಳೆ"

ಎಂದು ಕೊರಗಿತ್ತು.


ದೂರದಿಂದ ಕೈ ಬೀಸಿದಳು ಅವಳು. 


"ಅಭಿ... ಹೋಗ್ತಾ ಇದೀನಿ ಕಣೋ, ಜೀವನದಲ್ಲಿ ನೀನು ಚೆನ್ನಾಗಿ ಇರ್ಬೇಕು. ಅಷ್ಟೇ ನನ್ನ ಬೇಡಿಕೆ.."


ಎಂದೇಳಿಕೊಂಡು ಇಯರ್ ಫೋನನ್ನು ಕಿವಿಗೆ ಹಾಕಿಕೊಂಡಳು.


ಹೇಳಲಾರದ ಪ್ರೀತಿ ಇದು

ಉಸಿರ ಕೊಲ್ಲುವ ವಿಷದಂತೆ

ನೆನೆಯಲಾಗದ ವಿರಹವಿದು

ಮರೆಯಲಾರದ ಕನಸಂತೆ


ಈ ಸಾಲುಗಳ ಜೊತೆಗೆ ಮರೆಯಲಾಗದ ನೆನಪನ್ನು ಹೊತ್ತು ನಡೆದಿದ್ದಳು.


ಮನಸ್ಸಿನ ದುಃಖವನ್ನು ಮರೆಮಾಚಿ ನಗುವಿನ ಮುಖವಾಡ ತೊಟ್ಟು ಮತ್ತೊಮ್ಮೆ ಕೈಬೀಸಿ ನಡೆದಳು.


"ಇನ್ಮೇಲೆ, ಯಾರೇ ನನಗೆ ಕಾಟ ಕೊಡ್ತಾರೆ ನಾಗವಲ್ಲಿ?" ಅವನು ಮನದಲ್ಲೇ ಅಳುತ್ತಿರುವ.



ಹೇಳಲಾಗದ ಪ್ರೀತಿಯ ಹೃದಯದಲ್ಲಿ ಬಚ್ಚಿಟ್ಟು ನರಳುತ್ತಿದ್ದ ಮಿಡಿದ ಹೃದಯಗಳ ಮಾತು ಯಾರಿಗೂ ಕೇಳದಾಯಿತು ಅಲ್ಲಿ... 


ಮುಕ್ತಾಯ.


Rate this content
Log in

Similar kannada story from Drama