Hurry up! before its gone. Grab the BESTSELLERS now.
Hurry up! before its gone. Grab the BESTSELLERS now.

ಹಂಸವೇಣಿ ಕುಲಾಲ್

Romance


4.0  

ಹಂಸವೇಣಿ ಕುಲಾಲ್

Romance


ಜೀವನ ಚೈತ್ರ

ಜೀವನ ಚೈತ್ರ

5 mins 186 5 mins 186


     ಇಳಿಸಂಜೆಯ ಮಬ್ಬು ಕೊಂಚ ಕೊಂಚವಾಗಿ ಪ್ರಕೃತಿಯನ್ನು ಆವರಿಸುತ್ತಿರುವ ಹೊತ್ತು.ಗೊಂದಲದ ಗೂಡಾಗಿದೆ ಜೀವನ್ ಮನಸ್ಸು. ತನ್ನ ಒತ್ತಡದ ಮನಸ್ಸನ್ನು ತಹಬದಿಗೆ ತರಲು ಅವನ ಆಯ್ಕೆ ಎಂದಿಗೂ ಕುಂಚವನ್ನು ಕೈಯಲ್ಲಿ ಹಿಡಿದು ಕಣ್ಣೆದುರು ಕಾಣುವ ಬಿಂಬಗಳಿಗೆ ಜೀವ ತುಂಬುವುದು. ಆ ಪ್ರಕೃತಿಯ ಮಧ್ಯೆ ನಿಂತು ಹುಡುಕುತ್ತಿದ್ದಾನೆ ಆದರೆ ಅವನ ಕಣ್ಣಿಗೆ ಮನಸ್ಸನ್ನು ತಣಿಸುವಂತಹ ಒಂದು ದೃಶ್ಯವೂ ಕಾಣಿಸುತ್ತಿಲ್ಲ. ಬಣ್ಣದಲ್ಲಿ ಅದ್ದಿರುವ ಕುಂಚದಿಂದ ಬಿಳಿ ಹಾಳೆಯ ಮೇಲೆ ಒಂದು ಚುಕ್ಕೆಯನ್ನು ನೀಡಲು ಸಹ ಆಗುತ್ತಿಲ್ಲ. ಗೊಂದಲ ಮತ್ತಷ್ಟು ಹೆಚ್ಚುತ್ತಿದೆ. ಕಣ್ಣನ್ನು ಬಿಗಿಮಾಡಿ ಮುಚ್ಚಿಕೊಂಡ.ಹಾಗೆ ಗೊಂದಲದ ಮಧ್ಯೆ ಸಿಕ್ಕಿ ನಲುಗುತ್ತಿರುವ ಅವನ ಮನಸ್ಸನ್ನು ಒಂದು ಧ್ವನಿ ತನ್ನ ಕಡೆಗೆ ಸೆಳೆಯಿತು. ಕಿಲಕಿಲನೆ ನಗುತ್ತಿರುವ ಶಬ್ಧ ಅವನ ಕರ್ಣಗಳಿಗೆ ವೀಣೆಯನ್ನು ಮೀಟಿದಾಗ ಹೊಮ್ಮುವ ಸ್ವರದಂತೆ ಕೇಳಿಸಿತ್ತು. ತಕ್ಷಣಕ್ಕೆ ಆ ದಿಕ್ಕಿನ ಕಡೆಗೆ ತಿರುಗಿ ಕಣ್ಣನ್ನು ತೆರೆದು ನೋಡಿದ.ಹೊಂಬಣ್ಣದ ಛಾಯೆಯ ಮೊಗದ ಚೆಲುವೆ. ಸ್ಪಟಿಕದಂತಹ ನಗು. ಆ ನಗುವಿನಲ್ಲಿ ಎದ್ದು ಕಾಣುವ ಗುಳಿಕೆನ್ನೆಗಳು. ತಂಗಾಳಿಯ ಜೊತೆಗೆ ಆಡುತ್ತಿರುವ ಮುಂಗುರುಳು.ಎಲ್ಲವೂ.. ಎಲ್ಲವೂ ಅವನನ್ನು ಪ್ರಥಮ ನೋಟದಲ್ಲೇ ಸೆರೆಯಾಗಿಸಿತು. ಅವನ ಕುಂಚಕ್ಕೆ ಜೀವ ಸಿಕ್ಕಿತು. ಆ ಕ್ಷಣವೇ ಕುಂಚವನ್ನು ಬಣ್ಣದಲ್ಲಿ ಅದ್ದಿ ಬಿಳಿಹಾಳೆಯ ಮೇಲೆ ಅವಳ ಪ್ರತಿಬಿಂಬವನ್ನು ಮೂಡಿಸಲು ತಯಾರಾದ.ಅದೊಂದು ಸುಂದರವಾದ ಪಾರ್ಕ್. ಅಲ್ಲಿನ ಬೆಂಚಿನ ಮೇಲೆ ಕುಳಿತು ಪುಟ್ಟ ಮಕ್ಕಳೊಡನೆ ತಾನು ಮಕ್ಕಳಾಗಿ ಆಟವಾಡುತ್ತಿರುವ ಅವಳು ಮಕ್ಕಳಿಂದ ತನ್ನ ಕೈ ಸೇರಿದ ದೊಡ್ಡದಾದ ಚಂಡನ್ನು ಹಿಡಿದು ಮಕ್ಕಳಿಗೆ ಸತಾಯಿಸುತ್ತಿರುವಳು. ಕೊನೆಗೂ ಮಕ್ಕಳ ಮುಗ್ಧ ಮಾತುಗಳಿಗೆ ಸೋತು ಅವರಿಗೆ ಚೆಂಡನ್ನು ಅವರತ್ತ ಎಸೆದಳು. ನಂತರ ತನ್ನ ಕಡೆಗೆ ಎಸೆಯುವಂತೆ ಕೇಳಿಕೊಂಡಳು. ಅವಳನ್ನು ಗಮನಿಸುತ್ತಿದ್ದ ಜೀವನ್ ಗೆ ಅಲ್ಲಿ ಆಟವಾಡುತ್ತಿದ್ದ ಮಕ್ಕಳಿಗೂ ಹಾಗೂ ಅವಳಿಗೂ ಯಾವುದೇ ವಿಭಿನ್ನತೆ ಕಾಣಲಿಲ್ಲ.ಅವನ ಮನಸ್ಸು ಹಕ್ಕಿಯಂತೆ ಹಾರಾಡುತ್ತಿತ್ತು. ಆಸೆಯೆಂಬ ಕನಸಿನ ಪಾರಿವಾಳ ಸ್ವತಂತ್ರವಾಗಿ ಬಾನನ್ನು ಮುಟ್ಟುವಂತೆ ಭಾಸವಾಯಿತು. ಕಣ್ಣಲ್ಲೇ ಸೆರೆಹಿಡಿದ ಅವಳ ಪ್ರತಿಬಿಂಬವನ್ನು ಸಂಪೂರ್ಣ ಮಬ್ಬು ಆವರಿಸುವವರೆಗೆ ಚಿತ್ರಿಸಿ ಬಿಟ್ಟ. ನಂತರದಲ್ಲಿ ಆ ದಿಕ್ಕಿಗೆ ನೋಡಿದರೆ ಆಕೆ ಅಲ್ಲಿ ಕಾಣಲಿಲ್ಲ. ಹೃದಯ ವಿಲವಿಲವೆಂದು ಒದ್ದಾಡುತ್ತಿದೆ ಎಂಬ ಭಾವ. ಆ ಮಕ್ಕಳನ್ನು ಕರೆದೊಯ್ಯಲು ಅವರ ಪೋಷಕರು ಅದಾಗಲೇ ಧಾವಿಸಿ ಕೈಯನ್ನು ಹಿಡಿದು ಹೊರಡುತ್ತಿದ್ದರು, ಅವರ ಎದುರು ನಿಂತ ಜೀವನ್... ಆ ಮಕ್ಕಳಲ್ಲಿ ಆಕೆ ಯಾರೆಂದು ಕೇಳಿದಾಗ 'ಅಕ್ಕ' ಎಂದು ಸಂಬೋಧಿಸಿದರು ಅಷ್ಟೇ.!

ಆಕೆಯ ಹೆಸರು ಕೂಡ ಅವನಿಗೆ ತಿಳಿಯಲಿಲ್ಲ. ಜೊತೆಗೆ ಸಿಹಿ ಸುದ್ದಿಯಂತೆ ಆಕೆ ಪ್ರತಿದಿನವೂ ಇದೇ ಸಮಯಕ್ಕೆ ಇಲ್ಲಿಗೆ ಬರುವುದು ಖಚಿತ ಪಡಿಸಿಕೊಂಡ.ಅವನು ಅಲ್ಲಿಂದ ತೆರಳಿದ. ಅದಾಗಲೇ ಮೊದಲ ಕುಡಿನೋಟದಲ್ಲಿ ಅವನ ಮನಸ್ಸನ್ನು ಕದ್ದುಕೊಂಡು ಹೊರಟು ಹೋಗಿದ್ದಳು ಆ ಹುಡುಗಿ.
   ಮರುದಿನ ಮಬ್ಬಿನ ಹೊತ್ತು ಎದುರಾಗುವವರೆಗೂ ಅವನ ಮನಸ್ಸಿಗೆ ಸಮಾಧಾನವಿಲ್ಲ. ಅವಳ ನೆನಪಿನಲ್ಲಿ ಕಾಲ ಕಳೆದವನಿಗೆ ರಾತ್ರಿಯ ನಿದ್ದೆಯೂ ಮುನಿಸಿಕೊಂಡಿತ್ತು. ಅವಳನ್ನು ಎಷ್ಟು ಬೇಗ ಮತ್ತೊಮ್ಮೆ ಈ ನಯನದೊಳಗೆ ಸೇರಿಸಿಕೊಳ್ಳುವೆನೋ ಎಂದು ಚಡಪಡಿಸುತ್ತಿದ್ದಾನೆ. ಮುಸ್ಸಂಜೆಯ ಹೊತ್ತು ಹಾಗೆ ಸಮಯವನ್ನು ನೋಡುತ್ತಾ ನಿದ್ರೆಗೆ ಶರಣಾಗಿ ಬಿಟ್ಟಿದ್ದ. ನಂತರ ಎಚ್ಚರಗೊಂಡವನಿಗೆ ಸಮಯ ಆಗಿದ್ದು ತಿಳಿದು ಬೇಗನೆ ಪಾರ್ಕಿನ ಕಡೆಗೆ ಹೆಜ್ಜೆಯನ್ನಿಟ್ಟ. ಜೊತೆಯಲ್ಲಿ ಅವಳನ್ನೇ ಕುಂಚದಿಂದ ಬಂಧಿಸಿದ ಚಿತ್ರಪಟವನ್ನು ತಂದಿರುವ.ಅಂದು ಸಹ ಅವಳು ಅದೇ ಬೆಂಚಿನ ಮೇಲೆ ಕುಳಿತಿರುವಳು. ಇಂದು ಮೊದಲ ದಿನಕ್ಕಿಂತ ಇನ್ನಷ್ಟು ಆಕರ್ಷಿತವಾಗಿ ಕಂಡಳು. ಪ್ರೀತಿಯ ಚಿಲುಮೆ ಉಕ್ಕಿ ಬರುತ್ತಿದೆ. ಅದೆಷ್ಟು ಹೊತ್ತು ನೋಡಿದರೂ ಈ ಎರಡು ನಯನಗಳಿಗೆ ತೃಪ್ತಿ ಎಂಬ ಪದ ಅಪರಿಚಿತವಾಗಿದೆ.ಅವನ ಭಾವನೆಗಳಿಗೆ ಮೊದಲ ನೋಟದಲ್ಲಿ ಬಣ್ಣವನ್ನು ಚೆಲ್ಲಿರುವಳು. ತನ್ನ ಜೀವನದ ಪಯಣದೊಂದಿಗೆ ಸಾಗುವ ಹಾದಿಯಲ್ಲಿ ಚಿತ್ರಿಸುವ ಬಿಂಬ ಅವಳೇ ಸೃಷ್ಟಿಸಬೇಕೆಂದು ಅದಾಗಲೇ ತೀರ್ಮಾನಿಸಿ ಅವಳ ಎದುರಿಗೆ ನಿಂತ. ಅಪರಿಚಿತನನ್ನು ಕಂಡ ಆಕೆ ಮೊದಲು ಕಸಿವಿಸಿಗೊಂಡಳು. ಕಾರಣ ಅವನು ಅವಳನ್ನು ತದೇಕಚಿತ್ತದಿಂದ ಬಹು ಪ್ರೀತಿಯಲ್ಲಿ ನೋಡುತ್ತಿರುವ. ಆ ನೋಟಕ್ಕೆ ಕಣ್ಣಿನಲ್ಲಿ ಅಂಜಿಕೆಯ ಬಣ್ಣ ಬಂದಂತಾಯಿತು."ಹಾಯ್..." 

ಅದೇ ಬೆಂಚಿನಲ್ಲಿ ಒಂದಷ್ಟು ಅಂತರ ನೀಡಿ ಕುಳಿತ. ಈಗಂತೂ ಇನ್ನೂ ಗಾಬರಿಯಲ್ಲಿ ಇಳಿಸಂಜೆಯ ತಂಪಾದ ಗಾಳಿಯಲ್ಲೂ ಬೆವರಿನ ಹನಿ ಅವಳ ಮುಖದ ಮೇಲೆ. ಗಲ್ಲದ ಮೇಲೆ ಕೈಯಿಟ್ಟು ಅವಳನ್ನೇ ನೋಡುತ್ತಾ ನಕ್ಕ ಜೀವನ್, ಅವಳ ಕೈಗೆ ಅವಳನ್ನು ಚಿತ್ರಿಸಿದ್ದ ಚಿತ್ರಪಟವನ್ನು ನೀಡಿದ. ಆಶ್ಚರ್ಯದಿಂದ ನೋಡಿದವಳ ಕಣ್ಣಲ್ಲಿ ಸಂತಸದ ಚಿಲುಮೆ ಉಕ್ಕಿದಾಗ ಅದೆಷ್ಟು ತೃಪ್ತಿಯ ಭಾವುಕದ ಬಣ್ಣ ಅವನ ಮನಸ್ಸಿನಲ್ಲಿ ಚೆಲ್ಲಿ ಕೊಂಡಿತು."ಇಷ್ಟ ಆಯ್ತಾ ನಿಮಗೆ? ನಾನೇ ಇದೇ ಹೊತ್ತಿನಲ್ಲಿ ನೆನ್ನೆ ನಿಮ್ಮನ್ನ ನೋಡಿದಾಗ ಬಿಡಿಸಿದ್ದು" ಕೇಳಿದ. ಏನು ಪ್ರತಿಕ್ರಿಯಿಸಬೇಕು ಅವಳಿಗೆ ತಿಳಿಯುತ್ತಿಲ್ಲ. ಅವಳ ಅನುಮತಿ ಪಡೆಯದೆ ಕುಂಚದಲ್ಲಿ ಬಂಧಿಸಿದ ಅವನ ಮೇಲೆ ಕೋಪಗೊಳ್ಳುವುದೋ? ಅಥವಾ ಇಷ್ಟು ಅಂದವಾಗಿ ತನ್ನನ್ನು ಬೆರಗುಗೊಳಿಸಿದ ಆ ಚಿತ್ರದ ಕಲೆಗಾರನಿಗೆ ವಂದಿಸುವುದೋ? ಅರಿವಿಗೆ ಬರುತ್ತಿಲ್ಲ. ಕೊನೆಗೂ ಒಂದು ತೀರ್ಮಾನ ಮಾಡಿ, "ತುಂಬಾ ಚೆನ್ನಾಗಿದೆ" ಎಂದಳು. ಆಕೆ ಹೇಳಿ ಮುಗಿಸುವ ನಿಮಿಷದೊಳಗೆ, 


"ನಾನು ಮೊದಲ ಕ್ಷಣ ನಿಮ್ಮನ್ನ ನೋಡಿದಾಗಲೇ ಪ್ರೀತಿಸೋಕೆ ಶುರು ಮಾಡಿದೆ. ನನ್ನ ಹೃದಯದಲ್ಲಿ ನಿಮ್ಮ ನಗು, ಪ್ರೀತಿಯ ಬಣ್ಣವನ್ನು ಹಚ್ಚಿದೆ" 

ಎಂದೇಳುತ್ತಾ ಅವಳ ಮುಂದೆ ಮಂಡಿಯೂರಿ ಕುಳಿತು,


"ಐ ಲವ್ ಯು, ನಿಮಗೆ ನಾನು ಒಪ್ಪಿಗೆನಾ..?" ನೇರವಾಗಿ ಕೇಳಿಯೇಬಿಟ್ಟ. ಅವನ ಮಾತುಗಳಿಂದ ಅವಳ ಮೊಗದಲ್ಲಿ ಯಾವುದೇ ಬದಲಾವಣೆ ಮೂಡಲಿಲ್ಲ. ಅವನು ಹೇಳಿದ ಪದಕ್ಕೆ ಕೋಪವಾಗಲೀ ಅಥವಾ ಒಪ್ಪಿಗೆ ಸೂಚನೆಯಾಗಲೀ ಕಾಣಲಿಲ್ಲ. ಬದಲಿಗೆ ನಿರುತ್ಸಾಹದ ನಗೆಯ ಜೊತೆಗೆ ಮಾತಿಗೆ ಮುನ್ನುಡಿ ಬರೆದಳು. "ಹೌದಾ.. ಯಾಕೆ? ನನ್ನ ಬಗ್ಗೆ ನಿಮಗೆ ಪೂರ್ತಿ ಗೊತ್ತಿಲ್ಲ ಅನಿಸುತ್ತೆ. ನನ್ನನ್ನು ನೋಡಿ ಪ್ರೀತಿಸ್ತಾ ಇದೀನಿ ಅನ್ನೋದು ಪ್ರೀತಿ ಅಲ್ಲ. ಇದು ಆಕರ್ಷಣೆ ಅಷ್ಟೇ..."


ಅವಳ ಮಾತಿಗೆ ನಗುತ್ತಾ,"ನೋಡಿ, ನೀವು ಎಲ್ಲರ ತರ ಅಲ್ಲ. ವರ್ಷಗಳಿಂದಲೂ ಎಷ್ಟೋ ಜನ ಹುಡುಗಿಯರನ್ನ ನನ್ನ ಕಣ್ಣುಗಳು ನೋಡಿದ್ರು ಯಾರನ್ನು ಮನಸ್ಸು ಒಪ್ಪಿಕೊಂಡಿರಲಿಲ್ಲ. ನೀವು ಎಲ್ಲರಿಗಿಂತ ವಿಭಿನ್ನ. ಬೇರೆ ಹುಡುಗಿ ಆಗಿದ್ದರೆ ಈ ರೀತಿ ನೇರವಾಗಿ ಹೇಳಿದ್ದಕ್ಕೆ ಕೋಪ ಮಾಡಿಕೊಂಡು, ಒಂದೆರಡು ಬೈಗುಳ ಸಿಗುತ್ತಿತ್ತು. ಆದ್ರೆ ನೀವು ಯಾಕೆ ಅಂತ ಕೇಳ್ತಾ ಇದ್ದೀರಾ. ತುಂಬಾ ಸ್ಪೆಷಲ್ ನೀವು, ನೋಡಿ ನಿಮ್ಮನ್ನ ನೋಡಿದ ಮೊದಲ ಕ್ಷಣ ಆ ಮುಗ್ಧ ನಗು ನನ್ನನ್ನು ಆಕರ್ಷಣೆ ಮಾಡಿದ್ದು ನಿಜ. ಆಕರ್ಷಣೆ ಹಿಂದೆ ಇರೋದು ನಿಷ್ಕಲ್ಮಶವಾದ ಪ್ರೀತಿ. ಯಾಕಂದ್ರೆ..? ನಿರ್ಭಾವುಕನಾಗಿ ಸೋತಿದ್ದ ಮನಸ್ಸಲ್ಲಿ ಗೆಲುವಿನ ಚಿಲುಮೆಯನ್ನು ತುಂಬಿಸಿ ಕುಂಚವನ್ನು ಹಿಡಿಯುವ ಹಾಗೆ ಮಾಡಿದ್ದು ನೀವು. ನಿಜ, ನಿಮ್ಮ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಸದ್ಯಕ್ಕೆ ಅದರ ಅವಶ್ಯಕತೆಯೂ ಇಲ್ಲ. ಈಗ ಮುಖ್ಯವಾಗಿರುವುದು ನಿಮ್ಮ ತೀರ್ಮಾನ ಅಲ್ಲಲ್ಲ ಒಪ್ಪಿಗೆ ಅಷ್ಟೇ..." ಎಂದ. ಅವನ ಮಾತುಗಳಿಗೆ ಅವಳ ಮುಖದಲ್ಲಿ ಈಗಲೂ ಯಾವುದೇ ಬದಲಾವಣೆ ಕಾಣಲಿಲ್ಲ. ಮತ್ತದೇ ನಿರುತ್ಸಾಹದ ನಗುವಿನ ಜೊತೆಗೆ ಕೈಯಲ್ಲಿದ್ದ ಮೊಬೈಲ್ಗೆ ಕೆಲಸ ನೀಡಿದಳು. ಸ್ವಲ್ಪ ಹೊತ್ತು ಮೌನವಾಗಿ ಕುಳಿತಳು. ಜೀವನ್ ಬಹುಶಃ ಯೋಚಿಸಲು ಸಮಯ ತೆಗೆದುಕೊಂಡಿರುವಳೆಂದುಕೊಂಡ. ಸಮಯದ ಮುಳ್ಳು ಒಂದಷ್ಟು ಸಂಖ್ಯೆಯನ್ನು ದಾಟಿತು. ಅವರು ಕುಳಿತಿದ್ದ ಕಡೆ ಒಬ್ಬ ಹೆಂಗಸು ವೀಲ್ಚೇರ್ ತಳ್ಳಿಕೊಂಡು ಬಂದಳು. ಅವಳನ್ನು ಕಂಡಾಗ ನಗುವನ್ನು ಬೀರಿದ ಆಕೆ. ಅವನು ನೀಡಿದ ಚಿತ್ರಪಟವನ್ನು ಪಕ್ಕಕ್ಕೆ ಇಟ್ಟು ಆ ಹೆಂಗಸಿನ ಸಹಾಯದ ಮೂಲಕ ಆ ವೀಲ್ ಚೇರ್ ನಲ್ಲಿ ಕುಳಿತಳು."ಸರಸು ಅಕ್ಕ... ಅದು ಕೊಡಿ" ಬೆರಳುಮಾಡಿ ಚಿತ್ರಪಟದ ಕಡೆ ತೋರಿದಾಗ ಅವರು ಅದನ್ನು ಆಕೆಯ ಕೈಗೆ ನೀಡಿದರು. ತನ್ನ ಮಡಿಲಿನಲ್ಲಿ ಸೇರಿಸಿಕೊಂಡ ಅವಳು ಜೀವನ್ ಮುಖವನ್ನು ನೋಡಿದಳು. ಇಷ್ಟು ಹೊತ್ತು ಇದ್ದ ಉತ್ಸಾಹದ ಕಾಂತಿ ಅವನಿಂದ ಮರೆಯಾಗಿ ಕಾಂತಿಹೀನ ವದನದ ದರ್ಶನ ಅವಳಿಗೆ.


"ತಿಳಿದುಕೊಳ್ಳೋ ಅವಶ್ಯಕತೆ ಇಲ್ಲ ಅಂತ ಹೇಳಿದ್ರಲ್ಲ? ಇದೇ ನನ್ನ ಜೀವನ. ಒಂದು ಆಕ್ಸಿಡೆಂಟ್ ನಲ್ಲಿ ನಾನು ಹ್ಯಾಂಡಿಕ್ಯಾಪ್ ಆಗ್ಬೇಕಾಯಿತು. ನಿಮ್ಮ ಮೊದಲ ನೋಟದ ಪ್ರೀತಿಗೆ ಉತ್ತರ ನಾನು ನೀಡೋ ಅವಶ್ಯಕತೆ ಇಲ್ಲ. ನಿಮ್ಮ ಮನಸಲ್ಲಿರೋ ಯೋಚನೆ ಅರ್ಥ ಆಗಿದೆ..." ಹೇಳಿದವಳು, ಸರಸು ಅವರಿಗೆ ಇಲ್ಲಿಂದ ಕರೆದುಕೊಂಡು ಹೋಗಲು ಸೂಚಿಸಿದಳು.ಅವಳನ್ನು ತನ್ನ ಬದುಕಿನ ಬಣ್ಣ ಎಂದುಕೊಂಡ ಅವನಿಗೆ ಅವಳ ಸ್ಥಿತಿಯನ್ನು ಕಂಡು ಮರುಕದ ಬಣ್ಣ ಮನಸ್ಸಿನಲ್ಲಿ ಹಚ್ಚಿತು. ಮಾತುಗಳ ಶಬ್ಧ ಮೌನವನ್ನು ಹಿಂಬಾಲಿಸಿತು.
     ಮರುದಿನ ಅದೇ ಮಬ್ಬಿನ ಆಗಮನ. ಪ್ರತಿದಿನದಂತೆ ಈ ದಿನವೂ ಬಂದು ತನ್ನ ಆಸನವನ್ನು ಅಲಂಕರಿಸಿದಳು ಆಕೆ. ಆದರೆ ಇಂದು ಅಲ್ಲಿ ಮನಸ್ಸಿಗೆ ನೆಮ್ಮದಿಯ ತಂಗಾಳಿ ಬೀಸಲಿಲ್ಲ ಬದಲಿಗೆ ಅವನ ಮುಖ ಚರ್ಯೆ ಎದುರಾಯಿತು. ಹಿಂದಿನ ದಿನದ ಅವನ ಮಾತುಗಳು ಅದೇಕೋ ಬಂದು ಕಾಡಲು, ಆ ಸ್ಥಳದಲ್ಲಿ ಇರಲು ಮನಸ್ಸು ಒಪ್ಪಲಿಲ್ಲ. ಆಗಷ್ಟೇ ಹೊರಗೆ ಹೋಗುತ್ತಿದ್ದ ಸರಸು ಅವರನ್ನು ಮತ್ತೆ ಕರೆದಳು."ಸರಸು ಅಕ್ಕ ಇವತ್ತು ಯಾಕೋ ಇಲ್ಲಿ ಇರುವುದಕ್ಕೆ ಆಗ್ತಾ ಇಲ್ಲ. ಮನೆಗೆ ಹೋಗೋಣ..."ಎಂದೇಳುತ್ತಾ ವೀಲ್ಚೇರ್ ಒಂದು ಕೈಯಲ್ಲಿ ಹಿಡಿದು ಕುಳಿತುಕೊಳ್ಳಲು ಬರುತ್ತಿದ್ದಳು, ಯಾವುದೋ ಯೋಚನೆಯಲ್ಲಿ ಮುಳುಗಿದ್ದವಳು ಅದನ್ನು ಬಿಗಿಯಾಗಿ ಹಿಡಿದು ತಳ್ಳಿದ್ದರಿಂದ ವೀಲ್ಚೇರ್ ಕಾಲುಗಳು ಕೊಂಚ ಪಕ್ಕಕ್ಕೆ ತಿರುಗಿ ಅವಳು ಇನ್ನೇನು ಬೀಳಬೇಕು."ಅಮ್ಮ..." 

ಅಷ್ಟರಲ್ಲಿ ಅವಳನ್ನು ಬಿಗಿಯಾಗಿ ಬಂಧಿಸಿತು ಬಲವಾದ ತೋಳುಗಳ ಭರವಸೆಯ ಬೆಚ್ಚಗಿನ ಸ್ಪರ್ಶ. ಕಣ್ಣೆತ್ತಿ ನೋಡಿದಳು ಅದು ಅವನೇ. ನಗುಮೊಗದಿಂದ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ನಂತರ ಜೋಪಾನದಿಂದ ಅವಳನ್ನು ಅಲ್ಲಿ ಕೂರಿಸಿದ. ಅವಳಲ್ಲಿ ಮಾತುಗಳು ಇಲ್ಲ.


ಅವನ ಹಿಂಬದಿಗೆ ಮತ್ತೊಬ್ಬರು ಯಾರೋ ಬಂದು ನಿಂತರು ಅವರ್ಯಾರೆಂದು ಆಕೆಗೆ ತಿಳಿಯಲಿಲ್ಲ. ಜೀವನ್ ಅವರ ಪಕ್ಕ ನಿಂತು,


"ಡ್ಯಾಡ್ ನಾನು ಹೇಳಿದ್ದು ಇವರ ಬಗ್ಗೆನೇ. ಶಿ ಇಸ್ ಓನ್ಲಿ ಮೈ ಲವ್. ನಿಮ್ಮ ಸೊಸೆ ಹೇಗಿದ್ದಾಳೆ...?" 


ಅವನ ಮಾತಲ್ಲಿ ಮೂಡಿದ ಪ್ರತಿಯೊಂದು ಪದಗಳು ಆಕೆಯ ಮೇಲಿನ ಪ್ರೀತಿಯನ್ನು ತೋರಿಸುತ್ತಿತ್ತು."ನನ್ನ ಮಗನ ಆಯ್ಕೆ ಯಾವತ್ತು ರಾಂಗ್ ಆಗಿರಲ್ಲ. ತುಂಬಾ ಹೆಮ್ಮೆ ಆಗ್ತಾ ಇದೆ ಜೀವನ್.."


ಅವನ ಬೆನ್ನು ತಟ್ಟಿದರು. ಇವರ ಮಾತುಗಳಿಗೆ ಪ್ರಶ್ನಾರ್ಥಕ ಭಾವ ಅವಳಲ್ಲಿ.ಮತ್ತೆ ಅವಳ ಸನಿಹಕ್ಕೆ ಮಂಡಿಯೂರಿ ಕುಳಿತ ಜೀವನ,

"ನೋಡಿ, ನಿಮ್ಮನ್ನ ಮೊದಲು ನೋಡಿದಾಗ ಆಕರ್ಷಣೆ ಆಗಿದ್ದಲ್ಲ. ನಾನು ತಾಯಿಯನ್ನು ನೋಡಿದ ನೆನಪೇ ಇಲ್ಲ. ಹುಟ್ಟಿದಾಗಲೇ ತಾಯಿನ ಕಳ್ಕೊಂಡೆ. ಬರೀ ಅವರ ಫೋಟೋ ಅಷ್ಟೇ ನೋಡಿರೋದು ನಾನು. ನನ್ನ ತಂದೆ, ನನ್ನ ಜಗತ್ತು. ಒಬ್ಬ ಮನುಷ್ಯನಿಗೆ ಇಬ್ಬರು ತಾಯಿ ಇರ್ತಾರೆ ಅಂತ ಡ್ಯಾಡ್ ಹೇಳ್ತಾ ಇದ್ರು. ಒಬ್ಬರು ಜನ್ಮ ನೀಡಿದ ತಾಯಿ ಮತ್ತೊಬ್ಬರು ಆತನ ಜೀವನ ಸಂಗಾತಿ. ನನ್ನ ಮನಸ್ಸಲ್ಲಿ ಒಂದು ಆಸೆ ಇತ್ತು. ಯಾರನ್ನ ನೋಡಿದಾಗ ತಕ್ಷಣಕ್ಕೆ ಅವರ ಮುಖದಲ್ಲಿ ಅಮ್ಮನ ಕಾಣ್ತಿನಿ ಅವರನ್ನ ನಾನು ಮದುವೆ ಆಗ್ಬೇಕು ಅಂತ. ಆ ದಿನ ನಾನು ತುಂಬಾನೇ ಟೆನ್ಷನ್ ನಲ್ಲಿ ಇದ್ದೆ. ಆಗಲೇ ನಿಮ್ಮನ್ನು ನೋಡಿದ್ದು, ಆ ಕ್ಷಣಕ್ಕೆ ನಿಮ್ಮ ಜಾಗದಲ್ಲಿ ನನ್ನ ತಾಯಿ ಮುಖಭಾವ ಕಂಡೆ. ಅಷ್ಟೇ ಸಾಕು ನನಗೆ.. ಈಗ್ಲಾದ್ರೂ ನನ್ನ ಜೀವನ ಸಂಗಾತಿ ಆಗ್ತೀರಾ? ಬೇಕಾದ್ರೆ ನಿಮ್ಮ ತಂದೆ-ತಾಯಿ ಒಪ್ಪಿಗೆಯನ್ನೂ ಕೇಳ್ಬಹುದು? ಆ್ಯಕ್ಚುವಲಿ ಈಗಾಗ್ಲೇ ಅವರನ್ನೂ ಒಪ್ಪಿಸಿದ್ದೇನೆ. ನಿಮ್ಮೊಬ್ಬರ ಒಪ್ಪಿಗೆಯೇ ಬಾಕಿ ಈಗ..."ಎಂದು ಆತ ಹೇಳುವುದಕ್ಕೂ, ಆಕೆಯ ತಂದೆ - ತಾಯಿ ಅಲ್ಲಿ ಬಂದು ನಿಂತರು. ಕನಸಿನಲ್ಲಿದ್ದಂತಹ ಭಾವ ಅವಳಲ್ಲಿ. ಭಾವುಕತೆಯ ಬಣ್ಣದಲ್ಲಿ ಬಂಧಿಯಾಗಿದ್ದ ಕಣ್ಣಲ್ಲಿ ಅಶ್ರುಧಾರೆ. ಅವಳ ಕೆನ್ನೆಯನ್ನು ಸವರಿ ಹೋಗುವುದಕ್ಕೆ ಅವನು ಬಿಡಲಿಲ್ಲ.. ತಕ್ಷಣಕ್ಕೆ ಆ ಹನಿಗಳನ್ನು ತನ್ನ ಬೆಚ್ಚನೆಯ ಕೈ ಸ್ಪರ್ಶದಿಂದ ಪಕ್ಕಕ್ಕೆ ಸರಿಸಿದ. ಆ ಕ್ಷಣಕ್ಕೆ ಅವನ ಕೈಯನ್ನು ಬಿಗಿಯಾಗಿ ಹಿಡಿದಳು. ತನಗೆ ಸಮ್ಮತಿ ಇದೆ ಎಂಬಂತೆ.ಮೇಲೆದ್ದ ಜೀವನ್ ಅವಳ ಹಣೆಗೆ ಚುಂಬಿಸಿದ. ಆ ಜೋಡಿಯ ಪ್ರೀತಿಗೆ ಎಲ್ಲರೂ ಒಳಗೊಳಗೆ ನಕ್ಕರು. ಜೀವನ್ ತಂದೆ ಕೆಮ್ಮುತ್ತ,


"ಇಲ್ಲಿ ನೀವಿಬ್ಬರೇ ಇಲ್ಲ, ನಾವು ಕೂಡ ಇದ್ದೀವಿ..ನೋಡು ಜೀವನ್" ಎಂದು ನಕ್ಕಾಗ ನಾಲಿಗೆ ಕಚ್ಚಿಕೊಂಡ ಜೀವನ್.


"ಅದು ಸರಿ ನನ್ನ ಸೊಸೆ ಹೆಸರು ಏನು..?" ಕೇಳಿದರು ಅವನ ತಂದೆ.

ಅವನು ಅದೇ ಪ್ರಶ್ನಾಭಾವದಲ್ಲಿ ಆಕೆಯನ್ನು ನೋಡಿದ. ಅಂದ್ರೆ ಇದುವರೆಗೂ ಜೀವನ್‌ನಿಗೆ ಆಕೆಯ ಹೆಸರು ತಿಳಿದಿಲ್ಲ.ನಾಚುತ್ತಾ,

"ಚೈತ್ರ..." ಎಂದಳು. ಚಪ್ಪಾಳೆ ತಟ್ಟಿದ ಜೀವನ್ ತಂದೆ,

"ಮೊದಲ ಕುಡಿನೋಟದಲ್ಲಿ ಪ್ರೀತಿ ಮೂಡಿ ನಮ್ಮ ಜೀವನ್ ಜೀವನಕ್ಕೆ ಚೈತ್ರವಾಗಿ ಬಣ್ಣ ಹಚ್ಚುವುದಕ್ಕೆ ನನ್ನ ಸೊಸೆ ಬಂದಿದ್ದಾಳೆ. ಜೀವನ್ ನಿನ್ನ ಜೀವನ ಚೈತ್ರವಾಯಿತು" 


ಎಂದು ನಕ್ಕರು.ಕೊನೆಗೂ ಜೀವನ ಚೈತ್ರವಾಯಿತು...ಮೊದಲ ಕುಡಿನೋಟದಿಂದ ಚಿಗುರಿದ ಪ್ರೀತಿ ಭಾವನೆಗಳ ಬಣ್ಣದೊಂದಿಗೆ ಬೆರೆಯುವ ಸಮಯ, ನಾವೂ ಹರಸಿ ಹಾರೈಸೋಣ ಅಲ್ಲವೇ..?


ಮುಕ್ತಾಯ.


Rate this content
Log in

More kannada story from ಹಂಸವೇಣಿ ಕುಲಾಲ್

Similar kannada story from Romance