ಅತೃಪ್ತತೆ.....
ಅತೃಪ್ತತೆ.....
ಅಬ್ಬಾ ಅವಳ ಕಣ್ಣುಗಳಲ್ಲಿ ಎಂತಹಾ ಆಸೆಗಳು ಗೂಡು ಕಟ್ಟಿವೇ... ಅಬ್ಬಾ...ಛೇ ಇದೆಂತಹ ನಾಟಕ ನಂಗೆ ನೆಟ್ಟಗೆ ಒಂದು ಲೈನ್ ಡೈಲಾಗ್ ಹೇಳಲು ಬರಲ್ಲ.... ಎಂದು ಲೇ ಸಹನಾ ಎಂದು ಗೆಳತಿಯ ಎದುರು ತನ್ನ ಅಹವಾಲು ಹೇಳಲು ಹೋದ ಸುಮಾಳ ನೋಡಿ... ಏನೇ ಅದು ಎಂದಳು.
ನೋಡೇ ನಂಗೆ ಇಷ್ಟ ಇಲ್ಲ ಅಂದ್ರೂ ಆ ಫಿಸಿಕ್ಸ್ ಲೆಕ್ಚರರ್ ಹೇಳಿ ನಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ನನ್ನನು ನಾಟಕಕ್ಕೆ ಸೇರಿಸಿದ್ದಾರೆ.... ಅದು ನಾಯಕಿ ತಂಗಿಯ ಪಾತ್ರ.... ಎಂದು ಒಂದೇ ಸಮನೆ ವಟವಟ ಎನ್ನುತ್ತಿದ್ದ ಗೆಳತಿಯ ನೋಡಿ ತಲೆ ಮೇಲೆ ಒಂದು ಮೊಟಕಿ... ಏನೇ ನೀನು ಸಲ್ಪ ಆದರೂ ತಾಳ್ಮೆ ಅನ್ನೋದು ಇಲ್ಲ.
ಹೌದು ಹೌದು ನಿನಗೆ ಎಲ್ಲಾ ಇದೆ....ಹೇ ಹೋಗೇ ಎಂದು ಬ್ಯಾಗ್ ಹೆಗಲಿಗೇರಿಸಿ ಪಟ ಪಟನೆ ಮೆಟ್ಟಿಲು ಇಳಿದು ಹೋದವಳ ಹಿಂದೆ ಓಡಿದಳು ಸಹನಾ.
ಸುಮಾ ಮತ್ತು ಸಹನಾ ಒಂದೇ ತರಗತಿಯಲ್ಲಿ ಓದುತ್ತಿದ್ದರು, ಸಹನಾಳ ತಂದೆ ಒಂದು ಸಣ್ಣ ಕಾರ್ಖಾನೆ ಮಾಲೀಕರು...ಸುಮಾ ತಂದೆ ಒಂದು ಸರ್ಕಾರಿ ಕಛೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು.
ಅವರ ಸ್ನೇಹಕ್ಕೆ ಅಂತಸ್ತು ಎಂದು ಅಡ್ಡಿಯಾಗರಿಲಿಲ್ಲ.
ಸಹನಾ ಓದಿನಲ್ಲಿ ಜಾಣೆ, ಸುಮಾಳಿಗೆ ಓದುವುದು ಒಂದು ಬಿಟ್ಟು ಬೇರೆ ಎಲ್ಲದರಲ್ಲೂ ಆಸಕ್ತಿ ಜಾಸ್ತಿ.
ಹೀಗೆ ವರುಷಗಳು ಕಳೆದವು.... ಸಹನಾ ಉನ್ನತ ಶಿಕ್ಷಣಕ್ಕಾಗಿ ದೂರದ ಊರಿಗೆ ತೆರಳಿದಳು.... ಸುಮಾಳಿಗೆ ತಂದೆ ನಂಜಪ್ಪ...ಗಂಡು ನೋಡಲು ಶುರುಮಾಡಿದರು.
ಈಗಲೇ ಮದುವೆ ಬೇಡ ಎಂದು ಬಾಯಲ್ಲಿ ಹೇಳಿದರೂ ಕಂಗಳು ಮಾತ್ರ ಸಾವಿರ ಕನಸ್ಸು ಕಾಣುತ್ತಿದ್ದವು....
ಗಂಡನಾಗುವವನು ಹೀಗಿರಬೇಕು... ಹಾಗಿರಬೇಕು....
ಸರಿ ತಾಯಿ ಲಕ್ಷ್ಮಮ್ಮ ಒಂದು ಮುಂಜಾನೆ ಸುಮಳನ್ನ ಕರೆದು ನೋಡೇ ಸುಮಿ ಸಂಜೆ ನಿನ್ನ ನೋಡಕ್ಕೆ ಗಂಡಿನ ಕಡೆಯವರು ಬರ್ತಾರಂತೆ... ನೀನು ಅಲ್ಲಿ ಇಲ್ಲಿ ಅಲೆಯಕ್ಕೆ
ಹೋಗದೇ ಮನೇಲಿ ಇರು... ಎಂದು ಗದರಿ....ಮಗಳ ತಲೆ ಸವರಿ.... ಸುಮಾ ನಾವು ಕೆಳವರ್ಗದ ಜನ.... ನಮ್ಮ ಯೋಗ್ಯತೆಗೆ ತಕ್ಕಂತೆ ನಿನ್ನ ಮದುವೆ ಮಾಡಬೇಕು ಎಂದುಕೊಂಡ್ಡಿದ್ದೇವೆ ನಾನು ನಿಮ್ಮ ಅಪ್ಪ.... ಅರ್ಥ ಆಯ್ತಾ ಎಂದು ಹೇಳಿದರು.
ಸುಮಾಳಿಗೆ ಅಮ್ಮನ ಮಾತು ಯಾಕೋ ಸರಿಕಾಣದಾಯಿತು.... ಇರಲಿ ಗಂಡು ಬರಲಿ ಫಸ್ಟ್ ಆಮೇಲೆ ಬೇರೆ ವಿಚಾರ ಎಂದು ಕೊಂಡಳು.
ಸಂಜೆ ಸರಿ ಸುಮಾರಿಗೆ ಒಂದು ಕಾರು ಮನೆ ಮುಂದೆ ನಿಂತಿತು... ಸುಮಾ.. ಕಣ್ಣರಳಿಸಿ ಕಾರನ್ನು ನೋಡಿದಳು.
ಹೋ ಹುಡುಗ ಬಾರಿ ಶ್ರೀಮಂತ ಇರಬೇಕು ಎಂದುಕೊಂಡಳು.
ತಂದೆ ನಂಜಪ್ಪ.... ಹುಡುಗ, ಹುಡುಗನ ತಂದೆ ತಾಯಿ, ಮತ್ತು ತಮ್ಮ ದೂರದ ನೆಂಟ ಹನುಮಪ್ಪನ ನೋಡಿ ಬನ್ನಿ ಬನ್ನಿ ಎಂದು ಆತ್ಮೀಯವಾಗಿ ಬರಮಾಡಿಕೊಂಡರು.
ಸುಮಾಳ ಕೈ ಹಿಡಿದು ಕರೆದುಕೊಂಡು ಬಂದ ತಾಯಿ... ಇವಳು ತಮ್ಮ ಮಗಳು ಸುಮಾ ಎಂದಾಗ ಎಲ್ಲರಿಗೂ ನಮಸ್ಕಾರ ಮಾಡಿದ ಸುಮಾಳ ಕಣ್ಣು ಹುಡುಗ ರಾಜನ ಹತ್ತಿರ ನಿಂತಿತು.
ನೋಡಲು ಸುಮಾರಾಗಿದ್ದ ...ಆದರೆ ಮೈ ತುಂಬಾ ಚಿನ್ನ ಹೇರಿಕೊಂಡು ಬಂದಿದ್ದ.... ಅದೊಂದೇ ಸುಮಾಳನ್ನು ಸೆಳೆದದ್ದು...
ನೋಡಿ ನಮ್ಮ ಹುಡುಗ ನಿಮ್ಮ ಹುಡುಗಿಯನ್ನು ಒಪ್ಪಿದ್ದಾನೆ... ಆದರೆ ನಾವು ಹಳ್ಳಿಯವರು ನಿಮ್ಮ ಹುಡುಗಿ ಇಲ್ಲಿ ಓದಿ ಬೆಳೆದವಳು ಎನ್ನಲು ತಂದೆ... ನಂಜಪ್ಪ.
ನಮ್ಮ ಹುಡುಗಿಗೂ ಹಳ್ಳಿ ಇಷ್ಟ ಎಂದು ತಲೆ ಆಡಿಸಿದರು.
ಮದುವೆ ಮಾಡಿಕೊಂಡು ಹಳ್ಳಿಗೆ ಬಂದ ಸುಮಾಗೆ ಮೊದ ಮೊದಲು ಎಲ್ಲವೂ ಚೆಂದ ಎನಿಸಿತು.... ಆದರೆ ದಿನಾ ಕಳೆದಂತೆ ಇನ್ನೂ ಏನೋ ಬೇಕು ಎಂದೆನಿಸಿತು.
ಹೆಂಡತಿ ಮಾತಿಗೆ ಮರುಮಾತಾಡದೇ ಅವಳ ಆಸೆಯನ್ನು ಪೂರೈಸುತ್ತಿದ್ದ ರಾಜ.
ಆದರೆ ಬರ ಬರುತ್ತಾ ಸುಮಾ.... ಏನು ಕಂಡರು ಕೊಳ್ಳುವುದು... ಸುಖಾಸುಮ್ಮನೆ ಹಣ ಖರ್ಚು ಮಾಡಿಸುತ್ತಿದ್ದಳು.
ಬೇಸಾಯವನ್ನು ನಂಬಿಕೊಂಡು ಬಂದಿದ್ದ ಕುಟುಂಬ ರಾಜನದು.... ಸೊಸೆಯ ನಡುವಳಿಕೆ ಅವನ ತಂದೆ ತಾಯಿಗೆ ಸರಿ ಬರುತ್ತಿರಲಿಲ್ಲ.... ಒಮ್ಮೆ ಮಗನ ಕರೆದು ಬುದ್ಧಿ ಹೇಳಿದರು.
ಅವರ ಮಾತು ಸರಿಯೆನಿಸಿತು... ಒಮ್ಮೆ ಮಳೆ ಹೆಚ್ಚಾಗಿ ಬೆಳೆ ಎಲ್ಲಾ ಹಾಳಾಗಿ... ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು.
ಆದರೂ ಸುಮಾ ಮನೆಯ ಹಣಕಾಸಿನ ವಿಚಾರ ಅರಿಯದೆ.... ದುಂದು ವೆಚ್ಚ ಮಾಡುತ್ತಿದ್ದಳು.
ಒಮ್ಮೆ ರಾಜ ಅವಳ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿದಾಗ.... ಅವನೊಂದಿಗೆ ಜಗಳವಾಡಿ ಮನೆಬಿಟ್ಟು ಬಂದಳು.
ಇತ್ತ ರಾಜಪ್ಪ ಮತ್ತು ಲಕ್ಷಮ್ಮ ಎಷ್ಟು ಬುದ್ಧಿ ಹೇಳಿದರು...
ಹಠ ಮಾಡಿ ಕೂತಳು. ಆದರೆ ರಾಜಪ್ಪ ರಾಜನ ಹತ್ತಿರ ಮಾತನಾಡಲು ಹಳ್ಳಿಗೆ ಹೋಗಿ ಬಂದರು.
ರಾಜ ಮತ್ತು ಆತನ ತಂದೆ ತಾಯಿ....ಸುಮಾಳ ದುಂದು ವೆಚ್ಚದ ಬಗ್ಗೆ... ಜವಾಬ್ದಾರಿಯ ಬಗ್ಗೆ ಹೇಳಿದರು.
ಮಗಳನ್ನು ಸರಿಯಾಗಿ ಬುದ್ದಿ ಹೇಳಿ ಕಳುಹಿಸಿದರೇ ಮಾತ್ರ ಈ ಮನೆಯಲ್ಲಿ ಜಾಗ ಎಂಬುದನ್ನು ಹೇಳಿದರು.
ಮನೆಗೆ ಬಂದ ರಾಜಪ್ಪ.... ಮಗಳನ್ನು ಕಂಡು ನೋಡು ಸುಮಾ ನೀನು ಓದಿದವಳು.... ನಿನಗೆ ಹೆಚ್ಚು ಹೇಳುವ ಶಕ್ತಿ ನನ್ನಲ್ಲಿ ಇಲ್ಲ. ನಿನ್ನ ಸಂಸಾರ ನಿನ್ನ ಕೈಯಲ್ಲಿ ಇದೆ ಎಂದರು.
ಹೌದು ನಿಜ ಅಂದು ನನ್ನ ಮನಸ್ಸು ಬೇಕು ಬೇಕು ಅನ್ನುವುದು ನನ್ನ ಬುದ್ಧಿ ಸಾಕು ಸಾಕು ಎಂದು ಹೇಳಿದಾಗ ಅದರ ಮಾತು ಕೇಳಬೇಕಿತ್ತು ಎಂದು ಒಂದು ನಿರ್ಧಾರಕ್ಕೆ ಬಂದಳು.
ಅಪ್ಪ ಬೆಳಿಗ್ಗೆ ಮೊದಲನೇ ಬಸ್ ಹತ್ತಿಸಿ ನಾನು ನಮ್ಮ ಮನೆಗೆ ಹೋಗುತ್ತೇನೆ ಎಂದಳು.
