STORYMIRROR

Harish Bedre

Comedy Classics Others

4  

Harish Bedre

Comedy Classics Others

ಆ ಕಣ್ಣುಗಳು

ಆ ಕಣ್ಣುಗಳು

3 mins
251

ನಿಮಗೆಲ್ಲ ಗೊತ್ತಿರುವಂತೆ ನನಗೆ ವೃತ್ತಿಯಲ್ಲಿ ಬಡ್ತಿ ದೊರೆತು ಪ್ರತಿನಿತ್ಯ ಶಿವಮೊಗ್ಗದಿಂದ ಸಾಗರ ಓಡಾಡುತ್ತಿರುವೆ. ಹೀಗೆ ಓಡಾಡಲು ಆರಂಭಿಸಿದ ಮೊದಲ ವಾರ ನಾನು ಹಾಗೂ ನನ್ನ ಸಹೋದ್ಯೋಗಿ ಇಬ್ಬರೂ ಕಾರಲ್ಲಿ ಹೋಗಿಬರುತ್ತಿದ್ದೆವು. ಆದರೆ ಆಕಾಶಕ್ಕೆ ತೂತು ಬಿದ್ದಿರುವಂತೆ ಒಂದೇ ಸಮನೆ ಬಿಟ್ಟು ಬಿಡದೆ ಸುರಿಯುವ ಮಳೆಯಲ್ಲಿ ಡ್ರೈವ್ ಮಾಡುವುದು ಕಷ್ಟವಾಗುತ್ತಿತ್ತು. ಅದರಲ್ಲಿ ಸಂಜೆಯಂತೂ ಬಹಳವೇ ಕಷ್ಟವಾಗಿ ಬಸ್ಸಿಗೆ ಮೊರೆ ಹೋದೆವು.

ಹೀಗೆ ಬಸ್ಸಲ್ಲಿ ಓಡಾಡಲು ಆರಂಭಿಸಿದ ಮೊದಲ ದಿನ ಮೂರು ಜನರು ಕೂರುವ ಸೀಟಲ್ಲಿ ನಾನು ಒಬ್ಬನೇ ಕುಳಿತ್ತಿದ್ದೆ. ಆಗ ಯಾರೋ ಒಬ್ಬ ತುಂಬಾ ಬೆಲೆ ಬಾಳುವ ಚೂಡಿದಾರ್ ಧರಿಸಿದ್ದ ಮಹಿಳೆ ಪಕ್ಕದಲ್ಲಿ ಬಂದು ಕುಳಿತಳು. ಅವಳು ಮಹಿಳೆಯೋ ಹುಡುಗಿಯೋ ಎಂದು ಖಚಿತವಾಗಿ ಹೇಳಲು ಸಾಧ್ಯ ಇರಲಿಲ್ಲ. ಏಕೆಂದರೆ ಆಕೆ ಕಣ್ಣಿನ ಹೊರತಾಗಿ ಮುಖವನ್ನು ತನ್ನ ವೇಲ್ ನಿಂದ ಅಚ್ಚುಕಟ್ಟಾಗಿ ಮುಚ್ಚಿಕೊಂಡಿದ್ದಳು. ಬಸ್ ಹೊರಟು ಸ್ವಲ್ಪ ದೂರ ಬಂದಾಗ ಕುತೂಹಲದಿಂದ ಆಕೆಯ ಕಡೆ ನೋಡಿದೆ. ಅದು ಆಕೆಗೂ ತಿಳಿದು ನನ್ನತ್ತ ನೋಡಿದಳು. ಇದನ್ನು ನಿರೀಕ್ಷೆ ಮಾಡದ ನನಗೆ ಮುಜುಗರವಾಯಿತು. ಅವಳ ಕಣ್ಣುಗಳು ನಕ್ಷತ್ರದಂತೆ ಹೊಳೆಯುತ್ತಿದ್ದವು. ರೆಪ್ಪೆಗಳು ಸುಂದರ ಕಪ್ಪೆಚಿಪ್ಪಿನಂತ್ತಿದ್ದವು. ಎಷ್ಟೇ ಬೇಡವೆಂದುಕೊಂಡರು ಮತ್ತೆ ಮತ್ತೆ ಅವಳನ್ನು ನೋಡಬೇಕು ಅನಿಸುತ್ತಿತ್ತು. ಸಾಗರದಿಂದ ಶಿವಮೊಗ್ಗ ಬರುವವರೆಗೆ ಅದೆಷ್ಟು ಬಾರಿ ಅವಳನ್ನು ಕದ್ದುಮುಚ್ಚಿ ನೋಡಿದೆನೋ ನನಗೇ ಗೊತ್ತಿಲ್ಲ. ಶಿವಮೊಗ್ಗದಲ್ಲಿ ಅವಳು ಬಸ್ಸಿಂದ ಇಳಿಯುವಾಗ ನನ್ನನ್ನು ನೋಡಿದಳು. ನಾನೂ ನೋಡಿದೆ, ಆಕೆಯ ನೋಟದಲ್ಲಿ ನಗೆ ಎದ್ದು ಕಾಣುತ್ತಿತ್ತು.


ಮನೆಗೆ ಬಂದರೂ ಆಕೆಯ ಕಣ್ಣುಗಳೇ ನೆನಪಾಗಿ ಕಾಡತೊಡಗಿದವು. ಮಾರನೇ ದಿನ ಬೆಳಿಗ್ಗೆ ಅವಳು ಮತ್ತೆ ಕಾಣುವಳೇನೋ ಎಂದು ಬಸ್ಸಲ್ಲಿ ನೋಡಿದೆ, ಕಾಣಲಿಲ್ಲ. ಸಂಜೆಯೂ ಇದೇ ಪುನರಾವರ್ತನೆಯಾದಾಗ ಹೋಗಲಿ ಬಿಡು ಎಂದು ಸುಮ್ಮನಾದೆ. ಇದಾದ ಎರಡು ದಿನಗಳ ನಂತರ ಮತ್ತೆ ಸಂಜೆ ಬಸ್ಸಲ್ಲಿ ಅವಳ ದರ್ಶನವಾಯಿತು. ಆದರೆ ಅವಳೊಂದು ಕಡೆ, ನಾನು ನನ್ನ ಸಹೋದ್ಯೋಗಿ ಒಂದು ಕಡೆ ಕುಳಿತ್ತಿದ್ದೆವು. ಅವಳು ಬಸ್ ಇಳಿಯುವಾಗ ಮತ್ತೆ ನನ್ನನ್ನು ನೋಡಿ ನಂಗೆ ಬೀರಿದಂತೆ ಅನಿಸಿತು. ಕೊರೊನಾ ಕಾರಣದಿಂದಲೋ ಏನೋ ಇಂದು ಕೂಡ ಅವಳು ಕಣ್ಣಿನ ಹೊರತಾಗಿ ಮುಖವನ್ನು ವೇಲ್ ನಿಂದ ಮುಚ್ಚಿಕೊಂಡಿದ್ದಳು. 

ಇದಾದ ನಂತರ ಅವಳು ಪ್ರತಿದಿನ ಸಿಗತೊಡಗಿದಳು. ಆದರೆ ಕಣ್ಣಿನ ಹೊರತಾಗಿ ಸಂಪೂರ್ಣ ಮುಖ ನೋಡಲು ಸಾಧ್ಯವಾಗಲಿಲ್ಲ. ಅವಳೂ ನಾನು ಇಳಿಯುತ್ತಿದ್ದ ಜಾಗದಲ್ಲೇ ಇಳಿಯುತ್ತಿದ್ದಳು. ಆದರೆ ನಾನು ಪಾರ್ಕಿಂಗ್ ಲಾಟ್ ನಿಂದ ನನ್ನ ಬೈಕ್ ತರುವುದರೊಳಗೆ ಎಲ್ಲೋ ಮಾಯವಾಗಿ ಬಿಡುತ್ತಿದ್ದಳು. ದಿನದಿಂದ ದಿನಕ್ಕೆ ಆ ಸುಂದರ ಕಣ್ಣುಗಳ ಒಡತಿ ಯಾರೆಂದು ಕಂಡುಹಿಡಿಯುವ ತುಡಿತ ಹೆಚ್ಚಾಗತೊಡಗಿತು. ನೇರವಾಗಿ ಮಾತನಾಡಬಹುದಿತ್ತೇನೋ ಆದರೆ ನಾನು ಹೆಸರಾಂತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಹಾಗೂ ಈಗಾಗಲೇ ಮದುವೆಯೂ ಆಗಿರುವುದರಿಂದ ಏನಾದರೂ ಹೆಚ್ಙುಕಮ್ಮಿ ಆದರೆ ಎಂಬ ಭಯದಿಂದ ಆ ಸಾಹಸಕ್ಕೆ ಕೈ ಹಾಕಲಿಲ್ಲ. ಅಲ್ಲದೆ, ಆ ಸುಂದರ ಕಣ್ಣುಗಳ ಒಡತಿ ಯಾರೆಂದು ತಿಳಿದುಕೊಳ್ಳಬೇಕಿತ್ತೇ ಹೊರತು ಬೇರೆ ಭಾವನೆ ಇರಲಿಲ್ಲ.

ಒಂದೆರಡು ಬಾರಿ ನಾನು ಇಳಿಯುವ ಜಾಗ ಬರುವ ಮುನ್ನವೇ ಬಾಗಿಲ ಬಳಿ ಬಂದು ನಿಂತು, ಬಸ್ ನಿಲ್ಲುವ ಮುಂಚೆಯೇ ಧುಮುಕಿ ಇಳಿದು ಓಡೋಡಿ ಹೋಗಿ ಬೈಕ್ ತಂದರು, ಅವಳು ಕಾಣದಂತೆ ಮಾಯವಾಗಿರುತ್ತಿದ್ದಳು. ಅವಳಿಗಾಗಿ ಸುತ್ತ ಮುತ್ತ ನೋಡಿ ಎಲ್ಲೂ ಕಾಣದಾದಾಗ ಮನಸ್ಸಿಗೆ ತುಂಬಾನೇ ಬೇಸರವಾಗುತ್ತಿತ್ತು. ಹೀಗೆ ಬೇಸರದಿಂದ ಬರುವಾಗ ಒಂದೆರೆಡು ಬಾರಿ ಮನೆಯ ಹತ್ತಿರದಲ್ಲೇ ಅಂದು ಅವಳು ಉಟ್ಟಿದ್ದಂತ ಚೂಡಿದಾರ್ ಧರಿಸಿದವರು ಕಂಡಾಗ ಅವಳೇ ಇರಬೇಕೆಂದು ಹೋದರೆ ನಿರಾಸೆ ಕಾದಿತ್ತು. ಅವರು ನಮ್ಮ ಮನೆಯ ಬಳಿಯೇ ವಾಸ ಇರುವವರಾಗಿದ್ದು, ನನಗಿಂತ ವಯಸ್ಸಿನಲ್ಲಿ ಕನಿಷ್ಠ ಪಕ್ಷ ಹತ್ತು ವರ್ಷ ದೊಡ್ಡವರಾಗಿದ್ದರೂ. ಎಂದೂ ಅವರನ್ನು ಮಾತನಾಡಿಸದಿದ್ದರೂ ಪರಿಚಯವಂತು ಇತ್ತು.

ಹೀಗಾದಾಗ, ಈ ಗೂಬೆಗೆ ಇಷ್ಟು ಚೆಂದದ ಡ್ರೆಸ್ ಬೇರೆ ಕೇಡು ಎಂದು ಬೈದುಕೊಂಡಿದ್ದೆ.

ದಿನದಿಂದ ದಿನಕ್ಕೆ ಅವಳ ಸಂಪೂರ್ಣ ಮುಖ ನೋಡುವ ಬಯಕೆ ಹೆಮ್ಮರವಾಗಿ ಬೆಳೆದು ಕಾಡತೊಡಗಿತು. ಹೀಗೆ ಬಿಟ್ಟರೆ ಈ ಜನ್ಮದಲ್ಲಿ ನಾನು ಅವಳ ಮುಖ ನೋಡಲಾರೆ ಅನಿಸಿ ಒಂದು ನಿರ್ಧಾರಕ್ಕೆ ಬಂದೆ. ಅಂದು ಬಸ್ ಇಳಿದೊಡನೆ ಬೈಕ್ ತೆಗೆದುಕೊಳ್ಳದೆ ಅವಳನ್ನೇ ಹಿಂಬಾಲಿಸಿದೆ. ಅವಳು ಬಸ್ ಇಳಿದೊಡನೆ ಅವಳಿಗಾಗಿ ಕಾಯುತ್ತಿದ್ದ ಆಟೋ ಹತ್ತಿದಳು. ನಾನು ಮತ್ತೊಂದು ಆಟೋ ಹತ್ತಿ ಅವಳ ಹಿಂದೆ ಹೊರಟೆ. ಯಾವುದೇ ಕಾರಣಕ್ಕೂ ಇಂದು ಅವಳ ಗಮ್ಯ ತಿಳಿಯಲೇ ಬೇಕೆಂದು ಅವಳಿದ್ದ ಆಟೋ ನೋಡುತ್ತಾ ಹಿಂಬಾಲಿಸಿದೆ. ಅವಳಿದ್ದ ಆಟೋ ಹೊರತಾಗಿ ನನ್ನ ಗಮನ ಬೇರೆಡೆ ಹೋಗಿರಲಿಲ್ಲ.

ಸಾಕಷ್ಟು ದೂರ ಬಂದ ಮೇಲೆ ಅವಳಿದ್ದ ಆಟೋ ಮನೆಯೊಂದರ ಮುಂದೆ ನಿಂತಿತು. ನಾನಿದ್ದ ಆಟೋದವನಿಗೂ ನಿಲ್ಲಿಸಲು ಹೇಳಿದೆ. ಅದರಿಂದ ಇಳಿದ ಅವಳು ಜೋರು ಧ್ವನಿಯಲ್ಲಿ ಒಂದು ನಿಮಿಷ ಬಂದೆ ಇರಿ ಎಂದು ಆ ಮನೆ ಒಳಗೆ ಹೋದಳು. ಇದರಿಂದ ಅವಳು ಮತ್ತೆ ಹೊರಬರುವಳೆಂದು ನಾನು ಕಾಯತೊಡಗಿದೆ. ಒಂದೈದು ನಿಮಿಷ ಆಗಿರಬೇಕು ಒಳಗಿಂದ ಅವಳು ಹೊರಬಂದಳು. ಈಗ ಮುಖ ಮುಚ್ಚಿಕೊಂಡಿರಲಿಲ್ಲ, ನನ್ನ ದೃಷ್ಟಿ ಅವಳ ಮುಖದತ್ತ ಸಾಗಿ ದಂಗಾಗಿ ಹೋದೆ. ತಕ್ಷಣ ನಾನು ಎಲ್ಲಿಗೆ ಬಂದಿರುವೆ ಎಂದು ನೋಡಿದರೆ, ಸೀದಾ ನನ್ನ ಮನೆಯ ಬಳಿಯೇ ಬಂದಿದ್ದೆ. ಯಾರನ್ನು ಗೂಬೆ ಎಂದು ಬೈದುಕೊಂಡಿದ್ದೇನೊ ಆಕೆಯೇ ಆ ಸುಂದರ ಕಣ್ಣುಗಳ ಒಡತಿಯಾಗಿದ್ದಳು. ಮುಸುಕು ಮುಚ್ಚಿದಾಗ ಬಾರಿಯ ಕಣ್ಣುಗಳು ನಕ್ಷತ್ರದಂತೆ ಹೊಳೆಯುತ್ತಿದ್ದದ್ದು ಸತ್ಯ. ಆದರೆ ಮುಸುಕು ತೆಗೆದಾಗ........ ಏನನ್ನೋ ಕಂಡು ಹಿಡಿಯುವ ಭರದಲ್ಲಿ ಆಟೋ ಮನೆಯ ಹತ್ತಿರ ಬಂದಿದ್ದು ತಿಳಿದಿರಲಿಲ್ಲ. ಆದರೂ ಮನಸ್ಸಿನ ಮೂಲೆಯಲ್ಲಿ, ಮಗಳ ಡ್ರೆಸ್ ಧರಿಸಿ ತಾಯಿ ಏನಾದರೂ ಹೊರಬಂದಿರಬಹುದೇ ಎಂದು ಸಂಶಯ ಕಾಡುತ್ತಿದೆ.



Rate this content
Log in

Similar kannada story from Comedy